ಮನೆಯಲ್ಲಿ ಹೆಂಗಸರು ಬಟ್ಟೆಗಳನ್ನು ಜೋಡಿಸಿದ ಅಲಮೆರಾವನ್ನು ತೆರೆದ ತಕ್ಷಣ ಅದರೊಳಗಿನಿಂದ ಒಂದು ಬ್ಲೌಸ್ ಪೀಸು ಕೆಳಗೆ ಬೀಳುತ್ತದೆ . ಜಾರಿ ಬಿದ್ದ ಬ್ಲೌಸ್ ಪೀಸನ್ನು ಕೈಲಿ ಹಿಡಿದ ಆಕೆ ಅದನ್ನು ಯಾರು ಕೊಟ್ಟಿದ್ದು ಅಂತ ನೆನಪಿಸಿಕೊಂಡು ಸಣ್ಣ ಫ್ಲ್ಯಾಶ್‌ಬ್ಯಾಕಿಗೆ ಜಾರುತ್ತಾರೆ .
ಗೃಹ ಪ್ರವೇಶದಲ್ಲೋ , ಸತ್ಯನಾರಾಯಣ ಪೂಜೆಯಲ್ಲೋ , ನಿಶ್ಚಿತಾರ್ಥದಲ್ಲೋ, ಸಂಬಂಧಿಕರ ಮನೆಗೆ ಹೋದಾಗಲೋ, ಅರಿಷಿಣ ಕುಂಕುಮದ ಜೊತೆಗೋ ಆ ಕುಪ್ಪುಸದ ಕಣ ಕೊಟ್ಟಿರುತ್ತಾರೆ . ಅದನ್ನು ಕೈಲಿ ಹಿಡಿದ ಕೂಡಲೇ ಆ ಹೆಂಗಸಿನ ಮನದಲ್ಲಿ ಹತ್ತು ಆಲೋಚನೆಗಳು ಓಡುತ್ತವೆ. ಅದಕ್ಕೆ ಯಾವ ಸೀರೆ ಮ್ಯಾಚ್ ಆಗುತ್ತೆ , ಮ್ಯಾಚ್ ಆಗದೇ ಇದ್ರೆ ಯಾವ ರೇಂಜಿನ ಸೀರೆ ತಗೋಬಹುದು , ಯಾವಾಗ್ ತಗೋಬೇಕು , ಕುಪ್ಸ ಯಾರ್ ಹತ್ರ ಹೊಲಿಸಬೇಕು , ಯಾವ ವಿನ್ಯಾಸದಲ್ಲಿ ಹೊಲಿಸಬೇಕು, ಅದನ್ನ ಯಾವ ಫಂಕ್ಷನ್ನಿಗೆ ಹಾಕ್ಕೊಂಡ್ರೆ ಚೆನ್ನಾಗಿರುತ್ತೆ ಹೀಗೆ ಹತ್ತುಹಲವಾರು ಆಲೋಚನೆಗಳು ರೇಸುಕುದುರೆಗಳಂತೆ ಓಡುತ್ತವೆ .
ಅದೊಂದು ಸಣ್ಣ ರವಿಕೆ ಬಟ್ಟೆಯ ತುಂಡಾಗಿದ್ದರೂ ಇದು ಎಷ್ಟೋ ತುಂಡಾದ ಸಂಬಂಧಗಳನ್ನ ಸೇರಿಸೋ ಅಗಾಧ ಶಕ್ತಿ ಹೊಂದಿದೆ , ಒಂದು ಮನೆಯ ಹೆಂಗಸರು ತಮ್ಮ ಮನೆಗೆ ಬರುವ ಬೇರೆ ಮನೆಯ ಹೆಂಗಸರಿಗೆ ಸಲ್ಲಿಸುವ ಗೌರವ ಇದಾಗಿರುತ್ತದೆ .ಕೋಟಿಗಟ್ಟಲೇ ಆದಾಯವಿದ್ದವರೂ ಸಹ ಸಲ್ಲಿಸುವ ಗೌರವ ಇದಾಗಿದೆ. ಬ್ಲೌಸ್ ಪೀಸು ಒಂದು ಸಣ್ಣ ಸಂಪ್ರದಾಯ. ಒಂದು ಸಣ್ಣ ಉಡುಗೊರೆ. ಒಂದು ಸಣ್ಣ ಸತ್ಕಾರವಾದರೂ ಸಹ ಅದನ್ನು ಪಡೆಯುವ ಹೆಣ್ಣಿಗೆ ಅದು ಬಲು ದೊಡ್ಡ ಮಟ್ಟದ ಸಂತಸ ಉಂಟು ಮಾಡುತ್ತದೆ .
ಆಕೆ ಅದೆಷ್ಟೇ ದೊಡ್ಡ ಶ್ರೀಮಂತಳಾಗಿದ್ದರೂ ಆಕೆಯ ಬಳಿ ಎಷ್ಟೇ ಬೆಲೆಬಾಳುವ ವಸ್ತುಗಳು ಒಡವೆಗಳು ಸೀರೆಗಳಿದ್ದರೂ ಸಹ ಈ ಒಂದು ಬ್ಲೌಸ್ ಪೀಸು ಕೊಡುವ ಸಂತಸ ನಿಜಕ್ಕೂ ಅಪಾರವಾದದದ್ದು .
ನಾಲ್ಕೈದು ಮಂದಿ ಒಟ್ಟಿಗೆ ಹೋಗಿದ್ದಾಗ ಅವರಿಗೆಲ್ಲಾ ಇದು ಲಭಿಸಿದಾಗಲಂತೂ ಅವರುಗಳು ಓರೆಗಣ್ಣಿನಲ್ಲೇ ಪಕ್ಕದವರಿಗೆ ಯಾವ ಕಲರಿನದು ಸಿಕ್ಕಿದೆ ಎಂದು ನೋಡಿಕೊಂಡುಬಿಟ್ಟಿರುತ್ತಾರೆ. ಮತ್ತೆ ಪ್ರತಿ ಸಾರಿ ಇದು ಅಲೆಮಾರಿನಿಂದ ಕೆಳಗೆ ಬೀಳಲು ಕಾರಣವೇನೆಂದರೆ ಅದನ್ನು ಒಳಗೆ ಇಟ್ಟುಬಿಟ್ಟರೆ ಮರೆತುಹೋಗುತ್ತೇವೆ ಕಾಣೋ ಥರ ಇಟ್ರೆ ಬೇಗ ಹೊಲೆಯಲು ಹಾಕುತ್ತೇವೆ ಎಂದು ಕಾಣುವ ಥರ ಇಟ್ಟಿರುತ್ತಾರೆ.
ಆದರೆ ವಾಸ್ತವವೇನೆಂದರೆ ಇವರುಗಳು ಯಾವುದೇ ಕಾರಣಕ್ಕೂ ಅದನ್ನು ಮರೆಯುವುದಿಲ್ಲ , ಮತ್ತೆ ಅದು ಬ್ಲೌಸಾಗಿ ಸಿದ್ದವಾದ ನಂತರ ಅದನ್ನು ಹಲವಾರು ಬಾರಿ ಧರಿಸಿ , ಲೆಕ್ಕವಿಲ್ಲದಷ್ಟು ಸಲ ಒಗೆದು ಒಣಹಾಕಿ ಅದು ಇನ್ನೇನು ಬಣ್ಣ ಮಾಸಿ ಬಿಸಾಡುವ ಹಾಗಾದರೂ ಇವರು ಆ ಬ್ಲೌಸು ಪೀಸು ಯಾರು ಕೊಟ್ಟಿದ್ದು ಎಲ್ಲಿ ಕೊಟ್ಟಿದ್ದು ಎಂಬುದನ್ನು ಸಂಧರ್ಭ ಸಹಿತವಾಗಿ ವಿವರಿಸುತ್ತಾರೆ .
ಕಿರಣ ಆರ್
ಈ ಅಂಕಣದೊಂದಿಗೆ ಪ್ರಕಟವಾಗಿರುವ ಕಲಾಕೃತಿ ಕಿರಣ ಆರ್ ಅವರದ್ದು. ಲೇಖನದ ಆಶಯವನ್ನು ಅಷ್ಟೇ ಸಮರ್ಥವಾಗಿ ಚಿತ್ರದಲ್ಲಿ ಮೂಡಿಸುವ ಕಲೆ ಅವರಿಗೆ ಸಿದ್ಧಿಸಿದೆ. ಕರ್ನಾಟಕ ಚಿತ್ರ ಕಲಾ ಪರಿಷತ್ತಿನ ಕಾಲೇಜ್ ಆಫ಼್ ಫ಼ೈನ್ ಆರ್ಟ್ಸ್ ನಲ್ಲಿ ಮಾಸ್ಟರ್ ಆಫ಼್ ಫ಼ೈನ್ ಆರ್ಟ್ಸ್ ಪದವೀಧರೆ. ವಾಟರ್,ಆಕ್ರಲಿಕ್,ಆಯಿಲ್ ಪೈಟಿಂಗ್ ನಲ್ಲಿ ಹಲವಾರು ಗುಂಪು ಚಿತ್ರ ಪ್ರದರ್ಶನಗಳಲ್ಲಿ ಇವರ ಚಿತ್ರಗಳು ಪ್ರದರ್ಶನ ಗೊಂಡಿವೆ.ಹಲವಾರು ಕವಿತೆಗಳಿಗೆ ಇಲಸ್ಟ್ರೇಷನ್ ಮಾಡಿದ್ದಾರೆ. ಇಂಟಿರೀಯರ್ ಡಿಸೈನ್ ಮತ್ತು ಇದರ ಬಗ್ಗೆ ಕೆಲವು ಲೇಖನಗಳನ್ನು ಪತ್ರಿಕೆಗೆ ಬರೆದಿದ್ದಾರೆ. ಜೊತೆಗೆ ಕವಿತೆಗಳನ್ನು ಕೂಡ ಬರೆಯುತ್ತಾರೆ
ಲೇಖನ ಚೆನ್ನಾಗಿದೆ ಮತ್ತು ಚಿತ್ರ ಬಹಳ ಸುಂದರವಾಗಿ ಮೂಡಿ ಬಂದಿದೆ
ಮಾಸ್ತಿಯವರು ಹೆಂಗೆಳೆಯರ ಮನಸ್ಸನ್ನು ಚೆನ್ನಾಗಿ ಅರಿತಿದ್ದಾರೆ. ನಾವೆಲ್ಲ ಒಮ್ಮೆಯಾದರೂ ಹಾಗೆ ಖಂಡಿತಾ ಯೋಚಿಸಿರುತ್ತೇವೆ. ಕಿರಣ್ ಅವರ ಚಿತ್ರಕ್ಕೆ ಮನ ಸೋಲುತ್ತದೆ.
ರವಿಕೆಖಣ ದ ಬಗ್ಗೆ ಬರೆದಿರುವ ಲೇಖನ ಬಹಳ ಚೆನ್ನಾಗಿದೆ. ಸಾಂದರ್ಭಿಕ ಚಿತ್ರ ಸು಼ಂದರವಾಗಿದೆ.
ಮಾಸ್ತಿ ಅವರ ಮಾತಿನಷ್ಟೇ ಕಿರಣ ರವರ ಚಿತ್ರಣ ಸೊಗಸು… 👍
ಸರಳ ಸುಂದರ ಚಿತ್ರಣ
ಪದಗಳಲ್ಲಿ ಕಟ್ಟಿದ ಹೆಣಿಗೆ
ಮನ ಮುಟ್ಟಿತು
ಚೆಂದದ ಭಾವದ ಸಾಲುಗಳು