ಅಶೋಕ ಹೆಗಡೆ
ಕೊರೊನಾ ಪ್ರಕರಣಗಳು ಒಂದೇಸಮನೆ ಏರುತ್ತಿವೆ. ಕೊರೊನಾ ಜತೆ ಜೀವನ ನಡೆಸುವುದು ಅನಿವಾರ್ಯ ಎನ್ನುವುದನ್ನು ಮನವರಿಕೆ ಮಾಡಿಕೊಂಡಿರುವ ಜನರು ನಿಧಾನಕ್ಕೆ ಎಂದಿನ ಜೀವನಶೈಲಿಗೆ ಮರಳುತ್ತಿದ್ದಾರೆ. ಇದೇವೇಳೆ ರಾಜ್ಯ ಸಭೆ ಮತ್ತು ವಿಧಾನ ಪರಿಷತ್ ಚುನಾವಣೆಗಳು ಎದುರಾಗಿವೆ. ರಾಜಕೀಯ ಪಕ್ಷಗಳೂ ಕೊರೊನಾ ವಿಚಾರವನ್ನು ಮೆಲ್ಲಗೆ ಪಕ್ಕಕ್ಕೆ ಸರಿಸಿ ಚುನಾವಣೆಯತ್ತ ಗಮನ ಕೇಂದ್ರೀಕರಿಸಿವೆ.ವಿಧಾನ ಪರಿಷತ್ ಚುನಾವಣೆಗೆ ದಿನಾಂಕ ಇನ್ನೂ ನಿಗದಿಯಾಗಿಲ್ಲ. ರಾಜ್ಯಸಭೆಗೆ ಜೂನ್ ೧೯ರಂದು ಚುನಾವಣೆ ನಡೆಯಲಿದೆ. ಸದ್ಯ ಎಲ್ಲ ಪಕ್ಷಗಳೂ ರಾಜ್ಯಸಭೆ ಚುನಾವಣೆ ವಿಚಾರದಲ್ಲಿಯೇ ಹೆಚ್ಚು ತಲೆ ಕೆಡಿಸಿಕೊಂಡಿವೆ.
ಚುನಾವಣೆಯ ಮೊದಲ ಬಿಸಿ ಎದುರಾಗಿರುವುದು ಬಿಜೆಪಿಗೆ. ಸಂಖ್ಯಾಬಲದ ಆಧಾರದಲ್ಲಿ ಎರಡು ಸ್ಥಾನ ನಿರಾಯಾಸವಾಗಿ ಗೆಲ್ಲಬಹುದು. ಅದರಲ್ಲಿ ಬೆಳಗಾವಿಯ ಪ್ರಭಾಕರ ಕೋರೆ ಆಯ್ಕೆ ಬಹುತೇಕ ಖಚಿತವಾಗಿದೆ. ಪಕ್ಷದ ಸಂಪನ್ಮೂಲದ ದೃಷ್ಟಿಯಿಂದ ಕೋರೆಯಂತಹವರನ್ನು ಕಡೆಗಣಿಸಲು ಸಾಧ್ಯವಿಲ್ಲ. ಶಾಸಕ ಉಮೇಶ ಕತ್ತಿ ತಮ್ಮ ಸಹೋದರ ರಮೇಶ ಕತ್ತಿಗಾಗಿ ಟಿಕೆಟ್‌ಗಾಗಿ ಪ್ರಯತ್ನ ನಡೆಸಿದಂತೆ ಅವರ ಅಂತರಂಗದಲ್ಲಿ ತಾವು ಮಂತ್ರಿಯಾಗಬೇಕೆಂಬ ಬಯಕೆ ಇತ್ತು. ಎರಡೂ ಗುರಿ ಇಟ್ಟರೆ ಒಂದಾದರೂ ತಾಗಲಿ ಎನ್ನುವುದು ಅವರ ನಡೆಯಾಗಿತ್ತು. ‘ನಿನ್ನನ್ನು ಮಂತ್ರಿ ಮಾಡ್ತೀನಿ’ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ ನೀಡಿದ್ದಾರೆ. ಅಲ್ಲಿಗೆ ಕತ್ತಿ ಸಮಾಧಾನಗೊಂಡಿದ್ದಾರೆ.
ಎರಡನೇ ಸ್ಥಾನಕ್ಕೆ ತೇಜಸ್ವಿನಿ ಅನಂತಕುಮಾರ್, ಸುಧಾಮೂರ್ತಿ, ಆರ್ಥಿಕ ತಜ್ಞ ಕೆ.ವಿ.ಕಾಮತ್ ಹೆಸರುಗಳನ್ನು ಬಿಜೆಪಿ ರಾಜ್ಯ ನಾಯಕರು ತೇಲಿ ಬಿಟ್ಟಿದ್ದಾರೆ. ಇದರ ನಡುವೆ ಪಕ್ಷದಲ್ಲಿ ರಾಜ್ಯದ ಉಸ್ತುವಾರಿಯಾಗಿರುವ ಆಂಧ್ರಪ್ರದೇಶದ ವಿ.ಮುರಳೀಧರರಾವ್ ಸಹ ಟಿಕೆಟ್ ಕಸರತ್ತು ನಡೆಸಿದ್ದಾರೆ ಎಂಬ ವದಂತಿ ಇದೆ. ಅನಿರೀಕ್ಷಿತ ಹೆಸರುಗಳ್ನು ತೇಲಿಬಿಡುವುದು ಬಿಜೆಪಿ ಮೊದಲಿನಿಂದಲೂ ಅನುಸರಿಸಿಕೊಂಡು ಬಂದಿರುವ ತಂತ್ರವಾಗಿದೆ.
ತೇಜಸ್ವಿನಿ ಅನಂತಕುಮಾರ್ ಸಮರ್ಥ ನಾಯಕಿ, ಉತ್ತಮ ವಾಗ್ಮಿ. ಕಳೆದ ಲೋಕಸಭೆ ಚುನಾವಣೆ ವೇಳೆ ಅನ್ಯಾಯವಾಗಿದೆ. ಅದನ್ನು ಸರಿಪಡಿಸಿ ದಿ.ಅನಂತಕುಮಾರ್ ಅವರಿಗೆ ಗೌರವ ಸಲ್ಲಿಸಲು ಇದು ಸರಿಯಾದ ಸಮಯ. ಸುಧಾಮೂರ್ತಿ ಅವರನ್ನು ಕಣಕ್ಕೆ ಇಳಿಸಿದರೆ ಪಕ್ಷಕ್ಕೆ ಗೌರವ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬದಲು ಬ್ರಿಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷ ಕೆ.ವಿ.ಕಾಮತ್ ಅವರಿಗೆ ಆ ಹೊಣೆ ನೀಡಲು ಪ್ರಧಾನಿ ನರೇಂದ್ರ ಮೋದಿ ಬಯಸಿದ್ದಾರೆ ಎಂಬ ಸುದ್ದಿ ಕೆಲತಿಂಗಳುಗಳಿಂದ ಹರಿದಾಡುತ್ತಲೇ ಇದೆ. ಹೀಗೆ ಮೂವರ ಹೆಸರಿನ ಹಿಂದೆಯೂ ಒಂದೊಂದು ಕಾರಣಗಳಿವೆ. ಮೂವರೂ ಸಮರ್ಥರೇ ಎನ್ನುವುದರಲ್ಲಿ ಎರಡು ಮಾತಿಲ್ಲ. ಹಾಗೆಯೇ ಎರಡನೇ ಸ್ಥಾನಕ್ಕೆ ಪಕ್ಷದ ಇತರರು ಲಾಬಿ ನಡೆಸಬಾರದು ಎಂಬ ಉದ್ದೇಶದಿಂದ ಮುರಳೀಧರ ರಾವ್ ಹೆಸರು ಗಾಳಿಗೆ ಬಂದಿರಬಹುದು. ಬಿಜೆಪಿಯ ನಡೆ ಗಮನಿಸಿದರೆ ಈ ನಾಲ್ವರನ್ನೂ ಬಿಟ್ಟು ಐದನೇ ವ್ಯಕ್ತಿಯನ್ನು ಕಣಕ್ಕೆ ಇಳಿಸಿದರೆ ಅಚ್ಚರಿ ಇಲ್ಲ.
ಖರ್ಗೆಗೆ ಒಲಿದ ಕಾಂಗ್ರೆಸ್ ಟಿಕೆಟ್
ಕಾಂಗ್ರೆಸ್‌ನಲ್ಲಿ ಕೇಂದ್ರದ ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ ಹಾಗೂ ತುಮಕೂರಿನ ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಹೆಸರು ಕೇಳಿಬಂದಿತ್ತು. ಸದ್ಯದ ಸ್ಥಿತಿಯಲ್ಲಿ ರಾಜ್ಯಸಭೆಯಲ್ಲಿ ಸರಕಾರದ ವಿರುದ್ಧ ಗಟ್ಟಿ ಧ್ವನಿಯಲ್ಗಲಿ ಮಾತನಾಡುವ ವ್ಯಕ್ತಿಗಳ ಅಗತ್ಯ ಕಾಂಗ್ರೆಸ್‌ಗೆ ಇದೆ. ಆ ದೃಷ್ಟಿಯಿಂದ ನೋಡಿದರೆ ಖರ್ಗೆ ಸೂಕ್ತ ಆಯ್ಕೆ. ಹೀಗಾಗಿಯೇ ಅವರ ಹೆಸರು ಘೋಷಣೆ ಆಗಿದೆ. ಆದರೆ ಹಾಲಿ ಸಂಸದರಾಗಿದ್ದರೂ ಮುದ್ದಹನುಮೇಗೌಡರಿಗೆ ಮೈತ್ರಿ ಕಾರಣದಿಂದ ಕಳೆದ ಲೋಕಸಭೆ ಟಿಕೆಟ್ ನಿರಾಕರಿಸಲಾಗಿತ್ತು. ಆಗ, ಅವಕಾಶ ಸಿಕ್ಕಾಗ ನ್ಯಾಯ ದೊರಕಿಸಿಕೊಡುವ ಭರವಸೆ ನೀಡಲಾಗಿತ್ತು.ಆದರೆ ಅವರು ಈಗ ಏನು ಮಾಡುತ್ತಾರೆ ಎಂಬುದು ಪ್ರಶ್ನೆ.
ಜೆಡಿಎಸ್‌ಗೆ ಸ್ವತಂತ್ರವಾಗಿ ಗೆಲ್ಲಲು ಸಂಖ್ಯಾಬಲದ ಕೊರತೆ ಇದೆ. ಕೊಟ್ಟು-ಕೊಳ್ಳುವ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡರೆ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡರೇ ಅಭ್ಯರ್ಥಿಯಾಗಬಹುದು. ವಿಧಾನ ಪರಿಷತ್‌ನಲ್ಲಿ ಒಂದು ಸ್ಥಾನವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಟ್ಟು, ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಹೆಚ್ಚುವರಿ ಮತಗಳಿಂದ ದೇವೇಗೌಡರನ್ನು ಗೆಲ್ಲಿಸುವ ಸೂತ್ರ ಸಿದ್ಧವಾಗುತ್ತಿದೆ. ಅದು ಅಂತಿಮಗೊಂಡರೆ ಗೌಡರ ಆಯ್ಕೆ ಖಚಿತ. ಆರಂಭದಲ್ಲಿ, ‘ಪಕ್ಷದ ನಿಷ್ಠಾವಂತರಿಗೆ ಟಿಕೆಟ್ ನೀಡೋಣ. ಕುಟುಂಬ ರಾಜಕಾರಣದ ಅಪವಾದ ಬೇಡ’ ಎಂದು ಗೌಡರು ಮೊಸಳೆ ಕಣ್ಣೀರು ಸುರಿಸುತ್ತಾರೆ. ಕೊನೆಗೆ ರಾಜ್ಯಸಭೆಯಲ್ಲಿ ಬಿಜೆಪಿ ವಿರುದ್ಧ ಮಾತನಾಡಲು ಅನುಭವಿಗಳು ಬೇಕು ಎಂದು ಕಾಂಗ್ರೆಸ್ ಮತ್ತು ಇತರ ಮಿತ್ತ್ರ ಪಕ್ಷಗಳು ಒತ್ತಡ ಹಾಕಿದ್ದರಿಂದ ಅನಿವಾರ್ಯವಾಗಿ ಸ್ಪರ್ಧಿಸಬೇಕಾಯಿತು ಎಂಬ ಸಮಜಾಯಿಷಿ ನೀಡುತ್ತಾರೆ.
ಅಂದಹಾಗೆ ಸ್ವತಂತ್ರವಾಗಿ ಒಂದು ಸ್ಥಾನ ಗೆಲ್ಲುವ ಸಾಮರ್ಥ್ಯ ಇದ್ದಾಗ ಜೆಡಿಎಸ್ ರಾಜ್ಯಸಭೆ ಚುನಾವಣೆಯನ್ನು ಪಕ್ಕಾ ವ್ಯಾಪಾರವಾಗಿ ಮಾಡಿಕೊಂಡಿರುವ ಉದಾಹರಣೆಯೂ ಇದೆ.
ಆದರೆ, ಬಿಜೆಪಿಗೆ ರಾಜ್ಯಸಭೆಯಲ್ಲಿ ಸಂಖ್ಯಾಬಲ ಹೆಚ್ಚಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಗುಜರಾತ್‌ನಲ್ಲಿ ಮಾಡಿರುವಂತೆ ಕೊನೆಕ್ಷಣದಲ್ಲಿ ‘ಆಪರೇಷನ್’ ಅಥವಾ ಅಡ್ಡ ಮತದಾನಕ್ಕೆ ರಹಸ್ಯ ಕಾರ್ಯಾಚರಣೆ ನಡೆಸಿದರೂ ಆಶ್ಚರ್ಯವಿಲ್ಲ. ಆಗ ಕಾಂಗ್ರೆಸ್-ಜೆಡಿಎಸ್ ಲೆಕ್ಕಾಚಾರ ತಲೆ ಕೆಳಗಾಗುತ್ತದೆ. ೨೨೪ ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ ೧೧೭, ಕಾಂಗ್ರೆಸ್ ೬೮, ಜೆಡಿಎಸ್ ೩೪ ಸದಸ್ಯರಿದ್ದಾರೆ. ಇಬ್ಬರು ಪಕ್ಷೇತರರು ಹಾಗೂ ಒಬ್ಬ ಬಿಎಸ್ಪಿ ಶಾಸಕರಿದ್ದಾರೆ. ಈ ಮೂವರು ಬಿಜೆಪಿ ಬೆಂಬಲಿಸಿದ್ದಾರೆ. ರಾಜ್ಯಸಭೆ ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿಗೆ ೪೫ ಮತ ಬೇಕು. ಅಂದರೆ ಬಿಜೆಪಿ ಬಳಿ ಇಬ್ಬರನ್ನು ಗೆಲ್ಲಿಸಿಕೊಂಡು ೨೭ ಹೆಚ್ಚುವರಿ ಮತಗಳು ಉಳಿಯುತ್ತವೆ. ಮೂವರು ಪಕ್ಷೇತರರನ್ನೂ ಸೇರಿಸಿಕೊಂಡರೆ ಮತಗಳ ಸಂಖ್ಯೆ ೩೦ ಆಗುತ್ತದೆ. ಕಾಂಗ್ರೆಸ್ ಬಳಿ ೨೩ ಹೆಚ್ಚುವರಿ ಮತಗಳಿರುತ್ತವೆ. ಬಿಜೆಪಿಗೆ ಹೆಚ್ಚುವರಿಯಾಗಿ ಬೇಕಾಗುವುದು ೧೫ ಮತಗಳು ಮಾತ್ರ. ಹೀಗಾಗಿ ಅಡ್ಡಮತದಾನ ಮಾಡಿಸಲು ಬಿಜೆಪಿ ಮುಂದಾದರೂ ಅಚ್ಚರಿ ಪಡಬೇಕಿಲ್ಲ.