ಕೊರೊನದಿಂದ ಜಾಗತಿಕವಾಗಿ ಇನ್ನಿಲ್ಲದ ಮುಖಭಂಗಕ್ಕೆ ಈಡಾಗಿರುವ ಚೀನಾ ಮತ್ತೊಮ್ಮೆ ತಾನು ಕೆಲು ಕೆರೆಯುತ್ತಿದೆ, ಹಾಗೂ ಮಿತ್ರದೇಶ ನೇಪಾಳವನ್ನೂ ಚಿವುಟುತ್ತಿದೆ. ರಾಜತಾಂತ್ರಿಕವಾಗಿ ಇಡೀ ಜಗತ್ತಿನ ನಂಬಿಕೆ ಕಳೆದುಕೊಂಡಿರುವ ನೆರೆ ದೇಶಕ್ಕೆ ತಕ್ಕ ಶಾಸ್ತಿ ಮಾಡಲು ಇದೇ ಸಕಾಲ. ಮೋದಿ ಎಲ್ಲ ದೇಶಗಳನ್ನು ಚೀನಾ ವಿರುದ್ಧ ಒಗ್ಗೂಡಿಸಬೇಕು
ಮತ್ತೊಮ್ಮೆ ಭಾರತ ಮತ್ತು ಚೀನಾ ನಡುವೆ ಬೆಂಕಿ ಬಿದ್ದಿದೆ. ಈ ಸಲ ಅದರ ದಾಳವಾಗಿರುವುದು ನೇಪಾಳವೆಂಬ ನಂಜಿನ ವಾಸನೆಯೇ ಗೊತ್ತಿಲ್ಲದ ದೇಶ. ಜಗತ್ತಿಗೆ ಕೊರೊನ ವೈರಾಣುವನ್ನು ರಫ್ತು ಮಾಡಿ ಅಪಾರ ಸಾವು-ನೋವಿಗೆ ಕಾರಣವಾದ ಕೆಂಪು ದೇಶ ಈಗಲಾದರೂ ಪಾಪಪ್ರಜ್ಞೆಯಿಂದ ಕೊರಗಬೇಕಿತ್ತು, ಆದರೆ ಆ ದೇಶಕ್ಕೆ ಕೊನೆಪಕ್ಷ ಸಣ್ಣ ಪಶ್ಚಾತ್ತಾಪವೂ ಇದ್ದಂತೆ ಇಲ್ಲ. ನೆಹರು ಕಾಲದಿಂದ ಇವತ್ತಿನ ಮೋದಿಯವರೆಗೆ ಅದು ಕುಟಿಲ ರಾಜಕೀಯ ನೀತಿಗಳಿಂದ ಹೊರಬರುವ ಸಾಧ್ಯತೆ ಇಲ್ಲವೇ ಇಲ್ಲ ಎಂಬುದು ಅನೇಕ ಸಂದರ್ಭಗಳಲ್ಲಿ ಸಾಬೀತಾಗಿಬಿಟ್ಟಿದೆ. ಇತ್ತ ಭಾರತೀಯ ನಾಯಕರ ಜತೆ ಮಾತುಕತೆ ನಡೆಸುವ ನಾಟಕವಾಡುತ್ತಲೇ ಅದರ ವಿರುದ್ಧ ದಿಕ್ಕಿನಲ್ಲಿ ಹಾಲಿನಿಂದ ಕೂದಲು ತೆಗೆಯುವಂತೆ ಒಳಗೊಳಗೇ ಕನ್ನ ಕೊರೆಯುವ ನೀಚ ಮನಃಸ್ಥಿಯ ದೇಶವದು. ಮಾವೋತ್ಸೆತುಂಗ ಕಾಲದಿಂದ ಈಗಿನ ಕ್ಸಿ ಜಿನ್ಪಿಂಗ್ ವರೆಗೂ ಇದೇ ಚಾಳಿ ಚೀನಾದ್ದು.
ಯಾಕೆ ಹೀಗೆ? : ಅಂತಾರಾಷ್ಟ್ರೀಯ ಮಟ್ಟದ ರಾಜನೀತಿಜ್ಞರು ಹೇಳುವಂತೆ, ಚೀನಾ ಕ್ರೌರ್ಯದಿಂದಲೇ ಅಸ್ತಿತ್ವಕ್ಕೆಬಂದ ದೇಶ. ಪ್ರಕ್ಷುಬ್ಧ ಮನಃಸ್ಥಿತಿಯ ನಾಯಕತ್ವ ಅದರದ್ದು. ಜತೆಗೆ, ಶಾಂತಿ ಎಂಬುದು ಬೀಜಿಂಗಿಗೆ ಪದ. ಮುಕ್ತ ಸಾಹಿತ್ಯ, ಮುಕ್ತ ಮಾತು, ಮುಕ್ತ ಜೀವನಕ್ಕೆ ತೆರೆದುಕೊಳ್ಳದ ಅದಕ್ಕೆ ಸದಾ ಆಭದ್ರತೆಯ ಭಾವ. ಸಮಾಜವಾದವನ್ನು ಒಪ್ಪಿಕೊಂಡಿದ್ದರು ಕೂಡ ಅದರ ಅಂತರಂಗದಲ್ಲಿ ನಿರಂಕುಶತೆಯನ್ನೇ ಆಪೋಷನ ತೆಗೆದುಕೊಂಡಿರುವ ನೆಲವದು. ಈ ಕಾರಣಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸದಸ್ಯತ್ವ ಪಡೆಯಲು ಭಾರತದ ನೆರವನ್ನು ಪಡೆದಿದ್ದ ಆ ದೇಶ, ಅದೇ ಭಾರತ ಆ ಮಂಡಳಿಯನ್ನು ಸೇರಲು ನಾಚಿಕೆ ಇಲ್ಲದೆ, ರಾಜತಾಂತ್ರಿಕತೆಯ ಕನಿಷ್ಠ ಶಿಷ್ಟಾಚಾರವೂ ಇಲ್ಲದೆ ವಿರೋಧಿಸುತ್ತಿದೆ. ಹೀಗಾಗಿ ಜಗತ್ತಿನ ಯಾವುದೇ ದೇಶಕ್ಕೂ ಚೀನಾ ಮಿತ್ರನಾಗುವುದು ಎಂದರೆ ನಯವಂಚನೆಯನ್ನು ಬಗಲಲ್ಲೇ ಇಟ್ಟುಕೊಂಡಂತೆಯೇ.
ಜಗತ್ತಿನ ಏಕೈಕ ಹಿಂದೂದೇಶವಾಗಿದ್ದ ನೇಪಾಳವು ಸಹಜವಾಗಿಯೇ ಭಾರತಕ್ಕೆ ಆಪ್ತ ದೇಶವಾಗಿತ್ತು. ಅಲ್ಲಿ ಅರಸೊತ್ತಿಗೆ ಕಾಲದಿಂದ, ಅಂದರೆ ದೊರೆ ಬೀರೇಂದ್ರ ಅವರ ಅವಧಿ, ಅವರು ಹತ್ಯೆಯಾದ ನಂತರ ಪಟ್ಟಕ್ಕೇರಿದ ಜ್ಞಾನೇಂದ್ರ ಅವರವರೆಗೂ ದಿಲ್ಲಿ ಮತ್ತು ಕಾಠ್ಮಂಡು ನಡುವೆ ಸಹಜ, ವಿಶ್ವಾಸಪೂರ್ವಕ ಸ್ನೇಹಬಂಧವೇ ಇತ್ತು. ಎಂಥ ವೇಳೆಯಲ್ಲೂ ಎರಡೂ ದೇಶಗಳ ನಡುವೆ ಅಪನಂಬಿಕೆಗೆ ಅವಕಾಶವೇ ಉಂಟಾಗುವ ಸನ್ನಿವೇಶವೇ ಬರಲಿಲ್ಲ. ಅದಕ್ಕೆ ಈಗ ಚೀನಾ ಹುಳಿ ಹಿಂಡಿದೆ. ಹಿಮಾಲಯದ ತಪ್ಪಲಲ್ಲಿ ನೆಮ್ಮದಿಯಾಗಿದ್ದ ನೇಪಾಳಕ್ಕೆ ಉತ್ತರಕ್ಕೆ ಟಿಬೆಟ್ ಇದ್ದರೆ, ಉಳಿದೆಲ್ಲ ದಿಕ್ಕುಗಳಲ್ಲಿ ಭಾರತವೇ ಇದೆ. ಹೀಗಾಗಿ ಆ ದೇಶದ ಪಾಲಿಗೆ ಭಾರತ ಸದಾ ನಿರ್ಣಾಯಕ, ರಕ್ಷಕ ಹಾಗೂ ನಂಬಿಕೆಯ ಆಪ್ತಬಂಧು. ಆ ಮಾತಿಗೆ ಸಾಕ್ಷಿ ಎಂಬಂತೆ ಭಾರತವೂ ತಾನು ಸ್ವಾಂತಂತ್ರ್ಯಗೊಂಡ ನಂತರ ಯಾವೊತ್ತು ನೇಪಾಳದ ಸಾರ್ವಭೌಮತೆಗೆ ಸವಾಲೊಡ್ಡುವ ರೀತಿ ವರ್ತಿಸಿದ್ದಿಲ್ಲ ಅಥವಾ ಅದೊಂದು ಸಣ್ಣ ದೇಶವೆಂಬ ಹಗುರತನವನ್ನೂ ತೋರಲಿಲ್ಲ. ಆದರೆ, ಅತ್ತ ಅಭಿವೃದ್ಧಿಯೂ ಕಾಣದೆ, ಇತ್ತ ಪ್ರಜಾಪ್ರಭುತ್ವದ ಬೇರುಗಳನ್ನು ಗಟ್ಟಿಗೊಳಿಸಿಕೊಳ್ಳದ ಆ ದೇಶದ ಅಸ್ಥಿರ ನಾಯಕತ್ವದ ಬಗ್ಗೆ ಎಲ್ಲೋ ಒಂದೆಡೆ ಭಾರತ ಮೈಮರೆತಿತ್ತೇನೋ ಎಂಬ ಮಾತಿತ್ತು.ಸುತ್ತಲೂ ಮುಳ್ಳುಗಳು:ರಾಜತಾಂತ್ರಿವಾಗಿ ಚೌಕಾಶಿ ಮಾಡುತ್ತಲೇ ಮತ್ತೊಂದೆಡೆ ರಕ್ತಪೀಪಾಸುತನಕ್ಕೆ ಒಡ್ಡಿಕೊಳ್ಳುವ ಚೀನಾವನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿರುವ ಭಾರತಕ್ಕೆ ತನ್ನ ಸುತ್ತಲೂ ಮಗ್ಗುಲಮುಳ್ಳುಗಳು ಜಾಸ್ತಿಯಾಗುತ್ತಿವೆ.
ಮೊದಲಿನಿಂದ ಪಾಕ್ ಹಿಂದೆ ನಿಂತು ಭಾರತದ ವಿರುದ್ಧ ಪ್ರಾಕ್ಸಿವಾರ್ ಮಾಡುತ್ತಿರುವ ಚೀನಿ ಖೆಡ್ಡಕ್ಕೆ ೨೦೦೫ರಲ್ಲೇ ದ್ವೀಪದೇಶ ಶ್ರೀಲಂಕಾವೂ ಬಿದ್ದಿತ್ತು. ಅದಾದ ಮೇಲೆ ಹಿಂದೂ ಮಹಾಸಾಗರದ ಆಯಕಟ್ಟಿನ ಜಾಗದಲ್ಲಿರುವ ಮಾಲ್ಡೀವ್ಸ್ ದ್ವೀಪವನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಿ ಅಲ್ಲಿ ರಾಜಕೀಯ ಬಿಕ್ಕಟ್ಟನ್ನು ಸೃಷ್ಟಿಸುವಲ್ಲಿ ಯಶಸ್ವಿಯೂ ಆಗಿತ್ತು. ಈಗ ಭಾರತದ ಜತೆ 1,751 ಕಿಲೋಮೀಟರ್ ಗಡಿ ಹಂಚಿಕೊಂಡಿರುವ ನೇಪಾಳವನ್ನು ಚಿವುಟುವ ಮೂಲಕ ಭಾರತಕ್ಕೆ ಸವಾಲೊಡ್ಡುತ್ತಿದೆ. ಜತೆಗೆ ಬಾಂಗ್ಲಾದೇಶ, ಮ್ಯಾನ್ಮಾರ್, ಪಾಕಿಸ್ತಾನ, ಭೂತಾನ್ ಮತ್ತು ಆಫ್ಘಾನಿಸ್ತಾನದ ಜತೆ ಭಾರತ ಗಡಿ ಹಂಚಿಕೊಂಡಿದೆ. ಪಾಕ್ ಜತೆ ನಿರಂತರ ತಲೆನೋವಿದ್ದರೂ ಅದಕ್ಕೆ ಕಾಲಕಾಲಕ್ಕೆಬೆಂಕಿ-ತುಪ್ಪ ಸುರಿಯುತ್ತಿರುವ ಚೀನಾ ತನಗೆ ಬೇಕಾದ ಹಾಗೆ ಆ ನತದೃಷ್ಟ ದೇಶಗಳನ್ನು ಕುಣಿಸುತ್ತಿದೆ.
ಮ್ಯಾನ್ಮಾರ್ ಜತೆಯೂ ಬೀಜಿಂಗಿಗೆ ಉತ್ತಮ ಸಂಬಂಧಗಳೇ ಇವೆಯಾದರೂ ಭಾರತಕ್ಕೆ ಅದರಿಂದ ಸಮಸ್ಯೆಯಾಗಿಲ್ಲ. ಬಾಂಗ್ಲಾದಲ್ಲಿ ಬೇಳೆ ಬೇಯಿಸಿಕೊಳ್ಳಲು ಇನ್ನು ಸಾಧ್ಯವಾಗಿಲ್ಲ. ಇನ್ನು ಹಿಮಾಲಯದ ತಪ್ಪಲಲ್ಲೇ ನೆಮ್ಮದಿಯಾಗಿರುವ ಭೂತಾನ್ ದೇಶಕ್ಕೆ ಭಾರತ-ಚೀನಾ ಪೈಕಿ ಯಾವುದು ಬೆಂಕಿ ಎಂಬ ಸ್ವಷ್ಟ ಅರಿವಿದೆ. ನಮ್ಮೆರಡು ದೇಶಗಳ ನಡುವಿನ ಸಂಬಂಧ ಅತ್ಯುತ್ತಮವಾಗಿದೆ. ಮೊದಲಿನಿಂದ ಸಮಸ್ಯೆ ಇರುವುದು ಪಾಕ್ ಮತ್ತು ಚೀನಾ ನಡುವೆ ಮಾತ್ರ. ಆದರೆ ಭಾರತಕ್ಕೆ ಶತ್ರುಗಳನ್ನು ಹೆಚ್ಚು ಸೃಷ್ಟಿ ಮಾಡುವುದು ಚೀನಾದ ಆದ್ಯತೆಯ ರಾಜತಾಂತ್ರಿಕತೆಯಾಗಿದೆ.
ಈಗ ಆಗಿದ್ದೇನು?:ಕೊರೊನ ವೈರಸ್ ಸೃಷ್ಟಿಸಿ ಜಗತ್ತನ್ನೇ ಅಪಾಯಕ್ಕೆ ದೂಡಿರುವ ಚೀನಾ ಅಪರಾಧಿ ಸ್ಥಾನದಲ್ಲಿ ನಿಂತಿದೆ. ಅದರ ವಿರುದ್ಧ ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಜಾಗತಿಕ ಮಟ್ಟದ ತನಿಖೆ ಶುರುವಾಗಿದೆ. ಅಮೆರಿಕ, ಬ್ರಿಟನ್, ಜರ್ಮನಿ, ಫ್ರಾನ್ಸ್, ಆಸ್ಟ್ರೇಲಿಯಾ, ರಷ್ಯ ಸೇರಿದಂತೆ ಅಷ್ಟೂ ಖಂಡಗಳ ಮುಕ್ಕಾಲುಪಾಲು ದೇಶಗಳು ಬೀಜಿಂಗ್ ಜತೆ ಮುನಿಸಿಕೊಂಡಿವೆ. ಅಮೆರಿಕವಂತು ಚೀನಾ ಹೆಸರೆತ್ತಿದ್ದರೆ ಉರಿದುರಿದು ಬೀಳುತ್ತಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗಂತೂ ಅದು ನಂಬರ್ ೧ ಶತ್ರುರಾಷ್ಟ್ರ. ತನ್ನ ದುಷ್ಟತನದಿಂದ ವಿಷಮ ಪರಿಸ್ಥಿತಿಯನ್ನು ತಂದೊಟ್ಟಿರುವ ಅದರ ವಿರುದ್ಧ ಒಟ್ಟಾಗಿರುವ ಜಾಗತಿಕ ಸಮುದಾಯಕ್ಕೆ ಅಮೆರಿಕ ಹೊರತುಪಡಿಸಿದರೆ ಭಾರತವೇ ನಿರ್ಣಾಯಕ ನಾಯಕತ್ವ ವಹಿಸುತ್ತಿದೆ. ಇಸ್ರೇಲ್ ಕೂಡ ಈ ಕೂಟದ ಬಹುಮುಖ್ಯ ಭಾಗವಾಗಿರುವುದು ಮತ್ತೊಂದು ಶೀತಲ ಸಮರಕ್ಕೆ ಮುನ್ನುಡಿಯೇ? ಗೊತ್ತಾಗುತ್ತಿಲ್ಲ.
ಚೀನಾ ಲೆಕ್ಕಾಚಾರವೇನು?:ಬಲಾಢ್ಯ ದೇಶಗಳೆಲ್ಲವೂ ತನ್ನ ವಿರುದ್ಧ ತಿರುಗಿಬಿದ್ದಿರುವ ಹೊತ್ತಿನಲ್ಲಿಯೇ ಭಾರತವನ್ನು ಕೆಣಕಿದರೆ ವಿಶ್ವ ಸಮುದಾಯ ಚೌಕಾಶಿಗೆ ಬರಬಹುದು ಎಂದ ಲೆಕ್ಕಾಚಾರವನ್ನು ಬೀಜಿಂಗ್ ಹಾಕುತ್ತಿರುವಂತಿದೆ. ಹೀಗಾಗಿಯೇ ಅದು ನೇಪಾಳವನ್ನು ಮುಂದಿಟ್ಟುಕೊಂಡು ಭಾರತದ ವಿರುದ್ಧ ಕಾಲು ಕೆರೆಯುತ್ತಿದೆ.ದೊಕ್ಲಾಮ್ ಘಟನೆಯ ನಂತರ ತಿಳಿಯಾಗಿದ್ದ ಪರಿಸ್ಥಿತಿ ಇದ್ದಕ್ಕಿದ್ದ ಹಾಗೆ ಬಿಗಿಯಾಗಲು ಕಾರಣ ನೆರೆ ದೇಶ ಅನುಸರಿಸುತ್ತಿರುವ ರಾಜಕೀಯ ಕುತಂತ್ರಗಾರಿಕೆ. ಉಪ ಖಂಡದಲ್ಲಿ ಹೇಗಾದರೂ ಭಾರತವನ್ನು ಒಂಟಿಯಾಗಿಸಿದರೆ ಏಷ್ಯಾದಲ್ಲಿ ಸೂಪರ್ ಪವರ್ ಆಗಬಹುದು ಎಂಬುದು ಅದಕ್ಕೆ ಗೊತ್ತಿದೆ. ಪಕ್ಕದ ದೇಶಗಳನ್ನು ಎತ್ತಿಕಟ್ಟಿ ವ್ಯಾವಹಾರಿಕವಾಗಿ ಅವುಗಳನ್ನು ತನ್ನ ದಾಸ್ಯದಾಳಗಳನ್ನಾಗಿ ಮಾಡಿಕೊಂಡು ಭಾರತದ ವಿರುದ್ಧ ಹಿಮಾಲಯ ಹಾಗೂ ಹಿಂದೂ ಮಹಾಸಾಗರದಲ್ಲಿ ರಕ್ಷಣಾ ಬೇಲಿಯನ್ನು ನಿರ್ಮಿಸಬೇಕು ಎಂಬುದೇ ಚೀನಾದ ದಶಕಗಳ ದುಸ್ಸಾಹಸ.ಪಾಕ್ ಪೋಷಿತ ಭಯೋತ್ಪಾದಕರು, ಪ್ರತ್ಯೇಕತಾವಾದಿಗಳಿಗೆ ಕಾಮಧೇನುವಾಗಿದ್ದ ೩೭೦ನೇ ವಿಧಿಯನ್ನು ಕಿತ್ತೆಸೆದು ಜಮ್ಮು-ಕಾಶ್ಮೀರ ಹಾಗೂ ಲಡಾಕ್ ಪ್ರದೇಶಗಳನ್ನು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾಡಿದ್ದೇ ಸಮಸ್ಯೆಗೆ ಮೂಲ ಎಂದು ಹುಯಿಲೆಬ್ಬಿಸುವ ಕೆಲಸವನ್ನು ಚೀನಾ ಶುರುವಿಟ್ಟುಕೊಂಡಿದೆ.
ಮಂಜಿನ ಪರ್ವತಗಳು, ನದಿ ಝರಿಗಳಿಗೆ ಸೀಮಿತವಾಗಿದ್ದ ತನ್ನ ಭೂ ಪ್ರದೇಶಕ್ಕೆ ಸಮರ್ಪಕ ಬೇಲಿ ಹಾಕಿಕೊಂಡು ಅಭಿವೃದ್ಧಿಯತ್ತ ಮುಖ ಮಾಡಿದ್ದು ಬೀಜಿಂಗ್ ಹೊಟ್ಟೆಗೆ ಬೆಂಕಿ ಹಾಕಿದಂತೆ ಆಗಿದೆ. ಅದರಲ್ಲೂ ಲಡಾಕಿನಲ್ಲಿ ಆರಂಭವಾಗಿರುವ ಅಭಿವೃದ್ಧಿ ಕಾಮಗಾರಿಗಳು ಚೀನಾಕ್ಕೆ ಸವಾಲು ಒಡ್ಡುವಂತಿವೆ. ಮತ್ತೊಂದೆಡೆ ಪಾಕ್ ಆಕ್ರಮಿತ ಕಾಶ್ಮೀರದ ಮೇಲೆ ಯಾವುದ ಕ್ಷಣದಲ್ಲೂ ಭಾರತ ಸೇನೆ ಮುಗಿಬೀಳಬಹುದೆಂಬ ಸಂಗತಿ ಚೀನಾಕ್ಕೆ ಗೊತ್ತಿಲ್ಲದೆ ಏನಿಲ್ಲ! ಅದೇನಾದರೂ ಆಗಿಬಿಟ್ಟರೆ ತಾನೂ ಆಕ್ರಮಿಸಿಕೊಂಡಿರುವ ಕಾಶ್ಮೀರವೂ ಕೈಜಾರುತ್ತದೆ ಎಂಬ ಚೀನಾದ ಆತಂಕವೂ ಸದ್ಯದ ಬಿಕ್ಕಟ್ಟಿಗೆ ಹಿನ್ನೆಲೆ ಇರಬಹುದು.ಜತೆಗೆ, ಕೊರೊನೋತ್ತರ ಕಾಲದಲ್ಲಿ ಚೀನಾದಿಂದ ಬಹುತೇಕ ಜಾಗತಿಕ ಕಂಪನಿಗಳು ಕಾಲ್ಕೀಳುವುದು ಪಕ್ಕ. ಅಮೆರಿಕ, ಯುರೋಪ್ ಮೂಲದ ಅನೇಕ ಉದ್ದಿಮೆಗಳು ಭಾರತಕ್ಕೆ ಶಿಫ್ಟ್ ಆಗುವ ಪ್ರಕ್ರಿಯೆಯನ್ನು ಈಗಾಗಲೇ ಆರಂಭಿಸಿಬಿಟ್ಟಿವೆ. ಅಂಥ ಕಂಪನಿಗಳಿಗೆ ಅಮೆರಿಕ ವಿಶೇಷ ಪ್ಯಾಕೇಜ್ ಪ್ರಕಟಿಸಿದೆ. ಬೌದ್ಧಿಕ ಸಂಪತ್ತಿನ ವಿಚಾರದಲ್ಲಿ ಚೀನಾ ಅಪವಂಬಿಕೆಯ ಕುಖ್ಯಾತಿ ಹೊಂದಿರುವುದು ಉದ್ದಿಮೆಗಳು ಕಮ್ಯುನಿಸ್ಟ್ ದೇಶವನ್ನು ತೊರೆಯಲು ಮುಖ್ಯಕಾರಣ. ಸೈಬರ್ ಕ್ರೈಮಿನಲ್ಲಿ ಅದು ವಿರಾಟ್ ರೂಪವನ್ನೇ ತಾಳಿರುವುದು ಈಗಾಗಲೇ ಭಾರತವೂ ಸೇರಿ ಅಮೆರಿಕ, ರಷ್ಯಕ್ಕೂ ತಿಳಿದಿರುವ ಸಂಗತಿ. ಎಲ್ಲ ರೀತಿಯಲ್ಲೂ ನಾಚಿಕೆಯ ಸಂವೇದನೆಯನ್ನು ಬಿಟ್ಟುಕೂತಿರುವ ಚೀನಾಕ್ಕೆ ಈಗ ತಾನು ಆಕ್ರಮಿಸಿಕೊಂಡಿರುವ ಕಾಶ್ಮೀರ, ನೇಪಾಳದ ಗಡಿ ನೆಪ ಇಟ್ಟುಕೊಂಡು ಹೊಸ ವರಸೆ ಶುರುವಿಟ್ಟುಕೊಂಡಿದೆ.
ಏನಿದು ಬಿಕ್ಕಟ್ಟು:ಎಲ್ಲವೂ ಸರಿ ಇದ್ದಾಗ ಭಾರತ-ನೇಪಾಳದ ಪಾಲಿಗೆ ಕಾಲಾಪಾನಿ ಸಮಸ್ಯೆ ಆಗಿತ್ತಾದರೂ ತಿಕ್ಕಾಟ ನಡೆಸುವಷ್ಟು ದೊಡ್ಡ ಬಿಕ್ಕಟ್ಟು ಆಗಿರಲಿಲ್ಲ. ಯಾವಾಗ ಕಾಶ್ಮೀರಕ್ಕೆ ಮೋದಿ ಸರಕಾರ ೩೭೦ನೇ ವಿಧಿಯನ್ನು ತೆಗೆದು ಪರಮನೆಂಟ್ ಪರಿಹಾರ ಕಂಡಕೊಂಡಿತೋ ಅಲ್ಲಿಗೆ ಆಳವಾದ ಕಂಪನಗಳು ಶುರುವಾದವು. ಕೆಲ ತಿಂಗಳ ಹಿಂದೆ ಕೇಂದ್ರ ಸರಕಾರ ನಕ್ಷೆಯೊಂದನ್ನು ಬಿಡುಗಡೆಗೊಳಿಸಿ ಕಾಲಾಪಾನಿಯನ್ನು ಉತ್ತರಾಖಂಡ್ನ ಭಾಗವೆಂದು ಘೋಷಿಸಿತ್ತು. ಐತಿಹಾಸಿಕವಾಗಿ ಇದು ಸತ್ಯವೇ ಆಗಿತ್ತು. ಇದಾದ ಕೆಲ ದಿನಗಳ ಬಳಿಕ ಚೀನಾ ರಾಜಕೀಯ ನಕಾಶೆಯನ್ನು ಬಿಡುಗಡೆ ಮಾಡಿ ಕಾಲಾಪಾನಿ, ಉತ್ತರಾಖಂಡದ ಲಿಂಪಿಯಾಧುರಾ, ಲಿಪುಲೇಖ್ಗಳು ತಮ್ಮದೆಂದು ವಾದಿಸಿತ್ತು. ಇದೇ ಬಿಕ್ಕಟ್ಟಿನ ಮೂಲ. ಈ ಕಾರಣಕ್ಕಾಗಿ ನೇಪಾಳ, ಚೀನಾ ಒಂದಾಗಿ ಭಾರತದ ವಿರುದ್ಧ ನಿಂತಿವೆ. ಈ ಮೈತ್ರಿ ಅದೆಷ್ಟು ದಿನ ಎಂಬುದನ್ನು ಕಾಲವೇ ನಿರ್ಣಯಿಸಬೇಕಿದೆ.
ಹಾಗೆ ನೋಡಿದರೆ, 1960ರಿಂದಲೇ ಕಾಲಾಪಾನಿ ತಿಕ್ಕಾಟವಿತ್ತು. 370 ಚ.ಕಿ.ಮೀ ವ್ಯಾಪ್ತಿಯ ಈ ಭೂ ಪ್ರದೇಶ ಭಾರತದ ಮಟ್ಟಿಗೆ ಬಹಳ ಮುಖ್ಯ. ಇದು ಭಾರತ-ಟಿಬೆಟ್ಟಿನ ಗಡಿ ಪೊಲೀಸರಿಂದ ನಿಯಂತ್ರಿಸಲ್ಪಡುತ್ತಿದ್ದು, 1962ರಿಂದ ಈ ಪೊಲೀಸರು ಇಲ್ಲಿ ಪಹರೆ ಕಾಯುತ್ತಿದ್ದಾರೆ. ಮೂರು ರಾಷ್ಟ್ರಗಳ ಗಡಿಗಳು ಸೇರುವ ಅತಿಸೂಕ್ಷ್ಮ ಜಾಗವಾದ ಇದರ ಮೇಲೆ ಚೀನಾಗೆ ಆರಂಭದಿಂದಲೂ ಕಣ್ಣಿದೆ. ಜತೆಗೆ, ಲಿಂಪಿಯಾಧುರಾ, ಲಿಪುಲೇಖ್ ಕೂಡ ತನ್ನದೇ ಎಂದು ಚೀನಾ ರಾಗ ತೆಗೆಯುತ್ತಿದೆ. ಈ ತಗಾದೆಯನ್ನು ಇಟ್ಟುಕೊಂಡೇ ನೇಪಾಳವನ್ನು ತನ್ನ ತಾಳಕ್ಕೆ ತಕ್ಕಂತೆ ಕುಣಿಸಿ ಭಾರತಕ್ಕೆ ತೊಂದರೆ ಕೊಡುವುದು ಚೀನೀ ಕರಾಮತ್ತಾಗಿದೆ. ಬ್ರಿಟೀಷರಿದ್ದ ಕಾಲದಲ್ಲಿಯೇ, ಅಂದರೆ ೧೮೧೬ರಲ್ಲಿ ನೇಪಾಳ ಮತ್ತು ಭಾರತದ ನಡುವೆ ಸುಗೌಳಿ ಒಪ್ಪಂದವೇರ್ಪಟ್ಟಿತ್ತು. ಆದರೆ ಒಪ್ಪಂದದ ಪ್ರಕಾರ ಅಲ್ಲಿ ಪಶ್ಚಿಮ ಭೂ ಪ್ರದೇಶ ನಮ್ಮದು. ಆದರೆ ಅಲ್ಲಿಯೇ ಹರಿಯುವ ಕಾಳೀ ನದಿಯನ್ನು ಒಪ್ಪಂದದಲ್ಲಿ ಉಲ್ಲೇಖೀಸಲಾಗಿಲ್ಲ. ಬಿಕ್ಕಟ್ಟಿಗೆ ಇದೇ ಕಾರಣ. ಕಾಲಪಾನಿಯ ಪಶ್ಚಿಮ ಪ್ರದೇಶದಲ್ಲಿ ಕಾಳೀ ನದಿ ಹರಿಯುತ್ತಿದೆ. ಭಾರತವು ಕಾಲಾಪಾನಿಯ ಪೂರ್ವ ಭಾಗವನ್ನು ಗಡಿಯಾಗಿ ಪರಿಗಣಿಸಿದ್ದು, ಕಾಲಾಪಾನಿ ತನ್ನದು ಎಂದಿದೆ. ಜತೆಗೆ ನೇಪಾಳವೂ ಕ್ಲೈಮ್ ಮಾಡುತ್ತಿದೆ.
ಭಾರತಕ್ಕೆ ಎಚ್ಚರಿಕೆ ಘಂಟೆ:ಏನೇ ಆಗಲಿ, ಏಷ್ಯಾ ಮಾತ್ರವಲ್ಲ ಜಾಗತಿಕ ಶಕ್ತಿಯಾಗಿ ಬೆಳೆಯುತ್ತಿರುವ ಭಾರತಕ್ಕೆ ಈ ವಿವಾದ ಒಂದು ಎಚ್ಚರಿಕೆಯ ಘಂಟೆ. ಅಕ್ಕಪಕ್ಕದವರನ್ನು ಎತ್ತಿಕಟ್ಟುತ್ತ ನಮಗೆ ಮುಜುಗರ ಉಂಟುಮಾಡುತ್ತಿರುವ ಚೀನಾಕ್ಕೆ ಪಾಠ ಕಲಿಸಲು ಇದು ಸಕಾಲ. ನೇಪಾಳಕ್ಕೂ ತನ್ನ ಶಕ್ತಿ ಏನು ಎಂಬುದನ್ನು ತೋರಿಸಲು ಇದೇ ಸರಿಯಾದ ಸಮಯ. ಕಬ್ಬಿಣ ಕಾದಾಗಲೇ ಹೊಡೆಯಬೇಕು ಎಂದು ಕೇಂದ್ರಕ್ಕೆ ಅನೇಕ ನಿಪುಣರು ಸಲಹೆ ಮಾಡುತ್ತಿದ್ದಾರೆ. ವಾಪಪೇಯಿ ಅವರ ಕಾಲದಲ್ಲಿಯೇ ಈ ಬಿಕ್ಕಟ್ಟಿಗೆ ರಾಜಕೀಯ ಪರಿಹಾರ ಕಂಡುಕೊಳ್ಳಲು ಭಾರತ-ನೇಪಾಳ ಯತ್ನಿಸಿದ್ದುಂಟು. ಆದರೆ ಚೀನಾ ಕಾಲಪಾನಿಗೆ ಬಂದು ವೈರಸ್ಸಿನಂತೆ ಬಂದು ವಕ್ಕರಿಸಿರುವುದು ಕೊಂಚ ಯೋಚಿಸುವಂತೆ ಮಾಡಿದೆ. ಇಲ್ಲಿ ಭಾರತ ಗೆಲ್ಲಲೇಬೇಕು.
ಇದು ೧೯೬೨ ಅಲ್ಲ. ಜಗತ್ತು ಬದಲಾಗಿದೆ. ಭಾರತವೂ ಬದಲಾಗಿದೆ. ಕೇವಲ ಕಾಲಪಾನಿಯಿಂದ ಭಾರತವನ್ನು ಕಟ್ಟಿಹಾಕಲು ಚೀನಾಕ್ಕೆ ಸಾಧ್ಯವೇ ಇಲ್ಲ.