21.2 C
Karnataka
Sunday, September 22, 2024

    ಬದುಕು ನಾವು ಅಂದುಕೊಂಡಂತೆ ತೀರಾ ನಿರ್ದಯಿ ಅಲ್ಲ

    Must read

    ಕೆಲವರಿಗೆ ಜೀವನದುದ್ದಕ್ಕೂ ಒಂದಾದ ಮೇಲೊಂದರಂತೆ ಕಷ್ಟಗಳು ಎದುರಾಗುತ್ತಲೇ ಇರುತ್ತದೆ, ಇನ್ನು ಕೆಲವರ ಬದುಕು ದುರಂತಗಳಿಂದಲೇ ಕೂಡಿರುತ್ತದೆ. ಆದಾಗ್ಯೂ ಬದುಕಿನ ಬಗ್ಗೆ ಎಂದಿಗೂ ಭರವಸೆಯನ್ನು ಕಳೆದುಕೊಳ್ಳುವುದಿಲ್ಲ. ತನ್ನ ಗುರಿ ತಲುಪುವವರೆಗೂ ಕಾರ್ಯಪ್ರವೃತ್ತರಾಗುತ್ತಾರೆ. ಇದು ಒಂದು ಕೆಟಗರಿಯವರಾದರೆ, ಮತ್ತೊಂದು ವರ್ಗಕ್ಕೆ ಸೇರಿದವರು ಬದುಕಿನಲ್ಲಿನಡೆಯುವ ಎಲ್ಲಾ ಘಟನೆಗಳನ್ನು ನೆನೆದು ವಿಧಿಬರಹಕ್ಕೆ ಶರಣಾಗಿಬಿಡುತ್ತಾರೆ.
    ಪ್ರತಿಯೊಬ್ಬರಿಗೂ ಕೂಡಾ ಒಂದಲ್ಲ ಒಂದು ಸಮಸ್ಯೆಗಳು ಕಾಡುತ್ತಲೇ ಇರುತ್ತದೆ. ಸಮಸ್ಯೆಗಳು ಮನುಷ್ಯನಿಗಲ್ಲದೇ ಮರಗಿಡಗಳಿಗೆ ಬರುತ್ತವೆಯೇ? ನಾವಂದುಕೊಂಡಂತೆ ಯಾರ ಬದುಕೂ ಕೂಡಾ ಹೂವಿನ ಹಾಸಿಗೆಯಾಗಿರುವುದಿಲ್ಲ. ಏನೋ ಸಾಧಿಸಬೇಕು ಎಂದುಕೊಂಡವರಲ್ಲಿ ಕೆಲವರಿಗೆ ಸಂಪನ್ಮೂಲಗಳ ಕೊರತೆ ಕಾಡಬಹುದು, ಮತ್ತೆ ಕೆಲವರಿಗೆ ಎಲ್ಲಾ ಇದ್ದೂ ಏನೂ ಸಾಧಿಸಲು ಸಾಧ್ಯವಾಗದೇ ಇರಬಹುದು. ಹಾಗಂತ ಬದುಕಿನ ಬಗ್ಗೆ ನಿರಾಶಾವಾದಿಗಳಾಗಬಾರದು.

    ಆಲ್ಟರ್‍ನೇಟಿವ್ ಇದೆ
    ಬದುಕು ನಾವಂದುಕೊಂಡಂತೆ ತೀರಾ ನಿರ್ದಯಿ ಅಲ್ಲ. ಪ್ರತಿಯೊಂದಕ್ಕೂ ಮತ್ತೊಂದು ಬದಲಿ ವ್ಯವಸ್ಥೆ ಇದ್ದೇ ಇರುತ್ತದೆ. ಹಲವು ಆಯ್ಕೆಗಳು ಇರುತ್ತವೆ. ಆದರೆ ನಾವು ಕಳೆದುಕೊಂಡ ಜಾಗದಲ್ಲೇ ಆಯ್ಕೆಗಳನ್ನು ಹುಡುಕಬಾರದು. ಬದುಕಿನಲ್ಲಿ ಕಷ್ಟಗಳು ಎದುರಾದಾಗ, ಕೆಲಸ ಕಳೆದುಕೊಂಡು ನಿರಾಸೆಗಳುಂಟಾದಾಗ ಅದಕ್ಕೊಂದು ಸೂಕ್ತವಾದ ಆಲ್ಟರ್‍ನೇಟಿವ್ ಹುಡುಕಿಕೊಂಡು ಬಿಡಬೇಕು.

    ನಕ್ಷತ್ರಗಳೆಡೆಗಿನ ನೋಟ

    ಭವಿಷ್ಯದ ಸುಂದರ ದಿನಗಳ ಬಗ್ಗೆ ಕನಸು ಕಾಣಲಾರದಷ್ಟು ಯಾರೂ ಕೂಡಾ ಬಡವರಲ್ಲ. ಬದುಕಿನ ಬಗ್ಗೆ ಸಕಾರಾತ್ಮಕ ಭಾವ ಹೊಂದಬೇಕು. ಎಷ್ಟೇ ಕಷ್ಟ ಬಂದರೂ ತಾನಿಟ್ಟ ಗುರಿಯ ಮರೆಯಬಾರದು.
    ಒಂದು ಜನಪದ ಕಥೆ ಹೀಗಿದೆ. ಬದುಕಿನಲ್ಲಿ ಒಬ್ಬ ವ್ಯಕ್ತಿ ಎಲ್ಲವನ್ನು ಕಳೆದುಕೊಳ್ಳುತ್ತಾನೆ. ನಾಲ್ಕೈದು ದಿನ ಹಸಿವಿನಿಂದಲೇ ಬಳಲುತ್ತಾನೆ. ಕೊನೆಗೆ ಕಾಡಿನೊಳಗೆ ಹೋಗಿ ತನ್ನ ಜೀವನ ಕೊನೆಗಾಣಿಸಲು ಮುಂದಾಗುತ್ತಾನೆ. ಆಗ ಅವನ ಮುಂದೆ ದೇವರು ಪ್ರತ್ಯಕ್ಷನಾಗಿ, ಯಾಕೆ ಏನಾಯ್ತು ಸಾಯುವ ನಿರ್ಧಾರ ಏಕೆ ಎಂದು ಪ್ರಶ್ನಿಸುತ್ತಾನೆ. ಆಗ ಆ ವ್ಯಕ್ತಿ ತನ್ನ ಕಷ್ಟವನ್ನು ತೋಡಿಕೊಳ್ಳುತ್ತಾನೆ. ಆಗ ದೇವರು ಹೇಳುತ್ತಾನೆ, “ಪ್ರತಿಯೊಬ್ಬರೂ ಕೂಡಾ ಅವರವರ ಬದುಕನ್ನು ಅವರವರೇ ರೂಪಿಸಿಕೊಳ್ಳಬೇಕು’ ಎಂದು.


    ಅಷ್ಟೊತ್ತಿಗೆ ಆ ಕಾಡಿನಲ್ಲಿ ಹಸಿದ ವಯಸ್ಸಾದ ನರಿಯೊಂದು ಆಹಾರಕ್ಕಾಗಿ ಹೊಂಚು ಹಾಕಿ ಕುಳಿತಿರುವುದನ್ನು ಆತ ಗಮನಿಸುತ್ತಾನೆ. ಆ ವ್ಯಕ್ತಿ ನರಿಯನ್ನು ಹಿಂಬಾಲಿಸುತ್ತಾನೆ. ದೂರದಲ್ಲಿ ಸಿಂಹ ತಾನು ಬೇಟೆಯಾಡಿದ ಜಿಂಕೆಯನ್ನು ತಿನ್ನುತ್ತಿರುತ್ತದೆ. ಹೊಟ್ಟೆ ತುಂಬಿದ ಬಳಿಕ ಸಿಂಹ ಅಲ್ಲಿಂದ ಹೊರಟು ಹೋಗುತ್ತದೆ. ತಕ್ಷಣವೇ ಹಸಿದ ನರಿ, ಸಿಂಹ ತಿಂದು ಬಿಟ್ಟ ಎಂಜಲು ಆಹಾರವನ್ನು ಸೇವಿಸಲು ಅಲ್ಲಿಗೆ ನೆಗೆಯುತ್ತದೆ. ಇದನ್ನು ಗಮನಿಸಿದ ವ್ಯಕ್ತಿ ದೇವರನ್ನು ಮತ್ತೆ ಪ್ರಶ್ನಿಸುತ್ತಾನೆ, “ನೋಡು ನೀನು, ಹಸಿದ ನರಿಯ ಹೊಟ್ಟೆಗೂ ಆಹಾರ ಸಿಗುವಂತೆ ಮಾಡಿದೆ. ನನ್ನನ್ನು ಯಾಕೆ ಈ ರೀತಿ ಬಳಲುವಂತೆ ಮಾಡಿದೆ?’ ಎಂದು.


    ಆಗ ದೇವರು ಉತ್ತರಿಸುತ್ತಾನೆ, “ನೀನೂ ಸಿಂಹವೇ, ನಿನ್ನನ್ನು ನಾನು ತೋಳನನ್ನಾಗಿ ಮಾಡಿಲ್ಲ’ ಎಂದು.

    ಈ ಮಾತಿನ ಮರ್ಮವನ್ನು ಯಾರು ಬೇಕಾದರೂ ಅರ್ಥೈಸಿಕೊಳ್ಳಬಹುದು. ತನ್ನ ಬದುಕನ್ನು ತಾನೇ ರೂಪಿಸಿಕೊಳ್ಳುವಾತ ಬಾಳುತ್ತಾನೆ. ಸಿಂಹ ತಾನೇ ಬೇಟೆಯಾಡಿ ಹೊಟ್ಟೆ ಬಿರಿಯುವಷ್ಟು ಆಹಾರ ಹುಡುಕಿಕೊಳ್ಳುತ್ತದೆ. ಆದರೆ ತೋಳ ತಿಂದಿದ್ದು ಹಂಗಿನ ಆಹಾರ.


    ಜವಾಬ್ದಾರಿ ಮನದಲ್ಲಿದ್ದರೆ ಯಾರೂ ಕೂಡಾ ತನ್ನ ಪ್ರಯತ್ನವನ್ನು ಕೈಬಿಡುವುದಿಲ್ಲ. ಕಳೆದುಕೊಂಡುದುದರ ಬಗ್ಗೆ ಪಶ್ಚಾತ್ತಾಪಪಟ್ಟುಕೊಳ್ಳದೆ ಸಾಧಿಸಬೇಕೆಂಬ ಛಲ ಮತ್ತು ಅದರೆಡೆಗಿನ ಪ್ರಯತ್ನ ಜೀವನವೆಂಬ ಹೋರಾಟದಲ್ಲಿ ಯಶಸ್ವಿಯಾಗುವಂತೆ ಮಾಡುತ್ತದೆ. ಹಾಗೆಯೇ ನಕ್ಷತ್ರಗಳನ್ನು ಮುಟ್ಟುವ ಆತನ ಕನಸುಗಳನ್ನು ಯಾರು ತಾನೇ ತಡೆಯುವುದಕ್ಕೆ ಸಾಧ್ಯ? ಅಲ್ಲವೇ?

    ಚಿತ್ರ ಸೌಜನ್ಯ: freestocks.org from Pexels

    ಶ್ರೀದೇವಿ ಅಂಬೆಕಲ್ಲು
    ಶ್ರೀದೇವಿ ಅಂಬೆಕಲ್ಲು
    ಶ್ರೀದೇವಿ ಅಂಬೆಕಲ್ಲು ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ. ಪದವಿ ಪಡೆದಿದ್ದು ಉಜಿರೆಯ ಶ್ರೀ ಧರ್ಮಸ್ಥಳ ಮಂಜನಾಥೇಶ್ವರ ಕಾಲೇಜಿನಲ್ಲಿ. ಪತ್ರಿಕೋದ್ಯಮ ಪದವಿ ಮಂಗಳೂರು ವಿವಿ. ಆಸಕ್ತಿದಾಯಕ ಓದು ಇವರ ಬರವಣಿಗೆಯ ವಿಶೇಷ.
    spot_img

    More articles

    6 COMMENTS

    1. ನಿಜ..ಜೀವನ ತೀರಾ ನಿರ್ದಯಿಯಲ್ಲ. ಕುರುಡನಿಗೂ ಒಂದು ಪಥ ಇದ್ದೇ ಇರುತ್ತದೆ. ಜೀವನಪ್ರೀತಿ ಮತ್ತು ಪೊಸಿಟಿವಿಟಿಗಳು ಬಹಳ ಮುಖ್ಯ.

    2. ಲೇಖನ ತುಂಬಾ ಅತ್ಯುತ್ತಮವಾಗಿದ್ದು ಮನುಷ್ಯರನ್ನು ಮಾನವೀಯತೆ ಕಡೆಗೆ ಕೊಂಡೊಯ್ಯಲು ಸಹಕಾರಿಯಾಗಿದೆ ಬಸವಲಿಂಗಪ್ಪ GM ಗೊಲ್ಲರಹಳ್ಳಿ ಚೆನ್ನಾಗಿರಿ ತಾಲೂಕ್ ದಾವಣಗೆರೆ ಜಿಲ್ಲೆ ಜಿಲ್ಲೆ

    3. ಸ್ಪೂರ್ತಿದಾಯಕ ಲೇಖನ ಇನ್ನೂ ಹೆಚ್ಚು ಹೆಚ್ಚು ಲೇಖನಗಳು ಬರಲಿ ಎಂದು ಆಶಿಸುತ್ತೇನೆ.

    4. ಉತ್ತಮ‌‌ ಸಕಾರಾತ್ಮಕ ಲೇಖನ.

      ತುಂಬ ಖುಷಿ ಆಯಿತು ಶ್ರೀ

    5. ಓದಿ ಅಭಿಪ್ರಾಯಿಸಿದ ಎಲ್ಲರಿಗೂ ಧನ್ಯವಾದಗಳು.

    LEAVE A REPLY

    Please enter your comment!
    Please enter your name here

    Latest article

    error: Content is protected !!