ಬೆಂಗಳೂರಿನ ಫೈ ಓವರ್ ವೊಂದಕ್ಕೆ ಸಾವರ್ಕರ್ ಹೆಸರು ಇಡುವ ವಿಷಯ ಅವರನ್ನು ಮತ್ತೆ ನೆನಪಿಸಿಕೊಳ್ಳುವಂತೆ ಮಾಡಿದೆ.
ಸಾವರ್ಕರ್. ಅಂತ 7ನೇ ತರಗತಿಯವರೆಗೆ ಓದಿದ್ದ ಕನ್ನಡ ಮಾಧ್ಯಮದಲ್ಲಾಗಲಿ, Savarkar ಅಂತ ನಂತರ ಪದವಿ ಪೂರ್ವದ ಶಿಕ್ಷಣದ ವರೆಗಿನ ಆಂಗ್ಲ ಮಾಧ್ಯಮದಲ್ಲಾಗಲಿ,ಓದಿದ ಬರೆದ ನೆನಪಂತೂ ನನಗಿಲ್ಲ. ಅಷ್ಟೇ ಅಲ್ಲ ಪಠ್ಯೇತರ ವಿಷಯಗಳಲ್ಲೂ ಆಗ ಈ ಹೆಸರು ನನ್ನ ಕಿವಿಗೆ ಬಿದ್ದಿದ್ದಿಲ್ಲ! ಸ್ವಾತಂತ್ರ್ಯ ಸಂಗ್ರಾಮದ ವಿಷಯದಲ್ಲಿದ್ದ *ಸೌಮ್ಯಗಾಮಿ* ಬಳಗದಲ್ಲಾಗಲಿ, *ಉಗ್ರಗಾಮಿ* ಬಣದಲ್ಲಾಗಲಿ ಈ ಹೆಸರ ಉಲ್ಲೇಖ ಬಂದಿದ್ದಿಲ್ಲ. ಶಾಲೆಗಳಲ್ಲಿ ಕಲಿತ ವಿಷಯಗಳು ಶಾಲೆಯ ಪರೀಕ್ಷೆಗಳಿಗಷ್ಟೇ ಸೀಮಿತ,ಜೀವನದ ಉಪಯೋಗಕ್ಕೆ ಅಲ್ಲ ಎಂದು ಅರಿವಾದ ಮೇಲೆ ತೊಡಗಿಸಿಕೊಂಡ ನನ್ನ ಓದುವ ಹವ್ಯಾಸದಲ್ಲಿ ಅಚಾನಕ್ಕಾಗಿ ಸಿಕ್ಕ ಈ ಹೆಸರು ಇತಿಹಾಸದ ಮತ್ತೊಂದು ಮುಖವನ್ನು ಹೇಳಿತ್ತು.
ಗೋಡ್ಸೆ ಅಂತ ಬರೆಯುವುದೇ ಕಷ್ಟವಾಗಿದ್ದಾಗ,ಈ ಸಾವರ್ಕರ್ ಅನ್ನುವ ಇನ್ನೂ ಕಷ್ಟದ ಪದವು ನಮ್ಮ ಹುಡುಗರಿಗೇಕೆ ಅಂತ ನಮ್ಮ ಪುಸ್ತಕಗಳ ವಿಷಯವನ್ನು ಸಿದ್ದ ಪಡಿಸಿದ್ದ ಪಂಡಿತರಿಗೆ ಅನ್ನಿಸಿತ್ತೇನೋ ಪಾಪ. ಬ್ರಹ್ಮ ಹಣೆಬರಹ ಬರೆಯುತ್ತಾನೆ ಎನ್ನುವುದು ನಿಜವೋ ಸುಳ್ಳೋ ಗೊತ್ತಿಲ್ಲ. ಆದರೆ ಸ್ವಾತಂತ್ರಾನಂತರದ ಇತಿಹಾಸಜ್ಞರು ಮಾತ್ರ ನಮ್ಮ ಮುಂದಿನ ಪೀಳಿಗೆಗಳು ಹೀಗೇ ಇರಬೇಕು ಅಂತ ಹಣೆಬರಹದ ಕೆಲಸಕ್ಕೆ ಕೈ ಹಾಕಿದ್ದು ಮಾತ್ರ ವಿಪರ್ಯಾಸ. ಕಾರಣ 70 ವರ್ಷಗಳ ನಂತರ, ಇತಿಹಾಸ ನಿರ್ಮಿಸುವ ಮಾತಿರಲಿ,ಬದಲಿಸುವ ಮಾತು ಕೇಳಿಬರುತ್ತಿರುವುದು *ಸತ್ಯಕ್ಕೆ ಸ್ವಪ್ರಕಟನೆಯ ಶಕ್ತಿ* ಇದೆ ಎನ್ನುವುದನ್ನು ಸ್ಪಷ್ಟ ಪಡಿಸುತ್ತದೆ. ಸಿಹಿ ಲೇಪಿತ ಸುಳ್ಳು,ಕಹಿಯಾದ ಸತ್ಯಕ್ಕೆ ಎಂದೆಂದಿಗೂ ಸಮವಾಗಲಾರದು ಕೂಡ.
28 ಮೇ 1883 ರಂದು ಮಹಾರಾಷ್ಟ್ರದ ಬಾಗುರ್ ಎಂಬಲ್ಲಿ ಚಿತ್ಪಾವನ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದ ವಿನಾಯಕ ದಾಮೋದರ ಸಾವರ್ಕರ್ ,ಸ್ವಾತಂತ್ರ್ಯವೀರ ಸಾವರ್ಕರ್ ಆಗಿ ಬದಲಾದದ್ದು ರೋಚಕ ಕಥೆ.
ಅದ್ಭುತ ವಾಗ್ಮಿ,ಬರಹಗಾರ ಮತ್ತು ಸಂಘಟಕ. 15ನೇ ವಯಸ್ಸಿಗೇ ತನ್ನ ಸಂಘಟನಾ ಸಾಮರ್ಥ್ಯ ಪ್ರದರ್ಶಿಸಿದ್ಧ ಅಪ್ರತಿಮ ಹೋರಾಟಗಾರ. ಅಂದಿನ ಎಲ್ಲ ಯುವಕರಂತೆ, ತಿಲಕರ ವ್ಯಕ್ತಿತ್ವ ಮತ್ತು ಹೋರಾಟದಿಂದ ಪ್ರಭಾವಿತರಾಗಿ,ಪುಣೆಯ ಫಾರ್ಗುಸನ್ ಕಾಲೇಜಿನಿಂದ BA ಪದವಿ ಪಡೆಯುತ್ತಾರೆ. ಇವರ ವಿಶೇಷ ಏನಂದ್ರೆ,ಅಲ್ಲಿಯವರೆಗಿನ ಮತ್ತು ನಂತರದ ನಾಯಕರುಗಳು ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು ಲಂಡನ್ ಗೆ ಹೋದರೆ,ಇವರು ಮಾತ್ರ ಬ್ರಿಟಿಷರ ಸಾಮರ್ಥ್ಯವನ್ನು ಅವರ ನೆಲದಲ್ಲೇ ಅಳೆದು,ಸಾಧ್ಯವಾದರೆ ಅಲ್ಲೇ ಅವರನ್ನು ಕಟ್ಟಿ ಹಾಕುವ ಪ್ರಯತ್ನವಾಗಿ ಹೋಗ್ತಾರೆ.
ನಮ್ಮಲ್ಲಿ ಹುಲಿಯನ್ನು ಅದರ ಗುಹೆಯಲ್ಲೇ ಬೇಟೆ ಆಡುವ ಶೂರತ್ವ ಅಂತ ಇದೆಯಲ್ಲ,ಅದನ್ನು ಅಕ್ಷರಶಃ ತಮ್ಮ ಜೀವನದಲ್ಲಿ ತೊಡಗಿಸಿಕೊಂಡವರು. ಇವರ ಹೋರಾಟಗಳ ಝಲಕ್ ಗೊತ್ತಾಗಬೇಕಾದ್ರೆ, ಹಡಗಿನಲ್ಲಿ ಬ್ರಿಟಿಷ್ ಕಾವಲಿನಿಂದ ತಪ್ಪಿಸಿಕೊಂಡು,ಸಮುದ್ರದಲ್ಲಿ ಧುಮುಕಿ,ಈಸುತ್ತ ದಡ ಸೇರಿದ್ದ ಪ್ರಸಂಗ ಮತ್ತು ಅಂಡಮಾನ್ ಜೈಲಿನ ಕಲಾಪಾನಿ ಸೆರೆಯಲ್ಲಿ ತಮ್ಮನ್ನು ತಾವು ಅಲ್ಲಿನ ಸಹಪಾಠಿಗಳನ್ನು ಸಂಘಟಿಸುವಲ್ಲಿ ತೊಡಗಿಸಿಕೊಳ್ಳುವ ರೀತಿಯಲ್ಲಿ ನೋಡಬೇಕು. ಈಗಿನ ರೀತಿ ಆಗ ಹಿಂದೂ,ಮುಸ್ಲಿಂ ಕೈದಿಗಳು ಇರಲಿಲ್ಲ,ಬದಲಾಗಿ ಭಾರತೀಯ ಕೈದಿಗಳು ಮಾತ್ರ ಇದ್ದದ್ದು ತುಂಬಾ ಹೆಮ್ಮೆಯ ವಿಚಾರ. ಅವರ ವಿಚಾರವಾಗಿ ಈಗ ಅವರ ಎಲ್ಲ ಪುಸ್ತಕಗಳೂ ಲಭ್ಯ.ಆವೇ ವಿಚಾರಗಳನ್ನು ಹೇಳಲು ಇಷ್ಟ ಇಲ್ಲ. ನನಗೆ ಅವರು ಆಕರ್ಷಿಸಿದ್ದೇ, ಸುತ್ತ ಇರುವ ವ್ಯವಸ್ಥೆಯಲ್ಲೇ ತಮಗೆ ಬೇಕಾದ ಪರಿಸ್ಥಿತಿಯನ್ನು ನಿರ್ಮಿಸಿ,ಕಾರ್ಯ ಸಾಧಿಸುತ್ತಿದ್ದ ಬಗೆ.
ಅಲ್ಲಿಯವರೆಗೆ ನಮ್ಮಲ್ಲಿ ಇದ್ದ ಪುರಾಣ,ಪುಣ್ಯಕಥೆಗಳು ಸ್ವಾತಂತ್ರ ಹೋರಾಟಕ್ಕೆ ಉಪಯೋಗವಿಲ್ಲ ಅಂತ ಅರಿತು, ಭಾರತೀಯರ ಪ್ರೇರಣಾ ಶಕ್ತಿಯನ್ನು ಜಾಗೃತಿಗೊಳಿಸಲು ಅವರು ಆಯ್ಕೆ ಮಾಡಿಕೊಂಡದ್ದು 1857 ರ *ಸಿಪಾಯಿ ದಂಗೆ* ಯನ್ನು. ಅಲ್ಲಿಗಾಗಲೇ ಬ್ರಿಟೀಷರು ಭಾರತೀಯರನ್ನು,ಹಿಂದೂ,ಮುಸ್ಲಿಂ ಅಂತ ಭಾಗ ಮಾಡುವ ಪ್ರಯತ್ನಕ್ಕೆ ಕೈ ಹಾಕಿ,ಸಫಲರಾಗಿ,ಇದು ಒಳ್ಳೆ ಫಲ ಕೊಡುವ ಮರವಾಗುತ್ತೆ ಅಂದು ತಿಳಿದು,ಹೆಜ್ಜೆ,ಹೆಜ್ಜೆಗೂ ಈ ದ್ವೇಷದ ಕಿಡಿಯನ್ನು ಉದ್ದೀಪನಗೊಳಿಸುತ್ತ,ತಮ್ಮ ಕೆಲಸಗಳನ್ನು ಸಾಧಿಸುತ್ತಿದ್ದ ಕಾಲ. ಮಂಗಳ ಪಾಂಡೆ ಎನ್ನುವ ವೀರನ ಸಾಹಸವನ್ನು ತಳ್ಳಿ ಹಾಕಿ,ಅದು ತೋಪುಗಳಿಗೆ ದನದ ಕೊಬ್ಬು,ಹಂದಿಯ ಕೊಬ್ಬು ಹಚ್ಚುವ ವಿಷಯಕ್ಕೆ ಆದ ಚಿಕ್ಕ ಗಲಾಟೆ ಅಂತ ತೇಪೆ ಸವರಿ ಬಿಸಾಡಿದ್ದ ಘಟನೆಯನ್ನು ಮೊದಲ ಸ್ವಾತಂತ್ರ್ಯ ಸಂಗ್ರಾಮ ಅಂತ ಹೆಸರಿಟ್ಟು, ಮುಂಬರುವ ಎಲ್ಲ ಸ್ವತಂತ್ರ ವೀರರಿಗೆ ಪ್ರೇರಣೆಯಾಗುವ ರೀತಿಯಲ್ಲಿ ಅದನ್ನು ಬಿಂಬಿಸುತ್ತಾರೆ ನೋಡಿ,ಅದು ನನ್ನನ್ನು ಬಹುವಾಗಿ ಆಕರ್ಷಿಸಿತು. ಇದೊಂದೇ ವಿಷಯ ಅಂದಿನ ಬ್ರಿಟಿಷ್ ಸರ್ಕಾರದ ಗರ್ವವನ್ನು ಎಷ್ಟು ಘಾಸಿ ಗೊಳಿಸಿತ್ತು ಎಂದರೆ, ಎಲ್ಲಿ ಈ ಪುಸ್ತಕ ಪಾಶ್ಚಿಮಾತ್ಯ ದೇಶಗಳಲ್ಲಿ ನಮ್ಮ ಮರ್ಯಾದೆಯನ್ನು ತೆಗೆದು ಬಿಡುತ್ತೋ ಅಂತ ಭಯವಾಗಿ,ಅದರ ಮುದ್ರಣ ಹೊರಗೆ ಬರದ ಹಾಗೆ ಹರ ಸಾಹಸ ಮಾಡುತ್ತೆ. .
ವೈರಿಯ ಬಲಹೀನತೆಯನ್ನು ಕಂಡುಕೊಳ್ಳುವುದು,ಅರ್ಧ ಯುದ್ಧವನ್ನು ಗೆಲ್ಲಿಸಿಕೊಡುತ್ತೆ ಅನ್ನೋ ಅಂಶವನ್ನು ಬ್ರಿಟೀಷರ ಮೇಲೆ ಬಹು ಯಶಸ್ವಿಯಾಗಿ ಬಳಸಿದ್ದರು. ಭಗತ್ ಸಿಂಗ್ ನಿಂದ ಹಿಡಿದು,ಬೋಸರು,ಯಾಕೆ ಇಂದಿರಾಗಾಂಧಿಯೂ ಅವರ ಸ್ವತಂತ್ರ ಪ್ರೇಮವನ್ನು,ಅವರ ಅಪ್ರತಿಮ ಹೋರಾಟದ ರೂಪ ರೇಖೆಗಳನ್ನು ಕೊಂಡಾಡಿರುವುದು ಇನ್ನು ಜೀವಂತವಾಗಿ ಇತಿಹಾಸದಲ್ಲಿ ಇರುವಾಗ,ಸ್ವಾತಂತ್ರಾನಂತರದ ಭಾರತಕ್ಕೆ ಅವರು ಅಸ್ಪೃಶ್ಯ ರಾದದ್ದು ದುರಂತ.
ಎರಡು ಜೀವಿತಾವಧಿಯ,50 ವರ್ಷದ ಅತ್ಯಂತ ಕಠಿಣ ಕಾರಾಗೃಹ ಎಂದೇ ಬಿಂಬಿತವಾಗಿದ್ದ ಕಾಲಾಪಾನಿ ಶಿಕ್ಷೆಯನ್ನು ಬ್ರಿಟಿಷ್ ಸರ್ಕಾರ ಅವರಿಗೆ ವಿಧಿಸಿತ್ತು ಎಂದರೆ,ಯಾರಿಗಾದ್ರು ಅರ್ಥವಾಗುತ್ತೆ ಅವರ ದೇಶಪ್ರೇಮ,ಸ್ವತಂತ್ರ ಪ್ರೇಮ ಎಂತಹದು ಎಂದು. ಇಂತಹ ಕಾಲಪಾನಿಯಿಂದ 14 ವರ್ಷಕ್ಕೇ ಹೊರಬರುವ ಪ್ರಕ್ರಿಯೆಯಲ್ಲಿ ಅಂದಿನ ಗಾಂಧೀ ಕಾಂಗ್ರೆಸ್ ಕೂಡ ನೆರವು ನೀಡಿತ್ತು. ಅಂತಹ ಸಂಧರ್ಭದಲ್ಲಿ ಬ್ರಿಟಿಷರ ಯಾವುದೋ ಷರತ್ತುಗಳ ಪೇಪರ್ ಗಳಿಗೆ ಸಹಿ ಹಾಕಿದ್ದ ವಿಷಯವನ್ನೇ ಇಂದಿನವರು,ಅವರಿಗೆ ಬ್ರಿಟಿಷರಿಗೆ ಶರಣಾದವರು, ಕ್ಷಮೆಭಿಕ್ಷೆ ಕೇಳಿದವರು ಅಂತ ಅಂತಾರೆ ನೋಡ್ರಿ,ಅವರನ್ನು ನೋಡಿ ಅಯ್ಯೋ ಮುರ್ಖರಾ ಅಂತ ಕನಿಕರ ಆಗುತ್ತೆ.
ಸುಸಜ್ಜಿತ ಕೊಠಡಿಗಳಲ್ಲಿ,ಅವರಿಗೆ ಬೇಕಾದ ಸವಲತ್ತುಗಳೊಂದಿಗೆ,ಏನಾದ್ರು ಆತ್ಮಕಥೆ,ಮಕ್ಕಳಿಗೆ letters ಬರಿತಿವಿ ಅಂದ್ರೆ,pen, paper ಕೊಟ್ಟು ಬರೆಯಲು ಅನುವು ಮಾಡಿಕೊಟ್ಟಿದ್ದಂತಹ ಜೈಲಲ್ಲ,ಸಾವರ್ಕರ್ ಅನುಭವಿಸಿದ್ದು. ಅಲ್ಲಿ ಅವರು ಎತ್ತಿನ ಹಾಗೆ ಗಾಣ ತಿರುಗಿಸಿ,ಎಣ್ಣೆ ತೆಗೆದಿದ್ದಾರೆ. ಹೊಲಸು ವಾಸನೆಯಿಂದ,ಸೊಳ್ಳೆಗಳಿಂದ ತುಂಬಿದ್ದ ಕೊಠಡಿಗಳಲ್ಲಿ ವರ್ಷಗಟ್ಟಲೆ,ಕೈಗೆ ಸಿಕ್ಕ ವಸ್ತುಗಳಿಂದ,ಗೋಡೆಯ ಮೇಲೆ,ಸ್ವತಂತ್ರ ಕ್ರಾಂತಿಯ ಪದ್ಯಗಳನ್ನು ಬರೆದಿದ್ದಾರೆ. ಅವರ ಇವರ ಜೈಲುವಾಸಗಳನ್ನು ಸಮೀಕರಿಸಿ ಮಾತಾಡುವುದೇ ನಾಚಿಕೆ ಇಲ್ಲದ ವಿಚಾರ ಬಿಡಿ.
23 ಫೆಬ್ರವರಿ 1966 ರಂದು ಸ್ವತಂತ್ರ ಭಾರತದಲ್ಲಿ ಸಾವರ್ಕರ್ ಅವರ ನಿಧನ ಆಗುತ್ತೆ..ಸಾಯುವಾಗ ಸಾವರ್ಕರ್ ಸ್ವತಂತ್ರ ಭಾರತದಲ್ಲಿ ಬಹುವಾಗಿ ನೊಂದಿದ್ದರು.ಪ್ರತಿಯೊಬ್ಬ ಭಾರತೀಯನೂ ತಲೆತಗ್ಗಿಸುವ ವಿಷಯ ಅದು.ವೀರನನ್ನು ರಣ ಭೂಮಿಯಲ್ಲಿ ಸಾಯಿಸಬೇಕೇ ಹೊರತು,ಹೇಡಿ ಅಂತ ಬದುಕಿಸುವ ಇತಿಹಾಸ,ಬಹುಶಃ ಭಾರತಲ್ಲೇ ಮೊದಲೇನೋ….ನನ್ನ ಧಿಕ್ಕಾರವಿರಲಿ. …ಇಡೀ ಬ್ರಿಟಿಷ್ ಪಡೆಗೆ ಸಿಂಹ ಸ್ವಪ್ನವಾಗಿದ್ದ *ವೀರ ಸಾವರ್ಕರ್* ಸ್ವತಂತ್ರ ಭಾರತದಲ್ಲಿ ತಮ್ಮ ಮನೆ ಮೇಲೆ ಬೀಳುತ್ತಿದ್ದ ಕ್ಷುಲ್ಲಕ,ರೋಗಗ್ರಸ್ಥ ಮನಸ್ವಿಗಳ ಕಲ್ಲುಗಳಿಂದ ರಕ್ಷಿಸಿಕೊಳ್ಳಲು ತಮ್ಮ ಕುಟುಂಬ ಸಮೇತರಾಗಿ ಮನೆಯ ಮೂಲೆಯಲ್ಲಿ ಅವಿತುಕೊಳ್ಳುವ ಸಾವರ್ಕರ್ ನನ್ನನ್ನು ಬಹುವಾಗಿ ಇಂದಿಗೂ ಕಾಡುತ್ತಾರೆ.ಮುಂದಿನ ಪೀಳಿಗೆಗಳಿಗಾದರೂ ನಮ್ಮ ಭವ್ಯ(?) ಇತಿಹಾಸ ಗೊತ್ತಾಗಬೇಕು ದೇಶ ಭಕ್ತರ ವ್ಯಕ್ತಿತ್ವವನ್ನು ಕ್ಷುಲ್ಲಕ ರಾಜಕಾರಣಕ್ಕೆ ಸಂಕುಚಿತಗೊಳಿಸುವ ವ್ಯವಸ್ಥೆ ನಿಲ್ಲಬೇಕು. ಅಧಿಕಾರವೇ ಶಾಶ್ವತವಲ್ಲ ಅಂದ ಮೇಲೆ,ಆ ಅಧಿಕಾರದಿಂದ ಬರೆದ ಇತಿಹಾಸ ಎಂದಿಗೂ ಶಾಶ್ವತವಾಗಿರಲು ಸಾಧ್ಯವೇ ಇಲ್ಲ.
.
ಪ್ರಬುದ್ದ ಲೇಖನ