21.3 C
Karnataka
Wednesday, December 4, 2024

    ಕೊರೊನಾ ವೈರಸ್‌ಗಿಂತಲೂ ಅವರನ್ನು ವ್ಯವಸ್ಥೆ ಹೈರಾಣು ಮಾಡಿತ್ತು

    Must read

    ಕೊರೊನಾ ಭಾರತದಲ್ಲಿನ್ನು ರಣಕೇಕೆ ಹಾಕಿರಲಿಲ್ಲ. ಸೋಷಿಯಲ್ ಮೀಡಿಯಾ ಆದಿಯಾಗಿ ಬಹುತೇಕ ಸುದ್ದಿ ಮಾಧ್ಯಮಗಳಲ್ಲಿ ಕೊರೊನಾ ಪೀಡಿತ ವಿದೇಶಿ ವಿಡಿಯೋಗಳು ಹರಿದಾಡುತ್ತಿದ್ದವು. ರಸ್ತೆ ರಸ್ತೆಯಲ್ಲೇ ಹೆಣವಾಗುವ ದೃಶ್ಯ ನಿಜಕ್ಕೂ ಆತಂಕ ಸೃಷ್ಟಿ ಮಾಡಿತ್ತು. ಬೆಂಕಿ ಸ್ಪರ್ಶಿಸಿದ ಹುಳದ ರೀತಿಯಲ್ಲಿ ಮನುಷ್ಯರು ಒದ್ದಾಡುವ ದೃಶ್ಯ ಎಂಥವರನ್ನೂ ಬೆಚ್ಚಿಬೀಳಿಸುವಂತಿತ್ತು.

    ಭಾರತಕ್ಕೂ ಆ ವೈರಸ್ ಕಾಲಿಟ್ಟಿತು. ಮೊದಲ ಬಲಿ ಕರ್ನಾಟಕದಲ್ಲೇ ಆಯಿತು. ಸುದ್ದಿಗಳ ಅಬ್ಬರವೂ ಜೋರು. ಲಾಕ್‌ಡೌನ್, ಸೀಲ್ಡ್‌ಡೌನ್ ಆರ್ಭಟ. ಪೊಲೀಸರ ಅತಿರೇಕದ ವರ್ತನೆ. ಸರಕಾರಕ್ಕೆ ಸರಕಾರವೇ ತಬ್ಬಿಬ್ಬಾದ ಸನ್ನಿವೇಶ. ಸುಶಿಕ್ಷಿತರ ನಡೆ ಒಂದಡೆಯಾದರೆ, ಅಸುಶಿಕ್ಷಿತರ ಪಾಡು ಹೇಳತೀರದು. ಸಡನ್ನಾಗಿ ನೆನಪಾಗಿದ್ದು ನನ್ನ ನೆಲ. ಆ ಜನರು.

    ನೀವು ಏನೇ ಹೇಳಿ ಉತ್ತರ ಕರ್ನಾಟಕದ ಜನರು ಶಾಪಗ್ರಸ್ತರು. ಬರಗಾಲಕ್ಕೆ ಬಸವಳಿದವರು. ಬದುಕು ಕಟ್ಟಿಕೊಳ್ಳಲು ಪಟ್ಟಣ ಸೇರಿದವರು. ಹನಿ ನೀರಿಗೂ ಪರಿತಪಿಸುತ್ತಿರುವವರು. ಕಾಲಿಗೆ ಚಕ್ರಕಟ್ಟಿಕೊಂಡು ಕೆಲಸಕ್ಕೆ ನಿಲ್ಲುವವರು. ಕೇವಲ ನಮ್ಮ ರಾಜ್ಯದಲ್ಲಿ ಮಾತ್ರವಲ್ಲ, ನೆರೆರಾಜ್ಯಕ್ಕೂ ಗುಳೆ ಹೋದವರು. ಲಾಕ್‌ಡೌನ್ ಮತ್ತು ಕೊರೊನಾ ವೈರಸ್ ಇವರನ್ನು ಹೇಗೆಲ್ಲ ಕಾಡಿರಬಹುದು ಎಂಬ ನೋವು ನನ್ನೊಳಗೆ. ಹೊರಟೇ ಬಿಟ್ಟೆ. ಬರೋಬ್ಬರಿ ಎರಡೂವರೆ ಸಾವಿರ ಕಿಲೋ ಮೀಟರ್.

    ದಾರಿಯುದ್ದಕ್ಕೂ ಕಾಲ್ನಡಿಗೆ

    ಬೆಂಗಳೂರಿನಿಂದ ಹೊರಟ ನನಗೆ ದಾರಿಯುದ್ದಕ್ಕೂ ಕಂಡಿದ್ದು ಕೂಲಿ ಕಾರ್ಮಿಕರು. ಕಂಕುಳಲ್ಲಿ ಪುಟ್ಟ ಪುಟ್ಟ ಮಕ್ಕಳು. ತಲೆಯ ಮೇಲೆ ಹೆಣಭಾರದಂತಹ ಚೀಲ. ನಡೆದು, ನಡೆದು ಸೋತ ಕಾಲುಗಳು. ಹರಿದ ಚಪ್ಪಲಿಗಳು. ಉಟ್ಟ ಅರಿವೆಯ ಕಳಚಿ ಎರಡ್ಮೂರು ದಿನವಾಗಿರಬೇಕು, ಬೆವರಿಗೆ ಬಟ್ಟೆಯೂ ಸೆಟೆದು ನಿಂತಿದ್ದವು.

    ಅವರು ನಡೆದುಕೊಂಡೇ ಹೋಗುತ್ತಿದ್ದರು. ಅದು ಅತಿಂಥ ಬಿಸಿಲಲ್ಲ. ಮೈಯೊಳಗಿನ ಚರ್ಮವೇ ಸುಟ್ಟು ಹೋಗುವ ನಡಿಗೆ. ಬ್ರ್ಯಾಂಡೆಡ್ ಶೂ ಹಾಕಿಕೊಂಡು, ತಣ್ಣನೇ ನೀರು ಕುಡಿದುಕೊಂಡು ಪಾದಯಾತ್ರೆ ಮಾಡಿದ್ದನ್ನು ಕಂಡಿದ್ದೇನೆ. ಆದರೆ, ಇವರ ಪಾದದಡಿ ಹರಿದ ಚಪ್ಪಲಿಯೂ ಇರಲಿಲ್ಲ. ಅದೆಷ್ಟು ದೂರ ಸಾಗಬೇಕಿತ್ತೋ ಏನೋ? ಸುಸ್ತಾಗಿ ಡಾಂಬರ್ ರಸ್ತೆಯ ಮೇಲೆ ಕೂತಿದ್ದರು. ಹತ್ತಿರಕ್ಕೆ ಹೋದೆ.

    “ನೀವು ಸರಕಾರದೋರಾ? ನಮ್ ಪಾಡಿಗೆ ನಮ್ನ ಬಿಟ್‌ಬಿಡಿ.. ಹೇಗೋ ಮನೆ ಸೇರ‍್ಕೋತೀವಿ” ಅಂದರು.

    ಆಗಲೇ ಬೆಂಗಳೂರಿನಿಂದ ನೂರಾರು ಕಿಲೋ ಮೀಟರ್ ಅವರು ನಡೆದು ಬಂದಿದ್ದರು. ಅಲ್ಲಲ್ಲಿ ಹಾಕಲಾಗಿದ್ದ ಚೆಕ್‌ಪೋಸ್ಟ್ ಕಣ್ಣಿಗೂ ಬೀಳದೇ ಅವರು ಊರನ್ನು ಸೇರುವ ಆತುರದಲ್ಲಿದ್ದರು. ಕುಡಿಯೋಕೆ ನೀರುಕೊಟ್ಟೆ. ಬಿಸ್ಕೆಟ್ ನೀಡಿದೆ. ಅವರು ಮುಟ್ಟಲೇ ಇಲ್ಲ.

    ಹಸಿವಾಗಿಲ್ಲವಾ

    ?…………………

    ಬೆಂಗಳೂರಲ್ಲಿ ಏನ್ ಕೆಲ್ಸ ಮಾಡ್ಕೊಂಡಿದ್ರಿ?

    ……………….

    ಸರಿ, ಈಗ ಎಲ್ಲಿ ಹೋಗ್ತಿದ್ದೀರಿ?..

    ………………

    ಅವರಿಂದ ಯಾವ ಉತ್ತರವೂ ಬರಲಿಲ್ಲ. ನನ್ನ ಕಾರಿಗೆ ಕೆಂಪು ಅಕ್ಷರದಲ್ಲಿ ಪ್ರೆಸ್ ಅಂತ ಬರೆದಿದ್ದನ್ನು ನೋಡಿದ್ದ ಅವರು, ನಾನು ಪೊಲೀಸ್ ಅಂದುಕೊಂಡಿರಬೇಕು ಅನ್ನಿಸಿತು. ನಾನು ಉತ್ತರ ಕರ್ನಾಟಕದೋನು.. ಆ ಕಡೆ ಹೊರಟಿದ್ದೆ. ಸುಮ್ನೆ ನಿಮ್ಮನ್ನ ವಿಚಾರಿಸ್ತಿದ್ದೀನಿ ಅಂದೆ. ಅವರಿಗೂ ನನ್ನ ಮೇಲೆ ನಂಬಿಕೆ ಬಂತು. ನಮ್ಮ ವ್ಯವಸ್ಥೆ ಅವರನ್ನು ಇಷ್ಟೊಂದು ಹೆದರಿಸಿತ್ತು.

    ಶಿಬಿರಗಳ ದುರವಸ್ಥೆ

    ವಲಸೆ ಕಾರ್ಮಿಕರಿಗಾಗಿಯೇ ಸರಕಾರಗಳು ಶಿಬಿರಗಳನ್ನು ತೆರೆದಿದ್ದರು. ತಾಲೂಕು, ಜಿಲ್ಲಾ ಕೇಂದ್ರಗಳಲ್ಲಿ ಈ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿನ ಅವ್ಯವಸ್ಥೆಯೇ ಅವರನ್ನು ಮತ್ತಷ್ಟು ದುಗುಡಕ್ಕೆ ತಳ್ಳಿತ್ತು.

    ಉಪವಾಸ ನಡೆದು, ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೇ ಬಳ್ಳಾರಿ ಆಸ್ಪತ್ರೆಯಲ್ಲಿ ಪ್ರಾಣಬಿಟ್ಟಿದ್ದ ಮಹಿಳೆಯೊಬ್ಬರ ಸಮಾಚಾರ ಕಾಡ್ಗಿಚ್ಚಿನಂತೆ ಹಬ್ಬಿತ್ತು.ಸರಕಾರಿ ಶಿಬಿರಗಳ ಬಗ್ಗೆ ಅವರಿಗೆ ನಂಬುಗೆ ಬಂದಂತೆ ಕಾಣಲಿಲ್ಲ ಹೀಗಾಗಿ ಚೆಕ್‌ಪೋಸ್ಟ್ ತಪ್ಪಿಸಿಕೊಂಡು ಕೆಲವರು ಹೊರಟಿದ್ದರು.

    “ಅದೇನೋ ಸರಕಾರದೋರು ನಮ್ಮನ್ನ ಕೂಡಿ ಹಾಕ್ತಾರಂತರೀ.. ತಿನ್ನಾಕ ಉಣ್ಣಾಕ ಹುಳದ ಅನ್ನ ನೀಡ್ಯಾರಂತ.. ಅಲ್ಲಿರೋರು ಮಂದಿ ಅಪರಿಚಿತರು. ಅವರ ಜೋಡಿ ಇದ್ದು, ರೋಗ ತರಿಸ್ಕೊಳ್ಳೊಕ್ಕಿಂತ, ನಮ್ಮೂರಿಗೆ ಹೋಗೋದು ಛಲೋ ಅನಿಸ್ತ್ರಿ.. ಅದಕ್ಕ ಹೊಂಟಿವಿ” ಹೀಗಂತ ಅಂದವರೆ ಹೆಚ್ಚು.

    ಬದುಕನ್ನು ರಸ್ತೆಗೆ ಚೆಲ್ಲಿ

    ಲಾಕ್‌ಡೌನ್ ಘೋಷಣೆ ಆಗುತ್ತಿದ್ದಂತೆಯೇ ಎಲ್ಲರ ಬದುಕು ತಾತ್ಕಾಲಿಕವಾಗಿ ನಿಂತೇ ಹೋಯಿತು. ಅಗತ್ಯ ವಸ್ತುಗಳ ಪೂರೈಕೆಗೆ ತೊಂದರೆ ಆಗುವುದಿಲ್ಲ ಎಂದು ಸರಕಾರ ಹೇಳಿದ್ದರೂ, ಅಂದುಕೊಂಡಂತೆ ನಡೆಯಲಿಲ್ಲ. ಅಲ್ಲಲ್ಲಿ ತರಕಾರಿಗಳನ್ನು ರಸ್ತೆಗೆ ಚೆಲ್ಲಿದ ದೃಶ್ಯಗಳು ಕಂಡುಬಂದವು. ದುಬಾರಿಯ ಉಳ್ಳಾಗಡ್ಡಿ ರಸ್ತೆಗೆ ಬಂದು ಬಿದ್ದಿತ್ತು. ಹಾಲು ಕೆಟ್ಟಿತ್ತು. ಇದು ಮತ್ತೊಂದು ರೀತಿಯ ಸಂಕಟ. ಬಹುತೇಕ ಕಡೆ ಇಂತಹ ದೃಶ್ಯಗಳು ಸಾಮಾನ್ಯವಾಗಿತ್ತು.

    ತಣ್ಣಗೆ ಮಲಗಿದ್ದವು ಹಳ್ಳಿಗಳು

    ಪ್ರತಿ ಹಳ್ಳಿಯಲ್ಲೂ ಸೂತಕದ ಛಾಯೆ. ಬೆಳಗ್ಗೆ ನಾಲ್ಕು ಗಂಟೆಗೆ ಎದ್ದು, ಮನೆಗೆಲಸ ಮಾಡಿಕೊಂಡು ಒಂಭತ್ತು ಗಂಟೆಗೆ ಹೊಲ ಸೇರುತ್ತಿದ್ದವರು, ಮನೆಯಲ್ಲಿ ತಣ್ಣಗೆ ಕೂತಿದ್ದಾರೆ. ಹೊಲದಲ್ಲಿ ಬೆಳೆ ಹಾಳಾಗುತ್ತಿದೆ ಎನ್ನುವ ನೋವು ರೈತನದ್ದು. ಮಾರಲು ಬಂದ ಬೆಳೆಗೆ ಬೆಲೆ ಸಿಗಲಿಲ್ಲ ಎನ್ನುವ ಸಂಕಟವೂ ಜತೆಗಿತ್ತು. ಒಬ್ಬೊಬ್ಬರದ್ದು ಒಂದೊಂದು ಕಥೆ. ಕೊರೊನಾ ವೈರಸ್ ಅವರನ್ನು ಬಾಧಿಸಿದ್ದಕ್ಕಿಂತ ನಮ್ಮ ವ್ಯವಸ್ಥೆ ಅವರನ್ನು ಹೈರಾಣು ಮಾಡಿತ್ತು.

    ಈಗಿನ ಸ್ಥಿತಿ

    ಲಾಕ್ ಡೌನ್ ಸಡಿಲ ಆಗುತ್ತಿದ್ದಂತೆಯೇ ಅಲ್ಲಿನ ಸ್ಥಿತಿ ಗತಿ ಕೂಡ ಬದಲಾಗಿದೆ. ರೈತ ಬಿತ್ತನೆಗೆ ತಯಾರಿ ಮಾಡಿಕೊಳ್ಳುತ್ತಿದ್ದರೆ, ಯುವಕರು ಮತ್ತೆ ಪಟ್ಟಣದತ್ತ ಮುಖ ಮಾಡುತ್ತಿದ್ದಾರೆ. ಕೊರೊನಾ ಜತೆ ಬದುಕುವ ಅನಿವಾರ್ಯದ ಜತೆಗೆ ಬಡತನದ ಜತೆ ಅವರು ಗುದ್ದಾಡಬೇಕಿದೆ. ಉಳ್ಳವರಿಗೆ ಏನೆಲ್ಲ ಉಂಟು, ಉಳುವವರಿಗೆ ಏನುಂಟು?

    ಕರೋನಾ ಕರುಣಾಜನಕ ಕಥೆಗಳು

    ಕೊರೊನಾ ಪುಸ್ತಕ

    ಕೊರೊನಾದಿಂದ ಜೀವ ಕಳೆದುಕೊಂಡವರಿಗಿಂತ ಜೀವನ ಕಳೆದುಕೊಂಡವರೇ ಹೆಚ್ಚು. ಸರಕಾರದ ಆದೇಶ ಏನೇ ಇದ್ದರೂ, ಅದನ್ನು ಅಮಾನವೀಯವಾಗಿ ಜಾರಿಗೆ ತರಲಾಯಿತು. ಪರಿಣಾಮ ಕೆಲವರು ಪ್ರಾಣ ಕಳೆದುಕೊಂಡರು.

    ಡಾ. ಶರಣು ಹುಲ್ಲೂರು

    ಅನೇಕರು ಬೀದಿಗೆ ಬಿದ್ದರು. ಈ ಸಮಾಜ ಈ ವೈರಸ್ ಅನ್ನು ಮತ್ತೊಂದು ಬಗೆಯಲ್ಲಿ ಸ್ವೀಕರಿಸಿತು. ಹಾಗಾಗಿ ನಾಗರೀಕ ಸಮಾಜದಲ್ಲಿ ತಲೆತಗ್ಗಿಸುವಂತಹ ಘಟನೆಗಳು ಜರುಗಿದವು. ಇಂತಹ ಅನೇಕ ಸತ್ಯ ಘಟನೆಗಳ ಕಥಾ ಸ್ಪರ್ಶವೆ ಡಾ. ಶರಣು ಹುಲ್ಲೂರು ಬರೆದ ಕರೋನಾ ಕರುಣಾಜನಕ ಕಥೆಗಳು ಪುಸ್ತಕ.
    ಇಲ್ಲಿ ಕಲ್ಪನೆಗಿಂತ ವಾಸ್ತವತೆ ಮಾತಾಡಿದೆ… ಶೀಘ್ರದಲ್ಲೇ ಪುಸ್ತಕ ಲೋಕಾರ್ಪಣೆ ಆಗಲಿದೆ.

    ಡಾ. ಶರಣು ಹುಲ್ಲೂರು
    ಡಾ. ಶರಣು ಹುಲ್ಲೂರು
    ಡಾ. ಶರಣು ಹುಲ್ಲೂರು ವೃತ್ತಿಯಿಂದ ಪತ್ರಕರ್ತ . ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪಿಎಚ್‌.ಡಿ ಪದವಿ ಪಡೆದಿರುವ ಅವರು ಹಲವು ಪತ್ರಿಕಾ ಬಳಗದಲ್ಲಿ ಸೇವೆ ಸಲ್ಲಿಸಿದ್ದಾರೆ. 'ತಪ್ಪು ಮಾಡಿದ ತಾತ', 'ಮುಂದಿರುವ ಮೌನ', 'ಜುಗಲ್ಬಂದಿ' ಎಂಬ ಕವನ ಸಂಕಲನಗಳನ್ನು, ’ಚಂದನ ಸಿಂಚನ’ ಎಂಬ ಬಿ.ಜೆ.ಅಣ್ಣಿಗೇರಿ ಅವರ ಜೀವನ ಚರಿತ್ರೆಯನ್ನು,  ’ಮಲ್ಲಿಗೆ’, ’ಕನಸಿನ ಹುಡುಗ’ ನಾಟಕವನ್ನು ರಚಿಸಿದ್ದಾರೆ. ಬದುಕು ಹ್ಯಾಕ್ ಆಗಿದೆ, ಜುಗಲ್ ಬಂದಿ ಕವಿತೆಗಳು, ಸಿನಿ ಸಾಂಗತ್ಯ, ಅಂಬರೀಶ್ ಬದುಕು ಬರಹ ಇವರ ಮಹತ್ತರ ಕೃತಿಗಳು.ತಕಧಿಮಿಕಾ, ಮುಂಗಾರಿನ ಕನಸು ಕಾರ್ತೀಕ ದೀಪ, ಬದುಕು, ಮದರಂಗಿ ಮುಂತಾದ ಧಾರಾವಾಹಿಗಳಿಗೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ರಚಿಸಿದ್ದಾರೆ. ಕಾರ್ಯನಿರತ ಪತ್ರಕರ್ತರ ಸಂಘದ 'ಅತ್ಯುತ್ತಮ ಸಿನಿಮಾ ಪತ್ರಕರ್ಕ' ಪ್ರಶಸ್ತಿ, 'ಗೌರಿ ಲಾಮಯ್ಯ ದತ್ತಿ' ಪ್ರಶಸ್ತಿ, 'ಪುಟ್ಟರಾಜ ಗವಾಯಿ ಕಾವ್ಯ' ಪ್ರಶಸ್ತಿ, ಕರ್ನಾಟಕ ರಾಜ್ಯ ಚಲನಚಿತ್ರ ಸಾಹಿತ್ಯ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ
    spot_img

    More articles

    6 COMMENTS

    1. ನಿಜ . ಎಲ್ಲವೂ ಬಂದಾಯಿತು. ಬೆಳೆದ ಬೆಳೆ ಏನು ಮಾಡೋದು. ಅದರಲೂ ಬಹಳ ದಿನ ಇಡಲು ಬರದ ರೇಷಿಮೆ ಗೂಡು ಏನು ಮಾಡೋದು. ಪಾಪದ ರೈತ. ಸಾಗಿಸಲು ಪೋಲೀಸರು ಬಿಡಲ್ಲ. ರೇಷಿಮೆ ಆಫೀಸಿಂದ ಪತ್ರ ತರಬೇಕು. ಮಾರಾಟ ಮಾಡಲು ಮಾರುಕಟೆ ಇಲ್ಲ.( ಕೈ ತೊಳೆಯಲು ನೀರಿನ ಅಭಾವ, ಅಂತರ ಕಾಯಲು ಜಾಗದ ಅಭಾವ) ಕಡೆಗೆ ದಲಾಲಿಗಳು ಕೇಳಿದ ಬೆಲೆಗೆ ನೀಡಿ ಬಂದರು.ಅವರು ಬೆಳೆದ ತರಕಾರಿಗಳು ಕೀಳದೆ ಹೊಲದಲೇ ಇದೆ. ಬದುಕು ಹೈರಾಣು ಮಾಡಿತು.

      • ನಿಜ ಸಾರ್, ರೈತರ ಬದುಕು ಮೊದಲೇ ಮೂರಾಬಟ್ಟೆ. ಇಂತಹ ಟೈಮ್ ನಲ್ಲಿ ಇನ್ನೂ ಅದ್ವಾನ….

    2. ಸಂದರ್ಭೋಚಿತ ಬರಹ. ಮನಸ್ಸಿಗೆ ತಟ್ಟಿತು. ಕೊರೋನ ವೈರಸ್ ಗಿಂತ ಅದರ ಭಯ ಮತ್ತು ಅದರ ಹರಡುವಿಕೆಯ ಬಗೆಗಿನ ಅಜ್ಞಾನ ಸಾಮಾನ್ಯ ಜನರನ್ನು ನರಳುವಂತೆ ಮಾಡುತ್ತಿದೆ. ನೆಲದ ಕಾನೂನನ್ನು ಹಾಗೂ ಸರಕಾರದ ಆದೇಶವನ್ನು ಜಾರಿಗೆ ತರುವಲ್ಲಿ ಅಧಿಕಾರಿಗಳ ಕರ್ತವ್ಯಪರತೆಯ ಪರೀಕ್ಷೆ ಯಾಗುವುದು ಇಂತಹ ಸಂದರ್ಭಗಳಲ್ಲಿಯೇ.

    3. ನಿಜ ಸಾರ್, ರೈತರ ಬದುಕು ಮೊದಲೇ ಮೂರಾಬಟ್ಟೆ. ಇಂತಹ ಟೈಮ್ ನಲ್ಲಿ ಇನ್ನೂ ಅದ್ವಾನ….

    4. ಉತ್ತರ ಕರ್ನಾಟಕದ‌ ಜನ ನಿಜಕ್ಕೂ ಶಾಪಗ್ರಸ್ತರು. ಹೊಟ್ಟೆ ಪಾಡಿಗೆ ಗಂಟುಮೂಟೆ ಕಟ್ಟಿ ನಗರಕ್ಕೆ ಬಂದು ಕೊರೋನದಿಂದ ಪುನಃ ತಮ್ಮ ಊರಿಗೆ ಗಂಟುಮೂಟೆ ಕಟ್ಟುವಂತಾದದ್ದು ವಿಪರ್ಯಾಸವೇ ಸರಿ.

    LEAVE A REPLY

    Please enter your comment!
    Please enter your name here

    Latest article

    error: Content is protected !!