ಮನೆಯಲ್ಲೋ ಹೊರಗೆ ಗೆಳೆಯರ ಸರ್ಕಲ್ಲಲ್ಲೋ ಎಲ್ಲೋ ಒಂದು ಕಡೆ ಸ್ವಲ್ಪ ಪೋಸ್ಟ್ ಆಫೀಸಲ್ಲಿ ಕೆಲಸ ಇದೆ ಹೋಗ್ಬರ್ತೀನಿ ಅನ್ನೋ ಮಾತು ಕಿವೀಗೆ ಬೀಳ್ತಾನೇ ಇರೋದು.ಊರಿನ ಗಾತ್ರಕ್ಕನುಗುಣವಾಗಿ ಪೋಸ್ಟ್ ಅಫೀಸು ಇರುತ್ತಿತ್ತು.ಅದರ ವಿನ್ಯಾಸವೇ ಮಜ . ಮುಂಭಾಗದಲ್ಲಿ ಸ್ಥಾಪಿತವಾಗಿರ್ತಿದ್ದ ಕೆಂಪು ಬಣ್ಣದ ಪೋಸ್ಟ್ ಬಾಕ್ಸು .ಒಳಗೆ ಹೋಗ್ತಿದ್ದಂತೆ ಅರ್ಧ ಫ್ಯಾಬ್ರಿಕೇಟ್ ಆಗಿರುವಂತಹ ಮರದ ತಡೆಗೋಡೆ. ಅತ್ಲಕಡೆ ಸ್ಟ್ಯಾಂಪು, ಇನ್ಲ್ಯಾಂಡ್ ಲೆಟರ್ರು, ಕಾರ್ಡು ,ಎನ್ವಲಪ್ಪು ಕೊಡುವ ಕೌಂಟರ್ರು . ಪಕ್ಕದಲ್ಲಿ ಸ್ಟೀಲಿನ ಸಣ್ಣ ತಕ್ಕಡಿ ಇಟ್ಟುಕೊಂಡು ಕುಳಿತಿರುವ ಮಹಿಳೆ . ಮನಿಯಾರ್ಡರ್ ಸೆಕ್ಷನ್ .ನಂತರದ್ದು ಮತ್ತು ತುಂಬಾ ಗಂಭೀರವಾದ ವಿಭಾಗ ಅಂದ್ರೆ ಅದು ಟೆಲಿಗ್ರಾಮ್ ಸೆಕ್ಷನ್ .
ಈ ಕೌಂಟರಿಗೆ ಬರಬೇಕು ಅಂದ್ರೆ ಎಂತಾವ್ರದೂ ಹಾರ್ಟು ಹೊಡ್ಕೊತಾ ಇರೋದು… ಅಂತಾದ್ರಲ್ಲಿ ಒಬ್ಬ ವ್ಯಕ್ತಿ ಒಂದು ರಾಶಿ ಪತ್ರಗಳನ್ನು ಮುಂದೆ ಸುರಿದುಕೊಂಡು ಡಬ್ ಡಬ್ ಅಂತ ಹಾರ್ಟ್ ಬೀಟೇ ನಿಂತೋಗೋ ಥರ ಸೀಲು ಬಡೀತಾ ಕೂತಿರೊವ್ನು . ಹಂಗೇ ಗಮನಿಸಿದ್ರೆ ಒಂದು ಮೂಲೆಯಲ್ಲಿ ಒಂದು ಗೋಂದಿನ ನೀಲಿ ಕಲರಿನ ಡಬ್ಬ ಅದರೊಳಗೆ ಕಡ್ಡಿ ಇರ್ತಿತ್ತು. ಆ ಗೋಡೆ ಮೇಜು ಎಲ್ಲಾ ಗೋಂದಿನ ಕಲೆಗಳಿಂದ ಮಾಸೋಗಿರೋದು .
ಮತ್ತೆ ಪತ್ರ ಬರೆಯೋದೇ ಚೆಂದ ಇರ್ತಿತ್ತು .ಕಾಗದದ ಮೇಲ್ಬಾಗದ ಮಧ್ದದಲ್ಲಿ ‘ಶ್ರೀ’ ಎಡಭಾಗದಲ್ಲಿ ‘ಕ್ಷೇಮ’ ಬಲಭಾಗದಲ್ಲಿ ದಿನಾಂಕ ಅದಕ್ಕೆ ಹೊಂದಿಕೊಂಡಂತೆ ಕೆಳಗೆ ಊರು ….ತೀರ್ಥರೂಪ ಸಮಾನರಾದ , ಗುರು ಸಮಾನರಾದ , ಸೋದರ ಸಮಾನರಾದ , ಸಣ್ಣವರಿಗೆ ಚಿರಂಜೀವಿ ….ಹೀಗೇ ಶುರುವಾಗಿ ನಾವೆಲ್ಲರೂ ಕ್ಷೇಮ ನೀವುಗಳು ಕ್ಷೇಮವಾಗಿದ್ದೀರೆಂದು ನಂಬಿರುತ್ತೇವೆ . ಪತ್ರ ಬರೆಯುತ್ತಿರುವ ವಿಷಯವೇನೆಂದರೆ ಎಂದು ಪ್ರಮುಖ ವಿಷಯ ಬರೆದು, ಈ ಕಾಗದ ತಲುಪಿದ ಕೋಡಲೇ ಪತ್ರ ಬರೆಯಬೇಕೆಂದು ವಿನಂತಿಸಿಕೊಳ್ಳುತ್ತೇನೆ. ಇಂತಿ ನಿಮ್ಮ ಪ್ರೀತಿಯ , ವಿಶ್ವಾಸಿ , ನಂಬುಗೆಯ , ಹೀಗೆ ಬರೆದು ಎಂಡ್ ಮಾಡಿ , ಗಮ್ಮಿನಿಂದಲೋ , ಅನ್ನದ ಅಗುಳಿನಿಂದಲೋ , ಮುದ್ದೆಯಿಂದಲೋ ಅದನ್ನು ಅಂಟಿಸಿ , ತಲುಪಬೇಕಾದ ವಿಳಾಸವನ್ನು ಪತ್ರದ ಮೇಲೆ ನಮೂದಿಸಿರುವ ಬಾಕ್ಸಿನಲ್ಲಿ ಮರೆಯದೇ ಪಿನ್ ಕೋಡ್ ತುಂಬಿ …..ಏರಿಯಾ ಹತ್ತಿರದಲ್ಲಿ ಹುಣಿಸೇಮರಕ್ಕೋ, ಕೆಇಬಿ ಯವರ ಕಂಬಕ್ಕೋ, ತಾಲ್ಲೂಕು ಆಫೀಸಿನ ಗೋಡೆಗೋ ನೇತಾಕಿರುವ ಪೋಸ್ಟ್ ಬಾಕ್ಸಿಗೆ ಹಾಕುತಿದ್ದೆವು.
ಕಬ್ಬಿಣದ ಕೆಂಪು ಡಬ್ಬದ ಬಾಯಿಗೆ ಒಂದು ಕಪ್ಪು ರೇಕಿನ ಅಲುಗಾಡುವ ನಾಲಿಗೆ ಇರೋದು ಅದರೊಳಗೆ ಹಾಕಿ…… ಒಳಗೆ ಬಿತ್ತಾ ? ಪೋಸ್ಟ್ ಮ್ಯಾನ್ಗೆ ಸಿಗುತ್ತೊ ಇಲ್ವೋ ? ಅಡ್ರೆಸ್ಸು ಸರಿಯಾಗಿ ಬರ್ದಿದ್ನಾ ? ಅಂಚೆ ಯವರು ಇದನ್ನ ತಲುಪುಸ್ತಾರ ? ಹೀಗೆ ಒಂದಷ್ಟು ಸಂದೇಹಗಳೊಂದಿಗೇ ಹಿಂದಿರುಗುತ್ತಿದ್ದೆವು .
ನಿಜವಾಗ್ಲೂ ಆಗ ಬದುಕು ಒಂದು ದಡ ಸೇರಲು ಅಂಚೆ ಪ್ರಮುಖ ಕಾರಣ ಆಗಿರ್ತಿತ್ತು .ಕೋಟ್ಯಂತರ ಮಂದಿ ಸರ್ಕಾರಿ ನೌಕರಿಗಳಿಗೆ ಸೇರಲು ಅಂಚೆಯಿಂದ ಬಂದ ಅಪಾಯಿಂಟ್ ಮೆಂಟ್ ಲೆಟರ್ ಗಳು ಕಾರಣ. ಕೋಟ್ಯಂತರ ಜೋಡಿಗಳ ಪ್ರೇಮಪತ್ರಗಳು ಮದುವೆಗಳಾಗಲು ಕಾರಣ.ಕೋಟ್ಯಂತರ ರೂಪಾಯಿ ಮನಿಯಾರ್ಡರ್ ಗಳು ಬದುಕು ನಡೆಯಲು ಕಾರಣ .
ಪ್ರತಿಯೊಂದು ವ್ಯವಹಾರವೂ ಪತ್ರಗಳ ಮೂಲಕವೇ ಜರುಗುತ್ತಿತ್ತು .ವ್ಯವಹಾರವೇ ಅಂತಲ್ಲ ವಿಶ್ವಾಸಕ್ಕೂ, ಸಂಬಂಧಗಳಿಗೂ ಅಂಚೆ ಕಾರಣವಾಗ್ತಿತ್ತು . ಒಂದೂರಿನ ಗಂಡನ್ನೋ ಹೆಣ್ಣನ್ನೋ ತರಬೇಕು ಅಂದ್ರೆ ಆ ಊರಿನ ಅಂಚೆಯವನ ಹತ್ತಿರ ವಿಚಾರಿಸುತ್ತಿದ್ದರು . ಮನೆಯಲ್ಲಿ ಕಾಗದಗಳ ಸಂಗ್ರಹ ಮಾಡುತ್ತಿದ್ದರು ಬಿಡುವಾಗಿದ್ದಾಗ ಅದನ್ನು ಓದಿ ತಮ್ಮ ನೆನಪಿನಂಗಳಕ್ಕೆ ಜಾರುತ್ತಿದ್ದರು . ಪತ್ರಗಳು ಅಕ್ಷರಗಳಿಂದ ಕೂಡಿರ್ತಿರ್ಲಿಲ್ಲ .ಭಾವನೆಗಳಿಂದ ಕೂಡಿರೋದು. ಪ್ರತಿಯೊಂದು ವಾಕ್ಯದಲ್ಲೂ ಗೌರವ ಆತ್ಮೀಯತೆ ಇರೋದು .ಮನೆಯಲ್ಲಿ ಓದುತ್ತಿದ್ದಂತೆ ಕಣ್ಣಂಚಲಿ ತನಗೆ ತಾನೇ ನೀರು ಜಿನುಗೋದು .
ಅಂಚೆಯ ಟೆಲಿಗ್ರಾಮ್ ಸೇವೆಯಲ್ಲೂ ಅಷ್ಟೇ ಏನೇ ಸಾವು ಜರುಗಿದ್ದರೂ ಸಹ ಸ್ಟಾರ್ಟ್ ಇಮ್ಮೀಡಿಯಟ್ಲಿ ಅಂತಲೇ ಉಲ್ಲೇಖಿಸೊವ್ರು .ಮೌಲ್ಯಗಳ ಬೆಲೆ ಗೊತ್ತಿತ್ತು ಮತ್ತು ಶಿಸ್ತಿನ ಇಲಾಖೆ ಅದಾಗಿತ್ತು . ಮಕ್ಕಳು ಯುವಕ ಯುವತಿಯರು ಸ್ಟಾಂಪ್ ಕಲೆಕ್ಷನ್ ಮಾಡುವ ಹವ್ಯಾಸ ಹೊಂದಿದ್ದರು . ಆಗ ವಿದೇಶದಿಂದ ಬರೋ ಪತ್ರ ನೋಡಕ್ಕೇ ಅತ್ಯಾಕರ್ಷಕವಾಗಿ ಇರೋದು .ಬಿಳಿಯ ಎನ್ವಲಪ್ ಸುತ್ತಲೂ ಕೆಂಪು ನೀಲಿ ಬಣ್ಣದ ಬಾರ್ಡರ್ ಇರೋದು. ಓಡುತ್ತಿರುವ ಜಗತ್ತಿಗೆ ಹೋಲಿಸಿಕೊಂಡಾಗ ತುಸು ನಿಧಾನವೆನಿಸಿತೊ ಏನೋ ಸ್ಪೀಡ್ ಪೋಸ್ಟನ್ನು ಪರಿಚಯಿಸಿದರು .ಲ್ಯಾಂಡ್ ಲೈನ್ ಫೋನು ಚಾಲ್ತಿಗೆ ಬಂತು ನೋಡಿ …..ಅಂಚೆ ಏಕಾಏಕಿ ತನ್ನ ಚಕ್ರಾಧಿಪತ್ಯವನ್ನು ಬದಿಗಿರಿಸಿ ಸಿಂಹಾಸನದಿಂದ ಕೆಳಗಿಳಿಯಿತು . ನಂತರದ STD ISD ಫೋನು ಬೂತುಗಳು , ಒಂದು ರೂಪಾಯಿಯ ಕಾಯಿನ್ ಬೂತುಗಳು , ಪೇಜರ್ಗಳು , ಮೊಬೈಲುಗಳು , ಖಾಸಗೀ ಕೊರಿಯರ್ ಸಂಸ್ಥೆಗಳು …..ಕಾಗದವನ್ನು ಕಳೆದು ಹಾಕಿದವು .
ತಲುಪಲು ಮೂರು ದಿನ ಸಮಯ ಕೇಳುತ್ತಿದ್ದ ಸುದ್ದಿ ಈಗ ಮೂರು ಸೆಂಕೆಂಡಿನಲ್ಲಿ ತಲುಪುತ್ತಿದೆ . ಊರಿನವನಾಗಿ , ಮನೆಯವನಾಗಿ , ಸ್ನೇಹಿತನಾಗಿ , ಸಂಬಂಧಿಕನಾಗಿ ಕಾಣುತ್ತಿದ್ದ ಅಂಚೆಯವನು ಇಂದು ಅಪರಿಚಿತರಂತೆ ಕಾಣುತ್ತಿದ್ದಾರೆ .
ಕಿರಣ ಆರ್
ಈ ಅಂಕಣದೊಂದಿಗೆ ಪ್ರಕಟವಾಗಿರುವ ಕಲಾಕೃತಿ ಕಿರಣ ಆರ್ ಅವರದ್ದು. ಲೇಖನದ ಆಶಯವನ್ನು ಅಷ್ಟೇ ಸಮರ್ಥವಾಗಿ ಚಿತ್ರದಲ್ಲಿ ಮೂಡಿಸುವ ಕಲೆ ಅವರಿಗೆ ಸಿದ್ಧಿಸಿದೆ. ಕರ್ನಾಟಕ ಚಿತ್ರ ಕಲಾ ಪರಿಷತ್ತಿನ ಕಾಲೇಜ್ ಆಫ಼್ ಫ಼ೈನ್ ಆರ್ಟ್ಸ್ ನಲ್ಲಿ ಮಾಸ್ಟರ್ ಆಫ಼್ ಫ಼ೈನ್ ಆರ್ಟ್ಸ್ ಪದವೀಧರೆ. ವಾಟರ್,ಆಕ್ರಲಿಕ್,ಆಯಿಲ್ ಪೈಟಿಂಗ್ ನಲ್ಲಿ ಹಲವಾರು ಗುಂಪು ಚಿತ್ರ ಪ್ರದರ್ಶನಗಳಲ್ಲಿ ಇವರ ಚಿತ್ರಗಳು ಪ್ರದರ್ಶನ ಗೊಂಡಿವೆ.ಹಲವಾರು ಕವಿತೆಗಳಿಗೆ ಇಲಸ್ಟ್ರೇಷನ್ ಮಾಡಿದ್ದಾರೆ. ಇಂಟಿರೀಯರ್ ಡಿಸೈನ್ ಮತ್ತು ಇದರ ಬಗ್ಗೆ ಕೆಲವು ಲೇಖನಗಳನ್ನು ಪತ್ರಿಕೆಗೆ ಬರೆದಿದ್ದಾರೆ. ಜೊತೆಗೆ ಕವಿತೆಗಳನ್ನು ಕೂಡ ಬರೆಯುತ್ತಾರೆ. ಕಿರಣ ಅವರ ಸಂಗ್ರಹದಲ್ಲಿರುವ ವಿಶಿಷ್ಟ ಕಲಾಕೃತಿಗಳಿಗಾಗಿ [email protected] ಮೂಲಕ ಸಂಪರ್ಕಿಸಬಹುದು.
ನಿರಂತರ ಕಾಲಬದಲಾವಣೆ ನಿಲ್ಲಿಸಲಾಗದ ಚಕ್ರ. ರಾಜರ ಕಾಲ ಮುಗಿಯಿತು ಆದರೂ ಅವರಿದ್ದಾರೆ. ಅಂಚೆ ಹಿಂದಕ್ಕೆ ಸರಿದಿದೆ ಆದರೂ ಇದೆ. ಪ್ರತಿ ಕಾಲದಲ್ಲಿ ನಮಗೆ ಆಪ್ತವಾಗುವ ವಿಚಾರಗಳು ನಮ್ಮೊಂದಿಗೆ ಉಳಿದು ನಿಧಾನವಾಗಿ ಹಿನ್ನೆಲೆಯಲ್ಲಿ ಉಳಿಯುವ ನೆನಪುಗಳಾಗುತ್ತವೆ . ಆಯಾ ತಲೆಮಾರಿನವರು ಗಳಿಸಿದ ಆಸ್ತಿಗಳಾಗುತ್ತವೆ. ನೆನಪುಗಳನ್ನು ನೇವರಿಸುವ ಉತ್ತಮ ಲೇಖನ ಮತ್ತು ಸುಂದರ ಚಿತ್ರ
ಉತ್ತಮ ಲೇಖನ
ಹಳೆಯ ನೆನಪುಗಳನ್ನೆಲ್ಲ ಮನಸಿಂದಾಚೆಗೆಳೆದು ತಂದಂತಾಯ್ತು.
ಅಂಚೆಯ ಮುಖಾಂತರ ಪತ್ರ ಪಡೆದಾಗ ಮತ್ತು ಕಳುಹಿಸಿದಾಗ ಆಗುವ ಸಮಾಧಾನ , ಕುತೂಹಲ ವರ್ಣಿಸಲದಳ
ಉತ್ತಮ ಲೇಖನ
ಹಳೆಯ ನೆನಪುಗಳನ್ನೆಲ್ಲ ಮನಸಿಂದಾಚೆಗೆಳೆದು ತಂದಂತಾಯ್ತು.
ಅಂಚೆಯ ಮುಖಾಂತರ ಪತ್ರ ಪಡೆದಾಗ ಮತ್ತು ಕಳುಹಿಸಿದಾಗ ಆಗುವ ಸಮಾಧಾನ , ಕುತೂಹಲ ವರ್ಣಿಸಲದಳ
Lekhana chennagide, hale nenapugalannu kedki khushi kottitu. Thanks
article is so nostalgic …and illustration by kirana, too very relevant
ಅಂಚೆಯಣ್ಣನ ನೆನಪು ಸದಾ ಹಸಿರು. ಸುಮಾರು 25-30 ವರ್ಷಗಳ ಹಿಂದೆ ಹಳ್ಳಿಯಮನೆಗಳಿಗೆ ಅವನೇ ಹೀರೋ. ಖಾಕಿ ಯೂನಿಫಾರಮ್ ಕಂಡರೆ ಸಾಕು “ಯಾರ್ದೋ ಪತ್ರ ಬಂ….ತೂ… ” ಎಂದು ಕೂಗುತ್ತ ಮನಯ ಮಕ್ಕಳೆಲ್ಲ ಗೇಟಿನವರೆಗೂ ಓಡಿದ್ದು ನಿನ್ನೆ ಮೊನ್ನೆಯ ದೃಶ್ಯದಂತಿದೆ.
ಬರಹ ಮತ್ತು ಬರಹಕ್ಕೆ ತಕ್ಕ ಚಿತ್ರ.. ಚೆನ್ನಾಗಿವೆ.
ಸೂಪರ್.. ನನ್ನನ್ನು 25 ವರ್ಷದ ಹಿಂದಕ್ಕೆ ಕರೆದುಕೊಂಡು ಹೋಗಿ ನನ್ನ ಪತ್ರ ವ್ಯವಹಾರ ನೆನಪು ಮಾಡಿದ್ದಕ್ಕೆ.
ಮತ್ತೆ 40 ವರ್ಷ ಹಿಂದೇ ನಮ್ಮ ಅತ್ತೆ ನಮ್ಮ ತಂದೆ ಬಳಿಗೆ ಇನ್ಲ್ಯಾಂಡ್ ಕವರ್ ತಂದು ಬರಿಯಲೂ ಹೇಳುತ್ತಿದ್ದರು.
ನಮ್ಮ ತಂದೆಯವರು ಪತ್ರದ ಪೀಠಿಕೆ ಮುಗಿಸುವ ಸಮಯಕ್ಕೆ ನಮ್ಮತ್ತೆ ಮುಂದಿನ ವಿಚಾರವನ್ನು ಹೇಳುತ್ತಿದ್ದರು ಒಟ್ಟು ಸಾರಾಂಶವನ್ನು ಹೇಳಿದ ಬಳಿಕ ನಮ್ಮ ತಂದೆ ಪತ್ರ ಮುಗಿಸುತಿದ್ದರು.
ಇಲ್ಲಿ ನಾನು ಹೇಳ ಬೇಕಾದ್ದು ನಮ್ಮ ತಂದೆಯನ್ನು ಇಷ್ಟು ಸಲ ಜ್ಞಾಪಕ ಮಾಡಿದ್ದಕ್ಕೆ ನಿಮಗೆ ಕೃತಜ್ಞತೆಗಳು.
ಇಷ್ಟ ಅದ ಪ್ಯಾರ… (ಕನ್ನಡದ್ಲಲಿ ಪ್ಯಾರಾ?? )
ಕಬ್ಬಿಣದ ಕೆಂಪು ಡಬ್ಬದ ಬಾಯಿಗೆ ಒಂದು ಕಪ್ಪು ರೇಕಿನ ಅಲುಗಾಡುವ ನಾಲಿಗೆ ಇರೋದು ಅದರೊಳಗೆ ಹಾಕಿ…… ಒಳಗೆ ಬಿತ್ತಾ ? ಪೋಸ್ಟ್ ಮ್ಯಾನ್ಗೆ ಸಿಗುತ್ತೊ ಇಲ್ವೋ ? ಅಡ್ರೆಸ್ಸು ಸರಿಯಾಗಿ ಬರ್ದಿದ್ನಾ ? ಅಂಚೆ ಯವರು ಇದನ್ನ ತಲುಪುಸ್ತಾರ ? ಹೀಗೆ ಒಂದಷ್ಟು ಸಂದೇಹಗಳೊಂದಿಗೇ ಹಿಂದಿರುಗುತ್ತಿದ್ದೆವು
ಮಿಂಚಂಚೆಯ ಕಾಲದಲ್ಲಿ ಅಂಚೆಯ ನೆನಪು ಸೊಗಸಾಗಿದೆ.
ಮರೆವಿನತ್ತ ಹೆಜ್ಜೆ ಹಾಕುತ್ತಿರುವ
ಪತ್ರ ಪ್ರಪಂಚದ ಸುತ್ತ ಸುತ್ತಿದ
ಚಿತ್ರ ಬರಹ ತುಂಬಾ ಅರ್ಥಪೂರ್ಣ
ಓಲೆಯ ಲೋಕದ ನೆನಪುಗಳು
ಮರುಕಳಿಸುವಂತೆ ಮಾಡಿತು ನಿಮ್ಮ ಲೇಖನಿ
ಅಭಿನಂದನೆಗಳು ಕಿರಣ ಜಿ
ಅಂಚೆಯಣ್ಣ ಬಂದಿರಣ್ಣ ನೀವೇನು ನನಗೆ ತಂದಿರುವಿರುವಿರಿ ಎನ್ನುವಂತೆ ಅಂಚೆಯಣ್ಣ ತಂದ ಕಾಗದ ನೋಡುವ ತವಕ ಓದುವಾಗ ಆಗುವ ಪುಳಕ ಅಥವಾ ನಿರಾಶೆ ಯನ್ನು ಈಗಿನ ಮಿಂಚಂತೆ ನೀಡಲಾರದು. ಕಾಗದ ಪತ್ರಗಳನ್ನು ಜೋಪಾನ ಮಾಡಿ ಪುನಃ ಓದುವ ಖುಷಿ ಈಗಿನ ವಾಟ್ಸಪ್ msg ನಲ್ಲಿ ಸಿಗಲಾರದು. ಉತ್ತಮ ಲೇಖನ
ಮಾಸ್ತಿ ಬರಹವೇ ಚಂದ. ಅದಕ್ಕೆ ಕಿರಣ ಅವರ ಚಿತ್ರ ಮತ್ತಷ್ಟು ಅಂದ. ಇಂಥ ಬರಹಗಳಿಂದಲೇ ಕನ್ನಡಪ್ರೆಸ್.ಕಾಮ್ ಆರಂಭವಾದ ಮೂರೇ ವಾರದಲ್ಲಿ ಕನ್ನಡಿಗರ ಮನೆ ಮನ ಗೆದ್ದಿದೆ.
ನಾವು ಅಂಚೆಯನ್ನು ಅಷ್ಟಾಗಿ ಬಳಸಿದವರಲ್ಲ ನಮ್ಮ ಕಾಲಕ್ಕಾಗಲೆ ದೂರವಾಣಿ ಎಸ್ ಎಂ ಎಸ್ ಅಂಚೆಯನ್ನು ಆಕ್ರಮಿಸಿದ್ದವು ಇದೀಗ ನಿಮ್ಮ ಈ ಲೇಖನ ಅಂಚೆಯ ವೈಭವವನ್ನು ಕಣ್ಣಿಗೆ ಕಟ್ಟಿ ಕೊಟ್ಟಿತು ಧನ್ಯವಾದಗಳು ಸರ್ 😊😊
ಮಾಸ್ತಿಯವರು ತಮ್ಮ ಬರಹದಿಂದ ಎಲ್ಲರನ್ನೂ ನಮ್ಮ ಬಾಲ್ಯಕ್ಕೆ ಎಳೆದೊಯ್ದರು.
ಅಂಚೆಯ ಅಣ್ಣ ಬಂದಿಹನಣ್ಣ ಅಂಚೆಯ ಹಂಚಲು ಮನೆಮನೆಗೆ ಎಂಬ ಪದ್ಯದ ಸಾಲು ನೆನಪಾಯಿತು. ಈಗಲೂ ನಮ್ಮ ತಂದೆ ಪತ್ರಗಳ ಮುಖಾಂತರ ಎಲ್ಲರ ಸಂಪರ್ಕವನ್ನಿಟ್ಟುಕೊಂಡಿದ್ದಾರೆ. ದೀಪಾವಳಿ ಯುಗಾದಿ ಬಂತಂದರೆ ನಾನೂರರಿಂದ ಐನೂರು ಕಾರ್ಡ್ ಗಳನ್ನು ಬರೆದು ತಾವೇ ಸ್ವತಃ ಪೋಸ್ಟ್ ಮಾಡಿ ಬರುತ್ತಾರೆ.
ಕಿರಣರವರ ಕಲೆ ಲೇಖನಕ್ಕೆ ಹೇಳಿಮಾಡಿಸಿದೆ.
ನಿಜ ಸೊಗಸಾದ ಲೇಖನ. ಮನಸು ಹಿಂದಿನ
ಸೊಗಸಾದ ಲೇಖನ. ಮನಹಿಂದಿನ ದಿನಕೆ ಓಡಿತು. ಈಗಿನವರಿಗೆ ಪತ್ರ ಬರಿಯೋದು, ಅ
ಸೊಗಸಾದ ಲೇಖನ. ಮನಹಿಂದಿನ ದಿನಕೆ ಓಡಿತು. ಈಗಿನವರಿಗೆ ಪತ್ರ ಬರಿಯೋದು, ಅದಕೆ ಉತ್ತರ ಕಾಯೋದು. ಆ ಮಜವೇ ತಿಳಿದಿಲ್ಲ. ಪತ್ರಕೆ ಉತ್ತರ ಬರೋದು ತಡವಾದರೆ ಆ ಕಾತುರ ಎಲ್ಲವೂ ಚಂದ. ಈಗ ಎಲ್ಲವೂ ಮೆಸೇಜ್ . ತುಂಬಾ ಸೂಪರ್ ಲೇಖನ. ಅಂಚೆಯಣ್ಣ ಮಿಸ್ ಯೂ.