ಕೋವಿಡ್-19 ಇಲ್ಲವೇ ಇಲ್ಲ ಅಂದರೆ ಶೂನ್ಯಕ್ಕೆ ಇಳಿದ 21 ದಿನಗಳ ಬಳಿಕವಷ್ಟೇ ಶಾಲೆಗಳನ್ನು ಮತ್ತೆ ತೆರೆಯಿರಿ ಎಂಬುದು ಬಹುತೇಕ ಹೆತ್ತವರ ಒಕ್ಕೊರಲ ಅಭಿಪ್ರಾಯವಾಗಿದೆ. ವೈರಸ್ ಹಾವಳಿಯ ಬಳಿಕ ಈ ಕುರಿತು ಸಮೀಕ್ಷೆ ನಡೆಸಿದ ಲೋಕಲ್ ಸರ್ಕಲ್ಸ್ (LocalCircles) ನಲ್ಲೂ ಇದೇ ಅಭಿಪ್ರಾಯ ವ್ಯಕ್ತವಾಗಿದೆ. ಇದು ಆಡಳಿತ, ಸಾರ್ವಜನಿಕ ಮತ್ತು ಗ್ರಾಹಕರ ಹಿತಾಸಕ್ತಿಯನ್ನು ಒಳಗೊಂಡ ವೇದಿಕೆಯಾಗಿದೆ. 220 ಜಿಲ್ಲೆಗಳ ಸುಮಾರು 18,000 ಜನರ ಅಭಿಪ್ರಾಯವನ್ನು ಇದರಲ್ಲಿ ಸಂಗ್ರಹಿಸಲಾಗಿದೆ.
ತಮ್ಮ ರಾಜ್ಯ ಅಥವಾ ಜಿಲ್ಲೆಯಲ್ಲಿ ಕೋವಿಡ್-19 ಶೂನ್ಯ ಪ್ರಮಾಣಕ್ಕೆ ಇಳಿದ ಬಳಿಕವೇ ಮಕ್ಕಳನ್ನು ಶಾಲೆಗೆ ಸೇರಿಸಬೇಕು ಅಥವಾ ಶಾಲೆಯ ಅಡಳಿತ ಮಂಡಳಿ ಅಥವಾ ಸರಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಶೇ. 73ರಷ್ಟು ಹೆತ್ತವರು ಅಭಿಪ್ರಾಯ ಪಟ್ಟಿದ್ದಾರೆ. ಕೇವಲ ಶೇ. 16ರಷ್ಟು ಜನರು ಮಾತ್ರ ಹೊಸ ಪ್ರಕರಣ ವರದಿಯಾಗದಿದ್ದರೆ ಆಗ ಶಾಲೆಯನ್ನು ತೆರೆಯಬಹುದು ಎಂದು ಹೇಳಿದ್ದಾರೆ. ಕೆಲವರಂತೂ ಕೋವಿಡ್-19 ಪ್ರತಿಬಂಧಕ ಲಸಿಕೆ ಸಿದ್ಧವಾದ ಬಳಿಕವೇ ಮಕ್ಕಳಿಗೆ ಅಡ್ಮಿಷನ್ ಮಾಡಬೇಕು ಎಂದು ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಕೆಲವೊಂದು ವಿಚಾರಗಳ ಬಗ್ಗೆ ಚರ್ಚೆ ಮಾಡಲೇಬೇಕಾಗಿದೆ. ಮುಖ್ಯವಾಗಿ ಯಾವುದೇ ಶಾಲೆಯಿರಲಿ ಅಂದರೆ ಲಕ್ಷಾಂತರ ಡೊನೇಷನ್ ಕೊಟ್ಟು ಮಕ್ಕಳನ್ನು ಸೇರಿಸುವ ಅಥವಾ ಕಡಿಮೆ ದುಡ್ಡಿನ ಸರಕಾರಿ ಶಾಲೆಯಿರಲಿ ಅಲ್ಲಿ ನೈರ್ಮಲ್ಯವನ್ನು ಎಷ್ಟು ನಿರ್ವಹಣೆ ಮಾಡುತ್ತಾರೆ ? ಸುಮಾರು ಎಂಟು ಗಂಟೆಗಳ ಕಾಲ ಶಾಲೆಯಲ್ಲಿ ಕಳೆಯುವ ಮಕ್ಕಳು ಶೌಚಾಲಯಕ್ಕೆ ಹೋಗುವ ಅಗತ್ಯವಿದ್ದೇ ಇದೆ. ಇನ್ನು ಬೆಂಗಳೂರಿನಂತಹ ಮಹಾನಗರಗಳಲ್ಲಿ ಬೆಳಗ್ಗೆ ಏಳು-ಎಂಟು ಗಂಟೆಗೆ ಮನ ಬಿಡುವ ಮಕ್ಕಳು ಏನು ಮಾಡಬೇಕು ? ಇರುವ ಬೆರಳೆಣಿಕೆಯಷ್ಟು ಹೌಸ್ ಕೀಪಿಂಗ್ ಸಿಬ್ಬಂದಿ ಎಷ್ಟು ಬಾರಿ ಟಾಯ್ಲೆಟ್ ಕ್ಲೀನಿಂಗ್ ಮಾಡಬಹುದು ? ಅದು ಬಿಡಿ, ಮಕ್ಕಳು ನಾನಾ ಊರಿನಿಂದ ಬಂದಿರುತ್ತಾರೆ. ಅವರ ಸೋಶಿಯಲ್ ಡಿಸ್ಟನ್ಸ್ ಹೇಗೆ ನಿರ್ವಹಣೆ ಮಾಡಬಹುದು ? ಮಕ್ಕಳಂತೂ ಕೇವಲ ಮಾರ್ಕ್ ಮಾಡಿದಲ್ಲೇ ಉಳಿಯುವ ಜಾಯಮಾನ ತೋರಿಸುವ ಸಾಧ್ಯತೆ ತೀರಾ ಕಡಿಮೆ ಎಂದರೆ ತಪ್ಪಾಗಲ್ಲ. ಇಂತಹುದರಲ್ಲಿ ನಾವು ಸೋಶಿಯಲ್ ಡಿಸ್ಟೆಂನ್ಸಿಂಗ್ ಮಾಡಿ ಮಕ್ಕಳನ್ನು ಶಾಲೆಗೆ ಅಡ್ಮಿಟ್ ಮಾಡುತ್ತೇವೆ ಹಾಗೂ ಅವರಿಗೆ ಕಲಿಸುತ್ತೇವೆ ಎನ್ನುವುದು ಎಷ್ಟರ ಮಟ್ಟಿಗೆ ಕಾರ್ಯ ಸಾಧು ಎನ್ನುವುದನ್ನು ಕೂಡ ಯೋಚನೆ ಮಾಡಬೇಕಾಗುತ್ತದೆ ಎಂದು ಬೆಂಗಳೂರಿನ ಶ್ರೀನಗರದಲ್ಲಿ ವಾಸಿಸುತ್ತಿರುವ ಎಂಟನೇ ತರಗತಿಯ ಮಂದಾರನ ತಾಯಿ ಸುಮಿತ್ರಾ ದೊಡ್ಡಮನಿ ಅಭಿಪ್ರಾಯ ಪಟ್ಟರು.
ಮಾಸ್ಕ್ ವಿಚಾರ
ಮಾಸ್ಕ್ ಧರಿಸಿಕೊಳ್ಳುವುದು ನಮ್ಮನ್ನು ನಾವು ಕೊರೊನಾ ವೈರಸ್ ನಿಂದ ರಕ್ಷಿಸಿಕೊಳ್ಳುವುದಕ್ಕಷ್ಟೇ ಸೀಮಿತ. ಬೇರೆಯವರು ಸೀನಿದರೆ, ಕೆಮ್ಮಿದರೆ ಆಗ ಹೊರ ಬರುವ ವೈರಸ್ ನಿಂದ ಇದು ರಕ್ಷಣೆ ನೀಡುತ್ತದೆ. ಆದರೆ ಈ ಮಾಸ್ಕ್ ಹಾಕಿಕೊಳ್ಳುವ ಕಾನ್ಸೆಪ್ಟ್ ಕೂಡ ಈಗ ಬದಲಾಗಿದೆ. ಇತ್ತೀಚೆಗಷ್ಟೇ ಮಾಸ್ಕ್ ಹಾಕಿಕೊಂಡಿಲ್ಲ ಎಂದು ವ್ಯಕ್ತಿಯೊಬ್ಬನಿಗೆ ಥಳಿಸಿದ ಘಟನೆಯೂ ಇದಕ್ಕೆ ನಿದರ್ಶನ. ಹಾಗಿದ್ದರೆ ಮಕ್ಕಳು ಶಾಲೆಗೆ ಹೋಗುವಾಗ ಮಾಸ್ಕ್ ಹಾಕಿಕೊಳ್ಳಬೇಕು, ಸ್ಯಾನಿಟೈಸರ್ ತೆಗೆದುಕೊಂಡು ಹೋಗಬೇಕು ಎಂದಾದರೆ ಅದಕ್ಕೆ ಆಗುವ ವೆಚ್ಚವನ್ನು ಯಾರು ಭರಿಸಬೇಕು ? (ಸಾಮಾನ್ಯವಾಗಿ ಮಾಸ್ಕ್ ತೆಗೆದುಕೊಳ್ಳುವವರು ಒಂದು ದಿನ ಖರೀದಿಸಿ ಅದನ್ನು ತಿಂಗಳುಗಟ್ಟಲೆ ಬಳಸುತ್ತಿದ್ದಾರೆ. ಆದರೆ ಮಾಸ್ಕ್ ನ ಅವಧಿಯೆಷ್ಟು ಎಂಬುದು ಬಹುತೇಕರಿಗೆ ತಿಳಿದಿಲ್ಲ.
ಸರಿ, ಮಾಸ್ಕ್, ಸ್ಯಾನಿಟೈಸರ್ ನಮ್ಮ ಮಕ್ಕಳ ಆರೋಗ್ಯಕ್ಕಾಗಿ ಖರೀದಿಸೋಣ. ಆದರೆ, ಉಳಿದ ಮಕ್ಕಳು ಅಂದರೆ ಅವರ ಹೆತ್ತವರು ಅದೇ ನೀತಿ ಅನುಸರಿಸುತ್ತಾರೆಯೇ ? ಅಥವಾ ಎರಡು ದಿನಕ್ಕೊಮ್ಮೆ 20-30 ರೂ. ಬೆಲೆಯ ಮಾಸ್ಕ್ ಮತ್ತು 50-90 ರೂ. ಸ್ಯಾನಿಟೈಸರ್ ಖರೀದಿಸುವ ಸಾಮರ್ಥ್ಯ ಅವರಲ್ಲಿದೆಯೇ? ಎಂಬ ಪ್ರಶ್ನೆಗಳು ಎದುರಾಗುವುದು ಸಹಜ. ಇನ್ನು ವಾಹನ ವಿಚಾರಕ್ಕೆ ಬಂದರೂ ಅಲ್ಲಿ ಕೂಡ ಒಂದು ವ್ಯಾನ್ ನಲ್ಲಿ ಸೋಶಿಯಲ್ ಡಿಸ್ಟೆನ್ಸ್ ಮೇಂಟೇನ್ ಮಾಡಿ ಮಕ್ಕಳನ್ನು ಕರೆದೊಯ್ಯಲು ಸಾಧ್ಯವೇ, ಸಾಧ್ಯ ಎನ್ನುವುದಾದರೆ ಆಗ ಒನ್ -ಟು-ಡಬಲ್ ಶುಲ್ಕವನ್ನು ವಸೂಲಿ ಮಾಡದೆ ಶಾಲೆಗಳು ಬಿಡುತ್ತವೆಯೇ ? ಇಷ್ಟೆಲ್ಲಾ ಆದರೂ ಕೊನೆಗೆ ತಮ್ಮದ್ದಲ್ಲದ ಕಾರಣದಿಂದ ಕೊರೊನಾ ವೈರಸ್ ಮಕ್ಕಳಿಗೆ ವಕ್ಕರಿಸಿದರೆ ಆ ಮೂಲಕ ಅವರ ಹೆತ್ತವರಿಗೆ ಕೂಡ ಆಕ್ರಮಿಸಿದರೆ ಯಾರು ಹೊಣೆ ?
ಆದ್ದರಿಂದ ಶಿಕ್ಷಣ ವರ್ಷವನ್ನು ಇನ್ನು ಕೆಲದಿನ ಮುಂದಕ್ಕೆ ಹಾಕುವುದರ ಜೊತೆ ಸಿಲಬಸ್ ಕಡಿಮೆ ಮಾಡುವುದೇ ಸದ್ಯಕ್ಕೆ ಇರುವ ಉಪಾಯ. 10ನೇ ತರಗತಿ ಮೇಲ್ಮಟ್ಟ ಮಕ್ಕಳಿಗೆ ಮಾತ್ರ ಪರ್ಯಾಯವಾಗಿ ಆನ್ ಲೈನ್ ಪಾಠ ಪ್ರವಚನದ ಬಗ್ಗೆ ಯೋಚಿಸ ಬಹುದು.
ಸಚಿವರ ಹೇಳಿಕೆ
ಕೊಳ್ಳೇಗಾಲದಲ್ಲಿ ಪ್ರತಿಕ್ರಿಯಿಸಿರುವ ಶಿಕ್ಷಣ ಸಚಿವ ಸುರೇಶ್ ಕುಮಾರ್ ಜೂನ್ 10ರಿಂದ ಆಯಾ ಶಾಲೆಗಳಲ್ಲಿ ಪೋಷಕರಸಭೆ ನಡೆಯಲಿದೆ.ಅವರ ಅಭಿಪ್ರಾಯ ಪಡೆದೇ ಶಾಲೆಗಳ ಪುನಾರಾರಂಭದ ಬಗ್ಗೆ ನಿರ್ಧರಿಸಲಾಗುವುದು ಎಂದು ಹೇಳಿದ್ದಾರೆ.
ಪ್ರತಿಕ್ರಿಯಿಸಿ: ಶಾಲಾ ಪುನರಾರಂಭದ ಬಗ್ಗೆ ನಿಮಗೇನಿಸುತ್ತದೆ ಎಂಬುದನ್ನು ಈ ಕೆಳಗಿನ ಕಾಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ. ಅದನ್ನು ಶಿಕ್ಷಣ ಸಚಿವರ ಗಮನಕ್ಕೆ ತರುವ ಕೆಲಸವನ್ನು kannadapress.com ಮಾಡುತ್ತದೆ.
ಈ ಲೇಖನ ವರ್ತಮಾನ ಕಾಲಕ್ಕೆ ಅನುಗುಣವಾಗಿ ವಿಚಾರಮಾಡಲಾಗಿದೆ. ವಿದ್ಯಾಸಂಸ್ಥೆಗಳು ಹಂತಹಂತವಾಗಿ ಶಾಲಾ ಕಾಲೇಜುಗಳನ್ನು ತೆರೆದರೆ ಅನುಕೂಲವಾಗುತ್ತದೆ. ಮೊದಲು ಪೋಸ್ಟ್ ಗ್ರಾಜುಯೇಟ್ ಕೋರ್ಸ್ಗಳು, ತದನಂತರ ಹೈಸ್ಕೂಲು next ಮಿಡಲ್ ಸ್ಕೂಲು. ಇದೆಲ್ಲದರ ಫಲಿತಾಂಶ ನೋಡಿದ ನಂತರ ನರ್ಸರಿ ಶಾಲೆಗಳನ್ನು ಓಪನ್ ಮಾಡುವುದು ಉತ್ತಮ ಎಂದು ನನ್ನ ಅನಿಸಿಕೆ .