26.2 C
Karnataka
Thursday, November 21, 2024

    ಲಖನೌ ಬಿರಿಯಾನಿ

    Must read

    ದೊಗಲೆ ಪೈಜಾಮ. ಅದರ ಮೇಲೊಂದು ನಿಲುವಂಗಿ. ಉದ್ದನೆಯ ಮೂಗು, ಅದರ ಮೇಲೆ ದೊಡ್ಡ ಗಾತ್ರದ ಕನ್ನಡಕ. ಎತ್ತರದ ಆಸಾಮಿ. ನಡೆಯುವಾಗ ಬಾಗುವ ಕಾಲುಗಳು . ಇವರು ಮಿರ್ಜಾ ನವಾಬ್ .  ಈ ವ್ಯಕ್ತಿ ನಿಮಗೆ ಕಾಣ ಸಿಗುವುದು ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಿರುವ ಗುಲೋಬೋ ಸಿತಾಬೋ ಸಿನಿಮಾದಲ್ಲಿ.  ಈ ಸಿನಿಮಾದ ಬಗ್ಗೆ ಹೆಚ್ಚಿನ ಪೂರ್ವ ಮಾಹಿತಿ ಇಲ್ಲದೆ ಸಿನಿಮಾ ನೋಡಲು ಕೂತರೆ ಮಿರ್ಜಾ ಪಾತ್ರಧಾರಿ ಯಾರು ಎಂಬುದು ತಕ್ಷಣಕ್ಕೆ ಗೊತ್ತಾಗುವುದಿಲ್ಲ. ಗೊತ್ತಾದಾಗ  ಅರೆ ಇದು ಅಮಿತಾಭ್ ಬಚ್ಚನ್ ಎಂದು ನಿಮ್ಮ ಬಾಯಿಂದ  ಉದ್ಗಾರ ಬರದಿದ್ದರೆ ಹೇಳಿ.  ಅಮಿತಾಭ್ ಬಚ್ಚನ್ ಮಿರ್ಜಾ ನವಾಬನಾಗಿ ತಮ್ಮ ವೃತ್ತಿ  ಜೀವನದ ಮತ್ತೊಂದು ಹಂತ ಪ್ರವೇಶಿಸಿದ್ದಾರೆ.

    ಈ ಎಪ್ಪತ್ತೇಳರ ಹರಯದಲ್ಲೂ ಬಚ್ಚನ್ ಅವರ ನಟನೋತ್ಸಾಹಕ್ಕೆ ಯಾರಾದರು ಸೈ ಎನ್ನಲೇ ಬೇಕು.  ಇಡೀ ಸಿನಿಮಾವನ್ನು ಆವರಿಸಿರುವುದು ಅವರೇ.  ನಿರ್ದೇಶಕ ಸುಜಿತ್ ಸರ್ಕಾರ್ ತಮ್ಮ ಹಿಂದಿನ ಪೀಕೂವಿನಲ್ಲೂ ಅಮಿತಾಭ್  ಜೊತೆ ಇದೇ ರೀತಿಯ ಪ್ರಯೋಗ ಮಾಡಿದ್ದರು.  ಮಲಬದ್ಧತೆಯಿಂದ ನರಳುವ ವೃದ್ಧನ ಪಾತ್ರದಲ್ಲಿ ಅಮಿತಾಭ್ ಮನಮುಟ್ಟುವಂತೆ ನಟಿಸಿದ್ದರು. ತಾವೊಬ್ಬ ಸೂಪರ್ ಸ್ಚಾರ್ ಎಂಬುದನ್ನು ಮರೆತು ಇಮೇಜಿನ ಹಂಗಿಲ್ಲದೆ ಪಾತ್ರದಲ್ಲಿ ಲೀನವಾಗಿದ್ದರು.

    ಆ ಚಿತ್ರದಲ್ಲೂ  ತಾವು ಕಟ್ಟಿಸಿ ವಾಸಿಸುತ್ತಿದ್ದ ಮನೆಯ ಬಗ್ಗೆಅವರಿಗೆ ಅತೀವ ಪ್ರೀತಿ. ಈ ಸಿನಿಮಾದಲ್ಲೂ   ತಮ್ಮ ಪತ್ನಿ ಬೇಗಂ  ಹೆಸರಲ್ಲಿರವ  ಫಾತಿಮಾ ಮಹಲಿನ ಬಗ್ಗೆ ಮಿರ್ಜಾ ನವಾಬನಿಗೆ  ಅಷ್ಟೇ ಪ್ರೀತಿ . ಹಳೇ ಲಖನೌ ಪಟ್ಟಣದಲ್ಲಿರುವ ಈ ಮಹಲು ಭರ್ಜರಿಯಾಗಿದೆ. ಮಿರ್ಜಾ, ಆತನ ಪತ್ನಿ ಬೇಗಂ ಅಲ್ಲದೆ ಹಲವಾರು ಮಂದಿ ಈ ಮಹಲಿನ ಹಲವು ಭಾಗಗಳಲ್ಲಿ ವರ್ಷಾನಗಟ್ಟಲೆಯಿಂದ ಬಾಡಿಗೆಗೆ ಇದ್ದಾರೆ.  ಈ ಮಹಲನ್ನು ಹೇಗಾದರು ಮಾಡಿ ತನ್ನ ಹೆಸರಿಗೆ ಮಾಡಿಕೊಳ್ಳಬೇಕು ಹಾಗೂ ವರ್ಷಾನುಗಟ್ಟಲೆ ಬಾಡಿಗೆ ಕೊಡದ ಬಾಂಕೆ ಸೋಂದಿಯನ್ನು (ಆಯುಷ್ಮಾನ್ ಖುರಾನ )ಮಹಲಿನಿಂದ ಹೊರಹಾಕಬೇಕು. ಇದು ಮುದುಕ ಮಿರ್ಜಾ ನವಾಬನ ಪ್ಲಾನ್. ಆದರೆ ಅವನ ಪ್ಲಾನ್ ಕಾರ್ಯರೂಪಕ್ಕೆ ತರುವಲ್ಲಿ ನೂರೆಂಟು ವಿಘ್ನ.

    ಅಸಲಿಗೆ ಈ ಮಹಲಿನ ಒಡತಿ  ಬೇಗಂ ಈ ಮುದುಕನಿಗಿಂತ ದೊಡ್ಜಾಕೆ. ಆಕೆ ಸತ್ತರೆ ಸಾಕು ಮಹಲಿಗೆ ನಾನೇ ವಾರಸುದಾರ ಎಂಬುದು ಇವನ ಕನಸು.  ಆ ಬೇಗಂ ಘಾಟಿ  ಮುದುಕಿ. ಇನ್ನೇನು ಸತ್ತೇ ಬಿಟ್ಟಳು ಎಂದು ಈ ಮುದುಕ ಭಾವಿಸುವಷ್ಟರಲ್ಲಿ ಎದ್ದು ಕೂತಿರುತ್ತಾಳೆ.  ಈ ಮಹಲಿಗೋ  ನೂರು ವರುಷ ದಾಟಿದೆ. ಪುರಾತತ್ವ ಇಲಾಖೆ ಕಣ್ಣೂ ಬಿದ್ದಿದೆ.  ಅದಕ್ಕೆ  ಬಾಡಿಗೆ ದಾರ ಬಾಂಕೆ ಸೋಂದಿಯ ಬೆಂಬಲ ಬೇರೆ. ಆತನಿಗೆ ಈ ಮಹಲು ಸರಕಾರಕ್ಕೆ ಹೋದರೆ ತಮಗೆ  ಎಲ್‌ಐಜಿ  ಮನೆ ಸಿಗಬಹುದೆಂಬ ಆಸೆ. ಒಂದು ಕಡೆ ಬೇಗಂ ನಿಂದ  ಮನೆ ತನ್ನ ಹೆಸರಿಗೆ  ವರ್ಗಾಯಿಸಿಕೊಳ್ಳಲು ಮುದುಕನ ಸರ್ಕಸ್ . ಇನ್ನೊಂದೆಡೆ ಪುರಾತತ್ವ ಇಲಾಖೆ. ಇನ್ನೊಂದೆಡೆ  ಆ ಮಹಲವನ್ನು ಬಿಲ್ಡರ್ ಒಬ್ಬನಿಗೆ ಮಾರಿಸಲು ವಕೀಲನ ತಂತ್ರ. ಯಾರು ಊಹಿಸದ ರೀತಿ ಕಥೆ ಮುಗಿಯುತ್ತದೆ. ಅದು ಗೊತ್ತಾಗಬೇಕಾದರೆ ಸಿನಿಮಾ ನೋಡಿ.

    ಹಳೇ ಲಖನೌ ನಗರದ ಇಡೀ ಚಿತ್ರಣ ಇಲ್ಲಿ ಸಿಗುತ್ತದೆ.  ಅಲ್ಲಿನ ಗಲ್ಲಿಗಳು, ಸೈಕಲ್ ರಿಕ್ಷಾಗಳು, ಸರಕಾರಿ ಕಚೇರಿಗಳು ಒಂದೊಂದಾಗೆ ಇಲ್ಲಿ ತೆರೆದುಕೊಳ್ಳುತ್ತವೆ. ನಮ್ಮ ಪುಟ್ಟಣ್ಣ ನಾಗರಹಾವಿನ ಕಥೆ ಹೇಳುತ್ತಲೆ ದುರ್ಗದ ಬೀದಿ ಬೀದಿಯನ್ನು ತೋರಿಸಿದ ಹಾಗೆ ಇಲ್ಲಿ ಸುಜಿತ್ ಸರ್ಕಾರ್ ನಮಗೆ  ಲಖನೌ ದರ್ಶನ ಮಾಡಿಸುತ್ತಾರೆ.  ಪೀಕು ವಿನಲ್ಲಿ ಇದೇ ರೀತಿ ಕೊಲ್ಕತಾ ನಗರ ನೋಡುವ ಅವಕಾಶ ಸಿಕ್ಕಿತ್ತು,

    ಮಿರ್ಜಾ ನವಾಬ್ ನಂತೆ ನಿಮ್ಮ ಗಮನ ಸೆಳೆಯುವ ಮತ್ತೊಂದು ಪಾತ್ರ ಬಾಂಕೆ ಸೋದಿ. ತಂಗಿಯರ ವಿದ್ಯಾಭ್ಯಾಸಕ್ಕಾಗಿ  ತನ್ನ ಓದನ್ನು ಬದಿಗೊತ್ತಿ ಹಿಟ್ಟಿನ ಗಿರಣಿಯಲ್ಲಿ ದುಡಿಯುವ ಈ ಬಾಂಕೆ ಸದಾ ಕಾಲ  ಮಿರ್ಜಾ ನವಾಬ್ ನ ಜಗಳ ಕಾಯುತ್ತಾ ಅವನಿಗೆ ಸರಿ ಸಮವಾಗಿ ನಟಿಸಿದ್ದಾರೆ.  ಆರ್ಟಿಕಲ್ ೧೫, ಅಂಧಾದುನ್‌ನ ಆಯುಷ್ಮಾನ್ ಖುರಾನ ಇವರೇನಾ ಎಂದೆನಿಸುವಷ್ಟರ ಮಟ್ಟಿಗೆ ಅವರು ಖುರಾನ ನಿಮಗೆ ಆಪ್ತವಾಗುತ್ತಾರೆ.

    ನ್ನೂ ಚಿತ್ರಮಂದಿರಗಳು ಬಾಗಿಲು ತೆರೆಯದ ಈ ದಿನಗಳಲ್ಲಿ   ಒಟಿಟಿ ಯಲ್ಲಿ ಬಿಡುಗಡೆಯಾದ ಮೊದಲ  ಹಿಂದೀ ಚಿತ್ರ ಇದು. ವೀಕ್ಷಕರು ಇದನ್ನು ಸ್ವಾಗತಿಸಿರುವ ಪರಿಯನ್ನು ನೋಡಿದರೆ ಮುಂಬರುವ ದಿನಗಳಲ್ಲಿ ಹೊಸ ಸಿನಿಮಾಗಳು ನೇರವಾಗಿ ಒಟಿಟಿ ಯಲ್ಲೇ ಬಿಡುಗಡೆಯಾದರು ಅಚ್ಚರಿಪಬೇಕಿಲ್ಲ.

    ಇಂಥ ಹಲವು ಸಿನಿಮಾಗಳು ನಿಮಗೆ ಅಮೆಜಾನ್ ಪ್ರೈಮ್ ನಲ್ಲಿ ಸಿಗುತ್ತವೆ . 999 ರೂಪಾಯಿಗೆ ಇಡೀ ವರ್ಷ ಸಿನಿಮಾ ನೋಡಬಹುದು. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿದರೆ ನಿಮ್ಮ ಮುಂದೆ ತೆರೆದುಕೊಳ್ಳುತ್ತದೆ ಅಧ್ಬುತ ಮನರಂಜನಾ ಜಗತ್ತು.

    ಶ್ರೀವತ್ಸ ನಾಡಿಗ್
    ಶ್ರೀವತ್ಸ ನಾಡಿಗ್https://kannadapress.com/
    ಶ್ರೀವತ್ಸ ನಾಡಿಗ್ ಕನ್ನಡಪ್ರೆಸ್.ಕಾಮ್ ನ ಪ್ರಧಾನ ಸಂಪಾದಕ ಮತ್ತು ಸಂಸ್ಥಾಪಕ
    spot_img

    More articles

    3 COMMENTS

    1. ಸಂಕ್ಷಿಪ್ತ, ನೇರ ಮತ್ತು ಪ್ರಾಮಾಣಿಕ ಸಿನಿಮಾಬಗ್ಗೆ ಅಭಿಪ್ರಾಯ ಲೇಖನದಲ್ಲಿ ಲೇಖಕರು ಸಮಗ್ರ ಮಾಹಿತಿ ನೀಡಿದ್ದಾರೆ.

    2. ಒಳ್ಳೆಯ ಲೇಖನ. ವಸ್ತುನಿಷ್ಠ ವಿಶ್ಲೇಷಣೆ ಮಾಡಿದ್ದೀರಿ.
      ಅಮಿತಾಭ್ ರ ತಾದಾತ್ಮ್ಯ, ಬೇಗಮ್ ಳ ಪಾತ್ರಧಾರಿಯ ಮುಖದಲ್ಲಿ ಆಗಾಗ ಕಂಡುಬರುವ ತುಂಟತನ ಹಾಗೂ ಆಯುಶ್ಮಾನ್ ಖುರಾನಾರ ಸಹಜ ನಟನೆ ಎಲ್ಲವೂ ಅದ್ಭುತ. ಆಯುಷ್ಮಾನ್ ತನ್ನ ಉಚ್ಚಾರವನ್ನೂ ಬದಲಾಯಿಸಿ ಮಾತಾಡಿದ್ದಾನೆ. ಸಿನೆಮಾ ನೋಡುವಾಗ ಕೆಲವು ಘಟನೆಗಳು ಸಹಜವೆನಿಸಲಿಲ್ಲ. ಉದಾಹರಣೆಗೆ ಬೇಗಮ್ ತೊಂಭತ್ತೈದನೆಯ ವಯಸ್ಸಿನಲ್ಲಿ ಮಾಜಿ ಪ್ರಿಯಕರನೊಂದಿಗೆ ಹೋಗುವುದು, ಪುರಾತತ್ವ ಇಲಾಖೆಯವರು ಮನೆಯ ಮಾಲಿಕನಿಗೆ ಮಾಹಿತಿಯನ್ನೇ ನೀಡದೆ ಮನೆಗೆ ಬಂದು ಅಧಿಕಾರಯುತವಾಗಿ ವರ್ತಿಸಿ ಇಲಾಖೆಯ ಬೋರ್ಡ್‌ ನ್ನು ಮನೆಯ ಮುಂದೆ ಹಾಕುವುದು ಇತ್ಯಾದಿ..
      ಇಂತಹ ಚಿಕ್ಕಪುಟ್ಟ ಅಂಶಗಳನ್ನು ಕಡೆಗಣಿಸಿದರೆ ಸಿನೆಮಾ ಸೊಗಸಾಗಿದೆ. ಶೂಜಿತ್ ಸರ್ಕಾರ್ ರ ನಿರ್ದೇಶನ ಎಂದಿನಂತೆ ಅದ್ಭುತ.

    LEAVE A REPLY

    Please enter your comment!
    Please enter your name here

    Latest article

    error: Content is protected !!