ಕನ್ನಡಪ್ರೆಸ್ ವರದಿ/ ಒಂದೇ ನಿಮಿಷದ ಓದು
ಕೊರೊನಾ ವೈರಸ್‌ನಿಂದ ಇಡೀ ದೇಶವೇ ಲಾಕ್‌ಡೌನ್ ಆಗಿತ್ತು. ಇದರಿಂದ ಸಾಮಾನ್ಯ ಜನರಿಂದ ಹಿಡಿದ ಕೋಟ್ಯಧಿಪತಿಗಳಿಗೂ ಆರ್ಥಿಕ ಸಂಕಷ್ಟ ಎದುರಾಗಿದೆ. ಸ್ಯಾಂಡಲ್‌ವುಡ್‌ಗಂತೂ ಈ ಲಾಕ್‌ಡೌನ್ ಸಿಕ್ಕಾಪಟ್ಟೆ ನಷ್ಟವನ್ನುಂಟುಮಾಡಿದೆ.
ಹೌದು, ನಿರ್ಮಾಪಕ ಸೂರಪ್ಪ ಬಾಬು ಅವರು ಹೇಳು ಪ್ರಕಾರ ಸದ್ಯ ಚಿತ್ರರಂಗದ ಮೇಲೆ ಏನಿಲ್ಲವೆಂದರು 500 ಕೋಟಿಯಷ್ಟು ಇನ್ವೆಸ್ಟ್‌ಮೆಂಟ್ ಇದೆ. ಆದರೆ ಆ ಹಣ ವಾಪಾಸ್ಸಾಗುವುದು ಯಾವಾಗ ಎಂಬುದೇ ನಮಗೆ ಗೊತ್ತಾಗುತ್ತಿಲ್ಲ ಎನ್ನುತ್ತಾರೆ ಅವರು.
ದೊಡ್ಡ ಚಿತ್ರಗಳ ಎಫೆಕ್ಟ್
‘ಕೆಜಿಎಫ್-2’, ‘ರಾಬರ್ಟ್’, ‘ಕೋಟಿಗೊಬ್ಬ3’, ‘ಯುವರತ್ನ’, ‘ಪೊಗರು’ , ‘ಸಲಗ’, ಸೇರಿದಂತೆ ದೊಡ್ಡ ದೊಡ್ಡ ಸ್ಟಾರ್‌ಗಳ ಚಿತ್ರಗಳಲ್ಲಿ ಮೂರು ಚಿತ್ರಗಳಾದರೂ ಇಷ್ಟೊತ್ತಿಗಾಗಲೇ ರಿಲೀಸ್ ಆಗಬೇಕಿತ್ತು. ಲಾಕ್‌ಡೌನ್‌ನಿಂದಾಗಿ ರಿಲೀಸ್ ದಿನಾಂಕ ಮುಂದಕ್ಕೆ ಹೋಗಿದೆ. ಇನ್ನು ಕೆಲವು ಚಿತ್ರಗಳ ಕೊನೆಯ ಭಾಗದ ಚಿತ್ರೀಕರಣ ಬಾಕಿ ಉಳಿದುಕೊಂಡಿದೆ. ಈ ದೊಡ್ಡ ಚಿತ್ರಗಳು ಬಿಡುಗಡೆಯಾಗದ ಹೊರತು ಸಣ್ಣ ಬಜೆಟ್‌ನ ಸಿನಿಮಾಗಳು ರಿಲೀಸ್ ಆಗುವುದಿಲ್ಲ. ಸದ್ಯಕ್ಕೆ ಕೊರೊನಾ ಮಾಡುತ್ತಿರುವ ಅವಾಂತರವನ್ನು ಗಮನಿಸಿದರೆ ಜುಲೈ ಕೊನೆವಾರ ಅಥವಾ ಆಗಸ್ಟ್ ಮೊದಲ ವಾರದಲ್ಲಿ ಚಿತ್ರಮಂದಿರಗಳು ತೆರೆಯಬಹುದು ಎನ್ನಲಾಗುತ್ತಿದೆ. ಒಂದು ವೇಳೆ ಹಾಗೇನಾದರೂ ಆದರೆ ಈ ವರ್ಷ ಅತಿ ಕಡಿಮೆ ಚಿತ್ರಗಳು ಬಿಡುಗಡೆಯಾಗುತ್ತವೆ.
ಬೇಸಿಗೆ ರಜೆ
ಸ್ಯಾಂಡಲ್‌ವುಡ್‌ಗೆ ಬೇಸಿಗೆ ರಜೆ ಹೆಚ್ಚು ವರಮಾನ ತಂದುಕೊಡುವ ಸಮಯ. ಈ ಸಮಯದಲ್ಲಿ ಕೊರೊನಾ ಬಂದು ಇಡೀ ಚಿತ್ರೋದ್ಯಮ ಬಂದ್ ಆಗಿದೆ. ಹಾಗಾಗಿ ಉತ್ತಮ ದಿನಾಂಕ ಬರುವವರೆಗೂ ಕೆಲ ನಿರ್ಮಾಪಕರು ಚಿತ್ರಗಳನ್ನು ರಿಲೀಸ್ ಮಾಡುವುದಿಲ್ಲ ಎನ್ನಲಾಗುತ್ತಿದೆ.
ಚಿತ್ರಮಂದಿರಗಳು ಬಂದ್
ಇನ್ನು ಸಿನಮಾ ಹಾಲ್‌ಗಳು ಮುಚ್ಚಿರುವ ಕಾರಣ ಟಿಕೇಟ್ ದರದಿಂದ ಮಾತ್ರ ಲಾಸ್ ಆಗಿಲ್ಲ. ಅಲ್ಲಿ ನಡೆಸುವ ಕ್ಯಾಂಟೀನ್, ಪಾರ್ಕಿಂಗ್ ಸೇರಿದಂತೆ ಬಹಳಷ್ಟು ಮೂಲಗಳಿಂದ ಚಿತ್ರೋದ್ಯಮಕ್ಕೆ ಹೊಡೆತ ಬಿದ್ದಿದೆ. ಮಲ್ಟಿಪ್ಲೆಕ್ಸ್‌ಗಳಲ್ಲಿ ಟಿಕೇಟ್ ದರಕ್ಕಿಂತಲೂ ಅಲ್ಲಿ ಮಾರಾಟ ಮಾಡುವ ತಿಂಡಿಯ ಬೆಲೆಗಳೇ ಹೆಚ್ಚಾಗಿರುತ್ತವೆ. ಜತೆಗೆ ಪಾರ್ಕಿಂಗ್ ಶುಲ್ಕದಿಂದಲೂ ಅತಿ ಹೆಚ್ಚು ಹಣವನ್ನು ಮಲ್ಟಿಪ್ಲೆಕ್ಸ್ ಮಂದಿ ಗಳಿಸುತ್ತಾರೆ.
ನಟ,ನಟಿಯರ ಸಂಭಾವನೆ
ಕಳೆದ ಎರಡು ತಿಂಗಳಲ್ಲಿ ಎಷ್ಟೋ ಜನ ನಟ, ನಟಿಯರ ಸಂಭಾವನೆ ಸಹ ಇಲ್ಲ. ಸೀರಿಯಲ್, ಸಿನಿಮಾಗಳಲ್ಲಿ ದಿನವೊಂದಕ್ಕೆ ಸಾವಿರಾರು ರೂಪಾಯಿ ಗಳಿಸುವ ಕಲಾವಿದರು ಕನ್ನಡದಲ್ಲಿದ್ದಾರೆ. ಶೂಟಿಂಗ್ ಇಲ್ಲದ ಕಾರಣ ಅವರ್ಯಾರಿಗೂ ಹಣ ಸಿಗುತ್ತಿಲ್ಲ.
6000 ಕಾರ್ಮಿಕರಿಗೆ ಸಂಕಷ್ಟ
ಕನ್ನಡ ಚಿತ್ರರಂಗದಲ್ಲಿ ಆರು ಸಾವಿರಕ್ಕೂ ಹೆಚ್ಚಿನ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಲಾಕ್‌ಡೌನ್‌ಹಿನ್ನೆಲೆಯಲ್ಲಿ ಚಿತ್ರೀಕರಣ ಬಂದ್ ಆಗಿದೆ. ಇದರಿಂದ ದಿನಗೂಲಿ ನೌಕರರು ಕಂಗಾಲಾಗಿದ್ದಾರೆ. ಕಾರ್ಮಿಕರ ಸಂಕಷ್ಟಕ್ಕೆ ಸಾಕಷ್ಟು ಮಂದಿ ಬಂದಿದ್ದಾರಾದರೂ ಎಲ್ಲರೂ ಚಿತ್ರೀಕರಣ ಯಾವಾಗ ಪ್ರಾರಂಭವಾಗುತ್ತದೆ ಎಂಬುದನ್ನೇ ಕಾಯುವಂತಾಗಿದೆ.
ಕೊರೊನಾ ವೈರಸ್ ಮನುಷ್ಯನ ಆರೋಗ್ಯದ ಜತೆ ಆರ್ಥಿಕ ಪರಿಸ್ಥಿತಿಗೂ ಕಾಟ ಕೊಡುತ್ತಿದ್ದು, ಚಿತ್ರರಂಗದ ಮೇಲೆ ಭಾರಿ ಪರಿಣಾಮವನ್ನೇ ಬೀರಿದೆ. ಸಿನಿ ಪಂಡಿತರ ಪ್ರಕಾರ ಈ ಸಮಯದಲ್ಲಿ ಆದ ನಷ್ಟವನ್ನು ತುಂಬಿಕೊಳ್ಳಲು ಬಹಳ ಸಮಯ ಹಿಡಿಯುತ್ತದಂತೆ.
—
ಕಾರ್ಮಿಕರಿಗೆ ನೆರವಿನ ಮಹಾಪೂರ
ಲಾಕ್‌ಡೌನ್ ಹಿನ್ನೆಲೆಯಲ್ಲಿ ರಿಲಯನ್ಸ್ ಫೌಂಡೇಶನ್, ಅಮಿತಾಬ್ ಬಚ್ಚನ್, ರಾಜ್ಯ ಸರ್ಕಾರ ಸೇರಿದಂತೆ ಸಾಕಷ್ಟು ಮಂದಿ ಸಿನಿಮಾ ಕಾರ್ಮಿಕರ ನೆರವಿಗೆ ಬಂದು ನಿಂತಿದ್ದಾರೆ. ದಿನಸಿ ಕಿಟ್ ವಿತರಣೆ, ಆಹಾರ ವಿತರಣೆ, ಕೂಪನ್‌ಗಳ ವಿತರಣೆಯನ್ನು ಈಗಾಗಲೇ ಕಾರ್ಮಿಕರಿಗೆ ಮಾಡಲಾಗಿದೆ.