29.3 C
Karnataka
Sunday, September 22, 2024

    ಜಾತ್ರೆ ಮುಗಿದೇ ಹೋಯಿತೇನೋ ಎಂಬ ದುಗಡದಲ್ಲಿ ಹೊಸ ಸ್ವಾತಂತ್ರ್ಯದ ಕಡೆ ಮುಂಬೈ ಚಿತ್ತ

    Must read

    ಹೇಳಿ ಕೇಳಿ ಮುಂಬೈ ರಾಣಿ ಒಲಿಯುವುದು ಶ್ರಮಕ್ಕೆ ಮಾತ್ರ. ಇಲ್ಲಿ ಬರುವವರು ಮೊದಲು ವಿನಯವಾಗಿ ಬಂದು ಶ್ರಮ ಪಟ್ಟು ಯಶಸ್ಸು ಸಾಧಿಸಬಹುದೇ ಹೊರತು.. ಕಡಿಮೆ ಸಮಯದಲ್ಲಿ ಸಿಕ್ಕ ಹಣ ಕೀರ್ತಿ ರೆಪ್ಪೆ ಅಲುಗಿಸುವಷ್ಟರಲ್ಲಿ ಕೆಳಗೆ ಬಿದ್ದು ಬದುಕು ಮೂರಾಬಟ್ಟೆಯಾದ ಕತೆಗಳು ಇಲ್ಲಿ ಸಾಕಷ್ಟಿವೆ. ಇಲ್ಲಿನ ಯಶಸ್ಸಿಗೆ ಹತ್ತು ಹಲವು ಮುಖಗಳು. ಕೆಲವು ಕಣ್ಣಿಗೆ ಕಾಣುತ್ತವೆಯಾದರೆ ಕೆಲವು ಕಾಣುವುದಿಲ್ಲ.

    ಎಲ್ಲೂ ಬೇಳೆ ಬೇಯದಿದ್ದರೆ, ಶ್ರಮಿಸುವ ಮನಸ್ಸಿದ್ದರೆ ಮುಂಬಾದೇವಿಗೆ ಶರಣುಹೋಗು ಎನ್ನುವುದು ಹಳಬರ ನಾನ್ನುಡಿ. ಒಮ್ಮೆ ಮುಂಬಾದೇವಿಯ ಪಾದಕ್ಕೆ ಬಿದ್ದು ಮಹಾಲಕ್ಷ್ಮಿಯ ಆಶೀರ್ವಾದ ಪಡೆದ ನಂತರ ನಿನ್ನ ಕೈ ನಿನ್ನ ಬಾಯಿ. ಹೀಗಿರುವಾಗ ಈ ಮಾಯಾ ನಗರಿಗೆ ಬರುವವರಿಗೆ ಕೇವಲ ಬರುವ ದಾರಿ ಕಾಣುತ್ತಿತ್ತೇ ವಿನಾ ಹೋಗುವ ದಾರಿಯಲ್ಲ. ಅವಳೂ ತಾನೆ ಎಷ್ಟೆಂದು ಮಡಿಲು ಹಿಗ್ಗಿಸಿಯಾಳು? ಕಳೆದ ಎರಡು ದಶಕಗಳಲ್ಲಂತೂ ಸಮುದ್ರವನ್ನೂ ಜರುಗಿಸುವ, ಅಲ್ಲಿಯೂ ತನ್ನ ಪ್ರಭುತ್ವ ಸ್ಥಾಪಿಸಿಕೊಳ್ಳುವ ಮನುಷ್ಯನ ಹಪಾಹಪಿತನ ಇಡೀ ಮುಂಬೈಯನ್ನೇ ರೊಚ್ಚಿಗೆಬ್ಬಿಸಿದಂತೆ ಕಾಣುತ್ತಿತ್ತು.

    ರಾತ್ರಿಯಲ್ಲಿ ಜಗಮಗಿಸುವ ಕ್ವೀನ್ ನೆಕ್ಲೆಸ್ ಹಗಲಿನಲ್ಲಿ ಬೇರೆಯೇ ಕತೆ ಹೇಳುತ್ತದೆ. ತೊಂಬತ್ತರ ದಶಕದ ವರೆಗೂ ಶ್ರಮ ಪಟ್ಟು ಕಟ್ಟಿಕೊಂಡ ಬದುಕಿನ ಕಟ್ಟಡಗಳ ನಡುವೆ ಅಲ್ಲಿಂದಾಚೆಗೆ ಏನೇನೋ ಬದಲಾಣೆಗಳಿಗೆ ಚಾಲನೆ ಸಿಕ್ಕಿ ಚಾಲೂಕು ಜನರು ಮುಂಬೈ ಆರ್ಥಿಕ ಜಗತ್ತಿನಲ್ಲಿ ನುಸುಳಿ ಹಣದ ಸೌಧಗಳನ್ನು ಕಟ್ಟತೊಡಗಿದರು. ಈ ನಡುವೆ ಶ್ರಮದ ಬದುಕು ನೆಡೆಸುತ್ತಿದ್ದವರ ವ್ಯವಹಾರ ವ್ಯಾಪಾರ ಸಪ್ಪೆಯಾಗಿ ಕಣ್ಣಿಗೆ ಕಾಣದಂತಾಯಿತು. ಅವರೂ ವಿಧಿ ಇಲ್ಲದೆ ಹಣವಂತರ ತಾಳಕ್ಕೆ ಬೇಕೋ ಬೆಡವೋ ಕುಣಿಯಲೇ ಬೇಕಾದ ಅನಿವಾರ್ಯ ಸೃಷ್ಟಿಯಾಯಿತು.

    ಹಾಗೆ ಕಟ್ಟಿದ ಈ ಹಣದ ಸೌಧದ ಅಡಿಪಾಯದಲ್ಲಿ ಶ್ರಮದ ಗಟ್ಟಿತನವಿಲ್ಲದೆ ನಂಬಿಕೆಯ ಭದ್ರತೆ ಇಲ್ಲದೆ ದಶಕದಿಂದೀಚೆಗೆ ಇಂಚಿಂಚಾಗಿ ಕುಸಿಯುತ್ತಿತ್ತು. ಹತ್ತಡಿ ಜಾಗದಲ್ಲಿ ಹತ್ತು ವ್ಯಾಪಾರಗಳು ನೆಡೆಯಲಾರಂಬಿಸಿದ ಪರಿಣಾಮವಾಗಿ ಯಾರಿಗೂ ಹೊಟ್ಟೆ ತುಂಬದ ಪರಿಸ್ಥಿತಿ.

    ಸಣ್ಣ ಪುಟ್ಟ ವ್ಯಾಪಾರಿಗಳೆಲ್ಲಾ ಅವಲಂಬಿಸಿದ್ದ ದೊಡ್ಡ ಕುಳಗಳು ಎಲ್ಲಾ ವ್ಯವಹಾರವನ್ನೂ ಹವಾಲಾ ಮೂಲಕವೇ ಮಾಡುತ್ತಿದ್ದ ಕಾರಣ, ‘ನೋಟ್ ಬಂದಿ’ ಸಮಯದಲ್ಲಿ ಆರ್ಥಿಕ ರಾಜಧಾನಿ ಪಾತಾಳಕ್ಕೆ ಕುಸಿಯುತ್ತಿರುವುದು ಪ್ರತಿಯೊಬ್ಬ ಮುಂಬೈ ವ್ಯಾಪಾರಿಗೂ ನಿಚ್ಛಳವಾಗಿ ಕಾಣುತ್ತಿತ್ತು. ಹೇಗೋ ಹಠದಲ್ಲೇ ಈಜುತ್ತಾ ಬದುಕುತ್ತೇವೆ ಎಂದು ತಾಳ್ಮೆಯಿಂದ ಮುನ್ನೆಡೆದವರಿಗೆ ಭಾರಿ ಹೊಡೆತ ಕೊಟ್ಟಿದ್ದು ಈ ಕೊರೋನಾ.

    ತಪ್ಪು ಮಾಡುವವರು ಯಾರೋ ಅನುಭವಿಸುವರು ಯಾರೋ

    ಇದುವರೆವಿಗೂ ಮುಂಬೈ ನಗರಿ ತನ್ನ ಮೇಲಾದ ಅತ್ಯಾಚಾರ ಸಹಿಸಿ ಸಹಿಸಿ ಇನ್ನು ತಾಳಲಾರೆ ಎಂಬಂತೆ ತಿರುಗಿ ಬಿದ್ದು ಕೊಟ್ಟ ಶಾಪ ಈ ಕೊರೋನಾ ವೈರಸ್ ಎನ್ನುವಂತಾಗಿದೆ. ಈಗ ತಪ್ಪು ಮಾಡುವವರು ಯಾರೋ ಅನುಭವಿಸುವರು ಯಾರೋ.. ಒಟ್ಟಿನಲ್ಲಿ ಸಮುದ್ರವು ಇಲ್ಲಿಯ ಜನರು ಎಸೆದ ತನ್ನೊಡಲೊಳಗಿನ ಕಸವನ್ನು ಅಲೆಗಳ ಸಹಾಯದಿಂದ ಒಮ್ಮೆಗೇ ಮನುಷ್ಯರ ಮುಖದ ಮೇಲೆ ‘ರಪ್ ‘ ಎಂದು ಬಾರಿಸಿದ ಹಾಗಾಗಿದೆ. ಇಡೀ ಮುಂಬೈಗೆ ಮುಂಬೈ ಐಸಿಯು ಹಾಸಿಗೆಯಮೇಲೆ ಬಿದ್ದಿದೆ.

    ಕೊಡುವುದರ ಹತ್ತರಷ್ಟು ಪಡೆವುದೇ ನಿಯಮ ಎಂಬಂತಾಗಿದ್ದ ಮುಂಬೈ ಸಾರ್ವಜನಿಕ ವ್ಯವಸ್ಥೆಗಳು ಅದರಲ್ಲೂ ಮುನಿಸಿಪಾಲಿಟಿ ಆಸ್ಪತ್ರೆಗಳು ಹತಾಶೆಯಿಂದ ಕೈ ಚೆಲ್ಲಿ ಕೂತಿವೆ. ಯಾವುದನ್ನು ಯಾರನ್ನು ನಂಬಿ ಜನ ಬೇರೆ ಬೇರೆ ರಾಜ್ಯಗಳಿಂದ ನುಗ್ಗಿಕೊಂಡು ಬಂದಿದ್ದರೋ ಅವರಿಂದ ಹುಲ್ಲುಕಡ್ಡಿಯ ಆಸರೆಯೂ ಸಿಗದಾಗಿ ಬದುಕು ಸಂಪೂರ್ಣ ಅಸಹಾಯಕ ಸ್ಥಿತಿಯಲ್ಲಿದೆ. ಇಡೀ ಪ್ರಕೃತಿಯೇ ಮನುಷ್ಯ ಕುಲವನ್ನು ಜೂಜಿನ ಕಾಯಿಗಳಂತೆ ಆಡಿಸುತ್ತಿದೆ.
    ಲಾಕ್ ಡೌನ್ ಘೋಷಣೆ ಆದ ಮೊದಲ ತಿಂಗಳಿನಲ್ಲಿ ಜನರಿಗೆ ಮುಂದೆ ಬರಬಹುದಾದ ದಿನಗಳ ಬಗ್ಗೆ ಯಾವ ಊಹೆಯೂ ಇರಲಿಲ್ಲ.

    ಒಂದಷ್ಟು ಜನರಿಗಂತೂ ಇದೊಂದು ರೀತಿ ದಿನ ನಿತ್ಯದ ಜಂಜಡಗಳಿಂದ ಬಿಡುವು ಸಿಕ್ಕಿತು ಎಂದು ಸಮಾಧಾನದಿಂದಲೇ‌ ಇರಲು ತೊಡಗಿದರು. ಕೆಲವರಂತೂ ನಾವು ಸಂಸಾರದೊಂದಿಗೆ ಆನಂದಮಯ ದಿನಗಳನ್ನು ಕಳೆಯುತ್ತಿದ್ದೇವೆ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಫೋಟೋ ನಿಲುಮೆ ಹಾಕಿಕೊಂಡರು. ತರಾವರಿ ತಿಂಡಿ ಫೋಟೋಗಳ ಮಹಾಪೂರವೇ ಹರಿದು ಬರುತ್ತಿತ್ತು‌. ಮನೋರಂಜನಾ ಕ್ಷೇತ್ರದವರೂ ತಾವೇನು ಕಡಿಮೆ ಎಂಬಂತೆ ತಾವೂ ಅಡಿಗೆ ಮಾಡಿದೆವೆಂದೂ.. ದೊಡ್ಡ ದೊಡ್ಡ ತಾರೆಯರು ತಾವೂ ಕಸ ಗುಡಿಸಿದೆವೆಂದೂ, ಪಾತ್ರೆ ತೊಳೆದೆವೆಂದು ತಮ್ಮ ಸರಳತೆಯನ್ನು ಸಾಬೀತು ಪಡಿಸುತ್ತಿದ್ದರು. ಜೊತೆ ಜೊತೆಗೆ ಟಿಕ್ ಟಾಕ್ ವೀಡಿಯೋಗಳಂತೂ ‌ಭರ್ಜರಿ ಪ್ರದರ್ಶನ ಕಂಡವು. ಕ್ರಿಕೆಟ್ ದೇವರುಗಳು ಪರಸ್ಪರ ಕಾಲೆಳೆದುಕೊಂಡು ಟ್ವೀಟ್ ಮಾಡಿ ಮನೋರಂಜನೆ ಒದಗಿಸುತ್ತಿದ್ದರು. ಗಾಯಕರು ಸೋಷಿಯಲ್ ಮೀಡಿಯಾ ತುಂಬಾ ಗಾಯನ ಕಾರ್ಯಕ್ರಮ ನೆಡೆಸಿ ಪರಸ್ಪರ ಹುರಿದುಂಬಿಸುತ್ತಿದ್ದರು.

    ಈ ಎಲ್ಲಾ ಸಕಾರಾತ್ಮಕ ಬೆಳವಣಿಗೆಯ ನಡುವೆಯೇ.. ಮೆಲ್ಲಗೆ ಕೊರೋನಾ ಉಳ್ಳವರನ್ನು ದಾಟಿ ಸಾರ್ವಜನಿಕ ಸೇವೆಗಳಲ್ಲಿ ನಿರತರಾಗಿದ್ದ ಹಲವು ಶ್ರಮಿಕರು, ಸರ್ಕಾರಿ ಕೆಲಸಗಾರರು, ನಮ್ಮ ನಿಮ್ಮಂತವರ ಹೆಗಲೇರಿ ಆಗಿತ್ತು. ಅದರ ಅರಿವು ಆಗುವಷ್ಟರಲ್ಲಿ ಪರಿಸ್ಥಿತಿ ಕೈ ಮೀರಿತ್ತು. ಕೆಲವು ಕಡೆ ಸರ್ಕಾರದ ನಿರ್ಲಕ್ಷ ಕಾರಣವಾದರೆ ಮತ್ತೆ ಹಲವೆಡೆ ಜನರ ಮಾಮೂಲಿ ಉಡಾಫೆ ಪ್ರವೃತ್ತಿ ಕಾರಣವಾಗಿ ಸಿಕ್ಕ ಸಿಕ್ಕವರನ್ನೆಲ್ಲಾ ಕೊರೋನಾ ಬಲಿಪಶುಗಳನ್ನಾಗಿಸುತ್ತಿತ್ತು.

    ಮುಂಬೈ ಜೋಪಡಿಗಳಲ್ಲಿ ಚಾಳ್ ಗಳಲ್ಲಿ ಹಿಡಿಯಷ್ಟು ಜಾಗಗಳಲ್ಲಿ ಜೇನು ಗೂಡಿನ ಹುಳಗಳಂತೆ ವಾಸಿಸುತ್ತಿದ್ದ ಜನರ ಬದುಕಲ್ಲಿ ಈ ಸೋಂಕು ಅಲ್ಲೋಲ ಕಲ್ಲೋಲ ಉಂಟು ಮಾಡಿತು. ಒಂದು ಟಾಯ್ಲೆಟ್ ಅನ್ನು ನೂರಾರು ಜನ ಬಳಸ ಬೇಕಾದ ಅನಿವಾರ್ಯತೆಯಲ್ಲಿ ‘ ದೋ ಗಜ್ ಕಿ ದೂರಿ’ ಹಳ್ಳ ಹತ್ತಿತ್ತು. ಆ ಹೊತ್ತಿಗಾಗಲೇ ದಿನಗೂಲಿ ನೌಕರರು ಹಸಿವೆಯಿಂದ ಬೇಸತ್ತಿದ್ದರು. ಅವರ ಆಕ್ರೋಶವನ್ನು ಹೊರ ಹಾಕುವ ವೀಡಿಯೋಗಳು ಹೊರಬಂದಿದ್ದೇ ತಡ.. ತಾಮುಂದು ನಾ ಮುಂದು ಎಂದು ಸಹಾಯಗಳ ಮಹಾ ಪೂರವೇ ಹರಿದು ಬಂತು. ಎಲ್ಲಾ ಸೆಲೆಬ್ರಿಟಿಗಳೂ ತಮ್ಮ ಉದಾರತನ ತೋರಿದರು.

    ಗೋಧಿ ಹಿಟ್ಟಿನ ನಡುವೆ ಐದೈದು ಸಾವಿರ ಇಟ್ಟು ಕೊಟ್ಟ ಸುದ್ದಿ, ಆಂಬ್ಯಲೆನ್ಸ್‌ ಸೇವೆ ಒದಗಿಸಿಕೊಟ್ಟ ಸುದ್ದಿ, ದಿನಸಿ ಹಂಚಿದ ಸುದ್ದಿ, ಮಾಸ್ಕ್ ಸ್ಯಾನಿಟೈಸರ್ ಹಂಚಿದ ಸುದ್ದಿ, ನೇರ ಸರಕಾರಕ್ಕೇ ದೇಣಿಗೆ ನೀಡಿದ ಸುದ್ದಿ ಮತ್ತೆ ಕೆಲವರಿಗೆ ತಮ್ಮ ಖರ್ಚಲ್ಲಿ ವಿಮಾನ ಯಾನ ಯೋಗ ಮಾಡಿಸಿದ್ದು ಹೀಗೆ ಪ್ರಚಾರಕ್ಕೋ ಕಳಕಳಿಗೋ ಎಲ್ಲೆಲ್ಲೂ ಸಹಾಯ ಮಾಡುವಿಕೆ ಉತ್ಸಾಹ ನೋಡಲು ಸಿಕ್ಕವು. ಸಹಾಯ ಮಾಡುವವರ ಅನುಕೂಲಕ್ಕೆ ತಕ್ಕಂತೆ ಸಿಕ್ಕವರಿಗೆ ಸೀರುಂಡೆ ಅನ್ನೋ ಹಾಗಾಯಿತು. ದುಡ್ಡಿನ ಅವಶ್ಯಕತೆ ಇದ್ದ ಕೆಲವು ಜನರು ಕೈಚಾಚಲು ಬಯಸದೆ ಮುಜುಗರದಿಂದ ಒಳಗೇ ಅವಿತು ನೋವು ಪಟ್ಟರು. ಮತ್ತೆ ಕೆಲವರು ಸಹಾಯ ಎಂದು ನೀಡಿದ ದಿನಸಿ ಸಾಮಾನು ತರಕಾರಿಗಳನ್ನು ಸಿಕ್ಕ ಕಡೆ ಎಲ್ಲಾ ಪಡೆದು ದುಡ್ಡಿಗೆ ಮಾರಿಕೊಳ್ಳಲಾರಂಬಿಸಿದರು.

    ಗೋರೆಗಾಂವ್ ನ ಫಿಲ್ಮಿಸ್ಥಾನ್ ಕಾಂಪೌಂಡ್ ನ ಒಳಗೆ ಕಾರ್ಮಿಕರಿಗೆಂದು ಕೊಟ್ಟ ಸಾಮಾನು ಆಹಾರ ಪದಾರ್ಥಗಳು ಬೇಕೆಂದವರಿಗೆ ದುಡ್ಡಿಗೆ ಹಂಚಿಕೆ ಆಗುತ್ತಿತ್ತು. ಈ ಸಂಭ್ರಮಗಳೂ ಕೊನೆಗೊಂಡು ಕಾರ್ಮಿಕರು ಬದುಕಲು ದಾರಿ ಕಾಣದೆ ಬಂದ ಊರಿನತ್ತ ಮುಖ ಮಾಡಿದರು. ಸಿಕ್ಕಿದ್ದನ್ನು ಹೊತ್ತು ಖಾಲಿ ಹೊಟ್ಟೆಯಲ್ಲಿ ಸಾವಿರಾರು ಮೈಲಿ ನೆಡೆದರು. ಅಲ್ಪ ಸ್ವಲ್ಪ ದುಡ್ಡಿದ್ದವರು, ಆಟೋ ಸಿಕ್ಕರೆ ಆಟೋ ಲಾರಿ ಸಿಕ್ಕರೆ ಲಾರಿ ಎಂದು ದುಡ್ಡು ತೆತ್ತು ಊರಿಗೆ ಹೊರಟರು. ಈ ಪರದಾಟದ ಗೌಜು ದಿನದಿಂದ ದಿನಕ್ಕೆ ತಣ್ಣಗಾಗಿ ಈಗ ನಿಜವಾದ ಸಂಘರ್ಷ‌ ಶುರುವಾಗಿದೆ.ಕಡಿಮೆ ಎಂದರೂ ಎರಡು ಮೂರು ಸಾವಿರ ಜೋಬಿಗಿಳಿಸಿ ನೆಮ್ಮದಿಯಿಂದ ಮನೆಗೆ ಹೋಗುತ್ತಿದ್ದ ಆಟೋದವರು ಕುಸಿದು ಕೂತಿದ್ದಾನೆ. ಇ ಎಂ ಐ ಕಟ್ಟಿಸಿಕೊಳ್ಳದ ಗಾಡಿಗಳು ಬೀದಿಗೆ ಬಿದ್ದಿವೆ.

    ಇವುಗಳ ನಡುವೆಯೇ ಕೊರೋನಾ ಪ್ರತಾಪ ಮುಂದುವರೆಸುತ್ತಾ ನೆಡೆದಿದೆ. ಆಸ್ಪತ್ರೆ ಒಳಗೆ ಹೋದವರ ಮುಖ ಮತ್ತೆ ವಾಪಸ್ ನೋಡುವುದೂ ಅಸಾಧ್ಯವೇನೋ ಎನ್ನುವಂತಾಗಿ ಜನ ಕಂಗೆಟ್ಟಿದ್ದಾರೆ.ಗುಣ ಮುಖರಾದವರ ಸುದ್ದಿಗಳು ಬರುತ್ತಿವೆ. ಸಾಗರೋಪಾದಿಯಲ್ಲಿ ಜನ ತಮ್ಮ ತಮ್ಮ ಊರಿನ ಕಡೆಗೆ ಹೊರಟು ಹೋಗಿದ್ದಾರೆ. ಈವರೆಗೂ ಗಳಿಸಿ ಜೋಪಾನ ಮಾಡಿದ್ದ ದುಡ್ಡು ಮುಗಿದು ಹಸಿವಿನಿಂದ ಕಂಗೆಟ್ಟ ಮುಖಗಳು ಎಲ್ಲೆಲ್ಲೂ ಕಾಣುತ್ತಿವೆ.ಎಲ್ಲಿಗೂ ಹೋಗಲಾಗದೆ ಇರಲೂ ಜಾಗವಿಲ್ಲದೆ ಬೀದಿಗೆ ಬಿದ್ದವರ ಬವಣೆ ಟೀವಿಯಲ್ಲಿ ನೋಡಿದ ಜನ ‘ಚ್ಚು ಚ್ಚು’ ಎಂದದ್ದಷ್ಟೇ ಲಭ್ಯ.

    ತಂದೆಯನ್ನು ಸೈಕಲ್ ಮೇಲೆ ಸಾಗಿಸಿದ ಮಗಳು.. ತಾಯಿಯನ್ನು ಬೆನ್ನ ಮೇಲೆ ಹೊತ್ತು ನೆಡೆದ ಮಗ ಎಲ್ಲವನ್ನೂ ಅಚ್ಚರಿಯಿಂದ ಹೀಗೂ ಸಾಧ್ಯವೇ? ಎಂದು ಜನ ವಾರ್ತೆಗಳಲ್ಲಿ ನೋಡಿದರು.ಇವೆಲ್ಲಕ್ಕಿಂತ ಭಿನ್ನವಾದ ಎಲ್ಲರ ಕಣ್ಣಿಗೆ ಕಾಣದ ಮನೆ ಮನೆಗಳ ಜಗತ್ತಿನಲ್ಲಿ ಗಲ್ಲಿ ಗಲ್ಲಿಯೊಳಗೆ ಬೇರೆಯದೇ ಧಾರವಾಹಿಗಳು ನೆಡೆಯುತ್ತಿತ್ತು. ಸೌಹಾರ್ದತೆಗೆ ಸಾಧ್ಯ ಮಾಡಿಕೊಟ್ಟಿದ್ದ ಹೊರಗಿನ ಪ್ರಪಂಚ ಇದ್ದಕ್ಕಿದ್ದಂತೆ ಮುಚ್ಚಿ ಹೋಗಿ ಹೊಸ ಹೊಸ ಸಮಸ್ಯೆಗಳು ಹುಟ್ಟಿಕೊಂಡವು.

    ಎಷ್ಟೋ ಮನೆಗಳಲ್ಲಿ ವೈವಾಹಿಕ ಜೀವನದಲ್ಲಿ ಸೋತವರು ತಾಳ್ಮೆಗೆಡುವ ಪರಿಸ್ಥಿತಿ ನಿರ್ಮಾಣ ಆಗುತ್ತಿತ್ತು. ಮಕ್ಕಳಿಗಾಗಿ ನೆಪ ಮಾತ್ರಕ್ಕೆ ಒಂದು ಸೂರಿನಡಿ ಬದುಕುತ್ತಿದ್ದವರು ಲಾಕ್ ಡೌನ್ ಸಮಯದಲ್ಲಿ ಮನೆಯಲ್ಲಿಯೇ ಬೇಡದವರ ಮುಖ ನೋಡುತ್ತಾ ಅವರ ತಿವಿಯುವ ಮಾತುಗಳನ್ನು ಸಹಿಸುತ್ತಾ ತಮ್ಮ ಮನೋಸ್ವಾಸ್ಥ್ಯವನ್ನೇ ಕಳೆದುಕೊಂಡು ಹಾಳಾದರು. ಅಂತದ್ದೇ ಒಂದು ಸಂದರ್ಭದಲ್ಲಿ ಹೆಂಡತಿಯೊಬ್ಬಳು ತನ್ನ ಹುಟ್ಟು ಹಬ್ಬದ ದಿನ ಊರೆಲ್ಲಾ ತನ್ನ ಸ್ನೇಹಿತೆಯರು ಪರಿಚಯದವರು
    ಸೋಶಿಯಲ್ ಮೀಡಿಯಾದಲ್ಲಿ ಲೈವ್ ಬಂದು ವಿಶ್ ಮಾಡುವಾಗ, ಗಂಡ ಎನಿಸಿಕೊಂಡವ ಒಂದು ಕೇಕ್ ಕೂಡ ತರದೆ ನಿರ್ಲಕ್ಷ ಮಾಡಿದ, ಅವಮಾನ ಆಯಿತು ಅನ್ನೋ ಕ್ಷುಲ್ಲಕ ಕಾರಣಕ್ಕೆ ನೇಣು ಹಾಕಿಕೊಂಡಳು.
    ಮತ್ತೆ ಸಿನೆಮಾ, ಟೀವಿ ಧಾರವಾಹಿಗಳಲ್ಲಿ ಸಣ್ಣ ಪುಟ್ಟ ಕೆಲಸ ಮಾಡುತ್ತಿದ್ದವರು ಕೆಲಸ ಕಳೆದುಕೊಂಡು ಡಿಪ್ರೆಷನ್ ಗೆ ಸಿಲುಕಿ ಆತ್ಮ ಹತ್ಯೆ ಮಾಡಿಕೊಂಡರು. ಅಂತಹ ಎಷ್ಟು ಸಾವುಗಳಾದವೋ.

    ಇನ್ನು ಕೆಲವು ಕಡೆ ಇದೇ ಸರಿಯಾದ ಸಮಯ ಪೋಸ್ಟ್ ಮಾರ್ಟಂ ಮಾಡಲೂ ಯಾರಿಗೂ ಪುರುಸೊತ್ತಿಲ್ಲ ಎಂಬ ಭಂಡ ಧೈರ್ಯದಲ್ಲಿ ಮಾಡಬಾರದ ಅನ್ಯಾಯಗಳನ್ನು ಮಾಡಿ ಎಷ್ಟೋ ಕೊಲೆಗಳೂ ಆಗಿವೆ.ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ಥಳ ಸಿಗದೆ ಪ್ರೈವೇಟ್ ಹಾಸ್ಪಿಟಲ್ ಗೆ ಎಡತಾಕಿದವರನ್ನು ಅವರ ಯೋಗ್ಯತೆಯನ್ನು ಮೀರಿಸುವಷ್ಟು ದುಡ್ಡು ಕಿತ್ತವು.

    ಒಂದೊಮ್ಮೆ ಊರಿನಿಂದ ಬಂದಾಗ ಹಾಡಿ ಹೊಗಳಿ ಉಪಚರಿಸಿ ಮುಂಬೈನವರು ನಮ್ಮ ಕಡೆ ಜನ ಎಂದು ಹೇಳಿಕೊಂಡು ಹೆಮ್ಮೆಯಿಂದ ಬೀಗುತ್ತಿದ್ದ ಜನರು ಇವತ್ತು ಮುಖ ತಿರುಗಿಸಿದ್ದರು.
    ಮುಂಬೈಯ ತಮ್ಮವರು ತರುವ ದುಡ್ಡಿಗೆ, ಉಡುಗೊರೆಗೆ ಏನು ಸೇವೆ ಬೇಕಿದ್ದರೂ ಮಾಡಲು ಸಿದ್ದವಿದ್ದ ಜನ ಈಗ, ಊರಿಗೇ ಬರಬೇಡಿ ಎಂದು ನಿಷೇಧ ಹೇರಿದರು. ಮುಂಬೈ ಪಾಪಗಳ ಕೂಪ, ರೋಗಗಳ ತವರು ಎಂದರು. ಸಂಬಂಧಿಕರೂ ಇಂಥ ಕಷ್ಟದ ಸ್ಥಿತಿಯಲ್ಲಿ ಮುಖ ಮುರಿಯುವ ಹಾಗೆ ನಮ್ಮಲ್ಲಿಗೆ ಬರಲೇ ಬೇಡಿ ಎಂದು‌ ಬಾಗಿಲು ಮುಚ್ಚಿಬಿಟ್ಟರು.

    ಎಲ್ಲೂ ಹೋಗಲು ಸ್ಥಳವಿರದೆ ಇಲ್ಲೇ ಇದ್ದವರ ಪರಿಸ್ಥಿತಿ ಬೇರೆಯೇ ತರ. ಹೇಗೋ ಸಂಸಾರ ಸಾಗಿಸಲೇ ಬೇಕಿದ್ದ ಅನಿವಾರ್ಯತೆ ಮನೆಗಳಲ್ಲಿ. ಖರ್ಚಿಗೆ ಹಣ ಅಗತ್ಯವಿದ್ದಷ್ಟೂ ಸಿಗದೆ ಕುಟುಂಬದ ಎಲ್ಲರಿಗೂ ಮನೋವ್ಯಥೆ. ಒಡ ಹುಟ್ಟಿದವರೊಡನೆ ಜಗಳ, ದ್ವೇಷ .. ಕೇವಲ ಒಂದೆರಡು ತಿಂಗಳಲ್ಲಿ ಎಷ್ಟೋ ಸಂಬಂಧಗಳು ಬುಡ ಮೇಲಾದವು. ಶಾಲೆಗೆ ಹೋಗದೆ ಮಕ್ಕಳು ಉಡಾಳಾದವು. ಮಕ್ಕಳ ಚೇಷ್ಟೆ ಸಹಿಸಿ ಸಹಿಸಿ ತಂದೆ ತಾಯಂದಿರು ಹೈರಾಣಾದರು. ಕೂಡು ಕುಟುಂಬಗಳಲ್ಲಂತೂ ತಾಳ್ಮೆ ಹದ ತಪ್ಪಿ ಸಣ್ಣ ಪುಟ್ಟ ಇರುಸು ಮುರುಸುಗಳೂ ದೊಡ್ಡದಾಗಿ ಒಳಗೇ ಕುದಿವ ಜ್ವಾಲಾಮುಖಿಯ ಗೂಡುಗಳಾಗಿವೆ.

    ಹೊಸ ಕನಸುಗಳನ್ನು ಕಟ್ಟಿಕೊಂಡು ಹೊಸ ಬದುಕಿಗೆ ಅಡಿ ಇಡಬೇಕಿದ್ದ ಯುವ ಚಿಗುರುಗಳು ಮುದುರಿ ಕೂತಿವೆ. ಕೆಲಸಕ್ಕಾಗಿ ಎದುರು ನೋಡುತ್ತಿದ್ದ ಯುವ ಪೀಳಿಗೆಯವರು ತಿಂಗಳುಗಟ್ಟಲೆ ಮನೆಯಲ್ಲೇ ಬಂಧಿಯಾಗಿ ಮಾನಸಿಕ ಕ್ಷೋಬೆಗೆ ಒಳಗಾಗಿದ್ದಾರೆ. ಸಾಮಾಜಿಕ ಜಾಲ ತಾಣಗಳಲ್ಲಿ ಎಲ್ಲಿ ನೋಡಿದರೂ ಕಲಸಕ್ಕಾಗಿ ಬೇಡಿಕೆ ಇಡುತ್ತಿರುವವರು ಕಾಣಬರುತ್ತಿದ್ದಾರೆ. ಲಕ್ಷಾಂತರ ಸಣ್ಣ ಕೈಗಾರಿಕೆ ಘಟಕಗಳು ಮುಚ್ಚಿ ಹೋಗಿ ಕೆಲಸ ಕಳೆದು ಕೊಂಡ ಜನ ಹತಾಶರಾಗಿದ್ದಾರೆ. ಕೆಲಸದಲ್ಲಿ ಇದ್ದ ಯುವಕರು, ನವ ವಿವಾಹಿತರು ಕೆಲಸದ ಭರವಸೆಯ ಮೇಲೆ ಲೋನ್ ಮಾಡಿದ್ದವರು ಪೂರ್ತಿ ಸಂಬಳ ಸಿಗದೆ ಲೋನ್ ಕಟ್ಟಲಾಗದೆ ಒದ್ದಾಡುತ್ತಿದ್ದಾರೆ. ಸೂಚನೆಯೂ ಇಲ್ಲದೆ ಕೆಲಸಗಳಿಂದ ತೆಗೆಯಲ್ಪಟ್ಟಿದ್ದಾರೆ.

    ಬರೀ ಬಣ್ಣದ ಬದುಕನ್ನೇ ಬಿಂಬಿಸುವ ಸಿಮೆಮಾ ರಂಗವೂ ಕೂಡ ನೆಲ ಕಚ್ಚಿದೆ. ಥಿಯೇಟರ್ ಗಳು ಬಿಕೋ ಎನ್ನುತ್ತಿವೆ. ನಿಂತ ಕಾವಲುಗಾರ ತನ್ನ ಸಂಬಳವಾದರೂ ಸಿಕ್ಕೀತೋ ಇಲ್ಲವೊ ಎಂದು ತಳ ಮಳ ಪಡುತ್ತಿದ್ದಾನೆ. ಮಾಲ್ ಗಳಲ್ಲಿ ಹವಾನಿಯಂತ್ರಣ ಇಲ್ಲದೆ ಕೋಟ್ಯಾಂತರ ಬೆಲೆಯ ಸಾಮಾನುಗಳು ಹಾಳಾಗಿವೆ. ಬಾಡಿಗೆಗೆ ಜನ ಬರದೆ ಮನೆಗಳು ಖಾಲಿ ಹೊಡೆಯುತ್ತಿದೆ. ಶುರುವಿನಲ್ಲಿ ಸಹಾಯ ಮಾಡಲು ಮುಂದೆ ಬಂದವರೂ ಸದ್ಧಡಗಿಸಿ ಕೂತಿದ್ದಾರೆ. ರಾವು ಬಡೆದಂತಹ ಶಹರಿನ ಬೀದಿಯಲ್ಲಿ ಆಂಬುಲೆನ್ಸ್ ಸದ್ದುಗಳು ಒಳಗೆ ಅವಿತು ಕೂತವರ ಅಧೀರತೆ ಹೆಚ್ವಿಸುತ್ತಿವೆ. ಲೋಕಲ್ ಟ್ರೈನುಗಳು ಈ ಹಿಂದೆ ಓಡುತ್ತಲೇ ಇರಲಿಲ್ಲವೇನೋ ಎಂಬಂತೆ ನಿಂತಿವೆ. ಬಸ್ಸುಗಳೂ ಕೊರೋನಾ ವಾಹಕವೇನೋ ಎಂಬ ದಿಗಿಲು ಹುಟ್ಟಿಸುತ್ತಿವೆ.

    ಸಕಾರಾತ್ಮಕ ಬದಲಾವಣೆಗಳೂ ಆಗಿವೆ

    ಈ ಎಲ್ಲಾ ಕೆಟ್ಟ ಪರಿಸ್ಥಿತಿಯ ನಡುವೆಯೂ.. ಕೆಲವೇ ಕೆಲವು ಸಕಾರಾತ್ಮಕ ಬದಲಾವಣೆಗಳೂ ಆಗಿವೆ. ಕೊರೊನಾ ಸೋಂಕಿನ ಭಯದಲ್ಲಿ ಜನ ಜವಬ್ಧಾರಿಯುತವಾಗಿ ವರ್ತಿಸುವ ಅಭ್ಯಾಸ ಮಾಡಿಕೊಳ್ಳುತ್ತಿದ್ದಾರೆ. ಆ ಕಾರಣದಿಂದ ಎಲ್ಲೆಡೆ ಸ್ವಚ್ಛತೆ ತಾನಾಗಿಯೇ ಪಾಲನೆಯಾಗುತ್ತಿದೆ. ರಸ್ತೆ ನದಿ ಸಮುದ್ರ ಕಾಡುಗಳು ಸ್ವಚ್ಚತೆಯ ಸಡಗರ ಅನುಭವಿಸುತ್ತಿವೆ. ಪ್ರಧಾನಿಗಳು ಕರೆ ಕೊಡುವ ಮೊದಲೇ ಎಷ್ಟೋ ಜನ ತಾವಾಗಿಯೇ ಆತ್ಮ ನಿರ್ಭರತೆಯನ್ನು ಸಾಧಿಸಿದ್ದಾರೆ. ಕೆಲಸದವರು ಬರದ ಕಾರಣ ತಮ್ಮ ಮನೆಯ ಕೆಲಸವನ್ನು ತಾವೇ ಮಾಡಿಕೊಳ್ಳುತ್ತಿದ್ದಾರೆ. ಬೀದಿ ಬದಿಯ ತಿನಿಸು ತಿನ್ನುವುದು ಬಿಟ್ಟು ಸ್ವತಃ ಆರೋಗ್ಯಕರ ಆಹಾರ ಮನೆಯಲ್ಲಿಯೇ ತಯಾರಿಸಿ‌ ತಿನ್ನಿತ್ತಿದ್ದಾರೆ. ಸ್ವಚ್ಛತೆಯ ಕಡೆ ಗಮನ ಹರಿಸಿ ಆರೋಗ್ಯ ಜೀವನ ಶೈಲಿ ರೂಢಿಸಿಕೊಳ್ಳುತ್ತಿದ್ದಾರೆ. ತಮ್ಮ ಮಕ್ಕಳಿಗೆ ತಾವೇ ಪಾಠ ಹೇಳಿಕೊಡುತ್ತಾ ತಾವೂ ಕಲಿಯುತ್ತಿದ್ದಾರೆ. ಬದುಕಲ್ಲಿ ಹೊಸ ಹೊಸ ಕಲಿಕೆಗಳತ್ತ ಮುಖ ಮಾಡಿದ್ದಾರೆ. ಹೊಸ ಸಾಧ್ಯತೆಗಳ ಕಡೆ ಹುಡುಕಾಟ ನೆಡೆಸಿದ್ದಾರೆ. ಒಂದಷ್ಟು ಜನ ಮನೋ ಸ್ವಾಸ್ಥ್ಯ ದೇಹ ಸ್ವಾಸ್ಥ್ಯ ಕಾಪಾಡಿಕೊಳ್ಳಲು ಹೊಸ ಹೊಸ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ.ಆಶಾವಾದಿಗಳು ಆನ್ ಲೈನ್ ಮೂಲಕ ತಮಗೆ ಕೊಡಲು ಸಾಧ್ಯವಿರುವ ಸೇವೆ ಒದಗಿಸಿ ಹಣ ಮಾಡಿಕೊಳ್ಳುತ್ತಿದ್ದಾರೆ.

    ಸಣ್ಣ ಪ್ರಮಾಣದಲ್ಲಿಯೇ ಸರಿ, ಹಣ ಗಳಿಸಲು ಸಾಕಷ್ಟು ಅವಕಾಶಗಳು ತೆರೆದುಕೊಂಡಿವೆ. ಹೇಗಾದರೂ ಬೆಳೆಯಲೇ ಬೇಕು ಎನ್ನುವವರು ಕೊರೋನಾಗೂ ಸೆಡ್ಡು ಹೊಡೆದು‌ ಒಂದಲ್ಲಾ ಒಂದು ರೀತಿಯಲ್ಲಿ ಸಕ್ರಿಯರಾಗಿದ್ದಾರೆ.ಈ ವರೆಗೂ ಬಿದಿ ಬಿದಿ ತಿರುಗಿಯೇ ಮಾಡಬೇಕಿದ್ದ ಕೆಲಸಗಳು ಕಂಪ್ಯೂಟರ್ ಮೂಲಕ ಹೊಸ ವ್ಯವಸ್ಥೆಗೆ ತೆರೆದುಕೊಂಡಿವೆ.

    ಆದರೂ ಸ್ಚಚ್ಚಂದವಾಗಿ ಯಾವುದೇ ಭಯವಿಲ್ಲದೆ ಮೊನ್ನೆಯವರೆಗೂ ಬದುಕಿದ್ದ ಬದುಕಿನ ಜಾತ್ರೆ ಮುಗಿದೇ ಹೋಯಿತೇನೋ ಎಂಬ ದುಗಡದಲ್ಲಿ ಹೊಸ ಸ್ವಾತಂತ್ರ್ಯದ ಕಡೆ ಪ್ರತೀ ಮನುಷ್ಯನ ಚಿತ್ತ ನೆಟ್ಟಿದೆ.

    ಅಪರ್ಣಾ ರಾವ್
    ಅಪರ್ಣಾ ರಾವ್
    ಅಪರ್ಣಾ ರಾವ್ ಅವರದು ಮೂಲ ಚಿತ್ರದುರ್ಗದ ಹೊರಕೆರೆ ದೇವರಪುರ. ಹುಟ್ಟಿದ್ದು ಬೆಳೆದ್ದು ಬೆಂಗಳೂರು. ಹೈಸ್ಕೂಲಿನಲ್ಲಿ ಶುರುವಾದ ನಾಟಕದ ಹವ್ಯಾಸ ನ್ಯಾಶನಲ್ ಕಾಲೇಜು ಜಯನಗರದಲ್ಲಿ ಮುಂದುವರೆಯಿತು. ನಂತರ ಒಂದು ವರ್ಷ ಫೈನ್ ಆರ್ಟ್ಸ್. ಮದುವೆ ಆಗಿ ಮುಂಬೈಗೆ. ಕನ್ನಡ ಸಂಘ ಸಂಸ್ಥೆಗಳಲ್ಲಿ ಒಡನಾಟ. ಗೋರೆಗಾಂವ್ ಕರ್ನಾಟಕ ಸಂಘದ ಯುವ ವಿಭಾಗದ ನಿರ್ದೇಶಕಿಯಾಗಿ ನಾಲ್ಕು ವರ್ಷ ಕೆಲಸ. ಸದಸ್ಯೆ ಆಗಿ ಮುಂದುವರಿಕೆ. ನಡುವೆ ಮುಂಬೈ ಯೂನಿವರ್ಸಿಟಿ ಕನ್ನಡ ವಿಭಾಗದಲ್ಲಿ ಎಂ ಎ ಪದವಿ. ಈಗ ಮನೆಯಲ್ಲೇ ಹ್ಯಾಂಡ್ ಮೇಡ್ ಸೋಪುಗಳ ತಯಾರಿಸುವ ಉದ್ಯಮಿ. ಆಸಕ್ತಿ ಪೂರ್ಣ ಬರಹಗಳಿಂದ ಕನ್ನಡಿಗರಿಗೆ ಪರಿಚಿತ.
    spot_img

    More articles

    7 COMMENTS

    1. ವಾಣಿಜ್ಯ ನಗರಿ ಮುಂಬೈನಲ್ಲಿ ಜಾತ್ರೆ ಮುಗಿಯುವ ಮಾತೇ ಇಲ್ಲ. ಕೋವಿಡ್ ತಾತ್ಕಾಲಿಕ ತಡೆ ಅಷ್ಟೆ. ಮತ್ತೆ ಮುಂಬೈ ಪುಟಿದೇಳುವ ವಿಶ್ವಾಸ ಇದೆ.
      ಬರವಣಿಗೆ ಆಪ್ತವಾಗಿದೆ

    2. Ms.Aparna Rao has described current situation in Mumbai taking the current situation very well. However as they say there is always lull before storm. Every crisis makes mankind stronger and it is not very far that Mumbai will become more vibrant than before. It is after all financial capital of India and progress of Mumbai will pump blood to Indian Economy and people who worship work will not be let down. This current situation is temporary it will also change. We will see bright side in entire world shortly and in particular Mumbai .
      Well written article.

    3. ಅಪರ್ಣಾ … ಮುಂಬೈವಾಸಿಗಳ ಪರಿಸ್ಥಿತಿಯನ್ನು ಪದಗಳಲ್ಲಿ ಹಿಡಿದುಕೊಡುವುದು ಅಷ್ಟು ಸುಲಭವಲ್ಲ. ನಿನ್ನ ಬರಹ ಮುಂಬೈಯ ಈ ಕ್ಷಣದ ಚಿತ್ರಣವನ್ನು ಕಣ್ಣಿಗೆ ಕಟ್ಟುವಂತೆ ಮಾಡಿತು. ಕೆಲವು ಸಾಲುಗಳು ಕಣ್ಣಲ್ಲಿ ನೀರು ತಂದವು. But this moment shall pass. ಸಕಾರಾತ್ಮಕ ಬದಲಾವಾಣೆಗಳಾಗುತ್ತಿರುವುದು ಖುಷಿಯ ವಿಚಾರ.

    4. ಪ್ರತಿಕ್ರಿಯೆ ನೀಡಿದ ಎಲ್ಲರಿಗೂ ಧನ್ಯವಾದಗಳು. 🙂🙏

    5. ಕೋವಿಡ್ 19 ರ ಬಗ್ಗೆ ಸುಂದರವಾದ ವಿವರ ಮಾಹಿತಿಗಾಗಿ ಧನ್ಯವಾದಗಳು. ನೀವು ಕೋವಿಡ್ 19 ಸಮಸ್ಯೆಗಳನ್ನು ವಿವರಿಸಿದ್ದೀರಿ ಏಕೆಂದರೆ ನಾವು ಎದುರಿಸಿದ್ದೇವೆ

    6. ಅಪರ್ಣಾ ಅವರೆ, ಮುಂಬೈನ ವಾಸ್ತವಿಕ ಚಿತ್ರಣವನ್ನು ನೈಜವಾಗಿ ಬಿಂಬಿಸಿದ್ದೀರಿ. ನಾನು ಮುಂಬೈ ನಿವಾಸಿ. ನಿಮ್ಮ ಬರವಣಿಗೆಯ ಒಂದೊಂದು ವಿಚಾರಧಾರೆಯನ್ನು ಬಹಳ ಹತ್ತಿರದಿಂದ ನೋಡಿದ ನನಗೆ ಇಂದಿನ ಚಿತ್ರಣ ಹಾದು ಹೋದಂತಾಯಿತು.

    LEAVE A REPLY

    Please enter your comment!
    Please enter your name here

    Latest article

    error: Content is protected !!