ರಾಜ್ಯ ಅಥವಾ ಪ್ರಾಂತ್ಯವೊಂದಕ್ಕೆ, ಚಂಡಮಾರುತವೋ, ಬರಗಾಲವೋ ಅಪ್ಪಳಿಸಿದರೆ ಇತರೆ ಎಲ್ಲ ರಾಜ್ಯಗಳು ಅವುಗಳ ನೆರವಿಗೆ ಧಾವಿಸುತ್ತವೆ. ದೇಶವೊಂದಕ್ಕೆ ಸುನಾಮಿಯಂತಹದ್ದು ಬಂದೆರಗಿದರೆ ದೇಶ -ವಿದೇಶದ ಮನಗಳು ಮಿಡಿದು ಸಹಾಯ ಹಸ್ತ ಚಾಚುತ್ತವೆ. ಕರೋನದಂತ ವಿಶ್ವವ್ಯಾಪಿ ಹೊಸವ್ಯಾಧಿಯೊಂದು ಪ್ರಪಂಚವನ್ನೇ ತತ್ತರಿಸುವಂತೆ ಮಾಡುವುದರ ಜೊತೆಗೆ,ಎಲ್ಲ ಸಂಪರ್ಕ ವ್ಯವಸ್ಥೆಗಳೂ ಸ್ಥಗಿತವಾದರೆ ಯಾರು ಯಾರಿಗೆ ಸಹಾಯ ಮಾಡಬಹುದು?
ತಲೆಮಾರುಗಳು ಕಂಡರಿಯದ ಮಹಾಮಾರಿಯೊಂದು ಕಾಣಿಸಿದಾಗ ಕಷ್ಟ ಕಾಲಕ್ಕೆ ಎಂದೇ ಇರುವ ಹಲವು ವ್ಯವಸ್ಥೆಗಳು ಪ್ರಯೋಜನಕ್ಕೆ ಬಾರದಾದವು.ಜಗತ್ತಿನ ಬಹುತೇಕ ಎಲ್ಲ ದೇಶಗಳಿಗೆ ಅಲೆ ಅಲೆಯಾಗಿ ಅಪ್ಪಳಿಸುತ್ತಲೇ ಇರುವ ಈ ಕರೋನ ಸಮಯದಲ್ಲಿ ದೇಶಗಳು ಇತರ ದೇಶಗಳಿಗೆ ಬಾಗಿಲು ಮುಚ್ಚಿದ್ದೇ ಮೊದಲ ಹೆಜ್ಜೆಯಾಯಿತು. ನೆರವಿನ ಕೆಲವು ಬಾಗಿಲುಗಳನ್ನು ತೆರೆದಿಟ್ಟುಕೊಂಡರೂ ಬೇರೆಡೆಯಿಂದ ಮನುಷ್ಯ ಮುಖೇನ ಬರಬಹುದಾದ ನೇರ ನೆರವುಗಳು ಸಾಧ್ಯವಾಗಲಿಲ್ಲ.
ಅಷ್ಟಕ್ಕೂ ಪ್ರತಿ ದೇಶದ ಜನರಿಗೆ ಅವರದೇ ದೇಶಕ್ಕೆ ನೆರವು ನೀಡಬೇಕಾದ ಆದ್ಯ ಕರ್ತವ್ಯಗಳಿದ್ದವು.ಪ್ರತಿ ಸರಕಾರಕ್ಕೂ ತಮ್ಮದೇ ದೇಶಕ್ಕೆ ಬಂದ ವಿಪತ್ತಿನಿಂದ ಪಾರಾಗುವ, ಆರ್ಥಿಕ ಬಿಕ್ಕಟ್ಟುಗಳಿಂದ ಹೊರಬರುವ, ಜೀವಗಳನ್ನು ಉಳಿಸುವ ಜವಾಬ್ದಾರಿಗಳು ಬೆನ್ನೇರಿದವು. ಈ ಹಿನ್ನೆಲೆಯಲ್ಲಿ ಜನಸಾಮಾನ್ಯರು ಇತರೆ ಜನಸಾಮಾನ್ಯರ ಹಿತಕ್ಕಾಗಿ ಮೆರೆದ ಮಾನವೀಯತೆಯ ಕಥೆಗಳು ಮನುಷ್ಯತ್ವದ ಹಿರಿಮೆಗಳ ಮತ್ತೊಂದು ಮಹಾ ದರ್ಶನವನ್ನು ಮಾಡಿಸಿದೆ.
ಕೋವಿಡ್-19 ಮನುಕುಲವನ್ನು ಅಲ್ಲೋಲ ಗೊಳಿಸಿದ ಜೊತೆ ಜೊತೆಯಲ್ಲೇ ಮಾನವೀಯತೆಯು ಅದಕ್ಕೆ ಸರಿ ಸಮನಾಗಿ ಪ್ರಪಂಚದಾದ್ಯಂತ ಎದ್ದು ನಿಂತ ಹಲವು ಪರಿಗಳು ಅಸದಳವೆನಿಸಿದವು. ಈ ಮಾನವರು ತಮ್ಮ ತಮ್ಮದೇ ರೀತಿಯಲ್ಲಿ ಸಮಸ್ಯೆಯನ್ನು ಮಿತಗೊಳಿಸಲು ನೀಡಿದ ಸೇವೆ, ಸಹಕಾರ, ಶ್ರಮದಾನ, ದಾನ, ಮೆರೆದ ಕರ್ತವ್ಯ ಪ್ರಜ್ಞೆಗಳು ಮನುಷ್ಯತ್ವವನ್ನು ಮತ್ತೊಮ್ಮೆ ಎತ್ತಿ ಹಿಡಿಯಿತು. ಆತಂಕದಿಂದ ತಲ್ಲಣಗೊಂಡ ಮನಸ್ಸುಗಳನ್ನು ಸಂತಸದ, ಮೆಚ್ಚುಗೆಯ, ಕೃತಜ್ಞತೆಯ ಬೆಚ್ಚಗಿನ ಹನಿಗಳಿಂದ ಒದ್ದೆಯಾಗಿಸಿದವು.
ಮಾಧ್ಯಮಗಳು ಸುದ್ದಿ ಮಾಡಿದ್ದು ಪ್ರಸಿದ್ಧ ಸಿನಿಮಾತಾರೆಗಳು, ಉದ್ಯಮಿಗಳು, ಶ್ರೀಮಂತರು, ಸಮಾಜ ಸೇವಕ ಸಂಸ್ಥೆಗಳು, ಸೆಲೆಬ್ರಿಟಿಗಳು ನೀಡಿದ ದೊಡ್ಡ ಮೊತ್ತದ ಹಣ, ಊಟ, ಮೃಗಾಲಯದ ಪ್ರಾಣಿಗಳ ಉಸ್ತುವಾರಿಗೆ ನೀಡಿದ ದೇಣಿಗೆ, ನಿರಾಶ್ರಿತ ಬಡಜನರಿಗೆ, ವಲಸಿಗ ಕಾರ್ಮಿಕರ ಊಟಕ್ಕೆ, ರೈತರ ಸಂಕಷ್ಟಗಳಿಗೆ, ಮತ್ತಿತರ ಸಹಾಯಕ ಕೆಲಸಗಳಿಗೆ ಹಲವು ಮೂಲಗಳ ಮುಖೇನ ಭರ್ಜರಿ ಕೊಡುಗೆಗಳನ್ನು ನೀಡಿದ ಬಗ್ಗೆ. ಇದರ ಅಗತ್ಯವೂ ಇದೆಯೆನ್ನಿ. ಇವರ ದಾನಗಳು ಸರಕಾರಗಳು ಕರೋನ ಸಂಬಂಧಿತ ಸಮಸ್ಯೆಗಳನ್ನು ಸಂಭಾಳಿಸಲು ನೆರವಾದವು. ಇವರುಗಳ ಕೊಡುಗೆಯನ್ನು ನೆನೆಯದಿರಲು ಸಾಧ್ಯವಿಲ್ಲ.
ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಜನಸಾಮಾನ್ಯರ ಮನಮುಟ್ಟುವ ಅತ್ಯುತ್ತಮ ಸೇವಾ ಮನೋಭಾವಗಳ ಹಲವು ಉದಾಹರಣೆಗಳು ಹರಿದಾಡಿದವು. ಮಾಧ್ಯಮಗಳೂ ಜೊತೆಗೂಡಿದವು. ದೇಶೀಯ, ವಿದೇಶೀಯ ಸುದ್ದಿಗಳು ಮತ್ತು ವಿಡಿಯೋಗಳು ಎಲ್ಲ ಜನರ ಮಾನವೀಯ ಆಶಯಗಳನ್ನು, ಒಬ್ಬರಿಗೆ ಒಳಿತು ಮಾಡಬೇಕೆನ್ನುವ ಮನುಷ್ಯನ ಉನ್ನತ ಧ್ಯೇಯಗಳನ್ನು ಎತ್ತಿಹಿಡಿದವು. ಒಬ್ಬನ ಕಷ್ಟಕಾಲದಲ್ಲಿ ಇನ್ನೊಬ್ಬನು ಅವನನ್ನು ಬಗ್ಗು ಬಡಿಯದೆ ಮಾನವೀಯತೆಗಳನ್ನು ಮೆರೆದ ಉದಾಹರಣೆಗಳು ಮನೆಮಾತಾದವು.
ಉದಾಹರಣೆಗೆ ಮೈಸೂರಿನ ಹಳ್ಳಿಯೊಂದರ ಮಹಿಳೆಯೊಬ್ಬಳು ತನಗೆ ಅಕಸ್ಮಿಕ ಸಿಕ್ಕ ಎರಡನೇ ಉಚಿತ ಊಟದ ಪೊಟ್ಟಣವನ್ನು ಮತ್ತೊಬ್ಬರಿಗೆ ಸಿಗಲಿ ಎನ್ನುವ ಆಶಯದೊಂದಿಗೆ ಹಿಂತುರುಗಿಸಿ ಸಧ್ಬುದ್ದಿಯನ್ನು ಮೆರೆದಳು. ದೇಶವನ್ನೆಲ್ಲ ಕೊಳ್ಳೆಹೊಡೆದು ತಾವೊಬ್ಬರೇ ನುಂಗಿಬಿಡೋಣ ಎನ್ನುವಂತಹ ಮನೋಭಾವದ ಜನರ ಬಗ್ಗೆ ಇತರರು ಮನಸ್ಸಿನಲ್ಲೇ ಮತ್ತೊಮ್ಮೆ ಬಹಿಷ್ಕಾರ ಹಾಕುವಂತೆ ಮಾಡಿದಳು.
ಅಸಂಖ್ಯಾತ ಜನರುಯಾವುದೇ ಹೆಸರು ಪ್ರಶಸ್ತಿಗಳ ಹಂಗಿಲ್ಲದೆ ಇತರೆ ಜನರಿಗೆ ಅನ್ನ ಹಾಕಿದರು. ಬೀದಿಬದಿಯ ನಾಯಿ,ಬೆಕ್ಕುಗಳ ಹಸಿವನ್ನು ಹಿಂಗಿಸಿದರು. ದನ- ಕರು- ಪ್ರಾಣಿ ಪಕ್ಷಿಗಳಿಗೆ ನೀರುಡಿಸಿದರು. ಹಸಿವಿನಿಂದ ಕಂಗೆಟ್ಟ ಕೋತಿಗಳಿಗೆ ಆಹಾರ ನೀಡಿದರು. ಹಲವು ಸಣ್ಣ ಪುಟ್ಟ ಅಂಗಡಿಗಳು, ಹೋಟೆಲಿಗರು, ರೆಸ್ಟೋರೆಂಟುಗಳು ತಮಗಾದ ಮಟ್ಟಗಳಲ್ಲಿ ಜನರಿಗೆ ಊಟಗಳನ್ನು ನೀಡಿ ವಸತಿಯನ್ನು ಕಲ್ಪಿಸಿದರು. ಮನುಷ್ಯರಿಂದ ದೂರವಿರಬೇಕಾದ ಸಂಧರ್ಭದಲ್ಲಿ ಮನುಷ್ಯತ್ವದಿಂದ ದೂರಾಗದ ಇವರು ಬೇಡಿದವರ ಪಾಲಿಗೆ ದೇವರುಗಳಾದರು.ತಮ್ಮ ಊಟವನ್ನೇ ಇತರರಿಗೆ ನೀಡಿದ ಮಹಾನ್ ಘಟನೆಗಳು ನಡೆದವು. ಭಾರತದ ಅತ್ಯುನ್ನತ ಮೌಲ್ಯಗಳಿಗೆಲ್ಲ ಈ ಕಾಲದಲ್ಲಿ ಜೀವ ಬಂದದ್ದು ಕಣ್ಣಿಗೆ ಕಟ್ಟಿತು.ಕರೋನ ಕಾಲದಲ್ಲಿ ಹೀಗೆ ಅಸಂಖ್ಯಾತ ಜನರು ದೇಶದಾದ್ಯಂತ ಮಾನವೀಯತೆಯನ್ನು ಮೆರೆದರು.
ಸ್ಪೇನಿನಮ್ಯಾಡ್ರಿಡ್ ನಗರದ ಒಬ್ಬ ಸಾಧಾರಣ ಟ್ಯಾಕ್ಸಿ ಚಾಲಕ ಆಸ್ಪತ್ರೆಗೆ ಬಂದು ಹೋಗುತ್ತಿದ್ದ ಎಲ್ಲ ಕರೋನ ರೋಗಿಗಳನ್ನು ಉಚಿತವಾಗಿ ಓಡಾಡಿಸುತ್ತಿದ್ದ. ಈ ಕಷ್ಟದ ಸಮಯದಲ್ಲಿ ಹಣ ತೆಗೆದುಕೊಳ್ಳದೆ ತನ್ನದೇ ದುಡ್ಡಿನಲ್ಲಿ ಇಂಧನ ತುಂಬಿಸಿ ಓಡಾಡಿಸುತ್ತ ಆನಾಮಧೇಯನಾಗಿ ತನ್ನದೇ ರೀತಿಯಲ್ಲಿ ಸಹಾಯ ಮಾಡುತ್ತ ಜನ ಸೇವೆ ಮಾಡುತ್ತಿದ್ದ. ಪ್ರತಿ ರೋಗಿಯ ರವಾನೆಯ ನಂತರ ಟ್ಯಾಕ್ಸಿಯನ್ನು ಶುದ್ಧಗೊಳಿಸುತ್ತಿದ್ದ. ವೈಯಕ್ತಿಕವಾಗಿ ಜನರೇ ಹೊರಗೆ ಬರದ ಸಮಯದಲ್ಲಿ ಅವನ ಆದಾಯ ಮೂಲಕ್ಕೇ ಕೊಡಲಿ ಬಿದ್ದರೂ ಸೇವೆಯ ವಿಚಾರದಲ್ಲಿ ಆತ ಹಿಂದುಳಿದಿರಲಿಲ್ಲ.ಇದನ್ನು ಗಮನಿಸಿದ ಆಸ್ಪತ್ರೆಯ ಸಿಬ್ಬಂದಿಗಳು, ವೈದ್ಯರು ಒಂದಷ್ಟು ಹಣವನ್ನು ಒಟ್ಟುಗೂಡಿಸಿ ಆತನಿಗೆ ಟ್ಯಾಕ್ಸಿ ಬೇಕೆಂದು ಫೋನಾಯಿಸಿದರು. ಇದಾವ ಅರಿವೂ ಇಲ್ಲದೆ ಕಂದಿ ಹೋಗಿದ್ದ ಆತನ ಟ್ಯಾಕ್ಸಿ ವ್ಯವಹಾರವನ್ನು ಲೆಕ್ಕಿಸದೆ ತನ್ನ ಉಚಿತ ಸೇವೆಯನ್ನು ಮುಂದುವರೆಸಲು ನಿಷ್ಕಾಮ ಮನಸ್ಸಿನಿಂದ ಬಂದ ಅವನನ್ನು ಆಸ್ಪತ್ರೆಯ ಬಾಗಿಲಲ್ಲೇ ಎಲ್ಲರೂ ಕೈ ಚಪ್ಪಾಳೆಯ ಮೂಲಕ ಸ್ವಾಗತಿಸಿ ತಮ್ಮ ಮೆಚ್ಚುಗೆಯ ಜೊತೆ ಸಂಗ್ರಹಿಸಿದ ಹಣವನ್ನು ನೀಡಿದರು.ಇದರಿಂದ ಮೂಕ ವಿಸ್ಮಿತನಾದ ಅವನ ಕಣ್ಣುಗಳಿಂದ ಆನಂದ ಭಾಷ್ಪಗಳು ಸುರಿದವು. ಗಾರ್ಡಿಯನ್ ಪತ್ರಿಕೆಯ ಈ ವಿಡಿಯೋ ನೋಡಿದ
3.2 ಮಿಲಿಯನ್ ಮಂದಿಯ ಕಣ್ಣುಗಳೂ ತೇವವಾದವು.ಇಲ್ಲಿ ಮನುಷ್ಯ ಇನ್ನೊಬ್ಬನಿಗೆ ನೆರವಾದ್ದು, ಅದನ್ನು ಇತರರು ನೇರವಾಗಿ ಅಭಿನಂದಿಸಿದ್ದು ಮಾನವನ ಉತ್ತಮ ಮುಖಗಳಿಗೆ ಕನ್ನಡಿ ಹಿಡಿಯಿತು. ಮಿಲಿಯನ್ ಗಟ್ಟಲೆ ಇತರೆ ಜನರ ಉತ್ತಮ ಭಾವನೆಗಳನ್ನು ಬಡಿದೆಬ್ಬಿಸಿತು.
ಸ್ಕಾಟ್ ಲ್ಯಾಂಡಿನಲ್ಲಿ ಸಣ್ಣದೊಂದು ಅಂಗಡಿಯ ದಂಪತಿಗಳು ಕರೋನ ಕಿಟ್ ಗಳನ್ನು ಜನರಿಗೆ ದಾನ ಮಾಡಿದರು.ಇತ್ತ ಇಂಗ್ಲೆಂಡಿನಲ್ಲಿ ಜನ ಸೇವೆ ಮಾಡಲು ವಯಸ್ಸು ಅಥವಾ ಸ್ಥಿತಿವಂತಿಕೆಗೆ ಲೆಕ್ಕವೇ ಇಲ್ಲ ಎಂದು ಸಾಬೀತು ಪಡಿಸಿದವನು ಸೇನೆಯಿಂದ ನಿವೃತ್ತನಾದ ಕ್ಯಾಪ್ಟನ್ ಟಾಂ ಮೂರ್ ಎನ್ನುವ 99 ವರ್ಷದ ಹಣ್ಣು ಹಣ್ಣು ಮುದುಕ.
ಭಾರತ, ಬರ್ಮ, ಸುಮಾತ್ರ ದೇಶಗಳಲ್ಲಿ ಎರಡನೇ ಮಹಾಯುದ್ದದ ಕಾಲದಲ್ಲಿ ಬ್ರಿಟನ್ನಿನ ಪರವಾಗಿ ಕೆಲಸ ಮಾಡಿದ್ದ ಈತ ಇಂತದೇ ಪ್ಯಾಂಡೆಮಿಕ್ ಒಂದು (1918-20 ರ ಸ್ಪಾನಿಶ್ ಫ್ಲೂ) ಪ್ರಪಂಚವನ್ನು ಸತಾಯಿಸುತ್ತಿದ್ದಾಗಲೇ ಏಪ್ರಿಲ್ 30, 1920 ರಲ್ಲಿ ಹುಟ್ಟಿದವನು.ತನ್ನ ಜೀವಿತದಲ್ಲಿ ಎರಡನೇ ಪ್ಯಾಂಡಮಿಕ್ ನೋಡಿದವನು. ಸರ್ಕಾರ 70 ರ ಮೇಲ್ಪಟ್ಟವರನ್ನು ಯಾರೊಡನೆಯೂ ಬೆರೆಯದಿರಲು ಸಲಹೆ ನೀಡಿದ್ದರೂ ಜನರಿಗೆ ಕೈಲಾದ ಸಹಾಯ ಮಾಡದೆ ಸುಮ್ಮನಿರಲು ಈತನ ಮನಸ್ಸಿನ ತುಡಿತ ಬಿಡಲಿಲ್ಲ. ತನ್ನ ಮಗಳ ಸಹಾಯದಿಂದ ಒಂದು ಲಕ್ಷದಷ್ಟು (£1000) ಹಣವನ್ನು ದೇಣಿಗೆ ಎತ್ತುವ ಗುರಿಹೊತ್ತು ಒಂದು ಸಾಮಾಜಿಕ ತಾಣವನ್ನು ಆರಂಬಿಸಿದ.ತನ್ನ ಮನೆಯ ಕಾಂಪೌಂಡಿನಲ್ಲಿ ನೂರು ಬಾರಿ ಓಡಾಡಲು ಪಣತೊಟ್ಟ. ಓಡಾಡಲು ಝಿಮ್ಮರ್ ಫ್ರೇಂ ಹಿಡಿಯಬೇಕಿದ್ದ ಈತ ಅದನ್ನು ಹಿಡಿದೇ 2.5 ಕಿ.ಮೀ ನಡೆದಾಡಿದ. ನೂರು ವರ್ಷದ ಈತನ ಈ ಆಮೋಘ ಮಾನಸಿಕ ಸಂಕಲ್ಪ ಅದೆಷ್ಟು ಜನರಲ್ಲಿ ಸಹಾಯ ಮಾಡುವ ಮನಸ್ಸನ್ನು ಸೃಷ್ಟಿಸಿತೆಂದರೆ, £1000 ದ ಬದಲು1.5 ಮಿಲಿಯನ್ ಜನರು £32,795,065 ಮಿಲಿಯನ್ ಹಣವನ್ನು ದಾನಕ್ಕೆ ನೀಡಿದರು. ದಾನಗಳನ್ನು ಗೌರವಿಸುವ ಗಿಫ್ಟ್ ಏಡ್ ಎನ್ನುವ ಯೋಜನೆಯಡಿ £6,173,663.31 ಹಣ ಇದಕ್ಕೆ ಸೇರಿಕೊಂಡಿದೆ. ಎಲ್ಲವೂ ಸೇರಿ ಹತ್ತಿರ ಹತ್ತಿರ 39 ಮಿಲಿಯನ್ ಪೌಂಡುಗಳ ಮೊತ್ತ ದಾನಕಾರ್ಯಕ್ಕೆ ದೊರಕಿತು.ಇಂಗ್ಲೆಂಡಿನ ರಾಣಿ 100ವರ್ಷದ ಈ ಅತಿ ಮಾನವನಿಗೆ ಮೇ 20 ರಂದು ನೈಟ್ ಹುಡ್ ಬಿರುದನ್ನು ನೀಡಿ ಗೌರವಿಸಿದಳು. ’ಯು ವಿಲ್ ನೆವರ್ ವಾಕ್ ಅಲೋನ್ ’ ಎಂದು ಇವನನ್ನು ಕುರಿತು ಮಾಡಿದ ಹಾಡು ಯು.ಕೆ ನಂಬರ್ ಒನ್ ಆಗಿ, ಅತಿಹೆಚ್ಚು ವಯಸ್ಸಿನ ವ್ಯಕ್ತಿ ಈ ಪಟ್ಟಕ್ಕೇರಿದ ದಾಖಲೆಯನ್ನೂ ಸೃಷ್ಟಿಸಿದೆ.
ಕ್ಯಾಪ್ಟನ್ ಟಾಂ ಆಷ್ಟೂ ಹಣವನ್ನು ಇನ್ನೂರಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ದಾನಮಾಡಿದ್ದಾನೆ.ಅಂತೆಯೇ ಚಿಕ್ಕ ವಯಸ್ಸಿನವರು ತೋರಿದ ಮಾನವೀಯತೆಗಳು ಕೂಡ ಸುದ್ದಿ ಮಾಡಿವೆ. ಇತ್ತೀಚೆಗೆ ರಾಂಚಿಯ 12 ವರ್ಷದ ನಿಹಾರಿಕಾ ದ್ವಿವೇದಿ ತನ್ನ ಉಳಿತಾಯದ ಹಣವನ್ನೆಲ್ಲ ಮೂವರು ವಲಸೆ ಕಾರ್ಮಿಕರ ವಿಮಾನ ಪ್ರಯಾಣಕ್ಕೆ ದೇಣಿಗೆಯಾಗಿ ನೀಡಿದ್ದಾಳೆ. 48,000 ರೂಪಾಯಿ ದೇಣಿಗೆ ನೀಡಿದ ಈಕೆ ಮೂವರು ಕಾರ್ಮಿಕರು ಕರೋನ ಕಾಲದಲ್ಲಿ ಮನೆಗೆ ಬಂದು ಸೇರಲು ನೆರವಾಗಿದ್ದಾಳೆ.
ಮತ್ತೆ ಕೆಲವರು ಆಗಾಗಲೇ ಬುಕ್ ಮಾಡಿದ್ದ ಕಲಾ ಪ್ರದರ್ಶನಗಳ, ಆಟೋಟಗಳ ಪ್ರದರ್ಶನಗಳು ರದ್ದಾದ ಕಾರಣ ಹಿಂತಿರುಗಿ ಬಂದ ಹಣವನ್ನು ಕರೋನಾ ಕಾರ್ಯಾರ್ಥ ದಾನ ಮಾಡಿದ್ದಾರೆ.
ಸಮುದಾಯದ ಜನರು ತಮ್ಮ ಏರಿಯಾದಲ್ಲಿ ಬದುಕಿರುವ ಎಲ್ಲ ವಯಸ್ಸಾದ, ಕೈ ಲಾಗದವರ ಕಷ್ಟ ಸುಖಕ್ಕೆ ನೆರವಾಗಿ ಹೊರಗೆ ಓಡಾಡಲಾಗದ ಅವರ ಮನೆಗಳಿಗೆ ಆಹಾರ ಮತ್ತು ಔಷದಗಳನ್ನು ತಲುಪಿಸಿದ್ದಾರೆ. ಮನೆಗಳಲ್ಲೇ ಮಾಸ್ಕ್ ಗಳನ್ನು ಹೊಲಿದು ಜನರಿಗೆ ವಿತರಿಸಿದ್ದಾರೆ. ಊಟ ತಿಂಡಿಗಳ ಸರಬರಾಜನ್ನು ಕೋವಿಡ್ ಶ್ರಮಿಕರಿಗೆ ತಲುಪಿಸಿದ್ದಾರೆ.
ಇದು ವ್ಯಕ್ತಿಗಳು ಮಾಡಿದ ಸೇವೆಯಾದರೆ ಹಲವು ಸಂಘ ಸಂಸ್ಥೆಗಳು ತಮ್ಮ ಪ್ರಾಣದ ಹಂಗು ತೊರೆದು ಕೆಲಸ ಮಾಡಿದ ದಾದಿಯರು, ವೈದ್ಯರು, ಆಂಬ್ಯುಲೆನ್ಸ್ದ್ ಡ್ರೈವರ್ ಗಳು, ಅಂಚೆಯವರು ಹೀಗೆ ಎಲ್ಲ ಅತ್ಯಗತ್ಯ ಕೆಲಸಗಾರರಿಗೆ ಉಚಿತ ಊಟ, ತಿಂಡಿ, ಕಾಫಿಯ ಜೊತೆಗೆ ಅವರು ಖರೀದಿಸಿದ ಎಲ್ಲ ವಸ್ತುಗಳಿಗೆ ಒಂದು ಮಟ್ಟದ ರಿಯಾಯತಿ ನೀಡಿದ್ದಾರೆ. ಅವರು ಕ್ಯೂಗಳಲ್ಲಿ ನಿಂತು ಕಾಯದಂತೆ ಅವರಿಗೆ ವಿಶೇಷ ಪ್ರವೇಶ ನೀಡಿದ್ದಾರೆ.
ಹಣದ ಸಹಾಯವಲ್ಲದೆ ಶ್ರಮದಾನ ಮಾಡಿದವರ ಸಂಖ್ಯೆ ಎಣಿಸಲಾಗದಷ್ಟು ಜನರಿಂದ ಬಂದಿತು. ಅದರಲ್ಲೂ ಕರೋನ ರೋಗಿಗಳ ನಿಭಾವಣೆ, ಚಿಕಿತ್ಸೆ, ಶುಶ್ರೂಷೆ ಇತ್ಯಾದಿಗಳಿಗೂ ಇವರು ಮುಂದಾದರು. ಉದಾಹರಣೆಗೆ ಯುನೈಟೆಡ್ ಕಿಂಗ್ಡಂ ನಲ್ಲಿ ಕರೋನ ರೋಗಿಗಳಿಗಾಗಿಯೇ ನಾಲ್ಕು ಹೊಸ ಆಸ್ಪತ್ರೆಗಳನ್ನು ತೆರೆದರು. ಹರಿದು ಬರಲಿರುವ ಕರೋನ ಸೋಂಕಿತರ ಮಹಾಪೂರವನ್ನು ನಿಭಾಯಿಸಲು ಈಗಾಗಲೇ ಸೇವೆಯಿಂದ ನಿವೃತ್ತರಾದ ನರ್ಸ್, ಡಾಕ್ಟರ್ಗಳು, ಫೋನುಗಳಲ್ಲಿ ಕರೆ ಸ್ವೀಕರಿಸಲು ಜನರು ಮತ್ತು ಸಮುದಾಯಗಳಲ್ಲಿ ಇರುವ 1.5 ಮಿಲಿಯನ್ ಹೊರಬರಲಾಗದ ಜನರಿಗೆ ಸಹಾಯ ಮಾಡಲು ಸ್ವಯಂ ಸೇವಕರಿಗಾಗಿ 25 ಮಾರ್ಚ ರಂದು 250,000 ಸಾವಿರ ಜನರ ಅಗತ್ಯವಿದೆಯೆಂದು ಕರೆನೀಡಿತು. ಇದಕ್ಕೆ ಜನತೆ ಅದ್ಭುತವಾದ ಸ್ಪಂದನೆ ನೀಡಿತು. ಎರಡೇ ದಿನದಲ್ಲಿ 670,000 ಜನ ಸಹಾಯ ಮಾಡುತ್ತೇವೆಂದು ತಮ್ಮ ವಿವರಗಳನ್ನು ನೋಂದಾಯಿಸಿದರು.
ಶೂ ರಿಪೇರಿ ಮಾಡುವ ಅಂಗಡಿಯಿಂದ ಹಿಡಿದು ಇನ್ನೂ ಹಲವರು ತಮ್ಮ ವೃತ್ತಿಪರ ಸರ್ವೀಸ್ ಗಳನ್ನು ಕರೋನವನ್ನು ಓಡಿಸಲು ಪಣತೊಟ್ಟ ಎಲ್ಲರಗೂ ಉಚಿತವಾಗಿ ನೀಡಲು ತಯಾರಾದರು. ಸ್ವೀಡನ್ನಿನ ಐಕಿಯಾ ಎನ್ನುವ ರೀಟೈಲರ್ ತನ್ನಲ್ಲಿ ಬರ್ಡ್ ಫ್ಲೂ ಕಾರಣ ತರಿಸಿಕೊಂಡಿದ್ದ ಆದರೆ ಖರ್ಚಾಗದೆ ಉಳಿದಿದ್ದ 50,000 ಫೇಸ್ ಮಾಸ್ಕ್ ಗಳನ್ನು ಉಚಿತವಾಗಿ ಹಂಚಿದರು.
ಹಲವು ಮ್ಯೂಸಿಶಿಯನ್ ಗಳು ಲಾಕ್ ಡೌನಿನ ಕಾರಣ ಮನೆಯಲ್ಲೇ ಉಳಿದಿದ್ದ ಜನರ ಮೂಡ್ ನ್ನು ಸಡಿಲಗೊಳಿಸಲು ರಸ್ತೆಗಳಿಗೆ ಇಳಿದು ವಾದ್ಯಬಾರಿಸಿದರು. ಮನೆಗಳಲ್ಲೇ ತಮ್ಮ ಶೋ ಗಳನ್ನು ಮಾಡಿ ಉಚಿತವಾಗಿ ಅಂತರ್ಜಾಲದ ಮೂಲಕ ಭಿತ್ತರಿಸಿ ಸಹಕರಿಸಿದರು. ಸಾಹಿತಿಗಳು, ಕವಿಗಳು ಮತ್ತಿತರ ಎಲ್ಲ ಬಗೆಯ ಜನರು ಸೋಶಿಯಲ್ ಪ್ಲಾಟ್ ಫಾರಂ ಗಳ ಮೂಲಕ ರಂಜಿಸುವ ಮೂಲಕ ಜನರ ಮನೆ ಮತ್ತು ಮನಗಳನ್ನು ಹೊಕ್ಕರು.ಆಟಗಾರರೂ ಈ ನಿಟ್ಟಿನಲ್ಲಿ ಹಿಂದುಳಿಯಲಿಲ್ಲ. ಕಲಾವಿದರು, ಸಿನಿಮಾ ತಾರೆಗಳು, ಬಹುತೇಕ ಎಲ್ಲ ಉಳ್ಳವರೂ ತಮ್ಮ ದೇಣಿಗೆ ಮತ್ತು ಸೇವೆಯನ್ನು ನೀಡಿದವರೇ.
ಇನ್ನು ತಮ್ಮ ಪ್ರಾಣ ಹೋಗುವ ಸಾಧ್ಯತೆಗಳಿದ್ದರೂ ಕರ್ತವ್ಯಕ್ಕಾಗಿ ಹಗಲಿರುಳು ದುಡಿದ ವೈದ್ಯ, ದಾದಿ, ಪ್ಯಾರಮೆಡಿಕ್ ಗಳು, ಟ್ರಾಲಿಯನ್ನು ತಳ್ಳುವವರಿಂದ ಲ್ಯಾಬುಗಳಲ್ಲಿ ಪರೀಕ್ಷೆ ಮಾಡುವ ಸಿಬ್ಬಂದಿಯವರೆಗೆ ಎಲ್ಲರೂ ಜನರ ಬದುಕಿಗಳಿಗಾಗಿ ಹೋರಾಡಿದರು. ಈ ಕಾರಣ ಪ್ರಪಂಚವೇ ಇವರಿಗೆ ಆಭಾರಿಯಾಗಿದೆ.ಇವರಿಗಾಗಿ ಎಲ್ಲರ ಮನಗಳೂ ಮಿಡಿದವು.
ಪ್ರತಿ ದೇಶದಲ್ಲಿ ನಿಯಮ , ಕಟ್ಟಲೆ, ಶಿಸ್ತುಗಳನ್ನು ಕಾಪಾಡಲು ಶ್ರಮಿಸಿದ ಪೋಲೀಸರು ಮತ್ತು ಅವರಿಗೆ ಪೂರಕ ಸಿಬ್ಬಂದಿಗಳು ಕೂಡ ಅಭಿನಂದನಾರ್ಹರೇ.
ಕರೋನ ರೋಗಿಗಳ ಸೇವಗಾಗಿ ಆರೋಗ್ಯ ಸಂಬಂಧಿತ ಎಲ್ಲ ದುಡಿಮೆಗಾರರಿಗಾಗಿ ಪ್ರತಿದೇಶಗಳೂ ನಿಂತು ಚಪ್ಪಾಳೆ ತಟ್ಟಿದ್ದು ಕೂಡ ಇಂಥದ್ದೇ ಮಾನವೀಯ ಅಭಿನಂದನೀಯ ಗುಣದಿಂದ. ಚಪ್ಪಾಳೆ ತಟ್ಟಿಸಿಕೊಂಡವರ ಜೊತೆಗೆ ಚಪ್ಪಾಳೆ ತಟ್ಟಿದವರೂ ಕರೋನ ಕಾಲದಲ್ಲಿ ಮಾನವತೆಯನ್ನು ಮೆರೆದವರೇ.
ಆದರೆ ಸಾವು ನೋವುಗಳ ಈ ಕಾಲದಲ್ಲಿ ಅಪಾರ ಹಣ ಖರ್ಚು ಮಾಡಿ ಹೆಲಿಕ್ಯಾಪ್ಟರಿನಿಂದ ಪುಷ್ಪವೃಷ್ಟಿ ಮಾಡಿ ರಾಜಕೀಯ ಪ್ರದರ್ಶನಕ್ಕಿಳಿದ ಅಮೆರಿಕಾ ಮತ್ತು ಅದನ್ನು ಕರಾರುವಕ್ಕಾಗಿ ಕಾಪಿ ಕ್ಯಾಟ್ ನಂತೆ ಅನುಸರಿಸಿದ ಭಾರತದ ಧೋರಣೆಗಳು ಪ್ರಪಂಚದಾದ್ಯಂತ ಖಂಡನೆಗೊಳಗಾದವು.
ಗಂಡಸು ಹೆಂಗಸೆನ್ನದೆ, ಚಿಕ್ಕವರು ಹಿರಿಯರೆನ್ನದೆ, ಬಡವರು ಶ್ರೀಮಂತರು ಎನ್ನದೇ , ಸಾಮಾನ್ಯ ಸಿಲೆಬ್ರಿಟಿ ಎನ್ನದೆ ವ್ಯಕ್ತಿಗಳು, ಸಂಸ್ಥೆಗಳು, ಸಮುದಾಯಗಳು ಕರೋನ ಕಾಲದಲ್ಲಿ ನೆರವಾದ್ದರಿಂದಲೇ ನಾವು ಮತ್ತೊಂದು ಪ್ಯಾಂಡೆಮಿಕ್ ನಿಂದ ಹೊರಬರಲು ಸಹಾಯವಾಗುತ್ತಿದೆ.ಕರೋನಾ ಖಾಯಿಲೆಯಿಂದ ಗುಣ ಮುಖರಾದವರು ವೀರರಲ್ಲ.ಈ ರೋಗ ಬಂದಿಲ್ಲದಿದ್ದರೂ, ಬಂದು ಗುಣಮುಖರಾದ ನಂತರವೂ ಅದರ ವಿರುದ್ದ ನಿಂತು ಮಾನವೀಯತೆಯ ದೃಷ್ಟಿಯಿಂದ ಮನುಷ್ಯರ ಸೇವೆ ಮಾಡಿದ ಪ್ರತಿಯೊಬ್ಬ ಮಾನವನೂ ಅದರ ವಿರುದ್ಧ ಹೋರಾಡಿದ ವೀರನೇ.
ಕರೋನ ಕಾಲದಲ್ಲಿ ಸಾಮಾನ್ಯ ಮನುಷ್ಯನ ನಡತೆಯಲ್ಲಿ ಏನೇ ಲೋಪ ಕಂಡು ಬಂದಿದ್ದರೂ ಒಟ್ಟಾರೆ ಚಿತ್ರದಲ್ಲಿ ಆತನ ಮನುಷ್ಯತ್ವ, ಪರೋಪಕಾರ, ದಾನ ಎಲ್ಲವೂ ಎದ್ದು ನಿಂತಿವೆ.ಆ ಬಗ್ಗೆ ಸಮಾಧಾನ, ಅಭಿಮಾನ ಮತ್ತು ಸಂತೋಷ ಆಗುವುದು ಅತ್ಯಂತ ಸಹಜ.
ಕೊರೋನಾ ಕಾಲದ ಮಾನವೀಯತೆಯನ್ನು ಸಾರಿ ಹೇಳುವ ಆತ್ಮೀಯ ಬರಹ. ಒಂದೊಂದು ಘಟನೆಯೂ ನಮ್ಮನ್ನು ಭಾವುಕಗೊಳಿಸುವುದು – ಕೇಶವ
ಧನ್ಯವಾದಗಳು ಕೇಶವ ಕುಲಕರ್ಣಿಯವರೇ.