26.2 C
Karnataka
Thursday, November 21, 2024

    ತಮ್ಮ ಭವಿಷ್ಯಕ್ಕೆ ತಾವೇ ಚಪ್ಪಡಿ ಎಳೆದುಕೊಂಡರೇ ವಿಶ್ವನಾಥ್?

    Must read


    ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ರಾಜ್ಯ ಕೋರ್ ಕಮಿಟಿಯಂತೆಯೇ ಬಿಜೆಪಿ ವರಿಷ್ಠರೂ ಸಮತೋಲನದ ಹೆಜ್ಜೆ ಇರಿಸಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶಿಫಾರಸು ಮಾಡಿದ್ದ ಮೂವರ ಪೈಕಿ ಅಡಗೂರು ಎಚ್.ವಿಶ್ವನಾಥ್ ಹೊರತುಪಡಿಸಿ ಎಂ.ಟಿ.ಬಿ.ನಾಗರಾಜ್ ಮತ್ತು ಆರ್.ಶಂಕರ್ ಅವರಿಗೆ ಟಿಕೆಟ್ ನೀಡಲಾಗಿದೆ.

    ಕೋರ್ ಕಮಿಟಿ ಶಿಫಾರಸಿನಂತೆ ಚಿಂಚೋಳಿ ಮಾಜಿ ಶಾಸಕ ಸುನೀಲ್ ವಲ್ಯಾಪುರೆ ಅವರನ್ನು ಕಣಕ್ಕೆ ಇಳಿಸಿದ್ದರೆ, ಸಾಮಾನ್ಯ ಕಾರ್ಯಕರ್ತನ ಕೋಟಾದಲ್ಲಿ ದಕ್ಷಿಣ ಕನ್ನಡದ ಪ್ರತಾಪ್‌ಸಿಂಹ ನಾಯಕ್ ಅವರಿಗೆ ಟಿಕೆಟ್ ನೀಡಲಾಗಿದೆ.

    ಇಲ್ಲಿ ಯಡಿಯೂರಪ್ಪ, ಕೋರ್ ಕಮಿಟಿ, ವರಿಷ್ಠರು ಈ ಮೂವರಲ್ಲಿ ಯಾರಿಗೂ ಅಸಮಾಧಾನವಾಗಿಲ್ಲ, ಯಾರೂ ಸೋತಿಲ್ಲ.
    ನಿಜವಾಗಿ ಸೋತವರು ಎಂದರೆ ವಿಶ್ವನಾಥ್ ಮಾತ್ರ.

    ಒಂದರ್ಥದಲ್ಲಿ ಇಲ್ಲಿಗೆ ವಿಶ್ವನಾಥ್ ಅವರ ರಾಜಕೀಯ ಬದುಕು ಬಹುತೇಕ ಮುಗಿದಂತಾಗಿದೆ.ಹುಣಸೂರು ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಅವರು ದುಡುಕದೇ ಇದ್ದಿದ್ದರೆ ರಾಜಕೀಯ ಪುನರ್ಜನ್ಮ ಪಡೆಯಲು ಅವಕಾಶವಿತ್ತು. ಅಲ್ಲಿ `ಹಳ್ಳಿ ಹಕ್ಕಿ’ಗೆ ಸೋಲು ಖಚಿತ ಎನ್ನುವುದನ್ನು ಗುಪ್ತಚರ ಇಲಾಖೆ ಸ್ಪಷ್ಟವಾಗಿ ತಿಳಿಸಿತ್ತು. ಬಿಜೆಪಿ ಆಂತರಿಕ ವರದಿಯೂ ಅದನ್ನೇ ಹೇಳಿತ್ತು. ಖುದ್ದು ಮುಖ್ಯಮಂತ್ರಿ ಸಹ, `ಅವಸರಪಡಬೇಡಿ. ಸ್ದಲ್ಪ ತಡೆದುಕೊಳ್ಳಿ. ಎಮ್ಮೆಲ್ಸಿ ಮಾಡಿ ಮಂತ್ರಿ ಮಾಡ್ತೀನಿ. ಉಪ ಚುನಾವಣೆಗೆ ಸ್ಪರ್ಧೆ ಬೇಡ’ ಎಂದು ಸಾರಿಸಾರಿ ಹೇಳಿದ್ದರು. ಆದರೂ ವಿಶ್ವನಾಥ್ ಪ್ರತಿಷ್ಠೆಗೆ ಬಿದ್ದು ತಮ್ಮ ಭವಿಷ್ಯಕ್ಕೆ ತಾವೇ ಕಲ್ಲು ಹಾಕಿಕೊಂಡರು.

    ರಾಣೆಬೆನ್ನೂರು ಕ್ಷೇತ್ರದ ಪಕ್ಷೇತರ ಶಾಸಕರಾಗಿದ್ದ ಆರ್.ಶಂಕರ್ ಸಹ ಸೋಲುತ್ತಾರೆಂಬ ವರದಿ ಇತ್ತು. ಹೀಗಾಗಿ ಅವರಿಗೆ ಆಗ ಟಿಕೆಟ್ ನೀಡದೇ, ಕೊಟ್ಟ ಮಾತಿನಂತೆ ವಿಧಾನ ಪರಿಷತ್‌ಗೆ ಟಿಕೆಟ್ ನೀಡಲಾಗಿದೆ. ವಿಶ್ವನಾಥ್ ಸಹ ಉಪ ಚುನಾವಣೆ ವೇಳೆ ದುಡುಕದೇ ಇದ್ದಿದ್ದರೆ ಈಗ ಶಾಸಕರಾಗಿ ಮಂತ್ರಿಯೂ ಆಗಬಹುದಿತ್ತು. ವಿಶ್ವನಾಥ್ ಪರವಾಗಿ ಅವರೊಂದಿಗೆ ರಾಜೀನಾಮೆ ನೀಡಿದ್ದ ಎಲ್ಲರೂ ವಕಾಲತ್ತು ವಹಿಸಿದ್ದರು. ಪಕ್ಷಕ್ಕೆ ಕರೆತಂದ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಸಹ ವಿಧಾನ್ ಪರಿಷತ್‌ಗೆ ಟಿಕೆಟ್ ನೀಡಬೇಕೆಂದು ಒತ್ತಾಯಿಸಿದ್ದರು. ಟಿಕೆಟ್ ನೀಡದಿದ್ದರೆ ವಿಶ್ವನಾಥ್ ಬಾಯಿ ಮುಚ್ಚಿಸುವುದು ಕಷ್ಟ ಎಂಬ ಕಾರಣದಿಂದ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಲಹೆಯಂತೆ ಕೋರ್ ಕಮಿಟಿ ಸಹ ವಿಶ್ವನಾಥ್ ಹೆಸರನ್ನು ವರಿಷ್ಠರಿಗೆ ರವಾನಿಸಿತ್ತು.

    ಆದರೆ ಬಿಜೆಪಿ ಕೇಂದ್ರ ಚುನಾವಣಾ ಮಂಡಳಿ ವಿಶ್ವನಾಥ್ ಬಗ್ಗೆ ಒಲವು ತೋರಿಸಿಲ್ಲ. ಅದಕ್ಕೆ ಅವರ ಬಾಯಿಬಡುಕತನ, ವಯಸ್ಸು ಮತ್ತು ಅನಾರೋಗ್ಯ ಮೂರೂ ಕಾರಣ ಇರಬಹುದು. ಜತೆಗೆ ಎಂ.ಟಿ.ಬಿ., ಶಂಕರ್, ವಿಶ್ವನಾಥ್ ಮೂವರೂ ಕುರುಬ ಸಮುದಾಯದವರು ಎಂಬ ಕಾರಣವೂ ಇರಬಹುದು. ಸಲಹೆ ಧಿಕ್ಕರಿಸಿ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತ ಕಾರಣದಿಂದ ಅಂತಿಮವಾಗಿ ವಿಶ್ವನಾಥ್‌ಗೆ ಟಿಕೆಟ್ ನಿರಾಕರಿಸಲಾಗಿದೆ.

    ಹೊಸಕೋಟೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಎಂ.ಟಿ.ಬಿ. ನಾಗರಾಜ್ ಸಹ ಸೋತಿಲ್ಲವೆ? ಅವರಿಗೆ ಟಿಕೆಟ್ ನೀಡಿ ವಿಶ್ವನಾಥ್‌ಗೆ ನಿರಾಕರಿಸಿರುವುದು ತಪ್ಪಲ್ಲವೇ ಎಂಬ ಪ್ರಶ್ನೆ ಏಳಬಹುದು. ಇಬ್ಬರ ಪ್ರಕರಣದಲ್ಲಿ ಭಿನ್ನತೆ ಇದೆ. ಎಂ.ಟಿ.ಬಿ. ಗೆಲ್ಲುವ ಸಾಧ್ಯತೆಗಳಿದ್ದವು, ಅವರಿಗೆ ಅಡ್ಡಗಾಲು ಹಾಕಿದ್ದು ಬಿಜೆಪಿ ಸಂಸದರೇ ಆಗಿರುವ ಬಿ.ಎನ್.ಬಚ್ಚೇಗೌಡ ಮತ್ತು ಅವರ ಪುತ್ರ ಶರತ್ ಬಚ್ಚೇಗೌಡ. ಎಂ.ಟಿ.ಬಿ ಸೋಲಿನಲ್ಲಿ ಬಿ.ಎನ್.ಬಚ್ಚೇಗೌಡರ ಕೊಡುಗೆ ದೊಡ್ಡದು. ಅದು ವರಿಷ್ಠರಿಗೂ ಗೊತ್ತು. ಹೀಗಾಗಿಯೇ ಆಗ ಪರೋಕ್ಷವಾಗಿ ಪಕ್ಷದಿಂದಲೇ ಆಗಿರುವ ಅನ್ಯಾಯವನ್ನು ಈಗ ಸರಿಪಡಿಸಿದ್ದಾರೆ.

    ಪಕ್ಷ ಸಂಘಟನೆ, ಸಂಪನ್ಮೂಲದ ವಿಚಾರದಲ್ಲಿ ಸಹ ವಿಶ್ವನಾಥ್, ಎಂ.ಟಿ.ಬಿ. ಅವರನ್ನು ಹೋಲಿಸಲಾಗದು. ಮೈಸೂರು ರಾಜಕಾರಣದ ಒಳಸುಳಿಗಳಿಂದಾಗಿ ಸೋಲು ಖಚಿತವೆಂಬುದು ತಿಳಿದೂ ವಿಶ್ವನಾಥ್ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಕೈ ಸುಟ್ಟುಕೊಂಡಿದ್ದಾರೆ.

    ವಿಶ್ವನಾಥ್ ಹೊರತುಪಡಿಸಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರದ ವಿರುದ್ಧ ಬಂಡೆದ್ದು, ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಅಸ್ವಿತ್ವಕ್ಕೆ ಬರಲು ಕಾರಣರಾದ ಬಹುತೇಕ ಎಲ್ಲರಿಗೂ ಈಗ ಸ್ಥಾನಮಾನ ಸಿಕ್ಕಂತಾಗಿದೆ. ಅಲ್ಲಿಗೆ ಯಡಿಯೂರಪ್ಪ ಕೊಟ್ಟ ಮಾತು ಉಳಿಸಿಕೊಂಡAತಾಗಿದೆ. ಈಗ ಅವರು ನಿರಾಳ. ರಾಜರಾಜೇಶ್ವರಿ ಕ್ಷೇತ್ರದ ಮುನಿರತ್ನ, ಮಸ್ಕಿಯ ಪ್ರತಾಪ್‌ಗೌಡ ಪಾಟೀಲ್ ಪ್ರಕರಣಗಳು ಕೋರ್ಟ್ನಲ್ಲಿ ಇತ್ಯರ್ಥಕ್ಕೆ ಕಾಯುತ್ತಿವೆ.

    ಕಾಂಗ್ರೆಸ್ ಅಚ್ಚರಿಯ ಆಯ್ಕೆ


    ಬಿಜೆಪಿಯಂತೆಯೇ ಕಾಂಗ್ರೆಸ್ ಸಹ ಅಚ್ಚರಿಯ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ. ನಾಲ್ಕು ಅವಧಿಗೆ ರಾಜ್ಯಸಭೆ ಸದಸ್ಯರಾಗಿದ್ದ ಬಿ.ಕೆ.ಹರಿಪ್ರಸಾದ್ ಅವರನ್ನು ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆ ಮಾಡುತ್ತಿರುವುದು ರಾಜ್ಯ ನಾಯಕರಿಗೆ ಹಲವು ಸಂದೇಶಗಳನ್ನೂ ರವಾನಿಸಿದೆ. ಹರಿಪ್ರಸಾದ್‌ಗೆ ಕೆಲವರ್ಷಗಳಿಂದ ಈಚೆಗೆ ರಾಜ್ಯ ರಾಜಕಾರಣದ ಬಗ್ಗೆ ಆಸಕ್ತಿ ಮೂಡಿರುವುದು ಅದಕ್ಕೆ ಕಾರಣ.

    ವಿಶೇಷವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಈಗ ಸಮತೋನದ ಹೆಜ್ಜೆ
    ಇರಿಸಬೇಕಿದೆ. ಹೈಕಮಾಂಡ್‌ಗೆ ರಾಜ್ಯದ ವಿದ್ಯಮಾನಗಳ ನಿಖರ ಮಾಹಿತಿ ನೀಡುವ ವಿಶ್ವಾಸಾರ್ಹ ವ್ಯಕ್ತಿಯೊಬ್ಬರು ಬೇಕು ಎಂಬ ಲೆಕ್ಕಾಚಾರವೂ ಇದರ ಹಿಂದೆ ಇರಬಹುದು. ರಾಜ್ಯಸಭೆ ಸದಸ್ಯರಾಗಿದ್ದವರನ್ನು ವಿಧಾನ ಪರಿಷತ್‌ಗೆ ನೇಮಕ ಮಾಡುವುದು ಕಾಂಗ್ರೆಸ್‌ನಲ್ಲಿ ಹೊಸತೇನೂ ಅಲ್ಲ. ಕೇಂದ್ರದಲ್ಲಿ ಯೋಜನೆ ಮತ್ತು ಸಾಂಖ್ಯಿಕ ಖಾತೆ ಸಹಾಯಕ ಸಚಿವರಾಗಿದ್ದ ಎಂ.ವಿ.ರಾಜಶೇಖರನ್ ಅವರನ್ನೂ ಎಮ್ಮೆಲ್ಸಿ ಮಾಡಲಾಗಿತ್ತು. ಇನ್ನು
    ನಜೀರ್ ಅಹಮದ್‌ಗೆ ಟಿಕೆಟ್ ನೀಡುವ ಮೂಲಕ ಮುಸ್ಲಿಂ ಲಾಬಿಗೆ ಕಡಿವಾಣ ಹಾಕುವುದರ ಜತೆಗೆ ಪಕ್ಷ ಅಲ್ಪಸಂಖ್ಯಾತರ ಪರ ಎಂಬ ಸಂದೇಶವನ್ನೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ರವಾನಿಸಿದ್ದಾರೆ.

    ಶ್ರೀವತ್ಸ ನಾಡಿಗ್
    ಶ್ರೀವತ್ಸ ನಾಡಿಗ್https://kannadapress.com/
    ಶ್ರೀವತ್ಸ ನಾಡಿಗ್ ಕನ್ನಡಪ್ರೆಸ್.ಕಾಮ್ ನ ಪ್ರಧಾನ ಸಂಪಾದಕ ಮತ್ತು ಸಂಸ್ಥಾಪಕ
    spot_img

    More articles

    1 COMMENT

    1. ಕೊಡ್ಲಿ ಮತ್ತು ತಮ್ಮ ವಿಶ್ಲೇಷಣೆಯ ನಂತರ… ನಡೆದ ಘಟನೆ ಮತ್ತೆ ತಾವು ವಿಶ್ವನಾಥ್ ರವರ ಮುಂದಿನ ನಡೆ ಪ್ರಕಟಿಸಲೇ ಬೇಕಾದ ಸಂದರ್ಭ…

    LEAVE A REPLY

    Please enter your comment!
    Please enter your name here

    Latest article

    error: Content is protected !!