16.7 C
Karnataka
Sunday, November 24, 2024

    ಚೀನಾದ ಹುಸಿ ಆಕ್ರಮಣ ನೀತಿಯ ಹಿಂದೆ ಹಲವು ತಂತ್ರ

    Must read

    ರಾಷ್ಟ್ರೀಯತೆ ವಿಷಯ ಬಂದಾಗ ಜನತೆ ಒಟ್ಟಾಗುತ್ತಾರೆ ಎಂಬುದು ಎಲ್ಲರಿಗೂ ತಿಳಿದ ವಿಚಾರ. ತನ್ನ ವೈಫಲ್ಯ, ಸಫಲತೆಗಳನ್ನು ಒಳಗಡೆಯೇ ಬಚ್ಚಿಟ್ಟುಕೊಂಡಿರುವ ಚೀನಾ ಕೂಡ ಇದಕ್ಕೆ ಹೊರತಲ್ಲ. ತನ್ನ ಮೇಲೆ ವೈಯಕ್ತಿಕವಾಗಿ ಕೇಳಿ ಬಂದಿರುವ ಎಲ್ಲಾ ಆರೋಪ ಮತ್ತು ಅಪಾದನೆಗಳನ್ನು ಹತ್ತಿಕ್ಕಲು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಹೊಸದಾಗಿ ಹೆಣೆದಿರುವ ಬಲೆಯೇ ಭಾರತ-ಚೀನಾ ನಡುವಿನ ಸಂಘರ್ಷ.

    ಈ ಹಿಂದೆ ಅಂದರೆ ದಶಕಗಳ ಹಿಂದೆ ಸೇನಾ ಬಲದ ವಿಷಯದಲ್ಲಿ ದುರ್ಬಲವಾಗಿದ್ದ ಭಾರತಕ್ಕೆ ಹೀನಾಯ ಸೋಲು ಉಣಿಸಿದ್ದ ಚೀನಾ ಈ ಬಾರಿ ಕೇವಲ ಅಂತಾರಾಷ್ಟ್ರೀಯ ಒತ್ತಡವನ್ನು ಹೆಚ್ಚಿಸಲಷ್ಟೇ ಮುಂದಾಗಿದೆ. ಲಡಾಖ್ ಘಟನೆಯೂ ಇದಕ್ಕಿಂತ ಹೆಚ್ಚಿನದ್ದೇನಲ್ಲ. ಯಾರೂ ಕೂಡ ಪೂರ್ಣ ಪ್ರಮಾಣದ ಯುದ್ಧ ಎರಡು ಅಣ್ವಸ್ತ್ರ ಶಕ್ತ ರಾಷ್ಟ್ರಗಳ ನಡುವೆ ನಡೆಯಬಹುದು ಎಂಬ ನಿರೀಕ್ಷೆ ಅಥವಾ ಅತಿಯಾದ ಭಯಂಕರ ನಂಬಿಕೆಯನ್ನು ಉಳಿಸಿಕೊಳ್ಳಬೇಕಾಗಿಲ್ಲ. ಇದು ಒಂದು ಹಂತದಲ್ಲಿ ಸಹಜವಾಗಿಯೇ “ಪರಸ್ಪರ ಮಾತುಕತೆ”ಯ ಮೂಲಕ ಬಗೆಹರಿಯಲಿರುವ ಸಮಸ್ಯೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.

    ಚೀನಾದ ಸಮಸ್ಯೆ

    ಕೋವಿಡ್ -19 ಸಮಸ್ಯೆಯು ಚೀನಾವನ್ನು ಸದ್ಯದ ಮಟ್ಟಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಏಕಾಂಗಿಯಾಗಿಸಿದೆ. ಒಂದೆಡೆ ಅಮೆರಿಕ ಗುಡುಗಿದೆ.ಇನ್ನೊಂದೆಡೆ ಆಸ್ಟ್ರೇಲಿಯಾ ಸೇರಿದಂತೆ ಸುಮಾರು 140ಕ್ಕೂ ಹೆಚ್ಚು ದೇಶಗಳು ವೈರಸ್ ಹಾವಳಿ ಹೇಗೆ ಆರಂಭವಾಯಿತು ಎಂಬ ಬಗ್ಗೆ ಸ್ವತಂತ್ರ ತನಿಖೆಗೆ ಒತ್ತಾಯಿಸಿದ್ದು, ಅದಕ್ಕೆ ಭಾರತ ಕೂಡ ಪೂರ್ಣ ಸಮ್ಮತಿ ನೀಡಿದೆ. ಚೀನಾದಿಂದ ನಿರ್ಗಮಿಸುತ್ತಿರುವ ಕಂಪನಿಗಳಿಗೆ ಪೂರ್ಣಕುಂಭದ ಸ್ವಾಗತವನ್ನು ಕೋರುತ್ತಿರುವ ಭಾರತದಲ್ಲಿ ರಿಮೂವ್ ಚೀನಾ ಪ್ರಾಡಕ್ಟ್ ಆಂದೋಲನ ತೀವ್ರ ಸ್ವರೂಪ ಪಡೆಯುತ್ತಿದೆ. ಇದೆಲ್ಲವೂ ಚೀನಾಕ್ಕೆ ತಲೆ ನೋವಾಗಿ ಪರಿಣಮಿಸಿದೆ. ಹೀಗಾಗಿಯೇ ಭಾರತದ ಮೇಲೆ ಜತೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೇರುವ ಮೂಲಕ ತನ್ನ ಆರ್ಥಿಕತೆಗೆ ಹೊಡೆತ ಬೀಳದಂತೆ ತಡೆಯುವ ಯತ್ನವೇ ಲಡಾಖ್ ಸಂಘರ್ಷ ಎಂದು ವಿಶ್ಲೇಷಿಸಲಾಗುತ್ತಿದೆ.

    ಇವುಗಳನ್ನು ಹೊರತು ಪಡಿಸಿ ಚೀನಾದ ಭಯಕ್ಕೆ ಹಲವು ಕಾರಣಗಳಿವೆ. ರಷ್ಯಾದಲ್ಲಿ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಇಡೀ ದೇಶವನ್ನು ಸಮರ್ಥವಾಗಿ ನಿಭಾಯಿಸಿ ತಾವು ಮತ್ತೊಂದು ಅವಧಿಗೆ ಅಧ್ಯಕ್ಷರಾಗುವ ಸಾಧ್ಯತೆ ಬಹುತೇಕ ಖಚಿತಪಡಿಸಿಕೊಂಡಿದ್ದು ಅದಕ್ಕಾಗಿ ರಾಜಕೀಯವಾಗಿ ಶಾಸನಾತ್ಮಕವಾಗಿ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ  ಜಿನ್ ಪಿಂಗ್  ವಿರುದ್ಧ ಮಾರ್ಚ್ ನಲ್ಲೇ ಕಮ್ಯೂನಿಸ್ಟ್ ಪಕ್ಷದ ಅತ್ಯುನ್ನತ ನೀತಿ ನಿರ್ದೇಶಕ ಘಟಕವಾದ ಪಾಲಿಟ್ ಬ್ಯೂರ್ ಗೆ ಹಲವರು ಪತ್ರ ಬರೆದು, ಚೀನಾದ ಬಲಿಷ್ಠತೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಜಿನ್ ಪಿಂಗ್ ಅವರನ್ನು ಪದಚ್ಯುತಗೊಳಿಸಬೇಕು ಎಂಬುದನ್ನು ಸಕಾರಣವಾಗಿ ಉಲ್ಲೇಖಿಸಿದ್ದರು. ಆ ಬಳಿಕ ಕೆರಳಿದ್ದ ಪಿಂಗ್ ಪಟ್ಟ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ಕೈಗೊಂಡಿದ್ದರು. ಉಳಿದಂತೆ ನಾನಾ ವಿಶ್ವವಿದ್ಯಾಲಯಗಳ ಪ್ರೊಫೆಸರ್ ಗಳು ಸೇರಿದಂತೆ ಚೀನಾದ ಅಭಿವೃದ್ಧಿ ಪರವಾಗಿರುವ ವ್ಯಕ್ತಿಗಳು ಕೂಡ ಈ ನಿಟ್ಟಿನಲ್ಲಿ ಪತ್ರ ಬರೆದು ಎಚ್ಚರಿಸಿದ್ದರು.

    ರಾಷ್ಟ್ರೀಯವಾದದ ಸೋಗು

    ಈ ಸಂದರ್ಭದಲ್ಲಿ ಪಿಂಗ್ ರಾಷ್ಟ್ರೀಯವಾದದ ಸೋಗನ್ನು ಧರಿಸಲು ಆರಂಭಿಸಿದರು. ಕೊರೊನಾ ವೈರಸ್ ಹಾವಳಿಯಿಂದ ದೇಶವನ್ನು ಕಾಪಾಡಲು ಅಸಮರ್ಥರಾಗಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಟೀಕೆಗೆ ಗುರಿಯಾದ ಅವರು ಅದಕ್ಕಾಗಿ ರಾಷ್ಟ್ರೀಯ ಭದ್ರತಾ ಕಾನೂನನ್ನು ಜಾರಿಗೆ ತರಲು ರಹಸ್ಯ ಯೋಜನೆ ರೂಪಿಸುವಲ್ಲಿ ಸದ್ಯದ ಮಟ್ಟಿಗೆ ಯಶಸ್ವಿಯಾದರು. ಆದರೆ, ಹಾಂಗ್ ಕಾಂಗ್ ಕೇವಲ ಚೀನೀಯರನ್ನು ಮಾತ್ರ ಒಳಗೊಂಡಿಲ್ಲ. ಅಲ್ಲಿ 7.5 ದಶ ಲಕ್ಷಕ್ಕೂ ಹೆಚ್ಚು ವಿದೇಶಿ ಪ್ರಜೆಗಳು ವಾಸಿಸುತ್ತಿದ್ದಾರೆ. ಹೀಗಾಗಿ ಅಲ್ಲಿ ಇಂತಹ ಕಾನೂನು ಜಾರಿಗೆ ತಂದರೆ ಅಗ ಸಹಜವಾಗಿಯೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿರೋಧ ವ್ಯಕ್ತವಾಗುತ್ತದೆ ಎಂಬುದನ್ನು ತಿಳಿಯದಷ್ಟು ಅಮಾಯಕ ಪಿಂಗ್ ಅಲ್ಲ. ಆದರೂ ಅ ನಿಟ್ಟಿನಲ್ಲಿ ಮನಸ್ಸು ಮಾಡಿರುವುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೇರುವ ಕಾರ್ಯತಂತ್ರ ಎಂದೇ ಹೇಳಲಾಗುತ್ತಿದೆ.

    ಭಾರತದ ಜತೆ ಸಂಘರ್ಷ

    ಭಾರತ-ಚೀನಾ ಎರಡು ಅಣ್ವಸ್ತ್ರ ಸಶಕ್ತ ರಾಷ್ಟ್ರಗಳು. ಹೀಗಾಗಿ ಇಲ್ಲಿ ನಡೆಯುವ ಯಾವುದೇ ಸಂಘರ್ಷ ಕೇವಲ ಏಷ್ಯಾ ಖಂಡಕ್ಕೆ ಸೀಮಿತವಾಗುವುದಿಲ್ಲ. ಅದರಲ್ಲೂ ಭಾರತದಲ್ಲಿ ನರೇಂದ್ರ ಮೋದಿಯಂತಹ ವರ್ಚಸ್ವಿ ನಾಯಕ ಪ್ರಧಾನಿಯಾಗಿದ್ದು, ಈಗಾಗಲೇ ಸರ್ಜಿಕಲ್ ಸ್ಟ್ರೈಕ್ ನಂಥ ವಿದ್ಯಮಾನಗಳ ಮೂಲಕ ವಿಶ್ವದ ಗಮನ ಸೆಳೆದಿದ್ದಾರೆ. ಆದ್ದರಿಂದ ಇಲ್ಲಿ ಆಗುವ ಚಿಕ್ಕ ಸಂಘರ್ಷವನ್ನೂ ತೀರಾ ಲಘುವಾಗಿ ಯಾರೂ ಪರಿಗಣಿಸಲು ಸಾಧ್ಯವಿಲ್ಲ. ಹೀಗಾಗಿಯೇ ಕೆಲವು ವರ್ಷಗಳಿಂದ ಲಡಾಖ್ ವಲಯದಲ್ಲಿ ಭಾರತದಿಂದ ನಡೆಯುತ್ತಿರುವ ಮೂಲಸೌಕರ್ಯ ಅಭಿವೃದ್ಧಿ ಕಾರ್ಯ ಈಗ ಹೆಚ್ಚು ಪ್ರಚಾರ ಪಡೆಯುತ್ತಿದ್ದು, ಮುಖ್ಯ ಭೂಮಿಕೆಗೆ ಬಂದಿದೆ.

    ಎರಡೂ ದೇಶಗಳಿಗೂ ಪೂರ್ಣ ಪ್ರಮಾಣದ ಯುದ್ಧ ಬೇಕಾಗಿಲ್ಲ. ಯಾಕೆಂದರೆ ಭಾರತವು ಈಗ ನೆಹರೂ ಕಾಲದಂತೆ ದುರ್ಬಲವಾಗಿಲ್ಲ. ಸಶಕ್ತ ಸೇನೆ, ರಫೇಲ್ ಸೇರಿದಂತೆ ನಾನಾ ಆಧುನಿಕ ಯುದ್ಧ ವಿಮಾನಗಳು, ಉಪಗ್ರಹ ನಿರ್ದೇಶಿತ ಕ್ಷಿಪಣಿ ತಂತ್ರಜ್ಞಾನ, ಅತ್ಯುನ್ನತ ಯುದ್ಧ ಟ್ಯಾಂಕ್ ಸೇರಿದಂತೆ ಸೇನಾ ವಿಭಾಗದಲ್ಲಿ ಸಾಕಷ್ಟು ಮುಂದುವರಿದಿದೆ. ಹೀಗಾಗಿ ಯುದ್ಧ ನಡೆಯುವ ಸಂಭವ ತೀರಾ ಕಡಿಮೆ. ಆದಾಗ್ಯೂ, ಬೆದರಿಸಿ ನೋಡುವ ಎಂಬ ಚೀನಾದ ತಂತ್ರವು ಯಾವಾಗಲೂ ಮುಂದುವರಿಯುತ್ತಲೇ ಇರುತ್ತದೆ. ಇದನ್ನು ಯಾವ ರೀತಿ ಭಾರತ ಯಶಸ್ವಿಯಾಗಿ ಹತ್ತಿಕ್ಕಿ ಇದೊಂದು ಭ್ರಮೆ ಎಂದು ವಿಶ್ವಕ್ಕೆ ತೋರಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.-

    ಕೌಶಿಕ್ ಗಟ್ಟಿಗಾರು

    ಶ್ರೀವತ್ಸ ನಾಡಿಗ್
    ಶ್ರೀವತ್ಸ ನಾಡಿಗ್https://kannadapress.com/
    ಶ್ರೀವತ್ಸ ನಾಡಿಗ್ ಕನ್ನಡಪ್ರೆಸ್.ಕಾಮ್ ನ ಪ್ರಧಾನ ಸಂಪಾದಕ ಮತ್ತು ಸಂಸ್ಥಾಪಕ
    spot_img

    More articles

    1 COMMENT

    1. The write up brings forth vividly the desperatness of China in covering up its failure in effectively handling the Corona crisis. This is being done by diverting the global attention on a non issue like border dispute with India, thereby whipping up mass sentiments in its home country. By this it also wants to armtwist India so that it’s economic interests are safeguarded. The article ends with a positive note that India with its present global reputation would sooner than later would come out of this trap by exposing China’s sinister motives.

    LEAVE A REPLY

    Please enter your comment!
    Please enter your name here

    Latest article

    error: Content is protected !!