ಯೋಜನೆಗಳ ಕಡತಗಳು, ಅಭಿವೃದ್ಧಿಯ ಗುಂಡುಪಿನ್ನು ಹಚ್ಚಿಕೊಂಡೇ ಇರುತ್ತವೆ ನಿಜ.ಆದರೆ ಅವುಗಳ ರೂಪಿಸುವ ಮುನ್ನ ಸ್ಥಳೀಯವಾಗಿ ಪರಿಸರ,ಜನಜೀವನ ವಿರೂಪಗೊಳ್ಳುವುದೂ ಅಪಾರ ಹಾನಿಯೆಂದು ಉನ್ನತ ಅಧಿಕಾರದ ಪಂಡಿತರಿಗೆ ಹೊಳೆಯುವುದೇ ಇಲ್ಲ.
ಬೆಂಗಳೂರಿನ ಜನರ ಬಾಯಾರಿಕೆ ನೀಗಲು, ಸರ್ಕಾರದ ಯೋಜನೆಯ ನಾಲಗೆ ಶರಾವತಿಯತ್ತ ಚಾಚಿರುವ ಸುದ್ದಿ ಹಳೆಯದಾದರೂ ಈಗ ಯಾವಹೊತ್ತಿಗೆ ಯಾವ ರೀತಿ ಜೆಸಿಬಿಗಳು ಬಂದು ಶರಾವತಿ ವ್ಯಾಪ್ತಿಯ ದಟ್ಟ ಹಸುರು ಮೈಗೆ ಮುಳ್ಳು ಬಕೆಟನ್ನ ನೆಡುವುವೋ ಇನ್ನೂ ಗೊತ್ತಿಲ್ಲ.ಇದು ಸುದ್ದಿಯಾಗುತ್ತಿದಂತೆಯೇ ಜೋಗದ ಜಲಪಾತದಿಂದ ಧುಮುಕಿ ಮುಂದೆ ಸಾಗರ ಸೇರುವ ಶರಾವತಿಯ ಕುತ್ತಿಗೆ ಹಿಡಿದು ಗೇರುಸೊಪ್ಪೆಯಿಂದ ಮತ್ತೆ ತಲಕಳಲೆ ಜಲ ಸಂಗ್ರಹಾಲಯಕ್ಕೆ ಗುರುತ್ವಾಕರ್ಷಣೆ ವಿರುದ್ಧ ಪಂಪ್ ಮಾಡಿ ಹೆಚ್ಚುವರಿ ವಿದ್ಯುತ್ ಉತ್ಪಾದನೆ ಮಾಡುವ ಮತ್ತೊಂದು ಯೋಜನೆಯೂ ತಯಾರಾಯಿತು. ಅದರ ತಿದಿ ಒತ್ತುತ್ತಿರುವ ಸದ್ದು ಪರಿಸರ ಪ್ರಿಯರ ನಿದ್ದೆಗೆಡಿಸಿದೆ.
ಹಣ ದೋಚುವ ತಂತ್ರ
ಜೋಗದ ನೀರು ವ್ಯರ್ಥವಾಗುತ್ತಿರುವ ಬಗ್ಗೆ ಹಿಂದೆಯೇ ವಿಶ್ವೇಶ್ವರಯ್ಯ ನವರು ಉದ್ಗರಿಸಿದ್ದು ಜಲವಿದ್ಯುತ್ ಉತ್ಪಾದನೆಗೆ ಪ್ರೇರೇಪಣೆ ಸಿಕ್ಕಿತು. ನಾಡಿಗೆ ಬೆಳಕು ಸಿಕ್ಕಿತು ಅಂತ ಅದನ್ನ ಸ್ವಾಗತಿಸಲಾಯಿತು.ಆದರೀಗ ಪರಿಸರ ಆಸಕ್ತರು ಹೊಸ ಯೋಜನೆಯ ಬಗ್ಗೆ ಈ ರೀತಿ ಆಲೋಚಿಸುತ್ತಿಲ್ಲ. ಸರ್ಕಾರದ ಹಣ ದೋಚಲು ಒಂದು ಹುನ್ನಾರು ಎಂದು ಅಭಿಪ್ರಾಯಪಡುತ್ತಾರೆ.ಏಕೆಂದರೆ ಅವರ ಪ್ರಕಾರ ಎರಡುಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲು ಎರಡೂವರೆ ಸಾವಿರ ಮೆಗಾವ್ಯಾಟ್ ವಿದ್ಯುತ್ತನ್ನ ಅಪವ್ಯಯ ಮಾಡುವ ಮೂರ್ಖತನದ ಸಾಹಸ ಇದು.
ಶರಾವತಿ ನದಿ ಉಳಿಸಿ ಹೋರಾಟಗಾರ ಅಖಿಲೇಶ್ ಚಿಪ್ಲಿ ಅವರೊಂದಿಗೆ ಡಾ. ಚನ್ನಗಿರಿ ಸುಧೀಂದ್ರ ಅವರು ನೆಡಸಿರುವ ಮಾತುಕತೆ
ಬೆಂಗಳೂರಿಗೆ ಕುಡಿಯುವ ನೀರಿನ ಸರಬರಾಜು ಮಾಡುವ ಈ ಬಗ್ಗೆ ಹಿಂದಿನ ಸಮ್ಮಿಶ್ರ ಸರ್ಕಾರ ಹೇಳಿಕೆ ನೀಡಿತ್ತು ಈ ಬಗ್ಗೆ ವಿವಾದವೆದ್ದಾಗ ಈಗಿನ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಪ್ರಸ್ತಾವನೆ ಕುರಿತು ‘ನೋ’ ಎಂದಿದ್ದಾರೆ.ಆದರೆ ಸದ್ಯ ಈಗ ವ್ಯರ್ಥವಾಗಿ ಹರಿದುಹೋಗುವ ನೀರನ್ನ ಪುನರ್ವಿದ್ಯುತ್ ಉತ್ಪಾದನೆಗೆ ಬಳಸುವ ಯೋಜನೆ ಸದ್ದು ಮಾಡುತ್ತಿದೆ. ಸಿದ್ಧರಾಮಯ್ಯನವರ ಸರ್ಕಾರವಿದ್ದಾಗ ಇದು ರೂಪಿತವಾಗಿತ್ತು. ಪ್ರಸ್ತುತ ಸರ್ಕಾರ ಅದಕ್ಕೆ ಪೂರಕ ಏರ್ಪಾಡುಗಳನ್ನ ಕೈಗೆತ್ತಿಕೊಂಡಿದೆ.ಈಗಾಗಲೇ ಭೂಗರ್ಭದೊಳಗೇ ಸುರಂಗದ ಮೂಲಕ ನೀರನ್ನ ಮರು ಎತ್ತುವ,ಮತ್ತು ಬೆಟ್ಟದೊಳಗೇ ಭೂಅಂತರ್ಗತ ವಿದ್ಯುತ್ ಉತ್ಪಾದನಾ ಕೇಂದ್ರದ ಪ್ಲಾನ್ ಶುರುವಾಗಿದೆ.
ಏನಿದು ಯೋಜನೆ?
ಜಲಪಾತದಿಂದ ಬಿದ್ದ ನೀರು ಸಮುದ್ರ ಸೇರುತ್ತಿದೆ. ಗೇರುಸೊಪ್ಪ ಜಲಸಂಗ್ರಹಾಲಯದಲ್ಲಿ ಮುಂಚೆನಿಂತು ಅಲ್ಲಿಂದ ಕಾಫರ್ ಡ್ಯಾಂ ನಿರ್ಮಿಸಿ ಮತ್ತೆ ತಲಕಳಲೆ ಜಲಾಗಾರಕ್ಕೆ ಪಂಪ್ ಮಾಡಿ ಸುರಂಗ ಕೊಳವೆಗಳ ಮೂಲಕ ಪಂಪ್ ಮಾಡಿ ವಾಪಸ್ ಕಳಿಸುವುದು. ಅಲ್ಲಿಂದ ಪೈಪ್ ಮೂಲಕ ಹೊಸ ಪವರ್ ಹೌಸ್ ನಲ್ಲಿ ಟರ್ಬೈನ್ ಗಳ ಮೂಲಕ ನೀರುಹಾಯಿಸುವುದು ಎಂದು ಸರಳವಾಗಿ ಹೇಳಬಹುದು.
ಇಂತಹ ಎರಡು ಪ್ರಾಜೆಕ್ಟುಗಳು ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ರಾಜ್ಯದಲ್ಲಿವೆ. ಅವುಗಳ ಸಂರಚನೆಯ ರೂಪುರೇಷೆಗಳೇ ಶರಾವತಿ ಪಂಪ್ಡ್ ವಾಟರ್ ಪ್ರಾಜೆಕ್ಟ್ ಗೆ ಮಾದರಿ. ಇದರ ಅಂದಾಜು ಐದುಸಾವಿರ ಕೋಟಿ ರೂಪಾಯಿಗಳು. ಈಗಿನ ಮಹಾತ್ಮಗಾಂಧಿ ಪವರ್ ಜನರೇಷನ್ ಕೇಂದ್ರ ಕ್ಕಿಂತ ಬೇರೆಯೇ ವ್ಯವಸ್ಥೆ. ತಲಕಳಲೆ ಡ್ಯಾಮ್ ಮೇಲ್ಮಟ್ಟದ ಜಲಾಗಾರವಾಗಿ ಮತ್ತು ಗೇರುಸೊಪ್ಪ ಡ್ಯಾಮ್ ಕೆಳಮಟ್ಟದ ಜಲಾಗಾರವಾಗಿಯೇ ಇದ್ದು ಅವುಗಳ ಸ್ವರೂಪದಲ್ಲೇನೂ ಬದಲಾವಣೆಮಾಡುವುದಿಲ್ಲ. ತಲಕಳಲೆ ಡ್ಯಾಮಿನ ನೀರನ್ನ ಟರ್ಬೈನ್ ಗಳ ಮೂಲಕ ಹಾಯಿಸಿ ವಿದ್ಯುತ್ ಉತ್ಪಾದನೆ ಮಾಡುವುದಾಗಿದೆ .ಮತ್ತೆ ಅದೇ ನೀರು ಗೇರುಸೊಪ್ಪ ಜಲಾಗಾರದಲ್ಲೇ ಸಂಗ್ರಹವಾಗುತ್ತದೆ.ಇಲ್ಲಿ ನಡುವೆ ಸಂಪೂರ್ಣ ಸುರಂಗದಲ್ಲಿಯೇ ಪವರ್ ಹೌಸ್ ನಿರ್ಮಿಸುವ ಯೋಜನೆ.
ಈ ಹಿಂದಿನ ಅಂದಾಜಿನಂತೆ 2021ಕ್ಕೆ ಈ ಯೋಜನೆ ಪೂರ್ಣವಾಗಬೇಕು.ಅದೀಗ ಅನುಮಾನವೇ.ಇದಕ್ಕೆ ಅಲ್ಲಿರುವ ಸಿಂಹಬಾಲದ ಸಿಂಗಳಿಕ ಪ್ರಾಣಿ ಅಭಯಾರಣ್ಯಅಡ್ಡವಿದೆ. ಅದರ ಆಸುಪಾಸು ಈ ಯೋಜನೆ ಹಾದುಹೋಗುತ್ತದೆ .ಇದು ಅಭಯಾರಣ್ಯದ ನಡುವಿನ 902 ಚ.ಕಿಮೀ ವ್ಯಾಪ್ತಿ ಆವರಿಸಲಿದೆ ಎಂಬುದು ಇನ್ನೊಂದು ಅಂಶ.ಸರ್ಕಾರದ ದಾಖಲೆಗಳಲ್ಲಿ ಮಾತ್ರ 153 ಹೆ.ಭೂಮಿ ಸಾಕು ಎಂದಿದೆ.ಯೋಜನೆಯ ಸ್ಥಳ ಶರಾವತಿ ಅಭಯಾರಣ್ಯದಿಂದ 3.4ಕಿಮೀ ದೂರದಲ್ಲಿದೆ .ಅದಕ್ಕಾಗಿಯೇ ರಾಷ್ಟ್ರೀಯ. ವನ್ಯಜೀವಿ ಮಂಡಳಿ ಅನುಮೋದನೆಯೂ ಬೇಕಿದೆ.ಪರಿಸರ ಆಸಕ್ತರು ಹೇಳುವಂತೆ ಮುಂದೆ ಬರಲಿರುವ ಐವತ್ತೆಂಟನೇ ಮಂಡಳಿ ಸಭೆಯಲ್ಲಿ ಚರ್ಚೆಗೆ ಬಂದು ಅನುಮತಿ ಬಗ್ಗೆ ತೀರ್ಮಾನವಾಗಲಿದೆ.ಯೋಜನೆ ಶುರುವಾದಂತೆ ಮತ್ತೇನು ವ್ಯತ್ಯಾಸಗಳಾಗುವವೋ ಗೊತ್ತಿಲ್ಲ.
ಪ್ರಸ್ತುತ ಯೋಜನೆಯ ಭೌ-ತಾಂತ್ರಿಕ ( geotechnical) ಅಧ್ಯಯನದ ಅಗತ್ಯವಿದೆ. ಸಾಗರ ಮತ್ತು ಹೊನ್ನಾವರ ಅರಣ್ಯ ವಿಭಾಗಗಳಿಗೆ ಸೇರಿರುವ ಸು,877.507 ಹೆಕ್ಟೇರ್ ವ್ಯಾಪ್ತಿಯ ಅರಣ್ಯ ಪ್ರದೇಶವಿದೆ. 2019 ಅಕ್ಟೋಬರ್ ತನಕವೂ ಇದಕ್ಕೆ ಕೇಂದ್ರ ಸರ್ಕಾರದ ಇಲಾಖಾ ಅನುಮತಿ ಸಿಕ್ಕಿರಲಿಲ್ಲ .( ನ್ಯೂ ಇಂಡಿಯನ್ ಎಕ್ಸ್ ಪ್ರೆಸ್. 23-10-2019. ವರದಿ )
ಈ ಯೋಜನೆಯನ್ನು ರಾಜ್ಯ ವನ್ಯಜೀವಿ ಮಂಡಳಿ ಪ್ರಸ್ತಾವನೆಯನ್ನ ಅಮೂಲಾಗ್ರ ಚರ್ಚಿಸದೇ ಅನುಮೋದಿಸಿದೆಯೆಂದೂ ವರದಿಯಾಗಿತ್ತು.ವನ್ಯಜೀವಿ ಸಂರಕ್ಷಣೆ 19 ಸೆಕ್ಷನ್ ಪ್ರಕಾರ ವನ್ಯಜೀವಿಗಳ ಅಸ್ತಿತ್ವ ಉತ್ತಮಪಡಿಸಲು ಯೋಜನೆಗಳನ್ನ ಅರಣ್ಯದಲ್ಲಿ ಕೈಗೊಳ್ಳಬಹುದಷ್ಟೆ.ಈ ಯೋಜನೆಯಿಂದ ಅಲ್ಲಿರುವ ಸಿಂಹಬಾಲದ ಸಿಂಗಳಿಕ ಪ್ರಾಣಿಯ ಅಭಯಾರಣ್ಯದಲ್ಲಿ ಅವುಗಳ ಸಂರಕ್ಷಣೆಗೆ ಚ್ಯುತಿ ಬರುವುದಿಲ್ಲವೆ ಎಂಬ ಪ್ರಶ್ನೆಗಳಿಗೆ ಉತ್ತರ ಇಲ್ಲ. ರಾಜ್ಯ ಅರಣ್ಯ ಇಲಾಖೆಯ ಸ್ಥಳೀಯ ಅಧಿಕಾರಿಗಳ ಪ್ರಕಾರ ಈ ಯೋಜನೆ ಜಾರಿಯಾದರೆ ಕಾರ್ಗಲ್ ಮತ್ತು ಗೇರುಸೊಪ್ಪ ವಲಯದಲ್ಲಿನ ಸರ್ವಋತು ಹಸಿರಡವಿಯ ವನ್ಯಜೀವಿಗಳಿಗೆ ಮಾರಕವಾಗುತ್ತದೆ.
ಮಾಹಿತಿಗಾಗಿ ಶರಾವತಿ ಉಳಿಸಿ ಹೋರಾಟ ಒಕ್ಕೂಟದ SWAN & MANವೇದಿಕೆಯ ಅಖಿಲೇಶ್ ಚಿಪ್ಳಿ ಅವರನ್ನ ಸಂಪರ್ಕಿಸಿದಾಗ ಶರಾವತಿ ಮೈಗೆ ನೆಲಕಿಂಡಿ ( ಡ್ರಿಲ್ಲ್ ಹೋಲ್ )ಮಾಡುವ ಘನ ಕಾರ್ಯ ಶುರುವಾಗಿಬಿಟ್ಟಿದೆ ಎಂಬ ಸಂಗತಿ ತಿಳಿಯಿತು. ಅದಕ್ಕೂ ಈಗ ಸದ್ಯಕ್ಕೆ ನೆಲಕಿಂಡಿ ಚಟುವಟಿಕೆ ನಿಲ್ಲಿಸುವಂತೆ ಮನವಿಯನ್ನೂ ಒಕ್ಕೂಟ ಅರಣ್ಯ ಇಲಾಖೆಗೆ ಸಲ್ಲಿಸಿದೆ.ಅಲ್ಲದೇ ಸಾಗರದ ಪವರ್ ಪಾಲಿಸಿ ಅನಾಲಿಸ್ಟ್ ಶಂಕರ್ ಶರ್ಮ ಅವರೂ ಪರಿಸರ ಉಳಿವಿನ ಕಾರ್ಯಕರ್ತರ ಪಡೆಯಲ್ಲಿದ್ದಾರೆ.ಈಗಾಗಲೇ ಮುಖ್ಯಮಂತ್ರಿಗಳಿಗೆ ,ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಮನವಿಯಲ್ಲಿ ಏನಿದೆ?
ರಾಜ್ಯದ ಹಾಗೂ ಸ್ಥಳೀಯ ಪರಿಸರವಾದಿಗಳಿಗೆ ಮತ್ತು ವನ್ಯಜೀವಿ ಸಂರಕ್ಷಣಾ ಪ್ರಿಯರಿಗೆ ಸದ್ಯದ ಭೌತಾಂತ್ರಿಕ ಅನ್ವೇಷಣೆ ಕೈಗೊಂಡಿರುವ ಬಗ್ಗೆ ನಿರಾಶೆಯಾಗಿದೆ.ನಾಗರಿಕ ಸಮಾಜವು ವ್ಯಕ್ತಪಡಿಸಿರುವ ಅನೇಕ ಗಂಭೀರ ಸಮಸ್ಯೆಗಳಿಗೆ ಸಮಾಧಾನಕರವಾಗಿ ಪರಿಹಾರ ನೀಡದೇ ಅಭಯಾರಣ್ಯ ಪ್ರದೇಶದಲ್ಲಿ ಪಂಪ್ ಮಾಡಿ ಜಲವಿದ್ಯುತ್ ಯೋಜನೆ ಆರಂಭಕ್ಕೆ ಅನುಮತಿ ನೀಡಿರುವುದು ಈ ನಿರಾಶೆಗೆ ಕಾರಣ.
ಸದ್ಯ ಈಗ ಕೋವಿಡ್ 19 ರ ವ್ಯಾಪಕವಾಗಿ ಹಬ್ಬಿರುವ ವಾತಾವರಣವಿದೆ.ಅಲ್ಲಿಗೆ ನಿಯುಕ್ತವಾಗಿರುವ ಸಿಬ್ಬಂದಿಗಳು ಬೇರೆ ಬೇರೆ ರಾಜ್ಗಗಳ ಪ್ರದೇಶದಿಂದ ಬಂದವರಾಗಿರುತ್ತಾರೆ.ವನ್ಯಜೀವಿಗಳೂ ಇದರಿಂದ ಬಾಧಕವಾಗಬಹುದು.ಕೋವಿಡ್ 19 ಸೋಂಕಿನ ಬಗ್ಗೆಯೂ ಪರಿಶೀಲನೆಯಾಗಿಲ್ಲ. ಸೋಂಕುಇದೆಯೋ ಇಲ್ಲವೋ ಆರೋಗ್ಯ ಸಚಿವಾಲಯದ ಪ್ರಕಾರ 14 ದಿನಗಳ ಕ್ವಾರಂಟೈನ್ ಆಗಲೇಬೇಕು.ಅಭಯಾರಣ್ಯ ಪ್ರದೇಶದೊಳಕ್ಕೆ ಕಾಲಿಡುವ ಮೊದಲು ಈ ಬಗ್ಗೆಈ ಉಪಕ್ರಮ ಅತ್ಯವಶ್ಯವಾಗಿದೆ.ಮಳೆಗಾಲ ಆರಂಭವಾಗಿದೆ. ವನ್ಯಜೀವಿಗಳ ಮತ್ತು ಸಸ್ಯ ಸಂಕುಲಗಳ ಜೈವಿಕ ಕ್ರಿಯೆ ನಡೆಯುವ ಸೂಕ್ತ ಕಾಲವಾಗಿದೆ. ಇಂತಹ ಸನ್ನಿವೇಶದಲ್ಲಿ ಭೌಗೋಳಿಕ ತಾಂತ್ರಿಕ ಚಟುವಟಿಕೆ ಶುರುಮಾಡುವುದು ನಿಲ್ಲಿಸಬೇಕೆಂದು ಕೋರಿದ್ದಾರೆ.
ಮತ್ತೊಬ್ಬ ಜೈವಿಕ ಶಾಸ್ತ್ರಜ್ಞ ಪ್ರೊ.ಮೇವಾಸಿಂಗ್ ಕೂಡ ಹೀಗೆಯೇ ಹೇಳಿದ್ದಾರೆ.ಪ್ರೊ.ಸಿಂಗ್ ಅವರ ಅಪಾರ ಅಧ್ಯಯನ ಮತ್ತು ಸಂಶೋಧನೆಗಳ ಫಲವಾಗಿ ಆ ಅರಣ್ಯ ಪ್ರದೇಶವು ಸಿಂಹಬಾಲದ ಸಿಂಗಳಿಕಗಳ ಅಭಯಾರಣ್ಯವಾಗಿ ಇತ್ತೀಚೆಗೆ ಘೋಷಿಸಲ್ಪಟ್ಟಿದೆ.ಕೇವಲ 360 ಹೆಕ್ಟೇರ್ ಅರಣ್ಯ ಮಾತ್ರ ಬಳಕೆಯಾಗುತ್ತದೆ ಎಂಬುದನ್ನ ನೋಡಿದರೆ ಪ್ರಸ್ತುತ ಯೋಜನೆಯ ವಿವಿಧ ಕಾಮಗಾರಿಗಳಿಗೆ ಇನ್ನೂ ಹೆಚ್ಚಿನ ಪ್ರದೇಶ ಕಬಳಿಸಲ್ಪಡುತ್ತದೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.
ಈಗ ಯೋಜನೆಯ ಸಮೀಕ್ಷೆಗಾಗಿಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ ಅಷ್ಟೆ.ಅದೂ ಮರಗಳನ್ನ ಕತ್ತರಿಸದೇ ವನ್ಯಜೀವಿಗಳ ದೈನಿಕ ಚಲನವಲನ ಚಟುವಟಿಕೆಗೆ ಭಂಗತಾರದೇ ಕೊರೆಯುವ ಯಂತ್ರಗಳನ್ನ ನಿರ್ವಹಿಸಬೇಕು. ಬೆಳಿಗ್ಗೆ ಒಂಭತ್ತಕ್ಕೆ ಶುರುಮಾಡಿ ಸಂಜೆ ಆರಕ್ಕೆ ಪೂರೈಸಬೇಕು.ಸ್ಥಳದಲ್ಲಿ ಯಾರೂ ವಾಸ್ತವ್ಯದ ಟೆಂಟ್ ಹಾಕುವಂತಿಲ್ಲ.ಮಳೆಗಾಲದಲ್ಲಿ ಸಮೀಕ್ಷೆ ನಿಲ್ಲಿಸಬೇಕು. ಶಿರಸಿಯ ಜೀವಶಾಸ್ತ್ರ ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ದಿ ಕೇಂದ್ರದ ನಿರ್ದೇಶಕ
ಡಾ.ಕೇಶವ ಕೊರ್ಸೆ ಅವರೇ ಹೇಳುವಂತೆ….Anyway, I can only say that it is suicidal project… According to IISc experts, this region is landslide vulnerable. And ecologists say that this lower reaches is the home of rare Wildlife. So digging earth in such a fragile zone is ecologically disastrous and economically illogical endeavour.May better sense prevail upon the govt to drop this project.
ನೋಡುವುದಕ್ಕೆ ಬಹಳ ಸರಳ.ಮತ್ತು ಹೌದಲ್ಲ ವ್ಯರ್ಥವಾಗಿ ಸಮುದ್ರ ಸೇರುವ ನೀರನ್ನ ವಿದ್ಯುತ್ ಉತ್ಪಾದನೆಗೆ ಬಳಸಬಹುದಲ್ಲ?ಎಂದು ಕುಶಲಮತಿಗಳಂತೆ ಸರಿ ಎನ್ನ ಬಹುದು.ಆದರೆ ಅಷ್ಟು ಹಸಿರುಹೊದ್ದು ನಿಸರ್ಗವೇ ನಿರ್ಮಿಸಿದ ಅರಣ್ಯದ ಮೇಲ್ಮೈಮತ್ತೆ ನೈಜವಾಗಿ ಬೆಳೆದೀತೆ? ಮತ್ತೆ ಮನುಷ್ಯರ ಹಾವಳಿಯಿಂದ ಅಲ್ಲಿನಸಸ್ಯ ವನ್ಯ ಸೂಕ್ಷ್ಮಾತಿಸೂಕ್ಷ್ಮ ಜೀವಿಗಳ ಉಳಿವು ಅಳಿವಿನ ಪ್ರಶ್ನೆಯೂ ಆಗಿದೆ.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪ್ರಕಟಿಸಿದ ಡಾ.ಚನ್ನಗಿರಿ ಸುಧೀಂದ್ರ ಅವರ ಲೇಖನ ಸಮರ್ಥವಾಗಿ ಬರೆದಿದ್ದಾರೆ. ನಮ್ಮ ನೆರೆ ರಾಜ್ಯವಾದ ಕೇರಳದಲ್ಲಿ ಸತತವಾಗಿ ಈ ಹೋರಾಟ ಮಾಡಿ ಪರಿಸರ ಕಾಪಾಡುವ ಯೋಚನೆಗಳು ಹಾಕಿ ಯಶಸ್ವಿಯಾಗಿದೆ. ನಮ್ಮ ರಾಜ್ಯದ ಪರಿಸರ ಕಾಪಾಡುವುದು ಎಲ್ಲರ ಕರ್ತವ್ಯ.
Very good article .
ಪರಿಸರ ನಾಶದಿಂದ ಈಗಾಗಲೇ ಸಾಕಷ್ಟು ಅನುಭವಿಸಿಯಾಗಿದೆ. ಇನ್ನಾದರೂ ಎಚ್ಚೆತ್ತುಕೊಂಡರೆ ಒಳಿತು
ನಾವೆಲ್ಲರೂ ನಮ್ಮ ಈ ಪರಿಸರವನ್ನು ಪ್ರೀತಿಸೋಣ.