ಈ ಒಂದು ವರ್ಷದ ಮೋದಿ ಸರಕಾರದ ಸಾಧನೆಯ ಜತೆಗೆ ಪ್ರತಿಪಕ್ಷ ನಿರ್ವಹಿಸಿದ ಜವಾಬ್ದಾರಿ ಏನು ಎಂದು ಪ್ರಶ್ನಿಸ ಹೊರಟವರಿಗೆ ಹಾಸ್ಯಾಸ್ಪದ ಸಾಧನೆಗಳೇ ಕಾಣಿಸುತ್ತವೆ.
ಮೋದಿ ೧.೦ ಸರಕಾರದ ಅವಯಲ್ಲಿ ಒಂದಷ್ಟು ಗೌರವಯುತವಾಗಿ ಕಾಣಿಸುತ್ತಿದ್ದ ಏಕೈಕ ದೊಡ್ಡ ಪ್ರತಿಪಕ್ಷ ಕಾಂಗ್ರೆಸ್, ೨.೦ ಅವಯಲ್ಲಿ ಎಲ್ಲಾ ಸಾಮರ್ಥ್ಯ ಕಳೆದುಕೊಂಡು ಪಾತಾಳ ತಲುಪಿದೆ.
ಕಮಲದ ಆರ್ಭಟದ ಮುಂದೆ ಸತತ ಎರಡನೇ ಬಾರಿ ಪ್ರತಿಪಕ್ಷ ಸ್ಥಾನ ಗಿಟ್ಟಿಸುವ ಯೋಗ್ಯತೆಯನ್ನೂ ಕಳೆದುಕೊಂಡ ನೂರು ವರ್ಷ ಇತಿಹಾಸ ಉಳ್ಳ ಕಾಂಗ್ರೆಸ್ ಈಗ ದಿಕ್ಕೆಟ್ಟು ಹೋಗಿದೆ. ಒಂದು ರಾಜಕೀಯ ಪಕ್ಷಕ್ಕೆ ಇರಬೇಕಾದ ಮೂಲ ಸಂಘಟನಾ ಸ್ವರೂಪವನ್ನೇ ಕಳೆದುಕೊಂಡು ಚಿಂದಿಯಾಗಿರುವ ಹಸ್ತಪಾಳಯವು ಮೋದಿ ನಿರ್ಮಿಸಿದ ಉಕ್ಕಿನ ಕೋಟೆ ಮುಂದೆ ಹರಿದ ಬಟ್ಟೆಯ ತುಂಡಿನಂತೆ ಕಾಣಿಸುತ್ತಿದೆ. ತನ್ನ ಸ್ಥಿತಿಯೇ ನೆಟ್ಟಗಿಲ್ಲದಾಗ ಸರಕಾರದ ತಪ್ಪುಗಳನ್ನು ತಿದ್ದುವ ಜವಾಬ್ದಾರಿಯನ್ನು ಅದು ನಿಭಾಯಿಸುವುದಾದರೂ ಹೇಗೆ? ಹೌದು, ಈ ಒಂದು ವರ್ಷದಲ್ಲಿ ರಾಹುಲ್ ಕಾಂಗ್ರೆಸ್, ಸರಕಾರದ ವೈಫಲ್ಯಗಳನ್ನು ಟೀಕಿಸಿ ಸುದ್ದಿಯಾದದ್ದಕ್ಕಿಂತ ಹೆಚ್ಚು ರಾಹುಲ್ ಅರೆಬೆಂದ ಮಾತುಗಳಿಂದ ಅಪಹಾಸ್ಯಕ್ಕೆ ಗುರಿಯಾದದ್ದೇ ಹೆಚ್ಚು.
ಪಕ್ಷ ಸೋತಾಗ ದಂಡನಾಯಕ ಎದೆ ಎತ್ತಿ ನಿಲ್ಲಬೇಕು. ಅಂದಾಗಲೇ ಆತನನ್ನು ನೆಚ್ಚಿದ ಸೇನಾನಿಗಳಿಗೆ ಹೋರಾಟದ ಮರು ಹುಮ್ಮಸ್ಸು ಹೊರ ಹೊಮ್ಮಲು ಸಾಧ್ಯ. ನಮ್ಮ ಇತಿಹಾಸದುದ್ದಕ್ಕೂ ಇಂತಹ ಸೋಲಿನ ಸಾವಿರಾರು ಸಾಹಸ ಕಥೆಗಳಿವೆ. ಆದರೆ ಅವನ್ನು ಓದುವ ಅಥವಾ ಕೇಳಿ ಗ್ರಹಿಸುವ ಕನಿಷ್ಠ ತಾಳ್ಮೆಯೂ ಇಲ್ಲದ ರಾಹುಲ್ ಮಾಡಿದ್ದೇನು? ೫೨ ಎಂಪಿ ಸ್ಥಾನ ಗೆಲ್ಲುವಷ್ಟರಲ್ಲಿ ನಿಟ್ಟುಸಿರು ಚೆಲ್ಲಿದ ಕಾಂಗ್ರೆಸ್, ಬಿಜೆಪಿಯ ದೈತ್ಯ ಬಲದ ಮುಂದೆ ಅಕ್ಷರಶಃ ಮಂಡಿಯೂರಿತು. ಆಗ ಪಕ್ಷದ ದಂಡನಾಯಕ ಎನಿಸಿದ್ದ ರಾಹುಲ್ ಮಲಗಿದರು. ಹಟ ಹಿಡಿದು ಅಧ್ಯಕ್ಷ ಸ್ಥಾನ ತೊರೆದು ಪಲಾಯನ ಮಾಡಿದರು. ಕಾರ್ಯಕರ್ತರು ಕಂಗಾಲಾದರು. ಮುಂಚೂಣಿ ನಾಯಕತ್ವವೂ ದಿಕ್ಕೆಟ್ಟಿತು. ಅಲ್ಲಿಂದ ಇಲ್ಲಿವರೆಗೆ ಕಾಂಗ್ರೆಸ್ ಒಂದು ಜವಾಬ್ದಾರಿಯುತ ಪ್ರತಿಪಕ್ಷವಾಗಿ ಉಳಿಯಲೇ ಇಲ್ಲ. ಅನಾರೋಗ್ಯದ ನಡುವೆ ಅನಿವಾರ್ಯವಾಗಿ ಸೋನಿಯಾ ಗಾಂಧೀಯೇ ಮರಳಿ ಅಧ್ಯಕ್ಷ ಜವಾಬ್ದಾರಿಗೆ ಹೆಗಲು ನೀಡಿದರಾದರೂ ಉತ್ಸಾಹ ಉಳಿಯಲಿಲ್ಲ. ಇದು ಮೋದಿಯ ಅವರ ಏಕಚಕ್ರಾಧಿಪತ್ಯವನ್ನು ಇನ್ನಷ್ಟು ಬಲಗೊಳಿಸಿತು.
ಗಾಳಿ ಬೀಸಿದತ್ತ ಪಯಣ: ನಾವಿಕನೇ ಇಲ್ಲದಾದಾಗ ನೌಕೆ ಸಾಗುವ ದಿಕ್ಕು ನಿರ್ಧಾರವಾದೀತಾದರೂ ಹೇಗೆ? ಕಾಂಗ್ರೆಸ್‌ನಲ್ಲಿ ಆದದ್ದೂ ಇದೇ ಯಡವಟ್ಟು. ಕಾಶ್ಮೀರ ಪ್ರತ್ಯೇಕತೆಯ ೩೭೦ನೇ ವಿ ರದ್ದು, ಪೌರತ್ವ ತಿದ್ದುಪಡಿ ಕಾಯಿದೆ, ಭಯೋತ್ಪಾದನೆ ನಿಗ್ರಹ ಕಾಯಿದೆ ತಿದ್ದುಪಡಿಯಂತಹ ಮಹತ್ವದ ವಿಷಯಗಳು ಚರ್ಚೆಯ ಮುಂಚೂಣಿಗೆ ಬಂದಾಗ ಆ ಬಗ್ಗೆ ಮಾತಾಡಲು ಕಾಂಗ್ರೆಸ್ ಬಳಿ ಸ್ಪಷ್ಟ ನಿಲುವುಗಳೇ ಇರಲಿಲ್ಲ. ತಳಮಟ್ಟದ ಕಾರ್ಯಕರ್ತನಿಂದ ಹಿಡಿದು ಹೈಕಮಾಂಡ್‌ವರೆಗೆ ತಲೆಗೊಂದು ಹೇಳಿಕೆ ನೀಡಿ, ಗೊಂದಲಕ್ಕೆ ಕೆಡವಿದರು. ಆಗಲೂ ರಾಹುಲ್ ಪ್ರಬುದ್ಧವಾಗಿ ಮಾತಾಡಲಿಲ್ಲ. ಎಳೆಯ ಮಕ್ಕಳ ರೀತಿ ರಚ್ಚೆಹಿಡಿದು, ಮತದಾರರ ವಿರುದ್ಧ ಮುನಿಸು ತೋರಿದರು. ಎಲ್ಲೋ ಮಾಧ್ಯಮದವರಿಗೆ ಎದುರಾದಾಗ ಯದ್ವಾತದ್ವ ಮಾತಾಡಿ ಆನ್‌ಲೈನ್ ಜೋಕ್‌ಗಳಿಗೆ ಕಾರಣರಾದರು.
ಇಷ್ಟೆಲ್ಲ ಅಲ್ಲೋಲಕಲ್ಲೋಲದ ನಡುವೆಯೂ ಪಕ್ಷದ ಹಿರಿತಲೆಗಳು ತಾವು ಸೇಫ್ ಆದರೆ ಸಾಕು ಎನ್ನುವ ಸ್ವಾರ್ಥದ ನಿಲುವಿಗೆ ಅಂಟಿಕೊಂಡರು. ಎಲ್ಲೊ ಒಂದಿಷ್ಟು ಬಾಯಿ ಬಿಚ್ಚಿದ ಪಿ.ಚಿದಂಬರಂ ಅವರಂಥವರು ಹಳೆಯ ಹಗರಣಗಳ ಆರೋಪದಡಿ ಜೈಲುಪಾಲಾದರು. ಇದರಿಂದ ಇಡೀ ಒಂದು ವರ್ಷ ದೇಶವು ಪ್ರತಿಪಕ್ಷಗಳಿಲ್ಲದೇ ಒಂಟಿಗಣ್ಣಿನ ಯಾನ ಮಾಡಿದೆ. ಮೋದಿ ಸರಕಾರ ತಾನು ನಡೆದದ್ದೇ ದಾರಿ ಎನ್ನುವ ಮದಗಜದ ದೌಲತ್ತು ಪ್ರದರ್ಶನ ಮಾಡಿದೆ. ಕೊರೊನಾ ಈಗ ಸರಕಾರದ ಕಣ್ಣು ತೆರೆಸಿದೆ ನಿಜ, ಆದರೆ ಅದನ್ನು ಇನ್ನಷ್ಟು ತಿವಿದು ಸರಿದಾರಿಯಲ್ಲಿ ನಡೆಸಬೇಕಾದ ಪ್ರತಿಪಕ್ಷ ಈಗಲೂ ಇಲ್ಲದಿರುವುದು ಜನರಲ್ಲಿ ನಿರಾಶೆ ಮೂಡಿಸಿದೆ. ರಾಹುಲ್ ಟ್ರೋಲಿಗರ ಬಾಯಿಗೆ ಪದೇ ಪದೇ ಆಹಾರವಾಗುವ ಅವತಾರದಿಂದ ಹೊರಬಾರದೇ ಹೋದರೆ, ಇನ್ನೂ ನಾಲ್ಕು ವರ್ಷದ ನಂತರವೂ ಆಬ್ ಕೀ ಬಾರ್ ಮೋದಿ ಸರ್ಕಾರ್ ಗ್ಯಾರಂಟಿ.