26.2 C
Karnataka
Thursday, November 21, 2024

    ಭಗವಂತ ಎನ್ನಲೇ? ಸಾಕಾಗಲಿಕ್ಕಿಲ್ಲ

    Must read

    ಹಾವ ತುಳಿದೇನೆ ಮಾನಿನಿ, ಹಾವ ತುಳಿದೇನೆ… ಇಡಾ, ಪಿಂಗಳ,ಸುಷುಮ್ನಾ…..ಮೂಲಾ ಧಾರದಿಂದ ….ಆಜ್ನ್ಯಾ ಚಕ್ರದವರೆಗೆ….. ಕುಂಡಲಿನಿ …..ಜಾಗ್ರತೆ ಆದಾಗ….ಹಾವ ತುಳಿದೇನೆ, ಮಾನಿನಿ…..

    ಶಿಶುನಾಳ ಶರೀಫಜ್ಜರ ಗೂಡಾರ್ಥಗಳಲ್ಲಿ ಒಂದಾದ ಹಾವ ತುಳಿದೇನೆ ಗೀತೆಯ ಬರುವ ಸಾಲುಗಳನ್ನು ನಾನು ಮೊದಲು ಕೇಳಿದ್ದು ಪ್ರಾಣಾಯಾಮದಲ್ಲಿ. ಪಿಂಗಳ,ಸುಷುಮ್ನಾ ನಾಡಿಗಳ ಜೊತೆ ಮೂಲಾಧಾರ ಸುಪ್ತವಾಗಿರುವ ಹಾವಿನಂತಹ ಕುಂಡಲಿನಿ ಜಾಗ್ರತವಾದಾಗ ಮನುಷ್ಯ ತುಳಿದ ಹಾವಿನಂತಾಗುತ್ತಾನೆ…. ಎಂದು ನಾನು ಪ್ರಥಮವಾಗಿ ಕೇಳಿದ್ದು ಮಲ್ಲಾಡಿಹಳ್ಳಿಯ ಯೋಗ ಶಿಬಿರದಲ್ಲಿ.

    ಪ್ರತೀ ವರ್ಷ ಅಕ್ಟೋಬರ್ ತಿಂಗಳಲ್ಲಿ ನಡೆಯುತ್ತಿದ್ದ 21 ದಿನಗಳ ಯೋಗ ಶಿಬಿರ ದಲ್ಲಿ ಒಂದೊಂದೇ ಆಸನಗಳನ್ನು ಶಿಬಿರದಲ್ಲಿ ಭೌತಿಕವಾಗಿ ಪೂರ್ವಾಚಾರಿ ಮತ್ಚು ವನಿತಾ ಟೀಚರ್ ಪ್ರದರ್ಶಿಸುತ್ತಿದ್ದರೆ ಇತ್ತ ಅವುಗಳ ಮಹತ್ವವನ್ನು ಹೇಳುತ್ತಾ,ಕೆಂಪು ಮಕಮಲ್ ಬಟ್ಟೆಯ ಜಟ್ಟಿ ಚಡ್ಡಿ ಧರಿಸಿ,ಶಿಬಿರಾರ್ಥಿಗಳ ಮಧ್ಯೆ ಪಾದರಸದಂತೆ ಅಡ್ಡಾಡುತ್ತ,ಆಗಾಗ ನಗಿಸುತ್ತ,ಆಸನಗಳ ಆಳಗಳನ್ನು ಮನದಲ್ಲಿ ಸ್ಥಿರಗೊಳಿಸುತ್ತಿದ್ದರು ನಮ್ಮ ಅಭಿನವ ಧನ್ವಂತರಿ,ಯೋಗಾಚಾರ್ಯ ಶ್ರೀ ರಾಘವೇಂದ್ರ ಸ್ವಾಮೀಜಿ.

    ಪರಮಾತ್ಮನ ಸಾಕ್ಷಾತ್ಕಾರ

    ದೇಹದ ಸುಸ್ಥಿರತೆಗೆ ಲಘು ವ್ಯಾಯಾಮ ಮಾಡಿ ಯೋಗಾಸನಕ್ಕೆ ಅಣಿ ಗೊಳ್ಳಬೇಕು.ಆದಮೇಲೆ ಪ್ರಾಣಾಯಾಮ ಮಾಡಬೇಕು.ಅವರವರ ದೇಹ ಪ್ರಕೃತಿ ಅನುಸರಿಸಿ, ಹೊರಗಿನ ವಾತಾವರಣಕ್ಕೆ ತಕ್ಕಂತೆ ಎಡ, ಬಲ (ಇಡಾ,ಪಿಂಗಳ ಅಥವಾ ಸೂರ್ಯ,ಚಂದ್ರ ನಾಡಿ) ಮೂಗಿನ ಹೊಳ್ಳೆಗಳ ಮುಖಾಂತರ ಉಸಿರು ತೆಗೆದುಕೊಳ್ಳುವುದು, ಹಿಡಿದಿಡುವುದು,ಬಿಡುವುದು…ಈ ಪ್ರಕ್ರಿಯೆಯನ್ನು ಪ್ರಾಣಾಯಾಮ ಎನ್ನುತ್ತಾರೆ. ಈ ಪ್ರಾಣಾಯಾಮದ ಮುಖಾಂತರ ಏಳು ಚಕ್ರಗಳನ್ನು ಜಾಗೃತಗೊಳಿಸಿಕೊಂಡು ಬ್ರಹ್ಮಾನಂದವನ್ನು ಪಡೆಯಬಹುದು.ಇದನ್ನೇ ಪರಮಾತ್ಮನ ಸಾಕ್ಷಾತ್ಕಾರ ಅಂತಾರೆ. ಆತ್ಮವನ್ನು ಪರಮಾತ್ಮನಲ್ಲಿ ಲೀನ ಮಾಡುವ ಹಲವಾರು ಸಾಧನೆಗಳಿಗೆ ಇದೇ ರಾಜಮಾರ್ಗ.ಹೀಗೆ ಸೇರಿಸುವ ವಿಧಾನಕ್ಕೆ ಯೋಗ ಅಂತಾರೆ.ಹಾಗಾಗಿ ಈ ಅಸನಗಳು ಯೋಗಾಸನ ಅಂತ ಅಂತಾರೆ ಎಂದು ಸ್ವಾಮೀಜಿ ಹೇಳುತ್ತಿದ್ದನ್ನು ಕೇಳಿದ ನಮಗೆ ಆ ಕ್ಷಣದಲ್ಲೇ ಸಾಕ್ಷತ್ಕಾರವಾದ ಅನುಭವ.

    ಅಸಂಖ್ಯಾತ ಇರುವ ಆಸನಗಳಲ್ಲಿ,ಅವರವರ ದೇಹ ಪ್ರಕೃತಿಗೆ ಹೊಂದುವ ಆಸನಗಳನ್ನು ಅನುಸರಿಸಿ ಸಾಧನೆಗೆ ತೊಡಗಬೇಕು.ಎಲ್ಲರೂ ಸಾಧಕರಾಗಲು ಆಗದಿದ್ದರೂ,ಉತ್ತಮ ಆರೋಗ್ಯಕ್ಕೆ ಇವುಗಳ ಪಾಲನೆ ಅತೀ ಮುಖ್ಯ. ಬರುವ ದಿನಗಳಲ್ಲಿ ಯೋಗದ ಆವಶ್ಯಕತೆ ಮಾನವನಿಗೆ ಅನಿವಾರ್ಯ ಎನ್ನುವಷ್ಟು ಹತ್ತಿರವಾಗುತ್ತದೆ. ಆರೋಗ್ಯದಿಂದ ಇರುವವರು ರೋಗಗಳು ಬರದೇ ಇರಲು, ರೋಗಿಗಳಾದವರಿಗೆ ಆರೋಗ್ಯವಂತರಾಗಲು ಯೋಗ ಅತೀ ಮುಖ್ಯ ಎಂದು ಯೋಗದ ಮಹತ್ವವನ್ನು ನನ್ನಂಥ ಲಕ್ಷಾಂತರ ಗ್ರಾಮೀಣ ಎಳೆ ಮನಸ್ಸುಗಳ ಅರಿವಿಗೆ,ಆಗಲೇ 90 ದಾಟಿದ್ದ ಶ್ರೀ ಗಳು ಹೇಳುತ್ತಿದ್ದರು.

    ಸ್ವಾಮೀಜಿ ಮತ್ತು ಸೂರ್ ದಾಸರು

    ಆ ಸಮಯದಲ್ಲಿ ನಮಗೆ ಮುದೊಂದು ಅಂತಾರಾಷ್ಟ್ರೀಯ ಯೋಗ ದಿನ ಅಂತ ಜೂನ್ 21ರ ದಿನವನ್ನು ಭಾರತ ಸರ್ಕಾರ ಘೋಷಿಸಿ, ಇಡೀ ವಿಶ್ವಕ್ಕೇ ಯೋಗವನ್ನು ಪರಿಚಯಿಸುತ್ತದೆ ಎಂಬುದನ್ನು ಊಹಿಸುವುದು ಅಸಾಧ್ಯವಾಗಿತ್ತು.1977 ರಿಂದ 1982 ರ ಐದು ವರ್ಷಗಳ ಅವಧಿಯನ್ನು ಶ್ರೀಗಳ ಸನಿಹದಲ್ಲಿ,ಆಶ್ರಯದಲ್ಲಿ ಕಳೆದದ್ದು ನನ್ನ ಭಾಗ್ಯವೇ ಸೈ. ಆಶ್ರಮದ ಇಂಚಿಂಚು ಜಾಗವನ್ನು ಸ್ವಚ್ಛ ಮಾಡಿರುವ ಹೆಮ್ಮೆ ನನ್ನದು. ಎಷ್ಟೋ ಇಡೀ ಭಾನುವಾರಗಳನ್ನು ಆಶ್ರಮದ ಆಗ್ನೇಯ ಮೂಲೆಯಲ್ಲಿದ್ದ ಔಷಧಾಲಯದಲ್ಲಿ ವಿವಿಧ ಗಿಡಮೂಲಿಕೆಗಳನ್ನು,ಕುಟ್ಟಿ,ಪುಡಿ ಮಾಡಿ ಸೋಮವಾರ ಬರುತ್ತಿದ್ದ ರೋಗಿಗಳಿಗಾಗಿ ವಿವಿಧ ರೀತಿಯ ಔಷಧಗಳನ್ನು ಸೂರದಾಸ್ ಅವರ ಉಸ್ತುವಾರಿಕೆಯಲ್ಲಿ ತಯಾರಿಸಿದ್ದೇನೆ ಅಂತ ಹೇಳಲು ಎದೆಯುಬ್ಬಿ ಬರುತ್ತೆ.

    ಹಾರುವ ಹಕ್ಕಿಯನ್ನು ಹೋಲುವ ಯೋಗಮಂದಿರ

    ಹಾರುವ ಹಕ್ಕಿಯನ್ನು ಹೋಲುವ ಯೋಗಮಂದಿರ ದ ರೆಕ್ಕೆಗಳ ಛಾವಣಿ ಕೆಲಸಕ್ಕೆ ಸಿಮೆಂಟ್ ಕಾಂಕ್ರೀಟ್ ನ್ನು ಹಗಲು,ರಾತ್ರಿ ಕಬ್ಬಿಣದ ಪುಟ್ಟಿಗಳಲ್ಲಿ ತಲೆಮೇಲೆ ಹೊತ್ತು,ಸಾಲಾಗಿ ನಿಂತ ಗೆಳೆಯರೊಂದಿಗೆ ಹಾಕಿದ ಸಾರ್ಥಕತೆ ನನ್ನದು.

    ತಾಂತ್ರಿಕ ದೋಷದಿಂದ ಒಮ್ಮೆ ಹಾಕಿದ್ದ ಕಾಂಕ್ರೀಟ್ ಬಿದ್ದು, ಮತ್ತೆ ಹಾಕಿ, ತಮಿಳು ಗುತ್ತೇದಾರನ ಮತ್ತು ಸ್ವಾಮಿಗಳ ಜೊತೆಯಲ್ಲಿ ನಿಂತು,ರೆಕ್ಕೆ ನಿಂತದ್ದು ನೋಡಿ ಸಂಭ್ರಮಿಸಿದ ಕ್ಷಣಕ್ಕೆ ಸಾಕ್ಷಿಯಾದದ್ದು ನನ್ನ ಹೆಮ್ಮೆ. ಯೋಗಮಂದಿರದ ಕಿಟಕಿಗಳಿಗೆ ನಮ್ಮ ಶಾಲೆಯ ವರ್ಕ್ ಷಾಪ್ ನ ಗುಡ್ಡಪ್ಪ, ಸ್ವಾಮಿಗಳ ಯೋಗದ ಭಂಗಿಗಳನ್ನು ಅಳವಡಿಸುತ್ತಿದ್ದನ್ನು ಆಶ್ಚರ್ಯಭರಿತ ಕಣ್ಣುಗಳಿಂದ ನೋಡಿ ಆನಂದಿಸುತತಿದ್ದ ನನಗೆ ಮತ್ತು ಗೆಳೆಯರಿಗೆ ಹತ್ತಿರ ಬರಬೇಡಿ ಅಂತ ಆತ ಗದರಿಸುತ್ತಿದ್ದನ್ನು ಮರೆತಿಲ್ಲ.

    ಹತ್ತನೇ ತರಗತಿ ಪಾಸಾದವರಿಗೆ ಮತ್ತು ಪಿಯು 2 ಪಾಸಾದವರಿಗೆ ರಜೆಯಲ್ಲಿ ಇರುತ್ತಿದ್ದ ಶ್ರಮದಾನ ಎನ್ನುವ ಐಶ್ಚಿಕ ಶಿಬಿರದಲ್ಲಿ ತಪೋವನದ ಗಿಡಗಳಿಗೆ ಗುಂಡಿ ತೋಡಿ,ನೆಟ್ಟು,ನೀರು ಹಾಕಿದ್ದು ನನ್ನಲ್ಲಿ ಇನ್ನೂ ಹಸಿರಾಗಿದೆ. ಅಲ್ಲಿಯ ಕೋತಿಗಳಿಗೆ, ಜಿಂಕೆಗಳಿಗೆ,ಪಾರಿವಾಳಗಳಿಗೆ ಅನ್ನ-ನೀರನ್ನು ಇಟ್ಟಿದ್ದು,ದೈಹಿಕ ಶಿಕ್ಷಕ ಎಂ. ನಾಗೇಂದ್ಪಪ್ಪ ಅವರ ಜೊತೆ ಚನ್ನಗಿರಿ ಹತ್ತಿರವಿದ್ದ ಅಮ್ಮನಗುಡ್ಡ ಕ್ಕೆ ಸೌದೆ ತರಲು ಟ್ರಾಕ್ಟರ್ ನಲ್ಲಿ ಹೋದದ್ದು, ಆಶ್ರಮದ ಹೊಲದಲ್ಲಿ ಬಿಳೀ ಜೋಳದ ದಂಟನ್ನು ಕೊರೆಯುವ ಬೆಳಗಿನ ಚಳಿಯಲ್ಲಿ ಕಿತ್ತದ್ದು, ಅದನ್ನು ತಂದು ಗುಡ್ಡೇ ಹಾಕಿ,ಕಣ ಮಾಡಿ ರಾತ್ರಿಯೆಲ್ಲಾ ಕಾಯುತ್ತಾ, ಓದಿ ಪಿಯು2 ಪರೀಕ್ಷೆ ಬರೆದದ್ದು,ಹಗಲಿಡೀ ಕೆಲಸ ಮಾಡಿ,ಸಂಜೆ ವ್ಯಾಯಾಮ ಶಾಲೆ ಸೇರಿ,ರಾತ್ರಿ ಇಡೀ ಮಣ್ಣನ್ನು ಹೊದ್ದು ಮಲಗಿದ್ದ ದಿನಗಳು ಮರೆಯದ ನೆನಪಿನ ಘಟ್ಟಗಳು.

    ಶ್ರಮದ,ಶ್ರಮಿಕನ ಬೆಲೆ

    ಶ್ರಮದ,ಶ್ರಮಿಕನ ಬೆಲೆಯನ್ನು ಅರ್ಥಪೂರ್ಣವಾಗಿ ಬಾಲ್ಯದಲ್ಲೇ ಮನದಟ್ಟು ಮಾಡಿದ ಆಶ್ರಮದ ಜೀವನ,ನನ್ನಂತಹ ಲಕ್ಷಾಂತರ ಗ್ರಾಮೀಣ ಹುಡುಗ,ಹುಡುಗಿಯರ ಮನಸ್ಟ್ರೈರ್ಯ ಹೆಚ್ಚಿಸಿ, ಇಂದಿನ ಜೀವನಗಳನ್ನು ರೂಪಿಸಿಕೊಳ್ಳುವಲ್ಲಿ ಸಹಕಾರಿಯಾಗಿದೆ. ಬಹುಮುಖಿಯಾಗಿ ಸ್ವಾಸ್ಥ್ಯ ಸಮಾಜ ನಿರ್ಮಾಣದಲ್ಲಿ ನಮ್ಮ ಸ್ವಾಮೀಜಿಯವರ ಬದ್ಧತೆ,ರೂಪುರೇಷಗಳು, ಮುಂದಿನ ನೂರಾರು ವರ್ಷಗಳವರೆಗೆ ಬರುವ ಜನಾಂಗಕ್ಕೆ ಮಾದರಿಯಾಗಬಲ್ಲದು. ಅಂತಹ ಅನೇಕ ಮುಖಗಳಲ್ಲಿ, ಯೋಗ ಒಂದೇ ಅಷ್ಟೇ.

    ನಿರಂತರ ಪ್ರಾಣಾಯಾಮದಿಂದ ಮೂಲಾಧಾರದಲ್ಲಿ ಸಿಂಬೆ ಸುತ್ತಿಕೊಂಡು ಮಲಗಿರುವ ಹಾವಿನ ತರಹ ಇರುವ ಕುಂಡಲಿನಿ ಶಕ್ತಿ ಜಾಗೃತಗೊಂಡು ಉರ್ಧ್ವಮುಖವಾಗಿ ಚಲಿಸಿ,ಏಳು ಚಕ್ರಗಳನ್ನು ಉದ್ದೀಪನಗೊಳಿಸಿ, ತಲೆಯ ಸುಳಿಯಲ್ಲಿರುವ ಬ್ರಹ್ಮ ರಂಧ್ರದ ಮೂಲಕ ಸಹಸ್ರಾರ ತಲುಪಿದಾಗ ಪಡೆಯುವ ಆನಂದಕ್ಕೆ ಸಮನಾದದ್ದು ಯಾವುದೂ ಇಲ್ಲ.ಇದನ್ನೇ ತಿಳಿದವರು ಬ್ರಹ್ಮಾನಂದ ಎಂದಿದ್ದಾರೆ.ಈ ಸ್ಥಿತಿಯನ್ನು ಪ್ರತಿಯೊಬ್ಬರೂ ಬೇಕಾದಾಗ,ಬೇಕಾದಷ್ಟು ಅನುಭವಿಸುವ ಸಿದ್ಧಿಯನ್ನು ಸಿದ್ಧಿಸಿಕೊಳ್ಳಬಹುದು ಎಂದು ಸ್ವಾಮಿಗಳು ಯೋಗದ ಮಹತ್ವವನ್ನು ಹೇಳುತ್ತಿದ್ದರೆ, ನನಗೆ ಸಾಕ್ಷಾತ್ ಭಗವಂತ ಯೋಗಾಚಾರ್ಯನಾಗಿ ಉಪದೇಶಿಸುತ್ತಿದ್ದಾನೆ ಎನ್ನುವಂತಹ ಅನುಭೂತಿ!

    ಆ ಕುಗ್ರಾಮದಲ್ಲಿ ಗ್ರಾಮೀಣ ಶಿಬಿರಾರ್ಥಿಗಳ ಮುಂದೆ ಅವರಾಡುತ್ತಿದ್ದ ಮಾತುಗಳು,ಭಗವಂತನ ಸನ್ನಿಧಿಗೆ ನೇರವಾಗಿ ಇರುವ ರಾಜಮಾರ್ಗ ಆಗಿದ್ದವು ಎಂದು ನಾನು ಅರಿತು,ಆ ಕುರಿತಾಗಿ ಸ್ವಾಮಿಗಳ ಮುಂದೆ ವಿನಮ್ರನಾಗಿ ನನ್ನ ಸಂದೇಹಗಳನ್ನು ಹೇಳಬೇಕು ಎನ್ನುವಷ್ಟರಲ್ಲಿ ನಮ್ಮಿಂದ ಬಹುದೂರ ಹೊರಟು ಹೋಗಿದ್ದರು ನಮ್ಮ ಸ್ವಾಮಿಗಳು.

    ಆತ್ಮ,ಪರಮಾತ್ಮ ಬಾಹ್ಯ ಇಂದ್ರಿಯಗಳಿಗೆ ತಾಕದ ವಿಷಯಗಳು,ಅವುಗಳನ್ನು ಏನಿದ್ದರೂ ಅನುಭವಿಸಿಯೇ ಸವಿಯಬೇಕು. ಹಾಗೆಯೇ ಇವುಗಳನ್ನು ಒಂದುಮಾಡಲು ಬೇಕಿರುವ ಸಾಧನೆಯೇ ಯೋಗ. ಇದರಲ್ಲೂ ಇಡ, ಪಿಂಗಳ,ಸುಷುಮ್ನಾ ಎನ್ನುವ ನಾಡಿಗಳೂ, ಏಳು ಚಕ್ರಗಳೂ ಯಾವ ಇಂದ್ರಿಯಗಳಿಗೂ ಕಾಣಲಾರವು,ವಿಜ್ಞಾನದ ಯಾವ ಸಾಮಗ್ರಿಗಳಿಗೂ ಕೂಡ. ಇವೆಲ್ಲವನ್ನೂ ಅನುಭವಿಸಿಯೇ ಆನಂದಿಸಬೇಕು ಎನ್ನುವಂತಹ ಅಪರ ಜ್ಞಾನವನ್ನು ಸರಳವಾಗಿ ತಿಳಿಸಿ,ಆತ್ಮಾಭಿಮಾನದ ಶ್ರದ್ಧೆಯನ್ನು ಕಲಿಸಿದ ,ಅಕ್ಷರಶಃ ಜೋಳಿಗೆ ಹಿಡಿದು,ಭಿಕ್ಷೆ ಬೇಡಿ ನಮ್ಮನ್ನೆಲ್ಲ ಸಾಕಿ ಸಲುಹಿದ ಶ್ರೀ ಗಳನ್ನು ಬರೀ ಭಗವಂತ ಎನ್ನಲೇ? ಸಾಕಾಗಲಿಕ್ಕಿಲ್ಲ,ಅವರ ಪೂರ್ಣ ವಿವರಣೆ ಕೊಡುವ ಏಕ ಶಬ್ದ ಇನ್ನೂ ಯಾವ ಭಾಷೆಯಲ್ಲಿ ಬಂದಿಲ್ಲ.

    ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ನನ್ನ ಯೋಗಾಚಾರ್ಯರಿಗೆ ನೆನಪಿನ ಶ್ರದ್ಧಾಂಜಲಿ….

    ಇದನ್ನೂ ಓದಿ: ವಿಶ್ವ ಯೋಗ ದಿನದಂದು ಮಲ್ಲಾಡಿಹಳ್ಳಿ ಸ್ವಾಮೀಜಿ ನೆನಪಾದರು

    ಮಂಜುನಾಥ ಬೊಮ್ಮಘಟ್ಟ
    ಮಂಜುನಾಥ ಬೊಮ್ಮಘಟ್ಟ
    ವೃತ್ತಿಯಿಂದ ಎಂಜಿನಿಯರ್, ಪ್ರವೃತ್ತಿಯಿಂದ ಬರಹಗಾರ. ಸಧ್ಯ ಬಳ್ಳಾರಿಯಲ್ಲಿ ವಾಸ.
    spot_img

    More articles

    23 COMMENTS

    1. ವಾವ್…ಅಮ್ಮನ ಮನೆಗೆ ಹಬ್ಬಕ್ಕೆ ಬಂದ ಮಗಳ ಸಂತೋಷದಷ್ಟೇ ಆನಂದ, ಸಂಭ್ರಮ, ನಿಮ್ಮ ಬರವಣಿಗೆಯಲ್ಲಿ ಎದ್ದು ಕಾಣುತ್ತಿದೆ. ನಿಮ್ಮ ವರ್ಣನೆ… ನಿಮ್ಮ ನೆನಪುಗಳು ಬಿಚ್ಚಿಟ್ಟು ನಾನೆ ಅದೃಷ್ಟವಂತ ಎಂದು ಸಾರುತ್ತಿದೆ. ನಾವ್ಯಾಕೆ ಇಷ್ಟು ದುರದೃಷ್ಟಿಗಳು ಅನ್ನೋ ಚಿಂತೆ ಕಾಡುತ್ತಿದೆ.
      ಈ ಶಿಕ್ಷಣ ಈಗಿನ ಪ್ರತಿ ಶಾಲೆ ಅನುಸರಿಸಿದರೆ ಎಷ್ಟು ಅರೋಗ್ಯಕರ ಸಮಾಜ ಸೃಷ್ಟಿ ಆಗಬಹುದು ಉಹಿಸದರೆ ನಮ್ಮ ಶ್ರೀಮಂತೆಕೆಯ ಅರಿವಾಗುತ್ತದೆ.
      ನೀವು ಅದೃಷ್ಟವಂತರು ನಿಮಗೆ ನಮ್ಮ ಪಾದಾರ್ಪಣೆ… ಏಕೆಂದರೆ ನೀವು ಒಂದು ದೇವಾಲಯದ ಪರಿಚಯ ಮಾಡಿಸಿದಿರಿ.

    2. ಮಲ್ಲಾಡಿಹಳ್ಳಿ ಸ್ವಾಮೀಜಿಯವರ ಬಗೆಗಿನ ನಿಮ್ಮ ಅನಿಸಿಕೆ ಅಕ್ಷರಸಹ ನಿಜ.ಯಾವ ಅತಿಶಯೋಕ್ತಿಯು ಇಲ್ಲ.ಪೂಜ್ಯರ ಬಗ್ಗೆ ಶಿವಮೊಗ್ಗದಲ್ಲಿದ್ದಾಗೆ ಬಹಳಷ್ಟು ಕೇಳಿದ್ದೇನಾದರು,ಅವರ ದರ್ಶನಭಾಗ್ಯಮಾತ್ರ ನನಗೆ ಅಗಲೇ ಇಲ್ಲ.ಇನ್ನು ವೃತ್ತಿ ಯಲ್ಲಿ ಎಂಜಿಜಿನಯರ್ ಆಗಿ ಪ್ರವೃತ್ತಿಯಿಂದ ಬರಹಗಾರರಾಗಿ ಉತ್ತಮವಾದ ಬರಹಗಳನ್ನೇ ಬರೆಯುತ್ತಿರುವ ನಿಮಗೆ ನಮೋ ನಮೋ.ಇಂದಿನ ಸಂಚಿಕೆಯ ನಿಮ್ಮ ಬರಹ ಅದ್ಭುತ.ಅದೆಷ್ಟು ವಿಷಯಗಳ ಮೇಲೆ ಅದೆಷ್ಟು ಓದಿ ತಿಳಿದುಕೊಂಡಿದ್ದೀರೋ ನನಗಂತೂ ಆಶ್ಚರ್ಯವೆನಿಸುತ್ತೆ.ಏನೇ ಆದರೂ ನಿಮ್ಮ ಈ ಅಭಿರುಚಿಗೆ ಮತ್ತೊಮ್ಮೆ ನನ್ನ ನಮನಗಳು.

    3. ಮಲ್ಲಾಡಿಹಳ್ಳಿ ನೆನಪುಗಳು ಮತ್ತೆ ಮನ್ವಂತರಕ್ಕೆ ಕರೆದೊಯ್ಯುತ್ತದೆ🙏 ಆಶ್ರಮವು ವಿದ್ಯೆ ಅರಸಿ ಬಂದ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ದಾರಿದೀಪವಾಗಿರುವುದು ಆದರಣೀಯ ನಿಮ್ಮ ನೆನಪಿನ ಲೇಖನ ಅತ್ಯುತ್ತಮವಾಗಿದೆ 🍁

    4. ತಿರುಕರಬಗ್ಗೆ ಹೆಮ್ಮೆಯಾಗುತ್ತೆ. ನನ್ನ ತಂದೆಯವರಿಗೆ ೧೭೬೬ ರಲ್ಲಿ ಬಲಮುಂಗೈ ನಡುಗಲಾರಂಭಿಸಿದಾಗ ಬೆಂಗಳೂರಿನ NIMHANS ನಲ್ಲಿ ಆಪರೇಷನ್ ಮಾಡಿ ಸರಿ ಪಡಿಸಬೇಕೆಂದರು. ಆದರೆ ರಾಘವೇಂದ್ರ ಸ್ವಾಮಿಗಳು ಎಣ್ಣೆಯಿಂದ ನೀವಳಿಸಿಕೊಂಡು ಸರಿಯಾಗುವಹಾಗೆ ಮಾಡಿದರು. ಅವರಿಗೆ ನಾವುಗಳು ಚಿರಋಣಿ. ಅವರ ಜ್ಞಾನ ಈಗಲೂ ದೊರೆಯುತ್ತಿರಬಹುದು.

    5. ನಿಮ್ಮ ಲೇಖನವನ್ನು ತಿರುಕ ಚಲನಚಿತ್ರ ನಿರ್ದೇಶಕರಿಗೆ ಕಳಿಸಿದ್ದೇನೆ.ಅವರು ತಮ್ಮನ್ನು ಸಂಪರ್ಕಿಸಬಹುದು.ಮಾತನಾಡಿ.

    6. Lekhana tumba chennagide. Nijavagiyuu neevu bhagyavantharu. Malladihalliya swamijiyavara bagge kelidde, aadare ishtondu vivaragalu thilidiralilla. Jeevanadalli nirasate, sinikate moodisuva vidyamanagala madhye intha punyathmara bagge thilisiddu manassigge tamperedantaytu, dhanyavadagalu.

    7. ನಿಮ್ಮ ಲೇಖನ ನೋಡಿದಾಗ ನನ್ನ ಮನಸು ನನ್ನ ಬಾಲ್ಯದ ನೆನಪು ಮಾಡಿತು ಸ್ವಾಮೀಜಿ ಜೊತೆಗಿನ ನಮ್ಮ ಒಡನಾಟ ಜ್ಞಾಪಕ ಬಂತು. ಪ್ರತಿ ಪದದಲ್ಲೂ ನಿಮ್ಮ ಮತ್ತು ಸ್ವಾಮೀಜಯವರ ಸಂಬಂಧ ಎದ್ದು ಕಾಣುತಿದೆ. ನೀವು ಕೊಟ್ಟಿರುವ ಶೇರ್ಷಿಕೆ ಅವರು ನಮ್ಮಂತ ಸಹಸ್ರ ಬಡ ವಿದ್ಯಾರ್ಥಿಗಳಿಗೆ ದೇವರಿಗಿಂತ ಮಿಗಿಲು. Bm. ನಿಮ್ಮ ಈ ಬರವಣಿಗೆ ನಮ್ಮ ಸ್ವಾಮೀಜಿ ಬಗ್ಗೆ ತಿಳೆಯದವರಿಗೆ ಸಹಾಯ ವಾಗುತ್ತೆ. ಇಂತಹ ಲೇಖನ ಇನ್ನು ಬರಲಿ. ವಂದನೆಗಳು

    8. ಸೂಪರ್ Bm. ಸ್ವಾಮೀಜಿ ಬಗ್ಗೆ ಬರೆದಿರುವ ಲೇಖನ ಅದ್ಭುತ . ಪ್ರತಿ ಪದವನ್ನು ಅಹ್ಸ್ವಾದಿಸಿ ಆನಂದಿಸಿ ಬರೆದಂತಿದೆ. ನಿನ್ನ ಬರವಣಿಗೆ ಯಾವೋಬ್ಬ ನುರಿತ ಬರಹಗಾರಿಗೂ ಕಡಿಮೆ ಇಲ್ಲ. ಇನ್ನು ಬರವಣಿಗೆ ಗಳು ನಿನ್ನಿಂದ ಬರಲಿ. 👌👌👏👏👍🌹

    9. ಇಂದು ರಾಘವೇಂದ್ರ ಸ್ವಾಮೀಜಿಗಳು ಇದ್ದಿದ್ದರೆ ಪ್ರಪಂಚವೇ ಮಲ್ಲಾಡಿಹಳ್ಳಿ ಕಡೆ ತಿರುಗಿ ನೋಡುವಂತೆ ಲೇಖನವಿದೆ. ಅಂದಿಗೆ ಮೀಡಿಯಾಗಳ ಕೊರತೆಯಿಂದ ನಿಸ್ವಾರ್ಥ ಸಾಧನೆ ಇಂದಿನ ಪ್ರಪಂಚಕ್ಕೆ ಮರೆಯಾಗಿದೆ. ಲೇಖನದಲ್ಲಿ ಮತ್ತೆ ಜಾಗೃತ ಗೊಳಿಸಿರುವುದು ಮಣ್ಣಿನ ಗುಣ ದ ಪ್ರತೀಕ

    10. ಮಂಜುನಾಥ ಬೊಮ್ಮಘಟ್ಟ ರವರೆ ನಿಮ್ಮ ಲೇಖನವನ್ನು ಓದಿ ನನ್ನ ಮನಸ್ಸು ನನ್ನ ಬಾಲ್ಯದ ದಿನಗಳನ್ನು ಮೆಲಕು ಹಾಕುವಂತೆ ಮಾಡಿತು. ನಾವು ಬೇಸಿಗೆ ರಜಕ್ಕೆ ಮಲ್ಲಾಡಿಹಳ್ಳಿಗೆ ನಮ್ಮಮ್ಮನ ಜೊತೆ ಹೋಗುತ್ತಿದ್ದೆವು.ನಮ್ಮ ತಾತ ಮತ್ತು ಮಾವ ಅಲ್ಲೇ ಇದ್ದರು. ಆಗ ದಿನವೂ ಪರಪ್ಪಸ್ವಾಮಿ ಮಠದಲ್ಲಿ ನಡೆಯುವ ಭಜನೆಗೆ ಹೋಗುತ್ತಿದ್ದೆವು. ಸ್ವಾಮೀಜಿಯವರೇ ಬರೆದ ಹಾಡುಗಳು ಅವು. ಒಂದು ದಿನವೂ ತಪ್ಪಿಸುವ ಹಾಗಿರಲಿಲ್ಲ. ಅಂಬಾ ನಿನ್ನ ನಾಮವು ಚೆಲುವು ಎಂಬ ಹಾಡು ಈಗಲೂ ನೆನಪಿದೆ.

      ನಂತರ ನಾನು ಅಲ್ಲೇ PUC ಓದಿದೆ. ನಮ್ಮ ಮಾವ ಗೋಪಿನಾಥ್ ರಾವ್ ದೇಶಪಾಂಡೆ ಅವರ ಮನೆಯಲ್ಲಿದ್ದೆ. ಶಿವರಾತ್ರಿ ಬಂತೆಂದರೆ ಆಶ್ರಮದಲ್ಲಿ ಸಂಭ್ರಮವೋ ಸಂಭ್ರಮ. ಆಗ ಆಶ್ರಮದ ವಾರ್ಷಿಕೋತ್ಸವ ಸಮಾರಂಭ. ವ್ಯಾಸಪೀಠದಲ್ಲಿ ಅಂತೂ ಸ್ವಾಮೀಜಿಯವರು ಎಲ್ಲ ವಿದ್ವಾಂಸರನ್ನೂ ಕರೆಸುತ್ತಿದ್ದರು. ಮೈಸೂರು ವಿಶ್ವವಿದ್ಯಾನಿಲಯದ ವಿದ್ವಾಂಸರು, ಬೆಂಗಳೂರು ವಿಶ್ವವಿದ್ಯಾನಿಲಯದ ವಿದ್ವಾಂಸರು, ಹೀಗೆ ನೂರಾರು ವಿದ್ವಾಂಸರ ಪ್ರವಚನವನ್ನು ಕೇಳುವಂತಹ ಅವಕಾಶ ನಮಗೆ ಅಲ್ಲಿ ಒದಗಿ ಬಂದಿತು. ಆಗ ನನಗೆ ಬಹಳ ಗಮನಕ್ಕೆ ಬಂದ ವಿಷಯವೆಂದರೆ ಸ್ವಾಮೀಜಿಯವರ ಹಾಗೂ ಮಕ್ಕಳ ಶಿಸ್ತುಬದ್ಧ ಕವಾಯತು ನಡೆದ ನಂತರ ಅಲ್ಲಿ ಬೇಶಿಸ್ತು ಮಾಡಿಸುತ್ತಿದ್ದರು ಅಂದರೆ ಸೀಟಿ ಊದುತ್ತಿದ್ದಂತೆ ಎಲ್ಲ ಮಕ್ಕಳೂ ಗಲಾಟೆ ಮಾಡುತ್ತ ಸ್ವಾಮೀಜಿಯವರನ್ನೇ ಎತ್ತಿಬಿಡುತ್ತಿದ್ದರು. ಅಶಿಸ್ತು ಎಂಬುದು ನಮ್ಮ ದೇಶಕ್ಕೆ ಎಷ್ಟು ಗಂಡಾಂತರಕಾರಿ ಎಂಬುದನ್ನು ಆ ಮೂಲಕ ತಿಳಿಸುತ್ತಿದ್ದರು. ಆಶ್ರಮದಲ್ಲಿ ಎಲ್ಲರೂ ಶಿಸ್ತಿನ ಸಿಪಾಯಿಗಳಾಗಿ ಬೆಳೆಯುತ್ತಿದ್ದರು. ಹೇಳುತ್ತಾ ಹೋದರೆ ಕೊನೆ ಮೊದಲಿಲ್ಲ.

      ಹಳೆಯ ನೆನಪುಗಳು ಮರುಕಳಿಸುವಂತೆ ನಿಮ್ಮ ಲೇಖನ ಮಾಡಿತು. ಇಂತಹ ಉತ್ಕೃಷ್ಟ ಲೇಖನಕ್ಕಾಗಿ ನಿಮಗೂ ಮತ್ತು ಇದನ್ನು ಪ್ರಕಟಿಸಿದ ಕನ್ನಡಪ್ರೆಸ್.ಕಾಮ್ ಗೂ ನನ್ನ ಹೃದಯಪೂರ್ವಕ ಧನ್ಯವಾದಗಳು.

      • ಬೆಶಿಸ್ತಿನ ಬಗ್ಗೆಯೇ ಒಂದು ಅದ್ಭುತ ಲೇಖನವಾಗಬಹುದು…ಮೀರಾ ನಮ್ಮ batch mate 8th to pu2…ವಂದನೆಗಳು

    11. We are proud of you BM… We wanted to tell lot abt our Malladihalli, our school and swamiji but no words.Life has taken away all our words.. now we are found those words in your article thank you Manja..

    12. ಮಂಜುನಾಥ್ sir,ಮೇಲಿನ ಎಲ್ಲಾ comments ಓದಿದ ಮೇಲೆ ನಾನು ಹಿಂದೆ ನಿಮ್ಮ ಬರಹದ ಬಗ್ಗೆ ಬಗ್ಗೆ ಇರುವ ವ್ಯಕ್ತಪಡಿಸಿದ ಅಭಿಪ್ರಾಯ ಸರಿ ಅಲ್ವಾ. ನಿಮ್ಮ ಬರಹ ಕೊನೆಯವರೆಗೂ ಓದಿಸಿಕೊಂಡು ಹೋಗುತ್ತದೆ,ಇದ್ದುದನ್ನು ಇದ್ದಂಗೆ ಉತ್ಪ್ರೇಕ್ಷೆ ಇಲ್ಲದೆ ಮನ ಮುಟ್ಟುವಂತೆ ಬರೆಯುವ ನೀವು ಮಲ್ಲಾಡಿಹಳ್ಳಿ ಸ್ವಾಮಿಗಳ ಬಗ್ಗೆ ,ಆಶ್ರಮದ ಬಗ್ಗೆ ವಿದ್ಯಾರ್ಥಿ ಜೀವನದ ಬಗ್ಗೆ ಮನಮಟ್ಟುವಂತೆ ವಿವರಿಸಿದ್ದೀರಿ. ಈಗಿನ online,donation,business minded education system ನಲ್ಲಿ ನಿಮ್ಮ ಬರಹ ನಿಜವಾದ ವಿದ್ಯೆ ಬಗ್ಗೆ ತಿಳಿಸಿದೆ.

    13. ಅಣ್ಣಾ. ಸುಂದರ ಲೇಖನ, ನಾನು ಬಾಲ್ಯದಿಂದಲೂ ನಿನ್ನ ನೋಡುತ್ತಾ ಬೆಳೆದವನು, ನಾನು ಮಲ್ಲಾಡಿಹಳ್ಳಿ ನೋಡಿರಲಿಲ್ಲ. ರಾಘವೇಂದ್ರ ಸ್ವಾಮಿಗಳ ಬಗ್ಗೆ ರಾಘಣ್ಣನ ಮತ್ತು ಜಯಪ್ರಸಾದ್ ಅವರಿಂದ ತಿಳಿದಿದ್ದೆ. ನನಗೆ ನಿನ್ನ ಕಾಯಕ ನಿಷ್ಠೆ ಮತ್ತು ಪ್ರಾಮಾಣಿಕ, ಎಲ್ಲರನ್ನು ಪ್ರೀತಿಯಿಂದ ಕಾಣುವ ನಿನ್ನ ಸದ್ಗುಣ ನನಗೆ ತುಂಬಾ ಇಷ್ಟ. ನನಗೆ ಅಣ್ಣ ತಮ್ಮಂದಿರಿಲ್ಲ ಎನ್ನುವ ಕೊರಗನ್ನು ದೂರ ಮಾಡಿದವರಲ್ಲಿ ನೀವು ಒಬ್ಬರು. ಪ್ರಾಮಾಣಿಕವಾಗಿ ಹೇಳುತ್ತೇನೆ ನಿನ್ನ ಲೇಖನ ಓದಿದ ತಕ್ಷಣ ನೆನಪಾಗಿದ್ದು “ನಿಮ್ಮ ತಂದೆ ಹುಲಿಕುಂಟೆಪ್ಪ ಮಾಸ್ಟರ್ “, ಅವರ ದೂರದೃಷ್ಟಿ ದೊಡ್ಡದು, ಪಕ್ಕದ ಸಂಡೂರಿನಲ್ಲಿರುವ ಅಂದಿನ ಮಹಾರಾಜಾ ಘೋರ್ಪಡೆಯವರ ಪ್ರತಿಷ್ಠಿತ “Sandur Residential School ” ನಲ್ಲಿ ಓದಿಸುವಷ್ಟು ಶಕ್ತಿ ಇದ್ದರೂ !? ನಿಮ್ಮನ್ನು ಮಲ್ಲಾಡಿಹಳ್ಳಿಗೆ ಸೇರಿಸಿದ್ದು. ಭವಿಷಃ ನನ್ನೂರಿನಲ್ಲಿ ನನಗಿಂತ ಹಿರಿಯ ಹಾಗೂ ಕಿರಿಯ ವಿದ್ಯಾರ್ಥಿ ಸಹೋದರರಲ್ಲಿ ನಿಮ್ಮ ತಂದೆಯಿಂದ ಮನೆ ಪಾಠ ಹೇಳಿಸಿಕೊಳ್ಳದವ ನಾನೊಬ್ಬನೇ ಅನಿಸುತ್ತದೆ. ಆದರೆ ನಾನು ಚೆನ್ನಾಗಿ ಓದುವುದು ಕಂಡು ನನ್ನನ್ನು ಅವರ ಮಾನಸ ಪುತ್ರನಂತೆ ಕಂಡು “ನೀನೊಬ್ಬ ಏಕಲವ್ಯ ” ಎಂದು ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದು ಮರೆಯಲಾರೆ. ನಮ್ಮೂರಿನ ಅನೇಕ ಬಡ ಕುಟುಂಬಗಳಿಂದ ಬಂದ, ಕೂಲಿ ಕಾರ್ಮಿಕರ ಮಕ್ಕಳಿಗೆ ಜಾತಿ ಭೇದವೆಣಿಸದೆ ಮನೆ ಪಾಠ ಹೇಳಿದ, ಶಿಸ್ತಿನ ಜೀವನ ನಡೆಸಿದ ನಮ್ಮ ಮಾಸ್ಟರ್ ಕೂಡ ನೆನಪಾದರು.ನಾನು ವೀರಶೈವ ಕಾಲೇಜಿನಲ್ಲಿ ಬಿ. ಎ. (English )ಮೇಜರ್ ಓದುತ್ತಿದ್ದಾಗ ನಿನ್ನ ಕಚೇರಿಗೆ (ಬ್ರೀಜ್ ಹೋಟೆಲ್ )ವಾರಕ್ಕೊಮ್ಮೆ ಬಂದು ಕಂಡಾಗ ನನ್ನನ್ನು ನಿನ್ನ ತಮ್ಮನೆಂದೇ ತಿಳಿದು ಬೆನ್ನು ತಟ್ಟಿ ಪ್ರೋತ್ಸಾಯಿಸಿದ್ದನ್ನು ಮರೆಯಲಾರೆ. ಅಣ್ಣಾ ನೀವೋಬ್ಬ ಕಟ್ಟಡಗಳನ್ನು ಮಾತ್ರ ನಿರ್ಮಿಸುವ ಅಭಿಯಂತರರಲ್ಲ. ಮನಸ್ಸುಗಳನ್ನು ನಿರ್ಮಲಗೊಳಿಸುವ ಕವಿಯೊಬ್ಬ ನಿಮ್ಮಲ್ಲಿದ್ದಾನೆ. ಆ ಕವಿಗೆ ಜಾಗ್ರತಗೊಳಿಸು. ಇನ್ನೂ ಉತ್ತಮ, ಚೇತೋಹಾರಿ ಬರಹಗಳು ನಿನ್ನಿಂದ ನಿರೀಕ್ಷಿಸುವೆ… ನಿನ್ನ ಸಹೋದರ. ಬುಡ್ಡೇನಹಳ್ಳಿ ನಾಗರಾಜ, ಎಂ. ಎ, ಪ್ರಧಾನ ಅಂಚೆ ಪಾಲಕರು, ಪ್ರಧಾನ ಅಂಚೆ ಕಛೇರಿ, ಬಳ್ಳಾರಿ

      • ನಿನ್ನ ಸುಧೀರ್ಘ ಅಭಿಮಾನದ ಅನ್ನಿಸಿಕೆಗೆ ಅಭಾರಿ…
        ನೀನು ಏಕಲವ್ಯನೆ….ದೇವರು ಒಳ್ಳೆಯದನ್ನು ಮಾಡಲಿ

    LEAVE A REPLY

    Please enter your comment!
    Please enter your name here

    Latest article

    error: Content is protected !!