26.3 C
Karnataka
Saturday, November 23, 2024

    ಪಿಒಕೆ : ರಾಜ್‌ನಾಥ್ ಸಿಂಗ್ ಮಾತಿನ ಅಂತರಾರ್ಥವೇನು?

    Must read

    ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ಅವರ ಪಾಕ್ ಆಕ್ರಮಿತ ಕಾಶ್ಮೀರದ ಕುರಿತ ಹೇಳಿಕೆಯೊಂದು ಎಲ್ಲೆಡೆ ಸಂಚಲನ ಮೂಡಿಸಿದೆ. ಕ್ಷಣ ಮಾತ್ರದಲ್ಲಿ ಪ್ರತಿಕ್ರಿಯಿಸಿರುವ ಪಾಕಿಸ್ತಾನ, ಸಚಿವ ಸಿಂಗ್ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸುವುದಾಗಿ ಹೇಳಿದರೆ, ಕಾಶ್ಮೀರದ ಬಹುತೇಕ ಪತ್ರಿಕೆಗಳು ಸಚಿವರಿಗೆ ಶ್ಲಾಘನೆಯ ಸುರಿ ಮಳೆಯನ್ನೇ ಹರಿಸಿದ್ದಾರೆ.

    ಆಗಿದಷ್ಟು ಇಷ್ಟೇ. ಜಮ್ಮು ಜನ ಸಂವಾದ್ ರಾಲಿಯನ್ನು ಉದ್ದೇಶಿಸಿ ವೀಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಸಚಿವ ಸಿಂಗ್, ಮೋದಿ ಆಡಳಿತದ ಅವಧಿಯಲ್ಲಿ ಜಮ್ಮು-ಕಾಶ್ಮೀರದಲ್ಲಿ ಅಭೂತಪೂರ್ವ ಅಭಿವೃದ್ಧಿ ಕಾರ್ಯಗಳು ಆಗುತ್ತಿವೆ. ಇದನ್ನು ಪಾಕ್ ಆಕ್ರಮಿತ ಕಾಶ್ಮೀರದ (ಪಿಒಕೆ) ಜನತೆಯೂ ವೀಕ್ಷಿಸುತ್ತಿದ್ದು, ಸ್ವಲ್ಪ ಕಾಯಿರಿ. ಮುಂದಿನ ದಿನಗಳಲ್ಲಿ ಅವರೇ ಸ್ವಯಂ ಪ್ರೇರಿತವಾಗಿ ಭಾರತದ ಜತೆ ಪುನರ್ ವಿಲೀನಕ್ಕೆ ಹೋರಾಟ ಮಾಡಲು ಮುಂದಾಗುತ್ತಾರೆ ಎಂದು ಭವಿಷ್ಯ ನುಡಿದಿದ್ದರು.

    ಇಡೀ ವಿಷಯ ನಾವು ಅಂದುಕೊಂಡಷ್ಟು ಸರಳವಲ್ಲ. ಇಂತಹ ಹೇಳಿಕೆ ಇದೇ ಮೊದಲ ಬಾರಿಗೆ ಬಂದಿಲ್ಲ. ಪಾಕ್ ಭಯೋತ್ಪಾದಕರನ್ನು ರವಾನಿಸುವುದನ್ನು ನಿಲ್ಲಿಸದಿದ್ದರೆ ಪೂರ್ವ ಪಾಕಿಸ್ತಾನದ (ಈಗಿನ ಬಾಂಗ್ಲಾದೇಶ) ಗತಿಯೇ ಭವಿಷ್ಯದಲ್ಲಿ ಬರಬಹುದು ಎಂದು ಹೇಳಿದ್ದರು. ಇದರ ಬೆನ್ನಹಿಂದೆಯೇ ಪಾಕ್, ಭಾರತದ ಇಬ್ಬರು ರಾಜತಾಂತ್ರಿಕ ಅಧಿಕಾರಿಗಳನ್ನು ವಶಕ್ಕೆ ಪಡೆದು ಬಳಿಕ, ಅತೀವ ಒತ್ತಡದ ಹಿನ್ನೆಲೆಯಲ್ಲಿ ಅವರನ್ನು ಬಿಡುಗಡೆ ಮಾಡಿದ್ದೂ ಆಯಿತು. ವಾಸ್ತವವಾಗಿ ಅವರಿಬ್ಬರನ್ನು ಪಾಕ್ ಗುಪ್ತಚರ ಸಂಸ್ಥೆ ಐಎಸ್ಐನ ಏಜೆಂಟರು ಬೈಕ್ ನಲ್ಲಿ ಫಾಲೋ ಮಾಡಿದ್ದರು. ಈಗ ಆದ ಚಿಕ್ಕ ಅಪಘಾತವನ್ನೇ ನೆಪವಾಗಿಟ್ಟುಕೊಂಡು ಅವರ ವಿಚಾರಣೆ ನಡೆಸಲಾಯಿತು ಎಂದು ಹೇಳಲಾಗುತ್ತಿದೆ.

    ಇದೇ ಮೊದಲಲ್ಲ

    ಪಾಕ್ ಕುರಿತ ಬಿಜೆಪಿ ಸರಕಾರದ ಕಠಿಣ ನಿಲುವು ಇದೇ ಮೊದಲ ಬಾರಿಗೆ ವ್ಯಕ್ತವಾಗಿಲ್ಲ. ಅಣ್ವಸ್ತ್ರ ಪ್ರಯೋಗವನ್ನು ನಾವೇ ಮೊದಲ ಬಾರಿಗೆ ಮಾಡುವುದಿಲ್ಲ ಎಂದು ಭಾರತದ ನಿಲುವನ್ನು ಮುಂದಿನ ದಿನಗಳಲ್ಲಿ ಪರಿಷ್ಕರಿಸಬೇಕಾದೀತು ಎಂದು ಎಚ್ಚರಿಕೆಯನ್ನೂ ಈ ಹಿಂದೆ ರಾಜ್ ನಾಥ್ ಸಿಂಗ್ ನೀಡಿದ್ದರು. ಇನ್ನು ಪುಲ್ವಾಮಾ ಯೋಧರ ಹತ್ಯೆಗೆ ಪ್ರತಿಕಾರವಾಗಿ ಪಾಕ್ ಆಕ್ರಮಿತ ಕಾಶ್ಮೀರದೊಳಗೆ ನುಗ್ಗಿ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಅಂತೂ ಎಲ್ಲರಿಗೂ ಗೊತ್ತಿದೆ. ಹೀಗಿರುವಾಗ ರಾಜ್ ನಾಥ್ ಸಿಂಗ್ ಅವರ ಈ ಹೇಳಿಕೆಯನ್ನು ಕೂಡ ಲಘುವಾಗು ಪರಿಗಣಿಸುವುದು ಕಷ್ಟ ಎಂದೇ ಹೇಳಬಹುದು. ಆರ್ಥಿಕವಾಗಿ ಅತೀವ ಸಂಕಷ್ಟದಲ್ಲಿರುವ ಪಾಕಿಸ್ತಾನವಂತೂ ಸದ್ಯ ಪೂರ್ಣ ಪ್ರಮಾಣದ ಒಂದು ದಿನದ ಯುದ್ಧವನ್ನೂ ತಡೆದುಕೊಳ್ಳುವ ಶಕ್ತಿ ಹೊಂದಿಲ್ಲ. ಶೀತಲ ಸಮರವಿಲ್ಲದ ಈ ಕಾಲದಲ್ಲಿ ಅಮೆರಿಕದ ನೆರವು ಕೂಡ ಅದಕ್ಕೆ ದೊರೆಯುವುದಿಲ್ಲ ಎಂಬುದು ಅಷ್ಟೇ ಶತಸ್ಸಿದ್ಧ.

    ಪಿಒಕೆ ಆಸಕ್ತಿದಾಯಕ ವಿಷಯಗಳು

    ಇತಿಹಾಸದ ಪುಟಗಳನ್ನು ತೆರೆಯುತ್ತಾ ಹೋದರೆ ಪಾಕ್ ಆಕ್ರಮಿತ ಕಾಶ್ಮೀರದ ಕುರಿತು ಹಲವಾರು ಆಸಕ್ತಿದಾಯಕ ವಿಷಯಗಳು ತಿಳಿಯುತ್ತವೆ. 1947ರಲ್ಲಿ ಪಾಕಿಸ್ತಾನ ತನ್ನ ಗುಡ್ಡಗಾಡು ಜನರ ಪಡೆಯ ಮೂಲಕ ಪರೋಕ್ಷವಾಗಿ ಸಮರ ಸಾರಿ ಈ ಭಾಗವನ್ನು ಆಕ್ರಮಿಸಿಕೊಂಡಿತು. ಇದು ಎರಡು ಹಂತದ ಆಡಳಿತಾತ್ಮಕ ವ್ಯವಸ್ಥೆಯನ್ನು ಹೊಂದಿದೆ. ಒಂದು ಜಮ್ಮು ಮತ್ತು ಕಾಶ್ಮೀರ ಹಾಗೂ ಇನ್ನೊಂದು ಗಿಲ್ಗಿಟ್-ಬಾಲ್ಟೀಸ್ತಾನ್. ಪಿಒಕೆಯನ್ನು ಪಾಕಿಸ್ತಾನ ಅಜಾದ್ ಕಾಶ್ಮೀರ ಎಂದೇ ಕರೆಯುತ್ತಿದೆ. ಅದಕ್ಕೆ ಪ್ರತ್ಯೇಕವಾಗಿ ಅಧ್ಯಕ್ಷ ಮತ್ತು ಪ್ರಧಾನಮಂತ್ರಿಯಿದ್ದಾರೆ. ಈ ವ್ಯವಸ್ಥೆ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರೂ, ಪಾಕ್ ಮೂಗಿನ ನೇರದಲ್ಲೇ ಎಲ್ಲವೂ ಅಲ್ಲಿ ನಡೆಯುತ್ತಿವೆ ಎನ್ನುವುದು ಹಗಲಿನಷ್ಟೇ ನಿಚ್ಚಳ.

    ಅಜಾದ್ ಕಾಶ್ಮೀರ (ಗಿಲ್ಗಿಟ್ -ಬಾಲ್ಟಿಸ್ತಾನ್) ಸುಮರು 13,300 ಚದರ ಕಿ.ಮೀ. ವಿಸ್ತಾರವನ್ನು ಹೊಂದಿದೆ. ಜನಸಂಖ್ಯೆ ಸುಮಾರು 52 ಲಕ್ಷ ಎಂದು ತಿಳಿಯುತ್ತದೆ. ಇದರ ಭಾಗಗಳು ಪಾಕಿಸ್ತಾನದ ಪಂಜಾಬ್, ಅಫ್ಘಾನಿಸ್ತಾನದ ವಖ್ಹಾನ್ ಕಾರಿಡಾರ್ ಮತ್ತು ಚೀನಾದ ಕ್ಸಿನ್ ಜಿಯಾಂಗ್ ಪ್ರಾಂತ್ಯದ ಜತೆಗೆ ಕೂಡ ಗಡಿಯನ್ನು ಹಂಚಿಕೊಂಡಿದೆ. 10 ಜಿಲ್ಲೆಗಳು, 33 ತಾಲೂಕು, 182 ಫೆಡರಲ್ ಕೌನ್ಸಿಲ್ ಹೊಂದಿರುವ ಇದರ ರಾಜಧಾನಿ ಮುಝಾಫರಾಬಾದ್.

    1963ರಲ್ಲಿ ಹುಂನ್ಝಾ-ಗಿಲ್ಗಿಟ್ ಭಾಗದ ಸಂಕ್ಸಗಂ ಕಣಿವೆ ಪ್ರದೇಶವನ್ನು ಪಾಕಿಸ್ತಾನ ಚೀನಾಕ್ಕೆ ಹಸ್ತಾಂತರಿಸಿದ್ದು, ಈಗ ಇದನ್ನು ಬಿಡುಗಡೆ ಹೊಂದಿದ ಪ್ರದೇಶ ಎಂದು ಘೋಷಿಸಲಾಗಿದೆ.

    ನೆಹರು ಮನಸ್ಸು ಮಾಡಲಿಲ್ಲ

    1947ರ ವಿಭಜನೆಯ ಸಂದರ್ಭದಲ್ಲಿ ಪಶ್ತೂನ್ ಬುಡಕಟ್ಟು ಜನರು ಕಾಶ್ಮೀರ ಸ್ವಾತಂತ್ರ್ಯಕ್ಕಾಗಿ ಮಾಡಿದ ಹೋರಾಟಕ್ಕೆ ತಾವು ಬೆಂಬಲ ನೀಡಿದ್ದೆವು ಎಂದು ಪಾಕಿಸ್ತಾನ ಹೇಳಿಕೊಳ್ಳುತ್ತಿದೆ. ಆದರೆ ಆಗ ಅಲ್ಲಿನ ಮಹಾರಾಜರಾಗಿದ್ದ ರಾಜಾ ಹರಿಸಿಂಗ್ ನೆಹರೂ ಸರಕಾರದ ಜತೆಗೆ ಒಪ್ಪಂದ ಮಾಡಿಕೊಂಡು ರಕ್ಷಣೆ, ಅಂತಾರಾಷ್ಟ್ರೀಯ ವ್ಯವಹಾರ ಮತ್ತು ಸಂವಹನ ಕ್ಷೇತ್ರಗಳಲ್ಲಿ ಮಾತ್ರ ಭಾರತದ ಹಸ್ತಕ್ಷೇಪಕ್ಕೆ ಅವಕಾಶ ಸಿಗುವಂತಾಯಿತು. ಇದನ್ನು ಹೊರತು ಪಡಿಸಿ ಉಳಿದಂತೆ ಅದೊಂದು ಸ್ವಾಯತ್ತ ರಾಜ್ಯ ಅಂದರೆ ಪರೋಕ್ಷವಾಗಿ ದೇಶವಾಗಿಯೇ ಉಳಿಯಿತು.

    ಪಾಕಿಸ್ತಾನದ ಆಕ್ರಮಣದ ಹಿನ್ನೆಲೆಯಲ್ಲಿ ಆಗ ಪ್ರಧಾನಿಯಾಗಿದ್ದ ನೆಹರು ಮನಸ್ಸು ಮಾಡಿದ್ದರೆ ಪಾಕಿಗಳನ್ನು ಹೊಡೆದಟ್ಟಬಹುದಿತ್ತು. ಆದರೆ ನೆಹರು ಈ ವಿಷಯವನ್ನು ವಿಶ್ವಸಂಸ್ಥೆಯ ಬಾಗಿಲಿಗೆ ತಂದು ಬಿಟ್ಟರು. ಆಗಲೋ ಭಾರತ ಯಾವುದೇ ರೀತಿಯ ಒತ್ತಡವನ್ನು ಹಾಕುವ ಸ್ಥಿತಿಯಲ್ಲಿ ಇರಲಿಲ್ಲ. ಹೀಗಾಗಿ ಅಮೆರಿಕ (ಶೀತಲ ಸಮರ ಕಾಲ) ಪ್ರೇರಿತ ರಾಜಕೀಯದಿಂದಾಗಿ ಕಾಶ್ಮೀರದಲ್ಲಿ ಜನ ಮತಗಣನೆಗೆ ಅದು ಸೂಚಿಸಿತು. ಇದನ್ನೇ ಇಟ್ಟುಕೊಂಡು ಈಗಲೂ ಪಾಕಿಸ್ತಾನ, ಈ ವಿಷಯವನ್ನು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪ್ರಸ್ತಾಪಿಸುತ್ತಲೇ ಬಂದಿದೆ.

    ಭಯೋತ್ಪದಕರ ತಾಣ

    ಅಜಾದ್ ಕಾಶ್ಮೀರವನ್ನು ಪಾಕಿಸ್ತಾನ ಯಾವತ್ತೂ ಭಾರತದ ವಿರುದ್ಧದ ಷಡ್ಯಂತ್ರದ ಅಸ್ತ್ರವಾಗಿಯೇ ಬಳಸಿಕೊಂಡು ಬಂದಿದೆ. ಗಡಿಭಾಗವಾಗಿದ್ದರಿಂದ ಅಲ್ಲಿ ಭಯೋತ್ಪಾದಕರ ನೆಲೆಗಳು, ತರಬೇತಿ ಕೇಂದ್ರಗಳನ್ನು ಕೂಡ ನಿರ್ಮಿಸಿದೆ. ನೇರವಾಗಿ ಅಲ್ಲಿಗೆ ಹೋಗಿ ಭಾರತ ಯುದ್ಧ ಮಾಡಿದರೆ ಆಗ ಅದು ಅಂತಾರಾಷ್ಟ್ರೀಯ ವಿಷಯವಾಗಿ ಪರಿಸ್ಥಿತಿ ವಿಷಮಕ್ಕೆ ಹೋಗಬಹುದು ಎಂಬ ಒಂದೇ ಕಾರಣದಿಂದ ಭಾರತ ಕೂಡ ಸುಮ್ಮನಿರುತ್ತಾ ಬಂದಿದೆ. ಯಾಕೆಂದರೆ ಎರಡೂ ದೇಶಗಳು ಅಣ್ವಸ್ತ್ರ ಸಜ್ಜಿತವಾಗಿವೆ. ಆದರೆ, ಭಾರತಕ್ಕೆ ಇರುವ ಅಂತಾರಾಷ್ಟ್ರೀಯ ಮತ್ತು ಮಾನವೀಯ ಬದ್ಧತೆ ಪಾಕಿಸ್ತಾನಕ್ಕೆ ಇಲ್ಲದಿರುವುದು ಇದಕ್ಕೆ ಕಾರಣ ಎಂದೇ ವಿಶ್ಲೇಷಿಸಲಾಗುತ್ತಿದೆ.

    ಶ್ರೀವತ್ಸ ನಾಡಿಗ್
    ಶ್ರೀವತ್ಸ ನಾಡಿಗ್https://kannadapress.com/
    ಶ್ರೀವತ್ಸ ನಾಡಿಗ್ ಕನ್ನಡಪ್ರೆಸ್.ಕಾಮ್ ನ ಪ್ರಧಾನ ಸಂಪಾದಕ ಮತ್ತು ಸಂಸ್ಥಾಪಕ
    spot_img

    More articles

    LEAVE A REPLY

    Please enter your comment!
    Please enter your name here

    Latest article

    error: Content is protected !!