ಚನ್ನಗಿರಿ ತಾಲ್ಲೂಕಿನ ರೈತರಿಗೆ ಕೊರೊನಾ ಲಾಕ್ ಡೌನ್ ಪರಿಣಾಮ ಅಪಾರ ನಷ್ಟ ಸಂಭವಿಸಿದೆ. ತರಕಾರಿ, ಹೂವು, ಹಣ್ಣು ಹೊಲದಲ್ಲಿಯೇ ನಾಶ ಮಾಡುವ ಮೂಲಕ ತಮ್ಮ ಅಸಹಾಯಕತೆ ಹೊರಹಾಕಿದ್ದಾರೆ.
ಪ್ರತಿ ವರ್ಷದಂತೆ ಪ್ರಯೋಗಶೀಲರಾಗಿ ಬೆಳೆದು ಯಶಸ್ಸು ಕಂಡಿದ್ದ ರೈತರು ಕಣ್ಣೀರು ಹಾಕಿದ್ದಾರೆ. ಭೀಮನೆರೆ ಗ್ರಾಮದ ರೈತರು ಬೀಟ್ ರೂಟ್ ಹಾಗೂ ಎಲೆಕೋಸು ಸಮೃದ್ಧವಾಗಿ ಬೆಳೆದಿದ್ದರು. ಬೆಳೆ ಮಾರುಕಟ್ಟೆಗೆ ತೆಗೆದುಕೊಂಡು ಹೋಗುವ ವೇಳೆಗೆ ಲಾಕ್ ಡೌನ್ ಎದುರಾಯಿತು. ಸಾರಿಗೆ ವ್ಯವಸ್ಥೆ ಇಲ್ಲದೇ ಬೆಳೆ ಹೊಲದಲ್ಲಿಯೇ ನಾಶವಾಯಿತು. ಕೆಲವರು ರಂಟೆ ಹೊಡೆದು ಅಳಿಸಿ ಹಾಕಿದರು.
ಒಂದು ಎಕರೆಗೆ ರೂ.40 ಸಾವಿರ ಖರ್ಚು ಮಾಡಿ ಬೀಟ್ ರೂಟ್ ಬೆಳೆಯಲಾಗಿತ್ತು. ಸುಮಾರು 15 ಟನ್ ಇಳುವರಿ ನಿರೀಕ್ಷೆ ಮಾಡಲಾಗಿತ್ತು. ಸಗಟು ಬೆಲೆ ಕನಿಷ್ಟ ರೂ.17 ಧಾರಣೆ ಇತ್ತು. ಇದೇ ಧಾರಣೆಗೆ ಎಕರೆಗೆ ರೂ.1ಲಕ್ಷ ಆದಾಯದ ಬರುತ್ತಿತ್ತು. ಈಗ ಬೆಂಗಳೂರು ಮಾರುಕಟ್ಟೆಗೆ ಸಾಗಿಸಲು ಆಗಲಿಲ್ಲ ಹಾಗಾಗಿ ಹೊದಲ್ಲಿಯೇ ಬಿಡಲಾಯಿತು ಎನ್ನುತ್ತಾರೆ ರೈತ ಮಹೇಂದ್ರ ಗೌಡ.
ಅದೇ ಗ್ರಾಮದಲ್ಲಿ ಹಲವು ರೈತರು ಸುಮಾರು 15 ಎಕರೆಯಲ್ಲಿ ಎಲೆ ಕೋಸು ಬೆಳೆದಿದ್ದರು. ಕೊಯ್ಲಿಗೆ ಬರುವ ವೇಳೆಗೆ ಕೊರೊನಾ ದಿಗ್ಬಂಧನ ಆರಂಭವಾಯಿತು. ಕೇವಲ ರೂ.1 ಕ್ಕೂ ಕೇಳುವವರಿಲ್ಲದೇ ಹೊಲದಲ್ಲಿಯೇ ಮಗುಚಲಾಯಿತು. ಪ್ರತಿ ಎಕರೆಗೆ ರೂ. 50 ಸಾವಿರ ಖರ್ಚು ತಗುಲಿತ್ತು. ಎಕರೆಗೆ 15 ಟನ್ ಇಳುವರಿ ಸಾಧ್ಯತೆ ಇತ್ತು. ರೂ. 8 ಬೆಲೆ ಸಿಕ್ಕಿದ್ದರೂ ಹಾಕಿದ ಬಂಡವಾಳ ವಾಪಸ್ಸು ಬರುತ್ತಿತ್ತು. ಈಗ ಕೊಳ್ಳುವವರಿಲ್ಲದೇ ರೈತ ಬರಿಗೈ ಆಗಿದ್ದಾನೆ ಎನ್ನುತ್ತಾರೆ ರೈತ ವಿಶ್ವನಾಥ್.
ಕನಕಾಂಬರ ನಾಶ: ಪರಮೇಶ್ವರಪ್ಪ ಎಂಬ ರೈತ ತಮ್ಮ ಅಡಿಕೆ ತೋಟದಲ್ಲಿ ಒಂದೂವರೆ ಎಕರೆ ಪ್ರದೇಶದಲ್ಲಿ ಕನಕಾಂಬರ ಬೆಳೆದಿದ್ದರು. ಲಾಕ್ ಡೌನ್ ನಿಂದಾಗಿ ಮಾರುಕಟ್ಟೆ, ಸಾಗಣೆ ವ್ಯವಸ್ಥೆ ಇಲ್ಲದೇ ಟ್ರ್ಯಾಕ್ಟರ್ ಮೂಲಕ ಬೆಳೆ ನಾಶ ಮಾಡಿದರು.
ಲಾಕ್ ಡೌನ್ ಪೂರ್ವದಲ್ಲಿ ನಿತ್ಯ 5 ಕೆ.ಜಿ. ಕನಕಾಂಬರ ಹೂವು ಸಿಗುತ್ತಿತ್ತು. ದಾವಣಗೆರೆ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ.ಗೆ ರೂ.500 ರಿಂದ 600 ಬೆಲೆ ಸಿಗುತ್ತಿತ್ತು. ಒಟ್ಟು 2500-3000 ನಿತ್ಯ ವಹಿವಾಟು ನಡೆಸುತ್ತಿದ್ದೆವು. ಲಾಕ್ ಡೌನ್ ಘೋಷಣೆಯ ನಂತರ ಪ್ರತಿ ಕೆ.ಜಿ. ರೂ.100 ಕ್ಕೆ ಕುಸಿಯಿತು. ಇದರಿಂದ ಹಾಕಿದ ಬಂಡವಾಳವು ಸಿಗುತ್ತಿರಲಿಲ್ಲ.
ಕನಕಾಂಬರ ಬಿಡಿಸಲು ಬರುವ 5 ಕೂಲಿ ಕಾರ್ಮಿಕರಿಗೆ ರೂ.200 ಕೊಡಬೇಕು. ಇದರಿಂದ ರೂ.1000 ಖರ್ಚು ಬರುತ್ತಿತ್ತು. ದಾವಣಗೆರೆಗೆ ತೆರಳಿ ಸಗಟು ವ್ಯಾಪಾರಿಗಳಿಗೆ ಕೊಡುತ್ತಿದ್ದೆವು. ಖರ್ಚು ಭರಿಸಿ ರೂ.1500 ನಿತ್ಯ ಗಳಿಕೆ ಇತ್ತು. ಲಾಕ್ ಡೌನ್ ಪರಿಣಾಮ ಕೂಲಿಗಳೂ ಬರಲಿಲ್ಲ. ದರ ಕುಸಿತದಿಂದ ನಷ್ಟವಾಯಿತು ಎನ್ನುತ್ತಾರೆ ರೈತ ಪರಮೇಶ್ವರಪ್ಪ.
ಹಿರೇಕೋಗಲೂರಿನಲ್ಲಿಯೂ ಎಲೆಕೋಸು ಬೆಳೆದು ಮಾರುಕಟ್ಟೆ ಇಲ್ಲದೇ ನಾಶಮಾಡಲಾಗಿದೆ. ಮಾಯಕೊಂಡ ಸಮೀಪದಲ್ಲಿ ಕಲ್ಲಂಗಡಿ ಬೆಳೆದ ರೈತನಿಗೆ ಮಾರುಕಟ್ಟೆ ಇಲ್ಲದೇ ಅಪಾರ ನಷ್ಟ ಸಂಭವಿಸಿದೆ. ಈರುಳ್ಳಿ ಬೆಳೆದ ರೈತರು ಮಾರುಕಟ್ಟೆ ಇಲ್ಲದ ಕಾರಣ ಮನೆ ಬಾಗಿಲಿಗೆ ಹೊತ್ತೊಯ್ದು ಮಾರಾಟ ಮಾಡಿದರು. ಹಾಗಾರಿ ತುಸು ಆರ್ಥಿಕ ಕುಸಿತದಿಂದ ಪಾರಾದರು.
ರೈತರ ಬವಣೆ ಹಾಗೂ ಬೆಳೆ ನಾಶದ ವರದಿಯನ್ನು ಮನಗಂಡ ತೋಟಗಾರಿಕಾ ಇಲಾಖೆ ರೈತರ ಸಹಾಯಕ್ಕೆ ಮುಂದಾದರು. ರೈತರ ಉತ್ಪಾದನೆಗಳ ಸಾರಿಗೆಗೆ ಮುಕ್ತ ಅವಕಾಶ ನೀಡಲಾಯಿತು. ಎಪಿಎಂಸಿಗಳನ್ನು ತೆರೆದು ಖರೀದಿಗೆ ವ್ಯವಸ್ಥೆ ಮಾಡಲಾಯಿತು. ಹಾಪ್ ಕಾಮ್ಸ್ ಗಳಲ್ಲಿ ಹಣ್ಣು, ತರಕಾರಿ ಮಾರಾಟ ಮಾಡಲು ರೈತರಿಗೆ ಮನವರಿಕೆ ಮಾಡಲಾಯಿತು.
ಸಾರ್ವಜನಿಕರ ಓಡಾಟವಿಲ್ಲದೇ ಬೇಡಿಕೆ ಕುಸಿಯಿತು. ರೈತರಿಗೆ ಪೂರಕ ಬೆಲೆ ಸಿಗದಾಯಿತು. ಸಿಕ್ಕಷ್ಟೆ ಸಾಕು ಎಂಬ ನಿಲುವಿಗೆ ಬಂದರು. ತುಸು ನಷ್ಟವೆನಿಸಿದರೂ ಹಣ್ಣುಗಳನ್ನು ಮಾರಾಟಮಾಡಿದರು.
ಮೆಕ್ಕೆಜೋಳದ ಧಾರಣೆಯು ಕೋಳಿ ಮಾರಾಟದ ದಿಗ್ಬಂಧನದಿಂದ ತೀವ್ರ ಕುಸಿದಿತ್ತು. ಈಗ ಸ್ವಲ್ಪ ಚೇತರಿಕೆ ಕಂಡಿದೆ.