19.9 C
Karnataka
Sunday, September 22, 2024

    ಅಮ್ಮಾ…ಬೋ..ರು ಎನ್ನುವ ಉದ್ಗಾರದಿಂದ ಮಕ್ಕಳನ್ನು ಹೊರತರುವುದು ಹೇಗೆ?

    Must read

    ಹಲವರ ಮನವಿ, ಕೆಲವರ ವಿರೋಧಗಳ ನಡುವೆ ಅಂತೂ ಇಂತೂ ಆನ್ ಲೈನ್ ತರಗತಿಗಳು ತಾತ್ಕಾಲಿಕವಾಗಿ ನಿಲ್ಲಿಸಲ್ಪಟ್ಟಿವೆ. ಯಾವುದೇ ವಿಷಯದ ಬಗ್ಗೆ ಪರ ಅಥವಾ ವಿರೋಧವಾಗಿ ಮಾತನಾಡುವುದು ಆ ಕ್ಷಣಕ್ಕೆ ಸುಲಭ ಆದರೆ ಒಂದು ನಿರ್ಧಾರಕ್ಕೆ ಬಂದ ಮೇಲೆ ಅದಕ್ಕೊಂದು ಪರ್ಯಾಯ ಪರಿಹಾರವನ್ನು ನೀಡುವುದು ಬಹಳ ಮುಖ್ಯ. ಸದ್ಯದ ಪರಿಸ್ಥಿತಿಯಲ್ಲಿ 1 ರಿಂದ 5ನೇ ತರಗತಿಯವರೆಗೆ ಆನ್ಲೈನ್ ತರಗತಿಯನ್ನು ನಿಲ್ಲಿಸಿ, 6ರಿಂದ 10ನೇ  ತರಗತಿಯ ಮಕ್ಕಳಿಗೆ ಸೂಕ್ತ ಮಾರ್ಗದರ್ಶಿ ನಿಯಮಗಳ ಪ್ರಕಾರ ಮುಂದುವರಿಸಿ ಎಂದು ಶಿಕ್ಷಣ ಇಲಾಖೆಯ ಅಧಿಕೃತ ಆದೇಶ ಹೊರಬಿದ್ದಿದೆ.

    ಈಗಿರುವುದು ನಿಜವಾದ ಸವಾಲು. ತರಗತಿಗಳೇ ಇಲ್ಲವೆಂದು ಕುಣಿಯುತ್ತಿರುವ ಒಂದರಿಂದ ಐದನೇ ತರಗತಿಯ ಚಿನ್ನಾರಿಗಳು ಹಾಗೂ ಮೂರರಿಂದ ನಾಲ್ಕು ತಾಸುಗಳ ಕಾಲ ಆನ್ ಲೈನ್ ಪಾಠ ಪ್ರವಚನಗಳಲ್ಲಿ ವ್ಯಸ್ತರಾಗುವ ಆರರಿಂದ ಹತ್ತರವರೆಗಿನ ಮಕ್ಕಳು ತಮ್ಮ ಉಳಿದ ಅವಧಿಯನ್ನು ಹೇಗೆ ಕಳೆಯಬೇಕು? ಕೊರೋನಾದ ಕಾಟದಿಂದ ಹೊರಾಂಗಣದ ಆಟಗಳನ್ನಾಡುವಂತಿಲ್ಲ, ಸ್ನೇಹಿತರೊಡನೆ ಬೆರೆಯುವಂತಿಲ್ಲ, ಸಿನೆಮಾ ಥಿಯೇಟರ್ ಗಳಿಲ್ಲ, ಮಾಲ್ ಗಳಿಗೆ  ಹೋಗುವಂತಿಲ್ಲ. ಪೋಷಕರ ಬಾಧ್ಯತೆಗಳು ಹೆಚ್ಚಾಗುವ ಸಂದರ್ಭವಿದು. ಹಾಗೆಯೇ ಮಕ್ಕಳು ಯಾಂತ್ರಿಕ ಓದಿನ ಜೀವನದಿಂದ ಹೊರಬಂದು ತನ್ನ  ಇಷ್ಟದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಸದಾವಕಾಶವೂ ಹೌದು. ಅಮ್ಮಾ ಬೋ……….ರು ಎಂಬ  ಉದ್ಗಾರದಿಂದ ಹೊರಬಂದು ಮಕ್ಕಳು ತಮ್ಮ ಏಕತಾನತೆಯ ದಿನಗಳನ್ನು ಹೇಗೆ ಸುಂದರವಾಗಿಸಿಕೊಳ್ಳಬಹುದು ಎಂದು ಯೋಚಿಸೋಣ. .

    ಯೋಗಾಭ್ಯಾಸ ಮತ್ತು ಧ್ಯಾನ

    ಮಕ್ಕಳ ದಿನಚರಿಯನ್ನು ಸೂರ್ಯನಮಸ್ಕಾರ ಯೋಗಾಭ್ಯಾಸ ಮತ್ತು ಪ್ರಾಣಾಯಾಮಗಳಿಂದ ಪ್ರಾರಂಭಿಸುವಂತೆ ಮನೆಯ ಹಿರಿಯರು ಮಾರ್ಗದರ್ಶನ ನೀಡಬೇಕು.
    ಮಗುವಿನ ವಯಸ್ಸಿಗೆ ಅನುಗುಣವಾಗಿ ಇದನ್ನು ನಿರ್ವಹಿಸುವುದರಿಂದ ಮಗುವಿನಲ್ಲಿ ಏಕಾಗ್ರತೆ, ಬದುಕನ್ನು ಎದುರಿಸುವ ಧೈರ್ಯ ಮತ್ತು ಈಗಿನ ಸಂದರ್ಭದಲ್ಲಿ ಅತೀ ಅವಶ್ಯಕವಾದ ರೋಗನಿರೋಧಕ ಶಕ್ತಿಯೂ ವೃದ್ಧಿಯಾಗುತ್ತದೆ.

    ಒಳಾಂಗಣ, ಜನಪದ ಆಟಗಳು.

    ಚೌಕಾ ಬಾರಾ

    ಮಗು ಮತ್ತು ಮಗುವಿನ ಕ್ರಿಯೇಟಿವಿಟಿಗಳ ನಡುವಿನ ಸೇತುವೆಯೇ ಆಟ. ಒಳಾಂಗಣ ಆಟಗಳಾದ ಚೆಸ್, ಕೇರಂ, ಹಾವು ಏಣಿ ಮುಂತಾದ ಆಟಗಳನ್ನು ಕಲಿಯಲು ಇದು ಸಕಾಲ. ಅಜ್ಜಿ ತಾತಂದಿರು ಎಂದೋ ಆಡಿ ಮರೆತ ಆಟಗಳಾದ ಅಳಿಗುಳಿ ಆಟ, ಕಡ್ಡಿ ಆಟ, ಪಗಡೆ, ಹುಲಿಮನೆ ,ಚೌಕಾಬಾರ ಆಟಗಳಂತಹ ಜನಪದ ಆಟಗಳನ್ನು ತಮ್ಮ ಮೊಮ್ಮಕ್ಕಳಿಗೆ ಕಲಿಸಿ ತಮ್ಮ ಬಾಲ್ಯದ ಸವಿ ನೆನಪುಗಳನ್ನು ಮೆಲುಕು ಹಾಕುವುದರಲ್ಲಿರುವ ಸಂತೋಷ ಬೇರೆಲ್ಲಿ?  ಕೌಟುಂಬಿಕ ಬಾಂಧವ್ಯ ವೃದ್ಧಿಯೊಂದಿಗೆ ಮಕ್ಕಳ ಮನಸ್ಸು ಪ್ರಫುಲ್ಲವಾಗುತ್ತದೆ.


    ಹವ್ಯಾಸಗಳು

    ಒಳ್ಳೆಯ ಹವ್ಯಾಸಗಳು ಮಕ್ಕಳಿಗೆ ತಮ್ಮ ಆಂತರಿಕ ಶಕ್ತಿಯನ್ನು ತಾವೇ  ಆವಿಷ್ಕರಿಸುತ್ತ ಆತ್ಮವಿಶ್ವಾಸವನ್ನು ಉನ್ನತೀಕರಿಸಲು ಎನರ್ಜಿ ಬೂಸ್ಟರ್ ಗಳಂತೆ ಕೆಲಸ ಮಾಡುತ್ತವೆ. ಶಾಲಾದಿನಗಳಲ್ಲಿ ಸಮಯಾಭಾವದಿಂದ ತ್ಯಜಿಸಿದ ಹತ್ತುಹಲವು ಹವ್ಯಾಸಗಳನ್ನು ಮತ್ತೆ ಚಿಗುರೊಡೆಸಲು ಈ ಸಮಯ ಸೂಕ್ತವಾಗಿದೆ. ಸಂಗೀತ, ಚಿತ್ರಕಲೆ ,ಓದು, ಕ್ಲೇ ಮಾಡೆಲ್ ಗಳ ತಯಾರಿಕೆ, ಒರಿಗೆಮಿ, ಸಂಗೀತೋಪಕರಣಗಳ ಕಲಿಕೆ ಹೀಗೆ ಪಟ್ಟಿ ಮುಂದುವರಿಯುತ್ತದೆ. ಆದರೆ ಇವೆಲ್ಲ ಸಾಮಾನ್ಯವಾಗಿ ಎಲ್ಲ ಮಕ್ಕಳಿಗೂ ಇರುವ ಹವ್ಯಾಸಗಳೇ, ವಿಶೇಷ ಕೌಶಲ್ಯಗಳನ್ನು ಬೆಳೆಸಿಕೊಳ್ಳುವತ್ತ ಗಮನ ಹರಿಸಿದರೆ ಕೊರೋನ ಕಾಲದ ಅನುಭವವು ಮುಂದಿನ  ಜೀವನಕ್ಕೆ ಸ್ಫೂರ್ತಿದಾಯಕವಾಗಬಹುದು. ಗಾರ್ಡನಿಂಗ್ ನ ಮೂಲಕ ಪರಿಸರ ಪ್ರೇಮ, ರಾತ್ರಿಯಾಗಸದಲ್ಲಿ ಮಿನುಗುವ ನಕ್ಷತ್ರಗಳ ವೀಕ್ಷಣೆ, ಸಪ್ತರ್ಷಿಮಂಡಲದ ಗುರುತಿಸುವಿಕೆ, ಯು ಟ್ಯೂಬ್ ವಿಡಿಯೋಗಳನ್ನು ನೋಡಿಕೊಂಡು ಮ್ಯಾಜಿಕ್ ಕಲಿಕೆ, ಕ್ವಿಲ್ಲಿಂಗ್, ಚಿಕ್ಕಚಿಕ್ಕ ವೈಜ್ಞಾನಿಕ ಪ್ರಯೋಗಗಳನ್ನು ಮಾಡುವುದು, ಜರ್ಮನ್, ಫ್ರೆಂಚ್, ಸ್ಪಾನಿಷ್ ನಂತಹ ಬೇರೆ ಬೇರೆ ಭಾಷೆಗಳನ್ನು ಕಲಿಯುವುದು, ಪಪೆಟ್ ಗಳನ್ನು ತಯಾರಿಸಿ ಕುಣಿಸುವುದು, ಇವೆಲ್ಲ ಮಕ್ಕಳು ಸಮಯವನ್ನು ರಚನಾತ್ಮಕವಾಗಿ ಕಳೆಯುವಂತೆ  ಮಾಡುತ್ತವೆ.

    ನವನವೀನ ಹವ್ಯಾಸ

    ಮಕ್ಕಳ ಅರಿವಿಗೇ ಇಲ್ಲದ ನವನವೀನ ಹವ್ಯಾಸಗಳಿವೆ. ಫ್ಲವರ್ ಪ್ರೆಸ್ಸಿಂಗ್ (flower pressing) ನಿಂದ ಕಲಾಕೃತಿಗಳನ್ನು ತಯಾರಿಸುವುದು, ಉತ್ತಮ ಸಂದೇಶವಿರುವ      5 – 10 ನಿಮಿಷದ ಕಿರುಚಿತ್ರಗಳನ್ನು ಬರೆದು ನಿರ್ದೇಶಿಸಿ ನಟಿಸಿ ಮೊಬೈಲ್ಗಳ ಮೂಲಕ ಚಿತ್ರೀಕರಣ ಮಾಡುವುದು,  ರೋಬೋಟಿಕ್ಸ್ ಮುಂತಾದ ಸಾಫ್ಟ್ ವೇರ್ ಸ್ಕಿಲ್ ಗಳನ್ನು ಬೆಳೆಸಿಕೊಳ್ಳುವುದು, ಇವೆಲ್ಲ ಮಕ್ಕಳ ಜ್ಞಾನದ ಪರಿಧಿಯನ್ನು ವಿಸ್ತಾರಗೊಳಿಸುತ್ತವೆ.

    ಕಲಿಯುವವನಿಗೆ ಕಲಿಕೆಯ ಮೂಲಗಳು ತಾನೇತಾನಾಗಿ ದೊರೆಯುತ್ತವೆ. 5ನೇ ತರಗತಿಯ ಮಗು ಯು ಟ್ಯೂಬನ್ನು ನೋಡಿ sensor and voice automated sanitiser ನ್ನು ತಯಾರಿಸಬಲ್ಲದಾದರೆ ಮಕ್ಕಳ ಪ್ರತಿಭೆಗೆ ಎಲ್ಲೆಯೇ ಇಲ್ಲ. ಪ್ರೋತ್ಸಾಹಿಸುವವರು ಬೇಕಷ್ಟೆ.

    ಸರ್ಕಾರಿ ಶಾಲೆಗಳ  ಮಕ್ಕಳ ಪಾಡೇನು

    ಮೇಲೆ ತಿಳಿಸಿದ ಹಲವು ಹವ್ಯಾಸಗಳು ಪೋಷಕರ ಸಹಾಯ, ಕೊಂಚ ಹಣ, ಮತ್ತು ಇಂಟರ್ನೆಟ್ ಸೌಲಭ್ಯವನ್ನು ಅವಲಂಬಿಸಿವೆ. ಆದರೆ ಸರ್ಕಾರಿ ಶಾಲೆಗಳಲ್ಲಿ ಓದುವ ಬಡ ಮಕ್ಕಳ ಪೋಷಕರಿಗೆ ತುತ್ತಿನ ಚೀಲ ತುಂಬಿಸುವುದೇ ದೊಡ್ಡ ಸವಾಲಾಗಿರುವಾಗ ಹವ್ಯಾಸಗಳಿಗೆಲ್ಲಿ ಮಹತ್ವ? ಹಾಗಾದರೆ ಇಂತಹ ಮಕ್ಕಳು ಶಾಲೆಯಿಲ್ಲದ ಈ ಸಮಯದಲ್ಲಿ ಬೀದಿ ಬೀದಿ ಸುತ್ತ ಬೇಕೇ? ಇಂತಹ ಸಂದರ್ಭಗಳಲ್ಲಿ ಸಮುದಾಯ ಮತ್ತು ಸರ್ಕಾರದ ನಿಜವಾದ ಬಾಧ್ಯತೆಗಳು ಮುಂಚೂಣಿಗೆ ಬರುತ್ತವೆ.

    ಸರಕಾರೇತರ ಸಂಸ್ಥೆಗಳು (NGO) ಸಮಾಜದ ಉದ್ಧಾರದಲ್ಲಿ  ಆಸಕ್ತಿ ಇರುವ ಸಂಘ ಸಂಸ್ಥೆಗಳು ಬಡ ಮಕ್ಕಳನ್ನು ಗುರುತಿಸಿ ಅವರಿಗೆ  playing kits, ಕ್ಲೇ ಮಾಡೆಲ್ ಗಳು,  ಒರಿಗೆಮಿ ಹಾಳೆಗಳು,  ಮಾದರಿಗಳ ತಯಾರಿಕೆಗೆ ಬೇಕಾದ ಕಚ್ಚಾ ವಸ್ತುಗಳನ್ನು ನೀಡುವ ಜವಾಬ್ದಾರಿಯನ್ನು ತೆಗೆದುಕೊಂಡರೆ, ಆ ಮಕ್ಕಳನ್ನೂ ಮುಖ್ಯವಾಹಿನಿಗೆ ತರಲು ಅನುಕೂಲವಾಗುತ್ತದೆ . ಇದರಿಂದ ಮಕ್ಕಳು ಕೊರೋನಾ ಅವಧಿಯ ನಂತರವೂ ಕಲಿಕೆಯಲ್ಲಿ ಆಸಕ್ತಿಯನ್ನು ಉಳಿಸಿಕೊಳ್ಳುತ್ತಾರೆ.

    ಸರಕಾರವು ಈ ನಿಟ್ಟಿನಲ್ಲಿ ಕಾರ್ಯಯೋಜನೆಯನ್ನು ಹಾಕಿಕೊಂಡು ಕೆಲಸ ಮಾಡಬೇಕಿದೆ. ಸರಕಾರದ “ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ” (Department of Skill Development and Enterpreneurship and Livelihood)   ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳು ಮಕ್ಕಳ ಸರ್ವತೋಮುಖ ಬೆಳವಣಿಗೆಗಾಗಿ, ಕೌಶಲ್ಯ ಹವ್ಯಾಸಗಳನ್ನು ಉದ್ದೀಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು ಇದಕ್ಕಿಂತ ಸಕಾಲ ಇನ್ನಿಲ್ಲ. ಇದು ಅವರ ಜವಾಬ್ದಾರಿ ಕೂಡ ಆಗಿದೆ.  ಇಲಾಖೆಯು  ಒದಗಿಸುತ್ತಿರುವ ಕೌಶಲ್ಯ ತರಬೇತಿಯನ್ನು ಮಕ್ಕಳಿಗೂ ವಿಸ್ತರಿಸುವ ಹಾಗೂ ತಲುಪಿಸುವ ಕೆಲಸ ಆಗಬೇಕಿದೆ.  ಈ ಇಲಾಖೆಗಳನ್ನು ಸ್ಥಾಪಿಸಿದ ಉದ್ದೇಶವೇ ಮಗುವಿನ ದೈಹಿಕ ಮಾನಸಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ಭದ್ರ ಅಡಿಪಾಯ ಹಾಕುವುದು . “ಕರ್ನಾಟಕ ಕೌಶಲ್ಯ ಮಿಶನ್”(Kaushalkar.com) ನಲ್ಲಿ ಮಕ್ಕಳಿಗೂ ಅವಕಾಶವನ್ನು ನೀಡಿ ತರಗತಿಗಳು ನಡೆಯದ ಈ ಸಮಯದಲ್ಲಿ ಹವ್ಯಾಸಗಳ ಬೆಳವಣಿಗೆಗೆ ಸಹಾಯ ಹಸ್ತ ಚಾಚಬೇಕಿದೆ.

    ಪುಸ್ತಕದ ಬದನೇಕಾಯಿಯನ್ನು ಬಿಟ್ಟು ಕೌಶಲ್ಯಗಳನ್ನು ರೂಢಿಸಿಕೊಳ್ಳುವ ಸದವಕಾಶ ಮಕ್ಕಳಿಗೆ ತಾನೇ ತಾನಾಗಿ ಒದಗಿ ಬಂದಿದೆ. ಕೊರೋನಾದ ಶಾಪಗ್ರಸ್ತ ಕಾಲವನ್ನು ಜೀವನಾವಶ್ಯಕ ಅನುಭವಗಳಾಗಿ ಪರಿವರ್ತಿಸಿಕೊಳ್ಳುವಲ್ಲಿ ಪೋಷಕರು, ಸಮುದಾಯ ಮತ್ತು ಸರ್ಕಾರ ಎಲ್ಲರೂ ಸೇರಿ ಮಕ್ಕಳಿಗೆ ಮಾರ್ಗದರ್ಶನ ಮಾಡೋಣ. 

    ಚಿತ್ರಗಳು: ಕಿರಣ ಆರ್ ಮತ್ತು PEXELS ,

    ಪ್ರಭಾ ರಾಮ್
    ಪ್ರಭಾ ರಾಮ್
    ಕನ್ನಡದಲ್ಲಿ ಸೊಗಸಾಗಿ ಬರೆಯುವ ಪ್ರಭಾ ರಾಮ್ ವೃತ್ತಿಯಿಂದ ಗಣಿತ ಶಿಕ್ಷಕಿ. ಮೂಲ ಮುರುಡೇಶ್ವರದವರಾದ ಇವರು ಸಧ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
    spot_img

    More articles

    18 COMMENTS

    1. ಪ್ರಸ್ತುತ ಪರಿಸ್ಥಿತಿಗೆ ಸೂಕ್ತ ಉಪಯೋಗದಾಯಕ ಕ್ರಿಯಾಶೀಲ ಚಟುವಟಿಕೆಗಳನ್ನು ನೀಡಿ, ಮಕ್ಕಳ ಸವ೯ತೋಮುಖ ಬೆಳವಣಿಗೆಗೆ ಪೋಷಕರು , ಸಮಾಜ ಕೈಜೋಡಿಸುವ ಸಾಧ್ಯತೆ ಮನಗಾಣಿಸಿದ್ದೀರಾ . ಪ್ರಭಾ , ಶಿಕ್ಷಕಿಯಾಗಿ ಮಕ್ಕಳ ಕುರಿತಾದ ಕಾಳಜಿ ಶ್ಲಾಘನೀಯ.

    2. ಸರಳ ಸುಂದರ ಲೇಖನ. ಅಮ್ಮ….
      ಬೋ…ರು ಎಂದು ದಿನನಿತ್ಯ ಕೇಳಿ ಕೇಳಿ ಬೋರಾದ ಅಮ್ಮಂದಿರಿಗೆ ಉತ್ತಮ ಸಲಹೆಗಳನ್ನು ಕೊಟ್ಟಿದ್ದೀರಿ. ಇದರಲ್ಲಿ ನನಗೆ ತುಂಬ ಇಷ್ಟವಾದದ್ದು ರಾತ್ರಿ ಆಗಸದಲ್ಲಿ ನಕ್ಷತ್ರಗಳ ವೀಕ್ಷಣೆ ಹಾಗೂ ಸಪ್ತರ್ಷಿಮಂಡಲದ ಗುರುತಿಸುವಿಕೆ ,ಆಹಾ ಓದಲಿಕ್ಕೇ ಎಷ್ಟು ಸಂತಸವಾಯಿತು ಇನ್ನು ಅದನ್ನು ವೀಕ್ಷಿಸಿದರೆ ಎಷ್ಟು ಸುಂದರವಾಗಿರಬಹುದು ! ಆದರೆ ಪೋಷಕರಾದ ನಮಗೆ ಮಕ್ಕಳನ್ನು ಕರೆದುಕೊಂಡು ಟೆರೇಸ್ ಗೆ ಹೋಗಿ ತೋರಿಸಿ ವಿವರಿಸುವಷ್ಟು ತಾಳ್ಮೆ, ಸಮಯ, ವ್ಯವಧಾನವಿದೆಯಾ ? ವ್ಯವಧಾನವಿದ್ದರೂ ಸಹ ವಿದ್ಯುತ್ ದೀಪಗಳ ಭರಾಟೆಯಲ್ಲಿ ಈಗಿನ ಮಕ್ಕಳು ಅದನ್ನೆಲ್ಲ ವೀಕ್ಷಿಸಲು ಸಾಧ್ಯವೇ ನಿಜಕ್ಕೂ ಈಗಿನ ಮಕ್ಕಳು ಇಂತಹ ಸುಂದರ ಪ್ರಪಂಚದಿಂದ ದೂರವಾಗಿದ್ದಾರೆ ಎಂದು ನನ್ನ ಭಾವನೆ. ನೀವು ಕೊಟ್ಟ ಸಲಹೆಗಳನ್ನು ಅಳವಡಿಸಿಕೊಂಡಲ್ಲಿ ಮಕ್ಕಳಿಂದ ಖಂಡಿತಾ ಈ ಬೋರು ಎನ್ನುವ ಏಕತಾನತೆಯಿಂದ ಹೊರಬರಲು ಸಾಧ್ಯ.

    3. Article is well written by experienced teacher. The topic relates to approximately 5 million kids across karnataka and their parents. It gives insight of pros and cons of the mental health of the age group.

    4. ಅನಿರೀಕ್ಷಿತವಾಗಿ ಬದಲಾದ ಕಾಲಘಟ್ಟದಲ್ಲಿ ಮಕ್ಕಳ ಕಲಿಕೆಯ ಸಾಧ್ಯತೆಗಳನ್ನು ತೆರೆದಿಟ್ಟಿದ್ದೀರಿ.. ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ/ಸಮಾಜದ ಮಾನಸಿಕ ಪ್ರಬುದ್ಧತೆ ಪ್ರಮುಖ ಪಾತ್ರ ವಹಿಸುತ್ತದೆ..
      ಇಂದಿನ ಸಂಕೀರ್ಣ ಪರಿಸ್ಥಿತಿಯಲ್ಲಿ ಮಕ್ಕಳು ಬದಲಾದ ವಾತಾವರಣಕ್ಕೆ ಹೊಂದಿಕೊಳ್ಳಬೇಕಾದ ಅನಿವಾರ್ಯತೆಯಿದೆಯೇ ವಿನಃ ಅವರ/ ಪೋಷಕರ ಆಸಕ್ತಿ ಯಿಂದ ಅಲ್ಲ ಎನ್ನುವ ಅಂಶ ಫಲಿತಾಂಶ ದ ಮೇಲೆ ಪ್ರಭಾವ ಬೀರಬಲ್ಲದು,.
      ಬಹುಶಃ ಭಾರತೀಯ ಪದ್ಧತಿಯ ಶೈಕ್ಷಣಿಕ ವ್ಯವಸ್ಥೆಯ ಮೂಲಭೂತ ಅಂಶವಾದ ನೈತಿಕ ಮೌಲ್ಯಗಳಿಗೆ ಆಧುನಿಕ ಶಿಕ್ಷಣ ಕ್ರಮದಲ್ಲಿ ಒತ್ತು ನೀಡದಿರುವುದು ಇಂದಿನ ಬಹುತೇಕ ಪೋಷಕರ ವಿವೇಚನಾ ರಹಿತ ನಡವಳಿಕೆಗಳಿಗೆ ಕಾರಣ ಎಂದರೆ ತಪ್ಪಾಗಲಾರದು..
      ಆದುದರಿಂದ ‘ಮನೆಯೇ ಮೊದಲ ಪಾಠಶಾಲೆ’ ಸಾಕಾರವಾಗುತ್ತಿರುವ ಈ ಸಂದರ್ಭದಲ್ಲಿ ಪೋಷಕರಾದ ನಾವುಗಳು ಮಕ್ಕಳ ಭವಿಷ್ಯ ರೂಪಿಸುವಲ್ಲಿ ಅಗತ್ಯ ಮಾನಸಿಕ ಪ್ರಬುದ್ಧತೆ, ಪ್ರಬಲ ಇಚ್ಛಾಶಕ್ತಿಯನ್ನು ಹೊಂದುವುದು ಅನಿವಾರ್ಯವಾಗಿದ್ದು ಆ ನಿಟ್ಟಿನಲ್ಲಿ ಮುಂದಡಿಯಿಡಲು ಪ್ರೇರೇಪಿಸುವ ಸಕಾಲಿಕ ಲೇಖನ…

      • ಧನ್ಯವಾದಗಳು ಅಚ್ಯುತ.. ಲೇಖನವು ಒಳಗೊಳ್ಳಬೇಕಾಗಿದ್ದ ಇನ್ನೂ ಹಲವು ಆಯಾಮಗಳನ್ನು ಅದ್ಭುತವಾಗಿ ತೆರೆದಿಟ್ಟಿದ್ದೀರಿ.

    5. ನಾನಂತೂ ನನ್ನ ಬಳಿ ಬರುವ ಮಕ್ಕಳಿಗೆ ಒಂದು ಪದ ಹೇಳಿ ಅದಕೆ ಬೇರೆ ಹೆಸರು ಇದೆ ಹೇಳಿ ಅನುವೆ. ಉದಾ.ಆಗಸ ..ಬೇರೆ ಹೆಸರು ಹೀಗೆ. ಕಡೇ ಅಕ್ಷರದಿಂದ ಪದಗಳ ಜೋಡಣೆ. ಉದಾ.ಅರಸ..ಸಮಯ…ಯಮ ಹೀಗೆ. ಏನಾದರೂ ವಿಷಯ ಕೊಟ್ಟರೆ ಚಿತ್ರ ಬರೆಸುವೆ. ಕಥೆ ಹೇಳಿಸುವೆ. ಯು.ಕೆ.ಜಿ ಪುಟಾಣಿಗಳು ವಾರಕೆ 40 ಹೊಸ ಪದ ಕಲಿಯುವರು. ಈ ಲೇಖನ ಕೂಡ ಹಲವಾರು ಹೊಸ ವಿಷಯ ನೀಡಿದೆ . ಆಟದಂತೆ ಕಲಿಸಿದರೆ ಪುಟಾಣಿಗಳು ಆರಾಮ್ ಕಲಿತಾರೆ

    LEAVE A REPLY

    Please enter your comment!
    Please enter your name here

    Latest article

    error: Content is protected !!