ಮೂರು ತಿಂಗಳು ಮುಗಿದಿವೆ. ಆದರೂ ಕೋವಿಡ್, ಕೊರೊನಾ, ಲಾಕ್ಡೌನ್, ಸೀಲ್ಡೌನ್ ಎನ್ನುವ ಭೀತಿ ಹುಟ್ಟಿಸುವ ಪದಗಳ ಆಡಂಬರ ನಿಂತಿಲ್ಲ. ಕಣ್ಣಿಗೆ ಕಾಣದ ಒಂದು ಸಣ್ಣ ವೈರಸ್ ತಂದೊಡ್ಡಿದ ತಾಪತ್ರಯ ಅಷ್ಟಿಷ್ಟಲ್ಲ.
ಯಾರ್ಯಾರಿಗೆ ಎಂಥೆಂತದ್ದೋ ಸಂಕಟ. ಯಾರನ್ನೇ ಮಾತಾಡಿಸಿದರೂ ಕೊರೊನಾ ಕಷ್ಟಗಳ ಉದ್ದುದ್ದ ಸರಣಿ ಬಿಚ್ಚಿಡುವವರೇ. ಅರಮನೆಯ ಅಂಬಾನಿಯಿಂದ ಹಿಡಿದು ಹಾದಿಯಲ್ಲಿ ಹೋಗುವ ಜೋಗಯ್ಯನವರೆಗೆ ಎಲ್ಲರಿಗೂ ಕೊರೊನಾ ಬಾಧೆ ತಟ್ಟದೇ ಬಿಟ್ಟಿಲ್ಲ. ಅಂದಹಾಗೆ, ಜೋಗಯ್ಯ ಎಂದ ತಕ್ಷಣ ನೆನಪಾಗುವ ಜೋಗುತಿಯರ ಬಗ್ಗೆಯೂ ಈ ಘಳಿಗೆ ಒಂದಷ್ಟು ಯೋಚಿಸಲೇಬೇಕಾದ ಸಂಗತಿಗಳಿವೆ.
ಎಲ್ಲರಿಗೂ ತಂತಮ್ಮ ಕಷ್ಟಗಳೇ ಭಾರಿ ದೊಡ್ಡದು ಎನ್ನಿಸಿ ಕೊರಗುವುದುಂಟು.
ಈ ಸಾಲಿನಲ್ಲಿ ಜೋಗುತಿಯರು ಅಥವಾ ಮಂಗಳಮುಖಿಯರು ಹೀಗೆ ಹಲವು ಹೆಸರುಗಳಲ್ಲಿ ಕರೆಯಲ್ಪಡುವ LGBTQ ಸಮುದಾಯಕ್ಕೆ ಸೇರಿದ ತೃತೀಯ ಲಿಂಗಿಗಳಿದ್ದಾರೆ. ಈಗ ಬಿಸ್ನೆಸ್ ಲಾಸ್ ಆಯಿತು ಎಂದು ಕೊರಗುತ್ತಿಲ್ಲ. ಪೇಮೆಂಟ್ ಕಡಿತವಾಗಿದೆ ಎಂದು ದಿಗಿಲುಬಿದ್ದಿಲ್ಲ. ಕೆಲಸ ಹೋಯಿತಲ್ಲಾ ಎಂದು ಗೋಳಾಡುವುದೂ ಇಲ್ಲ. ಜನ ಸಾಮಾನ್ಯರ ಸಂಕಟಗಳಿಗಿಂತ ಇವರ ಸಂಕಟ ಭಿನ್ನ. ನಮ್ಮ ನಡುವೆ ಇದ್ದೂ ನಮ್ಮಂತೆ ಬದುಕದವರು. ಆದರೆ ಇವರಿಗೂ ಕೊರೊನಾ ಸಂಕಟ ಕಾಡಿರುವುದು ಸತ್ಯ. ಅದು ಯಾವ ರೀತಿಯ ಕೊರೊನಾ ಕಷ್ಟ ? ಇದು ಕುತೂಹಲ….
ರಸ್ತೆ ಸಿಗ್ನಲ್, ಬಾಜಾರು ಬೀದಿ, ಅಂಗಡಿ ಮುಂಗಟ್ಟು ಮುಂದೆ ಠಳಾರ್ ಎಂದು ಚಪ್ಪಾಳೆ ತಟ್ಟಿ, ಗಟ್ಟಿದನಿಯಲ್ಲಿ ‘ಏ ಕೊಡು’ ಎಂದು ಕೈಚಾಚುವ ಆ ಮಂಗಳಮುಖಿಯರು ಈಗ ಮಾಯವಾದದ್ದಾದರೂ ಎಲ್ಲಿ? ಅವರಿಗೆ ತಟ್ಟಿರುವ ಕೊರೊನಾ ಬಿಸಿಯಾದರೂ ಎಂಥದ್ದು? ಇಂತಹ ಕುತೂಹಲದ ಹಲವು ಪ್ರಶ್ನೆಗಳನ್ನು ಹೊತ್ತು, ಸಾಮಾಜಿಕ ಕಳಕಳಿಯೊಂದಿಗೆ ಕನ್ನಡಪ್ರೆಸ್.ಕಾಂ ಬೆಂಗಳೂರು ನಗರದ ಹಲವು ಬಡಾವಣೆ ಎಡತಾಕಿದಾಗ ಎಲ್ಲಿಯೂ ಅವರ ದರ್ಶನ ಇಲ್ಲ! ನಿತ್ಯ ಕಾಣಿಸುವ ಸಿಗ್ನಲ್ ಬಳಿಯೂ ಅವರು ಗಾಯಬ್. ಕೊರೊನಾ ಭೀತಿಯಿಂದ ಅವರು ನಗರವನ್ನೇ ತೊರೆದು ಓಡಿದರೇ? ಹೀಗೆಂದು ಬಾಣಸವಾಡಿಯ ಸಮಾಜಸೇವಕ ವಿ.ಜಯರಾಮ್ ಅವರನ್ನು ವಿಚಾರಿಸಿದಾಗ “ಅರೇ, ಇಷ್ಟಕ್ಕೆಲ್ಲ ಅವರು ಹೆದರುವುದುಂಟೆ? ಮನೆಮಂದಿಯನ್ನೇ ತೊರೆದು ಬಂದ ಅವರಿಗೆ ಅಸಾಧ್ಯ ಧೈರ್ಯ ಇದೆ. ಅಷ್ಟಕ್ಕೂ ಅವರು ಯಾವ ಸಂಬಂಧ ಅರಸಿ, ಹೋಗಬೇಕಾದರೂ ಎಲ್ಲಿಗೆ ಹೇಳಿ? ಇಲ್ಲೇ ಇದ್ದಾರೆ ಬನ್ನಿ” ಎಂದು ಈ ಲಾಕ್ಡೌನ್ ಪಿರೇಡ್ ನಲ್ಲಿ ಕಷ್ಟಸುಖಗಳಿಗೆ ಆಸರೆ ನೀಡಿ ತಮ್ಮ ಸಂಪರ್ಕದಲ್ಲಿ ಇಟ್ಟುಕೊಂಡಿದ್ದ ಒಂದಷ್ಟು ಮಂಗಳಮುಖಿಯರನ್ನು ಕರೆಸಿದರು.
ಎಲ್ಲರೂ ಶುಭ್ರ ಉಡುಗೆ ಧರಿಸಿ, ಮಾಸ್ಕ್ ಮರೆಯಲ್ಲೇ ಮುಗುಳ್ನಗೆ ಬೀರುತ್ತ ಆಟೋ ಇಳಿದು ಬಂದು ಎದುರುಬದಿ ಸೀಟುಗಳಲ್ಲಿ ಕುಳಿತರು.
“ಹೇಳಿ” ಎನ್ನುವಂತೆ ಮುಖ ಎತ್ತಿ ನಮ್ಮತ್ತ ದಿಟ್ಟಿಸಿದರು.
…ಕೊರೊನಾ ಕಷ್ಟ ಎಂದು ಪ್ರಶ್ನೆ ಎತ್ತುತಿದ್ದಂತೆಯೇ ವಿವರಿಸ ತೊಡಗಿದಳು ಸೀಮಾ.
“ಎಲ್ಲರಿಗೂ ದೊಡ್ಡವರ ಕಷ್ಟಗಳೇ ದೊಡ್ಡದಾಗಿ ಕಾಣ್ತಾವೆ. ಸಭ್ಯತೆಯ ಚೌಕಟ್ಟು ರೂಪಿಸಿಕೊಂಡ ಸಮಾಜಕ್ಕೆ ನಮ್ಮಂಥವರ ಕಷ್ಟ ಕೇಳುವ ದರ್ದಾದ್ರೂ ಏನಿದೆ ಹೇಳಿ? ನಾವು ದೇವರ ಮಕ್ಕಳು. ಪ್ರಕೃತಿ ಸೃಷ್ಟಿಸಿದ ನಮ್ಮ ದೇಹದ ಭಿನ್ನತೆಯನ್ನು ಇಷ್ಟೆಲ್ಲ ನಾಗರಿಕ ಎಂದು ಹೇಳಿಕೊಳ್ಳುವ ಈ ಸಮಾಜ ಅರ್ಥಮಾಡಿಕೊಳ್ಳುತ್ತಿಲ್ಲ. ಇದು ಅಜ್ಞಾನ. ಈ ಅಜ್ಞಾನದಿಂದಲೇ ನಮ್ಮ ಕಷ್ಟಗಳು ಹೆಚ್ಚಿವೆ. ಕೊರೊನಾ ಕಾಲದಲ್ಲಿ ಈ ಗೋಳು ಹೇಳತೀರದ ಮಟ್ಟ ಮುಟ್ಟಿದೆ” ಎಂದು ನಿಡುಸುಯ್ದು ನಿಂತಳು.
“ಹೇಳಿ… ಎಲ್ಲರಿಗೂ ಇದು ಕಷ್ಟದ ಕಾಲವೇ. ಶ್ರೀಮಂತರು, ಬಡವರು ಎಲ್ಲರನ್ನು ಸಮನಾಗಿ ಬಾಧಿಸಿದೆ” ಎಂದಾಗ, “ಅಲ್ಲ ಸ್ವಾಮಿ, ಶ್ರೀಮಂತರ ಜತೆ ನಮ್ಮನ್ನು ಯಾಕೆ ಹೋಲಿಸಿ ನೋಡ್ತೀರಾ? ನಮ್ ಕಷ್ಟಗಳೇ ಬೇರೆ ಸ್ವರೂಪದವು. ನಾವು ಭಿಕ್ಷೆ ಬೇಡಿ ಹೊಟ್ಟೆ ಬಟ್ಟೆ ನೀಗಿಸಿಕೊಳ್ಳುವವರು. ಕಳೆದ ಮೂರು ತಿಂಗಳಿಂದ ಯಾವೊಬ್ಬ ಮಂಗಳಮುಖಿಯೂ ಒಂದು ನಯಾಪೈಸೆ ದುಡುಮೆ ಮಾಡಿಲ್ಲ.
ತರಕಾರಿ ಖರೀದಿಸಲೂ ಹಣ ಇಲ್ಲ. ಸರಕಾರ ನೀಡುವ ರೇಷನ್ ಸದ್ಯ ನಮ್ಮ ನಿತ್ಯದ ಗಂಜಿ ಚಿಂತೆ ದೂರ ಮಾಡಿದೆ. ಕೆಲವರಿಗೆ ಮಂಗಳಮುಖಿ ಮಾಸ್ಯಾಸನ ಬರುತ್ತೆ. ಅಂಥವರು ಮನೆಯಲ್ಲೇ ಕುಳಿತು ತುಸು ನೆಮ್ಮದಿಯಿಂದ ಕಾಲದೂಡುತ್ತಿದ್ದಾರೆ. ಆದರೆ, ಈ ದೇಶದಲ್ಲಿ ಸುಮಾರು ಅರ್ಧಕೋಟಿ ಮಂಗಳಮುಖಿಯರು ಇದ್ದಾರೆ, ಅವರೆಲ್ಲರಿಗೂ ಈ ಎಲ್ಲ ಸವಲತ್ತು ಇಲ್ಲ. ನಮ್ಮ ರಾಜ್ಯದಲ್ಲೇ ಮುಕ್ಕಾಲು ಪಾಲು ಮಂಗಳಮುಖಿಯರಿಗೆ ರೇಷನ್ ಕಾರ್ಡು, ವೋಟರ್ ಕಾರ್ಡು ಯಾವುದೂ ಇಲ್ಲ. ಅಂಥವರಿಗೆ ಈ ಲಾಕ್ಡೌನ್ ಸಮಯ ಯಮಯಾತನೆಯೇ ಸರಿ. ಕೆಲವರು ದಾನಿಗಳು ನೀಡಿದ ರೇಷನ್ ಕಿಟ್ ಪಡೆದು ಈವರೆಗೆ ಕಾಲದೂಡಿದ್ದಾರೆ. ಇನ್ನು ಮುಂದೇನು ಎನ್ನುವುದೇ ಅರ್ಥವಾಗದ ಸಂದಿಗ್ದ” ಎಂದು ಗೋಡೆ ಮೇಲಿನ ಪಟಗಳನ್ನು ದಿಟ್ಟಿಸಿದರು ಸೀಮಾ. ಅವರ ಮಗ್ಗುಲಲ್ಲಿದ್ದ ಹೇಮಾಳದ್ದೂ ಭಿನ್ನ ಅಭಿಪ್ರಾಯವೇನು ಇರಲಿಲ್ಲ.
ಅವರ ಸುಖದುಃಖದ ಅನುಭವ ಅವರದ್ದೇ ಬಾಯಲ್ಲಿ ಕೇಳಿ ನೋಡಿ
ಕಾರ್ಮಿಕರ ಸಂಕಷ್ಟಗಳಿಗೆ ಕಣ್ಣೀರು ಹಾಕುವವರು ನಮ್ಮತ್ತಲೂ ಒಮ್ಮೆ ಗಮನಹರಿಸಲಿ. ನಾವು ದುಡಿಯಬಲ್ಲೆವು. ಆದರೆ, ನಮ್ಮ ಶಕ್ತಿಯ ಬಗ್ಗೆ ಮಾಲೀಕರಿಗೆ ಅಪನಂಬಿಕೆ. ಬೀದಿಗಳು ಬಂದ್ ಆಗಿ, ಬಿಸ್ನೆಸ್ಸೂ ಡಲ್ ಆಗಿ ಕಂಗೆಟ್ಟಿರುವ ಈ ಘಳಿಗೆ ನಾವು ಯಾರ ಮುಂದೆ ಭಿಕ್ಷಾಂದೇಹಿ ಎಂದು ಕೈಚಾಚುವುದು ಹೇಳಿ. ಇಂತಹ ಬಿಕ್ಕಟ್ಟಿನ ಸಮಯ ಸರಕಾರಗಳೇ ನಮ್ಮನ್ನು ಪೊರೆಯಬೇಕು. ನಾವು ಈ ಸಮಾಜದ ವರ, ಶಾಪ ಅಲ್ಲ. ಕೊರೊನಾ ನಮಗೆ ಶಾಪ ಆಗಬಾರದು. ಉಳ್ಳವರು ಇದಕ್ಕೆ ಆಸ್ಪದ ನೀಡಬಾರದು” ಎಂದು ಅವರು ಕೈಮುಗಿದರು.
(ವಿಡಿಯೋ :ಜಯರಾಮ್ , ಚಿತ್ರಗಳು :studeo 23 )
ಯಾರು ಗಮನ ಹರಿಸದ ಒಂದು ಗುಂಪುನ್ನು ಸಂಪರ್ಕಿಸಿ ಅವರ ಕಷ್ಟ ಜೀವನ ಚಿತ್ರವನ್ನು ಬಚ್ಚಿಟ್ಟಿದ್ದೀರಿ.. ನಿಜಕ್ಕೂ ಪ್ರಶಂಶನೀಯ…🙏
ಸರ್ಕಾರ ಇವರನ್ನು ಗಮನಿಸಬೇಕಾದ ಸಂದರ್ಭ ಬಂದಿದೆ… ಸಾಮಾನ್ಯ ಜನರಂತೆ ಇವರಿಗೆ ಜೀವನೋಪಾಯ ಅಷ್ಟು ಸುಲಭವಾಗಿ ಸಿಗದ ಕಾರಣ… ಇವರಿಗೆ ಸರ್ಕಾರದ ಸಹಾಯ ಅತ್ಯಗತ್ಯ.
ಈ ಲೇಖನ ತುಂಬಾ ಹೃದಯ ಸ್ಪರ್ಶಿ ಯಾಗಿದೆ. ನಮ್ಮ ಸಮಾಜ ಈ ಮಂಗಳ ಮುಖಿ ಯಾರನ್ನು ನೋಡುವ ರೀತಿಯೇ ಬೇರೆ. ಕೆಲವರು ಕರುಣೆ ಯಿಂದ ನೋಡಿದರೆ ಕೆಲವರು ಅಪಾಹಸ್ಯ ಮಾಡಿ ನೋಡಿದರೆ ಇನ್ನು ಕೆಲವರು ಅಸಹ್ಯ ದಿಂದ ನೋಡುತ್ತಾರೆ. ಇದು ಎಷ್ಟು ಸರಿ. ಒಂದು ವೇಳೆ ನಾವೇ ಅವರ ಜಾಗದಲ್ಲಿ ಇದಿದ್ದರೆ ಎನ್ನುವುದನ್ನು ನಾವು ಯೋಚಿಸುವುದಿಲ್ಲ. ನಮ್ಮ ರೀತಿ ಬದಲಾಗಬೇಕು. ಅವರು ನಮ್ಮ ತರ ಮನುಷರು ಅವರಿಗೂ ಇಲ್ಲಿ ಬದುಕಲು ಹಕ್ಕಿದೆ ಅವರನ್ನು ಒಳ್ಳೆಯ ರೀತಿ ನಡೆಸಿಕೊಳ್ಲಬೇಕು. ನಮ್ಮ ಪುರಾಣಗಳಲ್ಲಿ ಅರ್ಜುನ ಅದೇ ರೀತಿ ಇರುವುದನ್ನು ಓದಿದ್ದೇವೆ. ಇನ್ನಾದರೂ ಸರ್ಕಾರ ಅವರ ಅಭಿರುದ್ದಿಯತ್ತ ಗಮನ ಆರಿಸಲಿ. ನಿಮ್ಮ ಈ ಪ್ರಯತ್ನ.abhinadaniya
ಮಂಗಳಮುಖಿಯರ ಸಮಸ್ಯೆಗೆ ಕನ್ನಡಿ ಹಿಡಿದಿದೆ. ಆದರೆ ಮಂಗಳಮುಖಿಯರಿಗೆ ದುಡಿದು ಉಣ್ಣುವ ಸಂಸ್ಕೃತಿ ಬೆಳೆಸಬೇಕಿದೆ.