ಕೆಲ ದಿನಗಳ ಹಿಂದೆಯಷ್ಟೇ ಸೀರಿಯಲ್‌ಗಳ ಹೊರಾಂಗಣ ಚಿತ್ರೀಕರಣಕ್ಕೆ ಅನುಮತಿ ನೀಡಲಾಗಿತ್ತು. ಈ ಅನುಮತಿಯನ್ನು ಕೆಟಿವಿ ಅಧ್ಯಕ್ಷರಾದ ಶಿವಕುಮಾರ್ ಹೋಗಿ ತಂದಾಗ ಅಸೋಸಿಯೇಶನ್ ಒಳಗಡೆ ಒಂದಷ್ಟು ವಿವಾದ ಸೃಷ್ಟಿಯಾಗಿತ್ತು. ಆದರೆ ಆ ವಿವಾದ ತಣ್ಣಗಾಗಿ 10 ಕ್ಕೂ ಹೆಚ್ಚಿನ ಸೀರಿಯಲ್‌ಗಳ ಚಿತ್ರೀಕರಣ ಆರಂಭವಾಗಿವೆ.
ವಿವಾದವೇನು
ಹೌದು, ಕರ್ನಾಟಕ ಟೆಲಿವಿಷನ್ ಅಸೋಸಿಯೇಶನ್ ಅಧ್ಯಕ್ಷ ಶಿವಕುಮಾರ್ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಸೀರಿಯಲ್‌ಗಳನ್ನು ಮನೆಯೊಳಗೆ ಶೂಟಿಂಗ್ ಮಾಡಿಕೊಳ್ಳುತ್ತೇವೆ ನಮಗೆ ಅನುಮತಿ ನೀಡಿ ಎಂದು ಮನವಿ ಸಲ್ಲಿಸಿದ್ದರು. ಅದರಂತೆ ಮನೆಯೊಳಗೆ ಚಿತ್ರೀಕರಣ ಮಾಡಿಕೊಳ್ಳಬಹುದು, ಶುಚಿತ್ವ ಕಾಪಾಡಿಕೊಳ್ಳಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಎಂಬಂತಹ ನಿಯಮಗಳನ್ನು ಸೂಚಿಸಿ ಸರ್ಕಾರ ಅನುಮತಿ ನೀಡಿತು. ಆದರೆ ಈ ನಿರ್ಧಾರವನ್ನು ಕೆಲವರು ವಿರೋಧಿಸಿ ಸಾರ್ವಜನಿಕವಾಗಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಶಿವಕುಮಾರ್ ಚಿತ್ರೀಕರಣಕ್ಕೆ ಅನುಮತಿಗೆ ಮನವಿ ಸಲ್ಲಿಸುವಾಗ ನಟಿ ತಾರಾ ಅವರ ಜತೆ ಇದ್ದರು. ಆದರೆ ಚಿತ್ರೀಕರಣಕ್ಕೆ ಅನುಮತಿ ಪತ್ರ ನೀಡಲು ಬಂದಿದ್ಧಾರೆ ಎಂಬುದರ ಬಗ್ಗೆ ನನಗೆ ಗೊತ್ತಿರಲಿಲ್ಲ. ನಾನು ಆಗ ಸಿಎಂ ಆಫೀಸ್ ಬಳಿ ಇದ್ದಾಗ ಅವರು ಬಂದು ಮನವಿ ಕೊಟ್ಟು ಹೋದರು ಹಾಗಾಗಿ ಆ ಫೊಟೋದಲ್ಲಿ ನಾನಿದ್ದೇನೆ ಎಂದು ಅವರು ಮರು ದಿನ ಮಾಧ್ಯಮಗಳಿಗೆ ತಿಳಿಸಿದರು. ಅಲ್ಲಿಂದಲೇ ವಿವಾದ ಆರಂಭವಾಯಿತು.
ಕೆಟಿವಿಯ ಕಾರ್ಯದರ್ಶಿ ವೀರೇಂದ್ರ ಬೆಳ್ಳಿಚುಕ್ಕಿ ಮಾಧ್ಯಮಗಳ ಜತೆ ಮಾತನಾಡಿ ‘ಚಿತ್ರೀಕರಣಕ್ಕೆ ಅನುಮತಿ ನೀಡಿರುವುದು ನನ್ನ ಗಮನಕ್ಕೆ ಬಂದಿದೆ. ಆದರೆ ಮನವಿ ಪತ್ರಕ್ಕೆ ಕಾರ್ಯದರ್ಶಿಯಾದ ನನ್ನ ಸಹಿ ಪಡೆಯದೇ ತೆಗೆದುಕೊಂಡಿಲ್ಲ. ಅಲ್ಲದೇ ಈ ಸಮಯದಲ್ಲಿ ನಿರ್ಮಾಪಕರ ಜತೆ ಮಾತನಾಡಿ, ಮನವಿ ಸಲ್ಲಿಸಬೇಕಿತ್ತು. ಈ ಸಾಂಕ್ರಾಮಿಕ ರೋಗ ಉಲ್ಬಣವಾಗುತ್ತಿದ್ದು, ಇಂತಹ ಸಂದರ್ಭದಲ್ಲಿ ಚಿತ್ರೀಕರಣ ಮಾಡುವುದು ಒಳ್ಳೆಯದಲ್ಲಿ ಇದರಿಂದ ಸಾಕಷ್ಟು ಸಮಸ್ಯೆಗಳು ಎದುರಾಗುತ್ತದೆ. ಅಲ್ಲದೇ ಅಧ್ಯಕ್ಷರು ಯಾರಿಗೂ ಹೇಳದೆ ಅವರಷ್ಟಕ್ಕೆ ಅವರೇ ಪತ್ರ ತೆಗೆದುಕೊಂಡು ಹೋಗಿದ್ದಾರೆ ಎಂದು ಮಾತನಾಡಿದರು.
ಕಾರ್ಯಕಾರಿ ಸಮಿತಿ ಎದುರು ಮನವಿ ಸಲ್ಲಿಸುತ್ತಿರುವ ಬಗ್ಗೆ ಚರ್ಚೆ ಮಾಡಿಯೇ ಪತ್ರ ತೆಗೆದುಕೊಂಡು ಹೋಗಿದ್ದು, ಎಂದು ಅಧ್ಯಕ್ಷ ಶಿವಕುಮಾರ್ ಹೇಳಿದ್ದಾರೆ. ಇದನ್ನೆಲ್ಲ ನೋಡಿದರೆ ಕೆಟಿವಿಯಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಗೊತ್ತಾಗುತ್ತದೆ. ಜತೆಗೆ ಕೆಟಿವಿ ಚುನಾವಣೆ ಹತ್ತಿರ ಇರುವುದರಿಂದ ಈ ಘಟನೆಯನ್ನು ವಿವಾದಕ್ಕೆ ತಿರುಗಿಸಲಾಗಿದೆಯಂತೆ.
ದಿನಾಂಕ ಬದಲು
ವಿಶೇಷ ಎಂದರೆ ಮೇ 11 ರಿಂದ ಚಿತ್ರೀಕರಣ ಆರಂಭ ಮಾಡುತ್ತೇವೆ ಎಂದಿದ್ದ ಕೆಟಿವಿ ಮರುದಿನ ಸಭೆ ನಡೆಸಿ 21 ರ ನಂತರ ಚಿತ್ರೀಕರಣ ಆರಂಭಿಸುವುದಾಗಿ ಅನೌನ್ಸ್ ಮಾಡಿತು. ಇದರ ಜತೆಗೆ ಕೆಲ ಹಿರಿಯ ನಟ, ನಟಿಯರು ಚಿತ್ರೀಕರಣಕ್ಕೆ ಬರಲು ಹಿಂದೇಟು ಹಾಕಿದರು ಎನ್ನುವ ಮಾಹಿತಿ ಸಹ ಲಭ್ಯವಾಯಿತು.
ಅನುಮತಿ ಪಡೆದಿರುವುದು ಅಧ್ಯಕ್ಷ ಶಿವಕುಮಾರ್ ಅವರ ವೈಯಕ್ತಿಕ ಹಿತಾಸಕ್ತಿ ಎಂಬ ಮಾತುಗಳು ಸಹ ಕೇಳಿ ಬಂದವು. ಶಿವಕುಮಾರ್ ಅವರು ಮೂಲತಃ ನಿರ್ಮಾಪಕರು ಅವರ ನಿರ್ಮಾಣ ಸಂಸ್ಥೆಯಿಂದ ಒಂದೆರೆಡು ಸೀರಿಯಲ್‌ಗಳು, ಅಡುಗೆ ಕಾರ್ಯಕ್ರಮಗಳು ನಡೆಯುತ್ತಿದ್ದು, ಅದಕ್ಕೆ ಸಹಾಯವಾಗಲಿ ಎಂದು ಅವಸರವಾಗಿ ಅನುಮತಿ ಪಡೆದುಕೊಂಡಿದ್ದಾರೆ ಎಂದು ಕೆಲವರು ಮಾತನಾಡಿಕೊಂಡರು.
ಇದರ ಜತೆಗೆ ಖಾಸಗಿ ವಾಹಿನಿಯೊಂದು ರೇಟಿಂಗ್‌ನಲ್ಲಿ ತನ್ನ ಸ್ಥಾನವನ್ನು ಗಟ್ಟಿ ಮಾಡಿಕೊಳ್ಳಲು ನಿರ್ಮಾಣ ಸಂಸ್ಥೆಗಳಿಗೆ ಚಿತ್ರೀಕರಣಕ್ಕೆ ಒತ್ತಾಯ ಮಾಡಿ ಸರ್ಕಾರದ ಮಟ್ಟದಲ್ಲಿಯೂ ಒತ್ತಡ ಹೇರಿ ಚಿತ್ರೀಕರಣಕ್ಕೆ ಅನುಮತಿ ಪಡೆದುಕೊಂಡಿದೆ ಎಂಬ ಮಾತುಗಳು ಸಹ ಹೆಚ್ಚಾಗಿ ಕೇಳಿ ಬಂದಿವೆ.
ಆದರೆ ಇಷ್ಟೇಲ್ಲಾ ವಿವಾದಗಳು , ಆರೋಪಗಳು ಕೇಳಿ ಬಂದರೂ ಸೋಮವಾರದಿಂದ ವಿವಿಧ ಚಾನೆಲ್‌ಗಳ ಹತ್ತಕ್ಕೂ ಹೆಚ್ಚಿನ ಸೀರಿಯಲ್‌ಗಳ ಚಿತ್ರೀಕರಣ ಸರ್ಕಾರದ ಮಾರ್ಗಸೂಚಿಗಳ ಪಾಲನೆಯೊಂದಿಗೆ ಆರಂಭವಾಗಿದೆ.
ರಾಧಾ ಕಲ್ಯಾಣ ಮತ್ತು ಸುಬ್ಬಲಕ್ಷ್ಮಿ ಸಂಸಾರ ಎರಡು ಧಾರಾವಾಹಿಗಳ ಹೊರತಾಗಿ ಜೀ಼ ಕನ್ನಡ ತನ್ನ ಎಲ್ಲ ಧಾರಾವಾಹಿಗಳ ಚಿತ್ರೀಕರಣಕ್ಕೆ ಚಾಲನೆ ನೀಡಿದೆ. ರಿಯಾಲಿಟಿ ಶೋಗಳ ಚಿತ್ರೀಕರಣಕ್ಕೆ ಇನ್ನೂ ಅನುಮತಿ ದೊರೆತಿಲ್ಲ.
ಎಲ್ಲ ಸೆಟ್ ನಲ್ಲೂ ಕಲಾವಿದರೂ ಸೇರಿ ಗರಿಷ್ಠ 15 ಮಂದಿ ಇರುತ್ತಾರೆ. ಕಲಾವಿದರನ್ನು ಆಯಾ ಕಲಾವಿದರ ಚಿತ್ರೀಕರಣದ ಅವಧಿಗೆ ಮಾತ್ರ ಕರೆಸಲಾಗುತ್ತದೆ. ಎಲ್ಲರನ್ನೂ ಒಗ್ಗೂಡಿಸಿ ಚಿತ್ರೀಕರಿಸುವುದಿಲ್ಲ. ತಂತ್ರಜ್ಞರೆಲ್ಲರೂ ಗ್ಲೋವ್ಸ್, ಮಾಸ್ಕ್ ಮತ್ತು ಸ್ಯಾನಿಟೈಸರ್ ಅನ್ನು ಕಡ್ಡಾಯವಾಗಿ ಬಳಸುತ್ತಾರೆ. ಈ ಸ್ಯಾನಿಟೈಸರ್ ನಿರ್ವಹಣೆಗೆಂದೇ ಚಾನೆಲ್ ಕಡೆಯಿಂದ ಒಬ್ಬ ಸಿಬ್ಬಂದಿಯನ್ನು ನೀಡಲಾಗುತ್ತಿದೆ. ಈ ರೀತಿಯ ನೈರ್ಮಲ್ಯ ನಿರ್ವಹಣೆಗೆ ಪ್ರತಿ ಸೆಟ್ ನಲ್ಲೂ ಒಬ್ಬ ಸಿಬ್ಬಂದಿ ಇರುತ್ತಾರೆ.
ಎಲ್ಲ ಬಗೆಯ ಮುನ್ನೆಚ್ಚರಿಕೆಗಳನ್ನೂ ಕೈಗೊಳ್ಳಲಾಗಿದೆ. ತಿಂಡಿ ತಿನಿಸುಗಳನ್ನು ಸೆಟ್ ನಲ್ಲಿ ಸಿದ್ಧಪಡಿಸಲಾಗುತ್ತದೆ. ಕಲಾವಿದರಿಗೆ ಮನೆಯಿಂದ ತಿಂಡಿ ತರಲು ಅವಕಾಶ ಕಲ್ಪಿಸಲಾಗಿದೆ. ಇತರೆ ಚಾನೆಲ್‌ಗಳ ‘ಇಂತಿ ನಿಮ್ಮ ಆಶಾ’ , ‘ಮುದ್ದು ಲಕ್ಷ್ಮೀ ಸೀರಿಯಲ್‌ಗಳ ಶೂಟಿಂಗ್ ಆರಂಭವಾಗಿದೆ. ಜೂನ್ 1 ರಿಂದ ಹೊಸ ಎಪಿಸೋಡ್‌ಗಳು ಪ್ರಸಾರವಾಗಲಿದೆ ಎಂಬ ಮಾಹಿತಿ ವಾಹಿನಿ ವತಿಯಿಂದ ಸಿಕ್ಕಿದೆ.(ಚಿತ್ರಗಳು :ಮನು)
ಅನುಮತಿ ಪ ಡೇ ದಿ ದ್ದ ನ್ನೇ ಒಂದು ಎಪಿಸೋಡ್ ಮಾಡ್ಬಹುದು ಅನ್ಸುತ್ತೆ…
ಸದ್ಯ ಈ ಧಾರಾವಾಹಿ ಗಳ ಕಾಟ ತಪ್ಪಿತು ಎಂದು ಬ ಹ ಳ ಸ್ಟು ಮಂದಿ ಮಹಾ ಭಾ ರ ತ ನೋ ಡಿ ಖುಷಿ ಪಡ್ತಿ ದ್ದಾರೆ.