ಅಶೋಕ ಹೆಗಡೆ
ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್‌ನ ಏಳು ಸ್ಥಾನಗಳ ಜೂನ್ ೨೯ರಂದು ನಡೆಯುವ ಚುನಾವಣೆಯು ಬಿಜೆಪಿ, ಕಾಂಗ್ರೆಸ್‌ಗಳಲ್ಲಿ ತಳಮಳ ಹುಟ್ಟುಹಾಕಿದೆ.
ರಾಜ್ಯಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಿಸುವಾಗ ಎರಡೂ ಪಕ್ಷಗಳ ಹೈಕಮಾಂಡ್‌ಗಳು ಅನುಸರಿಸಿದ ವಿಧಾನವೇ ಅದಕ್ಕೆ ಕಾರಣ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ.ಬಿಜೆಪಿಯಲ್ಲಿ ಎಲ್ಲರಿಗಿಂತ ಹೆಚ್ಚು ಒತ್ತಡಕ್ಕೆ ಸಿಲುಕಿರುವವರು ನಾಲ್ಕು ಮಂದಿ.ಮೊದಲನೆಯವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಉಳಿದ ಮೂವರೆಂದರೆ ಆಪರೇಷನ್
ಕಮಲಕ್ಕೆ ಒಳಗಾಗಿದ್ದ ಎಂ.ಟಿ.ಬಿ. ನಾಗರಾಜ್, ಎಚ್.ವಿಶ್ವನಾಥ್ ಮತ್ತು ಆರ್.ಶಂಕರ್.
ಈ ಮೂವರನ್ನೂ ವಿಧಾನ ಪರಿಷತ್‌ಗೆ ಆಯ್ಕೆ ಮಾಡಿ ಮಂತ್ರಿ ಮಾಡಬೇಕಾದ `ಹೊಣೆಗಾರಿಕೆ’ಯಡಿಯೂರಪ್ಪನವರ ಮೇಲಿದೆ. ಆರ್.ಶಂಕರ್ ಅವರಿಗಂತೂ ವಿಧಾನಸಭೆ ಉಪ ಚುನಾವಣೆಗೆ ಟಿಕೆಟ್ ನೀಡದೇ, ವಿಧಾನ ಪರಿಷತ್‌ಗೆ ಆಯ್ಕೆ ಮಾಡುವ ಭರವಸೆ ನೀಡಲಾಗಿತ್ತು. ವಿಶ್ವನಾಥ್ ಅವರು ಸೋಲುವ ಸಾಧ್ಯತೆ ಇರುವುದರಿಂದ ಸ್ಪರ್ಧಿಸಿದಂತೆ ಖುದ್ದು ಯಡಿಯೂರಪ್ಪ ಸಲಹೆ ಮಾಡಿದ್ದರು. ಅದನ್ನು ಲೆಕ್ಕಿಸದೆ ಹುಣಸೂರಿನಲ್ಲಿ ಸ್ಪರ್ಧಿಸಿ ವಿಶ್ವನಾಥ್ ಸೋತರು. ಹೊಸಕೋಟೆಯಲ್ಲಿ ಎಂಟಿಬಿ ಸೋಲಲು ಬಿಜೆಪಿ ಸಂಸದ ಬಿ.ಎನ್.ಬಚ್ಚೇಗೌಡರ ಪಾತ್ರವೂ ಇದೆ ಎನ್ನುವುದು ಸ್ಪಷ್ಟ. ಹಾಗೆಯೇ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರ ಪತನವಾಗಿ ಯಡಿಯೂರಪ್ಪ ಮುಖ್ಯಮಂತ್ರಿಯಾಗುವುದರ ಹಿಂದೆ ವಿಶ್ವನಾಥ್, ಎಂಟಿಬಿ ಕೊಡುಗೆ ದೊಡ್ಡದಿದೆ.
ಇದು ಯಡಿಯೂರಪ್ಪನವರ ರಾಜಕೀಯ ಬದುಕಿನ ಸಂಧ್ಯಾಕಾಲ ಎನ್ನುವುದನ್ನು ಅರ್ಥ ಮಾಡಿಕೊಂಡು ವರಿಷ್ಠರು ಇದೊಂದು ಬಾರಿ ನಾಲ್ವರೂ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ
ನೀಡಿದರೆ ಈ ಮೂವರೂ ಎಮ್ಮೆಲ್ಸಿಗಳಾಗುವುದು ನಿಶ್ಚಿತ. ನಾಲ್ಕನೇಯವರಾಗಿ ಆಪರೇಷನ್ ಕಮಲದ ರೂವಾರಿ ಸಿ.ಪಿ.ಯೋಗೇಶ್ವರ್‌ಗೆ ಅದೃಷ್ಟ ಒಲಿಯಬಹುದು ಅಥವಾ ವರಿಷ್ಠರ ಜತೆ ಸಂಘರ್ಷ
ಬೇಡವೆಂದು ನಾಲ್ಕನೇ ಅಭ್ಯರ್ಥಿ ಆಯ್ಕೆಯನ್ನು ಯಡಿಯೂರಪ್ಪನವರು ವರಿಷ್ಠರಿಗೇ ಬಿಡಬಹುದು.
ಇನ್ನು ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆಗೆ ಅವಕಾಶ ನೀಡುವುದು ಬೇಡವೆಂದು ಹೈಕಮಾಂಡ್ ನೇರವಾಗಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ರಾಜ್ಯಸಭಾ ಚುನಾವಣೆಗೆ ಅಭ್ಯರ್ಥಿ ಎಂದು ಘೋಷಿಸಿತು. ರಾಜ್ಯ ನಾಯಕರು ಚರ್ಚೆಯ ಹಂತದಲ್ಲಿರುವಾಗಲೇ ಖರ್ಗೆ ಹೆಸರು ಘೋಷಣೆಯಾದ್ದರಿಂದ ಯಾರೂ ತುಟಿ ಬಿಚ್ಚಲಿಲ್ಲ. ವಿಧಾನ ಪರಿಷತ್‌ಗೂ ಅದೇ ಮಾನದಂಡ ಅನುಸರಿಸಬಹುದು ಎಂಬ ನಿರೀಕ್ಷೆಯಿಂದ ರಾಜ್ಯ ನಾಯಕರು ಅಷ್ಟಾಗಿ ತಲೆ ಕೆಡಿಸಿಕೊಂಡಂತೆ
ಕಾಣಿಸುತ್ತಿಲ್ಲ. ವಿಧಾನ ಪರಿಷತ್ ಚುನಾವಣೆಯಲ್ಲಿ ಮಾತ್ರ ಕಾರ್ಯಕರ್ತರಿಗೆ ಮಣೆ ಹಾಕುವ ಪರಂಪರೆಯನ್ನು ಕಾಂಗ್ರೆಸ್ ಅನುಸರಿಸಿಕೊಂಡು ಬಂದಿದೆ. ಅದು ಈ ಸಲ ಪಾಲನೆಯಾಗುತ್ತದೆಯೇ ನೋಡಬೇಕು.
ಹಾಲಿ ಸದಸ್ಯ ಎಂ.ಸಿ.ವೇಣುಗೋಪಾಲ್ ತಮಗೆ ಕೇವಲ ೨೧ ತಿಂಗಳ ಅವಕಾಶ ಸಿಕ್ಕಿದ್ದರಿಂದ ಇನ್ನೊಂದು ಪೂರ್ಣಾವಧಿಗೆ ಅವಕಾಶ ನೀಡಬೇಕೆಂದು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೇ ಪತ್ರ ಬರೆದಿದ್ದಾರೆ. ತುಮಕೂರು ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ, ಮಾಜಿ ಶಾಸಕರಾದ ನಜೀರ್ ಅಹಮದ್, ಅಬ್ದುಲ್ ಜಬ್ಬಾರ್, ಮಾರ್ಗರೆಟ್ ಆಳ್ವ ಪುತ್ರ ನಿವೇದಿತ್
ಆಳ್ವ ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ.
ಕಾಂಗ್ರೆಸ್ ವರಿಷ್ಠರು ಸ್ವಲ್ಪ ಚಾಣಾಕ್ಷತೆ ತೋರಿಸಿದ್ದರೆ ಪರಿಷತ್‌ನಲ್ಲಿ ಇನ್ನೊಂದು ಸ್ಥಾನ ಗೆಲ್ಲುವ ಅವಕಾಶವಿತ್ತು. ರಾಜ್ಯಸಭೆಯಲ್ಲಿ ದೇವೇಗೌಡರಿಗೆ ಬೆಂಬಲ ನೀಡುತ್ತೇವೆ, ಪರಿಷತ್ ಸ್ಥಾನ ನಮಗೆ ಬಿಟ್ಟುಕೊಡಿ ಎಂದು ಚೌಕಾಸಿ ಮಾಡಬಹುದಿತ್ತು. ಏಕಾಏಕಿ ಗೌಡರಿಗೆ ಬೆಂಬಲ ಸೂಚಿಸಿ ಒಂದು ಸ್ಥಾನ ಕಳೆದುಕೊಂಡಿತು.
ಅನಾಯಾಸವಾಗಿ ಸಿಕ್ಕಿರುವ ಒಂದು ಸ್ಥಾನ ಜೆಡಿಎಸ್‌ಗೆ ಯಾವ ರೀತಿ `ಸಂಪನ್ಮೂಲ’ ತಂದುಕೊಡುತ್ತದೆ ಎಂಬುದಷ್ಟೇ ಈಗಿನ ಪ್ರಶ್ನೆ. ಒಂದೊಮ್ಮೆ ನಿಷ್ಠಾವಂತ ಕಾರ್ಯಕರ್ತರಿಗೆ ಜೆಡಿಎಸ್ ಟಿಕೆಟ್ ನೀಡಿದರೆ ಮಾತ್ರವೇ ಅದು
ದೊಡ್ಡ ಸುದ್ದಿಯಾಗುತ್ತದೆ.