‘ಕೃಷಿ ಬಿಕ್ಕಟ್ಟು ಎಂದಾಕ್ಷಣ ರೈತರ ಆತ್ಮಹತ್ಯೆಗಳನ್ನೇ ಬಿಕ್ಕಟ್ಟು ಎಂದು ಬಿಂಬಿಸುವ ಒಂದು ಪರಿಪಾಠ ಬೆಳೆದಿದೆ. ಆದರೆ ರೈತರ ಆತ್ಮಹತ್ಯೆಗಳೇ ಬಿಕ್ಕಟ್ಟಲ್ಲ. ಬದಲಿಗೆ ಅವು ತೀವ್ರವಾದ ಕೃಷಿ ಬಿಕ್ಕಟ್ಟಿನ ಸಿಮ್‌ಟಮ್ಸ್ (ಲಕ್ಷಣಗಳು) ಮಾತ್ರ. ಆತ್ಮಹತ್ಯೆ ಎಂಬುದು ಒಂದು ರೋಗ ಸೂಚಕ ಲಕ್ಷಣವೇ ಹೊರತು ಅದೇ ರೋಗವಲ್ಲ. ತೀವ್ರವಾದ ಆರ್ಥಿಕ, ಸಾಮಾಜಿಕ ಒತ್ತಡಗಳಿಗೆ ಸಿಲುಕಿದ ಅಮಾಯಕ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಹಾಗೆಂದು ಆತ್ಮಹತ್ಯೆ ಮಾಡಿಕೊಳ್ಳದೆ ಇರುವ ರೈತರು ಆರಾಮಾಗಿದ್ದಾರೆ ಎಂದರ್ಥವಲ್ಲ. ಈ ಕೃಷಿ ಬಿಕ್ಕಟ್ಟಿಗೆ ಒಂದು ಸರ್ವವ್ಯಾಪಿ ಆಯಾಮವಿದೆ. ಭೂಮಿಯ ಒಡೆತನ ಹಾಗೂ ನೇರವಾಗಿ ಉಳುಮೆ ಮಾಡುವುದನ್ನು ಹೊರತುಪಡಿಸಿ ಕೃಷಿ ಕ್ಷೇತ್ರದ ಸರ್ವಸ್ವವನ್ನೂ ಕಾರ್ಪೊರೇಟ್ ಕಂಪೆನಿಗಳೇ ನಿಯಂತ್ರಿಸುತ್ತವೆ. ಬೀಜ, ಗೊಬ್ಬರ, ಕೀಟನಾಶಕ ಮುಂತಾದ ಎಲ್ಲವೂ ಇಂದು ಕಾರ್ಪೊರೇಟ್ ಕಂಪೆನಿಗಳ ಕಪಿಮುಷ್ಟಿಯಲ್ಲಿ ಸಿಲುಕಿಕೊಂಡಿರುವುದೇ ಈ ಬಿಕ್ಕಟ್ಟಿಗೆ ಪ್ರಧಾನ ಕಾರಣ’
ಹೀಗೆನ್ನುತ್ತಾರೆ ಖ್ಯಾತ ಪತ್ರಕರ್ತ ಪಿ. ಸಾಯಿನಾಥ್. ಕಳೆದ ಒಂದುವರೆ ದಶಗಳಲ್ಲಿ ದೇಶಾದ್ಯಂತ ಓಡಾಡಿ, ರೈತರ ಆತ್ಮಹತ್ಯೆಯ ಬಗ್ಗೆಯೇ ಅಧ್ಯಯನ ನಡೆಸಿರುವ ಸಾಯಿನಾಥ್ ಅವರ ಮಾತು ಇಂದು ಯಾರಿಗೂ ಬೇಡವಾಗಿದೆ.
ಕೇಂದ್ರ ಸರ್ಕಾರ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುವಂತೆ ಎಲ್ಲ ರಾಜ್ಯ ಸರ್ಕಾರಗಳಿಗೆ ಸೂಚಿಸುವ ಮೂಲಕ ಕಾರ್ಪೊರೇಟ್ ಕಂಪನಿಗಳಿಗೆ ನೇರವಾಗಿ ಕೃಷಿ ಕ್ಷೇತ್ರದಲ್ಲಿ ಹಸ್ತಕ್ಷೇಪ ನಡೆಸಲು ಅವಕಾಶ ಮಾಡಿಕೊಟ್ಟಿದೆ.
ರಾಜ್ಯ ಸರ್ಕಾರ ಕೇಂದ್ರ ಈ ಸೂಚನೆಯನ್ನು ಚಾಚೂ ತಪ್ಪದೆ ಪಾಲಿಸಿದ್ದು, ‘ಕರ್ನಾಟಕ ಕೃಷಿ ಉತ್ಪನ್ನಗಳ ಮಾರಾಟ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯ್ದೆಗೆ ತಿದ್ದುಪಡಿತಂದು ಸುಗ್ರೀವಾಜ್ಞೆ ಹೊರಡಿಸಿದೆ.
ಕಾಯಿದೆಯ ೨ ಸೆಕ್ಷನ್‌ಗಳಿಗೆ ತಿದ್ದುಪಡಿ ತರಲಾಗಿದ್ದು, ಇದರ ಪ್ರಕಾರ ರೈತರು ಯಾವುದೇ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಅಧೀನಕ್ಕೆ ಒಳಪಡುವುದಿಲ್ಲ. ರೈತರು ತಮ್ಮಿಷ್ಟದಂತೆ ಯಾರಿಗೆ ಬೇಕಾದರೂ ಬೆಳೆ ಮಾರಾಟ ಮಾಡಬಹುದು ಹಾಗೆಯೇ ಖಾಸಗಿಯವರು ನೇರವಾಗಿ ಬೆಳೆ ಖರೀದಿಸಬಹುದು. ದೇಶಾದ್ಯಂತ ಮಾತ್ರವಲ್ಲ, ಪ್ರಪಂಚಾದ್ಯಂತ ಮಾರಾಟ ಜಾಲ ಹೊಂದಿರುವ ಕಾರ್ಪೊರೇಟ್ ಕಂಪನಿಗಳು ಈ ಅವಕಾಶಕ್ಕಾಗಿಯೇ ಕಾಯುತ್ತಿದ್ದವು ಎಂದು ಇಲ್ಲಿ ಬಿಡಿಸಿ ಹೇಳಬೇಕಾಗಿಲ್ಲ.
ನೀತಿ ಆಯೋಗದ ಶಿಫಾರಸಿನಂತೆ ಕೇಂದ್ರ ಸರ್ಕಾರ ಈ ಎಪಿಎಂಸಿಗೆ ಕಾಯ್ದೆ ತಿದ್ದುಪಡಿಗೆ ಸೂಚಿಸಿದೆ. ಇದು ಇಲ್ಲಿಗೆ ನಿಲ್ಲುವುದಿಲ್ಲ. ಈಗಾಗಲೇ ನೀತಿ ಆಯೋಗ, ಒಪ್ಪಂದ ಕೃಷಿಗೆ (ಕಾಂಟ್ರ್ಯಾಕ್ಟ್ ಫಾರ್ಮಿಂಗ್) ಪ್ರೋತ್ಸಾಹ ನೀಡಲು ಕಾನೂನು ರೂಪಿಸುವುದರ ಜತೆಗೆ, ಕಾರ್ಪೊರೇಟ್ ಕಂಪನಿಗಳಿಗೆ ಕೃಷಿ ಭೂಮಿಯನ್ನು ಲೀಸ್ ಪಡೆಯಲು ಅವಕಾಶ ಮಾಡಿಕೊಡಲು ಈಗಾಗಲೇ ಕೇಂದ್ರ ಜಾರಿಗೆ ತಂದಿರುವ ‘ಕೃಷಿ ಭೂಮಿ ಗುತ್ತಿಗೆ ಕಾಯ್ದೆ -೨೦೧೬’ ಅನ್ನೂ ದೇಶಾದ್ಯಂತ ಜಾರಿಗೆ ತರಲು ಕ್ರಮ ತೆಗೆದುಕೊಳ್ಳಬೇಕೆಂದು ಕೇಂದ್ರಕ್ಕೆ ಹೇಳಿದೆ. ಈ ಕ್ರಮಗಳು ಕೃಷಿ ಕ್ಷೇತ್ರವನ್ನು ಕಾರ್ಪೊರೇಟ್ ಕಂಪನಿಗಳಿಗೆ ತಮ್ಮ ಬಿಗಿ ಹಿಡಿತಕ್ಕೆ ತೆಗೆದುಕೊಳ್ಳಲು ಅವಕಾಶ ಮಾಡಿಕೊಡಲಿದೆ. ಇದರ ಪರಿಣಾಮಗಳು ಕೃಷಿ ಉತ್ಪನ್ನಗಳ ಉತ್ಪಾದನೆ ದುಪಟ್ಟಾಗುತ್ತದೆಯೋ, ರೈತರ ಆತ್ಮಹತ್ಯೆ ಪ್ರಕರಣಗಳು ದುಪ್ಪಟ್ಟಾಗುತ್ತದೆಯೋ ಎಂಬುದು ಈಗ ಬಹುದೊಡ್ಡ ಪ್ರಶ್ನೆಯಾಗಿದೆ