.
2007ರಲ್ಲಿ ಆರಂಭಗೊಂಡ ಡಬ್ಬಿಂಗ್ ಪರ ಹೋರಾಟ ಮಾಲ್ಗುಡಿ ಡೇಸ್ ಟೀವಿ ಧಾರವಾಹಿ ಕನ್ನಡದಲ್ಲಿ ಪ್ರಸಾರ ವಾಗುವುದರೊಂದಿಗೆ ನಿರ್ಣಾಯಕ ಹಂತ ತಲುಪಿದೆ. ವಿರೋಧದ ದನಿ ಎದ್ದಾಗಲೆಲ್ಲಾ ಅದನ್ನು ಸಮರ್ಥವಾಗಿ ಎದುರಿಸಿದ ಬನವಾಸಿ ಬಳಗದ ಆನಂದ್ ತಮ್ಮ ಬಳಗ ಮತ್ತು ಕನ್ನಡ ಗ್ರಾಹಕ ಕೂಟ ನಡೆಸಿದ ಹೋರಾಟವನ್ನು ಇಲ್ಲಿ ಮೆಲುಕು ಹಾಕಿದ್ದಾರೆ.
2007ನೇ ವರ್ಷದಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಡಬ್ಬಿಂಗ್ ಕೂಗು ಬನವಾಸಿ ಬಳಗದ ಮೂಲಕ ಕೇಳಿಬಂತು.ಮುಂದೆ ಇದು 2008 ರಿಂದ ಕನ್ನಡ ಗ್ರಾಹಕ ಕೂಟದಿಂದ ಎದ್ದ ಡಬ್ಬಿಂಗ್ ಪರವಾದ ಕೂಗು ಹಾಗೂ ಜನ ಜಾಗೃತಿ, 2012 ರಲ್ಲಿ ಕೋರ್ಟ್ ಮೆಟ್ಟಿಲೇರಿತ್ತು. ಡಬ್ಬಿಂಗ್ ತಡೆಯುತ್ತಿರುವ ಹತೋಟಿ ಕೂಟಗಳ ನಡೆಯನ್ನು ಪ್ರಶ್ನಿಸಿ ಕನ್ನಡ ಗ್ರಾಹಕ ಕೂಟವು ಸಿಸಿಐನಲ್ಲಿ ಕೇಸನ್ನು ದಾಖಲಿಸಿತ್ತು. ಅದು ಮುಂದುವರೆದು, 2015 ರಲ್ಲಿ ಸಿಸಿಐನಿಂದ ಡಬ್ಬಿಂಗ್ ಪರವಾದ ತೀರ್ಪು ಬಂದು, ಹತೋಟಿ ಕೂಟಗಳಿಗೆ ದಂಡವನ್ನು ವಿಧಿಸಿತ್ತು. ಅದಾದ ಮೇಲೆ, ಡಬ್ಬಿಂಗ್ ಚಿತ್ರಗಳನ್ನು ಹೊರತರಲು, ಡಬ್ಬಿಂಗ್ ಪರವಾದವರು ಸಾಕಷ್ಟು ಪ್ರಯತ್ನಗಳನ್ನು ನಡೆಸುತ್ತಿದ್ದರು. 2016ರ ಹೊತ್ತಿಗೆ ಸಮಾನ ಮನಸ್ಕರೆಲ್ಲಾ ಸೇರಿ, ಹಣ ಹೂಡಿ ಡಬ್ಬಿಂಗ್ ಚಿತ್ರಗಳನ್ನು ಮಾಡುವ ಕೆಲಸ ನಡೆಯುತ್ತಿತ್ತು. ಹರಿವು ಕ್ರಿಯೇಷನ್ಸ್ ತಂಡದ ಸದಸ್ಯರು, ಕನ್ನಡ ಗ್ರಾಹಕ ಕೂಟ ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ನೆರವಿನೊಂದಿಗೆ ಹಲವು ಡಬ್ಬಿಂಗ್ ಚಿತ್ರಗಳನ್ನು ಹೊರತರುವುದಕ್ಕಾಗಿ ಪ್ರಯತ್ನ ನಡೆಸುತ್ತಿತ್ತು. ಡಬ್ಬಿಂಗ್‌ನಿಂದ ಆಗುವ ಒಳಿತುಗಳನ್ನು ಅರಿತು, ಗಾಂಧಿನಗರದಲ್ಲಿ ಮೊತ್ತ ಮೊದಲ ಬಾರಿಗೆ ಡಬ್ಬಿಂಗ್ ಮಾಡಲು ಮುಂದೆ ಬಂದವರು ದರ್ಶನ್ ಎಂಟರ್‌ಪ್ರೈಸೆಸ್‌ನ ಕೃಷ್ಣ ಮೂರ್ತಿಯವರು. ಅವರ ಜೊತೆಗೂಡಿ ಸಿನೆಮಾಗಳನ್ನು ಡಬ್ ಮಾಡುವ ಕೆಲಸ ಒಂದೆಡೆ ಸಾಗುತ್ತಿತ್ತು.
ಮೊದಲಿಗೆ ಡಬ್ಬಿಂಗ್ ಆಗಿ ತೆರೆಕಂಡ ಚಿತ್ರ ನಾನು ನನ್ನ ಪ್ರೀತಿ ಎನ್ನುವ ಚಿತ್ರ. ಅದು ಉತ್ತರ ಕರ್ನಾಟಕದ ಒಂದೆರಡು ಕಡೆ ಮಾತ್ರ ಬಿಡುಗಡೆಯ ಭಾಗ್ಯ ಕಂಡಿತು. ಮುಖ್ಯವಾಗಿ ಡಬ್ಬಿಂಗ್ ವಿರೋಧಿಗಳ ಸವಾಲನ್ನು ಎದುರಿಸಿ ಬೆಂಗಳೂರಿನಲ್ಲಿ ತೆರೆಕಂಡ ಚಿತ್ರ ಸತ್ಯದೇವ್ ಐಪಿಎಸ್. ಇದಾದ ನಂತರ ಒಂದರ ಹಿಂದೊಂದು ಹಲವಾರು ಚಿತ್ರಗಳು ಕನ್ನಡಕ್ಕೆ ಡಬ್ ಆಗಿ ಪ್ರದರ್ಶನ ಭಾಗ್ಯ ಕಂಡವು.. ಮೂಲ ಚಿತ್ರದ ಜೊತೆಗೆ ನೇರ ಬಿಡುಗಡೆಯಾದದ್ದು ಡಿಯರ್ ಕಾಮ್ರೇಡ್, ಕಿರಿಕ್ ಲವ್ ಸ್ಟೋರಿ.. ಡಬ್ಬಿಂಗ್ ಗುಣಮಟ್ಟವು ಕೂಡ ಚಿತ್ರದಿಂದ ಚಿತ್ರಕ್ಕೆ ಏರಿಕೆ ಯಾಗುತ್ತ ಹೋಯಿತು. ಧೀರ ಕಮಾಂಡೋ ಚಿತ್ರಗಳು ಇದಕ್ಕೆ ಕುರುಹಾಗಿ ನಿಂತರೆ ಜಗಮಲ್ಲ ಚಿತ್ರದ ಡಬ್ಬಿಂಗ್ ಹೊಸ ಮಾನದಂಡಗಳನ್ನು ಹುಟ್ಟುಹಾಕಿದ್ದು ಸತ್ಯ. ಹಲವಾರು ಇಂಗ್ಲಿಷ್ ಚಿತ್ರಗಳು ಕನ್ನಡಕ್ಕೆ ಡಬ್ ಆದವು. ಪ್ರಮುಖವಾಗಿ ಫಾಸ್ಟ್ ಅಂಡ್ ಫ್ಯುರಿಯಸ್, ಟರ್ಮಿನೇಟರ್ 3 ಇವುಗಳನ್ನು ಹೆಸರಿಸಬಹುದು. ಮುಂದಿನ ದಿನಗಳಲ್ಲಿ ಅನೇಕ ದೊಡ್ಡ ದೊಡ್ಡ ಚಿತ್ರಗಳು ಕನ್ನಡಕ್ಕೆ ಡಬ್ಬಿಂಗ್ ಆಗಿ ಮೂಲ ಚಿತ್ರದೊಡನೆ ಕರ್ನಾಟಕದಲ್ಲಿ ಬಿಡುಗಡೆಯಾಗಲಿ ವೆ.
ಅಂತರ್ಜಾಲದಲ್ಲಿ ಡಬ್ಬಿಂಗ್
ಇದೇ ಸಮಯದಲ್ಲಿ zee5, ಅಮೆಜಾನ್ ಪ್ರೈಮ್ ಮೊದಲಾದ ತಾಣಗಳಲ್ಲಿ ಅನೇಕ ಪರಭಾಷಾ ಧಾರವಾಹಿಗಳು ಚಲನಚಿತ್ರಗಳು ಕನ್ನಡಕ್ಕೆ ಡಬ್ಬಿಂಗ್ ಆಗಿ ನೋಡುಗರಿಗೆ ದೊರೆತವು. ದೂರದರ್ಶನದ ಅನೇಕ ವಾಹಿನಿಗಳು ವಿಶೇಷವಾಗಿ ಡಿಸ್ಕವರಿ, ಡಿಸ್ನಿ, ಚಿಂಟು ಮೊದಲಾದವು ಕನ್ನಡದಲ್ಲಿ ಡಬ್ಬಿಂಗ್ ಮಾಡಿದ ಕಾರ್ಯಕ್ರಮ ಹಾಕತೊಡಗಿದವು.
ಟಿವಿಯಲ್ಲಿ ಡಬ್ಬಿಂಗ್ ಕಾರ್ಯಕ್ರಮ
ಡಬ್ಬಿಂಗ್ ಪರವಾದ ನ್ಯಾಯಾಲಯದ ಹೋರಾಟಕ್ಕೆ ಮುಖ್ಯವಾದ ಕಾರಣ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಬೇಕಾಗಿದ್ದ ಸತ್ಯಮೇವ ಜಯತೆ ಕಾರ್ಯಕ್ರಮಕ್ಕೆ ಹತೋಟಿ ಕೂಟಗಳು ಒಡ್ಡಿದ ತಡೆ. ಇದೀಗ ಕಾನೂನು ಹೋರಾಟಗಳು ಮುಗಿದ ನಂತರ ಹಲವಾರು ಡಬ್ಬಿಂಗ್ ಆದ ಚಲನಚಿತ್ರಗಳು ದೂರದರ್ಶನಗಳ ಟಿವಿಯಲ್ಲಿ ಪ್ರಸಾರವಾದ ತೊಡಗಿದವು. ಅವುಗಳಲ್ಲಿ ಹೆಚ್ಚಿನವು ಹಳೆಯ ಪರಭಾಷಾ ಚಿತ್ರಗಳು. ಡಬ್ಬಿಂಗ್ ಆದ ಧಾರವಾಹಿಯ ಪ್ರಸಾರ ಆರಂಭವಾಗುವ ಸೂಚನೆ ಸಿಕ್ಕಿದ್ದು ಮಹಾಭಾರತ ಧಾರವಾಹಿಯನ್ನು ಕನ್ನಡಕ್ಕೆ ಡಬ್ ಮಾಡಿ ಪ್ರಸಾರಮಾಡಲು ಸುವರ್ಣ ವಾಹಿನಿಯವರು ಮುಂದಾದಾಗಲೆ. ಹತೋಟಿ ಕೂಟಗಳು ಇದಕ್ಕೂ ಅಡ್ಡಿ ಮಾಡಿದ ಸುದ್ದಿ ಕೇಳಿಬಂತು. ಅಷ್ಟರಲ್ಲಿ ಜೀ ಕನ್ನಡ ವಾಹಿನಿಯವರು ಮಾಲ್ಗುಡಿ ಡೇಸ್ ಧಾರವಾಹಿಯನ್ನು ಕನ್ನಡದಲ್ಲಿ ಪ್ರಸಾರಮಾಡಲು ಮುಂದಾದರು. ಮಾಲ್ಗುಡಿ ಡೇಸ್ ಶಂಕರ್ ನಾಗ್ ನಿರ್ದೇಶಿಸಿದ ಕನ್ನಡಿಗರ ಹೆಮ್ಮೆ ಯ ಧಾರವಾಹಿ.. ದುರಂತವೆಂದರೆ ಇದು ಕನ್ನಡದಲ್ಲೇ ಇರಲಿಲ್ಲ. ಈ ದಾರಾವಾಹಿಯನ್ನು ಕನ್ನಡಕ್ಕೆ ಡಬ್ ಮಾಡಿ ಟಿವಿಯಲ್ಲಿ ಪ್ರಸಾರವಾಗುವಂತೆ ಮಾಡಿದ್ದೆ ಒಂದು ದೊಡ್ಡ ಕಥೆ.
ಮಾಲ್ಗುಡಿ ಡೇಸ್ ಕನ್ನಡಕ್ಕೆ: ಕನಸು ನನಸಾದ ಕಥೆ
ಹೀಗೆ ಕೆಲಸ ಮಾಡುತ್ತಿರುವವರಿಗೆ, ಶಂಕರ್ ನಾಗ್ ಅವರ ಮೇರುಕೃತಿ ಮಾಲ್ಗುಡಿ ಡೇಸ್ ಅನ್ನು ಕನ್ನಡಕ್ಕೆ ತರಬೇಕು ಎಂಬ ತುಡಿತ ಹೆಚ್ಚಿತ್ತು. ಡಬ್ಬಿಂಗ್ ವಿರೋಧದಿಂದಾಗಿ ಕನ್ನಡಿಗರೇ ನಿರ್ಮಿಸಿದ್ದ ಈ ಧಾರಾವಾಹಿ ಕನ್ನಡದಲ್ಲಿ ಬರದಂತೆ ನೋಡಿಕೊಳ್ಳಲಾಗಿತ್ತು. ಹರಿವು ತಂಡದವರು ಮಾಲ್ಗುಡಿ ಡೇಸ್‌ನ ಮೂಲವನ್ನು ಹುಡುಕುತ್ತಾ ಹೊರಟರು. ಕರ್ನಾಟಕದಲ್ಲಿ ಸತ್ಯದೇವ್ ಐಪಿಎಸ್ ಹಾಗೂ ಧೀರ ಚಿತ್ರಗಳು ತೆರೆಕಂಡು ಡಬ್ಬಿಂಗ್ ಪರವಾದ ಕೆಲಸದಲ್ಲಿ ಮುನ್ನಡೆ ಸಾಧಿಸಲಾಗಿತ್ತು.
ಹರಿವು ತಂಡದವರು, 2017 ರಲ್ಲಿ ಹರಿವು ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಹೆಸರಿನಲ್ಲಿ ಕಂಪನಿಯನ್ನು ಸ್ಥಾಪಿಸಿ, ಡಬ್ಬಿಂಗ್ ಚಿತ್ರಗಳನ್ನು ನಿರ್ಮಿಸುವ ಕೆಲಸಕ್ಕೆ ಕೈಹಾಕಿದರು. ಹರಿವು ಕ್ರಿಯೇಷನ್ಸ್ ಕಂಪನಿಯ ಮೊಟ್ಟ ಮೊದಲ ಪ್ರಾಜೆಕ್ಟ್ ಮಾಲ್ಗುಡಿ ಡೇಸ್ ಆಗಬೇಕು ಎಂಬ ಕನಸು ಅವರದಾಗಿತ್ತು. ಅದಕ್ಕಾಗಿ ಮತ್ತೊಮ್ಮೆ ಹುಡುಕಾಟ ಆರಂಭವಾಯಿತು. ಆದರೆ ಹಕ್ಕುಗಳು ಬಗ್ಗೆ ಸರಿಯಾದ ಮಾಹಿತಿ ಸಿಗಲಿಲ್ಲ, ಡಬ್ಬಿಂಗ್ ಚಿತ್ರಗಳ ಹರಿವು ನಿಲ್ಲಬಾರದು ಎಂಬ ಕಾರಣಕ್ಕೆ ಕೂಡಲೇ ಹಾಲಿವುಡ್ ಮಾದರಿಯ ಕಮಾಂಡೋ ಚಿತ್ರವನ್ನು ಆರಿಸಿ ಡಬ್ ಮಾಡಿ, ಗಾಂಧಿನಗರದಿಂದ ಹಿಡಿದು ಕರ್ನಾಟಕದ ಉದ್ದಗಲಕ್ಕೂ ಬಿಡುಗಡೆ ಮಾಡಿದ್ದು ಈಗ ಇತಿಹಾಸ. ಕಮಾಂಡೊ ಕೆಲಸ ಮುಗಿದ ಮೇಲೆ, ಮತ್ತೊಮ್ಮೆ ಮಾಲ್ಗುಡಿ ಡೇಸ್ ಹಿಂದೆ ಬಿದ್ದಿತು ಹರಿವು ತಂಡ. ಹಲವು ಮುಂಬೈ ಪ್ರಯಾಣಗಳ ಬಳಿಕ, ಮಾಲ್ಗುಡಿ ಡೇಸ್‌ಗಾಗಿ ಇಷ್ಟೊಂದು ಹುಡುಕಾಟ ಮಾಡುತ್ತಿರುವ ಈ ತಂಡದವರ ಪ್ರಯತ್ನ ಕಂಡು, ಒಂದು ಸನ್ನಿವೇಶದಲ್ಲಿ ಹಿಂದಿ ಚಿತ್ರರಂಗದ ದೊಡ್ಡ ಕಂಪನಿಯೊಂದು ನೆರವಿಗೆ ಬಂದಿತು. ಇದರ ಹಕ್ಕುಗಳ ಮೂಲ ಬೇರೆಲ್ಲೂ ಇಲ್ಲ, ಅಲ್ಟ್ರಾದವರ ಬಳಿ ಇದೆ ಎಂದು, ಅದರ ಸಿಇಓ ಫೋನ್ ನಂಬರನ್ನೇ ಒದಗಿಸಿತು.
ಹಕ್ಕುಗಳ ಮೂಲವೇನೋ ಸಿಕ್ಕಿತು, ಇನ್ನು ಮುಂದಿದ್ದ ಸವಾಲೆಂದರೆ ಮಾಲ್ಗುಡಿ ಡೇಸ್ ಅನ್ನು ಕನ್ನಡಕ್ಕೆ ಡಬ್ ಮಾಡಲು ಅವರನ್ನು ಒಪ್ಪಿಸುವುದು. ಅದಕ್ಕಾಗಿ, ಇಡೀ ಮಾಲ್ಗುಡಿ ಡೇಸ್‌ನ ಹಿನ್ನಲೆ, #MalgudiDaysInKannada ಎಂಬ ಹ್ಯಾಶ್ ಟ್ಯಾಗ್ ಅಡಿಯಲ್ಲಿ ಆಗುತ್ತಿರುವ ಟ್ವಿಟರ್ ಟ್ರೆಂಡ್, ಈ ಟ್ರೆಂಡ್ ಕುರಿತು ಪತ್ರಿಕೆಗಳಲ್ಲಿ ಮೂಡಿಬಂದ ವರದಿ, ಮಾಲ್ಗುಡಿ ಡೇಸ್ ಶೂಟಿಂಗ್ ಆದ ಶಿವಮೊಗ್ಗದ ಅರಸಾಳು ರೈಲ್ವೇ ಸ್ಟೇಷನ್ ಅನ್ನು ಮಾಲ್ಗುಡಿ ಸ್ಟೇಷನ್ ಎಂದು ಬದಲಾಯಿಸಲು ಹೊರಟಿರುವ ವರದಿ, ಶಂಕರ್ ನಾಗ್ ಅವರಿಗೆ ಈಗಲೂ ಇರುವ ಬೇಡಿಕೆ ತಿಳಿಸಲು ಅವರ ಹೆಸರಲ್ಲಿರುವ ಆಟೋ ಸಂಘಗಳು, ಅಭಿಮಾನಿ ಬಳಗದ ಮಾಹಿತಿ, ಮಾಲ್ಗುಡಿಯಲ್ಲಿ ವಿಷ್ಣುವರ್ಧನ್, ಗಿರೀಶ್ ಕಾರ್ನಾಡ್, ರಮೇಶ್ ಭಟ್, ವೈಶಾಲಿ ಕಾಸರವಳ್ಳಿ, ಹೀಗೆ ಕನ್ನಡದ ಮೇರು ನಟರು ನಟಿಸಿದ್ದಾರೆ ಎಂಬ ವಿವರ, ಮಾಲ್ಗುಡಿ ಡೇಸ್ ಶೂಟಿಂಗ್ ಆಗಿದ್ದ ಕರ್ನಾಟಕದ ಜಾಗಗಳ ವಿವರ, ಹೀಗೆ ಮಾಲ್ಗುಡಿಯ ಇಂಚಿಂಚನ್ನು ಕಲೆಹಾಕಿ, ಅಲ್ಟ್ರಾ ಸಿಇಓ ಮುಂದೆ ಇಟ್ಟರು. ಇದನ್ನು ಕನ್ನಡದಲ್ಲಿ ಡಬ್ ಮಾಡಿ ಕೊಟ್ಟರೆ ಕರ್ನಾಟಕದ ಮಂದಿಗೆ ಆಗುವ ಉಪಯೋಗ ಹಾಗೂ ವ್ಯಾಪಾರದಲ್ಲಿ ಅವರಿಗಾಗುವ ಲಾಭವನ್ನು ತಿಳಿಸಿಕೊಡಲಾಯಿತು. ಈ ಎಲ್ಲಾ ವಿವರಗಳನ್ನು ಪಡೆದು, ಆಳವಾಗಿ ಅರಿತು, ಡಬ್ಬಿಂಗ್ ಹಕ್ಕುಗಳನ್ನು ಕೊಡುವುದಿಲ್ಲ, ಬದಲಾಗಿ ನಾವೇ ಡಬ್ ಮಾಡಿಸುತ್ತೇವೆ! ಎಂದು ತುಂಬು ಮನದಿಂದ ಅವರು ಮುಂದೆ ಬಂದರು. ನೀವೇ ಡಬ್ಬಿಂಗ್ ಸೇವೆ ಕೊಡಿ ಎಂದು ಅಲ್ಟ್ರಾದವರು ಹರಿವುಗೆ ಹೇಳಿದರು.
ಅಂತೂ ಇನ್ನೊಂದು ಹೆಜ್ಜೆ ಮುಂದೆ ಹೋಗಲಾಗಿತ್ತು. ಡಬ್ ಮಾಡಿಸುವ ದೊಡ್ಡ ಜವಾಬ್ದಾರಿ ಹರಿವು ತಂಡದ ಮೇಲಿತ್ತು. ಕನ್ನಡ ಚಲನಚಿತ್ರರಂಗ ಕಂಡ ಮೇರು ಡಬ್ಬಿಂಗ್ ಕಲಾವಿದ ಅಂದರೆ ಸುದರ್ಶನ್ ಅವರು. ಅದಾಗಲೇ ಸತ್ಯದೇವ್ ಐಪಿಎಸ್ ಹಾಗೂ ಧೀರ ಚಿತ್ರಗಳನ್ನು ಡಬ್ ಮಾಡಿಕೊಟ್ಟಿದ್ದರು. ಸುದರ್ಶನ್ ಅವರೇ ಮಾಲ್ಗುಡಿಯನ್ನು ಕನ್ನಡಕ್ಕೆ ತರುವ ತಂತ್ರಜ್ಞರಾಗಲಿ ಎಂದು ತೀರ್ಮಾನಿಸಿ ಕೆಲಸ ಆರಂಭಿಸಲಾಯಿತು. ಅಬ್ಬಾ, ಮಾಸ್ಟರ್ ಮಂಜುನಾಥ್ ಅವರ ದನಿಗಾಗಿ ನಡೆದು ಹುಡುಕಾಟ ಅಷ್ಟಿಷ್ಟಲ್ಲ, ಹಲವಾರು ಹುಡುಗರ ದನಿಯನ್ನು ಒರೆಹಚ್ಚಿ ನೋಡಿದ ಮೇಲೆ, ಒಂದು ದನಿ ಆಯ್ಕೆಯಾಯಿತು. ಗಿರೀಶ್ ಕಾರ್ನಾಡ್, ಅನಂತ್ ನಾಗ್, ವಿಷ್ಣುವರ್ಧನ್, ಶಂಕರ್‌ನಾಗ್ ಎಲ್ಲರ ದನಿಗಳು ಮತ್ತೊಮ್ಮೆ ಕನ್ನಡದಲ್ಲಿ ಮೊಳಗಿದವು. ದನಿ ಕಲಾವಿದರ ಕೈಚಳಕ ಕೆಲಸಮಾಡಿತು. ಹಗಲಿರುಳು ಎನ್ನದೇ ಕೆಲಸ ಸಾಗಿತು. ಎಲ್ಲಾ 54 ಎಪಿಸೋಡ್‌ಗಳ ಕೆಲಸ ಮುಗಿದು ಅಮೇಜಾನ್ ಪ್ರೈಮ್‌ನಲ್ಲಿ ಮಾಲ್ಗುಡಿ ಡೇಸ್ ಕನ್ನಡ ಕಂಡಾಗ ಒಂದು ನಿಟ್ಟುಸಿರು ಬಿಟ್ಟಾಗಿತ್ತು. ನಮ್ಮ ಕೆಲಸ ಇಷ್ಟೇ ಅಲ್ಲ ಎಂಬುದು ಕನ್ನಡ ಗ್ರಾಹಕ ಕೂಟ ಹಾಗೂ ಹರಿವು ತಂಡಕ್ಕೆ ತಿಳಿದಿತ್ತು. ಮುಂದಿನದು ಟೀವಿಯಲ್ಲಿ ಬರುವ ಹಾಗೆ ಮಾಡುವುದು. ಅಲ್ಟ್ರಾದವರೊಡನೆ ಒಳ್ಳೆಯ ಸಂಬಂಧ ಇಟ್ಟುಕೊಂಡಿದ್ದ ಹರಿವು ತಂಡ, ಯಾವುದೇ ಫಲಾಪೇಕ್ಷೆ ಇಲ್ಲದೇ ಟೀವಿಯಲ್ಲಿ ಇದನ್ನು ಮಾರಲು ಪ್ರಯತ್ನಿಸುವುದಾಗಿ ಹೇಳಿತ್ತು. ಸುಮಾರು ಒಂದು ವರ್ಷದಿಂದ ಕನ್ನಡ ಟೀವಿ ಚಾನೆಲ್‌ಗಳ ಬಾಗಿಲನ್ನು ಹಲವಾರು ಬಾರಿ ಬಡಿದಿತ್ತು. ಹೆಚ್ಚು ಕಡಿಮೆ ಎಲ್ಲಾ ಟೀವಿ ಚಾನೆಲ್‌ಗಳಿಗೂ ಪ್ರಸ್ತಾವನೆಯನ್ನು ಸಲ್ಲಿಸಿತ್ತು.