ಆಫ್ರಿಕನ್ ಮೂಲದ ಅಮೆರಿಕ ಪ್ರಜೆ ಜಾರ್ಜ್ ಫ್ಲಾಯ್ಡ್ ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿರುವುದು ಅಮೆರಿಕದಲ್ಲಿ ದೊಡ್ಡ ಮಟ್ಟದ ಪ್ರತಿಭಟನೆಯನ್ನು ಹುಟ್ಟು ಹಾಕಿದೆ. ಒಂದು ವಿಧದಲ್ಲಿ ಜನಾಂಗೀಯ ವೈಷಮ್ಯದ ವಿರುದ್ಧದ ಹೋರಾಟವಾಗಿ ಮಾರ್ಪಟ್ಟಿದೆ. ಅಮೆರಿಕ ಅಧ್ಯಕ್ಷರ ಅಧಿಕೃತ ನಿವಾಸ ಮತ್ತು ಕಚೇರಿಯಾಗಿರುವ ಶ್ವೇತಭವನದೆದುರು ಸಾವಿರಾರು ಪ್ರತಿಭಟನಾಕಾರರು ಏಕಾಏಕಿ ಜಮಾಯಿಸಿದ ಹಿನ್ನೆಲೆಯಲ್ಲಿ ಬೆದರಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ರಕ್ಷಣಾ ಸಿಬ್ಬಂದಿ ಅವರನ್ನು ಶ್ವೇತಭವನದಲ್ಲಿರುವ ಭೂಗತ ಬಂಕರ್ ಗೆ ಸ್ಥಳಾಂತರಿಸಿದ್ದು ಈಗ ದೊಡ್ಡ ಸುದ್ದಿ.
9/11 ಅಂದರೆ ವಿಶ್ವ ವಾಣಿಜ್ಯ ಸಂಕೀರ್ಣದ ಅವಳಿ ಗೋಪುರಗಳ ಮೇಲೆ ಭಯೋತ್ಪಾದಕರ ದಾಳಿ ನಡೆದಾಗ ಅಧ್ಯಕ್ಷರು ಬಂಕರ್ ಗೆ ತೆರಳಿದ್ದರು ಎಂದು ಹೇಳಲಾಗುತ್ತಿದೆ.
ಹಾಗಾದರೆ, ಶ್ವೇತಭವನದ ಈ ರಹಸ್ಯ ಬಂಕರ್ ನ ವೈಶಿಷ್ಟ್ಯ ಮತ್ತು ಅದು ಬಿಟ್ಟುಕೊಡದ ರಹಸ್ಯಗಳಾದರೂ ಏನು ಎಂಬ ಬಗ್ಗೆ ನೋಡೋಣ.
ಅಮೆರಿಕ ಅಧ್ಯಕ್ಷರ ಬಂಕರ್ ಎಂದರೆ ಅದೊಂದು ಬ್ರಹ್ಮಾಂಡ ರಹಸ್ಯ. ಅದು ಹೇಗಿದೆ? ಅಲ್ಲಿ ಏನಿದೆ ? ಯಾವ ರೀತಿ ಅಧ್ಯಕ್ಷರ ರಕ್ಷಣೆ ಮತ್ತು ತುರ್ತು ಸಂದರ್ಭದಲ್ಲಿ ಸೇನಾಪಡೆ ಸೇರಿದಂತೆ ನಾನಾ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಲು ಏನೇನು ವ್ಯವಸ್ಥೆ ಇದೆ ? ಎಂಬ ಬಗ್ಗೆ ಅಲ್ಲಿನ ಬೆರಳೆಣಿಕೆಯಷ್ಟು ಜನರನ್ನು ಬಿಟ್ಟರೆ ಇಡೀ ಜಗತ್ತಿಗೆ ಅದು ಇನ್ನೂ ಚಿದಂಬರ ರಹಸ್ಯವಾಗಿಯೇ ಉಳಿದಿದೆ.
ಭಯತ್ಪಾದಕರ ದಾಳಿ, ಯುದ್ಧ ಸಂದರ್ಭಗಳಲ್ಲಿ ಅಧ್ಯಕ್ಷರ ರಕ್ಷಣೆಯ ಉದ್ದೇಶದಿಂದ ಇದನ್ನು ನಿರ್ಮಿಸಲಾಗಿದ್ದು, ಶ್ವೇತಭವನದ ಹುಲ್ಲು ಹಾಸಿನ ತಳ ಭಾಗದಲ್ಲಿ ನಿರ್ಮಾಣವಾಗಿದೆ ಎಂದು ಹೇಳಲಾಗುತ್ತಿದೆ. ಯಾವುದೇ ರೀತಿಯ ಅಪಾಯದ ಸುಳಿವು ಸಿಕ್ಕ ಕೂಡಲೇ ಅಧ್ಯಕ್ಷರು ಹಾಗೂ ಪ್ರಮುಖ ಅಧಿಕಾರಿಗಳು ಈ ಬಂಕರ್ ಸೇರುತ್ತಾರೆ.
ಶೀತಲ ಸಮರ ಯುಗದಲ್ಲಿ ಇದನ್ನು ಮೊದಲು ನಿರ್ಮಿಸಿದ್ದರೆ, 2001ರಲ್ಲಿ ಅದರ ನವೀಕರಣ ನಡೆದು ಅಣ್ವಸ್ತ್ರ ದಾಳಿ ಮಾತ್ರವಲ್ಲ ಬದಲಾದ ಕಾಲಘಟ್ಟದಲ್ಲಿ ಎದುರಾಗಬಹುದಾದ ಅಪಾಯಗಳನ್ನು ಸಮರ್ಥವಾಗಿ ಎದುರಿಸುವ ರೀತಿಯಲ್ಲಿ ಸಜ್ಜುಗೊಳಿಸಲಾಯಿತು.
ಐದು ಅಂತಸ್ತುಗಳ ಈ ಬಂಕರ್ ಗೆ ಪ್ರತ್ಯೇಕ ಗಾಳಿಯ ವ್ಯವಸ್ಥೆ ಇದೆ. ಕೆಲವು ತಿಂಗಳಿಗಳಿಗಾಗುವಷ್ಟು ಆಹಾರ ಸಂಗ್ರಹಿಸಿಡಲು ಇಲ್ಲಿ ಸಾಧ್ಯವಿದೆ. ಅದರ ಕಾಂಕ್ರೀಟ್ ಗೋಡೆಗಳು ಎಷ್ಟು ದಪ್ಪ ಇವೆಯೆಂದರೆ ಅಣ್ವಸ್ತ್ರ ದಾಳಿ ನಡೆದರೂ ವಿಕಿರಣ ಇದರ ಒಳಗೆ ಪ್ರವೇಶಿಸಲು ಸಾಧ್ಯವೇ ಇಲ್ಲ. ಶ್ವೇತಭವನ ಕಟ್ಟಡದ ನಾನಾ ಕಡೆಗಳಿಂದ ಈ ಬಂಕರ್ ಪ್ರವೇಶಿಸಲು ರಹಸ್ಯ ದಾರಿಗಳಿವೆ ಎಂಬುದಷ್ಟೇ ಸಾರ್ವಜನಿಕರಿಗೆ ಗೊತ್ತಿರುವ ವಿಷಯ. ಬಳಿದೆಲ್ಲಾ ಟಾಪ್ ಸೀಕ್ರೇಟ್.
ಭೂಮಿಯಿಂದ ಸುಮಾರು 1000 ಅಡಿ ಆಳದಲ್ಲಿ ಈ ಬಂಕರ್ ಇದೆ. ಇದರಿಂದ ದೇಶದ ಪ್ರಮುಖ ನಗರಗಳಿಗೆ ನೇರ ಸಂಪರ್ಕ ಕಲ್ಪಿಸುವ ಸುರಂಗ ಮಾರ್ಗವಿದೆ ಎಂದು ಹೇಳಲಾಗುತ್ತದೆ. ಇಲ್ಲಿ ಅಧ್ಯಕ್ಷರ ತುರ್ತು ಕಾರ್ಯಾಚರಣೆ ಕೇಂದ್ರ (ಪಿಇಒಸಿ) ಮತ್ತು ಡೀಪ್ ಅಂಡರ್ಗ್ರೌಂಡ್ ಕಮಾಂಡ್ ಸೆಂಟರ್ (ಡಿಯುಸಿ) ಇದ್ದು, ಶ್ವೇತಭವನದ ರಕ್ಷಣೆಗಾಗಿಯೇ ನಿಯೋಜಿತರಾದ ಸೇನಾ ಸಿಬ್ಬಂದಿಗೆ ವಾಸ್ತವ್ಯ ಮಾಡಲು ಸಾಧ್ಯವಿದೆ. ಇದನ್ನು ಹೊರತು ಪಡಿಸಿ ಅಧ್ಯಕ್ಷರ ಏರ್ ಲಿಫ್ಟ್ ಗ್ರೂಪ್, ವೈದ್ಯಕೀಯ ತಂಡ, ಸುಸಜ್ಜಿತ ಹೆಲಿಕಾಪ್ಟರ್ ತಂಡ, ಅಧ್ಯಕ್ಷರಿಗೆ ಆಹಾರ ಪೂರೈಕೆ ತಂಡ ಮತ್ತು ಸಾರಿಗೆ ವಿಭಾಗದ ಪ್ರತಿನಿಧಿಗಳು ಕೂಡ ಇಲ್ಲಿ ಉಳಿದುಕೊಳ್ಳಲು ಸಾಧ್ಯವಿದೆ.
ಅಣ್ವಸ್ತ್ರ, ಜೈವಿಕ ಮತ್ತು ರಾಸಾಯನಿಕ ಅಸ್ತ್ರಗಳ ದಾಳಿಗೂ ಜಗ್ಗದ ಈ ಬಂಕರ್ ನ್ನು ನಿರ್ಮಿಸಲು ಸುಮಾರು 2,50,000 ಘನ ಮೀಟರ್ ಪ್ರಮಾಣದ ಮಣ್ಣು ಮತ್ತು ಕಲ್ಲನ್ನು ಅಗೆಯಲಾಗಿತ್ತು. ಮಣ್ಣು ಮತ್ತು ಕಲ್ಲಿನ್ನು ನಾನಾ ಪರೀಕ್ಷೆಗೆ ಒಳಪಡಿಸಿ ಅದರ ಸಾಮರ್ಥ್ಯದ ಕೂಲಂಕಷ ಪರೀಕ್ಷೆಯ ಬಳಿಕವೇ ಬಂಕರ್ ನಿರ್ಮಿಸಲಾಗಿದೆ.
ಅವಳಿ ಗೋಪುರಗಳ ಮೇಲೆ ನಡೆದ ದಾಳಿಯ ಬಳಿಕ ಈ ಬಂಕರ್ ಗೆ ಕಾಯಕಲ್ಪ ನೀಡಲಾಯಿತು. ಅದರ ನಿರ್ಮಾಣದ ವೇಳೆ, ಅಲ್ಲಿನ ಕೆಲಸಗಾರರು, ಗುತ್ತಿಗೆದಾರರು ಯಾರ ಜತೆಗೂ ಮಾತನಾಡುವಂತಿರಲಿಲ್ಲ ಅಷ್ಟೇ ಅಲ್ಲ ತಾವು ಮಾಡುತ್ತಿರುವ ಕೆಲಸದ ಪೂರ್ಣ ವಿವರ ಅವರಿಗೆ ತಿಳಿಯುತ್ತಿರಲೇ ಇಲ್ಲ ಎಂದು ಹಿರಿಯ ಅಧಿಕಾರಿಗಳನ್ನು ಉಲ್ಲೇಖಿಸಿ ನ್ಯೂಯಾರ್ಕ್ ಟೈಮ್ಸ್ 2008ರಲ್ಲಿ ವರದಿ ಮಾಡಿದೆ.
Good information 👍