ಜಾರ್ಜ್ ಫ್ಲಾಯ್ಡ್ ನ ಹತ್ಯೆ ಖಂಡಿಸಿ ಅಮೆರಿಕಾದಲ್ಲೇ ಅಲ್ಲದೆ, ಪ್ರಪಂಚದ ಮತ್ತೊಂದು ತುದಿಯಲ್ಲಿರುವ ಆಸ್ಟ್ರೇಲಿಯಾದವರೆಗೆ ಪ್ರತಿಭಟನೆಗಳು ನಡೆಯುತ್ತಲೇ ಇವೆ. ಪ್ರತಿ ದೇಶದಲ್ಲಿ ವ್ಯಾಪಕವಾಗಿ ಹರಡಿರುವ ಜನಾಂಗೀಯ ದ್ವೇಷವನ್ನು ವಿರೋಧಿಸಿ ಈ ಪ್ರತಿಭಟನೆಗಳು ನಡೆಯುತ್ತಿವೆ.
ಜಾರ್ಜ್ ಫ್ಲಾಯ್ಡ್ ನ ಸಮಾಧಿ ಕ್ರಿಯೆ ಮುಗಿದಿದ್ದು, ಆತನನ್ನು ಹತ್ಗೈ ಮಾಡಿದ ನಾಲ್ಕೂ ಜನ ಪೊಲೀಸರಿಗೆ ಅಧಿಕ ಸಜೆಯ ಘೋಷಣೆಯಾಗಿದ್ದರೂ ಜೂನ್ 7 ಭಾನುವಾರದಂದು ಅಮೆರಿಕಾದ ರಾಜಧಾನಿ ವಾಷಿಂಗ್ಟನ್ ನಲ್ಲಿ ಅತ್ಯಂತ ಬೃಹತ್ ಪ್ರತಿಭಟನೆ ನಡೆಯಿತು.ಇದುವರೆಗಿನ ಪ್ರತಿಭಟನಾ ನಡಿಗೆಯಲ್ಲೇ ಇದನ್ನು ಅತಿದೊಡ್ಡದು ಎಂದು ಹೇಳಲಾಗಿದೆ.ಇದು ಶಾಂತಿಯುತವಾಗಿ ನಡೆದ ಹಿನ್ನೆಲೆಯಲ್ಲೇ ಡೊನಾಲ್ಡ್ ಟ್ರಂಪ್ ಆಡಳಿತ ವಿವಾದಾಸ್ಪದವಾಗಿದ್ದ ನ್ಯಾಷನಲ್ ಗಾರ್ಡ್ ಗಳನ್ನು ಹಿಂದಕ್ಕೆ ಪಡೆದಿದೆ.
ಜಾರ್ಜ್ ಫ್ಲಾಯ್ಡ್ ನ ಸಾವು ಆಯಾ ದೇಶದ ಎಲ್ಲ ಅನ್ಯಾಯಗಳು ಮತ್ತು ಸ್ವಾತ್ರಂತ್ರ್ಯದ ಮೇಲಿನ ದಾಳಿಯನ್ನು ಪ್ರತಿಬಿಂಬಿಸುತ್ತವೆ.ವಾಷಿಂಗ್ಟನ್ ಸೇರಿದಂತೆ ಅಮೆರಿಕಾದ ಹಲವು ನಗರಗಳು, ಲಂಡನ್, ಬ್ರಿಸ್ಬೇನ್, ಇಸ್ರೇಲ್, ಜರ್ಮನಿ,ಫ್ರಾನ್ಸ್, ದಕ್ಷಿಣ ಅಮೆರಿಕಾದ ಬ್ರೆಜಿಲ್, ದಕ್ಷಿಣ ಆಫ್ರಿಕಾ ಎಲ್ಲೆಡೆಯೂ ಜನರು ಭುಗಿಲೆದ್ದಿದ್ದಾರೆ. ಈ ಹೋರಾಟ ಪ್ರಜಾಪ್ರಭುತ್ವ ವ್ಯವಸ್ಥೆಗಳಿಲ್ಲದ ಹಾಂಗ್ ಕಾಂಗ್ ನಂತಹ ದೇಶಗಳಿಗೂ ಹರಡಿರುವುದು ಅತ್ಯಂತ ಮಹತ್ವದ ಬೆಳವಣಿಗೆಯಾಗಿದೆ.
ಭಾನುವಾರ ಇಂಗ್ಲೆಂಡಿನ ಬ್ರಿಸ್ಟಲ್ ಎನ್ನುವ ನಗರದಲ್ಲಿ ನೆರೆದಿದ್ದ 10,000 ಜನ ಪ್ರತಿಭಟನೆಗಾರರು ಆ ನಗರದ 17 ನೇ ಶತಮಾನದ ಸ್ಲೇವ್ ಟ್ರೇಡರ್ ನಾಗಿದ್ದ ಎಡ್ವರ್ಡ್ ಕೋಲ್ಸ್ಟನ್ನನ ಪ್ರತಿಮೆಯನ್ನು ಉರುಳಿಸಿ ಹತ್ತಿ ಕುಣಿದು ರಸ್ತೆಯಲ್ಲಿ ದರ ದರನೆ ಎಳೆದುಕೊಂಡು ಹೋಗಿ ಸಮುದ್ರದ ನೀರಲ್ಲಿ ಎಸೆದು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಸುಮಾರು 80,000 ಜನರನ್ನು ಅಟ್ಲಾಂಟಿಕ್ ಸಮುದ್ರದ ಮೂಲಕ ದಾಸ್ಯದ ವ್ಯಾಪಾರ ಮಾಡಿದ್ದ ಎಡ್ವರ್ಡ್ ಇಡೀ ಬ್ರಿಸ್ಟಲ್ ನಗರವನ್ನು ಕಟ್ಟಲು ನೆರವಾಗಿದ್ದ ಪ್ರತಿಷ್ಟಿತ ರಾಜಕಾರಣಿ.ಅವನ ಪ್ರತಿಮೆಯನ್ನು ತೆಗೆಯಿರಿ ಎಂಬ ಒತ್ತಾಯ ಈ ಹಿಂದಿನಿಂದಲೇ ತೀವ್ರವಾಗಿತ್ತು. ಆದರೆ ಚಾರಿತ್ರಿಕ ಕಾರಣಗಳಿಗಾಗಿ ಅದನ್ನು ಉಳಿಸಿಕೊಳ್ಳಲಾಗಿತ್ತು.ಪ್ರಸ್ತುತ ಸಮಸ್ಯೆಯ ಜೊತೆ ಚಾರಿತ್ರಿಕ ತಪ್ಪುಗಳ ಮೇಲೆ ಕೂಡ ಜನರ ಆಕ್ರೋಶ ತಿರುಗುತ್ತಿರುವುದು ಜನರ ಭಾವೋದ್ವೇಗಗಳು ಸುಲಭವಾಗಿ ಕರಗುವುದಿಲ್ಲ ಎನ್ನುವ ವಿಚಾರವನ್ನು ದೃಢಪಡಿಸುತ್ತದೆ. ಲಂಡನ್ನಿನಲ್ಲಿ ರಾತ್ರಿ ಒಂಭತ್ತು ಗಂಟೆಯಾದರೂ ಪ್ರತಿಭಟನೆ ನಡೆಯುತ್ತಲೇ ಇತ್ತು.ಇತರೆ ನಗರಗಳಲ್ಲಿಯೂ ಪ್ರತಿಭಟನೆಗಳು ನಡೆದವು.
ಮಾಧ್ಯಮಗಳೇ ಟಾರ್ಗೆಟ್
ಇಂತಹ ಎಲ್ಲ ಬೆಳವಣಿಗೆಯನ್ನು ನಿಸ್ಪೃಹವಾಗಿ ವರದಿಮಾಡುವುದು ಮಾಧ್ಯಮಗಳ ನೈತಿಕ ಜವಾಬ್ದಾರಿ.ಸ್ವತಂತ್ರ ಮಾಧ್ಯಮಗಳು ಪ್ರಜಾಪ್ರಭುತ್ವದ ಕಣ್ಣುಗಳು. ಇದೇ ಕಾರಣಕ್ಕೆ ಅವರಿಗೆ ಕಾನೂನಿನ, ಸಂವಿಧಾನದ ರಕ್ಷಣೆಯೂ ಇರುತ್ತದೆ.ಪತ್ರಕರ್ತರನ್ನು ಪೊಲೀಸರು ಸಾಮಾನ್ಯವಾಗಿ ಮುಟ್ಟುವುದಿಲ್ಲ. ಅವರ ನಡುವೆ ವೃತ್ತಿ ಸಂಬಂಧಿ ಸಹಕಾರ ಮತ್ತು ಗೌರವಗಳಿರುತ್ತವೆ.
ಆದರೆ ಅಮೆರಿಕಾದಲ್ಲಿ ಕಳೆದ ಮೂರು ವರ್ಷಗಳಿಂದ ಪೊಲೀಸರು, ಪತ್ರಕರ್ತರ ಮೇಲೆ ವರ್ಷಕ್ಕೆ ಸರಾಸರಿ 150 ದೌರ್ಜನ್ಯಗಳನ್ನು ನಡೆಸಿರುವುದು ದಾಖಲಾಗಿವೆ.ಇದನ್ನು ಮಾಧ್ಯಮದವರು ಅವುಡುಗಚ್ಚಿ ಸಹಿಸುತ್ತಿದ್ದಾರೆ. ಆದರೆ ಇತ್ತೀಚೆಗಿನ ಜಾರ್ಜ್ ಫ್ಲಾಯ್ಡ್ ನ ಘಟನೆಯಲ್ಲಿ ಮಾಧ್ಯಮದವರ ಮೇಲಾಗುತ್ತಿರುವ ದೌರ್ಜನ್ಯಗಳು ನಾಲ್ಕು ಪಟ್ಟಾಗಿವೆ. ಇಡೀ ವರ್ಷದಲ್ಲಿ ನಡೆಯುತ್ತಿದ್ದ ದಾಳಿಗಳಿಗಿಂತ ಹೆಚ್ಚುದಾಳಿಗಳು ಕಳೆದ ಹತ್ತು ದಿನಗಳಲ್ಲಿನಡೆದದ್ದು ಸಾಕ್ಷಿ ಸಮೇತ ದಾಖಲಾಗಿದೆ.
ಅತ್ತ ಮಿನಿಯಾಪೋಲೀಸ್ ಪೊಲೀಸು ಇಲಾಖೆ ಜಾರ್ಜ್ ಫ್ಲಾಯ್ಡ್ ನ ಹತ್ಯೆಯ ಕೇಸಿನಲ್ಲಿ ಕೋರ್ಟಿನಲ್ಲಿ ಸೋತರು. ಜನರೆದುರು ತಮ್ಮ ಧೂರ್ತತನಕ್ಕೆ ಅವಮಾನಿಸಲ್ಪಟ್ಟರು. ಸಾರ್ವಜನಿಕವಾಗಿ ಕ್ಷಮೆಯನ್ನೂ ಯಾಚಿಸಿದರು. ಇತ್ತ ಅನುಕಂಪವೇ ಇಲ್ಲದೆ, ಸಾಂತ್ವನ ತೋರದೆ, ಇಂತಹ ಘಟನೆಗಳು ಮುಂದೆ ನಡೆಯದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡದೆ ಬರೇ ಬಲಪ್ರಯೋಗದ ಮಾತುಗಳನ್ನು ಆಡದಿದ್ದರಿಂದ ಮತ್ತು ಅಂತದ್ದೇ ಪ್ರದರ್ಶನಕಾರೀ ನಡವಳಿಕೆಯಿಂದ ಡೊನಾಲ್ಡ್ ಟ್ರಂಪ್ ಖಳನಾಯಕನಂತೆ ಚಿತ್ರಿತರಾದರು. ತನ್ನದೊಂದು . ಟ್ವೀಟ್ ನಲ್ಲಿ ಸ್ವತಃ ಟ್ರಂಪ್ ಪರೋಕ್ಷವಾಗಿ ಪೋಲೀಸರಿಗೆ ತನ್ನ ಸಲಹೆ ಏನೆಂದು ಸಾರ್ವಜನಿಕವಾಗಿಹೇಳಿಕೊಂಡಿದ್ದಾರೆ.
The Lamestream Media is doing everything within their power to foment hatred and anarchy. As long as everybody understands what they are doing, that they are FAKE NEWS and truly bad people with a sick agenda, we can easily work through them to GREATNESS!
— Donald J. Trump (@realDonaldTrump) May 31, 2020
ಇದರೊಂದಿಗೆ ಮಾಧ್ಯಮದವರ ಮೇಲಿನ ಪೋಲೀಸರ ದೌರ್ಜನ್ಯ ಅಕಸ್ಮಿಕವೇನೋ ಎಂಬಂತಿಲ್ಲದೇ ನೇರವಾಗಿ ನಡೆಯುತ್ತಿರುವುದರ ವಿಡೀಯೋಗಳು ವೈರಲ್ ಆಗಿ, ಅಧಿಕಾರ ಮತ್ತು ಬಲ ಎರಡೂ ಸೇರಿ ಅಮೆರಿಕಾದಲ್ಲಿ ಮಾಧ್ಯಮದವರ ಕಣ್ಣು ಕೀಳುವ ಯತ್ನವಾಗುತ್ತಿರುವುದು ನಿಚ್ಚಳವಾಗಿದೆ. ಈ ಬಗ್ಗೆ ಮಾಧ್ಯಮಗಳು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನ ವಿರುದ್ದ ಸಿಡಿದೆದ್ದಿದ್ದಾರೆ.
ಶನಿವಾರ ಪತ್ರಕರ್ತೆ ಲಿಂಡ ಟಿರಾಡೊ ಜಾರ್ಜ್ ಫ್ಲಾಯ್ಡ್ ಸಂಭಂದಿತ ಪ್ರತಿಭಟನೆಯನ್ನು ವರದಿಮಾಡುತ್ತಿದ್ದಳು.ಅವಳ ಮುಖಕ್ಕೇ ರಬ್ಬರ್ ಬುಲೆಟ್ಟಿನಿಂದ ಹೊಡೆದ ಮಿನಿಯಾಪೋಲೀಸ್ ಪೋಲೀಸರು ಅವಳು ಕಾಯಂ ಆಗಿ ಎಡಗಣ್ಣಿನ ದೃಷ್ಟಿ ಕಳೆದುಕೊಳ್ಳುವಂತೆ ಮಾಡಿದ್ದಾರೆ.
ಡೆನ್ವರ್ ಪೋಸ್ಟ್ ಪತ್ರಿಕೆಯ ಹ್ಯೂಯಾಂಗ್ ಚಾಂಗ್ ಡೆನ್ವರ್ ನಗರದಲ್ಲಿ ನಡೆಯುತ್ತಿದ್ದ ಪ್ರತಿಭಟನೆಯನ್ನು ಚಿತ್ರೀಕರಿಸುತ್ತಿದ್ದ.ಅದನ್ನು ತಡೆಯಲು ಡೆನ್ವರ್ ನ ಪೋಲೀಸರು ಅವನೆಡೆಗೆ ಎರಡು ಪೆಪ್ಪರ್ ಸ್ಪ್ರೇ ಬಾಲ್ ಗಳನ್ನು ಶೂಟ್ ಮಾಡಿದ್ದಾರೆ.
ಲಾಸ್ ವೆಗಾಸ್ ರಿವ್ಯೂ ಎನ್ನುವ ಜರ್ನಲ್ ನ ಛಾಯಾಚಿತ್ರಕಾರ ಎಲ್ಲೆನ್ ಸ್ಮಿಡ್ ಮತ್ತು ರಿವ್ಯೂ ಜರ್ನಲ್ ನ ಬ್ರಿಜೆಟ್ ಬೆನ್ನೆಟ್ ಇಬ್ಬರನ್ನೂ ವಿನಾಕಾರಣ ಬಂಧಿಸಿದ್ದಾರೆ.
ವೇವ್ 3 ಎನ್ನುವ ನ್ಯೂಸ್ ಪೇಪರಿನ ವರದಿಗಾರ್ತಿ ಕೇಟ್ಲಿನ್ ರಸ್ಟ್, ಮತ್ತು ಜೇಮ್ಸ್ ಡಾಬ್ಸನ್ನಿನ ಮೇಲೆ ಲೂಯಿಸ್ವಿಲ್ಲ್ ನ ಪೋಲೀಸರು ಪೆಪ್ಪರ್ ಬಾಲ್ ಗಳ ಪ್ರಯೋಗ ಮಾಡಿರುವುದನ್ನು ಪತ್ರಿಕೆ ಬಲವಾಗಿ ಖಂಡಿಸಿದೆ.
ಫೀನಿಕ್ಸ್ ಮತ್ತು ಪಿಟ್ಸ್ ಬರೋ ದ ಪತ್ರಕರ್ತರ ಮೇಲೆ ಪ್ರತಿಭಟನೆ ನಡೆಸುತ್ತಿದ್ದವರೇ ಧಾಳಿ ನಡೆಸಿದರು ಆದರೆ ಅವರನ್ನು ರಕ್ಷಿಸಿದ್ದು ಇತರೆ ಪ್ರತಿಭಟನೆಕಾರರು! ಇದರಂತೆ ಫಾಕ್ಸ್ ಟಿ.ವಿ. ಯ ವರದಿಗಾರರ ಮೇಲೆ ಮುಖವನ್ನು ಮುಚ್ಚಿಕೊಂಡಿದ್ದ ದುಷ್ಕರ್ಮಿಗಳು ಧಾಳಿ ಮಾಡಿದ್ದಾರೆ. ಹಾಗಾದಲ್ಲಿ ಪತ್ರಕರ್ತರನ್ನೇ ಗುರಿಗಳನ್ನಾಗಿಸಿಕೊಂಡು ಧಾಳಿ ನಡೆಸಿದ ದುಷ್ಕರ್ಮಿಗಳು ಯಾರ ಪರವಾಗಿ ಕೆಲಸಮಾಡುತ್ತಿದ್ದರು? ಎನ್ನುವ ನಾನಾ ಗುಮಾನಿಗಳನ್ನು ಈ ಘಟನೆಗಳು ಬಡಿದೆಬ್ಬಿಸಿದೆ.
ಮಿನಿಯಾಪೋಲಿಸ್ ನಲ್ಲಿ ವರದಿಮಾಡುತ್ತಿದ್ದ ಎನ್. ಬಿ. ಸಿ. ಚಾನೆಲ್ ನ ಎಡ್ ಉ ಎಂಬಾತ ತನ್ನ ತಲೆಯ ಮೇಲಿಂದಸುರಿದದ್ದುಅಶ್ರುವಾಯುವೋ, ಪೆಪ್ಪೆರ್ಸ್ಪ್ರೇಯೋ ಅಥವಾ ರಕ್ತವೋಎಂದು ತಡಕಿಕೊಂಡ. ಆಶ್ಚರ್ಯ ಎಂದರೆ ‘ಪ್ರೆಸ್‘ಎಂದುಹಾಕಿಕೊಂಡಿದ್ದರೂ ಪೋಲೀಸರು ಮೂರನ್ನೂ ಆತನ ಮೇಲೆ ಪ್ರಯೋಗ ಮಾಡಿದ್ದರು. ತಲೆಯಿಂದ ರಕ್ತ ಒಸರುತಿತ್ತು. ವಾಸ್ತವವೆಂದರೆ ಪ್ರೆಸ್ನವನು ಎಂದು ನೋಡಿಯೇ ಬಲಪ್ರಹಾರ ನಡೆದಿತ್ತು. ಆತನ ತಲೆಗೆ ನಾಲ್ಕು ಹೊಲಿಗೆಗಳನ್ನು ಹಾಕಿಸಬೇಕಾಯಿತು
ಹೆನ್ನೆಸ್ ಫ್ಹಿಸ್ಕಯ್ ಎಂಬಾತ ಸಾರ್ವಜನಿಕ ಪ್ರತಿಭಟನೆಯಷ್ಟೇ ಅಲ್ಲದೆ ಇರಾಕ್ ಮತ್ತು ಆಫ್ಘಾನಿಸ್ತಾನದ ಯುದ್ಧಗಳನ್ನು ಕೂಡ ವರದಿ ಮಾಡಿದ್ದ ಅನುಭವಿ ಪತ್ರಕರ್ತ.ಎಲ್ಲಿಯೂ ಪೊಲೀಸರು ಮಾಧ್ಯಮದವರನ್ನು ಗುರಿಯನ್ನಾಗಿಸಿದ್ದನ್ನು ನೋಡಿರಲಿಲ್ಲ. ಅಂಥದ್ದರಲ್ಲಿ ಪ್ರಪಂಚಕ್ಕೆಲ್ಲ ಬುದ್ದಿ ಹೇಳುವ ದೊಡ್ಡಣ್ಣ ಅಮೆರಿಕಾ ತನ್ನ ನೆಲದ ಮೇಲೆ ನಡೆಸುತ್ತಿರುವ ಈಗಿನ ದೌರ್ಜನ್ಯದಿಂದ ಆಶ್ಚರ್ಯಚಕಿತನಾಗಿದ್ದಾನೆ.
ಶನಿವಾರದ ಪ್ರತಿಭಟನೆಯನ್ನು ಲೈವ್ ಸ್ಟ್ರೀಮ್ ಮಾಡುತ್ತಿದ್ದ ಬ್ರಾಂಡೆನ್ ಹಂಟರ್ ನ ಕೈಯಿಂದ ಫೋನನ್ನು ಕಿತ್ತುಕೊಳ್ಳಲಾಗಿದೆ. ಪ್ರೆಸ್ ನವನು ಎಂದರೂ ಕೇಳದೆ “ we don’t care “ಎಂದು ವರದಿಗಾರರ ಮುಖದ ಮೇಲೆ ಪೆಪ್ಪರ್ ಸ್ಪ್ರೇ ಹಾಕಿದ್ದು ವೀಡಿಯೋ ಆಗಿದೆ. ಹೇರಿದ್ದ ಕರ್ಫ್ಯೂ ಪ್ರೆಸ್ ನವರಿಗೆ ಅನ್ವಯಿಸದಿದ್ದರೂ ವರದಿಗಾರರನ್ನು ಲಾಕಪ್ಪಿನಲ್ಲಿರಿಸಲಾಗಿದೆ. ಮತ್ತೊಬ್ಬ ವರದಿಗಾರನ ಮೇಲೆ ಪಿಸ್ತೂಲು ಹಿಡಿದು ಅರೆ ಬರೆ ಟ್ರಿಗರ್ ಒತ್ತಿ ಹೆದರಿಸಲಾಗಿದೆ.
ಅದೆಷ್ಟೋ ಮಂದಿ ವರದಿಗಾರರ ಕ್ಯಾಮೆರಾಗಳು ಪುಡಿ ಪುಡಿಯಾಗಿವೆ. ಕಾರಿನಲ್ಲಿ ಕೂತಿದ್ದ ಚಿಕಾಗೋ ಟ್ರಿಬ್ಯೂನಿನ ವರದಿಗಾರನ ಮೇಲೆ ರಬ್ಬರ್ ಬುಲೆಟ್ ಗಳನ್ನು ಹಾರಿಸಲಾಗಿದೆ. ಅವನಿಗೂ ಹೊಲಿಗೆಗಳು ಬೇಕಾದವು.ಡೆಟ್ರಾಯಿಟ್ ಪೋಲೀಸರು ನಿಕೋಲ್ ಹೆಸ್ಟೆರ್ ಎನ್ನುವ ಮಹಿಳಾ ವರದಿಗಾರಳ ಮೇಲೆ ಧಾಳಿ ನಡೆಸಿದರು.ಇಂತಹ ಪ್ರಕರಣಗಳು ನೂರಾರು.
ಮೇ 25 ರಿಂದ ಜಾರ್ಜ್ ಫ್ಲಾಯ್ಡ್ ನ ವಿಚಾರವಾಗಿ ಪ್ರತಿಭಟನೆ ಶುರುವಾಯ್ತು. 5 ನೇ ತಾರೀಖು ಜೂನ್ ವೇಳೆಗೆ US Press Freedom Tracker ಸಂಸ್ಥೆ ಮಾಧ್ಯಮದವರ ಮೇಲೆ ಪೋಲೀಸರು ನಡೆಸಿದ 192 ಪ್ರಕರಣಗಳನ್ನು ದಾಖಲಿಸಿದರು.ಅಂದರೆ ಈ ವರ್ಷ ಮಾಧ್ಯಮದವರ ಮೇಲೆ ನಡೆದಿರುವ ದಾಳಿ ಹಿಂದಿನ ಎಲ್ಲ ದಾಖಲೆಗಳನ್ನು ಈಗಾಗಲೇ ಮುರಿದಿದೆ. ಮತ್ತೂ ಮುಂದುವರೆಯುವ ಎಲ್ಲ ಸಾಧ್ಯತೆಗಳಿವೆ. ಈ ಎಲ್ಲ ಕಾರಣಗಳಿಗಾಗಿ, ಅಮೆರಿಕಾದ ಸಂವಿಧಾನವನ್ನು ಉಲ್ಲಂಘಿಸಿ ವರದಿಗಾರರ ಮೇಲೆ ನಡೆದ ಧಾಳಿಗಾಗಿ American Civil Liberties Union (ACLU) ತನ್ನ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ದೂರನ್ನು ದಾಖಲಿಸಿ, ನ್ಯಾಯಾಲಯದ ಮೆಟ್ಟಿಲು ಹತ್ತಿದೆ.
ವರದಿಗಾರರು ನಡೆದದ್ದನ್ನು ನಡೆದಂತೆ ದಾಖಲಿಸುತ್ತಾರೆ. ತಮ್ಮ ಅಭಿಪ್ರಾಯಗಳನ್ನಲ್ಲ. ಹೀಗಿದ್ದೂ ಅವರ ಮೇಲೆ ಇಡೀ ಅಮೆರಿಕಾದಲ್ಲಿ ದಾಳಿ ನಡೆದದ್ದು ಯಾಕೆ ಎಂದು ಎಡ್ ಉ ಅವಿರತವಾಗಿ ಪ್ರಶ್ನೆಗಳನ್ನು ಹಾಕಿದ್ದಾನೆ. ಪ್ರತಿಭಟನೆಕಾರರ ಮೇಲೆ ಪೋಲೀಸರು ಏನನ್ನು ಮಾಡುವ ಹುನ್ನಾರ ಹೊಂದಿದ್ದರು? ಅದನ್ನು ಬಿತ್ತರಿಸದಂತೆ ತಮ್ಮನ್ನು ತಡೆದದ್ದೇ ಅಥವಾ ಮಾಧ್ಯಮದವರನ್ನು ದ್ವೇಷಿಸುವ ಟ್ರಂಪ್ ಅವರ ಮೇಲೆ ದಾಳಿ ಮಾಡಲು ಈ ಸಂದರ್ಭವನ್ನು ಬಳಸಿಕೊಂಡನೇ ಎನ್ನುವ ಪ್ರಶ್ನೆಗಳು ಎಲ್ಲರಲ್ಲೂ ಮೂಡುತ್ತಿವೆ.