26.8 C
Karnataka
Sunday, September 22, 2024

    ಗಡಿಯಿಂದ ಚೀನಾ ಸೇನೆ ಹಿಂದೆ ಸರಿದಿದ್ದೇಕೆ

    Must read

    ಲಡಾಖ್ ಗಡಿಯಲ್ಲಿ ನಿರ್ಮಾಣವಾದ ಪ್ರಕ್ಷುಬ್ಧ ಪರಿಸ್ಥಿತಿ ನಿಧಾನವಾಗಿ
    ತಿಳಿಯಾಗುತ್ತಿದೆ. ಭಾರತ ಮತ್ತು ಚೀನಾ ಎರಡೂ ದೇಶಗಳು ಮೂರು
    ಪ್ರಮುಖ ಪ್ರದೇಶಗಳಿಂದ ಸೇನೆಯನ್ನು ಭಾಗಶಃ ಹಿಂದಕ್ಕೆ
    ತೆಗೆದುಕೊಳ್ಳುವ ಒಪ್ಪಂದಕ್ಕೆ ಬಂದಿವೆ.
    ಹಠಮಾರಿ ಚೀನಾ ಈ ಸಂದರ್ಭದಲ್ಲೂ ಯಾಕೆ ಇಂತಹ ಒಪ್ಪಂದಕ್ಕೆ
    ಸಹಮತ ಸೂಚಿಸಿತು ಎಂಬುದನ್ನು ಯೋಚಿಸಿದರೆ ಅದಕ್ಕೆ ಹಲವು
    ಉತ್ತರಗಳು ಸಿಗುತ್ತವೆ. ಮುಖ್ಯವಾಗಿ ಈ ಹಿಂದೆ ಅಂದರೆ ನೆಹರೂ
    ಕಾಲದಲ್ಲಿ ನಡೆದ ದುರಾಕ್ರಮಣದಂತಹ ಸನ್ನಿವೇಶ ಈಗಿಲ್ಲ. ಭಾರತ
    ಸೇನಾ ಬಲದಲ್ಲಿ ಸಾಕಷ್ಟು ಪ್ರಾವಿಣ್ಯತೆ ಪಡೆದಿದೆ. ಮೇಲ್ನೋಟಕ್ಕೆ
    ಪಾಕಿಸ್ತಾನವನ್ನು ಗುರಿಯಾಗಿಸಿಕೊಂಡು ತನ್ನ ಸೇನಾ ಬಲ
    ಹೆಚ್ಚಿಸಿಕೊಂಡಿದೆ ಎಂದು ಸಾಮಾನ್ಯವಾಗಿ ವಿಶ್ಲೇಷಿಸಲಾ
    ಗುತ್ತಿದೆಯಾದರೂ, ಭಾರತ ಮುಖ್ಯ ಗುರಿ ಯಾವತ್ತೂ ಚೀನಾ ಸೇನಾ
    ಸಾಮರ್ಥ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ. ಹೀಗಾಗಿಯೇ
    ಪಾಕಿಸ್ತಾನದ ಗಡಿಯೊಳಗೆ ನೇರ ನುಗ್ಗಿ ಸರ್ಜಿಕಲ್ ಸ್ಟ್ರೈಕ್ ಮಾಡುವ
    ದಿಟ್ಟ ನಿರ್ಧಾರ ಕೈಗೊಂಡ ಪ್ರಧಾನಿ ನರೇಂದ್ರ ಮೋದಿಯವರನ್ನು
    ಅಷ್ಟು ಲಘುವಾಗಿ ಚೀನಾ ಪರಿಗಣಿಸುತಿಲ್ಲ.
    ಹೆಚ್ಚು ಪರಿಣತಿ
    ಭಾರತದ ಸೇನೆಯ ಪ್ರಮುಖ ಸಾಧನೆಯೆಂದರೆ ಗುಡ್ಡಗಾಡು
    ಪ್ರದೇಶದಲ್ಲಿ ಯುದ್ಧ ಮಾಡುವ ಹೆಚ್ಚಿನ ಪರಿಣತಿಯನ್ನು
    ಕಾಲಾನುಕಾಲಕ್ಕೆ ಮೈಗೂಡಿಸಿಕೊಂಡು ಬಂದಿರುವುದು. ಮುಖ್ಯವಾಗಿ
    ಟಿಬೇಟಿಯನ್ ಗಡಿಯಂತಹ ಹಿಮಾಚ್ಛಾದಿತ ಪರ್ವತ ಪ್ರದೇಶದಲ್ಲಿ
    ಭಾರತದ ಸೇನೆ ಈ ಹಿಂದಿಗಿಂತಲೂ ಹೆಚ್ಚು ಸಂಘಟನಾತ್ಮಕ
    ಯುದ್ಧವನ್ನು ಮಾಡಲು ಶಕ್ತವಾಗಿದೆ. ಇದು ಕೇವಲ ಭಾರತೀಯಭಕ್ತರ ವೃಥಾ ಆಲಾಪವಲ್ಲ, ಅಥವಾ ನಮ್ಮ ಹೆಗ್ಗಳಿಕೆಯ ಬಗ್ಗೆ ನಾವೇ
    ಬೆನ್ನುತಟ್ಟಿಕೊಳ್ಳುವ ಮಾತಲ್ಲ.
    “ಪ್ರಸಕ್ತ ಸನ್ನಿವೇಶವನ್ನು ಸೂಕ್ಷ್ಮವಾಗಿ ಗಮನಿಸಿದರೆ ಅಮೆರಿಕ, ರಷ್ಯಾ,
    ಚೀನಾ ಅಥವಾ ಐರೋಪ್ಯ ದೇಶಗಳಿಗೆ ಹೋಲಿಸಿದರೆ ಭಾರತವು
    ಪ್ರಸ್ಥಭೂಮಿ ಮತ್ತು ಪರ್ವತ ಪ್ರದೇಶಗಳ ಯುದ್ಧದಲ್ಲಿ ಹೆಚ್ಚು
    ಪರಿಣತಿಯನ್ನು ಸಾಧಿಸಿದೆ’ ಎಂದು ಆಧುನಿಕ ಯುದ್ಧ ಸಾಮಗ್ರಿ ಕುರಿತು
    ವರದಿ ಮಾಡುವ ನಿಯತಕಾಲಿಕದ ಸಂಪಾದಕರಾದ ಹ್ವಾಂಗ್ ಗೌಝಿ
    ಅಭಿಪ್ರಾಯ ಪಟ್ಟಿದ್ದಾರೆ.
    ಭಾರತ ಮತ್ತು ಚೀನಾ ಗಡಿ ಭಾಗದ ಉದ್ವಿಗ್ನತೆಯನ್ನು
    ಶಮನಗೊಳಿಸುವ ನಿಟ್ಟಿನಲ್ಲಿ ಸೇನಾ ಪಡೆಯನ್ನು ಹಂತ ಹಂತವಾಗಿ
    ವಾಪಸ್ ಕರೆಸಿಕೊಳ್ಳುವ ನಿರ್ಧಾರ ಕೈಗೊಂಡ ಬೆನ್ನಲ್ಲೇ ಈ ಲೇಖನ
    ಪ್ರಕಟವಾಗಿದೆ.
    ಗಡಿ ಉದ್ವಿಗ್ನತೆ
    ಮುಖ್ಯವಾಗಿ ಟಿಬೇಟ್ ಗಡಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ
    ತನ್ನ ಸೇನಾ ಬಲವನ್ನು ಭಾರತ ವಿಸ್ತರಿಸಿದೆ. ಸದ್ಯ ಭಾರತವು ಪರ್ವತ
    ಪ್ರದೇಶಗಳ ಯುದ್ಧದಲ್ಲಿ ಪರಿಣಿತರಾದ ಎರಡು ಲಕ್ಷ ಯೋಧನ್ನು 12
    ವಿಭಾಗಗಳಲ್ಲಿ ಹೊಂದಿದೆ. ಇದು ಜಗತ್ತಿನಲ್ಲೇ ಅತಿ ಹೆಚ್ಚು ದೊಡ್ಡ
    ಪರ್ವತ ಪ್ರದೇಶ ಯುದ್ಧ ಪರಿಣಿತ ಯೋಧರ ತಂಡ ಎಂದು
    ಪರಿಗಣಿಸಲಾಗಿದೆ ಎಂದವರು ತಮ್ಮ ಅಭಿಪ್ರಾಯಕ್ಕೆ ಪೂರಕ ಮಾಹಿತಿ
    ನೀಡಿದ್ದಾರೆ.
    1970ರ ದಶಕದಲ್ಲಿ ಈ ನಿಟ್ಟಿನಲ್ಲಿ ಭಾರತ ಮುಂದಡಿಯಿಟ್ಟಿತ್ತು.
    ಆಗ 50,000 ಯೋಧರು ಇಂತಹ ಸಾಮರ್ಥ್ಯ ಹೊಂದಿದ್ದರೆ ಈಗ
    ಅದು ಮೂರು ಪಟ್ಟು ಆಗಿದೆ. ಅದರಲ್ಲೂ ಮುಖ್ಯವಾಗಿ ಇಂತಹ
    ಯುದ್ಧದ ಪರಿಣತಿ ಪ್ರತಿ ಯೋಧನಿಗೂ ಮುಖ್ಯ ಎಂದು ಮನಗಂಡಿರುವ
    ಭಾರತ ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ಅಂತಿಮವಾಗಿ ವೃತ್ತಿಮತ್ತು ಹವ್ಯಾಸಿ ಪರ್ವತಾರೋಹಿಗಳನ್ನು ಸೇನೆಗೆ ಸೇರ್ಪಡೆಗೊಳಿಸಲು
    ಆರಂಭಿಸಿತು ಎಂದವರು ಹೇಳುತ್ತಾರೆ.
    ಸಿಯಾಚಿನ್ ಪ್ರದೇಶ
    ವಿಶ್ವದ ಅತಿ ಎತ್ತರದ ಯುದ್ಧಭೂಮಿ ಎಂದೇ ಹೆಸರಾಗಿರುವ ಮತ್ತು
    ಸದಾ ಹಿಮಾಚ್ಛಾದಿತವಾಗಿರುವ (ಮೈನಸ್ ಡಿಗ್ರಿ) ಸಿಯಾಚಿನ್ ನಲ್ಲಿ
    ಭಾರತ ನೂರಕ್ಕೂ ಹೆಚ್ಚು ಔಟ್ ಪೋಸ್ಟ್ ಗಳನ್ನು ರಚಿಸಿದೆ. 6ರಿಂದ
    7 ಸಾವಿರ ಯೋಧರು ಅಲ್ಲಿ ದಿನ ನಿತ್ಯ ಗಡಿ ಕಾವಲು ಕಾಯುತ್ತಿದ್ದಾರೆ.
    6,748 ಮೀಟರ್ ಎತ್ತರದಲ್ಲಿ ಸೇನಾ ಠಾಣೆಯನ್ನೂ ನಿರ್ಮಿಸಿರುವುದು
    ಪರ್ವತ ಯುದ್ಧ ಪ್ರವೀಣತೆಯಲ್ಲಿ ಭಾರತದ ಮೇಲುಗೈಗೆ
    ಸಾಕ್ಷಿಯಾಗಿದೆ.
    ಪ್ರಬಲ ಸೇನಾ ಪಡೆ
    ಹಿಂದಿನ ಭಾರತವು ಇಂದಿನ ಭಾರತವಲ್ಲ. ಎಂ. 777 ಯುದ್ಧ ವಿಮಾನ,
    155 ಎಂಎಂ ಲೈಟ್ ಟ್ಯಾಂಕ್, ಚಿನೂಕ್ ಹೆವ್ವಿ ಟ್ರಾನ್ಸ್ ಪೋರ್ಟ್
    ಹೆಲಿಕಾಪ್ಟರ್ ಗಳು ಭಾರತ ಸೇನೆಯ ಬತ್ತಳಿಕೆಯಲ್ಲಿವೆ. ಎಎಚ್ 64
    ಅಪಾಚಿ ಅಟ್ಯಾಕ್ ಹೆಲಿಕಾಪ್ಟರ್ ಗಳಿಂದಲೂ ಸೇನೆ ಸಜ್ಜಿತವಾಗಿದೆ.
    ಇನ್ನು ಚೀನಾ-ಭಾರತ ಗಡಿ ಭಾಗದ ಪ್ರದೇಶ ಎಷ್ಟು ದುರ್ಗಮವಾಗಿದೆ
    ಎಂದರೆ ಕೇವಲ ಹೋರಾಟದ ಜತೆಗೆ ತನ್ನನ್ನು ರಕ್ಷಿಸಿಕೊಳ್ಳುವುದಕ್ಕೂ
    ಸೇನಾ ಪಡೆ ಮಹತ್ವ ನೀಡಬೇಕಾಗುತ್ತದೆ. ಇಂತಹ ಅತಿಯಾದ
    ಆತ್ಮವಿಶ್ವಾಸ ಸದ್ಯದ ಮಟ್ಟಿಗೆ ಚೀನಾದಲ್ಲಿ ಇಲ್ಲ. ಹೀಗಾಗಿಯೇ
    ಬೆದರಿಸುವ ತಂತ್ರ, ಬಳಿಕ ಒಪ್ಪಂದ ಎನ್ನುವ ಸೂತ್ರಕ್ಕೆ ಮೊರೆಯಾಗಿದೆ
    ಎಂಬುದು ರಾಜಕೀಯ ಮತ್ತು ರಕ್ಷಣಾ ತಜ್ಞರ ವಿಶ್ಲೇಷಣೆಯಾಗಿದೆ.

    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!