26.2 C
Karnataka
Thursday, November 21, 2024

    ಚೀನಾ ಸಾರಿದ ಜೈವಿಕ ಸಮರ: ಸಂಶಯದ ಪ್ರಚಂಡ ಮಾರುತ

    Must read

    ಅಧಿಕಾರ ದಾಹ ಅಪಾಯಕಾರಿ ಕಾಯಿಲೆ. ಕೊರೊನಾ ರೀತಿಯಲ್ಲೇ ಒಬ್ಬ ನಾಯಕ ಅಥವಾ ಒಂದು ದೇಶದ ಶ್ವಾಸಕೋಶವನ್ನು ಘಾಸಿಗೊಳಿಸಿ ನಿಧಾನ ತಲೆಗೇರಿ ಮೆದುಳನ್ನು ನಿಷ್ಕ್ರಿಯಗೊಳಿಸಬಲ್ಲದು. ಚೀನಾದ ಇವತ್ತಿನ ಹಪಾಹಪಿ ನೋಡಿದಾಗ ಈ ಮಾತಿನ‌ ಅರ್ಥ ಸ್ಪಷ್ಟವಾಗಬಲ್ಲದು. ಚೀನಾಕ್ಕೆ ಸೂಪರ್ ಪವರ್ ಆಗುವ ಹುಚ್ಚು ತಲೆಗೇರಿದೆ. ಹಿಂದೆ ರಷ್ಯಾದ ಲೆನಿನ್, ಸ್ಟಾಲಿನ್ ಅವರಿಗೆ ವಕ್ಕರಿಸಿದ್ದ ಕಾಯಿಲೆಯೇ ಇಂದು ಮಹಾಗೋಡೆಯ ಸಾಮ್ರಾಟ ಕ್ಸಿ ಜಿನ್ ಪಿಂಗ್‌ಗೂ ತಗುಲಿದೆ.

    ‘ಪ್ರಭಾವಳಿ ವಿಸ್ತರಣೆ’ಯ ಹುಚ್ಚಿಗೆ ಬಲಿಯಾಗಿರುವ ಈ ದೇಶ ತನ್ನ ಉದ್ದೇಶ ಸಾಧನೆಗಾಗಿ ಕಂಡುಕೊಂಡ ದಾರಿ ಮಾತ್ರ ಅತಿ ಭಯಾನಕ. ಸೋಂಕಿನ ಮೂಲಕವೇ ಸಾಮ್ರಾಜ್ಯ ಭದ್ರಪಡಿಸುವ ಖಯಾಲಿ ಆ ದೇಶಕ್ಕೆ ಶುರುವಾಗಿದೆ ಎನ್ನುವ ಸಂಶಯವನ್ನು ಅನೇಕ ವಿಜ್ಞಾನಿಗಳು ವ್ಯಕ್ತಪಡಿಸಿದ್ದಾರೆ.  ಆದರೆ, ಇದು ಬೇಕಿಲ್ಲದವರು ಮಾಡುವ ಒಣ ಆರೋಪ ಎಂದು ಅಲ್ಲಗಳೆಯುವವರು ಇದ್ದಾರೆ.

     ಹಾಗಾದರೆ ಇದರಲ್ಲಿ ಯಾವುದು ಸತ್ಯ?

    ಸೈನ್ಸ್ ಹೇಳುವ ಮಿಸಿಂಗ್ ಲಿಂಕ್: ಎರಡೂ ಕಡೆಯ ವಾದಗಳನ್ನೂ ಆಲಿಸಬೇಕು. ಆದರೆ ಈ ಸೂಕ್ಷ್ಮ ಸತ್ಯ ಅರಿಯಲು ವಿಜ್ಞಾನದ ಹಾದಿಯನ್ನು ಹೆಚ್ಚು ನಂಬಬೇಕು. ಮಿಸಿಂಗ್ ಲಿಂಕ್‌ಗಳನ್ನು ಜೋಡಿಸಿ ನೋಡಬೇಕು.

     ಕಳೆದ ವರ್ಷ ಡಿಸೆಂಬರ್‌ನಲ್ಲಿ ಈ ವೈರಾಣು ವುಹಾನ್‌ನಲ್ಲಿ ಮೊದಲು ಕಾಣಿಸಿಕೊಂಡಿತು. ಅದಾಗಿ  ಮಾರ್ಚ್‌ವರೆಗೆ ಸದ್ದಿಲ್ಲದೇ ಟ್ರೀಟ್ ಮಾಡಿತು ಚೀನಾ.  ಕೊನೆಗೆ ವೈರಾಣು ವುಹಾನ್‌ನ ಹಾದಿಬೀದಿ ಆಕ್ರಮಿಸಿದಾಗ ಜಾಗತಿಕ ಸುದ್ದಿಯಾಗತೊಡಗಿತು. ಆಗಲೂ ಚೀನಾ ನಿಜವಾದ ವೈರಾಣುವಿನ ನಿಜ ಸ್ವರೂಪ ಏನು ಎನ್ನುವುದನ್ನು ಬಾಯಿಬಿಡಲಿಲ್ಲ. ಒಳಗೊಳಗೇ ಕಂಟ್ರೋಲ್ ಮಾಡಿ, ವಿದೇಶಗಳಿಗೆ ಜಿಗಿಯಲು ಅನುವು ಮಾಡಿಕೊಟ್ಟಿತು. ವಿದೇಶಗಳಿಗೆ ಹರಡಿದ ವೈರಾಣು ಮೂಲ ವೈರಾಣುವಿಗಿಂತ ಮಾರಣಾಂತಿಕ ಎನಿಸಿತು.

    ಆದ್ದರಿಂದಲೇ ಯೂರೋಪ್ ಮತ್ತು ಅಮೆರಿಕದಂತಹ ಬಲಾಢ್ಯರ  ಅಂಗಳದಲ್ಲಿ ಹೆಣಗಳ ರಾಶಿ ತುಂಬಿತು. ಭಾರತದಂತಹ ಬಲಿಷ್ಠ ರೋಗ ನಿರೋಧಕ ಶಕ್ತಿ ಹೊಂದಿದ ರಾಷ್ಟ್ರ ಕೂಡ ಅಲುಗಾಡತೊಡಗಿತು. ಜಗತ್ತಿನ ೨೦೦ ಮೇಲ್ಪಟ್ಟು ದೇಶಗಳಿಗೆ ಈ ವೈರಾಣು ನುಗ್ಗಿತು. ಚೀನಾ ಮುಸಿಮುಸಿ ನಗುತ್ತಲೇ ಸೋಂಕು ಮುಕ್ತಿ ಹೊಂದಿತು!  ಕಠಿಣ ಲಾಕ್‌ಡೌನ್ ನಡುವೆಯೂ ಭಾರತದ ಎಲ್ಲಾ ರಾಜ್ಯಗಳಿಗೂ ಇದರ ಸೋಂಕು ಹರಡಿದರೆ, ಅದರ ಸ್ವರೂಪದ ಸ್ಪಷ್ಟತೆಯೇ ಇರದ ಆರಂಭಿಕ ಘಟ್ಟದಲ್ಲಿಯೂ ಚೀನಾ ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸಿ ಬಿಟ್ಟಿತು. ತನ್ನ ರಾಜಧಾನಿ ನಗರ ಬೀಜಿಂಗ್‌ಗೆ ಒಂದು ವೈರಾಣು ಕೂಡ ನುಗ್ಗದಂತೆ ನೋಡಿಕೊಂಡಿತು. ಅನೇಕರಿಗೆ ಇದೊಂದು ಪವಾಡದಂತೆ ಕಾಣಿಸಿತು. ಆದರೆ ಪವಾಡ ನಂಬದ ಕೆಲವು ವಿಜ್ಞಾನಿಗಳು ಮಾತ್ರ ಮಿಸಿಂಗ್ ಲಿಂಕ್ ಶೋಸಿ ಸತ್ಯ ಸಾರುವ ಪ್ರಯತ್ನ ಮಾಡಿದರು. ಅವರು ಹೇಳುತ್ತಿರುವ ಸತ್ಯವೇ ‘ಕೊರೊನಾ ವೈರಾಣು ನೈಸರ್ಗಿಕ ಅಲ್ಲ, ಲ್ಯಾಬ್ ಸೃಷ್ಟಿ’ ಎನ್ನುವುದು.

    ವುಹಾನ್ ಲ್ಯಾಬ್‌ನಲ್ಲಿ ತಾವು ಕೆಲಸ ಮಾಡಿರುವುದಾಗಿ ಹೇಳಿಕೊಂಡ ಕೆಲವು ವಿಜ್ಞಾನಿಗಳು ಕೂಡ ಈ ಸತ್ಯವನ್ನೇ ಉಸುರುತ್ತಿದ್ದಾರೆ.  ‘‘ಚೀನಾ ವಿರುದ್ಧ ನಮಗೆ ಯಾವುದೇ ಸಿಟ್ಟು, ಸೇಡು ಇಲ್ಲ. ಆದರೆ, ಜಗತ್ತನ್ನು ನಡುಗಿಸಿದ ಮಹಾಮಾರಿ ವಿಷಯದಲ್ಲಿ ನಡೆದ ಸಂಚನ್ನು ಮುಚ್ಚಿಟ್ಟು ಮುಗುಮ್ಮಾಗಿ ಉಳಿದರೆ,  ಅದು ದ್ರೋಹವಾಗುತ್ತದೆ” ಎಂದು ತುಂಬ ತೂಕದ ಮಾತುಗಳನ್ನಾಡುತ್ತಲೇ ‘ಕೊರೊನಾ ವುಹಾನ್ ಲ್ಯಾಬ್ ಸೃಷ್ಟಿ’ ಎಂದು ಸಾರಿದ್ದಾರೆ.

    ಅಧಿಕಾರ ಮತ್ತು ವಾಣಿಜ್ಯ ವಿಸ್ತರಣೆಯ ಮಹತ್ವಾಕಾಂಕ್ಷೆ ಹೊಂದಿರುವ ಚೀನಾ, ಇಡೀ ಜಗತ್ತಿನ ಮೇಲೆ ತನ್ನ ಹಿಡಿತ ಇರಿಸಬೇಕು ಎನ್ನುವ ಧಾವಂತ. ಅದರ ಈ ರಾಕ್ಷಸ ಹಂಬಲವನ್ನು ಹತ್ತಿರದಿಂದ ಕಂಡ ಅಮೆರಿಕದ ಅನೇಕ ವಿಜ್ಞಾನಿಗಳು ಇದನ್ನೇ ಹೇಳುತ್ತಿದ್ದಾರೆ.

    ಅವರು ತಮ್ಮ ವಾದಕ್ಕೆ ಪೂರಕವಾಗಿ  ಮೂರು ಮುಖ್ಯ ಮಿಸ್ಸಿಂಗ್ ಲಿಂಕ್‌ಗಳನ್ನು ಕೊಡುತ್ತಾರೆ.

    ಲಿಂಕ್-1: ಕೊರೊನಾ ನೈಸರ್ಗಿ ಅಲ್ಲ, ಲ್ಯಾಬ್ ಸೃಷ್ಟಿ. ಯಾಕೆಂದರೆ, ಅದು ನೈಸರ್ಗಿಕವಾಗಿದ್ದರೆ ಈ ಪರಿ ಶರವೇಗದಲ್ಲಿ ಜಗತ್ತನ್ನು ಆವರಿಸುತ್ತಿರಲಿಲ್ಲ.  ಎಬೋಲಾದಿಂದ ಇದುವರೆಗೆ ಹಾವಳಿ ಇಟ್ಟು ಕಣ್ಮರೆಯಾದ ವೈರಾಣುಗಳ ಹೆಜ್ಜೆಜಾಡು ಗಮನಿಸಿ. ಅವ್ಯಾವೂ ಕೂಡ ಇಷ್ಟೊಂದು ವಿಶ್ವರೂಪಿ ಪೀಡೆಯಾಗಿರಲಿಲ್ಲ.  ಸಾಮಾನ್ಯವಾಗಿ ಹವಾಮಾನ ಹಾಗೂ ಭೌಗೋಳಿಕ ಕಂಡೀಷನ್ ಆಧರಿಸಿ  ವೈರಾಣುಗಳ ಪ್ರಸರಣ ವ್ಯತ್ಯಾಸಗೊಳ್ಳುತ್ತದೆ. ಅದು ನೈಸರ್ಗಿಕ ಎನ್ನುವುದೇ ಖರೆ ಆಗಿದ್ದರೆ ಚೀನಾ ರೀತಿಯ ಹವಾಮಾನ ಹೊಂದಿದ ರಾಷ್ಟ್ರಗಳಿಗೆ ಮಾತ್ರ ಅದು ಸೀಮಿತವಾಗಬೇಕಿತ್ತು. ಆದರೆ ಈಗ ಆಗಿರುವುದೇ ಬೇರೆ. ಸ್ವಿಡ್ಜರ್‌ಲೆಂಡಿನಿಂದ ಹಿಡಿದು ಮರುಭೂಮಿಯ ಒಳಹವೆ ಹೊಂದಿದ ರಾಷ್ಟ್ರಗಳವರೆಗೆ ಅದು ಸಮನಾಗಿ ಹರಡುತ್ತಿದೆ. ಇದು ಸತ್ಯದ ಪ್ರಥಮ ಲಿಂಕ್.

    ಲಿಂಕ್-2:  ವುಹಾನ್‌ನಂತಹ ಶೀತ ಹವಾಮಾನ ಹೊಂದಿದ ಪ್ರದೇಶಗಳಲ್ಲಿ ವೈರಾಣು ಅಬ್ಬರಿಸುತ್ತದೆ. ಪ್ರಸರಣ ವೇಗ ಹೆಚ್ಚಿರುತ್ತದೆ. ಭಾರತದಂತಹ ಬಿಸಿಲು, ಒಣ ಹವೆ ಹೊಂದಿದ ದೇಶಗಳಲ್ಲಿ ಅದು ಅತಿ ಶೀಘ್ರ ಸಾಯುತ್ತದೆ. ಇದು ವೈರಾಣುವಿನ ಅಂಗ ರಚನೆ ಆಧರಿಸಿ ಹೇಳುವ ಸಾಮಾನ್ಯ ಸತ್ಯ. ಆದರೆ ಇಂದು ಕಾಣುತ್ತಿರುವುದೇನು? ಬೆಂಕಿಯಂತಹ ಉರಿಬಿಸಿಲಿನ ನಡುವೆಯೂ ಅದು ಒಂದೇ ಸಮಾ ವಿಸ್ತರಿಸುತ್ತಲೇ ಇದೆ.  ಲ್ಯಾಬ್ ಸೃಷ್ಟಿ ಎನ್ನುವುದಕ್ಕೆ ಇದು ಎರಡನೆ ಪ್ರಬಲ ಲಿಂಕ್.

    ಲಿಂಕ್-3:  ವೈರಾಣು ಸೋರಿಕೆಯಾದ ವುಹಾನ್ ಲ್ಯಾನ್‌ನಲ್ಲಿ  ಕೆಲಸ ಮಾಡುತ್ತಿದ್ದ ಎಲ್ಲಾ ಟೆಕ್ನಿಷಿಯನ್‌ಗಳು ಈಗ ಕಣ್ಮರೆಯಾಗಿದ್ದಾರೆ. ಅನಾಹುತ ಘಟಿಸಿದ ಬಳಿಕ ಅಲ್ಲಿನ  ಲ್ಯಾಬ್ ನ  ಫೋನ್  ಸಂಪರ್ಕ ಮೂರು ತಿಂಗಳು ಕಾಲ   ಕಡಿತಗೊಂಡಿತ್ತು.  ಅಲ್ಲಿನ ಲ್ಯಾಬ್ ಟೆಕ್ನಿಷಿಯನ್‌ಗಳೆಲ್ಲರೂ ನಿಗೂಢವಾಗಿ ಕಣ್ಮರೆಯಾಗಿದ್ದಾರೆ.

    ಈ ಎಲ್ಲಾ ಮಿಸ್ಸಿಂಗ್ ಲಿಂಕ್ ಜೋಡಿಸಿದರೆ ಹೊಳೆಯುವ ಪ್ರಬಲ ಗುಮಾನಿ; ಕೊರೊನಾ ವುಹಾನ್ ಲ್ಯಾಬ್ ಸೃಷ್ಟಿ ಎನ್ನುವುದೇ ಆಗಿದೆ. ಇದು  ಚೀನಾ ಪ್ರಯೋಗಿಸಿದ ಜೈವಿಕ ಅಸ್ತ್ರ .  ಬಾವಲಿಯಿಂದ ಕೊರೊನಾ ವೈರಾಣು ಹುಟ್ಟಿದೆ ಎಂದು ಈಗ ಆ ದೇಶ ತಿಪ್ಪೆ ಸಾರಿಸುತ್ತಿದೆ. ಅದನ್ನು ನಂಬಬೇಡಿ , ನೂರಕ್ಕೆ ನೂರು ಇದೊಂದು  ಪಿತೂರಿ’’ ಎಂದಿದ್ದಾರೆ ವಿಜ್ಞಾನಿಗಳು.

    ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗಂಟಲು ಹರಿದು ಹೋಗುವಷ್ಟು ಗಟ್ಟಿಯಾಗಿ ಈ ವಿಷಯದಲ್ಲಿ ಚೀನಾವನ್ನು ದೂಷಿಸಿದ್ದಾರೆ. ಅಂತಿಮವಾಗಿ  ವಿಶ್ವ ಆರೋಗ್ಯ ಸಂಸ್ಥೆ ಇದರ ನಿಗೂಢ ಅರಿಯಲು ತಜ್ಞ ಸಮಿತಿ ರಚಿಸಿದೆ. ಏನೇ ಆದರೂ ಚೀನಾ ಬಗ್ಗೆ ಎಚ್ಚರ ವಹಿಸಬೇಕಾದ ಅಗತ್ಯ ಇದೆ ಎನ್ನುವುದು ಈಗ ಜಗತ್ತಿಗೆ ಅರ್ಥವಾಗುತ್ತಿದೆ. ಇದು ಗುಡ್ ಸೈನ್.

    ಶ್ರೀವತ್ಸ ನಾಡಿಗ್
    ಶ್ರೀವತ್ಸ ನಾಡಿಗ್https://kannadapress.com/
    ಶ್ರೀವತ್ಸ ನಾಡಿಗ್ ಕನ್ನಡಪ್ರೆಸ್.ಕಾಮ್ ನ ಪ್ರಧಾನ ಸಂಪಾದಕ ಮತ್ತು ಸಂಸ್ಥಾಪಕ
    spot_img

    More articles

    1 COMMENT

    1. ಚಾಣಾಕ್ಯ ಚೀನ ನಿಜಕ್ಕೂ‌ ನಂಬಿಕೆಗೆ ಅನರ್ಹ ರಾಷ್ಟ್ರ .

    LEAVE A REPLY

    Please enter your comment!
    Please enter your name here

    Latest article

    error: Content is protected !!