ಕೌಶಿಕ್ ಗಟ್ಟಿಗಾರು
ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಗುಡುಗಿದ್ದಾರೆ. ಕಳೆದ ಬಾರಿ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕರು ಪುಲ್ವಾಮಾ ಸಿಆರ್ ಪಿಎಫ್ ಶಿಬಿರದ ಮೇಲೆ ದಾಳಿ ನಡೆಸಿ 40 ಯೋಧರನ್ನು ಕೊಂದಾಗ ಇದೇ ರೀತಿ ಹೇಳಿಕೆ ನೀಡಿದ್ದರು. ಬಳಿಕ ನಡೆದ ಸರ್ಜಿಕಲ್ ಸ್ಟ್ರೈಕ್ ಎಂಬ ವಿನೂತನ ಯಶಸ್ವಿ ಯುದ್ಧ ತಂತ್ರ ಎಲ್ಲೆಡೆ ಗಮನ ಸೆಳೆದಿತ್ತು.
ಈಗ ಚೀನಾದ ಸರದಿ. ನಮ್ಮ ಯೋಧರ ಬಲಿದಾನ ವ್ಯರ್ಥವಾಗಲಾರದು ಎಂದು ಹೇಳಿದ್ದಾರೆ. ನಾವು ಶಾಂತಿ ಪ್ರಿಯರು. ಕೆಣಕಿದರೆ ಜೋಕೆ ಎಂದು ಚೀನಾಕ್ಕೆ ತಿರುಗೇಟು ಕೊಟ್ಟಿದ್ದಾರೆ. ಆದರೆ ಈ ಬಾರಿ ಒಂದಿಷ್ಟು ಸಂಯಮ ವಹಿಸಿದಂತಿದೆ. ಸರ್ಜಿಕಲ್ ದಾಳಿ ಏಕಾಏಕಿ ತೆಗೆದುಕೊಂಡ ತೀರ್ಮಾನ ಮತ್ತು ಈ ಸಂದರ್ಭದಲ್ಲಿ ಬೆರಳೆಣಿಕೆಯಷ್ಟು ಜನರಿಗೆ ಮಾತ್ರ ಮಾಹಿತಿ ಇತ್ತು ಎಂದು ಹೇಳಲಾಗಿದೆ. ಆದರೆ ಈ ಬಾರಿ, ಶುಕ್ರವಾರ ಸರ್ವ ಪಕ್ಷ ಸಭೆ ಕರೆದು ಚರ್ಚಿಸಿ ಬಳಿಕ ನಿರ್ಧಾರ ತೆಗೆದುಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದಾರೆ.
Tributes to the martyrs who lost their lives protecting our nation in Eastern Ladakh. Their supreme sacrifice will never be forgotten.
— Narendra Modi (@narendramodi) June 17, 2020
India is proud of the valour of our armed forces. They have always shown remarkable courage and steadfastly protected India’s sovereignty. pic.twitter.com/43dqBCaX1Z
ಹಾಗೆಂದು ಇದರಿಂದಲೇ ಪ್ರಧಾನಿ ಮೋದಿ ಎದೆಗುಂದಿದ್ದಾರೆ ಎಂದು ವಿಶ್ಲೇಷಿಸಲು ಸಾಧ್ಯವಿಲ್ಲ. ಪಾಕ್ ಮತ್ತು ಚೀನಾ ನಡುವೆ ಇರುವ ಅಗಾಧ ವ್ಯತ್ಯಾಸವೇ ಇದಕ್ಕೆ ಕಾರಣ. ಹೀಗಾಗಿಯೇ ಎರಡು ಬಲಾಢ್ಯ ರಾಷ್ಟ್ರಗಳ ನಡುವಿನ ಸಂಘರ್ಷ ಇನ್ನಷ್ಟು ತೀವ್ರಗೊಳ್ಳಬಾರದು ಎಂಬ ಉದ್ದೇಶದಿಂದಲೇ ವಿಶ್ವಸಂಸ್ಥೆ ಮತ್ತು ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳು ತಕ್ಷಣವೇ ಮಧ್ಯಪ್ರವೇಶಿಸಿ ಸಂಧಾನದ ಮೂಲಕ ಸಮಸ್ಯೆ ಇತ್ಯರ್ಥ ಪಡಿಸಿಕೊಳ್ಳುವಂತೆ ಒಕ್ಕೊರಲಿನಿಂದ ಆಗ್ರಹ ಮಾಡಿವೆ ಎಂಬುದು ಇಲ್ಲಿ ಉಲ್ಲೇಖನೀಯ.
ಚೀನಾದ ತಂತ್ರ
ಇಲ್ಲಿ ಚೀನಾ ಸೇನಾ ಪಡೆ ನಡೆಸಿದ ಯುದ್ಧ ತಂತ್ರದ ಬಗ್ಗೆ ಗಮನ ನೀಡಲೇಬೇಕಾಗುತ್ತದೆ. ಬಂದೂಕು ಬಳಕೆಯಾಗಿಲ್ಲ. ಆ ಮೂಲಕ ಇದು ಯುದ್ಧವಲ್ಲ ಎಂದು ಜಗತ್ತಿಗೆ ಹೇಳುವ ತಂತ್ರವನ್ನು ಚೀನಾ ಬಳಸಿದೆ. ಕಬ್ಬಿಣದ ರಾಡ್, ದೊಣ್ಣೆಗಳಿಂದ ಭಾರತದ ಯೋಧರ ಮೇಲೆ ಚೀನಾ ಮುಗಿಬಿದ್ದಿದೆ. ನಮ್ಮವರೇನೂ ಹಿಂದೆ ಬಿದ್ದಿಲ್ಲ. ಗರಿಷ್ಠ ಹಾನಿಯನ್ನೇ ಮಾಡಿದ್ದಾರೆ. ಮೂಲಗಳ ಪ್ರಕಾರ 35ಕ್ಕೂ ಹೆಚ್ಚು ಚೀನಾ ಯೋಧರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದ್ದು, ಈ ಸಂಖ್ಯೆ ಹೆಚ್ಚಾದರೂ ಆಶ್ಚರ್ಯವಿಲ್ಲ.
ರಾಷ್ಟ್ರೀಯತೆ ವಿಷಯ ಬಂದಾಗ ಜನತೆ ಒಟ್ಟಾಗುತ್ತಾರೆ ಎಂಬುದು ಎಲ್ಲರಿಗೂ ತಿಳಿದ ವಿಚಾರ ಇದಕ್ಕೆ ತನ್ನ ವೈಫಲ್ಯ, ಸಫಲತೆಗಳನ್ನು ಒಳಗಡೆಯೇ ಬಚ್ಚಿಟ್ಟುಕೊಂಡಿರುವ ಚೀನಾ ಕೂಡ ಹೊರತಲ್ಲ. ಅದಕ್ಕಾಗಿಯೇ ಒಂದೆಡೆ ಕೊರೊನಾ ವೈರಸ್ ಸಮಸ್ಯೆಯ ಭೀಕರತೆ, ಇನ್ನೊಂದೆಡೆ ಹಾಂಗ್ ಕಾಂಗ್ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ರಹಸ್ಯವಾಗಿ ಸಿದ್ಧಪಡಿಸಿ ಚೀನಾ ಸಂಸತ್ತಿನ ಅನುಮೋದನೆ ಪಡೆದ ರಾಷ್ಟ್ರೀಯ ಭದ್ರತಾ ಕಾನೂನು ಒಂದು ರೀತಿಯಲ್ಲಿ ಚೀನಾದ ಮೇಲೆ ಅಂತಾರಾಷ್ಟ್ರೀಯ ಒತ್ತಡವನ್ನು ಹೆಚ್ಚಿಸಿದೆ. ಈ ಮೂಲಕ ರಾಷ್ಟ್ರೀಯತೆಯ ಭಾವನೆಯನ್ನು ಬಡಿದೆಬ್ಬಿಸಿ ಆ ಮೂಲಕ ತನ್ನ ಮೇಲೆ ವೈಯಕ್ತಿಕವಾಗಿ ಕೇಳಿ ಬಂದಿರುವ ಎಲ್ಲಾ ಆರೋಪ ಮತ್ತು ಅಪಾದನೆಗಳನ್ನು ಹತ್ತಿಕ್ಕಲು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಹೊಸದಾಗಿ ಹೆಣೆದಿರುವ ಬಲೆಯೇ ಭಾರತ-ಚೀನಾ ನಡುವಿನ ಸಂಘರ್ಷ.
ಲಡಾಖ್ ನ ಪ್ಯಾಂಗೋಂಗ್ ತ್ಸು ಕಣಿವೆಯಲ್ಲಿ ಅತಿಕ್ರಮಣ ಪ್ರವೇಶ ಮಾಡಿ, ಭಾರತ-ಚೀನಾ ಎರಡೂ ಕಡೆಯಿಂದ ಸೇನಾ ಜಮಾವಣೆ ಆಯಿತು. ಭಾರತದ ಯುದ್ಧ ವಿಮಾನಗಳು ಕೂಡ ಬೆಂಗಳೂರಿನಂತಹ ದೂರದ ಪ್ರದೇಶಗಳಲ್ಲಿ ಕಾರ್ಯಕ್ಷಮತೆಯ ಪರೀಕ್ಷೆ ನಡೆಸಿಯೂ ಆಯಿತು. ಉಭಯ ದೇಶಗಳ ಸೇನಾ ಪ್ರಮುಖರ ನಡುವಿನ ಮಾತುಕತೆಯ ಬಳಿಕ ಪರಿಸ್ಥಿತಿ ಏನೋ ತಿಳಿಯಾಯಿತು ಎನ್ನುವಾಗಲೇ ಬರಸಿಡಿಲಿನಂತೆ ಚೀನಾ ಆಕ್ರಮಣಕಾರಿ ಉನ್ಮಾದದ ನೀತಿಯನ್ನು ಅನುಸರಿಸಿದೆ. ನಮ್ಮ ಕಡೆ 20 ಯೋಧರು ಹುತಾತ್ಮರಾದರೆ, ಅವರ 50ಕ್ಕೂ ಹೆಚ್ಚು ಯೋಧರು ಮೃತ ಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ಏನಿದು ವಿವಾದದ ಕೇಂದ್ರ
ಹಿಂದಿನ ಚೀನಾ ಸಂಘರ್ಷದಿಂದ ಪಾಠ ಕಲಿತಿರುವ ಭಾರತ, ಈ ಆಯಕಟ್ಟಿನ ಪ್ರದೇಶದಲ್ಲಿ ಭವಿಷ್ಯದಲ್ಲಿ ಎದುರಾಗಬಹುದಾದ ಅಪಾಯಗಳನ್ನು ಲಕ್ಷ್ಯದಲ್ಲಿರಿಸಿಕೊಂಡು ಹೆದ್ದಾರಿಯನ್ನು ನಿರ್ಮಿಸುತ್ತಿದೆ. ಬಹುತೇಕ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿಯೂ ಇದೆ. ಧರ್ಬುಲ್-ಸಯೋಕ್- ಡಿಬಿಒ ಅಂದರೆ ದೌಲತ್ ಬೆಗ್ ಓಲ್ಡಿ ರಸ್ತೆಯೂ ಇವುಗಳ ಪೈಕಿ ಒಂದು. ವಿಶ್ವದ ಅತಿ ಎತ್ತರದ ಅಂದರೆ ಸುಮಾರು 16,600 ಅಡಿ ಎತ್ತರದಲ್ಲಿರುವ ಸೇನಾ ವಿಮಾನ ನಿಲ್ದಾಣ (ಯುದ್ಧ ವಿಮಾನ ಇಳಿಯುವ ಮತ್ತು ಟೇಕಾಫ್ ಮಾಡುವ) ಇದಾಗಿದೆ.
ಗಡಿ ಭಾಗದ ಅಕಾಯ್ ಚೀನಾದಿಂದ ಕೇವಲ 9 ಕಿ.ಮೀ. ವ್ಯಾಪ್ತಿಯಲ್ಲಿ ಇದು ಇದೆ. ಲೇಹ್ ಅನ್ನು ಅತಿ ಇಳಿದಾದ ಪ್ರದೇಶದಲ್ಲಿ ಮೂಲಕ ಗಡಿ ನಿಯಂತ್ರಣ ರೇಖೆಗೆ ಸೇರಿಸುವ ರಸ್ತೆ ಇದಾಗಿದೆ ಎಂಬುದು ಇಲ್ಲಿ ಗಮನಾರ್ಹ. ಇದಕ್ಕೆ ಉಪ ರಸ್ತೆಗಳನ್ನು ಕೂಡ ನಿರ್ಮಿಸಲಾಗುತ್ತಿದ್ದು, ಇದರ ಪೈಕಿ ಗಾಲ್ವಾನ್ ನದಿಗೆ ಸೇತುವೆ ನಿರ್ಮಿಸುವ ಯೋಜನೆಯೂ ಜಾರಿಯಲ್ಲಿದೆ. ಈ ರಸ್ತೆಯು ಪೂರ್ಣಗೊಂಡರೆ ಆಗ ಚೀನಾದ ಆಕಾಯ್ ಚೀನಾ (ಪದೇ ಪದೇ ಚೀನಾ ಎತ್ತುತ್ತಿರುವ ಪ್ರಶ್ನೆ)ದ ಮೂಲಕ ಅಲ್ಲಿನ ಕ್ಸಿನಿಯಾಂಗ್-ಟಿಬೆಟ್ ಸಂಪರ್ಕ ರಸ್ತೆಯ ಮೂಲಕ ಚೀನಾ ಸೇನೆಯ ಚಲನವಲನಗಳ ಮೇಲೆ ಭಾರತಕ್ಕೆ ಹದ್ದಿನಕಣ್ಣು ಇಡಲು ಸಾಧ್ಯವಾಗುತ್ತದೆ. ಇನ್ನು ಇದರ ಮೂಲಕವೇ ಚೀನಾ-ಪಾಕ್ ಗಡಿ ಭಾಗದ ಕಾರಕೋರಂ ಕಣಿವೆ ಹೆದ್ದಾರಿಯ ಮೇಲೆಯೂ ಭಾರತ ನಿಗಾ ಇಡಲು ಸಾಧ್ಯವಾಗುತ್ತದೆ.
ಭಾರತದ ಅವಿಭಾಜ್ಯ ಅಂಗ
1962ರ ಯುದ್ಧದಲ್ಲಿ ಭಾರತ ಸೋಲು ಕಂಡಿತು. ಈ ಸಂದರ್ಭದಲ್ಲಿ ಚೀನಾ ಲಡಾಕ್ ನ ಪೂರ್ವ ಭಾಗದ 90 ಸಾವಿರ ಚದರ ಕಿ.ಮೀ. ಮತ್ತು ಪಶ್ಚಿಮ ಭಾಗದ 38 ಸಾವಿರ ಚದರ ಕಿ.ಮೀ. ಭಾಗವನ್ನು ಆಕ್ರಮಿಸಿಕೊಂಡಿತು. ಆ ಬಳಿಕ ಚೀನಾ ದೇಶವು ತಾನು ಸ್ವಾಧೀನಕ್ಕೆ ತೆಗೆದುಕೊಂಡಿರುವ ಪ್ರದೇಶವನ್ನು ಹೊರತು ಪಡಿಸಿದ ಭಾರತದ ಗಡಿ ಭಾಗವೇ ವಾಸ್ತವ ನಿಯಂತ್ರಣ ರೇಖೆ (ಎಲ್ ಎಸಿ). ಎಲ್ ಎಸಿಯ ಇಕ್ಕಡೆಗಳಲ್ಲಿ ಒಂದೆಡೆ ಭಾರತ, ಇನ್ನೊಂದೆಡೆ ಚೀನಾ ಸೇನಾ ಜಮಾವಣೆ ಅದಕ್ಕೆ ಬೇಕಾದ ಮೂಲ ಸೌಕರ್ಯ (ಬಂಕರ್ ಗಳು)ಗಳನ್ನು ನಿರ್ಮಿಸುತ್ತಲೇ ಬಂದಿದೆ. ಇಲ್ಲಿ ದಿನಂಪ್ರತಿ ಉಭಯ ಸೇನೆಗಳ ಗಸ್ತು ನಡೆಯುತ್ತಲೇ ಇದೆ.
ಭಾರತ-ಚೀನಾ ಗಡಿ ಭಾಗದಲ್ಲಿರುವ ಗಾಲ್ವಾನ್ ಭಾರತದ ಅವಿಭಾಜ್ಯ ಅಂಗ. ಇದು ನಮ್ಮ ಗಡಿಯಿಂದ ಏಳು ಕಿ.ಮೀ. ಒಳಗಡೆಯಿದೆ. ಇದುವರೆಗೆ ಗಾಲ್ವಾನ್ ಬಗ್ಗೆ ತಕರಾರು ಎತ್ತದ ಚೀನಾ ಈಗ ಹೆದ್ದಾರಿ ಕಾಮಗಾರಿ ವೇಗ ಪಡೆದುಕೊಳ್ಳುತ್ತಿರುವಂತೆಯೇ ತನ್ನ ಷಡ್ಯಂತ್ರ ಆರಂಭಿಸಿದೆ.
ರಾಜಕೀಯ ಕಾರಣ
ಈಗ ಚೀನಾದಲ್ಲಿ ನಾಯಕತ್ವದ ಬದಲಾವಣೆಯ ಮಾತು ಪ್ರಬಲವಾಗುತ್ತಿದೆ. ರಾಜಕೀಯ ನಾಯಕರು ಸಾರ್ವಜನಿಕ ಆರೋಗ್ಯದ ಜತೆ ಆಟವಾಡುತ್ತಿದ್ದಾರೆ. ಯುವ ಜನಾಂಗಕ್ಕೆ ಅಲ್ಲಿ ರಾಜಕೀಯ ಪ್ರವೇಶಕ್ಕೆ ಅವಕಾಶವೇ ಇಲ್ಲ. ಅಲ್ಲಿಯೂ ಜನರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಇದ್ದ ನಿರ್ಬಂಧಗಳನ್ನು ಜನರು ಧಿಕ್ಕರಿಸಲು ಆರಂಭಿಸಿದ್ದಾರೆ. ಹೀಗಾಗಿ ಏನಾದರೂ ಮಾಡಿ ನಾಗರಿಕರ ಗಮನವನ್ನು ಬೇರೆಡೆಗೆ ಸೆಳೆಯುವ ಯತ್ನ ಆಗಲೇಬೇಕಾಗಿದೆ. ಜನರು ನೈಜ ವಿಷಯದ ನಿರೀಕ್ಷೆಯಲ್ಲಿದ್ದಾರೆ. ಅದಕ್ಕಾಗಿ ಮಾಧ್ಯಮಗಳ ಮೇಲೆ ಒತ್ತಡ ಹೆಚ್ಚುತ್ತಲೇ ಇದೆ. ಸರಕಾರಿ ಪ್ರಾಯೋಜಿತ ಸುದ್ದಿಗಳ ಬದಲು ಗ್ರೌಂಡ್ ರಿಯಾಲಿಟಿ ಅಂದರೆ ವಾಸ್ತವಾಂಶಗಳನ್ನು ಹೇಳಿ ಎಂಬ ಕೂಗು ಹೆಚ್ಚು ಹೆಚ್ಚು ಕೇಳಿ ಬರುತ್ತಿದೆ.
ಇದರ ಜತೆಗೆ ನಾನಾ ಕಾರಣಗಳು ಕೂಡ ಚೀನಾದ ನಡೆಯ ಹಿಂದಿವೆ ಎಂದು ವಿಶ್ಲೇಷಿಸಲಾಗುತ್ತಿದೆ. ಮೊದಲನೇದಾಗಿ ಕೊರೊನಾ ವೈರಸ್ ಹರಡುವಿಕೆಯ ಮೂಲದ ಕುರಿತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚೀನಾ ದೊಡ್ಡ ಮಟ್ಟದ ಸಮಸ್ಯೆಯನ್ನು ಎದುರಿಸುತ್ತಿದೆ. ತಾನೂ ಅಣ್ವಸ್ತ್ರ ಶಕ್ತ, ಅತ್ತ ಭಾರತವೂ ಅಣ್ವಸ್ತ್ರ ಶಕ್ತವಾಗಿರುವುದರಿಂದ ಈ ಸಂದರ್ಭದಲ್ಲಿ ವಿಶ್ವದ ಗಮನವನ್ನು ಬೇರೆಡೆಗೆ ಸೆಳೆಯಲು ಇಂತಹ ತಂತ್ರವನ್ನು ಹೆಣೆಯುವುದರಲ್ಲಿ ಅದು ನರಿ ಬುದ್ಧಿಯನ್ನು ತೋರಿಸುತ್ತಲೇ ಬಂದಿದೆ. ಜತೆಗೆ ಹಾಂಗ್ ಕಾಂಗ್ ಸಮಸ್ಯೆ ಅದಕ್ಕೆ ಮಗ್ಗುಲಿನ ಮುಳ್ಳಾಗಿದೆ. ಚೀನಾದಿಂದ ಹೊರ ಬರುತ್ತಿರುವ ಉದ್ಯಮಗಳಿಗೆ ಭಾರತ ಕೆಂಪುಹಾಸಿನ ಸ್ವಾಗತ ನೀಡುತ್ತಿದೆ. ಇನ್ನು ಸ್ವತಃ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಕೂಡ ಪ್ರಜೆಗಳ ಅದರಲ್ಲೂ ಮುಖ್ಯವಾಗಿ ಪಕ್ಷದ ಅತ್ಯುನ್ನತ ನೀತಿ ನಿರೂಪಣಾ ಮಂಡಳಿಯಾದ ಸಿಪಿಎಂ ಪಾಲಿಟ್ ಬ್ಯೂರೋದ ವಿಚಾರ-ವಿಮರ್ಶೆಗೆ ಒಳ ಪಡುತ್ತಿದ್ದಾರೆ. ಇವುಗಳ ನಡುವೆ ಗಮನವನ್ನು ಬೇರೆಡೆಗೆ ಸೆಳೆಯಲು ಅದಕ್ಕೆ ಇರುವ ಏಕೈಕ ಮಾರ್ಗವೆಂದರೆ ಭಾರತದ ಜತೆ ಜಗಳ. ಆದರೆ ಆಗಿನ ಭಾರತ, ಈಗಿನ ಭಾರತವಲ್ಲ. ಸೇನೆ, ವಿದೇಶಿ ಬೆಂಬಲ ಸೇರಿದಂತೆ ಸಕಲ ಸಂಪನ್ಮೂಲಗಳಿಂದ ಸಜ್ಜಿತವಾಗಿದೆ. ಹೀಗಾಗಿ ಅಷ್ಟು ಸುಲಭವಾಗಿ ಚೀನಾದ ಹೊಸ ತಂತ್ರ ಯಶಸ್ವಿಯಾಗುವ ಸಾಧ್ಯತೆ ಕಡಿಮೆಯಿದೆ ಎಂದು ಹೇಳಬಹುದಾಗಿದೆ.