ಕೃತಿಯ ಮಡಿಲಲ್ಲಿಯೇ ಹುಟ್ಟಿದ ಅತಿಸಣ್ಣ ವೈರಸ್ ಒಂದು,ಪ್ರಕೃತಿಮಡಿಲಿನಪ್ರಾಣಿಗಳಲ್ಲಿಯೇ ದುರಂಹಂಕಾರದಿಂದ ಮೆರೆಯುತ್ತಿದ್ದ ಮನುಷ್ಯನ ಅಸ್ತಿತ್ವವನ್ನೇ ಅಲುಗಾಡಿಸಿದೆ. ಒಂದು ನಿಮಿಷವನ್ನೂ ವ್ಯರ್ಥ ಮಾಡದೆ, ‘ಉತ್ಪಾದಕತೆ’ಯ ಬಗ್ಗೆಯೇ ಕೊಟ್ಯಂತರ ಶಬ್ದಗಳನ್ನಾಡುತ್ತಿದ್ದ ಮನುಕುಲವನ್ನೇ ಕಟ್ಟಿಹಾಕಿದೆ. ಈಗ ಎಲ್ಲೆಲ್ಲೂ ಸಾವಿನ ನರ್ತನ, ಆತಂಕ, ಭಯ, ನಷ್ಟದ ಲೆಕ್ಕಾಚಾರ. ಮುಂದೇನು?
ಕೋವಿಡ್-19 ವೈರಸ್ ಕಾಣಿಸಿಕೊಂಡ ನಂತರ ಜಗತ್ತು ಹಲವು ಬದಲಾವಣೆಗಳಿಗೆ ಸಾಕ್ಷಿಯಾಗಿದೆ. ಅದರಲ್ಲಿ ಪ್ರಮುಖವಾದುದ್ದೆಂದರೆ ಪರಿಸರ ಮಾಲಿನ್ಯ ಕಡಿಮೆಯಾಗಿರುವುದು. ಪ್ರಪಂಚದ ಬಹುತೇಕ ರಾಷ್ಟ್ರಗಳು ಲಾಕ್ಡೌನ್ ಘೋಷಿಸಿ, ಸ್ಥಬ್ದವಾಗಿದ್ದರಿಂದ ಸಹಜವಾಗಿಯೇ ಪ್ರಕೃತಿಯ ಮೇಲಿನ ಒತ್ತಡ ಕಡಿಮೆಯಾಗಿದೆ. ಜೀವ-ಜಂತುಗಳು, ಪ್ರಾಣಿ-ಪಕ್ಷಿಗಳು ಮನುಷ್ಯರ ಭಯವಿಲ್ಲದೆ ಪ್ರಕೃತಿಯ ಮಡಿಲಲ್ಲಿ ಸ್ವತಂತ್ರವಾಗಿ ಸಂಚರಿಸುತ್ತಿವೆ. ಆಗಾಗ ಮನುಷ್ಯನ ನೆಲೆಗಳಿಗೂ ಭೇಟಿ ನೀಡಿ, ಸುದ್ದಿಯಾಗುತ್ತಿವೆ.
ಮಾಲಿನ್ಯ (ಪಲ್ಯುಟ್) ಎಂದರೆ ಆಕ್ಸ್ಫರ್ಡ್ ಇಂಗ್ಲಿಷ್ ನಿಘಂಟಿನ ಪ್ರಕಾರ ಶುದ್ಧತೆ ಮತ್ತು ಪವಿತ್ರತೆಯನ್ನು ಕೆಡಿಸು; (ನೀರು ಮುಂತಾದವನ್ನು) ಕೊಳೆ ಮಾಡು, ಹೊಲಸುಗೊಳಿಸು ಎಂದರ್ಥ. ಪಲ್ಯೂಷನ್ ಎಂದರೆ ಮಲಿನೀಕರಣ, ಮಲಿನ ಮಾಡು ಎಂದು. ಪರಿಸರ ಮಾಲಿನ್ಯದ ವಿಷಯದಲ್ಲಿ ಈ ಶಬ್ದಗಳ ಅರ್ಥಗಳಿಗೆ ಒಂದಿಷ್ಟೂ ಕುಂದುಂಟಾಗದಂತೆ ಮನುಷ್ಯ ನಡೆದುಕೊಂಡು ಬಂದಿದ್ದಾನೆ. ಅಂದ ಹಾಗೆ ಮನುಷ್ಯ ಕೂಡ ಈ ಪರಿಸರದ ಭಾಗ, ಆತನೂ ಒಂದು ಪ್ರಾಣಿಯೇ!
ಪ್ರಕೃತಿಯ ಮಡಿಲಲ್ಲಿಯೇ ಹುಟ್ಟಿದ ಅತಿಸಣ್ಣ ವೈರಸ್ ಒಂದು,ಪ್ರಕೃತಿಮಡಿಲಿನಪ್ರಾಣಿಗಳಲ್ಲಿಯೇ ದುರಂಹಂಕಾರದಿಂದ ಮೆರೆಯುತ್ತಿದ್ದ ಮನುಷ್ಯನ ಅಸ್ತಿತ್ವವನ್ನೇ ಅಲುಗಾಡಿಸಿದೆ. ಒಂದು ನಿಮಿಷವನ್ನೂ ವ್ಯರ್ಥ ಮಾಡದೆ, ‘ಉತ್ಪಾದಕತೆ’ಯ ಬಗ್ಗೆಯೇ ಕೊಟ್ಯಂತರ ಶಬ್ದಗಳನ್ನಾಡುತ್ತಿದ್ದ ಮನುಕುಲವನ್ನೇ ಕಟ್ಟಿಹಾಕಿದೆ. ಈಗ ಎಲ್ಲೆಲ್ಲೂ ಸಾವಿನ ನರ್ತನ, ಆತಂಕ, ಭಯ, ನಷ್ಟದ ಲೆಕ್ಕಾಚಾರ. ಮುಂದೇನು? ಯಾರಿಗೂ ಗೊತ್ತಿಲ್ಲ.
ಆದರೆ ಪ್ರಕೃತಿಗೆ ಮಾತ್ರ ಲಾಭದ ಮೇಲೆ ಲಾಭ. ಬೇರೆ ದೇಶಗಳ ಕತೆ ಇರಲಿ, ನಮ್ಮ ದೇಶದಲ್ಲಿಯೇ ಕಳೆದ ಮಾರ್ಚ್ ಅಂತ್ಯಕ್ಕೆ ಮುಗಿದ ಆರ್ಥಿಕ ಸಾಲಿನಲ್ಲಿ ಹಸಿರು ಮನೆ ಮೇಲೆ ಪರಿಣಾಮ ಬೀರುವ ಅನಿಲಗಳ ಉತ್ಪಾದನೆ ಶೇ. 1.4 ರಷ್ಟು ಕಡಿಮೆಯಾಗಿದೆ. ಈ ರೀತಿ ಸಿಒ2 (CO2) ಬಿಡುಗಡೆ ಕಡಿಮೆಯಾಗಿರುವುದು ಕಳೆದ ನಾಲ್ಕು ದಶಕಗಳಲ್ಲಿಯೇ ಇದು ಮೊದಲು! ಹೊಸ ಆರ್ಥಿಕ ಸಾಲಿನಲ್ಲಿ ಇನ್ನಷ್ಟು ಕಡಿಮೆಯಾಗುವ ಸೂಚನೆ ಇದೆ. ಇಂಗಾಲ ತಜ್ಞರ ಅಂದಾಜಿನ ಪ್ರಕಾರ ಕಳೆದ ವರ್ಷಕ್ಕೆ ಹೋಲಿಸಿದರೆ ಮಾರ್ಚ್ನಲ್ಲಿ ಶೇ. 15ರಷ್ಟು ಮತ್ತು ಏಪ್ರಿಲ್ನಲ್ಲಿ ಶೇ.30ರಷ್ಟು ಇಂಗಾಲ ಉತ್ಪಾದನೆ ಕಡಿಮೆಯಾಗಿದೆ. ಅಂದಹಾಗೆ ಅತಿಹೆಚ್ಚು ಇಂಗಾಲ (CO2) ಉತ್ಪಾದಿಸುವ ದೇಶಗಳ ಪೈಕಿ ಭಾರತ ಮೂರನೇಸ್ಥಾನದಲ್ಲಿದೆ.
ನಮ್ಮ ದೇಶದಲ್ಲಿ ಮಾತ್ರವಲ್ಲ, ಅಭಿವೃದ್ಧಿಯೆಂಬ ಮರೀಚಿಕೆಯ ಬೆನ್ನು ಹತ್ತಿ, ಜಗತ್ತಿನ ನಂ.1 ಪಟ್ಟಕ್ಕಾಗಿ ಹಾತೊರೆಯುತ್ತಿರುವ ನಮ್ಮ ನೆರೆಯ ಚೀನಾದಲ್ಲಿ ಜನವರಿ ನಂತರ ಹಸಿರು ಮನೆ ಮೇಲೆ ಪರಿಣಾಮ ಬೀರುವ ಇಂಗಾಲದ ಉತ್ಪಾದನೆ ಶೇ.25ರಷ್ಟು ಕಡಿಮೆಯಾಗಿದೆ. ಕಲ್ಲಿದ್ದಲು ಬಳಕೆ ಶೇ. 40ರಷ್ಟು ಕುಸಿದಿದೆ. ಇಟಲಿಯಲ್ಲಿ ಮಾರ್ಚ್9ರಿಂದ ಲಾಕ್ಡೌನ್ ಜಾರಿಗೆ ತರಲಾಗಿದ್ದು, ಅಲ್ಲಿಯ ಸೆಟಲೈಟ್ಗಳು ಇಂಗಾಲ ಉತ್ಪಾದನೆ ತಳಮಟ್ಟಕ್ಕೆ ಇಳಿದಿರುವ ಚಿತ್ರಗಳನ್ನು ರವಾನಿಸಿವೆ.
ಜಗತ್ತಿಗೇ ದೊಡ್ಡಣ್ಣನಂತೆ ಬೀಗುತ್ತಿದ್ದ ಅಮೆರಿಕ, ಹವಾಮಾನ ವೈಪರಿತ್ಯಗಳಿಗೆ ಸಂಬಂಧಿಸಿದ ಅಂತಾರಾಷ್ಟ್ರೀಯ ಒಪ್ಪಂದಗಳಿಂದ ದೂರ ಉಳಿದು, ಆನೆ ನಡೆದಿದ್ದೇ ದಾರಿ ಎಂಬಂತೆ ಮೆರೆಯುತ್ತಿತ್ತು. ಈಗ ಪ್ರಕೃತಿಯೇ ಆ ದೇಶಕ್ಕೂ ಪಾಠ ಕಲಿಸಿದೆ. ಕೊಲಂಬಿಯಾ ವಿವಿಯ ಹೊಸ ಅಧ್ಯಯನದ ಪ್ರಕಾರ ಅಮೆರಿಕದ ನ್ಯೂಯಾರ್ಕ್ನಲ್ಲಿನ ಕಾರ್ಬನ್ ಮಾನೋಕ್ಸೈಡ್ನಮಟ್ಟ ಕಳೆದ ಮಾರ್ಚ್ಗೆಹೋಲಿಸಿದಲ್ಲಿ ಶೇ. 50ರಷ್ಟು ಕಡಿಮೆಯಾಗಿದೆ.
ಇದು ಮೊದಲೇನು ಅಲ್ಲ
ಕಳೆದ ಐವತ್ತು ವರ್ಷಗಳಲ್ಲಿ ಜಗತ್ತಿನಲ್ಲಿ ಹೀಗೆ ಇಂಗಾಲದ ಉತ್ಪಾದನೆ ಕಡಿಮೆಯಾಗಿರುವುದು ಇದು ಮೊದಲೇನೂ ಅಲ್ಲ. 1973ರ ಮೊತ್ತ ಮೊದಲ ಮತ್ತು 1979ರ ಎರಡನೇ ತೈಲಬಿಕ್ಕಟ್ಟಿನ ಸಂದರ್ಭದಲ್ಲಿ, 1991ರಲ್ಲಿ ರಷ್ಯಾದ ಒಕ್ಕೂಟ ವ್ಯವಸ್ಥೆ ಪತನಗೊಂಡಾಗ, 1997ರ ಏಷ್ಯಾ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಮತ್ತು 2008ರ ವಿಶ್ವ ಆರ್ಥಿಕ ಹಿಂಜರಿತದ ಸಂದರ್ಭದಲ್ಲಿ ಕೂಡ ಇದೇ ರೀತಿಯಾಗಿ ಹಸಿರು ಮನೆ ಮೇಲೆ ಪರಿಣಾಮ ಬೀರುವ ಅನಿಲಗಳ ಉತ್ಪಾದನೆ ಕಡಿಮೆಯಾಗಿತ್ತು. 2009ರಲ್ಲಿ ಜಾಗತಿಕ ಸಿಒ2 ಉತ್ಪಾದನೆ ಅದರ ಹಿಂದಿನ ವರ್ಷಕ್ಕೆ ಹೋಲಿಸಿದಲ್ಲಿ ಶೇ.1.4 ರಷ್ಟು ಕುಸಿದಿತ್ತು. ಆದರೆ ಒಂದೇ ವರ್ಷದಲ್ಲಿ ಅಂದರೆ 2010ರಲ್ಲಿಯೇ ಶೇ. 5.2ರಷ್ಟು ಹೆಚ್ಚಳ ದಾಖಲಿಸಿತ್ತು!
ಆಶ್ಚರ್ಯಕರ ಬೆಳವಣಿಗೆಯೆಂದರೆ, 2008 ಆರ್ಥಿಕ ಹಿಂಜರಿತದ ನಂತರ ಜಾಗತಿಕ ಅನಿಲ ಹೊರಸೂಸುವಿಕೆಯ ಪ್ರಮಾಣದಲ್ಲಿ ಅಭಿವೃದ್ಧಿಶೀಲ ದೇಶಗಳಿಗಿಂತ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಪಾಲು ಹೆಚ್ಚುತ್ತಾ ಬಂದಿದೆ. 2010ರಲ್ಲಿಯೇ ಇಂಗಾಲದಂತಹ ಅನಿಗಳ ಉತ್ಪಾದನೆಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಪಾಲು ಶೇ.50.3ರಷ್ಟಿತ್ತು. ಈಗ ಚೀನಾದ ಪಾಲೇ ಶೇ.28ರಷ್ಟು. ಅಮೆರಿಕದ ಪಾಲು ಶೇ. 14, ಮೂರನೇ ಸ್ಥಾನದಲ್ಲಿರುವ ಭಾರತದ ಪಾಲು ಶೇ.7.
ಈಗ ಕೊರೊನಾ ವೈರಸ್ಗೆಕಾರಣವಾಗಿರುವಂತೆ ಹವಾಮಾನ ವೈಪರಿತ್ಯದ ತೊಂದರೆಗಳಿಗೂ ಚೀನಾವೇ ಕಾರಣವಾಗಿದೆ ಎಂಬುದನ್ನು ಇಲ್ಲಿ ಬಿಡಿಸಿಯೇನೂ ಹೇಳಬೇಕಾಗಿಲ್ಲ. ಈ ನಿಟ್ಟಿನಲ್ಲಿ ಎಚ್ಚರಿಕೆಯ ಹೆಜ್ಜೆ ಇಡಬೇಕಾಗಿದ್ದ ಭಾರತ ಕೂಡ ಚೀನಾದೊಂದಿಗೆ ಪೈಪೋಟಿಗಿಳಿದು, ಜಗತ್ತಿನ ಉದ್ಯಮಗಳನ್ನು ತನ್ನತ್ತ ಸೆಳೆಯಲು ಹೊರಟಿದೆ. ಮೂರನೇ ಸ್ಥಾನದಿಂದ 2ನೇ ಸ್ಥಾನಕ್ಕೇರಲು ತೀವ್ರ ಪೈಪೋಟಿ ನಡೆಸಿದೆ!
ಮುಂದೇನು?
ಲಾಕ್ಡೌನ್ಸಂದರ್ಭದಲ್ಲಿ ಬೆಂಗಳೂರಿಗೆ ನವಿಲು, ಮಂಗಳೂರಿಗೆ ಕಾಡೆಮ್ಮೆ, ಮುಂಬಯಿಗೆ ಚಿರತೆ ಹೀಗೆ ಬೃಹತ್ನಗರಗಳಿಗೂ ವನ್ಯಜೀವಿಗಳುಲಗ್ಗೆ ಇಟ್ಟಿವೆ. ನಮ್ಮ ದೇಶದಲ್ಲಿ ಮಾತ್ರವಲ್ಲ, ಪ್ರಪಂಚದ ವಿವಿಧ ದೇಶಗಳೂ ಈ ವಿದ್ಯಮಾನಕ್ಕೆ ಸಾಕ್ಷಿಯಾಗಿವೆ. ಪ್ರಕೃತಿಯ ಮಡಿಲಿನ ಪ್ರವಾಸಿ ತಾಣಗಳು ವನ್ಯಜೀವಿಗಳ ಬೀಡಾಗುತ್ತಿವೆ. ವಾಯುಮಾಲಿನ್ಯ ಕಡಿಮೆಯಾಗಿರುವುದು ಎಲ್ಲರ ಅನುಭವಕ್ಕೂ ಬಂದಿದೆ. ಜಲಮಾಲಿನ್ಯಕ್ಕೆ ಹೆಸರಾದ ಗಂಗೆ, ಯಮುನೆ, ಕಾವೇರಿಗಳಲ್ಲಿ ಶುದ್ಧ ನೀರು ಹರಿಯಲಾರಂಭಿಸಿದೆ. ಮಾಲಿನ್ಯದ ಕವಚದಿಂದ ಕಾಣದಾಗಿದ್ದ ದೂರದ ಬೆಟ್ಟಗಳು ಕೈ ಬೀಸಿ ಕರೆಯುತ್ತಿವೆ. ಇದೆಲ್ಲವೂ ಪ್ರಕೃತಿ ಸಹಜ ಪ್ರಕ್ರಿಯೆಗಳು ಎನಿಸಿದರೂ, ಇದರಲ್ಲಿ ಏನೋ ಸಂದೇಶ ಅಡಗಿದೆ ಎಂಬ ವಿಶ್ಲೇಷಣೆ ಬಹಳ ಜೋರಾಗಿ ನಡೆದಿದೆ.
ನಿಜ, ಪ್ರಕೃತಿಯ ಮೇಲೆ ಮನುಜನ ಒತ್ತಡ ಕಡಿಮೆಯಾಗಿದೆ. ಆದರೆ ಇದೆಷ್ಟು ದಿನ? ಮನುಷ್ಯ ಹೀಗೆ ಕೈ ಕಟ್ಟಿ ಬಹಳ ಸಮಯ ಕೂರುವಂತಿಲ್ಲ. ನಿಧಾನವಾಗಿಯಾದರೂ ಮೊದಲಿನ ಅಭಿವೃದ್ಧಿಯ ರೈಲನ್ನು ಏರಲೇಬೇಕು. ಷೇರು ಮಾರುಕಟ್ಟೆಯಲ್ಲಿ ರಕ್ತಪಾತವಾಗದಂತೆ ನೋಡಿಕೋಳ್ಳಬೇಕು! ಹಸಿವೆಂಬ ಮಹಾರಕ್ಕಸನನ್ನು ಮಣಿಸಿ, ಮನುಜರೆಲ್ಲರ ಸಾವನ್ನು ಮುಂದೂಡಲೇಬೇಕು. ಇದಕ್ಕೆಲ್ಲ ಈಗ ಮನೆಯಲ್ಲಿಯೇ ಕುಳಿತು ಲೆಕ್ಕಾಚಾರ ಹಾಕಲಾಗುತ್ತಿದೆ. ಕೊರೊನಾದ ಭೀತಿ ಕಡಿಮೆಯಾಗುತ್ತಿದ್ದಂತೆಯೇ ಸಮಯದ ಚೌಕಟ್ಟಿನಲ್ಲಿ ಕೆಲಸ ಆರಂಭವಾಗಿಯೇ ಬಿಡುತ್ತದೆ. ಇದು ಪ್ರಕೃತಿಯ ಮೇಲೆ ಈ ಹಿಂದಿಗಿಂತಲೂ ಹೆಚ್ಚು ಒತ್ತಡಬೀರುವ ಎಲ್ಲ ಲಕ್ಷಣಗಳು ಸ್ಪಷ್ಟವಾಗಿ ಕಾಣಿಸಲಾರಂಭಿಸಿದೆ.
ಕುಸಿದು ಬಿದ್ದ ಆರ್ಥಿಕತೆಯನ್ನು ಎತ್ತಿ ಹಿಡಿಯುವುದು ಈಗ ಎಲ್ಲ ದೇಶಗಳ ಮುಂದಿರುವ ದೊಡ್ಡ ಸವಾಲು. ಈ ನಿಟ್ಟಿನಲ್ಲಿ ಆಮೆ ಹೆಜ್ಜೆ ಇಟ್ಟರಾಗದು, ಆನೆಯಂತೆ ನುಗ್ಗಲೇಬೇಕಾಗಿದೆ. ಹೀಗೆ ನುಗ್ಗುವಾಗ ಪರಿಸರದ ಮೇಲೆ ಬೀಳುವ ಒತ್ತಡದ ಲೆಕ್ಕಾಚಾರ ಹಾಕುತ್ತಾ ಕೂತರೆ ‘ವಿಫಲತೆ’ಯ ಪಟ್ಟ ಗ್ಯಾರಂಟಿ. ಬಲಿಷ್ಠ ಆರ್ಥಿಕತೆಯಲ್ಲಿ ನಮ್ಮ ದೇಶ ಎಷ್ಟನೇ ಸ್ಥಾನದಲ್ಲಿದೆ ಎಂಬುದು ಎಲ್ಲರಿಗೂ ಮುಖ್ಯ. ಹೀಗಾಗಿಯೇ ಈಗಾಗಲೇ ಚೀನಾ ನವೀಕರಿಸಬಹುದಾದ ಇಂಧನಗಳ ಉತ್ಪಾದಿಸುವ ಯೋಜನೆಗಳನ್ನು ಪಕ್ಕಕ್ಕೆ ಸರಿಸಿದೆ. ದೇಶದಾದ್ಯಂತ ಸ್ಥಾಪಿಸಲುದ್ದೇಶಿಸಿದ್ದ ಸೋಲಾರ್ ಫಾರ್ಮ್ ಯೋಜನೆಯನ್ನು ಮುಂದೂಡಿದೆ. ಅಲ್ಲದೆ, ನಿರ್ಮಾಣ ಕಾಮಗಾರಿಗಳನ್ನು ಪ್ರೋತ್ಸಾಹಿಸಲು 3.5 ಟ್ರಿಲಿಯನ್ ಡಾಲರ್ಗಳ ಯೋಜನೆ ಘೋಷಿಸಿದೆ. ಬೇರೆ ದೇಶಗಳೂ ಇದೇ ದಾರಿಯಲ್ಲಿ ಸಾಗಿವೆ. ಕೆನಡಾ ತೈಲ ಮತ್ತು ಅನಿಲ ಉದ್ಯಮಕ್ಕೆ ಬೃಹತ್ ನೆರವಿನ ಪ್ಯಾಕೇಜ್ ಘೋಷಿಸಿದ್ದರೆ, ಅಮೆರಿಕ ತಾನೇನು ಕಡಿಮೆ ಎಂದು ಹೆಚ್ಚು ಮಾಲಿನ್ಯಕ್ಕೆ ಕಾರಣವಾಗುವ ಏರ್ಲೈನ್ಸ್ಉದ್ಯಮಕ್ಕೆ 60 ಶತಕೋಟಿ ಡಾಲರ್ ನೆರವು ಸೇರಿದಂತೆ 2 ಟ್ರಿಲಿಯನ್ ಡಾಲರ್ಗಳ (ಒಟ್ಟಾರೆ ಜಿಡಿಪಿಯ ಶೇ. 13ರಷ್ಟು) ಪ್ಯಾಕೇಜ್ ಪ್ರಕಟಿಸಿದೆ.
ನಮ್ಮ ದೇಶ ಕೂಡ ಇದರಲ್ಲಿ ಹಿಂದೆ ಬಿದ್ದಿಲ್ಲ. ಸುಸ್ಥಿರ ಅಭಿವೃದ್ಧಿಯನ್ನು ಮರೆತು, ಆರ್ಥಿಕ ಅಭಿವೃದ್ಧಿಯನ್ನೇ ಎತ್ತಿ ಹಿಡಿಯಲು ಜಿಡಿಪಿಯ ಶೇ. 10ರಷ್ಟು ಅಂದೆ 20ಲಕ್ಷ ಕೋಟಿಗಳ ಪ್ಯಾಕೇಜ್ ಪ್ರಕಟಿಸಿದೆ. ಇದೆಲ್ಲವೂ ಮತ್ತೆ ಕುಸಿದು ಬಿದ್ದಿರುವ ಜಾಗತಿಕ ಆರ್ಥಿಕ ವ್ಯವಸ್ಥೆಯನ್ನು ಎತ್ತಿ ಹಿಡಿಯಲು ನಡೆಸಿರುವ ಪ್ರಯತ್ನಗಳು. ಅಂದರೆ ಮೊದಲಿನಂತೆಯೇ ಎಲ್ಲವನ್ನೂ ‘ಸರಿ’ ದಾರಿಗೆ ತರಲಾಗುತ್ತದೆ! ಇಲ್ಲಿ ಪರಿಸರ ಮಾಲಿನ್ಯದ, ಅದರ ಪರಿಣಾಮಗಳ ವಿಷಯ ಎಲ್ಲರಿಗೂ ನಗಣ್ಯ.
ಜಾಗತಿಕವಾಗಿ ಸೋಲಾರ್ ಬ್ಯಾಟರಿಯ ಮತ್ತು ವಿದ್ಯುತ್ವಾಹನಗಳ ಬೇಡಿಕೆ ಶೇ. 16ರಷ್ಟು ಈಗಾಗಲೇ ಕುಸಿದಿದೆ. ಈಕುಸಿತದ ಪ್ರಮಾಣ ಬಹಳ ಜಾಸ್ತಿಯಾಗುವ ನಿರೀಕ್ಷೆ ಇದೆಎಂದುಮಾರುಕಟ್ಟೆವಿಶ್ಲೇಷಕರುಹೇಳುತ್ತಿದ್ದಾರೆ. ತೈಲ ಬೆಲೆ ಕುಸಿತ ಕೂಡಇನ್ನಷ್ಟು ಅನಾಹುತಗಳಿಗೆ ಕಾರಣವಾಗಲಿದೆ. ಪರಿಸರಕ್ಕೆ, ಭೂತಾಪಮಾನಕ್ಕೆ ಸಂಬಂಧಿಸಿದ ಅಂತಾರಾಷ್ಟ್ರೀಯ ಒಪ್ಪಂದಗಳ ಕುರಿತು ಚರ್ಚಿಸಲು ಇನ್ನು ಕೆಲವು ವರ್ಷ ಯಾರಿಗೂ ಸಮಯವಿರುವುದಿಲ್ಲ! ಲಾಕ್ಡೌನ್ ಸಂದರ್ಭಲ್ಲಿ ಮುಕ್ತವಾಗಿ ಓಡಾಡಿಕೊಂಡಿದ್ದ ವನ್ಯಜೀವಿಗಳು ಮುಂದೆ ಇನ್ನಷ್ಟು ನರಕಯಾತನೆ ಅನುಭಿಸಬೇಕಾಗುತ್ತದೆ, ಮತ್ತೊಂದು ಬಲಿಷ್ಠ ವೈರಾಣು ಸೃಷ್ಟಿಯಾಗುವವರೆಗೂ!