ಸುಮಾರು 9,961 ಕೋಟಿ ರೂ. ಸಾಲದ ಸುಳಿಯಲ್ಲಿ ಸಿಲುಕಿ ಬ್ರಿಟನ್‌ಗೆ ಪರಾರಿಯಾಗಿದ್ದ ಮದ್ಯ ದೊರೆ, ಉದ್ಯಮಿ ವಿಜಯ್ ಮಲ್ಯ ಇನ್ನೇನು ಭಾರತಕ್ಕೆ ಗಡಿಪಾರು ಆಗಲಿದ್ದಾರೆ ಎಂಬ ಸುದ್ದಿ ಕೆಲವು ದಿನಗಳಿಂದ ವ್ಯಾಪಕವಾಗಿ ಹಬ್ಬಿತ್ತು. ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಕೂಡ ಈ ಕುರಿತು ನಡೆಯಬೇಕಾಗಿದ್ದ ಪ್ರಕ್ರಿಯೆಗಳು ಪೂರ್ಣಗೊಂಡಿವೆ ಎಂದು ಹೇಳಿವೆ ಎಂದು ಹೇಳಲಾಗಿತ್ತು. ಹೀಗಾಗಿ ಬುಧವಾರ ರಾತ್ರಿ ಲಂಡನ್‌ನಿಂದ ಹೊರಟು ಗುರುವಾರ ಭಾರತಕ್ಕೆ ಮದ್ಯದ ದೊರೆ ತಲುಪಬೇಕಿತ್ತು.
ಆದರೆ ವಸ್ತುಸ್ಥಿತಿ ಹಾಗಿಲ್ಲ. ಸದ್ಯದ ಮಟ್ಟಿಗೆ ಮಲ್ಯ ಭಾರತಕ್ಕೆ ಗಡಿಪಾರು ಆಗುವ ಸಾಧ್ಯತೆಯಿಲ್ಲ. ಭಾರತದ ವಿಮಾನವನ್ನೂ ಮಲ್ಯ ಸದ್ಯಕ್ಕೆ ಹತ್ತಿಲ್ಲ ಮತ್ತು ಅಂತಹ ಸಾಧ್ಯತೆಗಳು ಕೂಡ ಕ್ಷೀಣ ಎನ್ನುವುದು ಹೊಸ ಬೆಳವಣಿಗೆ. ಮಲ್ಯ ಅವರ ಆಪ್ತ ಸಹಾಯಕಿ ಹಾಗೂ ಸ್ವತಃ ಮಲ್ಯ ಕೂಡ ಈ ಕುರಿತು ಯಾವುದೇ ಮಾಹಿತಿ ಇಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.
ಕೇಂದ್ರ ಗೃಹ ಕಾರ್ಯದರ್ಶಿ ಪ್ರೀತಿ ಪಾಟೀಲ್ ಇನ್ನೂ ಗಡಿಪಾರು ಒಪ್ಪಂದಕ್ಕೆ ಕಾನೂನಾತ್ಮಕ ಕಾರಣಗಳಿಂದಾಗಿ ಸಹಿ ಮಾಡಿಲ್ಲ ಎಂದು ತಿಳಿದು ಬಂದಿದ್ದು, ಇದುವೇ ಹೊಸ ಬೆಳವಣಿಗೆಗೆ ಕಾರಣ ಎಂದು ಹೇಳಲಾಗಿದೆ. ಬ್ರಿಟನ್‌ನಲ್ಲಿ ರಾಜಕೀಯ ಆಶ್ರಯ ಪಡೆಯಲು ಮಲ್ಯ ಯತ್ನಿಸುತ್ತಿದ್ದು, ಈ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಸಿದ್ದಾರೆ, ಮಾತ್ರವಲ್ಲ ಅವರ ಮೇಲೆ ಡಿಯಾಗಿಯೋದ 303 ಕೋಟಿ ರೂ. ವಂಚನೆ ಸೇರಿದಂತೆ ಕೆಲವು ಪ್ರಕರಣಗಳ ವಿಚಾರಣೆ ಇನ್ನೂ ಅಲ್ಲಿನ ಸಿವಿಲ್ ಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇದೆ. ಇದು ಕೂಡ ಮಲ್ಯ ಗಡಿಪಾರು ವಿಳಂಬಕ್ಕೆ ಕಾರಣವಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬ್ರಿಟನ್‌ನ ಮೆಟ್ರೊಪಾಲಿಟನ್ ಪೊಲೀಸ್ ಮುಖ್ಯಸ್ಥರು ಈ ಬಗ್ಗೆ ಇನ್ನೂ ಯಾವುದೇ ರೀತಿಯ ನಿರ್ದೇಶನ ತಮಗೆ ಬಂದಿಲ್ಲ ಎಂದು ಹೇಳಿದ್ದಾರೆ. ಮೇ 14ರಂದು ಬ್ರಿಟನ್ ಕೋರ್ಟ್‌ನ ಎದುರು ತಮ್ಮ ಕಾನೂನು ಹೋರಾಟದಲ್ಲಿ ಮಲ್ಯ ಸೋತು ಹೋಗಿದ್ದರು. ನ್ಯಾಯಾಲಯವು 28 ದಿನಗಳ ಒಳಗೆ ಅವರನ್ನು ಭಾರತಕ್ಕೆ ಗಡಿಪಾರು ಮಾಡುವಂತೆ ತೀರ್ಪು ನೀಡಿದ್ದ ಹಿನ್ನೆಲೆಯಲ್ಲಿ ಈ ಊಹಾಪೋಹಗಳು ಹಬ್ಬಿದ್ದವು.
ಸಾಮಾನ್ಯ ಜನ 100 ರೂಪಾಯಿ ಬಾಕಿ ಉಳಿಸಿದರೆ ಏನೇನೋ ಕಾನೂನು. ಮಲ್ಯನಂತವರ ಸಾಲ ವಸೂಲಿಗೆ ಅಥವಾ ಭಾರತಕೆ ಕರೆತರಲು ,ಸಾಲ ವಸೂಲಿ ಮಾಡಲು ಆಗುತಿಲ್ಲ. ಏನು ಹೇಳೋದು.