ನಮಗೆ ಅರಿವಿಲ್ಲದಂತೆ ಭೂಮಿಯ ವಾತಾವರಣದಲ್ಲಿ ಸಾಕಷ್ಟು ಬದಲಾವಣೆಗಳು ಅಥವಾ ಸ್ಥಿತ್ಯಂತರಗಳು ಆಗುತ್ತಲೇ ಇವೆ. ಇವುಗಳ ಪೈಕಿ ಇತ್ತೀಚಿನ ದಿನಗಳಲ್ಲಿ ಆಯಸ್ಕಾಂತೀಯ ಕ್ಷೇತ್ರದಲ್ಲಿ (ಮೆಗ್ನೆಟಿಕ್ ಕ್ಷೇತ್ರ) ಆಗಿರುವ ಬದಲಾವಣೆ ಹೆಚ್ಚು ಆತಂಕ ಮೂಡಿಸಲು ಆರಂಭಿಸಿದೆ.
ಮ್ಯಾಗ್ನೆಟಿಕ್ ಫೀಲ್ಡ್ ಅಥವಾ ಅಯಸ್ಕಾಂತೀಯ ಕ್ಷೇತ್ರದ ಕವಚವು ಭೂಮಿಯನ್ನು ಸೂರ್ಯನಿಂದ ಹೊರ ಬರುವ ನಾನಾ ರೀತಿಯ ಅಪಾಯಕಾರಿಯಾದ ವಿಕಿರಣಗಳಿಂದ ಕಾಪಾಡುತ್ತವೆ. ಪ್ರಾಣಿ-ಪಕ್ಷಿಗಳಿಂದ ಇವು ರಕ್ಷಣೆ ನೀಡುತ್ತಿದ್ದು, ಇತ್ತೀಚಿನ ಅಧ್ಯಯನ ವರದಿಗಳ ಪ್ರಕಾರ ನಮ್ಮ ಜೀವನಾಡಿಯೇ ಆಗಿರುವ ಸ್ಮಾರ್ಟ್‌ಫೋನ್ ಗಳ ಮೇಲೂ ಇದು ವ್ಯತಿರಿಕ್ತ ಪ್ರಭಾವ ಬೀರುವ ಅಂಶ ಈಗ ಬೆಳಕಿಗೆ ಬಂದಿದೆ.
ಆಫ್ರಿಕಾ ಮತ್ತು ದಕ್ಷಿಣ ಅಮೆರಿಕಾ ಖಂಡಗಳ ನಡುವೆ ಭೂಮಿಯ ಆಯಸ್ಕಾಂತೀಯ ಕ್ಷೇತ್ರವು ದುರ್ಬಲಗೊಳ್ಳುತ್ತಿದ್ದು, ಇದು ಕೃತಕ ಉಪಗ್ರಹ ಮತ್ತು ಬಾಹ್ಯಾಕಾಶ ನೌಕೆಗಳ ಮೇಲೆ ನೇರ ಪರಿಣಾಮ ಬೀರುವ ಎಲ್ಲಾ ಸಾಧ್ಯತೆಗಳಿವೆ ಎಂದು ಯುರೋಪಿಯನ್ ಸ್ಪೇಸ್ ಎಜೆನ್ಸಿ (ಇಎಸ್ಎ) ಸ್ವಾರ್ಮ್ ಹೇಳಿದೆ.
ನೇರ ಪರಿಣಾಮ
ಸದ್ಯ ಇಂಟರ್ನೆಟ್ ಮತ್ತು ಫೋನ್ ಗಳು ಕೃತಕ ಉಪಗ್ರಹಗಳ ಸಹಾಯದಿಂದಲೇ ಕಾರ್ಯ ನಿರ್ವಹಿಸುತ್ತಿದ್ದು, ಇಲ್ಲಿ ಆಗುವ ಚಿಕ್ಕ ಏರು-ಪೇರು ಕೂಡ ಒಟ್ಟಾರೆ ಸಂವಹನ (ಕಮ್ಯೂನಿಕೇಷನ್) ಪ್ರಕ್ರಿಯೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ. ಹೀಗಾಗಿ ಕಂಪ್ಯೂಟರ್, ಮೊಬೈಲ್ ಫೋನ್ ಸೇರಿದಂತೆ ಕೃತಕ ಉಪಗ್ರಹಗಳ ನೆರವಿನಿಂದಲೇ ಕೆಲಸ ಮಾಡುವ ಎಲ್ಲಾ ಇಲೆಕ್ಟ್ರಾನಿಕ್ ಉಪಕರಣಗಳ ಕಾರ್ಯನಿರ್ವಹಣೆ ಕಷ್ಟವಾಗುವ ಎಲ್ಲಾ ಸಾಧ್ಯತೆಗಳನ್ನು ಅವರು ಲೆಕ್ಕಾಚಾರ ಹಾಕಿದ್ದಾರೆ.
ಆಯಸ್ಕಾಂತೀಯ ವಲಯ
ಭೂಮಿಯ ಮೇಲ್ಮೈಯಿಂದ ಸುಮಾರು 3,000 ಕಿ.ಮೀ. ಎತ್ತರದಲ್ಲಿ ಈ ಅಯಸ್ಕಾಂತೀಯ ವಲಯವಿದೆ. ಇದು ಸೂರ್ಯ ಹೊರಸೂಸುವ ಅಪಾಯಕಾರಿ ವಿಕಿರಣಗಳಿಂದ ಭೂಮಿಯನ್ನು ರಕ್ಷಿಸುತ್ತದೆ. ಈ ಕುರಿತು ನಿರಂತರವಾಗಿ ಪಾಶ್ಚಿಮಾತ್ಯ ದೇಶಗಳ ನಾನಾ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳು ಅಧ್ಯಯನ ಮಾಡುತ್ತಿವೆ. ಇದರಲ್ಲಿ ಕಂಡುಕೊಂಡ ಅಂಶವೆಂದರೆ ಆಫ್ರಿಕಾ ಮತ್ತು ದಕ್ಷಿಣ ಅಮೆರಿಕಾ ಖಂಡದ ನಡುವಿನ ಭಾಗದಲ್ಲಿ ಈ ಆಯಸ್ಕಾಂತೀಯ ವಲಯ ನಿಧಾನವಾಗಿ ದುರ್ಬಲಗೊಳ್ಳುತ್ತಿದ್ದು, ಭವಿಷ್ಯದಲ್ಲಿ ಈಗಾಗಲೇ ಬಾಹ್ಯಾಕಾಶಕ್ಕೆ ಕಳುಹಿಸಿರುವ ಕೃತಕ ಉಪಗ್ರಹಗಳ ಚಲನೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸಮಸ್ಯೆಗಳು ಎದುರಾಗಬಹುದು. ಇದು ಪರೋಕ್ಷವಾಗಿ ಈಗ ನಾವು ಸಂಪೂರ್ಣವಾಗ ಅವಲಂಬಿತರಾಗಿರುವ ಇಂಟರ್ ನೆಟ್, ಮೊಬೈಲ್ ಫೋನ್ ಕಾರ್ಯವೈಖರಿಯನ್ನು ಅಸಮತೋಲನಗೊಳಿಸಲು (ಡಿಸ್ಟರ್ಬ್) ಮಾಡಬಹುದು. ಈ ರೀತಿಯ ಬೆಳವಣಿಗೆ ಇದಕ್ಕೆ ಮೊದಲು 2,50,000 ವರ್ಷಗಳ ಮೊದಲು ಕಂಡು ಬಂದಿತ್ತು ಎಂದು ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ.