33 C
Karnataka
Tuesday, April 8, 2025

    ವಿಶ್ವ ಯೋಗ ದಿನದಂದು ಮಲ್ಲಾಡಿಹಳ್ಳಿ ಸ್ವಾಮೀಜಿ ನೆನಪಾದರು

    Must read

    ಇವತ್ತು ವಿಶ್ವಯೋಗ ದಿನ. ನಮ್ಮ ಪರಂಪರೆಯ ಯೋಗಕ್ಕೆಇಂದು ವಿಶ್ವಮಾನ್ಯತೆ.ಆದರೆ ಇದಾವುದು ಇಲ್ಲದ ದಿನಗಳಲ್ಲಿ ನಮ್ಮ ನಡುವಿನ ಸಂತರೊಬ್ಬರು ಅದನ್ನು ತಪಸ್ಸಿನಂತೆ ಆಚರಿಸಿ ಸಹಸ್ರಾರು ಯೋಗ ಪಟುಗಳನ್ನು ನಾಡಿಗೆ ನೀಡಿದರು. ಅವರೇ ತಿರುಕ ಎಂದು ತಮ್ಮನ್ನು ತಾವೇ ಕರೆದುಕೊಂಡು ಜೋಳಿಗೆಯ ಮೂಲಕ ಪವಾಡವನ್ನೇ ಮಾಡಿದ  ನಮ್ಮ ಮಲ್ಲಾಡಿಹಳ್ಳಿಯ  ಶ್ರೀ ರಾಘವೇಂದ್ರ ಸ್ವಾಮೀಜಿ.

    ಹೆಸರಾಂತ  ನಿರ್ದೇಶಕ ರಾಧಾಕೃಷ್ಣ ಪಲ್ಲಕ್ಕಿ ಅವರು ತಿರುಕರ ಜೋಳಿಗೆಯ ಪವಾಡ ಆಧರಿಸಿ ಚಲನಚಿತ್ರ ಮಾಡುತ್ತಿದ್ದಾರೆ. ಇಂದು ಈ ಚಿತ್ರದ ಹಾಡುಗಳ ಲೋಕಾರ್ಪಣೆಯೂ ಆಗಿದೆ. ಈ ಹಾಡನ್ನು ನೋಡಲೆಂದು ಯೂ ಟ್ಯೂಬ್ ಗೆ ಹೋದಾಗ ಸ್ವಾಮೀಜಿಯವರ ಹಲವು ವಿಡಿಯೋಗಳು ಸಾಲುಗಟ್ಟಿ ಬಂದವು. ಹಾಗೆಯೆ ನನ್ನ ನೆನಪು ನಲುವತ್ತು ನಲವತ್ತೈದು ವರುಷಗಳ ಹಿಂದಕ್ಕೆ ಓಡಿತು. ಬಾಲ್ಯದಲ್ಲಿ ನಾನು ಕಂಡ ತಿರುಕರ ಬಗ್ಗೆ ನಮ್ಮ ಓದುಗರೊಂದಿಗೆ ಹಲವು ಸಂಗತಿಗಳನ್ನು ಹಂಚಿಕೊಳ್ಳಬೇಕೆಂದು ಈ ನಾಲ್ಕು ಸಾಲು.

    ನಮ್ಮೂರು ಸಂತೇಬೆನ್ನೂರು. ಮಲ್ಲಾಡಿಹಳ್ಳಿಗೆ ಬಹಳ ಹತ್ತಿರ. ಪತ್ರಿಕೋದ್ಯಮಕ್ಕೆ ಹಾಗೂ ಸಮಾಜ ಸೇವೆಗೆ ತಮ್ಮನ್ನು ಸಮರ್ಪಿಸಿಕೊಳ್ಳುವ ಮೊದಲು ನನ್ನ ಅಪ್ಪ ಸತ್ಯನಾರಾಯಣ ನಾಡಿಗ್ ಆ ಊರಿನಲ್ಲಿ ಕೆಲ ಕಾಲ ಪೋಸ್ಟ್ ಮಾಸ್ಟರ್ ಆಗಿದ್ದರಂತೆ. ಅಲ್ಲದೆ ನಮ್ಮ ತಾಯಿ ರಮಾ ನಾಡಿಗ್ ಅವರ ತಂದೆ ಗುರುರಾವ್ ದೇಶಪಾಂಡೆ ಆಶ್ರಮದಲ್ಲಿ ಆರಂಭವಾದ ಶಿಕ್ಷಕ ತರಬೇತಿ ಶಾಲೆಯ ಮೊದಲ ಪ್ರಿನ್ಸಿಪಾಲ್. ಜೊತೆಗೆ ನಮ್ಮ ಮಾವ ಗೋಪಿನಾಥ ರಾವ್ ದೇಶಪಾಂಡೆ ಕೂಡ ಆಶ್ರಮದ ಹೈಸ್ಕೂಲಿನಲ್ಲಿ ಉದ್ಯೋಗಿ. ಹೀಗಾಗಿ ಬಾಲ್ಯದಲ್ಲೇ ನನಗೆ ಸ್ವಾಮೀಜಿಯವರ ಸಂಪರ್ಕ.

    ನಮ್ಮೂರಿನಿಂದ ಗುರುರಾಜ ಬಸ್ ಹತ್ತಿದರೆ ಮುಕ್ಕಾಲು ಗಂಟೆಗೆ ಅದು ಮಲ್ಲಾಡಿಹಳ್ಳಿ ಸೇರುತಿತ್ತು. ಬಸ್ ಇಳಿದು ಹಿಂಬದಿ ಗೇಟಿನ ಮೂಲಕವೇ ನಾವು ಆಶ್ರಮ ಪ್ರವೇಶ ಮಾಡುತ್ತಿದ್ದದ್ದು. ಆಶ್ರಮಮಕ್ಕೆ ದೊಡ್ಡ ಗೇಟಿನ ಪ್ರವೇಶ ದ್ವಾರವೂ ಇತ್ತು. ಆ ದ್ವಾರದಿಂದ ಹೋಗಬೇಕಾದರೆ ಬಸ್ ನಿಲ್ದಾಣದಿಂದ ಒಂದು ನಾಲ್ಕು ಹೆಜ್ಜೆ ಹೆಚ್ಚು ಹಾಕಬೇಕಿತ್ತು. ಹೀಗಾಗಿ ಈ ಶಾರ್ಟ್ ಕಟ್ . ಪ್ರಧಾನ ದ್ವಾರದಲ್ಲಿ ಅನಾಥ ಸೇವಾಶ್ರಮ ವಿಶ್ವಸ್ತ ಸಮಿತಿ  ಎಂಬ ಫಲಕ ಅದರ ಕೆಳಗೆ ರಾಜಕೀಯಕ್ಕೆ ಪ್ರವೇಶವಿಲ್ಲ ಎಂಬ ಸಬ್ ಟೈಟಲ್. ಸ್ವಾಮೀಜಿ ಅದೇ ರೀತಿ ನಡೆದುಕೊಂಡರೂ ಕೂಡ.

    ಸುಂದರ ಸ್ವಚ್ಛ ಶಿಸ್ತುಬದ್ಧ

    ನಲವತ್ತು –ನಲವತ್ತೈದು ವರುಷಗಳ ಹಿಂದಿನ ಹಳ್ಳಿಗಳನ್ನು ನೆನಪು ಮಾಡಿಕೊಳ್ಳಿ. ಕಿರಿದಾದ ರಸ್ತೆಗಳು. ಪಕ್ಕದಲ್ಲೇ ಕೊಳಚೆ ನೀರಿನ ಮೋರಿ..ಹಸು ಕರುಗಳ ಗಂಜಲ ಸೆಗಣಿ. ಇವು ಸಾಮಾನ್ಯ ದೃಶ್ಯಗಳು.   ಇಂಥ ದಾರಿಗಳನ್ನು ಕ್ರಮಿಸಿ ಆಶ್ರಮ ಪ್ರವೇಶಿಸಿದ ಕೂಡಲೆ ನನಗಂತೂ ಸುಂದರ ಟೌನ್ ಷಿಪ್ ಗೆ ಬಂದ ಅನುಭವ. ನಗರವೊಂದರ ಸುಂದರ ಬಡಾವಣೆ ಕಂಡಂತ ಫೀಲಿಂಗ್.  ಕಸ ಕಡ್ಡಿಗಳೇ ಕಾಣದ  ಆಶ್ರಮದ ಒಳಗಿನ ರಸ್ತೆಗಳು. ಸಾಲು ವಸತಿ ಗೃಹಗಳು, ಸ್ಕೂಲು ಕಾಲೇಜು ಕಟ್ಟಡಗಳು, ಮಕ್ಕಳು ಆಡಲೆಂದು ಮಕ್ಕಳರಾಜ್ಯ …ಹೀಗೆ ಎಲ್ಲವೂ ಸುಂದರ ,ಸ್ವಚ್ಛ ,ಶಿಸ್ತುಬದ್ಧ.

    ಮಲ್ಲಾಡಿಹಳ್ಳಿಗೆ ಹೋದ ದಿನ ಸಂಜೆ ಸ್ವಾಮೀಜಿ ಅವರನ್ನು ಭೇಟಿ ಮಾಡಲೇಬೇಕು. ಸಂಜೆಯ ವೇಳೆಗೆ ಅವರು ತಮ್ಮ ತಪೋವನದಲ್ಲಿರುತ್ತಿದ್ದರು. ಅಲ್ಲಿಗೆ ಹೋಗುವ ಮಾರ್ಗವೂ ಸುಂದರ. ಸ್ವಾಮೀಜಿ ಅನೇಕ ಪ್ರಾಣಿಗಳನ್ನು ಸಾಕಿದ್ದರು. ಅಲ್ಲಿ ಜಿಂಕೆಗಳೂ ಇದ್ದವು. ನವಿಲುಗಳು ಇದ್ದವು. ಹಲವಾರು ಪಕ್ಷಿಗಳೂ ಇದ್ದವು. ಸುತ್ತಲೂ ಹಸಿರು. ಇದನ್ನು ದಾಟಿಕೊಂಡು ಹೋದರೆ ಸ್ವಾಮೀಜಿ ವಾಸಿಸುತ್ತಿದ್ದ ಗಾಂಧೀ ಮಂದಿರ.

    ನಮ್ಮನ್ನು ನೋಡಿದ ಕೂಡಲೆ ಸ್ವಾಮೀಜಿ ಅವರಿಂದ ಮುಗಳು ನಗೆಯ ಸ್ವಾಗತ. ನಾವು ಮೊದಲು ಮಾಡುತ್ತಿದ್ದ ಕೆಲಸ ಅವರ ಕಾಲಿಗೆರುವುದು. ಸ್ವಾಮೀಜಿ ಕೂಡ ಅಷ್ಟೇ ಪ್ರೀತಿಯಿಂದ ನಮ್ಮನ್ನು ಸ್ಪರ್ಶಿಸಿ ತಮ್ಮ ಕಣ್ಣಿಗೆ ಒತ್ತುಕೊಳ್ಳುತ್ತಿದ್ದರು. ನಮ್ಮ ಅಮ್ಮನನ್ನು ಕಂಡರೆ ಅವರು ಪ್ರೀತಿಯಿಂದ  ಕೆಪಿ ರಮಾ ಎಂದು ಹಾಸ್ಯ ಮಾಡುತ್ತಿದ್ದರು. ನಮ್ಮ ಅಮ್ಮ ನೋಡಲು  ತುಂಬಾ ತೆಳ್ಳಗೆ ಇದ್ದುದು ಅವರು ಹಾಗೆ ಕರೆಯಲು ಕಾರಣ. ಕೆಪಿ ಅಂದರೆ ಕಡ್ಡೀ ಪೈಲ್ವಾನ್! ಆಮೇಲೆ  ನಮಗೆ ಹುಡುಗರಿಗೆ ಸ್ವಾಮೀಜಿ ಏನಾದರು ಹಣ್ಣು ಕೊಡಲೇ ಬೇಕು. ಅವರ ಕೈಗೆಟುಕುವಂತೆ ಹಣ್ಣು ಸಿಗದಿದ್ದರೆ  ಹುಡುಕಿ ತಂದು ಕೊಡುತ್ತಿದ್ದರು. ಅಕ್ಕ ಪಕ್ಕದಲ್ಲಿ ನೂರಾರು ಶಿಷ್ಟಕೋಟಿ ಇರುವ ಮಹಾ ಸ್ವಾಮೀಜಿಗಳನ್ನೇ ಹೆಚ್ಚಾಗಿ ಕಂಡಿರುವ ನಮಗೆ ಇಂಥ ಗಾಂಧೀವಾದಿ ಸ್ವಾಮೀಜಿ ಬಹುಶಃ ಇನ್ನೆಲ್ಲಿ ಸಿಗಬೇಕು.? ಒಮ್ಮೊಮ್ಮೆ ಸ್ವಾಮೀಜಿ ಅವರು ಧ್ಯಾನ ಮಾಡುವ ಸ್ಥಳಕ್ಕೂ ನಮಗೆ ಪ್ರವೇಶ ಸಿಗುತ್ತಿತ್ತು. ನೆಲಮಾಳಿಗೆಯಲ್ಲಿದ್ದ ಸ್ಥಳ ಅದು. ಅಲ್ಲಿನ ಆ ವಾತಾವರಣ ಮತ್ತು ಅದರಿಂದ ಸಿಗುತ್ತಿದ್ದ ಪಾಸಿಟವ್ ಎನರ್ಜಿ ನನಗೆ ಇನ್ನೂ ಕಣ್ಣಿಗೆ ಕಟ್ಟಿದಂತಿದೆ.

    ಶಿವರಾತ್ರಿ ಸಮಯದಲ್ಲಿ ಆಶ್ರಮದ ವಾರ್ಷಿಕೋತ್ಸವ. ಅಂದು ವ್ಯಾಸಪೀಠದಲ್ಲಿ (ಆಶ್ರಮದ ಆರಂಭದಲ್ಲೇ ಇರುವ ಬಯಲು ಸಭಾಂಗಣ) ಭರ್ಜರಿ ಫಂಕ್ಷನ್. ಮೂರು ದಿನ ಸಾಂಸ್ಕೃತಿಕ ಉತ್ಸವ. ನೂರಾರು ವಿದ್ವಾಂಸರ ಉಪನ್ಯಾಸ. ಈ ದಿನಗಳಲ್ಲಿ ಸ್ವಾಮೀಜಿ ಅವರಿಂದ ಅದ್ಭುತ ಯೋಗಪ್ರದರ್ಶನ. ಅದನ್ನು ನೋಡಲು ಎರಡೂ ಕಣ್ಣು ಸಾಲದು. ಕೊನೆಯಲ್ಲಿ ಸ್ವಾಮೀಜಿ  ಶಿಸ್ತಿನ ಮಹತ್ವವನ್ನು ಆಶ್ರಮದ ವಿದ್ಯಾರ್ಥಿಗಳ ಜೊತೆ ವ್ಯಾಯಾಮದ ಮೂಲಕವೇ ಮನವರಿಕೆ ಮಾಡಿಕೊಡುತ್ತಿದ್ದರು. ಬಾಲ್ಯದಲ್ಲಿ ಇದನ್ನು ನೋಡುವುದೇ ನಮಗೆ ಕೌತುಕ. ಸ್ವಾಮೀಜಿ ನಮಗೆ ಸಿದ್ಧಪುರುಷನಂತೆ ಕಾಣಿಸಿದರು. ಆದರ್ಶ ಪ್ರಾಯರಾದರು. ಸ್ವಾಮೀಜಿ ತಮ್ಮನ್ನು ಎಂದೂ ಸ್ವಾಮೀಜಿ ಎಂದು ಕರೆದುಕೊಳ್ಳಲೇ ಇಲ್ಲ. ಅವರ ಪಾಲಿಗೆ ಅವರು ಬಾ. ರಾಘವೇಂದ್ರ ಅಷ್ಟೇ. (ಬಾ ಎಂದರೆ ಅವರ ಊರು ಬಾರ್ಕೂರು) .ಭಕ್ತರು ಅವರಿಗೆ ಪ್ರೀತಿಯಿಂದ  ಸ್ವಾಮೀಜಿ ಪಟ್ಟ ಕಟ್ಟಿದರು.

    ಹಲವು ಗಿಡಮೂಲಿಕೆಗಳ ಸಂಗಮ

    ಆಶ್ರಮದಲ್ಲೊಂದು ವ್ಯಾಯಮ ಶಾಲೆ ಇತ್ತು. ಆ ಗರುಡಿ ಮನೆಯೇ ವಿಶಿಷ್ಟ. ಅಲ್ಲಿದ್ದ ಕೆಂಪು ಮಣ್ಣು ಆಯುರ್ವೇದದ ಹಲವು ಗಿಡಮೂಲಿಕೆಗಳ ಸಂಗಮ. ಆ ಮಣ್ಣಿನಲ್ಲಿ ಮಿಂದೆದ್ದರೆ ಎಂಥ ರೋಗಗಳೂ ಪರಿಹಾರ.  ಸ್ವಾಮೀಜಿ ಆಶ್ರಮಕ್ಕಾಗಿ ಇಡೀ ವಾರ ಸಂಚಾರದಲ್ಲೇ ಇರುತ್ತಿದ್ದರು. ಆಶ್ರಮ ನಡೆಯಬೇಕೆಂದರೆ ಅವರು ಊರೂರು ಸುತ್ತಿ ಜೋಳಿಗೆ ಹಿಡಿಯಬೇಕು. ಆದರೆ ಭಾನುವಾರ ಸಂಜೆ ಎಲ್ಲಿದ್ದರೂ ಅವರು ಆಶ್ರಮಕ್ಕೆ ಬರಲೇ ಬೇಕು. ಪ್ರತಿ ಸೋಮವಾರ ಅವರು ಆಯುರ್ವೇದ ಆಸ್ಪತ್ರೆಯಲ್ಲಿ ರೋಗಿಗಳಿಗೆ ಔಷಧ ಕೊಡುತ್ತಿದ್ದರು. ಎಂಥ ರೋಗವಿದ್ದರೂ ಸ್ವಾಮೀಜಿ ಕೊಡುವ ಔಷಧಿಗೆ ಅದು ಮಣಿಯಲೇಬೇಕು. ಬೆಳಿಗ್ಗೆ ನಾಲ್ಕಕ್ಕೆ ಆರಂಭವಾಗುವ ಆಸ್ಪತ್ರೆ ಒಮ್ಮೊಮ್ಮೆ ಸಂಜೆ ನಾಲ್ಕರವರೆಗೂ ನಿರಂತರವಾಗಿ ನಡೆದದ್ದು ಉಂಟು. ಎಲ್ಲಾ ರೋಗಿಗಳನ್ನು ನೋಡುವವರೆಗೂ ಸ್ವಾಮೀಜಿ  ಏನನ್ನೂ ಸೇವಿಸುತ್ತಿರಲಿಲ್ಲ.  ರೋಗಿಗಳನ್ನು ನೋಡುವುದು ಮುಗಿದ ಮೇಲೆಯೇ ಅವರ ಆಹಾರ ಸೇವನೆ. ಸ್ವಾಮೀಜಿ ಎಲ್ಲಾ ಔಷಧವನ್ನು ಆ ದಿನದಲ್ಲಿಉಚಿತವಾಗಿ ನೀಡುತ್ತಿದ್ದರು. ಸೇವೆ ಎಂದರೆ ಇದೇ  ಅಲ್ಲವೇ. ಪ್ರತಿಯೊಬ್ಬ ರೋಗಿಯನ್ನು ಪರೀಕ್ಷಿಸುವ ಮೊದಲು ಅವರನ್ನು ಕಣ್ಣಿಗೆ ಒತ್ತಿಕೊಳ್ಳುತ್ತಿದ್ದ ಸ್ವಾಮೀಜಿ ರೋಗಿಗಳಲ್ಲಿ ದೇವರನ್ನು ಕಾಣುತ್ತಿದ್ದರು. ಇಂದು ಆಯುರ್ವೇದವೂ ಬ್ರ್ಯಾಂಡ್ ಆಗಿ  ಹಣದ ದಂಧೆ ಆಗಿರುವುದನ್ನು ಕಂಡಾಗ ನಮ್ಮ ಸ್ವಾಮೀಜಿ ಮತ್ತಷ್ಟು ಎತ್ತರವಾಗಿ ಕಾಣುತ್ತಾರೆ.

    ಯೋಗಕ್ಕಾಗಿಯೇ ಆ ದಿನದಲ್ಲಿ ವಿಶ್ವ ಯೋಗ ಕೇಂದ್ರವನ್ನು ಕಟ್ಟಿದರು. ಅದರ ಉದ್ಘಾಟನಗೆ ವರನಟ ಡಾ. ರಾಜ್ ಕುಮಾರ್ ಬಂದಿದ್ದರು. ನಾನು ರಾಜ್‌ಕುಮಾರರನ್ನು ಮೊದಲು ನೋಡಿದ್ದು ಅಲ್ಲಿಯೇ. ಹಲವಾರು ಗಣ್ಯರನ್ನು ನೋಡುವ ಅವಕಾಶ ಬಾಲ್ಯದಲ್ಲೇ ನಮಗೆ ಸಿಗಲು ಮಲ್ಲಾಡಿಹಳ್ಳಿ ಆಶ್ರಮವೇ ಕಾರಣ. ದೇವರಾಜ ಅರಸು, ಉದಯಕುಮಾರ್, ಬಾಲಕೃಷ್ಣ, ದ.ರಾ ಬೇಂದ್ರೆ, ತರಾಸು ಹೀಗೆ ಹಲವರನ್ನು ನೋಡುವ ಅವಕಾಶ ಕೊಟ್ಟಿದ್ದು ಆಶ್ರಮ.

    ಶಿಸ್ತಿಗೆ ಮತ್ತೊಂದು ಹೆಸರು ಸ್ವಾಮೀಜಿ. ಆಶ್ರಮದಲ್ಲಿರುವ ವಿದ್ಯಾರ್ಥಿಗಳಿಗೆ ಬೆಳಿಗ್ಗೆ ನಾಲ್ಕಕ್ಕೆಲ್ಲಾ ಸೂರ್ಯ ನಮಸ್ಕಾರ ಕಡ್ಡಾಯ. ಶಿಸ್ತು ಪಾಲಿಸದವರು ಶಿಕ್ಷೆ ತಪ್ಪಿಸಿಕೊಳ್ಳುವಂತೆಯೇ ಇಲ್ಲ. ಒಂದು ಚಡ್ಡಿ ಅದರ ಮೇಲೆ  ಅರ್ಧ ತೋಳಿನ ಜುಬ್ಬ ಇದೇ ಸ್ವಾಮೀಜಿಯವರ ಉಡುಪು. ಹೊಸದಾಗಿ ಆಶ್ರಮಕ್ಕೆ ಬರುವವರು ಸ್ವಾಮೀಜಿ ಅವರ ಬಳಿಯೇ ಸ್ವಾಮೀಜಿ ಅವರು ಎಲ್ಲಿ ಸಿಗುತ್ತಾರೆ ಎಂದು ವಿಚಾರಿಸಿದ್ದು ಉಂಟು.

    ಸ್ವಾಮೀಜಿ ಅವರಿಗೆ ಸರಿ ಸಮವಾಗಿ ಸಾಥ್ ಕೊಟ್ಟಿದ್ದು ಸೂರ್‌ದಾಸ್ ಜೀ . ಅವರು ಕೂಡ ಸ್ವಾಮೀಜಿ ಯಂತೆ ತಮ್ಮ ಜೀವನವನ್ನೇ ಆಶ್ರಮಕ್ಕೆ ಮುಡುಪಾಗಿಟ್ಟವರು. ಊರಿನಲ್ಲಿ ಇದ್ದಾಗ  ಸ್ವಾಮೀಜಿ ಅವರನ್ನು ಆಶ್ರಮದ ಒಳಗೆ ಎಲ್ಲೆಡೆಯೂ ನೀವು ಕಾಣಬಹುದಿತ್ತು. ‌ಅವರು ಆಶ್ರಮದ ಹೊರಗೆ ಕಾಣ ಸಿಗುತ್ತಿದ್ದದ್ದು ಅಪರೂಪ. ಆದರೆ ಸೂರ್‌ದಾಸರು ಹಾಗಲ್ಲ. ಮಲ್ಲಾಡಿಹಳ್ಳಿಯ ಎಲ್ಲೆಡೆ ಸಾಮಾನ್ಯರಲ್ಲಿ ಸಾಮಾನ್ಯರಂತೆ ಇರುತ್ತಿದ್ದರು.ನಾರಣಪ್ಪನ ಬೇಕರಿ ಮುಂದೆ ಕಾಡ ಹರಟೆ ಮಾಡುವ ವಿದ್ಯಾರ್ಥಿಗಳಿರಲಿ,ಸ್ನಾನ ಘಟ್ಟದ ಬಳಿ ಟೈಮ್ ವೇಸ್ಟ್ ಮಾಡುವ ಹುಡುಗರಿರಲಿ , ಹಳ್ಳದ ಏರಿಯ ಮೇಲೆ ಟೈಮ್ ಪಾಸ್ ಗೆ ಹೋದವರಾಗಲಿ ಸೂರದಾಸ್‌ಜೀ ಅವರ  ಕಣ್ಣು ತಪ್ಪಿಸಲು ಆಗುತ್ತಿರಲಿಲ್ಲ

    ನಾನು ಉದ್ಯೋಗಕ್ಕೆಂದು ಬೆಂಗಳೂರಿಗೆ ಬಂದ ಮೇಲೆ ಆಶ್ರಮದ ಸಂಪರ್ಕ ಸ್ವಲ್ಪ ಕಡಿಮೆ ಆಯಿತು. ಇದ್ದಕ್ಕಿದ್ದಂತೆ ಒಂದು ದಿನ ಸ್ವಾಮೀಜಿ ತೀರಿಕೊಂಡ ಸುದ್ದಿ ಬಂತು. ನಾನಾಗ ಕನ್ನಡಪ್ರಭ ಪತ್ರಿಕೆಯಲ್ಲಿ ಪತ್ರಕರ್ತ. ವೈಯ್ಯಾಲಿಕಾವಲ್ ನ ಭಕ್ತರೊಬ್ಬರ ಮನೆಯಲ್ಲಿ ಸ್ವಾಮೀಜಿ ಅವರ ಪಾರ್ಥೀವ ಶರೀರ ಇತ್ತು. ಅಂತಿಮ ದರ್ಶನ ಪಡೆದುಕೊಂಡು ಬಂದೆ. ಇದಾದ ಕೆಲವೇ ವರುಷಗಳಲ್ಲಿ ಸೂರ್‌ದಾಸರು ಕೂಡ ನಮ್ಮನ್ನು ಅಗಲಿದರು.

    ಯಾವುದೇ ಪ್ರಶಸ್ತಿಗೆ, ಆಡಂಬರಕ್ಕೆ, ವಿಶ್ವ ಪ್ರಸಿದ್ಧರಾಗಬೇಕೆಂಬ ಬಯಕೆ ಇಲ್ಲದೆ ಕೇವಲ ಸೇವೆಯ ದೀಕ್ಷೆಯೊಂದಿಗೆ ಬಾಳಿ ಬದುಕಿದ ಪುಣ್ಯಾತ್ಮ ನಮ್ಮ ಸ್ವಾಮೀಜಿ.  ನಿರ್ದೇಶಕ ಪಲ್ಲಕ್ಕಿ ಇಂದು ಬಿಡುಗಡೆ ಮಾಡಿದ ಜೋಳಿಗೆಯ ಪವಾಡಕ್ಕಾಗೆ ಡಾ. ಎಚ್  ಎಸ್ ವಿ ಬರೆದ ಗೀತೆ ಕೇಳಿ  ಸ್ವಾಮೀಜಿ ಮತ್ತೆ ನೆನಪಾದರು.

    ಹೆಚ್ಚಿನ ಮಾಹಿತಿಗಾಗಿ ಜೋಳಿಗೆಯ ಪವಾಡದ ಹಾಡಿನ ಕೊಂಡಿ ಮತ್ತು ಸದ್ಗುರು ಜಗ್ಗಿ ವಾಸುದೇವ್  ಸ್ವಾಮೀಜಿ ಅವರು ಹೇಳಿರುವ ಮಾತುಗಳ ಯೂ ಟ್ಯೂಬ್ ಲಿಂಕ್ ಕೂಡ ಇಲ್ಲಿದೆ.

    ವಿಶ್ವಯೋಗದಿನದಂದು ಕರುನಾಡುಕಂಡ ಈ ಮಹಾನ್ ಯೋಗಿಗೆ ಭಕ್ತಿ ಪೂರ್ವಕ ನಮನ.

    ಇದನ್ನೂ ಓದಿ : ಭಗವಂತ ಎನ್ನಲೆ… ಸಾಕಾಗಲಿಕ್ಕಿಲ್ಲ

    ಶ್ರೀವತ್ಸ ನಾಡಿಗ್
    ಶ್ರೀವತ್ಸ ನಾಡಿಗ್https://kannadapress.com/
    ಶ್ರೀವತ್ಸ ನಾಡಿಗ್ ಕನ್ನಡಪ್ರೆಸ್.ಕಾಮ್ ನ ಪ್ರಧಾನ ಸಂಪಾದಕ ಮತ್ತು ಸಂಸ್ಥಾಪಕ
    spot_img

    More articles

    19 COMMENTS

    1. ತಿರುಕ ಎಂಬ ಹೆಸರಿನ ಅವರ ಜೊತೆ ನನ್ನ ಒಡನಾಟ ಹೆಚ್ಚಗೇನೆ. ಕಾರಣ ಅಲಿಯೇ ಬೆಳೆದವಳು. ಆ ಆಶ್ರಮ ಮಾಡಲು ನನ್ನ ದೊಡ್ಡ ಅಜ್ಜ ಶಂಕರಲಿಂಗ ಭಗವಾನ್ ರವರು ಹೇಳಿದರಂತೆ. ಅವರು ಬಡವರಿಗೆ ಶಿಕ್ಷಣ, ಔಷದಿ ಕೊಡುತಿದ್ದರು. ಅವರ ಸರಳ ಮಾತು,ಬಿರುದುಭಾವಲಿಗಳು ಬೇಡ ಅದರ ಹಣ ಕೊಡಿ ಬಡ ಮಕ್ಕಳಿಗೆ ಉಪಯೋಗಿಸುವೆ ಹೇಳಿದು ನನಗೆ ಗೊತು. ಅವರು ಮಾಡುತಿದ್ದ ಯೋಗಾಸನ, ಎಲ್ಲ ನಮಗೆ ಸೋಜಿಗ. ಅವರು ಒಂದು ಬೃಹತ್ ಆಲದ ಮರ. ಅದರ ಕೆಳಗೆ ನಾವು ತಂಪಾಗಿದೇವೆ

    2. ಆಶ್ರಮವನ್ನೆಲ್ಲ ಅಡ್ಡಾಡಿದ ಅನುಭವ ಆಯ್ತು. ಇಂತಹ ನಿಸ್ವಾರ್ಥ,ಸರಳ ಜೀವಿಯ ಒಡನಾಟ ಬಾಲ್ಯದಲ್ಲೇ ಆದ್ದರಿಂದಲೋ ಏನೋ ಮತ್ಯಾವ ಮನುಷ್ಯ ಪ್ರಾಣಿ ನನ್ನನ್ನು ಈ ವರೆಗೂ ಆಕರ್ಷಿಸಿಲ್ಲ.
      ಹಣ ಕೊಟ್ಟು ಬಿರುದು,ಬಾವಲಿಗಳಿಗೆ ಶಿಫಾರಸ್ಸು ಅಂತ ಓಡಾಡುವ ಈಗಿನ ಸಮಾಜ ಸೇವಕರನ್ನು ನೋಡಿದ್ರೆ,ಹೇಗೆ ಪ್ರತಿಕ್ರಿಯಿಸಬೇಕೋ ತಿಳಿಯಲ್ಲ.
      ಆಶ್ರಮದೊಂದಿಗಿನ ನಿನ್ನ ಆಳವಾದ ನಂಟು ಇವತ್ತೇ ಗೊತ್ತಾಗಿದ್ದು.

    3. ನಿಮ್ಮ ಬಾಲ್ಯದ ನೆನಪುಗಳನ್ನು ಬಿಚ್ಚಿಡುತ್ತಾ… ಆಶ್ರಮ ಮತ್ತು ಸ್ವಾಮಿಜಿಯವರ ಜೀವನ ಶೈಲಿ ಹಾಗೂ 40 ವರ್ಷದ ಹಿಂದಿನ ಶಿಸ್ತಿನ ಜೀವನದ ಪರಿಚಯ ಬಹಳ ಸೊಗಸಾಗಿ ಮೂಡಿಬಂದಿದೆ… 🙏

    4. ನಾನು ನಾಲ್ಕನೇ ತರಗತಿಯಲ್ಲಿ ಇದ್ದಾಗ ನಮ್ಮ ತಂದೆ ಮಲ್ಲಾಡಿಹಳ್ಳಿ ಆಶ್ರಯದಲ್ಲಿ ಸೇರಿಸಿದ್ದರು. ಆಗ ಸ್ವಾಮಿಜಿ ಅವರನ್ನು ನೋಡಿದ್ದ ನೆನಪು. ಆದರೆ ನಾನು ಅಲ್ಲಿ ಓದಿದ್ದು ಕಡಿಮೆ ಸಮಯ. ಅಲ್ಲಿನ ಶಿಸ್ತನ್ನು ನೋಡಿ ಭಯದಿಂದ ತಡೆಯಲಾರದೇ ಊರಿಗೆ ಓಡಿ ಬಂದಿದ್ದೇ ಮತ್ತೆ ಆಕಡೆ ತಿರುಗಿ ನೋಡಲಿಲ್ಲ. ನಂತರದ ಹೈಸ್ಕೂಲ್ ನಲ್ಲಿ ತಿರುಕ ಕನಸು ಪದ್ಯ ನೋಡಿದ ಮೇಲೆ ಕಳೆದುಕೊಂಡ ಸಮಯದ ಅರಿವಾಗಿದ್ದು .ಸಲ್ಪ ದಿನಗಳಾದರೂ ಸ್ವಾಮಿಗಳನ್ನು ನೋಡಿದ ತೃಪ್ತಿ ನಿಮ್ಮ ಈ ಲೇಖನದಿಂದ ಮರುಕಳಿಸುವಂತೆ ಆಯಿತು ವಂದನೆಗಳು . ಆಶ್ರಮದೊಳಗೆ ತಿರುಗಾಡಿದ ಅನುಭವ ವಾಯಿತು.

    5. ನಮ್ಮೂರು ಸುಮಾರು 3 ಕಿಲೋ ಮೀಟರ್ ದೂರದಲ್ಲಿರುವ ಹೊಳಲ್ಕೆರೆ ರೈಲ್ವೇ ಸ್ಟೇಷನ್. ಮಲ್ಲಾಡಿಹಳ್ಳಿ ತಲುಪಲು ಹತ್ತಿರದ ರೈಲು ನಿಲ್ದಾಣ. ನಂತರದ ದಿನಗಳಲ್ಲಿ ಮೊದಲ ksrtc ಬಸ್ ಬೆಂಗಳೂರಿನಿಂದ ಡೈರೆಕ್ಟ್ ಮಲ್ಲಾಡಿಹಳ್ಳಿ ಬಂದಿತು.

      ನಾನು ಎಂಟನೇ ತರಗತಿಯಲ್ಲಿದ್ದಾಗ ಮೊದಲ ಬಾರಿಗೆ ಸ್ವಾಮೀಜಿ ಅವರನ್ನು ನೋಡಿದ್ದು. ಮುಂದಿನ ಐದು ವರ್ಷ ಅಲ್ಲೇ ನನ್ನ ವ್ಯಾಸಂಗ. ಸ್ವಾಮಿಗಳು ಭಿಕ್ಷೆಗೆ ನಮ್ಮೂರಿಗೆ ಬರುತ್ತಿದ್ದರು. ಅಕ್ಕಿ ಬೇಳೆ ಬೆಲ್ಲ ಏನು ಕೊಟ್ಟರು ತೆಗೆದು ಕೊಳ್ಳುತ್ತಿದ್ದರು. ಒಬ್ಬ ವ್ಯಕ್ತಿ ಭಿಕ್ಷೆ ಬೇಡಿ ಮಕ್ಕಳಿಗೆ ವಸತಿ ಶಾಲೆ ನಡೆಸುತ್ತಿದ್ದರು ಎಂದು ಈ ದಿನಗಳಲ್ಲಿ (ಲಕ್ಷ ಲಕ್ಷ ಫೀ ಪಡೆಯುವ ಶಾಲೆಗಳಿರುವ ಈ ದಿನಗಳಲ್ಲಿ) ಯೋಚಿಸಿದರೆ ರೋಮಾಂಚನವಾಗುತ್ತದೆ.
      ಹಾಗೆಯೇ ಯೋಗ, ಆಯುರ್ವೇದ ಆಸ್ಪತ್ರೆ ಎಲ್ಲವನ್ನೂ ನಡೆಸುತ್ತಿದ್ದರು. ಲೇಖನ ಓದಿ ಎಲ್ಲಾ ಒಂದು ಸಾರಿ ಮನದ ಮುಂದೆ ಬಂದಿತು. ಧನ್ಯವಾದ ಶ್ರೀವತ್ಸ ಮತ್ತು kannadapress.com

    6. ಮಲ್ಲಾಡಿ ಹಳ್ಳಿ ಸ್ವಾಮೀಜಿಯವರ ಬಗ್ಗೆ ಓದಿ ತುಂಬಾ ಖುಶಿ ಆಯ್ತು. ನಮ್ಮ ಅಜ್ಜ ಹೊರಕೆರೆ ದೇವಪುರದ ರಾಮರಂಗಪ್ಪ ಇವರೊಂದಿಗೆ ಒಳ್ಳೆಯ ಸಂಬಂಧದಲ್ಲಿ ಇದ್ದ ಕಾರಣ ಮನೆಗೆ ಹೋಗುವುದು ಬರುವುದು ನೆಡೆದಿತ್ತು. ನಮಗೆಲ್ಲಾ ಆ ವಿಷಯಗಳು ಇವತ್ತಿಗೂ ಸ್ಪೂರ್ತಿ.

    7. ಶ್ರೀ ಮಲ್ಲಾಡಿಹಳ್ಳಿ ಸಂತ ಶ್ರೀ ರಾಘವೇಂದ್ರ ಗುರೂಜಿ ಯವರ ಬಗ್ಗೆ ಬರೆದ ಲೇಖನ ನನ್ನ ಬಾಲ್ಯದ ನೆನುಪುಗಳನ್ನು ಮೆಲುಕು ಹಾಕುವಂತೆ ಮಾಡಿತು. ನಾನು ಆ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಅವರಲ್ಲಿನ ಸರಳತೆ ಮತ್ತು ಶಿಸ್ತುಬದ್ಧ ಜೀವನ ಎಲ್ಲವೂ ನನ್ನನ್ನು ಮಂತ್ರ ಮುಗ್ಧನನ್ನಾಗಿ ಮಾಡಿದ್ದನ್ನು ನಾನೆಂದು ಮರೆಯುವಂತಿಲ್ಲ. ಸುಂದರ ಲೇಖನ ಪ್ರಕಟಿಸಿದ್ದಕ್ಕೆ ಧನ್ಯವಾದಗಳು.

    8. ಸ್ವಾಮೀಜಿಯವರ ಸಂಪೂರ್ಣ ಜೀವನದ ಚಿತ್ರನನಗೆ ಮರುಕಳಿಸಿ,ನನ್ನ ಬಾಲ್ಯದ ದಿನಗಳ ನೆನಪಾಯಿತು . ಏಕೆಂದರೆ ನಾನು ಅವರ ಜೊತೆ ಹಾಗೂ ನಿಮ್ಮತಾಯಿ ,ಮತ್ತು ತಾತನ ಜೊತೆಯಲ್ಲಿ ಹಲವು ವರ್ಷ ಕಳೆದಿದಿದ್ದೇನೆ.

    9. ಮಲ್ಲಾಡಿಹಳ್ಳಿ ಸಂತ ತಿರುಕ ಕಾವ್ಯನಾಮದ ರಾಘವೇಂದ್ರ ಗುರೂಜಿ ಅವರ ಬಗ್ಗೆ ಈ ಲೇಖನವನ್ನು ಓದಿ, ಆಶ್ರಮದಲ್ಲಿನ ಶುಚಿತ್ವ, ಗರಡಿ ಮನೆ, ಶಾಲಾ ಕಾಲೇಜುಗಳ ಆವರಣ, ವಿಧೇಯರಾದ ವಿದ್ಯಾರ್ಥಿಗಳು , ಯೋಗ, ಧ್ಯಾನ ಮಂದಿರಗಳು, ಆಯುವೇ೯ದ ಆಸ್ಪತ್ರೆ, ಗುರೂಜಿಯವರ ನುಡಿ, ಕಾಯಕ, ಉಚಿತ ಔಷಧಿ, ಸಲಹೆ ಸೂಚನೆ, ಎಲ್ಲಾ ಮನಸ್ಸಿನಾಳದಲ್ಲಿ ಹುದುಗಿದ್ದ ಹಳೆಯ ಅಳಿಸಲಾಗದ ರಸ ಕ್ಷಣಗಳು ನೆನಪಾದವು. ಇಂತಹ ಮಧುರ ರಸ ನೆನಪುಗಳನ್ನು ಮೆಲುಕು ಹಾಕುವಂತೆ ಮಾಡುವಲ್ಲಿ ಈ ಲೇಖನವು ಯಶಸ್ವಿಯಾಗಿದೆ. ಸುಂದರ ಲೇಖನ ಪ್ರಕಟಿಸಿದ್ದಕ್ಕೆ ಧನ್ಯವಾದಗಳು.

    10. ಶ್ರೀ ‘ತಿರುಕ’ರ ಬಗ್ಗೆ ಬರೆದ ಲೇಖನ ಓದಿದಾಗ ನಾನು ಮಲ್ಲಾಡಿಹಳ್ಳಿಯಲ್ಲಿದ್ದಾಗ ನಡೆದ ಅನೇಕ ಘಟನೆಗಳು ನೆನಪಿನಲ್ಲಿ ಮರುಕಳಿಸಿದವು.ಲೇಖನ ಉತ್ತಮವಾಗಿ ಮೂಡಿಬಂದಿದೆ.ಆಶ್ರಮದ ಹಾಗೂ ಸ್ವಾಮೀಜಿಯವರ ಜೀವನ ಚಿತ್ರ ಕಣ್ಣಿಗೆ ಕಟ್ಟಿದಂತಿದೆ.

    11. ಲಕ್ಷ್ಮೀನಾರಾಯಣ ಹೆಗಡೆ, ಹೊಸಾಕುಳಿ, ಹೊನ್ನಾವರ, ಉ-ಕ. ಲಕ್ಷ್ಮೀನಾರಾಯಣ ಹೆಗಡೆ, ಹೊಸಾಕುಳಿ, ಹೊನ್ನಾವರ, ಉ-ಕ.

      ಪರಮ ಪೂಜನೀಯ ಶ್ರೀ ರಾಘವೇಂದ್ರ ಸ್ವಾಮೀಜಿ ಮಲ್ಲಾಡಿಹಳ್ಳಿ ಅವರು ನನಗೂ ನನ್ನ ಅಕ್ಕ ರಾಜೇಶ್ವರಿಗೂ ಯೋಗ ಗುರುವಾಗಿದ್ದರು. 1990ನೇ ಇಸವಿ ಅವರ ಜನ್ಮ ಶತಮಾನೋತ್ಸವ ಅತ್ಯಂತ ವಿಜೃಂಭಣೆಯಿಂದ ನಡೆಯಿತು. ಈ ಕುರಿತು ದಿನಪತ್ರಿಕೆಯಲ್ಲಿ ಅನೇಕ ಲೇಖನಗಳು ಬಂದಿದೆ. ಅದರಲ್ಲಿ ಒಂದು “ತಿರುಕ ಸ್ವಾಮಿಗೆ ನೂರು ವರುಷ” ಅಂತ.

    12. ಲಕ್ಷ್ಮೀನಾರಾಯಣ ಹೆಗಡೆ, ಹೊಸಾಕುಳಿ, ಹೊನ್ನಾವರ, ಉ-ಕ. ಲಕ್ಷ್ಮೀನಾರಾಯಣ ಹೆಗಡೆ, ಹೊಸಾಕುಳಿ, ಹೊನ್ನಾವರ, ಉ-ಕ.

      ಜನ್ಮ ಶತಮಾನೋತ್ಸವ ಲೇಖನ ಓದಿ ಅವರ ಅನಾಥ ಸೇವಾಶ್ರಮಕ್ಕೆ ಬಂದು ವಿಶ್ವ ಯೋಗ ಮಂದಿರದಲ್ಲಿ 1990 ಜೂನ್ ನಲ್ಲಿ ಸಿ. ಸಿ. ವಾಯ್. ಎಡ್. ಯೋಗ ಕೋರ್ಸ್ ಗೆ ಸೇರಿದೆ. ಒಂದು ವರುಷ ಸ್ವಾಮೀಜಿ ಯವರ ನಿಕಟವರ್ತಿಯಾಗಿದ್ದೆ. ಸಾಯಂಕಾಲ ಸ್ವಾಮೀಜಿಗಳ ಜೊತೆಗೆ ಭಜನೆ ಮಾಡುವಾಗ ನಾನು ಅವರ ಭಾವಚಿತ್ರ ಬರೆದುಕೊಟ್ಟಿದ್ದೆ. ಈಗ ಅವರ ಚಲನಚಿತ್ರ ಮಾಡುತ್ತಿರುವುದು ಸಂತಸದ ವಿಷಯ.

    13. ಮಲ್ಲಾಡಿಹಳ್ಳಿಯ ಮಹಾಚೇತನದ ಕುರಿತಾದ ಲೇಖನ ತುಂಬಾ ಚೆನ್ನಾಗಿದೆ, ಧನ್ಯವಾದಗಳು.

    14. ಮಲ್ಲಾಡಿ ಹಳ್ಳಿಯ ಆಶ್ರಮದ ಬಗ್ಗೆ ಕೇಳಿದ್ದೆ ಹೊರತು ಅದರ ಬಗ್ಗೆ ಹೆಚ್ಚಿನ ಅರಿವು ಇರಲಿಲ್ಲ.ಬರೀ ಬೆಂಗಳೂರಿನ ನಂಟಿ ರುವ ನನ್ನಂತಹವರಿಗೆ ಮಾಲ್ಲಾಡಿ ಹಳ್ಳಿಯ ದಿವ್ಯ ಚೇತನದ ಬಗ್ಗೆ ಹೆಚ್ಚಿನ ವಿಷಯಗಳನ್ನು ಅತ್ಯಂತ ಸರಳವಾಗಿ ಮನಮುಟ್ಟುವಂತೆ ಬರೆದಿದ್ದೀರಿ ವಂದನೆಗಳು

    15. ಬಹಳ ಚೆನ್ನಾಗಿ ಮಲ್ಲಾಡಿಹಳ್ಳಿ ಸ್ವಾಮಿಗಳ ಪರಿಚಯ ಎಲ್ಲರಿಗೂ ಮಾಡಿ ದ್ದೀರಿ. ನಾನು ಹಲವಾರು ಬಾರಿ ನೋಡಿದ್ದೆ, ಭೇಟಿ ಕೊಟ್ಟು ಬಂದಿರುತ್ತೇನೆ. ಮತ್ತು ಅವರ ಯೋಗ ಶೈಲಿಯನ್ನು ಅಳವಡಿಸಿಕೊಂಡು ಬಹಳ ಉಪಯೋಗ ಪಡೆದುಕೊಂಡಿರುತ್ತೇನೆ.

    16. ಅದ್ಭುತ ಲೇಖನ ಸರ್.

      ನಾನು ಓದಿದ್ದು ಕೂಡಾ ಮಲ್ಲಾಡಿಹಳ್ಳಿಯಲ್ಲಿ. ಸ್ವಾಮೀಜಿಗಳ ಬಗ್ಗೆ ಓದಿ ಖುಷಿಯಾಯಿತು.

    LEAVE A REPLY

    Please enter your comment!
    Please enter your name here

    Latest article

    error: Content is protected !!
    ' + // image style settings '
    ' + 'tagDiv image style' + '' + '
    ' + ''; //inject our settings in the template - before
    td_template_content = td_template_content.replace('
    ', td_our_content + '
    '); //save the template jQuery('#tmpl-image-details').html(td_template_content); //modal off - click event jQuery(document).on( "click", ".td-modal-image-on", function() { if (jQuery(this).hasClass('active')) { return; } td_add_image_css_class('td-modal-image'); jQuery(".td-modal-image-off").removeClass('active'); jQuery(".td-modal-image-on").addClass('active'); }); //modal on - click event jQuery(document).on( "click", ".td-modal-image-off", function() { if (jQuery(this).hasClass('active')) { return; } td_remove_image_css_class('td-modal-image'); jQuery(".td-modal-image-off").addClass('active'); jQuery(".td-modal-image-on").removeClass('active'); }); // select change event jQuery(document).on( "change", ".td-wp-image-style", function() { switch (jQuery( ".td-wp-image-style").val()) { default: td_clear_all_classes(); //except the modal one jQuery('*[data-setting="extraClasses"]').change(); //trigger the change event for backbonejs } }); //util functions to edit the image details in wp-admin function td_add_image_css_class(new_class) { var td_extra_classes_value = jQuery('*[data-setting="extraClasses"]').val(); jQuery('*[data-setting="extraClasses"]').val(td_extra_classes_value + ' ' + new_class); jQuery('*[data-setting="extraClasses"]').change(); //trigger the change event for backbonejs } function td_remove_image_css_class(new_class) { var td_extra_classes_value = jQuery('*[data-setting="extraClasses"]').val(); //try first with a space before the class var td_regex = new RegExp(" " + new_class,"g"); td_extra_classes_value = td_extra_classes_value.replace(td_regex, ''); var td_regex = new RegExp(new_class,"g"); td_extra_classes_value = td_extra_classes_value.replace(td_regex, ''); jQuery('*[data-setting="extraClasses"]').val(td_extra_classes_value); jQuery('*[data-setting="extraClasses"]').change(); //trigger the change event for backbonejs } //clears all classes except the modal image one function td_clear_all_classes() { var td_extra_classes_value = jQuery('*[data-setting="extraClasses"]').val(); if (td_extra_classes_value.indexOf('td-modal-image') > -1) { //we have the modal image one - keep it, remove the others jQuery('*[data-setting="extraClasses"]').val('td-modal-image'); } else { jQuery('*[data-setting="extraClasses"]').val(''); } } //monitor the backbone template for the current status of the picture setInterval(function(){ var td_extra_classes_value = jQuery('*[data-setting="extraClasses"]').val(); if (typeof td_extra_classes_value !== 'undefined' && td_extra_classes_value != '') { // if we have modal on, switch the toggle if (td_extra_classes_value.indexOf('td-modal-image') > -1) { jQuery(".td-modal-image-off").removeClass('active'); jQuery(".td-modal-image-on").addClass('active'); } } }, 1000); })(); //end anon function -->