26.2 C
Karnataka
Thursday, November 21, 2024

    ಭಾರಿ ಕುಸಿತದ ಬೆಲೆಗಳಿಂದ ಚೇತರಿಕೆ ಕಂಡ ಷೇರು ಪೇಟೆ

    Must read

     ಆರ್ಥಿಕ ನಿರ್ವಹಣೆ ಈ ಲಾಕ್ಡೌನ್ ಅವಧಿಯಲ್ಲಿ ಒಂದು ಸವಾಲಾಗಿದ್ದು,  ಇದನ್ನು ಕೇವಲ ಜನಸಾಮಾನ್ಯರಲ್ಲದೆ, ಸರ್ಕಾರಗಳು, ಕಾರ್ಪೊರೇಟ್ ಗಳು ಮುಂತಾದವರೆಲ್ಲ ಎದುರಿಸಬೇಕಾಯಿತು. ಇಲ್ಲಿ ಸ್ವಲ್ಪಮಟ್ಟಿನ ನಿರಾಳತೆ ಕಂಡವರು ಮಿತವ್ಯಯಿಗಳು.  ಉಳಿತಾಯವೇ ಆಪದ್ಧನ,  ಇಂದು ಉಳಿಸಿದ ಮೊಬಲಗು ನಾಳಿನ ಜೀವನಕೆ ಮೆರಗು,  ಮುಂತಾದವುಗಳನ್ನು ಅಳವಡಿಸಿಕೊಂಡಿದ್ದವರು ಹೆಚ್ಚಿನ ತೊಂದರೆಗಳಿಂದ ಮುಕ್ತರಾಗಿದ್ದರು.   ಆದರೆ ಈ ವಿಧದವರು ತೀರಾ ವಿರಳ.  ಇದಕ್ಕೆ ಕಾರಣ ಕೇವಲ ವೆಚ್ಚಬಾಕುತನವನ್ನೇ ಜೀವನದ ಭಾಗವೆಂಬಂತೆ ಅಳವಡಿಸಿಕೊಂಡವರ ಸಂಖ್ಯೆಯೇ ಹೆಚ್ಚಾಗಿವೆ.  ಈ ಲಾಕ್ಡೌನ್ ಆರ್ಥಿಕ ಸಾಕ್ಷರತೆಯ ಬಗ್ಗೆ ಅರಿವಿರಲೇಬೇಕೆಂಬ ಅವಶ್ಯಕತೆಯನ್ನು ತಿಳಿಸಿದೆ.

    ಷೇರುಪೇಟೆ ಚಟುವಟಿಕೆಯು ಆರ್ಥಿಕ ಚಟುವಟಿಕೆಗಳಲ್ಲಿ ಮುಖ್ಯವಾದುದಾಗಿದೆ.  ಇದು ಎಷ್ಟರಮಟ್ಟಿಗೆ ಪ್ರಾಮುಖ್ಯತೆ ಪಡೆದಿದೆ ಎಂದರೆ ಲಾಕ್ಡೌನ್ ಸಮಯದಲ್ಲಿ ಇದನ್ನು ಅವಶ್ಯ ಸೇವೆಯಾಗಿ ಪರಿಗಣಿಸಲಾಯಿತು.  ಇದರ ಹಿಂದೆ ಅಡಕವಾಗಿರುವ ಅಂಶವೆಂದರೆ, ಈ ಚಟುವಟಿಕೆಯು ದೇಶದ ಬೊಕ್ಕಸಕ್ಕೆ ಮಹತ್ತರವಾದ ಕೊಡುಗೆ ನೀಡುತ್ತದೆ ಎಂಬುದು.

    ಮಾರ್ಚ್ 2020 ರಲ್ಲಿ ಒಟ್ಟು ಸಂಗ್ರಹವಾದ ಜಿ ಎಸ್ ಟಿ ಯ ಪ್ರಮಾಣ ರೂ.1.1 ಲಕ್ಷ ಕೋಟಿಯಷ್ಟಾಗಿತ್ತು.  ಆದರೆ ಈ ಲಾಕ್ಡೌನ್ ಕಾರಣ  ಏಪ್ರಿಲ್ ತಿಂಗಳಲ್ಲಿ ಭಾರಿ ಕುಸಿತ ಕಂಡಿದೆ.   ಲಾಕ್ಡೌನ್ ಕಾರಣ ಹೆಚ್ಚಿನ ವ್ಯಾವಹಾರಿಕ ಚಟುವಟಿಕೆಗಳು ಸ್ಥಗಿತಗೊಂಡಿದ್ದರೂ ಸಂಗ್ರಹವಾದ ಜಿ ಎಸ್ ಟಿ ಯಲ್ಲಿ ಷೇರುಪೇಟೆಯ ಕೊಡುಗೆ ಅಪಾರ.


    ಷೇರುಪೇಟೆಯ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವವರಿಗೆ ಪೇಟೆಯ ಆಗುಹೋಗುಗಳ ಬಗ್ಗೆ ನಿರಂತರವಾದ ಮಾಹಿತಿಯ ಅಗತ್ಯವಾಗಿದೆ.   ಷೇರುಪೇಟೆಯು ಹಿಂದಿದ್ದ invest  and  forget  it  ಎಂಬುವುದರಿಂದ invest  and watch it ಗೆ ಪರಿವರ್ತಿತವಾಗಿದೆ.  ಈ ಪರಿವರ್ತನೆಯು ಲಾಕ್ಡೌನ್ ಕಾರಣ ಹೆಚ್ಚು ಜಾರಿಯಾಗಿದೆ.  ಕೊರೊನ ಕಾರಣ ಮಾರ್ಚ್ ೨೩ ರಂದು ಕಂಡ ಭಾರಿ ಕುಸಿತಕ್ಕೆ ಷೇರು ವಿನಿಮಯ ಕೇಂದ್ರಗಳು ಚಟುವಟಿಕೆಯನ್ನು ಸ್ಥಗಿತಗೊಳಿಸಲಾಯಿತು.  ಅಂದು ಹೆಚ್ಚಿನ ಕಂಪನಿ ಷೇರುಗಳು ವಾರ್ಷಿಕ ಕನಿಷ್ಟಕ್ಕೆ ಕುಸಿತಕ್ಕೊಳಗಾಗಿದ್ದವು.    ಆದರೆ ಕೇವಲ ಕೆಲವೇ ದಿನಗಳಲ್ಲಿ ಭಾರಿ ಕುಸಿತದ ಬೆಲೆಗಳಿಂದ ಚೇತರಿಕೆ ಕಂಡು  ಬೆಲೆಗಳು ಪುಟಿದೆದ್ದು ವಿಜೃಂಭಿಸಿವೆ.ಈ ಚೇತರಿಕೆ ಯಾವ ಪ್ರಮಾಣದಲ್ಲಿದೆ ಎಂಬುದಕ್ಕೆ ಈ ಕೆಳಗಿನ ಕೆಲವು ನಿದರ್ಶನಗಳು ಉತ್ತರಿಸುತ್ತವೆ.

    ಕಮ್ಮಿನ್ಸ್ ಇಂಡಿಯಾ:

    ಮಾರ್ಚ್ ಆರಂಭದಲ್ಲಿ ಈ ಷೇರಿನ ಬೆಲೆಯು ರೂ.500 ರ ಸಮೀಪವಿದ್ದು ಏಪ್ರಿಲ್ ಮೊದಲ ವಾರದಲ್ಲಿ ರೂ.281 ರ ವಾರ್ಷಿಕ ಕನಿಷ್ಠಕ್ಕೆ ಕುಸಿದು ಮೇ ಅಂತ್ಯದಲ್ಲಿ ರೂ.382 ರವರೆಗೂ ಚೇತರಿಕೆ ಕಂಡಿದೆ.  ಈ ಮಧ್ಯೆ ಅನೇಕ ಭಾರಿ ಸಣ್ಣದಾದರೂ ಗಮನಾರ್ಹ ಏರಿಕೆ ಮತ್ತು ಇಳಿಕೆಗಳಿಂದ ಕೂಡಿದ್ದು ಅಲ್ಪಕಾಲೀನ ಲಾಭಕ್ಕೆ ಅವಕಾಶ ಕಲ್ಪಿಸಿಕೊಟ್ಟಿದೆ.


    ರಿಲಯನ್ಸ್ ಇಂಡಸ್ಟ್ರೀಸ್:ಈ ಕಂಪನಿಯ ಷೇರಿನ ಬೆಲೆ ಮಾರ್ಚ್ ಆರಂಭದಲ್ಲಿ ರೂ.1360 ರ ಸಮೀಪದಲ್ಲಿದ್ದು ಮಾರ್ಚ್ 23 ರಂದು ಷೇರಿನ ಬೆಲೆ ರೂ.875 ಕ್ಕೆ ಕುಸಿಯಿತು.  ಅಲ್ಲಿಂದ ಸತತವಾದ ಏರಿಕೆಯತ್ತ ಸಾಗಿ ಮೇ 11 ರಂದು ರೂ.1,600ನ್ನು ದಾಟಿ ವಿಜೃಂಭಿಸಿತು.  ಈ ವಿಜೃಂಭಣೆಯ ಹಿಂದೆ ಕಂಪನಿಯ ಆಂತರಿಕ ಸಾಧನೆಗಿಂತ ಬಾಹ್ಯ ಬೆಳವಣಿಗೆಗಳು ಕಾರಣವಾದವು.  ಈ ಭಾರಿ ಏರಿಕೆಯ ಹಿಂದೆ ಕಂಪನಿಯ ಅಂಗ ಸಂಸ್ಥೆಯೊಂದಿಗೆ ಅನೇಕ ವಿದೇಶಿ ಕಂಪನಿಗಳ ಹೂಡಿಕೆಯ ಆಸಕ್ತಿ ಮತ್ತು ಕಂಪನಿ ಪ್ರಕಟಿಸಿದ ಹಕ್ಕಿನ ಷೇರು ವಿತರಣೆ ಯೋಜನೆಯಾಗಿದೆ.   ಆದರೆ ಈ ರೀತಿಯ ಭಾರಿ ಏರಿಕೆಗೆ ಕಂಪನಿಯ ಮಾರ್ಚ್ ತಿಂಗಳ ಸಾಧನೆ ಪೂರಕವಾಗಿಲ್ಲವೆಂಬುದು ಗಮನಾರ್ಹ.
    ನೋಸಿಲ್ :

    ಬಿ ಎಸ್ ಇ 500 ಶ್ರೇಣಿಯ ಸ್ಪೆಷಾಲಿಟಿ ಕೆಮಿಕಲ್ಸ್  ಕಂಪನಿ ಷೇರಿನ ಬೆಲೆ ರೂ.44 ರ ಸಮೀಪಕ್ಕೆ ಮಾರ್ಚ್ 24ರಂದು ಕುಸಿದು ನಂತರ ರೂ.91  ರವರೆಗೂ ಏರಿಕೆಯನ್ನು ಏಪ್ರಿಲ್ ಅಂತ್ಯದಲ್ಲಿ ತಲುಪಿ ಸುಮಾರು ಒಂದೇ ತಿಂಗಳ ಸಮಯದಲ್ಲಿ ದ್ವಿಗುಣಗೊಂಡಿದೆ.

    ಬ್ರಿಟಾನ್ನಿಯಾ ಇಂಡಸ್ಟ್ರೀಸ್ :ಈ ಕಂಪನಿಯ ಷೇರಿನ ಬೆಲೆ  ಮಾರ್ಚ್ ಆರಂಭದಲ್ಲಿ ರೂ.3,15೦ ರ ಸಮೀಪವಿದ್ದು ಮಾರ್ಚ್ 23 ರಂದು ರೂ.2,100 ರ ಸಮೀಪಕ್ಕೆ ಕುಸಿಯಿತು.  ಆದರೆ ಈ ಷೇರಿನ ಬೆಲೆ ಮೇ ಅಂತ್ಯದಲ್ಲಿ ರೂ.3,400 ಕ್ಕೆ  ಪುಟಿದೆದ್ದ ರೀತಿ, ಹೂಡಿಕೆದಾರರು ಈ ಕಂಪನಿಯ ಬಗ್ಗೆ ಹೊಂದಿರುವ ನಂಬಿಕೆಯೇ ಕಾರಣ.   ಈ ಕಂಪನಿಯು ಜೂನ್  2 ರಂದು ಮಾರ್ಚ್ 2020ರ ವರ್ಷಾಂತ್ಯದ   ತನ್ನ ಸಾಧನೆ, ಫಲಿತಾಂಶ ಪ್ರಕಟಿಸಲಿದೆ.

    ಯು ಪಿ ಎಲ್ :ಮಾರ್ಚ್ ಎರಡನೇ ವಾರದಲ್ಲಿ ರೂ.520 ರ ಸಮೀಪವಿದ್ದ ಈ ಕಂಪನಿ ಷೇರು ಮಾರ್ಚ್ 23 ರಂದು ರೂ.240 ರ ಸಮೀಪಕ್ಕೆ ಕುಸಿಯಿತು.   ಅಲ್ಲಿಂದ ಏಪ್ರಿಲ್ ಅಂತ್ಯದಲ್ಲಿ ರೂ.420 ನ್ನು ತಲುಪಿ ನಂತರ ಕೆಲವು ಕೀಟ ನಾಶಕಗಳ ಮೇಲೆ ನಿರ್ಬಂಧ ವಿಧಿಸಲಾಗುವುದು ಎಂಬ ಸುದ್ಧಿಯಿಂದ ರೂ.338 ರ ಸಮೀಪಕ್ಕೆ ಜಾರಿತು.  ನಂತರ ಕಂಪನಿ ಪ್ರಕಟಿಸಿದ  ಮಾರ್ಚ್ 2020ರ ವಾರ್ಷಿಕ ಸಾಧನೆಯ ಉತ್ತಮ ಅಂಕಿ ಅಂಶಗಳ ಕಾರಣ ಮತ್ತೆ ರೂ.419 ಕ್ಕೆ ಪುಟಿದೆದ್ದಿದೆ.

    ಎ ಸಿ ಸಿ :ಕೊರೊನ ಒತ್ತಡದಿಂದ ಮಾರ್ಚ್ 25ರಂದು ರೂ.895 ಕ್ಕೆ ಕುಸಿದಿದ್ದ ಈ ಕಂಪನಿ ಷೇರು ಮೇ ತಿಂಗಳ ಅಂತ್ಯದಲ್ಲಿ ಮತ್ತೊಮ್ಮೆ ರೂ.1,297 ಕ್ಕೆ ಪುಟಿದೆದ್ದಿದೆ.  ಈ ಮಧ್ಯೆ ಪ್ರತಿ ಷೇರಿಗೆ ರೂ.14 ರ ಲಾಭಾಂಶ ವಿತರಿಸಿದ  ಕಾರಣ ಚಟುವಟಿಕೆ ಭರಿತವಾಯಿತು.


    ಇದೆ ರೀತಿ ಪ್ರಮುಖ ಕಂಪನಿಗಳಾದ ಬಜಾಜ್ ಫೈನಾನ್ಸ್ , ಆಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಹೆಚ್ ಡಿ ಎಫ್ ಸಿ ಏಷಿಯನ್ ಪೇಂಟ್ಸ್, ಭಾರತ್ ಫೋರ್ಜ್, ಟಾಟಾ ಸ್ಟಿಲ್, ಎಲ್ ಐ ಸಿ ಹೌಸಿಂಗ್ ಫೈನಾನ್ಸ್, ಲಾರ್ಸನ್ ಅಂಡ್ ಟೋಬ್ರೋ , ಬಯೋಕಾನ್, ಅರವಿಂದೋ ಫಾರ್ಮ, ಅಲೆಂಬಿಕ್ ಫಾರ್ಮ, ಇನ್ಫೋಸಿಸ್, ಮೈಂಡ್ ಟ್ರೀ, ಟೈಟಾನ್, ಕಾಲ್ಗೇಟ್,  ಅಲ್ಟ್ರಾಟೆಕ್,  ಇಂಡಸ್ ಇಂಡ್ ಬ್ಯಾಂಕ್,  ಐಟಿಸಿ ಯಂತಹ ಬೃಹತ್ ಕಂಪನಿಗಳು ವೈವಿಧ್ಯಮಯ ಕಾರಣಗಳಿಂದಾಗಿ ಹೆಚ್ಚಿನ ಏರಿಳಿತಗಳನ್ನು ಪ್ರದರ್ಶಿಸಿ ಅಲ್ಪ ಕಾಲಿನದಲ್ಲೇ ಬೃಹತ್ ಪ್ರಮಾಣದ ಲಾಭ ಗಳಿಕೆಗೆ ಕಾರಣವಾದವು.


    ಈ ಎಲ್ಲ  ಬೆಳವಣಿಗೆಗಳಿಗೆ ಪ್ರಮುಖವಾಗಿ ಕಾರಣವಾಗಿದ್ದು, ಹಣದ ಆವಶ್ಯಕತೆ ಇದ್ದಾಗ, ಬೇಕಾದಾಗ ತಕ್ಷಣ ಮಾರಾಟಮಾಡಿ ಹೊರಬರಬಹುದಾದ ಏಕೈಕ ಸ್ವತ್ತು, ಷೇರುಪೇಟೆ ಹೂಡಿಕೆ ಎಂಬುದಾಗಿದೆ.  ಇಂತಹ ಸದೃಢ ಕಂಪೆನಿಗಳಲ್ಲಿ, ಒದಗಬಹುದಾದ ಅಪಾಯದ ಅರಿವಿನಿಂದ, ತುಲನಾತ್ಮಕವಾಗಿ ಹೂಡಿಕೆ ಮಾಡಿದಲ್ಲಿ ಲಾಭಗಳಿಕೆ ಸಾಧ್ಯ.  ಆದರೆ  ಪೇಟೆಯಲ್ಲಾಗುವ ಏರು-ಪೇರುಗಳ ಬಗ್ಗೆ ನಿರಂತರವಾಗಿ ಗಮನವಿರುವುದು ಅವಶ್ಯಕವಾಗಿದೆ.  ಹೆಚ್ಚಿನ ಕಾರ್ಪೊರೇಟ್ ಬ್ರೋಕಿಂಗ್ ಹೌಸ್ ಗಳು ತಮ್ಮ ಕಕ್ಷಿದಾರರಿಗೆ ಈ ಸೌಲಭ್ಯವನ್ನು ಒದಗಿಸಲು ವಿಫಲರಾದ ಕಾರಣ ಶಾಖೆಗಳನ್ನು ಮುಚ್ಚುವ ಪರಿಸ್ಥಿತಿಗೆ ತಲುಪಿರುವುದು ದುರಂತವೇ ಸರಿ.  ಷೇರುಪೇಟೆಯ ಯಶಸ್ಸಿಗೆ ಪ್ರಮುಖವಾದ ಸಮೀಕರಣವೆಂದರೆ ‘ವ್ಯಾಲ್ಯೂ ಪಿಕ್- ಪ್ರಾಫಿಟ್ ಬುಕ್’  ಆಗಿದೆ.  ಜೊತೆಗೆ ಸಂದರ್ಭವನ್ನು ತುಲನಾತ್ಮಕವಾಗಿ ಬಳಸಿಕೊಳ್ಳುವ ಗುಣವು ಅಗತ್ಯವಾಗಿದೆ.

    ಹೂಡಿಕೆದಾರರಿಗೆ ಕಿವಿಮಾತು:

    ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಷೇರುಗಳು ಹೂವಿನಂತೆ ಅಲ್ಪಾಯುಷಿ,
    ಲಾರ್ಜ್ ಕ್ಯಾಪ್ ಷೇರುಗಳು Dry Fruits ನಂತೆ ಧೀರ್ಘಾಯುಷ್ಯ ಹೊಂದಿರುತ್ತವೆ.

    ಕೆ ಜಿ ಕೃಪಾಲ್
    ಕೆ ಜಿ ಕೃಪಾಲ್
    ಕೆ ಜಿ ಕೃಪಾಲ್ ಆರ್ಥಿಕ ಚಿಂತಕ ಮತ್ತು ಷೇರು ಪೇಟೆ ತಜ್ಞ. ಬೆಂಗಳೂರು ಷೇರು ವಿನಿಮಯ ಕೇಂದ್ರದ ಹಲವು ಸುಧಾರಣ ಸಮಿತಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಷೇರು ಮಾರುಕಟ್ಟೆಯ ಆಳ . ಅಗಲಗಳನ್ನು ಸುಲಭವಾಗಿ ವಿವರಿಸಿ ಸರಳ ಕನ್ನಡದಲ್ಲಿ ಬರೆಯುವ ಕೆಲವೇ ಕೆಲವು ಬರಹಗಾರರಲ್ಲಿ ಇವರೂ ಒಬ್ಬರು. ನಾಡಿನ ಹಲವು ಮುಂಚೂಣಿ ಪತ್ರಿಕೆಗಳಲ್ಲಿ ಅಂಕಣಕಾರರಾಗಿ ನಾಡಿನ ಜನತೆಗೆ ಚಿರಪರಿಚಿತ. ಟೀವಿ ಚಾನಲ್ ಗಳು ಸೇರಿದಂತೆ ನೇರ ಸಂಪರ್ಕ ಕಾರ್ಯಕ್ರಮಗಳ ಮೂಲಕ ಷೇರು ಮಾರುಕಟ್ಟೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಾ ಬಂದಿದ್ದಾರೆ.
    spot_img

    More articles

    3 COMMENTS

    1. ಲೇಖಕರ ಹೂಡಿಕೆದಾರರಿಗೆ ಕಿವಿ ಮಾತು ಇಷ್ಟವಾಯಿತು.

    2. ವಿಚಾರ ಪೂರ್ಣ ಅಂಕಿ ಅಂಶಗಳ ಹಿನ್ನೆಲೆಯ ಲೇಖನ. ಮಾಹಿತಿಯ ಔಚಿತ್ಯ ಪೂರ್ಣ ವಿವರಣೆ.
      ವಂದನೆಗಳು

    LEAVE A REPLY

    Please enter your comment!
    Please enter your name here

    Latest article

    error: Content is protected !!