ಕೋವಿಡ್-19 ಈಗಾಗಲೇ ಸಾಕಷ್ಟು ಹಾವಳಿ ಎಬ್ಬಿಸಿದೆ. ಆದರೆ ಇನ್ನಷ್ಟು ದುರ್ದಿನಗಳು ಕಾಯುತ್ತಿವೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಕೋಳಿ ಸಾಕಾಣಿಕೆಯಲ್ಲಿ ಎಚ್ಚರಿಕೆ ವಹಿಸದೆ ಈಗಿರುವಂತೆ ಇಕ್ಕಟ್ಟಾದ ಜಾಗದಲ್ಲಿ ಅವುಗಳನ್ನು ಸಾಕಿದರೆ ಮತ್ತೊಂದು ಡೆಡ್ಲಿ ವೈರಸ್ ಕಾಡುವ ಸಮಯ ಬರಲಿದೆ. ಮುಖ್ಯವಾಗಿ ಕೋಳಿಗಳು ಹೊರ ಸೂಸುವ ಭಾರೀ ಪ್ರಮಾಣದ ಅಮೋನಿಯಾ ಇದಕ್ಕೆ ಕಾರಣ ಎನ್ನಲಾಗಿದೆ.
How Not To Die ಎಂಬ ಜನಪ್ರಿಯ ಪುಸ್ತಕದ ಲೇಖಕ ಡಾ. ಮೈಕೆಲ್ ಗ್ರೆಗರ್ ಎಂಬ ವಿಜ್ಞಾನಿ ತಮ್ಮ ಹೊಸ ಪುಸ್ತಕ How To Survive A Pandemic ಎಂಬ ಪುಸ್ತಕದಲ್ಲಿ ಈ ಸಂಗತಿಯನ್ನು ಬೆಳಕಿಗೆ ತಂದಿದ್ದಾರೆ.ಅವರ ಪ್ರಕಾರ ಈ ವಿನಾಶಕಾರಿ ವೈರಸ್ (ಅಪೋಕ್ಯಾಲಿಪ್ಟಿಕ್), ಕೋವಿಡ್ -19ನಿಂದಲೂ ಅನಾಹುತಕಾರಿಯಾಗಿದ್ದು, ವಿಶ್ವದ ಒಟ್ಟು ಜನಸಂಖ್ಯೆಯ ಅರ್ಧದಷ್ಟು ಜನರನ್ನು ಸಾವಿನ ದವಡೆಗೆ ನೂಕು ಸಾಮರ್ಥ್ಯ ಹೊಂದಿದೆ.
ಸಸ್ಯಜನ್ಯ ಆಹಾರದ ಅತಿ ದೊಡ್ಡ ಪ್ರತಿಪಾದಕರಾಗಿರುವ ಗ್ರೆಗರ್, ಕೋಳಿ ಸಾಕಾಣಿಕೆಯನ್ನು ಅವಲಂಬಿಸಿ ಅದನ್ನು ತಿನ್ನುವವರೆಗೆ ಸಾಂಕ್ರಾಮಿಕ ರೋಗಗಳು ಮುಂದುವರಿಯಲಿವೆ ಎಂದು ಪ್ರತಿಪಾದಿಸಿದ್ದಾರೆ. ಆಹಾರ ಸೇರಿದಂತೆ ಪ್ರಾಣಿಗಳ ಜತೆ ನಿಕಟ ಸಂಪರ್ಕವನ್ನು ಮಾನವರು ಹೊಂದಿರುವರೆಗೆ ಸಾಂಕ್ರಾಮಿಕ ರೋಗಗಳ ಭೀತಿ ತಪ್ಪಿದ್ದಲ್ಲ. ನೋವೆಲ್ ಕೊರೊನಾ ವೈರಸ್ ಕೂಡ ಇಂತಹುದೇ ಸಮಸ್ಯೆಗೆ ಮೂಲ ಎಂದು ಹೇಳಿದ್ದಾರೆ. ಸದ್ಯದ ಮಟ್ಟಿಗೆ ಇದು ಬಾವಲಿಗಳಿಂದಲೇ ಹರಡಿದೆ ಎಂದು ಹೇಳಲಾಗುತ್ತಿದ್ದು, ಈ ಬಗ್ಗೆ ಸ್ಪಷ್ಟನೆ ಇನ್ನಷ್ಟೇ ಸಿಗಬೇಕಾಗಿದೆ ಎಂದಿದ್ದಾರೆ.
ಹಕ್ಕಿಜ್ವರವು 1997ರಲ್ಲಿ ಹಾಂಗ್ ಕಾಂಗ್ ನಲ್ಲಿ ಕಾಣಿಕೊಂಡು ಲಕ್ಷಾಂತರ ಕೋಳಿಗಳನ್ನು ಕೊಲ್ಲಬೇಕಾಯಿತು. ಆದರೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಅದು 2003 ಮತ್ತು 2009ರಲ್ಲಿ ಮತ್ತೆ ಚೀನಾದ ಹೊರಗಡೆ ರುದ್ರ ತಾಂಡವ ಆರಂಭಿಸಿತ್ತು ಎಂದು ನೆನಪಿಸಿರುವ ಅವರು, ಹೀಗಾಗಿ ಈ ವೈರಸ್ ಸಮಸ್ಯೆ ಸಂಪೂರ್ಣವಾಗಿ ಮೂಲೋತ್ಪಾಟನೆ ಆಗಿಲ್ಲ ಎಂಬುದು ಇದರಿಂದ ತಿಳಿಯುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಹೀಗಾಗಿ ಇಂತಹ ಅನಾಹುತವನ್ನು ಭವಿಷ್ಯದಲ್ಲಿ ತಪ್ಪಿಸುವ ನಿಟ್ಟಿನಲ್ಲಿ ಕೋಳಿ ಸಾಕಾಣಿಕೆ ವಿಧಾನವನ್ನು ಪರಿಷ್ಕರಿಸಬೇಕು. ಬಹುತೇಕ ಕೋಳಿ ಸಾಕಾಣಿಕೆ ಕೇಂದ್ರಗಳಲ್ಲಿ ಇಕ್ಕಟ್ಟಾದ ಜಾಗದಲ್ಲಿ ಸಾವಿರಾರು ಕೋಳಿಯನ್ನು ಸಾಕಲಾಗುತ್ತದೆ. ಅವುಗಳಿಗೆ ರೆಕ್ಕೆ ಜಾಡಿಸಲೂ ಜಾಗ ಇಲ್ಲದಂತಹ ಪರಿಸ್ಥಿತಿ ಇದೆ. ಇದರಿಂದ ಅವುಗಳ ದೇಹದಿಂದ ಅಪಾರ ಪ್ರಮಾಣದಲ್ಲಿ ಅಮೋನಿಯಾ ಹೊರಸೂಸಲ್ಪಡುತ್ತದೆ. ಇದನ್ನು ತಪ್ಪಿಸುವಂತಹ ವ್ಯವಸ್ಥೆಯಾದರೆ ಮಾತ್ರ ಭವಿಷ್ಯದಲ್ಲಿ ಮತ್ತೊಂದು ಮಾರಣಾಂತಿಕ ಸಾಂಕ್ರಾಮಿಕ ರೋಗ ಹರಡುವುದನ್ನು ತಪ್ಪಿಸಬಹುದು ಎಂದು ಗ್ರೆಗರ್ ಹೇಳಿದ್ದಾರೆ.