ಭಾರತ-ಚೀನಾ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ, ಕೋವಿಡ್-19 ಹಾವಳಿ ಇವರೆಡರ ಹಿನ್ನೆಲೆಯಲ್ಲಿ ಭಾರತದಲ್ಲಿ ಚೀನಾ ವಿರೋಧಿ ಭಾವನೆ ದಿನೇ ದಿನೇ ಹೆಚ್ಚುತ್ತಿದೆ. ಜೈಪುರ ಮೂಲದ ನವೋದ್ಯಮ ಅಭಿವೃದ್ಧಿ ಪಡಿಸಿರುವ ” ರಿಮೂವ್ ಚೀನಾ ಆಪ್ಸ್” ಇದಕ್ಕೆ ಜ್ವಲಂತ ನಿದರ್ಶನವಾಗಿದೆ. ಮೇ 17ರಂದು ಲಾಂಚ್ ಆದ ಈ ಆಪ್ ಸದ್ಯ ಆಂಡ್ರಾಯಿಡ್ ಫೋನ್ ಗಳಲ್ಲಿ ಮಾತ್ರ ಲಭ್ಯವಿದ್ದು, ಇದರ ಡೌನ್ ಲೋಡ್ ಸಂಖ್ಯೆ 10 ಲಕ್ಷಕ್ಕೆ ತಲುಪಿದೆ.
ಈ ಆಪ್ ನ್ನು ಮುಖ್ಯವಾಗಿ ಚೀನಾ ಮೂಲದ ಆಪ್ ಗಳನ್ನು ಪತ್ತೆ ಹಚ್ಚುವ ರೀತಿಯಲ್ಲೇ ಅಭಿವೃದ್ಧಿ ಪಡಿಸಲಾಗಿದೆ. ಇದರ ಮೂಲಕ ಫೋನ್ ಬಳಕೆದಾರರು ತಮ್ಮ ಫೋನ್ ನಲ್ಲಿ ಇನ್ ಸ್ಟಾಲ್ ಆಗಿರುವ ಚೀನಾ ಮೂಲದ ಆಪ್ ಗಳನ್ನು ಸುಲಭವಾಗಿ ಅನ್ ಇನ್ಸ್ಟಾಲ್ ಮಾಡಬಹುದಾಗಿದೆ.
ಗೂಗಲ್ ಪ್ಲೇ ಸ್ಟೋರ್ ನಲ್ಲಿ ಈಗ ಅತಿ ಹೆಚ್ಚು ಜನಪ್ರಿಯವಾಗಿರುವ ಉಚಿತ ಆಪ್ ಗಳ ಪೈಕಿ ಇದು ಎರಡನೇ ಸ್ಥಾನ ಪಡೆದಿದೆ. 3.5 ಎಂಬಿ ಗಾತ್ರದ ಇದನ್ನು ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಬಹುದು. ಸ್ಕ್ಯಾನ್ ನೌ ಬಟನ್ ಒತ್ತುವ ಮೂಲಕ ಚೀನಾದ ಆಪ್ ಗಳನ್ನು ಗುರುತಿಸಲು ಸಾಧ್ಯವಾಗುತ್ತದೆ. ಬಳಿಕ ಅನ್ ಇನ್ಸ್ಟಾಲ್ ಬಟನ್ ಒತ್ತಿದರೆ ಚೀನಾದ ಆಪ್ ಗಳು ಡಿಲೀಟ್ ಆಗುತ್ತವೆ. ಆದರೆ ಫೋನ್ ಖರೀದಿಸುವ ಸಂದರ್ಭದಲ್ಲೇ ಇನ್ ಸ್ಟಾಲ್ ಆಗಿರುವ ಆಪ್ ಗಳನ್ನು ಡಿಲೀಟ್ ಮಾಡಲು ಇದರಿಂದ ಸಾಧ್ಯವಿಲ್ಲ.
ನಾವೇ ಸ್ವಯಂ ಡೌನ್ ಲೋಡ್ ಮಾಡಿದ ಚೀನಾ ಆಪ್ ಗಳನ್ನು ಮಾತ್ರ ಡಿಲೀಟ್ ಮಾಡಬಹುದಾಗಿದೆ.