29.3 C
Karnataka
Sunday, September 22, 2024

    ನೇಪಾಳದ ದಿಢೀರ್ ಆಕ್ರಮಣ ನೀತಿಯ ಹಿಂದಿನ ಅಸಲಿ ರಹಸ್ಯ

    Must read

    ಒಂದು ಕಾಲದಲ್ಲಿ ವಿಶ್ವದ ಏಕೈಕ ಅಧಿಕೃತ ಹಿಂದೂ ರಾಷ್ಟ್ರವಾಗಿದ್ದ ನೇಪಾಳ ಇತ್ತೀಚಿನ ದಿನಗಳಲ್ಲಿ ಭಾರತ ಬಗ್ಗೆ ಆಕ್ರಮಣಕಾರಿ ನೀತಿಯನ್ನು ಅನುಸರಿಸಲು ಆರಂಭಿಸಿದೆ. ಇದಕ್ಕೆ ಅಂಕುರಾರ್ಪಣೆ ಮಾಡಿದವರು ಮೊದಲ ಬಾರಿಗೆ ನೇಪಾಳದ ಪ್ರಧಾನಿ ಗದ್ದುಗೆಯೇರಿದ್ದ ಕಮ್ಯೂನಿಸ್ಟ್ ಪಕ್ಷದ ನಾಯಕ ಪ್ರಚಂಡ. 

    ಪುಟ್ಟ ರಾಷ್ಟ್ರವಾದರೂ ಗಡಿಯಲ್ಲಿ ಸೇನಾ ಜಮಾವಣೆ. ಅಪ್ರಚೋದಿತ ಗುಂಡಿನ ದಾಳಿಯಿಂದ ರೈತನೊಬ್ಬನ ಹತ್ಯೆ. ತನ್ನ ದೇಶದ ನಕಾಶೆ (ಮ್ಯಾಪ್) ಪರಿಷ್ಕರಣೆಗೆ ತರಾತುರಿಯಲ್ಲಿ ಅಲ್ಲಿನ ಸಂಸತ್ತಿನಿಂದ ಅನುಮೋದನೆ. ತನ್ಮೂಲಕ ಗಡಿ ವಿಸ್ತರಣೆಯ ಅಭಿಲಾಷೆ. ಇದರ ಹಿಂದಿನ ಕಾರಣಗಳು ಊಹಿಸಿದಷ್ಟು ಸರಳವಲ್ಲ.

    ಪ್ರಸಕ್ತ ನೇಪಾಳ ಪ್ರಧಾನಿಯಾಗಿರುವ ಕೆ. ಪಿ. ಶರ್ಮಾ ಓಲಿ, ಮೂಲತಃ ಕಮ್ಯೂನಿಸ್ಟ್ ಪಕ್ಷದ ಹಿನ್ನೆಲೆ ಹೊಂದಿರುವರು. ಈ ಹಿಂದೆ ನೇಪಾಳವನ್ನು ಹಿಂದೂ ರಾಷ್ಟ್ರದ ಪಟ್ಟಿಯಿಂದ ಹೊರಗಿಟ್ಟಿರುವವರೂ ಇದೇ ಕಮ್ಯೂನಿಸ್ಟ್ ಪಕ್ಷದ ಹಿನ್ನೆಲೆ ಹೊಂದಿದ್ದ ಪ್ರಚಂಡ.

    ರಸ್ತೆಯೇ ಮುಖ್ಯ

    ಪವಿತ್ರ ಮಾನಸ ಸರೋವರ ಯಾತ್ರೆಗೆ ಹೋಗುವ ದಾರಿಯನ್ನು ಸುಗಮಗೊಳಿಸುವ ಉದ್ದೇಶದಿಂದ ಭಾರತ-ಟಿಬೇಟ್ ಗಡಿ ಭಾಗದ ಲಿಪು ಲೇಕ್ (ಲಿಪು ಸರೋವರ) ಪಾಸ್ ಮೂಲಕ ಸಾಗುವ ಹೆದ್ದಾರಿಯನ್ನು ಭಾರತ ನಿರ್ಮಿಸುತ್ತಿದೆ. ಇದು ಚೀನಾ-ಭಾರತ ವಾಸ್ತವ ನಿಯಂತ್ರಣ ಗಡಿ ರೇಖೆ (ಎಲ್ಎಸಿ)ಗೆ ಹೊಂದಿಕೊಂಡಿದೆ. ಚೀನಾಕ್ಕೆ ಸ್ವಲ್ಪ ಮಟ್ಟಿಗೆ ಇರಿಸು-ಮುರುಸು ಆರಂಭವಾಗಲು ಇದು ಒಂದು ಕಾರಣ. ಹಾಗಾಗಿಯೇ ಲಡಾಕ್ ಜತೆಗಿನ ಗಡಿ ಸಂಘರ್ಷದ ಜತೆಗೆ ನೇಪಾಳದ ಮೂಲಕ ಬೇರೆ ವಿಷಯವನ್ನೂ ಅದು ಎತ್ತುವಂತೆ ಮಾಡಿದೆ ಎನ್ನಲಾಗುತ್ತಿದೆ.

    1999ರಲ್ಲೇ ಆಗಿನ ಕೇಂದ್ರ ಸರಕಾರ ಈ ಹೆದ್ದಾರಿ ನಿರ್ಮಾಣಕ್ಕೆ ಅನುಮೋದನೆ ನೀಡಿತ್ತು. ಆದರೆ ಇಷ್ಟು ವರ್ಷಗಳ ಬಳಿಕ ನೇಪಾಳ ಆಕ್ಷೇಪ ಎತ್ತುವುದರ ಹಿಂದಿನ ರಹಸ್ಯವೇನು ? ಇದನ್ನು ಹುಡುಕುತ್ತಾ ಹೋದರೆ ಸಾಕಷ್ಟು ವಿಚಾರಗಳು ಬಹಿರಂಗಗೊಳ್ಳುತ್ತಿವೆ.

    ಕಮ್ಯೂನಿಸ್ಟ್ ಪಕ್ಷದ ನೆರವು

    ಬೇರೆ ಪಕ್ಷಗಳ ನೆರವಿನಿಂದಲೇ ಅಧಿಕಾರಕ್ಕೇರಿರುವ ನೇಪಾಳ ಪ್ರಧಾನಿ, ಕೆ. ಪಿ. ಶರ್ಮಾ ಓಲಿ ಅವರು ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ಕಷ್ಟ. ಅದರಲ್ಲೂ ಮುಖ್ಯವಾಗಿ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಚೀನಾದ ಮಾತಿಗೆ ತಲೆಬಾಗಲೇ ಬೇಕಾದ ಅನಿವಾರ್ಯತೆ ಅವರ ಮುಂದಿದೆ. ಆದರೆ ಭಾರತವನ್ನು ಎದುರು ಹಾಕಿಕೊಂಡು ಬಾಳುವುದೂ ಕೂಡ ನೇಪಾಳಕ್ಕೆ ಕಷ್ಟ. ಭಾವನಾತ್ಮಕವಾಗಿ ನೇಪಾಳ ಭಾರತಕ್ಕೆ ಹತ್ತಿರ.

    2017ರಲ್ಲಿ ಚೀನಾದ ಜತೆಗೆ ಎದುರಾದ ಡೋಕ್ಲಾಂ ಸಂಘರ್ಷದ ಬಳಿಕ ಗಡಿ ಭಾಗದ ಹಲವು ರಸ್ತೆ ಪ್ರಾಜೆಕ್ಟ್ ಗಳಿಗೆ ಭಾರತ ತಕ್ಷಣದ ಅನುಮತಿ ನೀಡಿತ್ತು. 2017ರಲ್ಲಿ ರಕ್ಷಣಾ ವ್ಯವಸ್ಥೆಯ ಕುರಿತಾದ ಸ್ಥಾಯಿ ಸಮಿತಿ ವರದಿಯಲ್ಲಿ “ಗಡಿ ಭಾಗದ ವಿಷಯದಲ್ಲಿ ನಾವು ಕೈಗೊಂಡಿರುವ ರಸ್ತೆ ವಿಸ್ತರಣೆ ಅಥವಾ ನವೀಕರಣದಲ್ಲಿ ಕೇವಲ 22 ಯೋಜನೆಗಳು ಮಾತ್ರ ಪೂರ್ಣಗೊಂಡಿವೆ, ಹೀಗಾಗಿ ಇವುಗಳಿಗೆ ಹೆಚ್ಚುವರಿ ಹಣಕಾಸು ನೆರವು ಒದಗಿಸಬೇಕು ಎಂದು ಕಳವಳ ವ್ಯಕ್ತವಾಗಿತ್ತು.

    ರಸ್ತೆ ಉದ್ಘಾಟನೆ

    ಕೇಂದ್ರ ಗೃಹ ಸಚಿವ ರಾಜ್ ನಾಥ್ ಸಿಂಗ್ ನೇಪಾಳ ಮೂಲಕ ಸಾಗುವ ಹೆದ್ದಾರಿಗೆ ಮೇ 11ರಂದು ಚಾಲನೆ ನೀಡಿದ್ದರು. ಅದರ ಮರುದಿನವೇ ನೇಪಾಳ, ತನ್ನ ದೇಶದ ನಕಾಶೆಯನ್ನು ತಿದ್ದುಪಡಿ ಮಾಡಿದೆ. ಅದಕ್ಕೆ ತನ್ನ ದೇಶದ ಸಂಸತ್ತಿನ ಕೆಳಮನೆಯಲ್ಲಿ ತರಾತುರಿಯ ಅನುಮೋದನೆಯನ್ನೂ ಪಡೆದಿದೆ.

    ಈ ಎಲ್ಲಾ ಬೆಳವಣಿಗೆ ನೋಡಿದರೆ ಮತ್ತೆ ನೆನಪಾಗುವುದು ಕಮ್ಯೂನಿಸ್ಟ್ ಆಡಳಿತದ ಚೀನಾ. ಭಾರತವನ್ನು ನೇರವಾಗಿ ಎದುರಿಸಲಾಗದೆ ಚೀನಾ ಹೂಡಿರುವ ತಂತ್ರವೇ ಇದು ಎಂಬುದು ಎಲ್ಲರನ್ನು ಕಾಡುತ್ತಿರುವ ಪ್ರಶ್ನೆ.

    spot_img

    More articles

    3 COMMENTS

    1. ಭಾರತದೆಡೆಗಿನ ಆಕ್ರಮಣ ನೀತಿಗಿಂತಲೂ ಚೀನಾದೆಡೆಗಿನ ಸ್ವಾಮಿನಿಷ್ಟೆ ತೋರುತ್ತಿದೆ ನೇಪಾಳ,ಭಾರತದ ಸಹಾಯವನ್ನು ಮರೆತು. ಬೆಲೆ ತೆರಲೇಬೇಕು.

    2. ಚೀನಾದ ಒಳಸಂಚು ಅದಕ್ಕೆ ಭಾರೀ ಬೆಲೆ ತೆರಬೇಕಾಗುತ್ತೆ…

    LEAVE A REPLY

    Please enter your comment!
    Please enter your name here

    Latest article

    error: Content is protected !!