16.7 C
Karnataka
Sunday, November 24, 2024

    ಚೀನಾದ ಅಸಹಾಯಕ ಸ್ಥಿತಿಯ ಸಂಪೂರ್ಣ ಲಾಭ ಭಾರತಕ್ಕೆ ದಕ್ಕುವುದೆ?

    Must read

    ಕೊರೊನಾಸೃಷ್ಟಿಕರ್ತದೇಶಜಾಗತಿಕವಾಗಿಏಕಾಂಗಿ

    • ಚಿರಾಗ್ ಆರ್ ಎಚ್

    ಇನ್ನುಮುಂದೆ ಜಗತ್ತು ಬದಲಾಗಲಿದೆ. ಕೊರೊನಾ ಪೂರ್ವ ಜಗತ್ತು ಮತ್ತು ಕೊರೊನಾ ನಂತರದ ಜಗತ್ತು ಎಂಬುದಾಗಿ ಇತಿಹಾಸ ಕರೆಯಲಿದೆ. ಮಹಾಯುದ್ಧದ ಪೂರ್ವ ಮತ್ತು ಬಳಿಕ ಎಂದು ಹೇಗಿತ್ತೋ, ಹಾಗೆಯೇ ಈಗಲೂ ಆಗುತ್ತದೆ’- ಹಾಗೆಂದು ಹೇಳಿದವರು ಪ್ರಧಾನಿ ನರೇಂದ್ರ ಮೋದಿ. ಇತ್ತೀಚೆಗೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ವಿಡಿಯೊ ಕಾನ್ಫರೆನ್ಸ್ ನಲ್ಲಿ ಪ್ರಧಾನಿ ಹೇಳಿರುವ ಈ ಮಾತು, ಜಾಗತಿಕ ರಾಜಕಾರಣಕ್ಕೂ ಅನ್ವಯವಾಗುತ್ತದೆ.

    ಈವರೆಗೆ ಪೌರಾತ್ಯ ರಾಷ್ಟ್ರಗಳ ಪೈಕಿ ಚೀನಾ, ಪಾಶ್ಚಿಮಾತ್ಯ ರಾಷ್ಟ್ರಗಳ ಪೈಕಿ ಅಮೆರಿಕಗಳನ್ನು ಬಲಾಢ್ಯ ರಾಷ್ಟ್ರಗಳೆಂದು ಹೇಳಲಾಗುತ್ತಿತ್ತು. ಕೊರೊನಾ ನಂತರದ ಜಗತ್ತಿನಲ್ಲಿ ಚೀನಾದ ಪ್ರಾಬಲ್ಯ ಕುಗ್ಗಲಿದೆ. ರಾಜಕೀಯ ಮತ್ತು ಆರ್ಥಿಕತೆಯ ಮೂಲವಾದ ಕೈಗಾರಿಕೆ ಎರಡರಲ್ಲೂ ಚೀನಾವನ್ನು ಬಗ್ಗುಬಡಿಯಲು ಎಲ್ಲ ದೇಶಗಳೂ ಕಾದು ಕುಳಿತಿವೆ. ಎಷ್ಟೇ ಕಸರತ್ತು ಮಾಡಿದರೂ ಈ ಪ್ರಹಾರದಿಂದ ಚೀನಾ ತಪ್ಪಿಸಿಕೊಳ್ಳುವುದು ಕಷ್ಟ. ಏಕೆಂದರೆ ಜಾಗತಿಕ ರಾಜಕಾರಣದಲ್ಲಿ ಚೀನಾ ಈಗ ಏಕಾಂಗಿ.

    `ಜೈವಿಕ ಅಸ್ತ್ರವಾಗಿ ಕೊರೊನಾ ಬಳಸಿಕೊಳ್ಳಲು ಚೀನಾ ಮುಂದಾಗಿತ್ತು. ಕೊರೊನಾ ಮಾನವ ನಿರ್ಮಿತ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎರಡು ತಿಂಗಳ ಹಿಂದೆಯೇ ಆರೋಪಿಸಿದಾಗ ಜಗತ್ತಿನ ಯಾವ ರಾಷ್ಟ್ರಗಳೂ ಅಷ್ಟಾಗಿ ತಲೆ ಕೆಡಿಸಿಕೊಳ್ಳಲಿಲ್ಲ. ಚೀನಾದ ಬೆನ್ನಿಗೆ ವಿಶ್ವ ಆರೋಗ್ಯ ಸಂಸ್ಥೆ ನಿಂತಿದೆ ಎಂದು ಆಪಾದಿಸಿದಾಗಲೂ ಬಹುತೇಕ ದೇಶಗಳು ಗಂಭೀರವಾಗಿ ಪರಿಗಣಿಸಲಿಲ್ಲ. ಚೀನಾದ ವುಹಾನ್ ನಗರದಿಂದ ಹೊರಟ ಸೋಂಕು ಯಾವಾಗ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಮಗ್ಗುಲು ಮುರಿಯಿತೋ, ಜನರ ಜೀವಗಳನ್ನು ಸಾವಿರದ ಸಂಖ್ಯೆಯಲ್ಲಿ ಆಪೋಶನ ತೆಗೆದುಕೊಳ್ಳುವುದು ಶುರುವಾಯಿತೋ ಆಗ ಎಲ್ಲರೂ ಟ್ರಂಪ್ ಆರೋಪದ ಕುರಿತು ಯೋಚನೆ ಮಾಡಲಾರಂಭಿಸಿದರು. ಆಸ್ಟ್ರೇಲಿಯಾ, ಫ್ರಾನ್ಸ್, ಜರ್ಮನಿ, ಐರೋಪ್ಯ ಒಕ್ಕೂಟದ ಬಹುತೇಕ ದೇಶಗಳು ಸೋಂಕಿನ ಮೂಲದ ಕುರಿತು ಜಾಗತಿಕ ತನಿಖೆಯಾಗಲೇಬೇಕು ಎಂದು ಪಟ್ಟು ಹಿಡಿದಿವೆ. ವಿಶ್ವ ಆರೋಗ್ಯ ಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿಯೂ ಈ ಕುರಿತು ಹಕ್ಕೊತ್ತಾಯ ಮಂಡಿಸಲು ಮುಂದಾಗಿವೆ. ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಪಾಕಿಸ್ತಾನವನ್ನು ಬೆಂಬಲಿಸಿ ಏಕಾಂಗಿಯಾಗಿರುವ ಚೀನಾ, ಈಗ ಕೊರೊನಾದಿಂದಾಗಿ ಮತ್ತೆ ಒಬ್ಬಂಟಿಯಾಗಿದೆ.

    ಕೊರೊನಾ ಮಾನವ ನಿರ್ಮಿತವೊ, ನೈಸರ್ಗಿಕ ಸೋಂಕೋ ಎನ್ನುವುದು ಸದ್ಯಕ್ಕೆ ಅಪ್ರಸ್ತುತ. ಆದರೆ ಆರಂಭದಲ್ಲಿಯೇ ಈ ಸೋಂಕಿನ ತೀವ್ರತೆ ಎಷ್ಟು ಎನ್ನವುದು ಅರಿವಿದ್ದರೂ ಅದನ್ನು ಜಾಗತಿಕ ಸಮುದಾಯದಿಂದ ಮುಚ್ಚಿಟ್ಟು ಚೀನಾ ಮೋಸ ಮಾಡಿದೆ ಎನ್ನುವುದು ಬಹುತೇಕ ದೇಶಗಳ ಆರೋಪ. ಅದಕ್ಕೆ ಉತ್ತರ ನೀಡಲಾಗದೇ ಚೀನಾ ಮತ್ತು ಅದರ ಬೆಂಬಲಕ್ಕೆ ನಿಂತಿರುವ ವಿಶ್ವ ಆರೋಗ್ಯ ಸಂಸ್ಥೆ ಹೆಣಗಾಡುತ್ತಿವೆ.

    ಇನ್ನೊಂದೆಡೆ ಆಸ್ಟ್ರೇಲಿಯಾ, ಜಪಾನ್, ಜರ್ಮನಿ, ಸ್ಪೇನ್, ಐರೋಪ್ಯ ಒಕ್ಕೂಟದಲ್ಲಿ ಚೀನಾದ ಏಕೈಕ ಮಿತ್ರ ರಾಷ್ಟ್ರಇಟಲಿ ಸಹ ಚೀನಾದಿಂದ ತಮ್ಮ ದೇಶದ ಕೈಗಾರಿಕೆಗಳನ್ನು ವಾಪಸ್ ಕರೆಸಿಕೊಳ್ಳುವ ನಿರ್ಧಾರ ಮಾಡಿವೆ. ಬಹಳಷ್ಟು ದೇಶಗಳು ಚೀನಾ ಉತ್ಪನ್ನಗಳನ್ನೇ ನಿಷೇಧಿಸಲು ನಿರ್ಧರಿಸಿವೆ. ಭಾರತ, ಸ್ಪೇನ್ ಮೊದಲಾದ ರಾಷ್ಟ್ರಗಳಿಗೆ ಕಳಪೆ ಗುಣಮಟ್ಟದ ಕೊರೊನಾ ಆ್ಯಂಟಿಬಾಡಿ ಟೆಸ್ಟ್ ಕಿಟ್ ಹಾಗೂ ವೈಯಕ್ತಿಕ ಸುರಕ್ಷತಾ ಕಿಟ್ (ಪಿಪಿಇ) ಪೂರೈಕೆ ಮಾಡಿ ಅವಮಾನ ಅನುಭವಿಸಿರುವ ಚೀನಾಕ್ಕೆ ಇದು ಬಹುದೊಡ್ಡ ಹೊಡೆತ. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿಯೂ ಲಾಭಕೋರತನವೇ ಮುಖ್ಯವೆಂದು ಭಾವಿಸಿರುವ ಚೀನಾ ನಂಬಿಕೆಗೆ ಅರ್ಹವಲ್ಲದ ದೇಶ ಎನ್ನುವ ಭಾವನೆ ಜಾಗತಿಕ ಸಮುದಾಯದಲ್ಲಿ ಬಲಗೊಂಡಿದೆ.

    ಭಾರತಕ್ಕೆ ಅನುಕೂಲ: ಏಕಾಂಗಿಯಾಗಿ ನಿಂತಿರುವ ಚೀನಾದ ಅಸಹಾಯಕ ಸ್ಥಿತಿಯ ಸಂಪೂರ್ಣ ಲಾಭ ದಕ್ಕುವುದು ಭಾರತಕ್ಕೆ ಎನ್ನುವುದು ನಿರ್ವಿವಾದ. ಚತುರ ರಾಜತಾಂತ್ರಿಕ ನೀತಿಗಳಿಂದ ವಿಶ್ವದಲ್ಲಿ ಪ್ರಭಾವ ಹೆಚ್ಚಿಸಿಕೊಳ್ಳುತ್ತ ಸಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ಈ ಸಂದರ್ಭದ ಲಾಭ ಪಡೆಯದಷ್ಟು ದಡ್ಡರೇನಲ್ಲ. ಮುಖ್ಯವಾಗಿ, ಜಾಗತಿಕವಾಗಿ ಚೀನಾ ಬಲಹೀನವಾದಷ್ಟೂ ಚೀನಾದ ನೆರವನ್ನ ನಂಬಿಕೊಂಡಿರುವ ನಮ್ಮ ನೆರೆಯ ಪಾಕಿಸ್ತಾನ ಕೂಡ ದುರ್ಬಲವಾಗುತ್ತ ಹೋಗುತ್ತದೆ. ಅಮೆರಿಕಕ್ಕೂ ಚೀನಾ ವಿರುದ್ಧ ಭಾರತದಂತಹ ಗೆಳೆಯನ ಅಗತ್ಯವಿದೆ. ಆರ್ಥಿಕವಾಗಿ, ಸ್ವದೇಶಿ ಬಿತ್ತವನ್ನು ಬಿತ್ತುವ ಮೂಲಕ ಚೀನಾ ಉತ್ಪನ್ನಗಳಿಗೆ ಗೇಟ್‌ಪಾಸ್ ನೀಡುವ ಸೂಚನೆಯನ್ನು ಮೋದಿ ನೀಡಿದ್ದಾರೆ. ಚೀನಾದಿಂದ ಕಾಲ್ಕಿಳುವ ಕಂಪನಿಗಳಿಗೆ ಭಾರತ ಕೆಂಪುಹಾಸು ಹಾಸಿದೆ. ಈ ಸೂಕ್ಷ್ಮಗಳೆಲ್ಲ ಚೀನಾಕ್ಕೆ ಅರ್ಥವಾಗುವುದಿಲ್ಲ ಎಂದಲ್ಲ. ಅರ್ಥವಾಗಿರುವುದರಿಂದಲೇ ಸಿಕ್ಕಿಂನಲ್ಲಿ ಚೀನಾ ಯೋಧರು ಭಾರತೀಯ ಸೈನಿಕರ ಜತೆ ಜಗಳ ತೆಗೆದದ್ದು, ಲಡಾಖ್‌ನಲ್ಲಿ ವಾಸ್ತವ ಗಡಿ ರೇಖೆ ಬಳಿ ಚೀನಾ ಯುದ್ಧ ವಿಮಾನಗಳು ಹಾರಾಟ ನಡೆಸಿದ್ದು. ಭಾರತ ಇದನ್ನೆಲ್ಲ ಎದುರಿಸಿ ತಕ್ಕ ಪ್ರತ್ಯುತ್ತರ ನೀಡುವಷ್ಟು ಸಮರ್ಥವಾಗಿದೆ.

    ಶ್ರೀವತ್ಸ ನಾಡಿಗ್
    ಶ್ರೀವತ್ಸ ನಾಡಿಗ್https://kannadapress.com/
    ಶ್ರೀವತ್ಸ ನಾಡಿಗ್ ಕನ್ನಡಪ್ರೆಸ್.ಕಾಮ್ ನ ಪ್ರಧಾನ ಸಂಪಾದಕ ಮತ್ತು ಸಂಸ್ಥಾಪಕ
    spot_img

    More articles

    1 COMMENT

    1. ಉತ್ತಮ ಲೇಖನ. ಚೀನಾದ ಬಹುತೇಕ ವಸ್ತುಗಳಿಗೆ ಭಾರತ ಸೇರಿದಂತೆ ಹಲವಾರು ರಾಷ್ಟ್ರಗಳಿಂದ ಬಹಿಷ್ಕಾರ ಖಚಿತ. ಚೀನಾದ ಉಧ್ಧಟತನವೇ ಅದಕ್ಕೆ ಮುಳುವಾಗುವುದರಲ್ಲಿ ಎರಡು ಮಾತಿಲ್ಲ. ಕನ್ನಡಪ್ರೆಸ್.ಕಾಮ್ ಗೆ ಶುಭವಾಗಲಿ. ಇಂತಹ ಒಳ್ಳೆಯ ಲೇಖನಗಳು ಇನ್ನಷ್ಟು ಮೂಡಿ ಬರಲಿ. *ಜೈಹಿಂದ್, ಜೈ ಕರ್ನಾಟಕ*

    LEAVE A REPLY

    Please enter your comment!
    Please enter your name here

    Latest article

    error: Content is protected !!