ಕನ್ನಡ ಸಿನಿಮಾ ರಂಗಕ್ಕೂ ಮೈಸೂರು ಪ್ರಾಣಿ ಸಂಗ್ರಹಾಲಯಕ್ಕೂ ಅವಿನಾಭಾವ ಸಂಬಂಧವಿದೆ. ಕನ್ನಡದ ಅನೇಕ ಸಿನಿಮಾಗಳಲ್ಲಿ ಈ ಮೃಗಾಲಯದ ಪ್ರಾಣಿಗಳು ನಟಿಸಿವೆ. ನಾನಾ ಚಿತ್ರಗಳಲ್ಲಿ ದೃಶ್ಯವಾಗಿ ಮೃಗಾಲಯ ಕಂಡಿದೆ. ಜತೆಗೆ ಅನೇಕ ನಟರು ಈ ಸಂಗ್ರಹಾಲಯದ ಪ್ರಾಣಿಗಳನ್ನು ದತ್ತು ಪಡೆದು ಪೋಷಿಸುತ್ತಿದ್ದಾರೆ. ಇವರ ಸಾಲಿಗೆ ಹೊಸ ಸೇರ್ಪಡೆ ಕನ್ನಡದ ಈ ಧೀಮಂತ ಶಕ್ತಿಗಳು.
ಮೈಸೂರು ಮೂಲದವರಾದ ಡಾ.ರಾಜ್ ಕುಮಾರ್, ಡಾ.ವಿಷ್ಣುವರ್ಧನ್ ಮತ್ತು ಡಾ.ಅಂಬರೀಶ್ ಹೆಸರಿನಲ್ಲಿ ಸೋಮವಾರ (ಜೂ. 8) ಪ್ರಾಣಿಗಳನ್ನು ದತ್ತು ಪಡೆಯಲಾಗಿದೆ.
ವರನಟ ಡಾ. ರಾಜ್ ಕುಮಾರ್ ಅವರ ಹೆಸರಿನಲ್ಲಿ ಆನೆ ಹಾಗೂ ರೆಬೆಲ್ ಸ್ಟಾರ್ ಅಂಬರೀಷ್ ಅವರ ಹೆಸರಿನಲ್ಲಿ ಆಫ್ರಿಕನ್ ಆನೆ ಮತ್ತು ಸಾಹಸಸಿಂಹ ವಿಷ್ಣುವರ್ಧನ್ ಹೆಸರಿನಲ್ಲಿ ಒಂದು ಸಿಂಹ ದತ್ತು ಪಡೆಯಲಾಗಿದೆ.
ರಾಜ್ ಕುಮಾರ್ ಅವರಿಗೆ ಆನೆಗಳ ಮೇಲೆ ವಿಶೇಷ ಪ್ರೀತಿ. ಗಂಧದ ಗುಡಿ ಸೇರಿದಂತೆ ಇವರ ನಟನೆಯ ಹಲವು ಚಿತ್ರಗಳಲ್ಲಿ ಆನೆ ಬಳಸಲಾಗಿದೆ. ಜತೆಗೆ ಶೂಟಿಂಗ್ ಸಮಯದಲ್ಲಿ ಆನೆಗಳ ಜತೆ ರಾಜ್ ಕುಮಾರ್ ಬಿಂದಾಸ್ ಆಗಿ ಕಾಲಕಳೆಯುತ್ತಿದ್ದರು. ಅಂಬರೀಶ್ ಅವರಿಗೂ ಕೂಡ ಆನೆಗಳ ಮೇಲೆ ಅಷ್ಟೇ ಅಕ್ಕರೆ ಹಾಗಾಗಿ ಈ ಇಬ್ಬರ ನಟರ ಹೆಸರಿನಲ್ಲಿ ಆನೆಗಳನ್ನು ದತ್ತು ಪಡೆಯಲಾಗಿದೆ.ಸಾಹಸ ಸಿಂಹ ಅವರ ಅಭಿಮಾನಿಗಳ ಅಭಿಮಾನಕ್ಕೆ ತಕ್ಕಂತೆ ವಿಷ್ಣುವರ್ಧನ್ ಅವರ ಹೆಸರಲ್ಲಿ ಸಿಂಹವನ್ನು ದತ್ತು ಪಡೆಯಲಾಗಿದೆ.
ಈ ಮೇರು ನಟರ ಹೆಸರಿನಲ್ಲಿ ಪ್ರಾಣಿಗಳನ್ನು ದತ್ತು ಪಡೆದವರು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್. ಸ್ವತಃ ಸುಮಲತಾ ಅಂಬರೀಶ್ ಉಪಸ್ಥಿತರಿದ್ದ ಕಾರ್ಯಕ್ರಮದಲ್ಲೇ ಅವರು ಇಂಥದ್ದೊಂದು ಮೆಚ್ಚುವ ಕಾರ್ಯ ಮಾಡಿದ್ದಾರೆ.
“ಮೂವರು ನಟರೂ ಮೈಸೂರು ಮೂಲದವರು. ಅವರ ಹೆಸರಿನಲ್ಲಿ ದತ್ತು ತಗೆದುಕೊಳ್ಳುವಂತಹ ಅವಕಾಶ ನನಗೆ ಸಿಕ್ಕಿದೆ. ಹೆಮ್ಮೆಯಿಂದ ಈ ಕೆಲಸಕ್ಕೆ ಮುಂದಾದೆ” ಎಂದಿದ್ದಾರೆ ಸಚಿವರು.
ಈಗಾಗಲೇ ಸ್ಯಾಂಡಲ್ ವುಡ್ ನಟರಾದ ದರ್ಶನ್, ಸೃಜನ್ ಲೋಕೇಶ್ ಸೇರಿದಂತೆ ಹಲವು ಕಲಾವಿದರು ಪ್ರಾಣಿಗಳನ್ನು ದತ್ತು ಪಡೆದಿದ್ದಾರೆ.