ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನಲ್ಲಿರುವ ಸೂಳೆಕೆರೆ ಏಷ್ಯಾಖಂಡದ ಎರಡನೇ ಅತೀ ದೊಡ್ಡ ಕೆರೆ. ಮಧ್ಯ ಕರ್ನಾಟಕದ ಮೂರು ಜಿಲ್ಲೆಗಳ ಕುಡಿಯುವ ನೀರಿನ ಸೆಲೆ. ಸಾವಿರಾರು ಹೆಕ್ಟೇರ್ ಹೊಲ-ಗದ್ದೆಗಳಿಗೆ ನೀರುಣಿಸುವ ರೈತರ ಜೀವನಾಡಿ.
ಶತಮಾನಗಳ ಇತಿಹಾಸವನ್ನು ಅಡಗಿಸಿಕೊಂಡಿರುವ ಈ ತಾಣ ಪ್ರವಾಸಿಗರ ಆಕರ್ಷಣೆಯ ಕೇಂದ್ರ. ಗುಡ್ಡ-ಬೆಟ್ಟ, ಕಾಡು-ಮೇಡು, ವೀಕ್ಷಣೆಗೆ ನಿಲುಕಿದಷ್ಟು ನೀರಿನ ಸಮ್ಮೋಹನ ಮನೊಲ್ಲಾಸ ನೀಡುವುದರಲ್ಲಿ ಎರಡು ಮಾತಿಲ್ಲ. ಸಿದ್ಧರ ತಪಸ್ಸಿನ ತಾಣ. ಸಿದ್ದೇಶ್ವರರು ಐಕ್ಯವಾದ ದೇಗುಲ ಧಾರ್ಮಿಕ ಕೇಂದ್ರ. ಸ್ವರ್ಗಾವತಿ ಪಟ್ಟಣದ ರಾಜನ ಮಗಳು ಶಾಂತವ್ವೆ ನಿರ್ಮಿಸಿದಳೆಂಬ ಐತಿಹ್ಯ. ಜಾನಪದ, ಐತಿಹ್ಯಗಳೇನೆ ಇರಲಿ ಇಂದಿಗೂ ಲಕ್ಷಾಂತರ ಜನರ ಕುಡಿಯುವ ನೀರಿನ ಸೆಲೆ.
ಸೂಳೆಕೆರೆ ವೀಕ್ಷಣೆಗೆ ಟೆಕ್ಕಿಗಳ ಸ್ನೇಹಿತರ ಗುಂಪೊಂದು 2016 ರಲ್ಲಿ ಸೂಳೆಕೆರ ವೀಕ್ಷಣೆಗೆಂದು ಧಾವಿಸಿತು. ಸತತ ಬರಗಾಲದ ಹಿನ್ನೆಲೆಯಲ್ಲಿ ಕೆರೆ ಬರಿದಾಗಿತ್ತು. ಭದ್ರಾ ಜಲಾಶಯದಲ್ಲಿಯೂ ನೀರಿನ ಕೊರತೆ. ಹಾಗಾಗಿ ನಾಲೆಯಿಂದ ಕೂಡ ನೀರು ಹರಿಸಿರಲಿಲ್ಲ. ಭಣಗುಡುತ್ತಿರುವ ಬೃಹತ್ ಕೆರೆಯ ದುಸ್ಥಿತಿ ಕಂಡು ಟೆಕ್ಕಿಗಳಿಗೆ ಮನ ನೊಂದಿತು. ಪಾಶ್ಚಾತ್ಯ ದೇಶಗಳಲ್ಲಿ ಕರ್ತವ್ಯ ನಿರ್ವಹಿಸಿದ ಅನುಭವಿ ಸಾಫ್ಟ್ ವೇರ್ ಎಂಜಿನಿಯರ್ ಗಳಿಗೆ ನಮ್ಮ ನೆಲ-ಜಲ ಸಂರಕ್ಷಣೆಗೆ ಬೇಜಾವಾಬ್ದಾರಿ ತೋರಲಾಗುತ್ತಿದೆ ಎಂಬುದನ್ನು ಮನಗಂಡರು. ಹೊರ ದೇಶದಲ್ಲಿ ಕೆರೆ, ನೀರಿನ ಮೂಲಗಳ ಅಭಿವೃದ್ಧಿಯ ಚಿತ್ರಣ ಕಣ್ಮುಂದೆ ಬಂದು ಬೇಸರವನಿಸಿತು.
ಸ್ಥಳೀಯ ಟೆಕ್ಕಿಗಳಿಗೆ ತಾಕೀತು ಮಾಡುವ ಮೂಲಕ ಹುರಿದುಂಬಿಸಿದರು. ಸೂಳೆಕೆರೆ ರಕ್ಷಣೆಗೆ ಕಟಿಬದ್ಧರಾಗಿ ಪ್ರಯತ್ನಿಸಬೇಕು ಎಂಬ ಛಲ ತುಂಬಿದರು. ನಮ್ಮ ನೈಸರ್ಗಿಕ ಸಂಪತ್ತು ರಕ್ಷಣೆಗೆ ಏನಾದರೂ ಮಾಡುವ ತುಡಿತ ಮೂಡಿತು. ಮನದಲ್ಲಿ ಬಿಂಬಿಸಿದ ಸಂಕಲ್ಪ ಖಡ್ಗ ಸಂಘ ರಚಿಸುವ ಮೂಲಕ ಕಾರ್ಯೋನ್ಮುಖಗೊಂಡಿತು.
ಟೆಕ್ಕಿ ರಘು ಅವರ ನೇತೃತ್ವದಲ್ಲಿ ಸೂಳೆಕೆರೆ ಹೋರಾಟದ ಅಭಿಯಾನಕ್ಕೆ 2017ರಲ್ಲಿ ಮೊದಲ ಹೆಜ್ಜೆ ಇಡಲಾಯಿತು. ಸುಮಾರು 6500 ಎಕರೆ ವಿಸ್ತೀರ್ಣದ ಕೆರೆ. ಸಾಕಷ್ಟು ಹೂಳು ತುಂಬಿ ನೀರಿನ ಸಂಗ್ರಹ ಕುಂಠಿತವಾಗಿರುವುದನ್ನು ಗಮನಸಿಲಾಯಿತು. ಹೂಳು ತೆಗೆಸಲು ಸರ್ಕಾರ ಗಮನ ಸೆಳೆಯಲು ಪ್ರಯತ್ನ ನಡೆಯಿತು. ಈ ನಡುವೆ ಮೊದಲ ಹೆಜ್ಜೆ ಕೆರೆಯ ವಿಸ್ತೀರ್ಣ ಹದ್ದುಬಸ್ತು ಮಾಡಿಸುವುದಾಗಿತ್ತು. ಸುಮಾರು 1 ಸಾವಿರ ಎಕರೆ ಒತ್ತುವರಿ ಆಗಿರಬಹುದೆಂಬ ಸಂಶಯ ಮೂಡಿತು. ಈ ಹಿನ್ನೆಲೆಯಲ್ಲಿ ಸರ್ವೇ ಕಾರ್ಯ ನಡೆಸುವುದು ಮೊದಲ ಆದ್ಯತೆ ಆಗಿತ್ತು.
ಅದಕ್ಕಾಗಿ ನಾಡಿನ ಹೆಸರಾಂತ ಮಠಾಧೀಶರರು, ಚಿತ್ರನಟರು, ಸಾಮಾಜಿಕ ಹೋರಾಟಗಾರರನ್ನು ಭೇಟಿ ಮಾಡಿ ಮಾಹಿತಿ ಪಡೆದರು. ಹೋರಾಟದ ರೂಪುರೇಷೆ ಸಿದ್ಧವಾಯಿತು. ಸಿರಿಗೆರೆ ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳೊಂದಿಗೆ ಹಲವು ಸುತ್ತಿನ ಸಭೆ ನಡೆಸಿ ಕೆರೆ ಸಂರಕ್ಷಣೆಗೆ ನೈತಿಕ ಬೆಂಬಲ ಪಡೆದರು. ಸ್ವಾಮೀಜಿ ಕೆರೆ ಉಳಿಸಲು ಹಲವು ರಾಜಕಾರಣಿಗಳು ಹಾಗೂ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಹೋರಾಟಕ್ಕೆ ಮುನ್ನಡಿ ಬರೆದರು.
ಪಾಂಡೋಮಟ್ಟಿ ವಿರಕ್ತಮಠದ ಶ್ರೀಗುರುಬಸವ ಸ್ವಾಮೀಜಿ ಹಾಗೂ ಚನ್ನಗಿರಿಯ ಶಾಂತವೀರ ಸ್ವಾಮೀಜಿಗಳು ಟೆಕ್ಕಿಗಳೊಂದಿಗೆ ಕೈ ಜೋಡಿಸಿದರು. ಸ್ಥಳೀಯ ರಾಜಕಾರಣಿಗಳು, ಅಧಿಕಾರಿಶಾಹಿಗಳನ್ನು ಭೇಟಿ ಮಾಡಿ ಸೂಳೆಕೆರೆ ಸರ್ವೇ ನಡೆಸಲು ಮನವಿ ಸಲ್ಲಿಸಲಾಯಿತು. ಆದರೆ ಅವರಿಂದ ನಿರೀಕ್ಷಿಸಿದ ಬೆಂಬಲ ಸಿಗಲಿಲ್ಲ. ಒತ್ತುವರಿ ಮಾಡಿದವರ ಸಂರಕ್ಷಣೆಗೆ ನಿಂತವರಂತೆ ವರ್ತಿಸಿದರು. ಆಗ ಖಡ್ಗ ಸಂಘಕ್ಕೆ ಸ್ವಾಮೀಜಿಗಳು, ಸ್ಥಳೀಯ ಗ್ರಾಮಗಳ ಯುವಕರು, ಪತ್ರಕರ್ತರು ನೊಂದಾಯಿಸಿಕೊಳ್ಳುವ ಮೂಲಕ ಹೋರಾಟದ ಹಾದಿ ಹಿಡಿದರು.
ಮೊದಲ ಬಾರಿ 2017ರಲ್ಲಿ ಪಾಂಡೋಮಟ್ಟಿ ಗುರುಬಸವ ಸ್ವಾಮೀಜಿ ಹಾಗೂ ಶಾಂತವೀರ ಸ್ವಾಮೀಜಿಗಳ ನೇತೃತ್ವದಲ್ಲಿ ಖಡ್ಗ ಸಂಘದ ಸದಸ್ಯರು ಕಾಲ್ನಡಿಗೆಯ ಜಾಥ ಆಯೋಜಿಸಿದರು. ಸೂಳೆಕರೆಯಿಂದ ಚನ್ನಗಿರಿಗೆ ಕಾಲ್ನಡಿಗೆಯಲ್ಲಿ ಜಾಥಾ ನಡೆಸಿ ಕೆರೆ ಸ್ಥಿತಿ ಬಗ್ಗೆ ಗಮನ ಸೆಳೆದರು. ಸ್ಥಳೀಯರಿಗೆ ಕೆರೆ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿತು.
ಆನಂತರ ಕೆರೆ ಅಂಚಿನ ಗ್ರಾಮಗಳಿಗೆ ಇದೇ ತಂಡ ಭೇಟಿ ನೀಡಿ ಗ್ರಾಮಸ್ಥರ ಸಭೆ ನಡೆಸಿತು. ಒತ್ತುವರಿ ಆಗಿದ್ದಲ್ಲಿ ಜಮೀನು ತೆರವುಗೊಳಿಸುವ ಭರವಸೆ ಪಡೆಯಲಾಯಿತು. ಈ ನಿಟ್ಟಿನಲ್ಲಿ ಬೃಹತ್ ಸಾಧನೆ ಖಡ್ಗ ಸಂಘದ ವತಿಯಿಂದ ನಡೆಯಿತು. ಹಲವು ಜಿಲ್ಲಾಧಿಕಾರಿಗಳಿಗೆ ಭೇಟ ಮಾಡಿ ಸರ್ವೆ ನಡೆಸಲು ಒತ್ತಾಯಿಸಲಾಯಿತು. ಕೆಲವರು ಆಸಕ್ತಿ ತೋರಿದರು. ಆದರೂ ಕಾರ್ಯರೂಪಕ್ಕಿಳಿಯಲಿಲ್ಲ. ಪ್ರಧಾನ ಮಂತ್ರಿ ಮೋದಿ ಹಾಗೂ ಮುಖ್ಯಮಂತ್ರಿಗಳಿಗೆ ಪತ್ರ ಮುಖೇನ ವಾಸ್ತವಾಂಶ ಲಿಖಿತ ರೂಪದಲ್ಲಿ ತಿಳಿಸಲಾಯಿತು.
ಒಟ್ಟಾರೆ ಖಡ್ಗ ಸಂಘದ ಶತ ಪ್ರಯತ್ನದ ನಂತರ ನೀರಾವರಿ ಇಲಾಖೆಯ ಉಸ್ತುವಾರಿಯಲ್ಲಿ ಸರ್ವೇ ನಡೆಸಲು ರೂ.11 ಲಕ್ಷ ಬಿಡುಗಡೆ ಮಾಡಲಾಯಿತು. 2019ರಲ್ಲಿ ಸರ್ವೇ ನಡೆಸಲು ಬೆಳೆ ಅಡ್ಡಿಪಡಿಸುವ ಹಿನ್ನೆಲೆಯಲ್ಲಿ ಇಲಾಖೆ ಮುಂದೂಡುತ್ತಾ ಬಂದಿತು. ಸರ್ವೇ ನಡೆಸಿ ಟ್ರೆಂಚ್ ತೆಗೆಸಿ ಕೆರೆಯ ವಿಸ್ತೀರ್ಣ ಹದ್ದುಬಸ್ತು ಮಾಡುವುದು ಖಡ್ಗ ಸಂಘದ ಬದ್ಧತೆ ಆಗಿತ್ತು.
ದೈವಕೃಪೆ ಎಂಬಂತೆ 2019ರಲ್ಲಿ ಉತ್ತಮ ಮುಂಗಾರು ಮಳೆ ಬಿದ್ದಿತು. ಭದ್ರಾ ಜಲಾಶಯ ತುಂಬಿತು. ಸಾಕಷ್ಟು ನೀರು ನಾಲೆಯ ಮೂಲಕ ಕೆರೆ ತುಂಬಿಸಿತು. ಸಂಗ್ರಹಣಾ ಭಾಗದಲ್ಲಿ ಸಾಕಷ್ಟ ಮಳೆ ಬಿದ್ದ ಕಾರಣ ಹಳ್ಳ-ಕೊಳ್ಳಗಳು ತುಂಬಿ ಹರಿದವು. ಸೂಳೆಕೆರೆಯ ಜಲ ಮೂಲ ಹರಿದ್ರಾವತಿ ಹಳ್ಳದಲ್ಲಿ ಸಾಕಷ್ಟು ನೀರು ಹರಿದು ಕೆರೆ ತುಂಬಿತು. ಕೋಡಿ ನೀರು ಅಲ್ಪ ಪ್ರಮಾಣ ಹೊರ ಹರಿಯಿತು. ರೈತರ ಮುಖದಲ್ಲಿ ಸಂತಸ ನಲಿದಾಡಿತು. ಆದರೂ ಸರ್ವೇ ಕಾರ್ಯ ವಿಳಂಬವಾಯಿತು. ನಿರಂತರ ಖಡ್ಗ ಸಂಘದ ಒತ್ತಾಯದ ಮೇರೆಗೆ ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್ ವೀಕ್ಷಣೆಯಲ್ಲಿ ದ್ರೋಣ್ ಕ್ಯಾಮರ ಮೂಲಕ 2020ರ ಆರಂಭದಲ್ಲಿ ಸರ್ವೇ ಕಾರ್ಯ ನಡೆಯಿತು. ಮುಂದಿನ ಕ್ರಮ ಕೈಗೊಳ್ಳಲು ಇಲಾಖೆ ಕೊರೊನಾ ಸಂಕಷ್ಟದ ಕಾರ್ಯಕ್ರಮದಲ್ಲಿ ತೊಡಗಿದ್ದಾರೆ ಎಂದು ಸಂಘದ ಅಧ್ಯಕ್ಷ ರಘು ಮನದ ಮಾತು ಬಿಚ್ಚಿಟ್ಟರು.
ಸದ್ಯ ಪೂರ್ಣ ಮಟ್ಟದಲ್ಲಿ ನೀರು ತುಂಬಿರುವುದೇ ಕೆರೆಯ ವಿಸ್ತೀರ್ಣದ ಭಾಗವಾಗಿದೆ. ನೀರಾವರಿ ಇಲಾಖೆ ಕೆರೆ ಒತ್ತುವರಿ ತಡೆಯುವಲ್ಲಿ ಮೀನಾ-ಮೇಷ ಎಣಿಸುತ್ತಿದೆ. ಅಕ್ರಮವಾಗಿ ಕೆರೆ ಜಾಗ ಕಬಳಿಸುವವರಿಗೆ ಎಚ್ಚರಿಕೆಯನ್ನು ಖಡ್ಗ ಸಂಘ ನೀಡುತ್ತಿದೆ. ಅಧಿಕಾರಿಗಳಿಂದ ನ್ಯಾಯೋಚಿತ ಬೆಂಬಲ ಸಿಗದೆ. ಸೂಳೆಕೆರೆ ಉಳಿವಿನ ಬಗ್ಗೆ ತೀವ್ರ ಹೋರಾಟದ ಸ್ವರೂಪ ರೂಪಿಸುತ್ತಿದೆ. ಸೂಳೆಕೆರೆಯಿಂದಲೇ ಬದುಕು ಕಟ್ಟಿಕೊಂಡವರು ಅದರ ಉಳಿವಿಗೆ ಒಗ್ಗಾಟ್ಟಾಗಬೇಕಾಗಿದೆ ಎಂದು ಕರೆ ನೀಡಿದರು.
ಸೂಳೆಕೆರೆ ಭಾಗದಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳ ಅಭಿವೃದ್ಧಿ ಆಮೆಗತಿಲ್ಲಿ ಸಾಗಿದೆ. ಬದ್ಧತೆ ತೋರದ ರಾಜಕಾರಣಿಗಳಿಂದ ಅಮೂಲ್ಯ ಪ್ರಕೃತಿ ಸೌಂದರ್ಯ ಕಳೆರಹಿತವಾಗಿದೆ. ಒಂದಿಷ್ಟು ಅಭಿವೃದ್ಧಿ ನಡೆದಿದೆ. ಆದರೂ ನಿರ್ವಹಣೆ ಇಲ್ಲದೆ ಪಾಳುಬಿದ್ದಿವೆ. ಇತ್ತೀಚೆಗೆ ದೋಣಿ ವಿಹಾರ ಕೇಂದ್ರ ಆರಂಭಿಸಲಾಗಿದೆ. ಒಟ್ಟಾರ ಪರಿಪೂರ್ಣಾ ಅಭಿವೃದ್ಧಿಗೆ ಖಡ್ಗ ಸಂಘ ತನು, ಮನ ಧನದೊಂದಿಗೆ ನಿಸ್ವಾರ್ಥವಾಗಿ ಹೋರಾಟ ನಡೆಸಿದೆ. ಅವರ ಹೋರಾಟ ಏತಕ್ಕಾಗಿ ಎಂಬುದನ್ನು ಸಾರ್ವಜನಿಕರು ಅರಿಯಬೇಕಾಗಿದೆ.
ಸಂಘಕ್ಕೆ ಬೆಂಬಲವಾಗಿ ಚಿತ್ರನಟ ಕಿಶೋರ್, ಸಾಮಾಜಿಕ ಕಾರ್ಯಕರ್ತೆ ರೂಪ ಐಯ್ಯರ್, ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಗಡೆ ನಿರ್ದೇಶಕರಾಗಿ ಮಾರ್ಗದರ್ಶನ ನೀಡುತ್ತಿದ್ದಾರೆ.
ರಘು. ಬಿ.ಆರ್. ಅವರೊಂದಿಗೆ ಬಸವರಾಜ್ ಬೆಳ್ಳೂಡಿ, ಷಣ್ಮುಖ ಸ್ವಾಮಿ, ಕುಬೇಂದ್ರಸ್ವಾಮಿ, ಎಚ್.ಎಂ.ರವಿ, ಪ್ರಶಾಂತ್, ಜಗದೀಶ್ ಹಾಗೂ ಸಾವಿರಾರು ಸದಸ್ಯರು ಕೈ ಜೋಡಿಸಿದ್ದಾರೆ.