ಕೋವಿಡ್-19 ನಿಯಂತ್ರಣದ ಕುರಿತಂತೆ ಸುಮಾರು ಮೂರುವರೆ ಕೋಟಿ ಜನಸಂಖ್ಯೆ ಇರುವ, ಕೇವಲ ಎರಡು ರಾಜ್ಯಗಳ ಜತೆ ಗಡಿ ಹಂಚಿಕೊಂಡಿರುವ ಕೇರಳದ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ತೆಗೆದುಕೊಂಡ ಕ್ರಮಗಳ ಬಗ್ಗೆ ಅದ್ಧೂರಿಯ ಪ್ರಚಾರ ದೊರೆಯುತ್ತಲೇ ಸಾಗಿದೆ. ಆದರೆ ದೇಶದ ಅತಿದೊಡ್ಡ ರಾಜ್ಯ ಸುಮಾರು 20 ಕೋಟಿ ಗೂ ಹೆಚ್ಚು ಜನಸಂಖ್ಯೆಯುಳ್ಳ, ಕೈಗಾರಿಕೆಗಳು ಸಮೃದ್ಧವಾಗಿರುವ, ನಾನಾ ರಾಜ್ಯಗಳು ಮತ್ತು ನೇಪಾಳದ ಜತೆ ಗಡಿ ಹಂಚಿಕೊಂಡಿರುವ ಉತ್ತರ ಪ್ರದೇಶವು ಯಾವ ರೀತಿ ಈ ಸೋಂಕಿಗೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾಯಿತು ಎಂಬುದರ ಬಗ್ಗೆ ಅಷ್ಟಾಗಿ ಪರಿಚಯ ಆಗಿಲ್ಲ.
ಸಂಡೇ ಗಾರ್ಡಿಯನ್ ಇರಬಹುದು, ಪಾಕಿಸ್ತಾನ ಮೂಲದ ಡಾನ್ ಪತ್ರಿಕೆಯ ಸಂಪಾದಕರ ಸ್ವತಃ ಟ್ವೀಟ್ ಇರಬಹುದು, ಯೋಗಿಯ ಕಾರ್ಯಕ್ಷಮತೆಗೆ ಶಹಬ್ಬಾಸ್ ಗಿರಿ ಕೊಟ್ಟಿರುವುದಂತೂ ಸುಳ್ಳಲ್ಲ. ಹಾಗಾದರೆ ಈ ಸಾಂಕ್ರಾಮಿಕದ ವೇಗ ತಡೆಯಲು ಕೈಗೊಂಡ ಕ್ರಮಗಳಾದರೂ ಏನು ?
ಸವಾಲಿನ ತ್ವರಿತ ಅರಿವು
ಕೋವಿಡ್-19 ಹಾವಳಿಯ ಕುರಿತಂತೆ ಜಿಲ್ಲಾಡಳಿತದೊಂದಿಗೆ ಯೋಗಿ ವೀಡಿಯೊ ಕಾನ್ಫರೆನ್ಸ್ ನಡೆಸುತ್ತಿದ್ದ ಸಂದರ್ಭವದು. ಆಗ ಚೀಟಿಯೊಂದರಲ್ಲಿ ಬಂದ ಸಂದೇಶ ಅವರನ್ನು ಅಲುಗಾಡಿಸಿತ್ತು. ಆನಂದ್ ವಿಹಾರ್ ಬಸ್ ನಿಲ್ದಾಣದಲ್ಲಿ ಕೊರೊನಾ ಹಾವಳಿಯ ಬೆಳವಣಿಗೆಯ ತುಂಡು ವಿವರ ಅದರಲ್ಲಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಯೋಗಿ, ಅಲ್ಲಿ ಕೂಡಲೇ ಅಧಿಕಾರಿಯೊಬ್ಬರನ್ನು ನಿಯೋಜಿಸಿದರು. ಈ ರೀತಿ ಎದುರಾಗಿರುವ ಬೃಹತ್ ಸವಾಲನ್ನು ತಕ್ಷಣವೇ ಮನಗಾಣುವ ಜಾಣ್ಮೆಯನ್ನು ಪ್ರದರ್ಶಿದರು. ರಾಷ್ಟ್ರೀಯ ಲಾಕ್ ಡೌನ್ ಹಿನ್ನೆಲೆಯಲ್ಲಿ ಸಂಚಾರ ವ್ಯವಸ್ಥೆ ಸ್ಥಗಿತಗೊಂಡಿದ್ದರೂ, ತಕ್ಷಣವೇ ಗಾಝಿಯಾಬಾದ್ ಸೇರಿದಂತೆ ನಾನಾ ಕಡೆಗಳಿಗೆ ಬಸ್ ಗಳನ್ನು ಕಳುಹಿಸಿದರು. ಒಂದು ರಾತ್ರಿ ಕಳೆಯುವುದರೊಳಗೆ ವ್ಯವಸ್ಥೆ ಸಿದ್ಧವಾಗಿತ್ತು. ಅಂದು ರಾತ್ರಿ ಎಲ್ಲವನ್ನೂ ಪರಿಶೀಲಿಸಿದ ಬಳಿಕವಷ್ಟೇ ಮುಂಜಾನೆ 3 ಗಂಟೆ ಸುಮಾರಿಗೆ ಯೋಗಿ ನಿದ್ರೆಗೆ ಜಾರಿದರು ಎಂದು ಮೂಲಗಳು ಹೇಳುತ್ತಿವೆ.
ದೆಹಲಿ, ಬಿಹಾರ, ಉತ್ತರ ಪ್ರದೇಶಗಳಿಂದ ಬಂದ ಸುಮಾರು 1.5 ಲಕ್ಷದಷ್ಟಿದ್ದ ವಲಸೆ ಕಾರ್ಮಿಕರು ಒಂದೆಡೆ ಜಮಾವಣೆಯಾಗಿದ್ದರು. ಒಂದೆಡೆ ಸೋಂಕು ತಡೆಯುವ ಸವಾಲು, ಇನ್ನೊಂದೆಡೆ ಅವರ ನೋವಿಗೆ ಸ್ಪಂದಿಸಲೇಬೇಕಾದ ಅನಿವಾರ್ಯತೆ ಇವರೆಡನ್ನೂ ಅವರು ಸಮರ್ಪಕವಾಗಿ ನಿವಾರಿಸುವಲ್ಲಿ ಯಶಸ್ವಿಯಾದರು. ಇದರ ಹಿಂದೆ ಅವರ ಪ್ರಜ್ಞಾಪೂರ್ವಕ ಯೋಚನಾ ಶಕ್ತಿ ಇದ್ದುದೆ ಕಾರಣ ಎಂದು ಮುಖ್ಯಮಂತ್ರಿಯ ಮಾಧ್ಯಮ ಸಲಹೆಗಾರ ಮೃಂತ್ಯುಜಯ ಕುಮಾರ್ ಹೇಳುತ್ತಾರೆ.
ಪರಿಸ್ಥಿತಿಯ ಅವಲೋಕನ ಮತ್ತು ಅದರ ಸಮಗ್ರ ವಿವರ ನೀಡುವುದಕ್ಕಾಗಿಯೇ ಹಿರಿಯ ಐಎಎಸ್ ಅಧಿಕಾರಿಗಳನ್ನು ಅವರು ನೇಮಕ ಮಾಡಿದ್ದರು. ಅವರು 24 ಗಂಟೆಗಳೂ ಯೋಗಿ ಆದಿತ್ಯನಾಥ್ ಗೆ ವರದಿ ಸಲ್ಲಿಸುತ್ತಲೇ ಇರಬೇಕಾಗಿತ್ತು.
ಪೂರ್ವಭಾವಿ ತಯಾರಿ
ಲಖನೌ ಮೂಲದ ಅಧಿಕಾರಿ ವೃಂದದ ಪ್ರಕಾರ ಫೆಬ್ರವರಿ ತಿಂಗಳಲ್ಲೇ ಅಪಾಯ ಸುಳಿವನ್ನು ಯೋಗಿ ಕಂಡು ಕೊಂಡಿದ್ದು, ಆಗಲೇ ಪೂರ್ವಭಾವಿ ಸಿದ್ಧತೆಯನ್ನು ಆರಂಭಿಸಿದ್ದರಂತೆ. ಭಾರತದಲ್ಲಿ ಮೊದಲ ಪ್ರಕರಣ ಜನವರಿ 30ರಂದು ಪತ್ತೆಯಾಯಿತು. ಆಗಲೇ ಬೇಕಾದ ವ್ಯವಸ್ಥೆಯ ವಿಚಾರ ವಿಮರ್ಶೆ ನಡೆಸದಿದ್ದರೆ 20 ಕೋಟಿ ಜನರನ್ನು ರಕ್ಷಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ.
ಗ್ರಾಮ, ಬ್ಲಾಕ್ ಹಂತದಲ್ಲೇ ರೋಗದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಆರೋಗ್ಯ ಕೇಂದ್ರಗಳ ಸಿಬ್ಬಂದಿಗೆ ಅವಕಾಶವಾದ ಪ್ರಾಥಮಿಕ ತರಬೇತಿಯನ್ನೂ ಕೂಡ ನೀಡಲಾಯಿತು. ಭಾರತ-ನೇಪಾಳ ಗಡಿಯಲ್ಲಿ ಥರ್ಮೋ ಸ್ಕ್ರೀನಿಂಗ್ ವ್ಯವಸ್ಥೆ ಮಾಡಲಾಯಿತು. ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಕಂಟ್ರೋಲ್ ರೂಂ ಸ್ಥಾಪನೆಯಾಯಿತು. ಯಾವ ಹಂತದಲ್ಲೂ ಕೊರೊನಾ ಹಾವಳಿ ಕುರಿತ ಅಗತ್ಯ ಮಾಹಿತಿ ತಪ್ಪಿಹೋಗದಂತೆ ಎಚ್ಚರ ವಹಿಸಲಾಯಿತು ಎಂದು ಯೋಗಿ ಕಚೇರಿಯ ಅಧಿಕಾರಿಗಳು ವಿವರಿಸುತ್ತಾರೆ.
ಪ್ರತಿಚದರ ಅಡಿಗೆ 828 ಜನಸಂಖ್ಯೆಯ ದೇಶದ ಅತಿದೊಡ್ಡ ರಾಜ್ಯದಲ್ಲಿ ಪರಿಸ್ಥಿತಿ ಕೈಮೀರಿ ಹೋಗದಂತೆ ನೋಡಿಕೊಳ್ಳಲು ಸ್ವತಃ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವೈಯಕ್ತಿಕವಾಗಿ ಮುಂದಾಗಿದ್ದರು. ಇದಕ್ಕಾಗಿ ಟೀಮ್ 11 ಹೆಸರಿನ 11 ಜನ ಅಧಿಕಾರಿಗಳ ಪ್ರತ್ಯೇಕ ತಂಡವನ್ನೇ ರಚಿಸಿದ್ದರು. ಬಡವ-ಶ್ರೀಮಂತ ಎಂಬ ಭೇದವಿಲ್ಲದೆ ಒಬ್ಬನೇ ಒಬ್ಬನೂ ಕೋವಿಡ್-19 ಹಾವಳಿಯಿಂದ ಸಮಸ್ಯೆ ಎದುರಿಸುವಂತಾಗಬಾರದು ಎಂಬುದು ಅವರ ಧ್ಯೇಯವಾಗಿತ್ತು. ಹೀಗಾಗಿ ಹಾವಳಿ ನಿಯಂತ್ರಣದ ನಿಟ್ಟಿನಲ್ಲಿ ಅಧಿಕಾರಗಳು, ಸಚಿವರನ್ನು ನೆಚ್ಚಿಕೊಳ್ಳದೆ ತಾವೇ ಸ್ವತಃ ನಿರ್ದೇಶನಗಳನ್ನು ನೀಡುತ್ತಿದ್ದರು. ಇದರಿಂದ ಅಧಿಕಾರಿಶಾಹಿಯಲ್ಲಿ ಆಗುವ ಗೊಂದಲ ತಪ್ಪಿಹೋಯಿತು ಎಂದು ಮೃತ್ಯುಂಜಯ ಕುಮಾರ್ ಹೇಳುತ್ತಾರೆ.
ಬಡವರಿಗೆ ಸಹಾಯ
ದಿನಗೂಲಿ ನೌಕರರ ಸಮಸ್ಯೆಗಳ ಅರಿವಿದ್ದ ಯೋಗಿ, ಇವರಿಗೆ ಆರ್ ಟಿಜಿಎಸ್ ವ್ಯವಸ್ಥೆಯ ಮೂಲಕ ಆರ್ಥಿಕ ನೆರವು ನೀಡಲು ಮಾ. 17ರಂದೇ ಉನ್ನತಾಧಿಕಾರ ಸಮಿತಿಯೊಂದನ್ನು ರಚಿಸಿದ್ದರು. ಇದರ ಮೂಲಕ ಪ್ರತಿಯೊಬ್ಬರ ಖಾತೆಗೂ 1,000 ರೂ. ವರ್ಗಾವಣೆಯಾಗಿ 20.37 ಲಕ್ಷ ನೋಂದಾಯಿತ ಕಾರ್ಮಿಕರು ಇದರ ಲಾಭ ಪಡೆದರು. ಜತೆಗೆ ಕೇವಲ 15 ದಿನಗಳಲ್ಲಿ 15 ಲಕ್ಷ ಇತರ ಕಾರ್ಮಿಕರ ಡೇಟಾಬೇಸ್ ಸಿದ್ಧಪಡಿಸಿ ಅವರಿಗೆ ಕೂಡ ನೆರವು ಒದಗಿಸಲಾಯಿತು. ಇನ್ನು ಉಚಿತ ಪಡಿತರ ವಿತರಣೆ ಬಿಡಿ, 51 ಆಸ್ಪತ್ರೆಗಳು ಸಿದ್ಧವಾದರೆ, 19 ಕೋವಿಡ್ ವಿಂಗ್ ರಚನೆಯಾಯಿತು. ತರಕಾರಿ, ಹಾಲು ಸೇರಿದಂತೆ ಆವಶ್ಯಕ ವಸ್ತುಗಳ ಸಾಗಣೆಗಾಗಿಯೇ ರಾಜ್ಯಾದ್ಯಂತ 43,000 ವಾಹನಗಳು ಸಿದ್ಧವಾದವು. ಮಾ. 22ರ ಸುಮಾರಿಗೆ 16 ಜಿಲ್ಲೆಗಳಲ್ಲಿ ಕೊರನಾ ಹಾವಳಿಯ ಲಕ್ಷಣ ಕಂಡು ಬಂದ ಕೂಡಲೇ ಗೊಂದಲವಿಲ್ಲದೆ ತಕ್ಷಣವೇ ಕ್ರಮ ಕೈಗೊಳ್ಳುವಂತೆ ನೇರ ನಿರ್ದೇಶನ ನೀಡಿದರು.
ಸದ್ದಿಲ್ಲದ ಕ್ರಮಕ್ಕೆ ಶ್ಲಾಘನೆ
ಹೀಗೆ ಯಾವುದೇ ಸದ್ದುಗದ್ದಲವಿಲ್ಲದೆ ಜಾಗರೂಕತೆಯಿಂದ ಮತ್ತು ಪೂರ್ವಾಲೋಚನೆಯಿಂದ ಕೊರೊನಾ ತಡೆಗೆ ಕೈಗೊಂಡ ಯೋಗಿ ಕ್ರಮ ಭಾರತ ಮಾತ್ರವಲ್ಲ ವಿಶ್ವದೆಲ್ಲೆಡೆ ಅತೀವ ಶ್ಲಾಘನೆಗೆ ಪಾತ್ರವಾಗಿದೆ.
<Look at this graph carefully. It compares death rate of Pakistan and Indian state of UP. Both have roughly same population profile & literacy. Pakistan has lesser density/km and higher GDP/capita. UP was strict with lockdown. We were not. See diff in death rate #COVIDー19
— Fahd Husain (@Fahdhusain) June 7, 2020
(1/2) pic.twitter.com/so8SgEtjCw
ಪಾಕಿಸ್ತಾನದ ಪ್ರಮುಖ ದಿನಪತ್ರಿಕೆ ಡಾನ್ ಸಂಪಾದಕ ಫಹಾದ್ ಹುಸೇನ್ ಕೂಡ ಈಗ ಯೋಗಿ ಕೆಲಸ ಮೆಚ್ಚಿದ್ದಾರೆ. ಲಾಕ್ ಡೌನ್ ಅನ್ನು ಸಮರ್ಪಕವಾಗಿ ನಿರ್ವಹಿಸಿದ್ದು ಇದಕ್ಕೆ ಕಾರಣ ಎಂದಿರುವ ಅವರು, ಪಾಕಿಸ್ತಾನ ಮತ್ತು ಉತ್ತರ ಪ್ರದೇಶಗಳಲ್ಲಿ ಕೋವಿಡ್-19ನಿಂದ ಆಗಿರುವ ಸಾವಿನ ಪ್ರಮಾಣವನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದಾರೆ. ಯಾಕೆಂದರೆ ಪಾಕ್ 20.8 ಕೋಟಿ ಜನಸಂಖ್ಯೆ ಹೊಂದಿದ್ದರೆ, ಉತ್ತರ ಪ್ರದೇಶ 22.5 ಕೋಟಿ ಜನಸಂಖ್ಯೆ ಹೊಂದಿದೆ. ಈ ವ್ಯತ್ಯಾಸವನ್ನು ನೋಡಿ ನಮ್ಮವರೂ ಪಾಠ ಕಲಿಯಬೇಕು ಎಂದಿದ್ದಾರೆ. ಮಹಾರಾಷ್ಟ್ರದ ಕುರಿತು ಕೂಡ ಗ್ರಾಫ್ ನೀಡಿರುವ ಅವರು, ಉತ್ತರ ಪ್ರದೇಶಕ್ಕೆ ಹೋಲಿಸಿದರೆ ಚಿಕ್ಕದಾಗಿರುವ ಮಹಾರಾಷ್ಟ್ರ ಯಾವ ರೀತಿ ವಿಫಲವಾಗಿದೆ ಎಂದು ವಿಶ್ಲೇಷಿಸಿದ್ದಾರೆ.
ಸರಕಾರಿ ಅಂಕಿ ಅಂಶಗಳ ಪ್ರಕಾರ ಉತ್ತರ ಪ್ರದೇಶದಲ್ಲಿ ಇದುವರೆಗೆ 12,088 ಪ್ರಕರಣಗಳು ವರದಿಯಾಗಿವೆ. ಒಟ್ಟು 7,292 ಜನರು ಗುಣಮುಖರಾಗಿದ್ದು, ಇದರಿಂದಾಗಿ ರಾಜ್ಯದಲ್ಲಿ ಸಕ್ರಿಯ ವೈರಸ್ ಪೀಡಿತರ ಪ್ರಮಾಣ 4,451ರಲ್ಲಿದೆ.
ಯೋಗಿಯರಂತಹ ನಾಯಕ ನಮ್ಮ ಭಾರತಕ್ಕೆ ಹೆಮ್ಮೆ. ಈ ತರಹದ ಲೇಖನ ಇಂತ ಪರಿಸ್ಥಿತಿಯಲ್ಲಿ ಜನರಿಗೆ ತಲುಪಿಸಲು ಮಾಧ್ಯಮಗಳ ಕರ್ತವ್ಯ.