ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ ಇಬ್ಬರು ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೆಟ್ ನೀಡುವ ಮೂಲಕ `ಲಾಬಿ’ಗೆ ಅವಕಾಶವಿಲ್ಲ ಎನ್ನುವ ಸ್ಪಷ್ಟ ಸಂದೇಶವನ್ನು ರವಾನಿಸಿದೆ.ಪ್ರಭಾವಿ ಮುಖಂಡ ಪ್ರಭಾಕರ ಕೋರೆ ಮತ್ತು ಹೋಟೆಲ್ ಉದ್ಯಮಿ ಪ್ರಕಾಶ್ ಶೆಟ್ಟಿ ಅವರಿಗೆ ಟಿಕೆಟ್ ಖಚಿತ ಎಂಬ ಲೆಕ್ಕಾಚಾರಗಳನ್ನು ತಲೆ ಕೆಳಗೆ ಮಾಡಿ ರಾಯಚೂರಿನ ಅಶೋಕ ಗಸ್ತಿ
ಮತ್ತು ಬೆಳಗಾವಿಯ ಈರಣ್ಣ ಕಡಾಡಿ ಅವರಿಗೆ ಟಿಕೆಟ್ ನೀಡಿದೆ.
ಗಸ್ತಿ ಬಳ್ಳಾರಿ ವಿಭಾಗದ ಪ್ರಭಾರಿಯಾಗಿದ್ದರೆ, ಕಡಾಡಿ ಬೆಳಗಾವಿ ವಿಭಾಗದ ಪ್ರಭಾರಿಯಾಗಿ ಪಕ್ಷ ಸಂಘಟನೆಯ ಹೊಣೆ ನಿರ್ವಹಿಸುತ್ತಿದ್ದರು. ಇಬ್ಬರೂ ಅಧಿಕಾರಕ್ಕೆ ಹಪಹಪಿಸದೇ, ಎಲೆ ಮರೆಯ ಕಾಯಿಯಂತೆ ತಮ್ಮ
ಜವಾಬ್ದಾರಿ ನಿಭಾಯಿಸಿಕೊಂಡು ಹೋಗುತ್ತಿದ್ದರು. ಪ್ರಭಾಕರ ಕೋರೆ ಅವರಿಗೆ ಟಿಕೆಟ್ ನೀಡಿದ್ದರೆ ಸಹೋದರ ರಮೇಶ್ ಕತ್ತಿಗೆ ಟಿಕೆಟ್ ಸಿಗಲಿಲ್ಲವೆಂದು ಶಾಸಕ ಉಮೇಶ್ ಕತ್ತಿ ಮುನಿಸಿಕೊಳ್ಳುವ ಅಪಾಯವಿತ್ತು. ಪ್ರಕಾಶ್ ಶೆಟ್ಟಿಯವರನ್ನು ಕಣಕ್ಕೆ ಇಳಿಸಿದ್ದರೆ ಬೇರೆಯೇ ಸಂದೇಶ ರವಾನೆಯಾಗುತ್ತಿತ್ತು. ಹೀಗಾಗಿ
ಅಳೆದು ತೂಗಿ ಗಸ್ತಿ, ಕಡಾಡಿ ಅವರಿಗೆ ಹೈಕಮಾಂಡ್ ಟಿಕೆಟ್ ನೀಡಿದೆ.
ರಾಜ್ಯ ಬಿಜೆಪಿಯ ಕೋರ್ ಕಮಿಟಿ ಶಿಫಾರಸು ಮಾಡಿದ್ದ ಪಟ್ಟಿಯಲ್ಲಿ ಇಬ್ಬರ ಹೆಸರೂ ಇರಲಿಲ್ಲ. ಅಂದರೆ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಅವಕಾಶ ಸಿಗುತ್ತದೆ, ಲಾಬಿಗಳಿಗೆ ಅವಕಾಶವಿಲ್ಲ ಎಂಬ ಸಂದೇಶವನ್ನು ವರಿಷ್ಠರು ರವಾನಿಸಿದ್ದಾರೆ. ಅಲ್ಲದೇ ದೇಶದ ಪ್ರತಿ ಬ್ಲಾಕ್‌ನಿಂದಲೂ ತಮ್ಮದೇ ಮೂಲಗಳಿಂದ ಮಾಹಿತಿ ತರಿಸಿಕೊಳ್ಳುವ ಸಾಮರ್ಥ್ಯವಿದೆ ಎಂಬ ಎಚ್ಚರಿಕೆಯನ್ನು ಈ ಇಬ್ಬರ ಮೂಲಕ ರಾಜ್ಯಮಟ್ಟದ `ನಾಯಕ’ರುಗಳಿಗೂ ನೀಡಿದ್ದಾರೆ. ಜತೆಗೆ, ಮುಂಬಯಿ ಕರ್ನಾಟಕ,ಕಲ್ಯಾಣ ಕರ್ನಾಟಕಕ್ಕೆ ಪ್ರಾತಿನಿಧ್ಯ ನೀಡುವ ಮೂಲಕ ಪ್ರಾದೇಶಿಕ ಸಮತೋಲನವನ್ನೂ
ಸಾಧಿಸಿದ್ದಾರೆ. ಇದರೊಂದಿಗೆ ಒಂದೊಮ್ಮೆ ಕೋರೆ-ಕತ್ತಿ ಅಸಮಾಧಾನಗೊಂಡರೆ ಅದರ ಪರಿಣಾಮ ಪಕ್ಷದ ಮೇಲೆ ಬೀರದಂತೆಯೂ ಜಾಣ್ಮೆಯ ನಡೆ ಇರಿಸಿದ್ದಾರೆ. ಈ ಆಯ್ಕೆ ಕುರಿತು ಯಾರೂ
ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುವಂತೆಯೇ ಇಲ್ಲ!
ನರೇಂದ್ರ ಮೋದಿ, ಅಮಿತ್ ಶಾ ಅವರಂತಹ ಧುರೀಣರಿಂದ ಮಾತ್ರವೇ ಇಂತಹ ದಿಟ್ಟತನದ ನಿರ್ಧಾರ ಸಾಧ್ಯ.ಕಾಂಗ್ರೆಸ್‌ನಲ್ಲಿ ಕೂಡ ಈ ಸಲ ಹೈಕಮಾಂಡ್ ರಾಜ್ಯ ನಾಯಕರನ್ನು ವಿಶ್ವಾಸಕ್ಕೆತೆಗೆದುಕೊಳ್ಳದೇ ಏಕಾಏಕಿ ಮಲ್ಲಿಕಾರ್ಜುನ ಖರ್ಗೆಯವರ ಹೆಸರನ್ನು ಅಂತಿಮಗೊಳಿಸಿದೆ
ಎನ್ನುವುದು ಗಮನಾರ್ಹ.
ಇನ್ನು ಬಿಜೆಪಿಯು ಮೂರನೇ ಅಭ್ಯರ್ಥಿ ಕಣಕ್ಕೆ ಇಳಿಸದೇ ಇರುವಮೂಲಕ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ರಾಜ್ಯಸಭೆ ಪ್ರವೇಶಕ್ಕೆ ಹಾದಿಸುಗಮಗೊಳಿಸಿದೆ. ಇಲ್ಲಿಯೂ ಖರ್ಗೆ, ಗೌಡರಂತಹ ಹಿರಿಯ ನಾಯಕರನ್ನು ನಾವು ಗೌರವಿಸುತ್ತೇವೆ ಎಂಬ ಸಂದೇಶ ಕಳುಹಿಸುವ ಪ್ರಯತ್ನವನ್ನು ಮೋದಿ, ಶಾ ಮಾಡಿರುವುದು ಸ್ಪಷ್ಟ.
ಲೇಖನ ಸಮಗ್ರ ಮಾಹಿತಿ ನೀಡಿದೆ. ಭಾಜಪ ವರಿಷ್ಟರು ಒಳ್ಳೆಯದನ್ನು ಮಾಡಿದ್ದಾರೆ.