ವಿವಿಧ ಮಾದ್ಯಮ ಪ್ರಕಾರಗಳ ಪೈಕಿ ಡಿಜಿಟಲ್ ಮಾಧ್ಯಮ ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು, ಓದಿನತ್ತ ಹೊಸ ತಲೆಮಾರನ್ನೂ ಸೂಜಿಗಲ್ಲಿನಂತೆ ಸೆಳೆಯುತ್ತಿದೆ ಎಂದು ಸ್ಯಾಂಡಲ್‌ವುಡ್ ನಿರ್ದೇಶಕ ಯೋಗರಾಜ್ ಭಟ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಗುರುವಾರ ನೂತನ ವೆಬ್‌ತಾಣ ‘ಕನ್ನಡಪ್ರೆಸ್.ಕಾಂ’ ಅನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ನಗರ-ಪಟ್ಟಣ ಎಂಬ ಎಲ್ಲೆಗಳನ್ನು ಮೀರಿ ಜಗತ್ತಿನಾದ್ಯಂತ ಬೆರಗಾಗುವ ರೀತಿಯಲ್ಲಿ ಡಿಜಿಟಲ್ ಮಾಧ್ಯಮ ವೇಗಗತಿಯಲ್ಲಿ ಬೆಳೆಯುತ್ತಿದೆ. ಇದೇ ವೇಳೆ ಮುದ್ರಣ ಮಾಧ್ಯಮವು ಕಷ್ಟಗಳ ವರ್ತುಲಕ್ಕೆ ಸಿಲುಕಿ ಅಸ್ತಿತ್ವಕ್ಕಾಗಿ ಹೋರಾಟ ನಡೆಸುತ್ತಿರುವುದು ನಿಜಕ್ಕೂ ಬೇಸರದ ಸಂಗತಿ. ನಾವು ತಂತ್ರಜ್ಞಾನಕ್ಕೆ ತಕ್ಕಂತೆ ಬದಲಾಗಲೇಬೇಕಾದ ಅನಿವಾರ್ಯತೆಗೆ ಸಿಲುಕಿದ್ದೇವೆ ಎಂದಿದ್ದಾರೆ.
ಹಿರಿಯ ಪತ್ರಕರ್ತ ಶ್ರೀವತ್ಸ ನಾಡೀಗ್ ಅವರ ಸಂಪಾದಕತ್ವದಲ್ಲಿ ‘ಕನ್ನಡಪ್ರೆಸ್.ಕಾಂ’ ಬಂದಿದೆ. ಅವರ ಜತೆಗೆ ಹಾಗೂ ವಿವಿಧ ಮಾಧ್ಯಮಗಳಲ್ಲಿ ಕೆಲಸ ಮಾಡಿ ಸೈ ಎನಿಸಿಕೊಂಡಿರುವ ನುರಿತ ಪತ್ರಕರ್ತರು ಈ ತಂಡದಲ್ಲಿರುವುದು ಗಮನಾರ್ಹ. ಹೀಗಾಗಿ ‘ಕನ್ನಡಪ್ರೆಸ್.ಕಾಂ’ ವಿನೂತನವಾಗಿ ಮೂಡಿಬರುವುದು ಖಚಿತ ಎಂಬ ವಿಶ್ವಾಸವನ್ನು ಭಟ್ಟರು ವ್ಯಕ್ತಪಡಿಸಿದ್ದಾರೆ.
‘ಮುದ್ರಣದ ವಿಶ್ವಾಸ-ಡಿಜಿಟಲ್‌ನ ವೇಗ’ ಎಂಬುದು ‘ಕನ್ನಡಪ್ರೆಸ್.ಕಾಂ’ನ ಸ್ಲೋಗನ್. ಇದಕ್ಕೆ ತಕ್ಕ ಹಾಗೆಯೇ ಈ ವೆಬ್ ತಾಣವು ಮುದ್ರಣದ ವಿಶ್ವಾಸವನ್ನು ಉಳಿಸಿಕೊಂಡು ತಂತ್ರಜ್ಞಾನದ ವೇಗದಲ್ಲಿ ಬೆಳೆದು ಯಶಸ್ವಿಯಾಗಲಿ ಎಂದು ಯೋಗರಾಜ್ ಭಟ್ಟರು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕನ್ನಡ ಚಿತ್ರರಂಗದ ಖ್ಯಾತ ಸಂಭಾಷಣೆಕಾರ ಮಾಸ್ತಿ ‘ಕನ್ನಡಪ್ರೆಸ್.ಕಾಂ’ಕ್ಕೆ ಶುಭ ಹಾರೈಸಿದರಲ್ಲದೆ, ಅನುಭವೀ ಪತ್ರಕರ್ತರ ತಂಡವನ್ನು ಹೊಂದಿರುವ ಈ ವೆಬ್‌ತಾಣ ಮುಂದಿನ ದಿನಗಳಲ್ಲಿ ಉತ್ತಮ ರೀತಿಯಲ್ಲಿ ಬೆಳೆಯುತ್ತದೆ ಎಂಬ ಅಚಲ ವಿಶ್ವಾಸ ನನಗಿದೆ ಎಂದರು. ನಟ ಜೀವಾ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿ ‘ಕನ್ನಡಪ್ರೆಸ್.ಕಾಂ’ಗೆ ಒಳ್ಳೆಯದಾಗಲಿ ಎಂದು ಹಾರೈಸಿದರು. ಹಿರಿಯ ಪತ್ರಕರ್ತ ಕನ್ನಡಪ್ರೆಸ್.ಕಾಂ ತಂಡದ ಪಿ.ಕೆ. ಚನ್ನಕೃಷ್ಣ ಉಪಸ್ಥಿತರಿದ್ದರು
ಶ್ರೀಯುತ ನಾಡಿಗರಲ್ಲಿರುವ ಕನ್ನಡ ಸಾಹಿತ್ಯದ ಜ್ಞಾನ ಭಂಡಾರವನ್ನು ಮತ್ತು ಅವರ ವಾಕ್ಚಾತುರ್ಯವನ್ನು ನಾನಾಗಲೇ ಸವಿದಿರುವೆ.
ಅವರು ತಮ್ಮ “ಕನ್ನಡ ಪ್ರೆಸ್ “ಮುಖಾಂತರ ‘ಮುದ್ರಣದ ವಿಶ್ವಾಸ-ಡಿಜಿಟಲ್‌ನ ವೇಗ’ ಎಂಬ ಶೀರ್ಷಿಕೆಯಡಿ ಇನ್ನೂ ಆಗಸದೆತ್ತರಕ್ಕೆ ಬೆಳೆಯಲಿ ಎಂದು ಹಾರೈಸುತ್ತೇನೆ
ಕನ್ನಡ ಪ್ರೆಸ್. ಕಾಮ್ ನಲ್ಲಿ ಸುದ್ದಿಗಳನ್ನು ಓದಿದೆ. presentation ಚೆನ್ನಾಗಿ ದ್ದು ಸುಲಲಿತವಾಗಿ ಓದಿಸಿ ಕೊಂಡು ಹೋಗುತ್ತವೆ.ಅತಿರಂಜಿತ ,ಕಲ್ಪಿತ ಸುದ್ದಿಗಳಿಲ್ಲ.ನಿಮ್ಮೆಲ್ಲರ ಪ್ರಯತ್ನಕ್ಕೆ ಶುಭ ಹಾರೈಕೆಗಳು.