- ಜಯಂತ್ ಕೆ /ಎರಡು ನಿಮಿಷದ ಓದು
ಮಾಚಗುಂಡಾಳ. ಇದು ಯಾದಗಿರಿ ಜಿಲ್ಲೆಯ ಕುಗ್ರಾಮ. ಇಲ್ಲಿ ವೈದ್ಯಕೀಯ ಸವಲತ್ತು ಕೇಳಬೇಡಿ. ಕಾಯಿಲೆ ಬಿದ್ದರೆ 20 ಕಿ.ಮೀ ದೂರದ ತಾಲೂಕು ಕೇಂದ್ರ ಸುರಪುರಕ್ಕೆ ಹೋಗಬೇಕು. ಅರ್ಜೆಂಟ್‌ಅಂದ್ರೆ ದೇವರೇ ಗತಿ. ಇಂತಹ ಗ್ರಾಮದಲ್ಲಿ ಆ ದಿನ ರಾತ್ರಿ ಸಂಗಣ್ಣನ ಕುಟುಂಬದಲ್ಲಿ ನಡೆದದ್ದು ಗಾಬರಿ ಹುಟ್ಟಿಸಿದ ಪ್ರಕರಣ.
ಉಂಡು ಮಲಗಿದ ಮೇಲೆ ರಾತ್ರಿ 12ರ ಸುಮಾರಿಗೆ ಸಂಗಣ್ಣನ ಹೆಂಡತಿ ಗೌರಿಗೆ ಜೋರು ಹೆರಿಗೆ ನೋವು. ಮನೆಯವರಿಗೆಲ್ಲ ದಿಗಿಲು. ಸಂಗಣ್ಣ ಚಡಪಡಿಸತೊಡಗಿದ. ಸುರಪುರಕ್ಕೆ ಕರೆದೊಯ್ಯಲು ಆ ಅಪರಾತ್ರಿ ಅನುಕೂಲವಾದರೂ ಏನಿದ್ದೀತು? ಗೌರಿಯ ಚಿರಾಟ ಹೆಚ್ಚಿತು. ಸಂಗಣ್ಣ ದಿಕ್ಕೆಟ್ಟ. ಆ ವೇಳೆ ಚಿಮಣಿ ಹಿಡಿದು ನಿಂತ ಸಂಗಣ್ಣನ ತಾಯಿ ಸೀತಮ್ಮನಿಗೆ ನೆನಪಾದ ಹೆಸರು, ಆಶಾ ಕಾರ್ಯಕರ್ತೆ ಶಾಂತಮ್ಮ. ತಕ್ಷ ಣ ಅವರ ಮೊಬೈಲ್‌ಗೆ ಕರೆ ಮಾಡಿ ಸನ್ನಿವೇಶ ವಿವರಿಸಿದರು.
ನಿದ್ದೆಗಣ್ಣಲ್ಲಿ ಎಲ್ಲ ಕೇಳಿಸಿಕೊಂಡ ಶಾಂತಮ್ಮ ಮಲಗಿದ ಪತಿರಾಯನನ್ನು ಎಬ್ಬಿಸಿ ಬೈಕ್‌ಸ್ಟಾರ್ಟ್‌ಮಾಡಲು ಹೇಳಿದರು. ಹತ್ತು ನಿಮಿಷದಲ್ಲಿ ಸಂಗಣ್ಣನ ಮನೆ ತಲುಪಿದ ಶಾಂತಾ, ಕರೆಂಟ ಇಲ್ಲದ ಚಿಮಣಿ ಬೆಳಕಿನ ಮಬ್ಬುಗತ್ತಲ ಕೋಣೆಯಲ್ಲಿ ನೋವು ನೋವು ತಡೆಯದೇ ನರಳುತ್ತಿದ್ದ ಗೌರಿಯನ್ನು ಒಮ್ಮೆ ಕೂಲಂಕಷ ದಿಟ್ಟಿಸಿ ಹೊಟ್ಟೆ ಮುಟ್ಟಿದಳು. ಮಗು ಉಲ್ಟಾ ತಿರುಗಿದ್ದು ಅರಿವಾಯಿತು. ಸ್ವಲ್ಪ ಎಡವಟ್ಟಾದರೂ ತಾಯಿ ಮಗುವಿನ ಜೀವಕ್ಕೇ ಅಪಾಯ. ತಕ್ಷ ಣ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಿಗೆ ಕರೆ ಮಾಡಿದರು ಶಾಂತಾ. ಹತ್ತು ನಿಮಿಷ ಸಮಾಲೋಚನೆ ಬಳಿಕ ತನ್ನ ಬಳಿ ಇದ್ದ ವೈದ್ಯ ಸಾಮಗ್ರಿ ಬಳಸಿ ಪ್ರಸವ ಚಿಕಿತ್ಸೆ ಶುರು ಮಾಡಿದರು. ಮುಂದಿನ ಹತ್ತು ನಿಮಿಷದಲ್ಲಿ ಕತ್ತಲೆ ಕೋಣೆಯಲ್ಲಿ ಎಳೆ ಕಂದಮ್ಮನ ಪ್ರವೇಶದ ಕೀರಲು ಧ್ವನಿ ಕೋಣೆ ತುಂಬಿತು. ಸಂಗಣ್ಣ ಮತ್ತು ಸೀತಮ್ಮ ಮುಖದಲ್ಲಿ ನಗು ಅರಳಿತು.
ಆ ಕ್ಲಿಷ್ಟ ಘಳಿಗೆ ಒಂದು ಕರೆಗೆ ಓಗೊಟ್ಟು ಬಂದು ಎರಡು ಜೀವ ಉಳಿಸಿ ಮನೆಮಂದಿಯ ನೆಮ್ಮದಿ ಕಾಯ್ದಿದ್ದರು ಶಾಂತಮ್ಮ. ಸಂಗಣ್ಣ ಅವರ ಕಾಲುಮುಟ್ಟಿ ನಮಸ್ಕರಿಸಿದ. ಸೀತಮ್ಮ ಹೊಸ ಕುಪ್ಪಸದ ತುಂಡು ಬಟ್ಟೆನೀಡಿ ಕೈಮುಗಿದು ಕೃತಜ್ಞತೆಯಿಂದ ಕಳಿಸಿಕೊಟ್ಟರು. ಶಾಂತಮ್ಮ ಸಾರ್ಥಕ ಭಾವದೊಂದಿಗೆ ಮನೆದಾರಿ ಕ್ರಮಿದರು.
9 ಲಕ್ಷ | ದೇಶದಲ್ಲಿ ಇರುವ ಆಶಾ ಕಾರ್ಯಕರ್ತರು |
7000 | ಮಾಸಿಕ ವೇತನ |
42,000 | ಕರ್ನಾಟಕದಲ್ಲಿರುವ ಆಶಾ ಕಾರ್ಯಕರ್ತೆಯರ ಸಂಖ್ಯೆ |
25,000 | ಬೆಂಗಳೂರು ನಗರ ಒಂದರಲ್ಲೇ ಇರುವ ಕಾರ್ಯಕರ್ತೆಯರು |
****
ಸಾರಾಯಿಪಾಳ್ಯ. ಇದು ರಾಜಧಾನಿ ನಗರ ಬೆಂಗಳೂರಿನ ನಾಗರಿಕ ಬಡಾವಣೆ. ಇಲ್ಲಿ ವೈದ್ಯಕೀಯ ಸವಲತ್ತುಗಳಿಗೆ ಕೊರತೆ ಇಲ್ಲ. ವೈದ್ಯರಿಗೂ ಬರವಿಲ್ಲ. ಇಂತಹ ಆಧುನಿಕ ಗಲ್ಲಿಯಲ್ಲಿ ಮೊನ್ನೆ ಸರಕಾರದ ಆದೇಶ ಪಾಲಿಸಿ ಕೊರೊನಾ ಸೋಂಕಿತರ ತಪಾಸಣೆಗೆ ಹೊರಟ ಆಶಾ ಕಾರ್ಯಕರ್ತೆ ಕೃಷ್ಣವೇಣಿ ಅವರು ಗಲ್ಲಿ ಪ್ರವೇಶಿಸುವಾಗ ಕೈಯಲ್ಲಿ ಜೀವ ಹಿಡಿದಿದ್ದರು. ಕಣ್ಣಿಗೆ ಕಾಣದ ಸೋಂಕು ತನ್ನಂತಹ ದುಡಿದು ತಿನ್ನುವ ಮನೆಯ ಆಧಾರಸ್ತಂಭಕ್ಕೆ ಅಂಟಿದರೆ ಗತಿ ಏನು ಎನ್ನುವ ಕಳವಳ. ಆದರೂ ತನಗಿಂತ ಜನರ ಆರೋಗ್ಯ ಚೆನ್ನಾಗಿರಲೆಂಬ ಸದಾಶಯ.
ನೆರೆದ ಜನರಿಗೆ ತಾವು ಬಂದ ಉದ್ದೇಶ ವಿವರಿಸಿ ಸಹಕರಿಸಲು ಕೈಮುಗಿದು ಕೇಳಿಕೊಂಡರು. ತಕ್ಷ ಣ ಪ್ರತಿಕ್ರಿಯಿಸದ ಜನ ಗುಸುಗುಸು ಮಾತಾಡತೊಡಗಿದರು. ಹತ್ತು ನಿಮಿಷದಲ್ಲಿ ಪುಂಡರ ಗುಂಪು ಸ್ಥಳಕ್ಕೆ ಲಗ್ಗೆ ಹಾಕಿತು. ಕೃಷ್ಣವೇಣಿ ಕಕ್ಕಾಬಿಕ್ಕಿಯಾದರು. ಏನು ನಡೆಯುತ್ತಿದೆ ಎಂದು ಅರ್ಥವಾಗುವ ಮೊದಲೇ ದಾಳಿಗೊಳಗಾದರು. ತಲೆ ಮೈಕೈಗೆ ದೊಣ್ಣೆಯ ಪೆಟ್ಟು. ಜೀವ ಉಳಿಸಿಕೊಳ್ಳಲು ಪರದಾಡಿದರು. ಕೈಕಾಲು ಹಿಡಿದು ಬೇಡಿಕೊಂಡರು. ಕೊನೆಗೆ ಹಿರಿಯರೊಬ್ಬರು ಅವರ ನೆರವಿಗೆ ಬಂದು ಪಾರು ಮಾಡಿದರು. ಆಘಾತದಿಂದ ಜರ್ಜರಿತಗೊಂಡ ಅವರು ರೋಗಿಗಳ ಬದಲು ತಾವೇ ಆಸ್ಪತ್ರೆ ಸೇರಿದರು.
ಅಗತ್ಯ
ಶಾಂತಮ್ಮ ಮತ್ತು ಕೃಷ್ಣವೇಣಿ ಅವರ ಈ ಎರಡು ದೃಶ್ಯಗಳು ಇವತ್ತಿನ ಆಶಾ ಕಾರ್ಯಕರ್ತೆಯರ ಅಗತ್ಯ ಮತ್ತು ಸಂಕಷ್ಟ ಎರಡನ್ನೂ ಬಿಂಬಿಸುತ್ತವೆ. ಸಂಕಷ್ಟದಲ್ಲಿದ್ದವರ ಸಕಾಲಿಕ ನೆರವಿಗೆ ಧಾವಿಸಿ ತಜ್ಞ ವೈದ್ಯರು ಮಾಡಲಾಗದ ಘನ ಕಾರ್ಯವನ್ನು ಈ ಕಾರ್ಯಕರ್ತೆಯರು ಮಾಡುತ್ತಿದ್ದಾರೆ. 2005ರಲ್ಲಿ ಕೇಂದ್ರ ಸರಕಾರ ‘ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್’ ಕಾರ್ಯಕ್ರಮದ ಭಾಗವಾಗಿ ‘ಆಶಾ ಕಾರ್ಯಕರ್ತೆ’ ಎನ್ನುವ ಆರೋಗ್ಯ ದೇವತೆಯನ್ನು ಸೃಷ್ಟಿ ಮಾಡಿತು.
‘ಅಕ್ರಿಡೇಟೆಡ್ ಸೋಷಿಯಲ್ ಹೆಲ್ತ್ ವರ್ಕರ್’ ಎನ್ನುವುದು ‘ಆಶಾ’ ಪೂರ್ಣ ರೂಪ. ಆರಂಭದಲ್ಲಿ ಇದೊಂದು ನಾಮಕಾವಸ್ತೆ ಸೃಷ್ಟಿ ಎನ್ನಿಸಿತ್ತು. ಆದರೆ, 2012ರಲ್ಲಿ ಗ್ರಾಮ ಭಾರತದ ಆರೋಗ್ಯ ಎಷ್ಟು ಮುಖ್ಯ ಎನ್ನುವ ಚರ್ಚೆ ಶುರುವಾಯಿತು. ಶೇ.70ರಷ್ಟು ಜನ ಇವತ್ತಿಗೂ ಗ್ರಾಮವಾಸಿಗರು. ಹಳ್ಳಿಯ ಆರೋಗ್ಯ ಹಳಿತಪ್ಪಿದರೆ ಭಾರತದ ಬುನಾದಿ ನಡುಗುತ್ತದೆ ಎಂದು ತಜ್ಞರು ಒತ್ತಿ ಹೇಳಿದರು.
ಇದನ್ನು ಗಂಭೀರವಾಗಿ ಪರಿಗಣಿಸಿದ ಅಂದಿನ ಸರಕಾರ ಪ್ರತಿ ಗ್ರಾಮಕ್ಕೂ ಒಬ್ಬ ಆಶಾ ಕಾರ್ಯಕರ್ತೆಯನ್ನು ನೇಮಿಸುವ ಗುರಿ ಹಾಕಿಕೊಂಡಿತು. ಇಂದಿಗೆ ಅವರ ಸಂಖ್ಯೆ ದೇಶದಲ್ಲಿ 9 ಲಕ್ಷ ಮೇಲ್ಪಟ್ಟಿದೆ. ಪ್ರತಿ ಮನೆಯ ಸದಸ್ಯರ ಆರೋಗ್ಯ ಕಾಳಜಿಯ ನೊಗ ಅವರ ಹೆಗಲ ಮೇಲಿದೆ. ಕೋವಿಡ್19 ಸಂಕಷ್ಟದ ಈ ಸಂದರ್ಭ ಅವರು ಮನೆಮನೆಗೆ ಹೋಗಿ ಸಮೀಕ್ಷೆ ಮಾಡುವ ರಿಸ್ಕಿನ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಸರಕಾರ ಅವರಿಗೆ ಅದಾವ ರೀತಿಯ ಪ್ರೋತ್ಸಾಹ ಧನ ನೀಡುತ್ತದೋ ಗೊತ್ತಿಲ್ಲ. ಆದರೆ ಅವರು ಜೀವದ ಹಂಗು ತೊರೆದು ಜನ ಕಾಳಜಿ ವಹಿಸಿದ್ದಾರೆ. ಇದನ್ನು ಅರ್ಥ ಮಾಡಿಕೊಳ್ಳದ ಕೆಲವು ಕೇಡಿಗಳು ಅವರ ಮೇಲೆ ಹಲ್ಲೆ ನಡೆಸುವಂತಹ ಹೀನ ಕೆಲಸ ಮಾಡುತ್ತಿದ್ದಾರೆ.
ಬಿಕ್ಕಟ್ಟಿನ ನಡುವೆ ಕಟ್ಟಿದ ಕೈಗಳು
ಇಡೀ ದೇಶ ಕೋವಿಡ್‌ಆತಂಕ ತರಗುಟ್ಟುತ್ತಿರುವಾಗ ಆಶಾ ಕಾರ್ಯಕರ್ತೆಯರು ಅಪಾಯ ಲೆಕ್ಕಿಸದೇ ಹಗಲಿರಳು ಶ್ರಮಿಸುತ್ತಿದ್ದಾರೆ. ಆ ಮೂಲಕ ನಿಜವಾದ ಕೊರೊನಾ ವಾರಿಯರ್‌ಎನಿಸಿದ್ದಾರೆ. ಸೋಂಕು ತಡೆಯ ಜವಾಬ್ದಾರಿಯ ಜತೆಗೆ ನಿತ್ಯದ ಮಹಿಳೆಯರ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುವ ಕಡೆಗೂ ಗಮನ ಹರಿಸಿದ್ದಾರೆ ಈ ಕಾರ್ಯಕರ್ತೆಯರು. ‘‘ತಮ್ಮ ಕುಟುಂಬದ ಯಾವೊಬ್ಬ ಸದಸ್ಯರಲ್ಲೂ ಇರಿಸದ ಗಾಢ ನಂಬಿಕೆಯನ್ನು ಮಹಿಳೆಯರು ಇವತ್ತು ನಮ್ಮ ಮೇಲೆ ಇರಿಸಿದ್ದಾರೆ. ಆದರೆ, ಕೊರೊನಾದ ಈ ಸಮಯ ಅವರ ನಂಬಿಕೆಗೆ ಪೂರ್ಣ ನ್ಯಾಯ ಒದಗಿಸುವುದು ಕಷ್ಟವಾಗುತ್ತಿದೆ’’ ಎಂದು ಕೊರಗುತ್ತಾರೆ ಶಹಾಪುರದ ಆಶಾ ಕಾರ್ಯಕರ್ತೆ ಲಕ್ಷ್ಮೀದೇವಿ.
‘‘ಗರ್ಭಿಣಿಯರಿಗೆ ರೋಗ ನಿರೋಧಕ ಲಸಿಕೆ ಕೊಡುವುದು ಈಗ ನನ್ನಿಂದ ಸಾಧ್ಯವಾಗುತ್ತಿಲ್ಲ. ಜನನ ನಿಯಂತ್ರಣ ಕ್ರಮಗಳ ಕಡೆಗೂ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ. ಮಹಿಳೆಗೆ ನೀಡುವ ಐರನ್‌ಮತ್ತು ಕ್ಯಾಲ್ಸಿಯಂ ಮಾತ್ರೆಗಳೂ ಮುಗಿದು ಹೋಗುತ್ತಿವೆ. ಪರಿಸ್ಥಿತಿ ಡೋಲಾಯಮಾನವಾಗಿದೆ. ಇದರ ನಡುವೆ ಕೋವಿಡ್‌ಸೋಂಕಿತರ ಸಮೀಕ್ಷೆಗೆ ಹೋದರೆ ಅಲ್ಲ ಮತ್ತೊಂದು ರೀತಿಯ ತಾಪತ್ರಯ ಎದುರಿಸಬೇಕಾಗುತ್ತಿದೆ’’ ಎಂದು ಅವರು ಸಂಕಷ್ಟ ಹೇಳಿಕೊಳ್ಳುತ್ತಾರೆ.
…..