ಕೋವಿಡ್-19 ವೈರಸ್ ಕಾಣಿಸಿಕೊಂಡ ನಂತರ ದೇಶದ ಆರ್ಥಿಕ ಸ್ಥಿತಿಯ ಕುರಿತು ಎಲ್ಲರಿಗೂ ತಿಳಿದೇ ಇದೆ. ಕೈಗಾರಿಕೆಗಳು ನಷ್ಟ ಅನುಭವಿಸುತ್ತಿವೆ. ನಿರುದ್ಯೋಗ ಪ್ರಮಾಣ ಹೆಚ್ಚಿದೆ. ಈ ಬಗ್ಗೆ ಆರ್ಥಿಕ ತಜ್ಞರು ಮಾತನಾಡಿದ್ದಾರೆ. ಮುಖ್ಯ ವಾಹಿನಿಯ ಮಾಧ್ಯಮಗಳಲ್ಲಿ ಚರ್ಚೆ ನಡೆದಿದೆ. ಆದರೆ ಕೃಷಿ ಕ್ಷೇತ್ರದ ಮೇಲಾದ ಪರಿಣಾಮಗಳ ಕುರಿತು ಯಾರೂ ಹೆಚ್ಚು ಗಮನ ನೀಡಿಲ್ಲ.
ವಾಸ್ತವವಾಗಿ ಈ ಸಂಕಷ್ಟದ ಪರಿಸ್ಥಿತಿಯಲ್ಲಿ ದೇಶದ ಆರ್ಥಿಕತೆಯನ್ನು ಎತ್ತಿ ಹಿಡಿಯುವ ಕೆಲಸ ಮಾಡುತ್ತಿರುವ ಏಕೈಕ ಕ್ಷೇತ್ರವೆಂದರೆ ಕೃಷಿ. ಈ ಬಾರಿ ಮುಂಗಾರು ಕೂಡ ಚೆನ್ನಾಗಿ ಆಗುವ ನಿರೀಕ್ಷೆ ಇರುವುದರಿಂದ ಎಲ್ಲರ ಚಿತ್ತ ಕೃಷಿ ಕ್ಷೇತ್ರದತ್ತ ನೆಟ್ಟಿದೆ. ಆದರೆ ದೇಶದ ಒಟ್ಟಾರೆ ಜಿಡಿಪಿಯಲ್ಲಿ ಕೃಷಿ ಕ್ಷೇತ್ರದ ಪಾಲು ಕೇವಲ ಶೇ. 15 ರಷ್ಟಾಗಿರುವುದರಿಂದ ಈ ಕ್ಷೇತ್ರವನ್ನು ಸರ್ಕಾರಗಳು ನಿರ್ಲಕ್ಷಿಸುತ್ತಲೇ ಬಂದಿವೆ.
ಇದರ ಪರಿಣಾಮವೇ ರೈತರ ಆತ್ಮಹತ್ಯೆ. ಇಡೀ ದೇಶದ ಜನತೆಗೆ ಅನ್ನ ನೀಡುವ ಅನ್ನದಾತನ ಸಂಕಷ್ಟ ಯಾರಿಗೂ ಬೇಡ. ರೈತರ ಆತ್ಮಹತ್ಯೆ ಸಂಖ್ಯೆಯನ್ನು ಕೃಷಿ ಕ್ಷೇತ್ರದ ಸಂಕಷ್ಟದ ಸೂಚ್ಯಂಕ ಎಂದೇ ಪರಿಗಣಿಸಲಾಗುತ್ತಿದೆ. ಇತ್ತೀಚಿನ ಒಂದೆರಡು ವರ್ಷಗಳಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಇಳಿಕೆಯ ಹಾದಿ ಹಿಡಿದಿದ್ದರಿಂದ ಕೃಷಿ ಕ್ಷೇತ್ರದ ಆರೋಗ್ಯ ಸುಧಾರಿಸುತ್ತಿದೆ ಎಂದೇ ಭಾವಿಸಲಾಗಿದೆ.
ಕೊರೊನಾ ಕೃಷಿ ಕ್ಷೇತ್ರದ ಮೇಲೆ ಯಾವೆಲ್ಲಾ ರೀತಿಯ ಪರಿಣಾಮ ಬೀರಿದೆ ಎಂಬುದರ ಕುರಿತು ಹೆಚ್ಚು ಅಧ್ಯಯನ ನಡೆದಿಲ್ಲ. ವಲಸೆ ಕಾರ್ಮಿಕರು ಹಳ್ಳಿಗಳಿಗೆ ಹಿಂದಿರುಗಿರುವುದರಿಂದ ಕೃಷಿ ಕಾರ್ಮಿಕರ ಸಮಸ್ಯೆ ಒಂದಿಷ್ಟು ಬಗೆಹರಿದಿರುವ ಸುದ್ದಿಗಳಿವೆ. ಆದರೆ ರೈತರ ಜೇಬು ಕೂಡ ಬೇರೆಲ್ಲರ ಹಾಗೆ ಖಾಲಿ ಖಾಲಿ ಯಾಗಿ, ಅವರು ಕೂಡ ಸಂಕಷ್ಟದಲ್ಲಿದ್ದಾರೆ.
ಕಂಬದದೇವರ ಹಟ್ಟಿಯ ಘಟನೆ
ಇದಕ್ಕೆ ಸ್ಪಷ್ಟ ಉದಾಹಣೆ ಎಂದರೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಕಂಬದದೇವರ ಹಟ್ಟಿ ಎಂಬಲ್ಲಿ 65 ವರ್ಷದ ರೈತ ದಾಸಪ್ಪ ಎಂಬಾತ ಆತ್ಮಹತ್ಯೆ ಮಾಡಿಕೊಂಡಿರುವುದು. ಜೂನ್ 9, ರ ಪ್ರಜಾವಾಣಿ ವರದಿ ಪ್ರಕಾರ ಹೆಣ್ಣು ಮಕ್ಕಳ ಮದುವೆಗೆಂದು ಸಾಲ ಮಾಡಿದ್ದ ದಾಸಪ್ಪ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದಿ ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ ಸದರಿ ರೈತ ಹೊಳಲ್ಕೆರೆ ಶಾಖೆಯ ಎಸ್ ಬಿ ಐ ನಿಂದ 2.70 ಲಕ್ಷ ರೂ, ಪ್ರಗತಿ ಗ್ರಾಮೀಣ ಬ್ಯಾಂಕಿನಿಂದ 1.10 ಲಕ್ಷ ರೂ. ಹಾಗೂ ಟ್ರಾಕ್ಟರ್ ಕೊಳ್ಳಲೆಂದು ಚಿತ್ರದುರ್ಗದ ಮಹೀಂದ್ರ ಫೈನ್ಸಾನ್ಸನಿಂದ 4.50 ಲಕ್ಷ ರೂ. ಸಾಲ ಮಾಡಿದ್ದ. ಸಾಲ ಮಾಡಲು ಕಾರಣ ಏನೇ ಇರಲಿ ಇವರ ಸಾವು ಕೃಷಿಕರ ಸಂಕಷ್ಟವನ್ನು ಎತ್ತಿ ತೋರಿಸುತ್ತಿಲ್ಲವೇ? ಈ ಬಗ್ಗೆ ಚರ್ಚೆಯೇ ನಡೆಯುತ್ತಿಲ್ಲ.
ಸಾವಿಗೆ ಬೆಲೆ ಇಲ್ಲ
ರಾಷ್ಟ್ರೀಯ ಅಪರಾಧ ದಾಖಲೆಗಳ ಪ್ರಕಾರ ನಮ್ಮ ದೇಶದಲ್ಲಿ 2014ರಲ್ಲಿ 12,360 ರೈತರು, 2015ರಲ್ಲಿ12,602, 2016ರಲ್ಲಿ11,379 ಮತ್ತು 2018ರಲ್ಲಿ 10,349 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇವರೇಕೆ ಹೀಗೆ ಆತ್ಮಹತ್ಯೆಗೆ ಶರಣಾಗಿದ್ದರು? ಎಂಬ ಪ್ರಶ್ನೆಗೆ ಉತ್ತರ ಹುಡುಕುವ ಕೆಲಸ ನಡೆದಿದ್ದರೆ ಈಗ ಹೊಳಲ್ಕೆರೆ ರೈತರನ ಆತ್ಮಹತ್ಯೆಯನ್ನು ತಪ್ಪಿಸಬಹುದಾಗಿತ್ತು.
ಹೌದು ರೈತರ ಆತ್ಮಹತ್ಯೆ ವಿಷಯ ಸರಳವಾಗಿಲ್ಲ. ಕುರುಡರು ಆನೆಯನ್ನು ಮುಟ್ಟಿ ಅದು ಹೇಗಿದೆ ಎಂದು ವರ್ಣಿಸಿದಂತೆ ರೈತರ ಆತ್ಮಹತ್ಯೆಯ ಬಗ್ಗೆಯೂ ಕೆಲ ತಜ್ಞರು ‘ಇದು ಈ ಕಾರಣಕ್ಕೇ ಆಗುತ್ತಿದೆ’ ಎಂದು ವಿಶ್ಲೇಷಿಸಿ, ಸರ್ಕಾರದ ದಿಕ್ಕು ತಪ್ಪಿಸುವ ಕೆಲಸ ಮಾಡಿಕೊಂಡು ಬಂದಿದ್ದಾರೆ. ಹೀಗಾಗಿಯೇ ಆತ್ಮಹತ್ಯೆಯ ಸರಣಿ ಆರಂಭವಾಗಿ ಎರಡು ದಶಕಗಳಾದರೂ ಪರಿಹಾರ ಕಾಣುತ್ತಿಲ್ಲ. ಈ ವರ್ಷ ಇಷ್ಟು, ಆ ವರ್ಷ ಅಷ್ಟು ರೈತರು ಆತ್ಮಹತ್ಯೆ ಮಾಡಿಕೊಂಡರೆಂಬ ಲೆಕ್ಕಾಚಾರದ ಮಾತಿಗೆ ಕೊನೆ ಇಲ್ಲವಾಗಿದೆ. ಈಗ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದು ಕಾರ್ಪೊರೇಟ್ ಕಂಪನಿಗಳಿಗೂ ಕೃಷಿ ಕ್ಷೇತ್ರದಲ್ಲಿ ಭಾಗಿಯಾಗಲು ಅವಕಾಶ ಮಾಡಿಕೊಡುವ ಮೂಲಕ ಆತ್ಮಹತ್ಯೆಗಳಿಗಿದ್ದ ಕಾರಣವನ್ನು ಸರ್ಕಾರ ಹೆಚ್ಚಿಸಿದೆ ಎನ್ನುತ್ತಾರೆ ಕೃಷಿ ಕ್ಷೇತ್ರದ ತಜ್ಞರು.
ರಾಜ್ಯದ ಸಮಸ್ಯೆ ಮಾತ್ರವಲ್ಲ
ರೈತರ ಆತ್ಮಹತ್ಯೆ ರಾಜ್ಯದಲ್ಲಿ ಮಾತ್ರ ನಡೆಯುತ್ತಿಲ್ಲ. ದೇಶಾದ್ಯಂತ ಸರಣಿ ಆತ್ಮಹತ್ಯೆಗಳು ನಡೆದೇ ಇದೆ. ಮಹಾರಾಷ್ಟ್ರ ರೈತರ ಆತ್ಮಹತ್ಯೆ ಪ್ರಕರಣಗಳು ರಾಷ್ಟ್ರೀಯಮಟ್ಟದಲ್ಲಿ ಚರ್ಚೆಗೆ ಕಾರಣವಾಗುತ್ತಲೇ ಇರುತ್ತವೆ. ಹಲವು ರಾಜ್ಯಗಳ ಸರ್ಕಾರಗಳು ಪರಿಹಾರ ಧನ, ಸಹಾಯಧನವನ್ನು ಘೋಷಿಸಿಯೂ ಆಗಿದೆ. ಆದರೂ ರೈತರ ಆತ್ಮಹತ್ಯೆ ಪ್ರಕರಣಗಳು ನಿಂತಿಲ್ಲ.
ಕೈಕೊಟ್ಟ ಬೆಳೆಗಳು, ಪ್ರತಿಕೂಲ ಹವಾಮಾನಗಳು ರೈತರನ್ನು ಪ್ರತಿಕೂಲ ಪರಿಸ್ಥಿತಿಗೆ ತಳ್ಳುತ್ತಿದೆ. ಇದರ ಜೊತೆಗೆ, ನೀರಾವರಿ ಬೀಜ, ಗೊಬ್ಬರ, ಕೀಟನಾಶಕ ಮುಂತಾದ ಕೃಷಿಗೆ ಬೇಕಾದ ಹೂಡುವಳಿಗಳು ಸಮಯಕ್ಕೆ ಸರಿಯಾಗಿ ಸರಬರಾಜಾಗದೆ ಇರುವುದು, ಬೇಕಾದ ಪ್ರಮಾಣ, ಗುಣಮಟ್ಟದಲ್ಲಿ ಸಿಗದೆ ಇರುವುದು ರೈತನನ್ನು ದುಃಸ್ಥಿತಿಗೆ ತಳ್ಳಿರುವುದರಲ್ಲಿ ಅನುಮಾನವಿಲ್ಲ. ಆದರೆ ರೈತರಿಗೆ ಸಂಬಂಧಿಸಿದ ಸರಳ ಸಮಸ್ಯೆಗಳನ್ನು ಬಿಡಿಸಿ, ಅರ್ಥಪೂರ್ಣ ಪರಿಹಾರ ರೂಪಿಸುವಲ್ಲಿ ಕೂಡ ನಮ್ಮ ಸರಕಾರಗಳು ಒಂದು ಹೆಜ್ಜೆ ಮುಂದಿಟ್ಟಿಲ್ಲ. ಕುವೆಂಪು ತಮ್ಮ ‘ರೈತಗೀತೆ’ಯಲ್ಲಿ ಹೇಳಿರುವಂತೆ ರೈತರು ‘ಯೋಗಿಯಾಗಿ, ತ್ಯಾಗಿಯಾಗಿ’ ಬದುಕಬೇಕೆಂದು ಬಯಸುತ್ತಿವೆಯೇ ಹೊರತು, ಅವರಿಗೂ ಕನಸುಗಳಿರುತ್ತವೆ ಎಂಬುದನ್ನೇ ಮರೆತು, ಅವರನ್ನು ಶೋಷಿಸುತ್ತಾ ಬಂದಿವೆ.
ಉತ್ತರವಿಲ್ಲದ ಪ್ರಶ್ನೆಗಳು
ರೈತರೇಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ? ಈ ಹಿಂದೆ ಹೇಳಿದ ಹಾಗೆ ಈ ಪ್ರಶ್ನೆಗೆ ಈವರೆಗೆ ನಡೆದ ಯಾವ ಸಂಶೋಧನೆಯೂ ‘ಇದಮಿತ್ಥಂ’ ಎಂಬಂಥ ಉತ್ತರವೊಂದನ್ನು ನೀಡಿಲ್ಲ. ನಮ್ಮ ಸಂಶೋಧನಾ ವಿಧಾನಗಳಿಗೆ ಇಂಥದ್ದೊಂದು ಉತ್ತರವನ್ನು ನೀಡುವ ಶಕ್ತಿಯೂ ಇಲ್ಲ. ಬಿಡಿ, ಅದು ಬೇರೆ ವಿಷಯ. ರೈತರ ಆತ್ಮಹತ್ಯೆಗಳಿಗೆ ಕಾರಣ ಹುಡುಕುವ ಕ್ರಿಯೆ ವಿಶ್ಲೇಷಣಾತ್ಮಕವಾಗಿ ಸಾಗುತ್ತದೆ. ಆತ್ಮಹತ್ಯೆ ಮಾಡಿಕೊಂಡವರು ಕುಡಿಯುತ್ತಿದ್ದರೆ?, ಮನೆಯ ಖರ್ಚಿಗೂ ಸಾಲ ಮಾಡಿಕೊಂಡಿದ್ದರೇ? ಬಗೆಯ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡು ರೈತರ ಆತ್ಮಹತ್ಯೆಗೆ `ಇತರ ಕಾರಣ’ಗಳೂ ಇವೆ ಎಂಬ ತೀರ್ಮಾನಕ್ಕೆ ಬರಲಾಗುತ್ತದೆ. `ಇತರ ಕಾರಣ’ಗಳೂ ಇರುವುದರಿಂದ ರೈತರ ಆತ್ಮಹತ್ಯೆಯ ಕಾರಣ ಅಸ್ಪಷ್ಟವಾಗಿಯೇ ಉಳಿಯುತ್ತದೆ.
ವಿವಿಧ ಸಂಶೋಧನೆಗಳು ಪಟ್ಟಿ ಮಾಡುವ ಇತರ ಕಾರಣಗಳು ಈಗ ಹುಟ್ಟಿಕೊಂಡವೇನೂ ಅಲ್ಲ. ಈ ಮೊದಲೂ ರೈತರು ಸಾಲ ಮಾಡುತ್ತಿದ್ದರು. ಬೆಳೆ ವಿಫಲವಾಗುತ್ತಿತ್ತು. ಆಗಲೂ ಸಾಲ ಮಾಡಿಯೇ ಮಕ್ಕಳ ಮದುವೆ ಮಾಡುತ್ತಿದ್ದರು ಅಷ್ಟೇಕೆ ಸಾಲ ತಂದೇ ಹಬ್ಬ ಮಾಡುತ್ತಿದ್ದರು. ಆದರೆ ಈ ಸಾಲಗಳಿಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ. ಈಗ ಏಕೆ ಅವೇ ಸಮಸ್ಯೆಗಳಿಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ? ರೈತರ ಆತ್ಮಹತ್ಯೆಗಳ ಸಂಶೋಧನೆ ನಡೆಸುವ ಯಾರಿಗೂ ಈ ಪ್ರಶ್ನೆ ಕಾಡುವುದಿಲ್ಲವೇಕೆ?
ಎಲ್ಲಾ ಬಗೆಯ ಆತ್ಮಹತ್ಯೆಗಳ ಹಿಂದಿನ ಮುಖ್ಯ ಕಾರಣ ಹತಾಶೆ. ರೈತ ಯಾಕೆ ಹತಾಶನಾಗಿದ್ದಾನೆ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳದೇ ಯಾವ ಪ್ಯಾಕೇಜ್ ಘೋಷಿಸಿದರೂ, ಎಷ್ಟು ಪರಿಹಾರ ನೀಡಿದರೂ ಆತ್ಮಹತ್ಯೆಗಳು ಕಡಿಮೆಯಾಗುವ ಸಾಧ್ಯತೆಗಳಿಲ್ಲ. ರೈತನ ಹತಾಶೆಯ ಕಾರಣಗಳನ್ನು ಹುಡುಕುವುದಕ್ಕೆ `ಹೌದು’ ಅಥವಾ `ಇಲ್ಲ’ಗಳಲ್ಲಿ ಉತ್ತರ ಬಯಸುವ ಸಮೀಕ್ಷೆಗಳಿಗೆ ಸಾಧ್ಯವಿಲ್ಲ. ಇನ್ನು ಎಳಸು, ಎಳಸಾಗಿ ವರ್ತಿಸುವ ನಮ್ಮ ಮುಖ್ಯವಾಹಿನಿಯ ಮಾಧ್ಯಮಗಳಿಂದ ಇದಂತೂ ಸಾಧ್ಯವೇ ಇಲ್ಲ ಬಿಡಿ.
ಕೈಗಾರಿಕೆಗಳು ನಷ್ಟಕ್ಕೀಡಾದರೆ ಸರ್ಕಾರ ಅವುಗಳ ಸಾಲವನ್ನು ಮನ್ನಾ ಮಾಡುತ್ತದೆ. ಅವುಗಳ ಪುನರುಜ್ಜೀವನಕ್ಕೆ ಮತ್ತೆ ಸಾಲ ನೀಡುತ್ತದೆ! ಆದರೆ ರೈತನೊಬ್ಬ ಸಾಲ ಮಾಡಿಕೊಂಡು ಕಷ್ಟಕ್ಕೆ ಬಿದ್ದರೆ ಅವನ ನೆರವಿಗೆ ಯಾರು ಬರುತ್ತಾರೆ? ಪಡೆದ ಸಾಲವನ್ನು ಮರು ಪಾವತಿ ಮಾಡದಿದ್ದರೆ ಅವನದೇ ಷೇರು ಬಂಡವಾಳದಿಂದ ನಡೆಯುತ್ತಿರುವ ಸಹಕಾರ ಸಂಘ ಕೂಡಾ ಅವನ ಜಮೀನು ಹರಾಜು ಹಾಕುವ ಮಾತನಾಡುತ್ತದೆ. ಮರು ಪಾವತಿಯಿಲ್ಲದೆ ಸಾಲವಿಲ್ಲ ಎಂಬ ಸಹಕಾರ ಸಂಘ ಮತ್ತು ಬ್ಯಾಂಕುಗಳ ನೀತಿಯಿಂದಾಗಿ ರೈತ ಅನಿವಾರ್ಯವಾಗಿ ಸುಲಭದಲ್ಲಿ ಸಾಲಕೊಡುವ ಬಡ್ಡಿ ವ್ಯಾಪಾರಿಗಳ ಬಳಿಗೆ ಹೋಗುತ್ತಾನೆ. ಈ ಸಾಲದ ಮೂಲಕ ಮಾಡಿದ ಹೂಡಿಕೆಯೂ ನಷ್ಟವಾದರೆ? ಈ ಹೊತ್ತಿಗಾಗಲೇ ಚಕ್ರವ್ಯೂಹ ಪ್ರವೇಶ ಮಾಡಿರುವ ರೈತ ಹೊರ ಬರುವ ದಾರಿ ಹುಡುಕುತ್ತಲೇ ಒಂದು ದಿನ ಸತ್ತು ಹೋಗುತ್ತಾನೆ. ಆತ್ಮಹತ್ಯೆ ಸುಲಭ ಬಿಡುಗಡೆಯ ಒಂದು ಮಾರ್ಗ ಎಂದು ಅವನಿಗೆ ಅನಿಸುವುದರ ಹಿಂದೆ ಸರಕಾರಗಳ ಬೇಜವಬ್ದಾರಿ ನಿಮಗೆ ಎದ್ದು ಕಾಣುವುದಿಲ್ಲವೇ?
ಇನ್ನೊಂದು ಉದಾಹರಣೆ ನೋಡೋಣ. ಭಾರತದಲ್ಲಿರುವ ಖಾಸಗಿ, ಸರಕಾರೀ ಸ್ವಾಮ್ಯದ ಟೆಲಿಫೋನ್ ಕಂಪೆನಿಗಳು ತಮ್ಮ ಸೇವಾದರವನ್ನು ಹೆಚ್ಚಿಸಬೇಕಾದರೆ ಕನಿಷ್ಠ 24 ಗಂಟೆಗಳ ಮೊದಲಾದರೂ ಸೇವೆಯನ್ನು ಪಡೆಯುವರಿಗೆ ಇದರ ವಿವರವನ್ನು ತಿಳಿಸಬೇಕು. ದರ ಹೆಚ್ಚಿಸುವ ಮೊದಲು ಅದನ್ನು ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರದ (ಟ್ರಾಯ್) ಮುಂದಿಟ್ಟು ಅದರ ಒಪ್ಪಿಗೆ ಪಡೆಯಬೇಕು.
ರೈತನಿಗೆ ಬೀಜ, ಕೀಟನಾಶಕ ಒದಗಿಸುವ ಹಲವು ದೇಶೀ ಮತ್ತು ವಿದೇಶೀ ಕಂಪೆನಿಗಳು ಭಾರತದಲ್ಲಿವೆ. ಇವುಗಳು ಋತುಮಾನ, ಬೇಡಿಕೆಗಳನ್ನು ಗಮನದಲ್ಲಿಟ್ಟುಕೊಂಡು ತಮ್ಮ ಮೂಗಿನ ನೇರಕ್ಕೆ ಬೀಜದ ಬೆಲೆಯನ್ನು ನಿರ್ಧರಿಸುತ್ತವೆ. ಆ ಬೆಲೆ ಕೊಟ್ಟು ರೈತ ಬೀಜ, ಕೀಟನಾಶಕಗಳನ್ನು ಖರೀದಿಸಬೇಕು. ಈ ಸಂಸ್ಥೆಗಳು ತಮ್ಮ ಉತ್ಪನ್ನಗಳಿಗೆ ಬೆಲೆ ನಿರ್ಧರಿಸುವುದು ಯಾವ ಆಧಾರದ ಮೇಲೆ ಎಂದು ಯಾರೂ ಕೇಳುವುದಿಲ್ಲ. ಈ ಬೆಲೆಗಳನ್ನು ನಿಯಂತ್ರಿಸುವುದಕ್ಕೂ ಟ್ರಾಯ್ ನಂಥ ಒಂದು ಸಂಸ್ಥೆ ಬೇಡವೇ?
ರೈತರ ಹೆಸರಿನಲ್ಲಿಯೇ ಗೆದ್ದು ಬರುವ ನಮ್ಮ ರಾಜಕಾರಣಿಗಳಿಗೆ ಇದೆಲ್ಲಾ ಅರ್ಥವಾಗುವಂತೆಯೇ ಕಾಣುತ್ತಿಲ್ಲ. ರೈತನೂ ಅಷ್ಟೇ ಉದ್ದಿಮೆಗಳಂತೆ ತನ್ನ ಸಮಸ್ಯೆಯನ್ನು ಪರಿಹರಿಸಲು ಸರಕಾರ ಬರಲೆಂದು ಕಾಯುವುದಿಲ್ಲ. ಅವನದ್ದೇ ಪರಿಹಾರದ ಹಾದಿ ಹುಡುಕಿಕೊಂಡಿದ್ದಾನೆ. ಅದನ್ನು ಎಲ್ಲರೂ ‘ಆತ್ಮಹತ್ಯೆ’ ಎಂದು ಕರೆಯುತ್ತಿದ್ದಾರೆ. ಆದರೆ ಈಗಲಾದರೂ ನಿಮಗನಿಸುತ್ತಿಲ್ಲವೇ, ಇದು ಆತ್ಮಹತ್ಯೆಯಲ್ಲ, ಈ ವ್ಯವಸ್ಥೆ ಮಾಡುತ್ತಿರುವ ಕೊಲೆ ಎಂದು?
ರೈತರ ಸ್ವಾತಂತ್ರ್ಯ ಕಿತ್ತುಕೊಂಡಿದ್ದು ಯಾರು?
‘ಇಂದು ನಾವು ಸ್ವಾತಂತ್ರರು ಎಂಬ ನಂಬಿಕೆ ರೈತರಿಗಿಲ್ಲ. ನಿರಾಶರಾಗಿರುವ ಅವರ ಸುಸ್ಥಿರ ಬದುಕಿನತ್ತ ಸರಕಾರ ಗಮನಹರಿಸದಿರುವುದು ರೈತರ ಆತ್ಮಹತ್ಯೆ ಪ್ರಕರಣ ಹೆಚ್ಚಲು ಕಾರಣವಾಗಿದೆ’ ಎನ್ನುತ್ತಾರೆ ಹಿರಿಯ ಪತ್ರಕರ್ತ ನಾಗೇಶ್ ಹೆಗಡೆ. ಅವರ ಪ್ರಕಾರ, ‘ಹಿಂದೆ ಸ್ವತಂತ್ರವಾಗಿ ಬೆಳೆ ಬೆಳೆಯುತ್ತಿದ್ದ ರೈತ ಇಂದು ಎಲ್ಲದಕ್ಕೂ ಪರರನ್ನು ಆಶ್ರಯಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಬಿತ್ತನೆ ಬೀಜ, ರಸಗೊಬ್ಬರಕ್ಕಾಗಿ ಕಾರ್ಖಾನೆ ಗಳನ್ನು, ನೀರಿಗಾಗಿ ಮಳೆಯ ನ್ನು ಆಶ್ರಯಿಸಬೇಕಾಗಿದೆ. ಕೊನೆಗೆ ತಾನು ಬೆಳೆದ ಬೆಳೆಯನ್ನು ಮಾರಾಟ ಮಾಡಲು ಸಹ ಮತ್ತೊಬ್ಬರನ್ನು ಅವಲಂಬಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಹಾಗಾಗಿ ಇದು ಅಭಿವೃದ್ಧಿ, ಸ್ವಾತಂತ್ರ್ಯ ಎಂಬಂತೆ ಮೇಲ್ನೋಟಕ್ಕೆ ಕಂಡರೂ ಎಲ್ಲ ಕಾರ್ಯಗಳಿಗೂ ಒಬ್ಬರನ್ನೊಬ್ಬರು ಆಶ್ರಯಿಸಬೇಕಾದ ಪರಿಸ್ಥಿತಿಯನ್ನು ನಮ್ಮ ವ್ಯವಸ್ಥೆ ತಂದೊಡ್ಡಿದೆ. ಪರವಾಲಂಬನೆ ರೈತರ ಆತ್ಮವಿಶ್ವಾಸವನ್ನು ಕಿತ್ತುಕೊಳ್ಳುತ್ತಿದ್ದು, ಅವರು ನೇಣಿಗೆ ಕೊರಳೊಡ್ಡುವಂತಾಗಿದೆ’.
ನಾಗೇಶ್ ಹೆಗಡೆಯವರ ಈ ವಿಶ್ಲೇಷಣೆಯನ್ನೇ ಪಿ. ಸಾಯಿನಾಥ್ ಇನ್ನಷ್ಟು ವಿವರಿಸಿ, ಹೀಗೆ ಹೇಳುತ್ತಾರೆ. ‘ಸುಮಾರು 25 ವರ್ಷಗಳ ಹಿಂದೆ ಬಿತ್ತನೆ ಬೀಜದ ಉತ್ಪಾದನೆ ಸಂಪೂರ್ಣವಾಗಿ ರೈತರ ಕೈಯಲ್ಲಿತ್ತು. ಅವು ಸ್ವಾಭಾವಿಕ ಬೀಜಗಳಾಗಿದ್ದ ರಿಂದ ಸಹಜವಾಗಿಯೇ ಶಕ್ತಿಯುತವಾಗಿದ್ದವು. ಬೀಜಗಳ ಮರು ಉತ್ಪಾದನೆ ಹಾಗೂ ರೈತರ ನಡುವೆ ಬೀಜಗಳ ವಿನಿಮಯ ಕೂಡ ನಡೆಯುತ್ತಿತ್ತು. ಆದರೆ ಇಂದು ವಾಣಿಜ್ಯ ಬೆಳೆಗಳ ಬಿತ್ತನೆ ಮಾತ್ರವಲ್ಲದೆ ಆಹಾರ ಬೆಳೆಗಳ ಬಿತ್ತನೆ ಬೀಜಗಳೂ ಸಹ ಕಾರ್ಪೊರೇಟ್ ಕಂಪೆನಿಗಳ ಹಿಡಿತದಲ್ಲಿವೆ. ಬೀಜ ಮಾರುಕಟ್ಟೆಯ ಮೇಲೆ ತಮ್ಮ ಹಿಡಿತವನ್ನು ಸ್ಥಾಪಿಸಲಿಕ್ಕಾಗಿ ಈ ಲೂಟಿಕೋರ ಕಂಪೆನಿಗಳು ಬೀಜಗಳ ಮರು ಉತ್ಪಾದನೆಯ ಸಾಮರ್ಥ್ಯವನ್ನೇ ನಾಶಪಡಿಸಿ ದ್ದಾರೆ. ಹಾಗಾಗಿ ಪ್ರತಿ ಬಾರಿ ಬಿತ್ತನೆ ಮಾಡಬೇಕಾದಾಗಲೂ ರೈತರು ಅನಿವಾರ್ಯವಾಗಿ ಈ ಬಹುರಾಷ್ಟ್ರೀಯ ಕಂಪೆನಿಗಳ ಬೀಜಗಳನ್ನೇ ಅವಲಂಬಿಸಬೇಕಾದ ದುಃಸ್ಥಿತಿ ಉಂಟಾಗಿದೆ.
ಈ ಪರಿಸ್ಥಿತಿ ಹೇಗಾಗಿದೆಯೆಂದರೆ ಕೇವಲ 3 ಅಥವಾ 4 ಕಂಪೆನಿಗಳು ಇಡೀ ಜಗತ್ತಿನ ಬೀಜ ಮಾರುಕಟ್ಟೆಯನ್ನು ನಿಯಂತ್ರಿಸುತ್ತಿವೆ. ಉದಾ: ಮಾನ್ಸೆಂಟೋ ಕಂಪೆನಿಯೊಂದೇ ಜಗತ್ತಿನ ಒಟ್ಟು ಬೀಜ ಮಾರುಕಟ್ಟೆಯ ಶೇ. 30ರಷ್ಟು ಭಾಗವನ್ನು ನಿಯಂತ್ರಿಸುತ್ತಿದೆ. ಹಾಗೆಯೆ ಸ್ವಾಭಾವಿಕವಾದ ಕೀಟನಾಶಕ ವಿಧಾನವನ್ನು ನಾಶಗೊಳಿಸಿ ಕೆಮಿಕಲ್ ಕಂಪೆನಿಗಳ ಕೀಟನಾಶಕಗಳನ್ನೇ ಅವಲಂಬಿಸಬೇಕಾದ ಅನಿವಾರ್ಯತೆ ಸೃಷ್ಟಿಸಲಾಗಿದೆ. ಕೊಟ್ಟಿಗೆ ಗೊಬ್ಬರ ಬಳಕೆಯಂತಹ ಸರಳ ಹಾಗೂ ಶಕ್ತಿಯುತ ವಿಧಾನಗಳ ಸ್ಥಾನವನ್ನು ಕೆಮಿಕಲ್ ಫರ್ಟಿಲೈಸರ್ಗಳು ಆಕ್ರಮಿಸಿವೆ. ಈ ಫರ್ಟಿಲೈಸರ್ಗಳ ತಯಾರಕರು ಯಾರು? ಭಾರೀ ಬಂಡವಾಳ ಹೂಡಿರುವ ಕಂಪೆನಿಗಳು. ನೀರು, ವಿದ್ಯುತ್ ಎಲ್ಲವೂ ರೈತರಿಗೆ ದುಬಾರಿಯಾಗಿದೆ. ಹಾಗೆಯೇ ಕೃಷಿ ಮಾರುಕಟ್ಟೆಯ ಮೇಲೆ ರೈತರಿಗೆ ಯಾವುದೇ ಹಿಡಿತವಿಲ್ಲ. ಬದಲಿಗೆ ಕಾರ್ಪೊರೇಟ್ ಕಂಪೆನಿಗಳು ಕ್ರಮೇಣ ತಮ್ಮ ಹಿಡಿತ ಸಾಧಿಸುತ್ತಿವೆ. ಈ ಎಲ್ಲಾ ಕಾರ್ಪೊರೇಟ್ ಕಂಪೆನಿಗಳ ಲಾಭ ವರ್ಷದಿಂದ ವರ್ಷಕ್ಕೆ ಏರುತ್ತಲೇ ಇದೆ. ಅವರ ಕಂಪೆನಿಗಳ ಶೇರುಗಳ ವೌಲ್ಯ ದ್ವಿಗುಣಗೊಳ್ಳುತ್ತಾ ಸಾಗುತ್ತಿದೆ. ಆದರೆ ಅದೇ ಸಂದರ್ಭದಲ್ಲಿ ಇಡೀ ರೈತಾಪಿಯ ಬದುಕು ಘೋರ ಸಂಕಷ್ಟಕ್ಕೆ ಸಿಲುಕಿದೆ.
ರೈತರ ಆತ್ಮಹತ್ಯೆಗೆ ಟಾಪ್-5 ಕಾರಣಗಳು
- ಬೆಲೆ ಮೇಲೆ ನಿಯಂತ್ರಣವೇ ಇಲ್ಲದಿರುವುದು; ಯಾವ ಬೆಳೆಗೆ ಯಾವಾಗ ಎಷ್ಟು ಬೆಲೆ ಇರುತ್ತದೆ ಎಂಬುದು ರೈತರಿಗೇಕೆ, ದೇಶದ ಆರ್ಥಿಕ ತಜ್ಞರಿಗೂ ಅರ್ಥವಾಗುತ್ತಿಲ್ಲ. ಸಾಲ ಮಾಡಿ ಬೆಳೆದ ಬೆಳೆಗೆ ಬೆಲೆ ಸಿಗದಿದ್ದಾಗ ಆತ್ಯಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇತ್ತ ಸರಕಾರಗಳು ಸರಿಯಾಗಿ ಬೆಂಬಲ ಬೆಲೆಯನ್ನೂ ನೀಡುತ್ತಿಲ್ಲ. ಜಾಗತೀಕರಣದಿಂದ ಮಾರುಕಟ್ಟೆ ವಿಕೃತಿಗಳು ಹೆಚ್ಚುತ್ತಿದ್ದು, ಅಂದರೆ, ಅನಾವಶ್ಯಕ ಆಮದು, ರಫ್ತಿಗೆ ನಿರ್ಬಂಧ ಇತ್ಯಾದಿ, ಇದು ಮಾರುಕಟ್ಟೆಯ ಮೇಲೆ ನೇರವಾಗಿ ಪರಿಣಾಮ ಬೀರುತ್ತಿದ್ದು, ಪರೋಕ್ಷವಾಗಿ ರೈತರನ್ನು ಬಲಿ ಪಡೆಯುತ್ತಿದೆ. ಈಗ ಖಾಸಗಿ ವ್ಯಕ್ತಿಗಳಿಗೆ, ಕಾರ್ಪೊರೇಟ್ ಕಂಪನಿಗಳಿಗೆ ನಿಯಂತ್ರಣವಿಲ್ಲದೆ ಮಾರುಕಟ್ಟೆಗೆ ಲಗ್ಗೆ ಹಾಕಲು ಅವಕಾಶ ಮಾಡಿಕೊಟ್ಟಿರುವುದು ಹೊಸ ಹೊಸ ಶೋಷಣೆಗೆ ಅವಕಾಶ ಮಾಡಿಕೊಡುವ ಸಾಧ್ಯತೆಗಳಿವೆ.
- ಸಾಲದ ಕುಣಿಕೆ; ತಾವು ರೈತರ ಪರ ಎಂದು ಕೊಚ್ಚಿಕೊಳ್ಳುವ ಸರಕಾರಗಳು ಅಗ್ಗದ ಬಡ್ಡಿ ದರದಲ್ಲಿ ರೈತರಿಗೆ ಸಾಲ ನೀಡುವ ಯೋಜನೆಗಳನ್ನು ಪ್ರಕಟಿಸಿರುವುದೇನೋ ನಿಜ. ಆದರೆ ಈ ಸಾಲ ಪಡೆಯಲು ಬೇಕಾದ ದಾಖಲೆಗಳನ್ನು ನಮ್ಮ ರೈತರು ಹೊಂದಿಲ್ಲ. ಇದರ ಬಗ್ಗೆ ಜಾಗೃತಿ ಇರದ ಅವರು, ರಗಳೆಯೇ ಬೇಡವೆಂದು ರೈತರು, ಅದರಲ್ಲೂ ಸಣ್ಣ ಮತ್ತು ಅತಿಸಣ್ಣ ರೈತರು ಸ್ಥಳೀಯವಾಗಿ ಬಡ್ಡಿಗೆ ಸಾಲ ನೀಡುವವರ ಹತ್ತಿರ ಸಾಲ ಪಡೆಯುತ್ತಾರೆ. ಸಾಲದ ಸುಳಿಯಲ್ಲಿ ಸಿಲುಕುತ್ತಾರೆ. ಇದನ್ನು ನ್ಯಾಷನಲ್ ಸ್ಯಾಂಪಲ್ ಸರ್ವೇ ಎತ್ತಿ ತೋರಿಸಿದೆ. ಸರಕಾರಗಳ ಬಳಿ ಸರಳವಾಗಿ ಮತ್ತು ನೇರವಾಗಿ ಎಲ್ಲ ರೈತರಿಗೂ ಸಾಂಸ್ಥಿಕ ಸಾಲವನ್ನು ದೊರಕಿಸುವ ಯೋಜನೆಗಳೇ ಇಲ್ಲ.
- ಏರುತ್ತಿದೆ ಹೂಡಿಕೆ ವೆಚ್ಚ: ಕೃಷಿಯಲ್ಲಿನ ಆದಾಯದ ಬಗ್ಗೆ ಖಚಿತತೆ ಇಲ್ಲದಿದ್ದರೂ, ಬಂಡವಾಳ ಹೂಡಿಕೆ ಮಾತ್ರ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ವ್ಯಾಪಾರಿಗಳ ಹಿಡಿತದಲ್ಲಿ ಸಿಲುಕಿರುವ ರಾಸಾಯನಿಕ ಗೊಬ್ಬರ, ಕೀಟ ನಾಶಕ, ಬಿತ್ತನೆ ಬೀಜ, ಇತ್ಯಾದಿಗಳು ರೈತರ ಜೇಬನ್ನು ಖಾಲಿ ಮಾಡುತ್ತಿವೆ. ಇನ್ನೊಂದೆಡೆ ಕೃಷಿ ಕಾರ್ಮಿಕರ ಕೊರತೆ, ವಿದ್ಯುತ್ ಮತ್ತಿತರ ಮೂಲ ಸೌಕರ್ಯಗಳ ಖಚರ್ು ಹೆಚ್ಚುತ್ತಿರುವುದು ರೈತರನ್ನು ಹಣ್ಣುಗಾಯಿ-ನೀರುಗಾಯಿ ಮಾಡಿವೆ.
- ಸ್ಪಷ್ಟ, ನಿರ್ದಿಷ್ಟ ಕೃಷಿ ನೀತಿ ಇಲ್ಲದಿರುವುದು: ಕೈಗಾರಿಕೆಗಳಿಗೆ ಸಂಬಂಧಿಸಿದಂತೆ ಪ್ರತಿ ವರ್ಷವೂ ಪರಿಷ್ಕೃತ ನೀತಿ ಪ್ರಕಟಿಸಿ, ವಿದೇಶಿ ಬಂಡವಾಳ ಹೂಡಿಕೆಯನ್ನು ಹೆಚ್ಚಿಸಲು ಹಪಹಪಿಸುವ ನಮ್ಮ ಸರಕಾರಗಳು ಕೃಷಿಗೆ ಸಂಬಂಧಿಸಿದಂತೆ ಸ್ಪಷ್ಟ ನೀತಿ ರೂಪಿಸುತ್ತಿಲ್ಲ. ಯಾವ ಪ್ರದೇಶದಲ್ಲಿ, ಯಾವ ಬೆಳೆ ಬೆಳೆಯಬೇಕು, ನೀರಾವರಿ ಸೌಲಭ್ಯವನ್ನು ಹೇಗೆ ಸದುಪಯೋಗ ಪಡಿಸಿಕೊಳ್ಳಬೇಕೆಂಬ ಬಗ್ಗೆ ನೀತಿಯೂ ಇಲ್ಲ, ನಿಯಮವೂ ಇಲ್ಲ. ಸಕ್ಕರೆಯ ಮಾರುಕಟ್ಟೆ ಕುಸಿದು ಬಿದ್ದಿದ್ದರೂ, ಕಬ್ಬು ಬೆಳೆಗಾರರ ಕೂಳೆ ನೆಡುತ್ತಲೇ ಇರುತ್ತಾನೆ, ಆತನಿಗೆ ಸರಿಯಾದ ಮಾಹಿತಿ ನೀಡುವ ಜವಾಬ್ದಾರಿ ತನ್ನದೆಂದು ಸರಕಾರ ಎಂದು ಭಾವಿಸಿಯೇ ಇಲ್ಲ!
- ಆತ್ಮವಿಶ್ವಾಸದ ಕೊರತೆ: ರಾಜರು ಬರಲಿ, ರಾಜರು ಹೋಗಲಿ, ಯೋಗಿಯಾಗಿ, ತ್ಯಾಗಿಯಾಗಿ ಉಳುಮೆ ಮಾಡುತ್ತಿದ್ದ ಅನ್ನದಾತ ಇಂದು ಏಕಾಂಗಿಯಾಗಿದ್ದಾನೆ. ಆತನ ಸುತ್ತಲಿನ ಮಾರುಕಟ್ಟೆ ವ್ಯವಸ್ಥೆ, ಲೋಭ ಸಂಸ್ಕೃತಿ, ಆತನನ್ನು ಹಿಂಡಿ ಹಿಪ್ಪೆ ಮಾಡುತ್ತಿವೆ. ಸಾವೊಂದೇ ತನಗೆ ಬಿಡುಗಡೆಯ ದಾರಿ ಎನ್ನಿಸುವಷ್ಟರ ಮಟ್ಟಿಗೆ ಆತನನ್ನು ಕುಗ್ಗಿಸುತ್ತಿರುವ ಸಾಮಾಜ, ಅನ್ನದ ಋಣವನ್ನೇ ಮರೆತಿದೆ. ಆತ್ಮ ವಿಶ್ವಾಸ ತುಂಬಬೇಕಿದ್ದ ಹೋರಾಟಗಳು, ಚಟುವಟಿಕೆಗಳು, ಮಾಧ್ಯಮಗಳ ಮುಂದಷ್ಟೇ ನಡೆಯುತ್ತಿವೆ.
ಟಾಪ್- 10 ಪರಿಹಾರಗಳು
- ಕೂಡಲೇ ಎಲ್ಲ ಬೆಳೆಗಳಿಗೂ ವೈಜ್ಞಾನಿಕವಾಗಿ ಬೆಂಬಲ ಬೆಲೆ ನಿಗದಿ ಮಾಡಿ, ಜಾರಿಗೆ ತರಬೇಕು. ರೈತನಿಗೆ ನಿರ್ದಿಷ್ಟ ಆದಾಯ ದೊರೆಯುವಂತೆ ವ್ಯವಸ್ಥೆ ಮಾಡಬೇಕು. ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನು ಜಾರಿಗೆ ತರಬೇಕು.
- ಬಡ್ಡಿ ವ್ಯಾಪಾರಿ ನಿಯಂತ್ರಣ ಕಾಯಿದೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕು. ಸಾಂಸ್ಥಿಕವಲ್ಲದ ಸಾಲದ ಬಡ್ಡಿದರವು ರಾಷ್ಟ್ರೀಕೃತ ಬ್ಯಾಂಕುಗಳು ನೀಡುವ ಬಡ್ಡಿದರಕ್ಕಿಂತ ಹೆಚ್ಚಾಗಿರದಂತೆ ನೋಡಿಕೊಳ್ಳಬೇಕು. ಬಡ್ಡಿಯನ್ನೂ ಸೇರಿದಂತೆ ಸಾಲಗಾರನ ಒಟ್ಟಾರೆ ಸಾಲ ಯಾವ ಕಾರಣಕ್ಕೂ ಮೂಲ ಸಾಲದ ಎರಡುಪಟ್ಟು ಆಗದಂತೆ ನೋಡಿಕೊಳ್ಳಬೇಕು.
- ಬೆಳೆ ಬೆಳೆಯಲೆಂದು ಮಾಡಿದ ಸಾಲ ತೀರಿಸದಿದ್ದರೆ, ಯಾವುದೇ ಕಾರಣಕ್ಕೂ ಮನೆ ಮತ್ತು ಜಮೀನನ್ನು ಜಫ್ತಿ ಮಾಡಬಾರದು.
- ಸಹಕಾರಿತತ್ವದ ಆಧಾರದ ಮೇಲೆ ನೀರು, ಟ್ಯಾಕ್ಟರ್, ಟಿಲ್ಲರ್ ಇತ್ಯಾದಿ ಕೃಷಿ ಉಪಯೋಗಿ ಯಂತ್ರೋಪಕರಣಗಳನ್ನು ಮತ್ತು ಭೂಮಿಯನ್ನು ಹಂಚಿಕೊಂಡು ಗುಂಪು ಕೃಷಿ ಮಾಡುವುದನ್ನು ಉತ್ತೇಜಿಸಬೇಕು. ಇದಕ್ಕಾಗಿ ಸರಕಾರವೇ ಹೊಸ ಕಾರ್ಯಕ್ರಮವನ್ನು ರೂಪಿಸಬೇಕು.
- ಕೃಷಿಯ ಮೇಲೆ ಕಾರ್ಪೊರೇಟ್ ಶಕ್ತಿಗಳು ಹಿಡಿತ ಸಾಧಿಸದಂತೆ ನೋಡಿಕೊಳ್ಳಬೇಕು. ರೈತರ ಜಮೀನನ್ನು ಕಸಿದುಕೊಳ್ಳಬಾರದು ಮತ್ತು ಕಾಂಟ್ರಾಕ್ಟ್ ಫಾರ್ಮಿಂಗ್, ಕಾರ್ಪೊರೇಟ್ ಫಾರ್ಮಿಂಗ್ ನೀತಿಗಳನ್ನು ಕೈಬಿಡಬೇಕು. ನೀತಿ ಆಯೋಗ ಮಾಡಿರುವ ಶಿಫಾರಸುಗಳನ್ನು ಜಾರಿಗೆ ತರಬಾರದು.
- ಗ್ರಾಮಮಟ್ಟದಲ್ಲಿ ಕೃಷಿಗೆ ಪೂರಕವಾದ ವೃತ್ತಿಗಳಿಗೆ ಉತ್ತೇಜನ ನೀಡುವ ಮೂಲಕ ಕೃಷಿಕರಿಗೆ ಪರ್ಯಾಯ ದುಡಿಮೆಗೆ ಅವಕಾಶ ಕಲ್ಪಿಸಬೇಕು.
- ಸರಕಾರ ಒಂದು ಸಮಗ್ರ ಕೃಷಿ ನೀತಿಯನ್ನು ಜಾರಿಗೆ ತರಬೇಕು. ರೈತರ ಒಟ್ಟಾರೆ ಕೃಷಿ ಸಾಲದ ಶೇ. 90ರಷ್ಟು ಭಾಗವಾದರೂ ಸಾಂಸ್ಥಿಕ ಮೂಲಗಳಿಂದ ಪಡೆಯುವಂತಾಗಲು ಸೂಕ್ತ ಕ್ರಮಗಳನ್ನು ತೆಗದುಕೊಳ್ಳಬೇಕು.
- ಗ್ರಾಮೀಣ ಭಾಗಕ್ಕೆ ಅನಾವಶ್ಯಕ ಸೌಕರ್ಯಗಳನ್ನು ಒದಗಿಸುವುದಕ್ಕಿಂತ ಹೆಚ್ಚಾಗಿ, ಕೃಷಿಗೆ ಅಗತ್ಯವಾದ ಮೂಲ ಸೌಕರ್ಯಗಳನ್ನು ಒದಗಿಸುವುದರತ್ತ ಗಮನ ನೀಡಬೇಕು. ಉದಾಹರಣೆಗೆ ವಿದ್ಯುತ್. ರೈತರಿಗೆ (ಬೆಂಗಳೂರಿಗರಿಗಲ್ಲ!) ಅಗತ್ಯವಾಗಿರುವಾಗೆಲ್ಲಾ ವಿದ್ಯುತ್ ದೊರೆಯುವಂತೆ ನೋಡಿಕೊಳ್ಳಬೇಕು.
- ತಂತ್ರಜ್ಞಾನ, ಹೊಸ ಕೃಷಿ ವಿಧಾನಗಳ ಬಳಕೆಗೆ ಅತಿ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಜತೆಗೆ ಕೃಷಿ ಉತ್ಪನ್ನಗಳನ್ನು ಸಂಸ್ಕರಿಸಿ, ಮಾರುಕಟ್ಟೆ ಸಿದ್ಧಪಡಿಸುವ ಸಣ್ಣ ಸಣ್ಣ ಕೈಗಾರಿಕೆಗಳನ್ನು ಗ್ರಾಮೀಣ ಭಾಗದಲ್ಲಿಯೇ ತೆರೆಯಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ರೈತರಿಗೆ ತಮ್ಮ ಉತ್ಪನ್ನಗಳನ್ನು ನೇರವಾಗಿ ಮಾರಲು ಅವಕಾಶ ಮಾಡಿಕೊಡುವ ಹೈಟೆಕ್ ಮಾರುಕಟ್ಟೆ ವ್ಯವಸ್ಥೆಯನ್ನು ರಾಜ್ಯದ ಎಲ್ಲ ಭಾಗದಲ್ಲಿಯೂ ರೂಪಿಸಬೇಕು.
- ರೈತರಿಗೆ ಕಾಲಕಾಲಕ್ಕೆ ಅಗತ್ಯ ಮಾಹಿತಿಯನ್ನು ಒದಗಿಸುವುದರ ಮೂಲಕ ಅವರಲ್ಲಿ ಆತ್ಮವಿಶ್ವಾಸವನ್ನು ತುಂಬುವ ಕೆಲಸವನ್ನು ಮಾಡಬೇಕು. ರೈತರಾಗಿ ದುಡಿಯುವುದು ಹೆಮ್ಮೆಯ ಉದ್ಯೋಗ ಎಂಬುದನ್ನು ಅವರಿಗೆ ಮನದಟ್ಟು ಮಾಡಿಸಲು ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕು. ಮಾತೆತ್ತಿದರೆ ಐಟಿ-ಬಿಟಿ ಎನ್ನುವುದನ್ನು ನಿಲ್ಲಿಸಬೇಕು!
ರೈತರ ಆತ್ಮಹತ್ಯೆಯ ಸಮರ್ಪಕ ವಿಶ್ಲೇಷಣೆ
ಸಮಯೋಚಿತ ಚಿಂತನೆಯ ಲೇಖನ. ನನ್ನ ಅನುಮಾನ ಏನೆಂದ್ರೆ, ಈಗ ನಿಜವಾದ ರೈತರ ಸಂಖ್ಯೆ ಎಷ್ಟಿದೆ ಎನ್ನುವುದು. ಸರ್ಕಾರಗಳು ಯೋಜನೆಯ ಹೆಸರಲ್ಲಿ ಯುವಕರನ್ನು, ಶ್ರಮಿಕರನ್ನು ಹಾಳುಮಾಡಿದ ಹಾಗೆ ರೈತರನ್ನೂ ಹಾಳುಮಾಡಿ, ಕೈ ಮಣ್ಣಾದರೆ,ನನ್ನ ಗೌರವ ಕಡಿಮೆಯಾಗುತ್ತದೆ ಎನ್ನುವ ಮನೋಭಾವನೆಯನ್ನು ಅವನಲ್ಲಿ ತಂದು ಆಗಿದೆ. ಅವನೀಗ ಹೊಲ,ಗದ್ದೆ ಬಿಟ್ಟು ರಾಜಕೀಯ ಪುಢಾರಿಗಳ ಹಿಂದಿಂದೆ ಅವರ ರೀತಿಯ ವಸ್ತ್ರ,ವಿನ್ಯಾಸವನ್ನು ಅಳವಡಿಸಿಕೊಂಡು,ಅಡ್ಡಾಡುವುದನ್ನು ರೂಢಿಸಿಕೊಂಡು,ಪ್ರತಿಯೊಂದಕ್ಕೂ ಸರ್ಕಾರದತ್ತ ಪರಿಹಾರಕ್ಕಾಗಿ ನಿಲ್ಲುವ ಪರಿಪಾಠ ರೂಢಿಸಿಕೊಂಡು ಬಿಟ್ಟಿದ್ದಾನೆ.
ಬದಲಾಗಬೇಕು,ಮುಂದುವರಿಯಬೇಕು ಎಂದು ಮುನ್ನುಗ್ಗುವ ಭರದಲ್ಲಿ ರೈತ ಮುಗ್ಗರಿಸಿರುವುದು ಸ್ಪಷ್ಟವಾಗಿ ಕಾಣುತ್ತೆ. ಬದಲಾಗದ ಋತುಮಾನವನ್ನಾದ್ರೂ ನೋಡಿ ನಮ್ಮ ರೈತ ಎಷ್ಟರಮಟ್ಟಿಗೆ ಬದಲಾವಣೆ ತನಗೆ ಅನಿವಾರ್ಯ ಎಂಬುದನ್ನು ಅರಿಯಬೇಕು.ಯಾರನ್ನೂ ದೂರಿ ಪ್ರಯೋಜನವಿಲ್ಲ….ಯಾಕೆಂದರೆ,ಯಾರಿಗೆ ಯಾರೂ ಇಲ್ಲ,ಇಲ್ಲಿ.