21.4 C
Karnataka
Thursday, November 21, 2024

    ಅನುಕರಿಸಲಾಗದ ಆದರ್ಶದ ಕವಿ ನೀಡಿದ ಜನ್ಮದಿನದ ಕಾಣಿಕೆ

    Must read

    ಸಾಧಾರಣವಾಗಿ ನಮ್ಮ ಆಪ್ತರ ಜನ್ಮದಿನಕ್ಕೆ ನಾವು ಕಾಣಿಕೆಯನ್ನು ಕೊಟ್ಟು ನಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತೇವೆ . ನಮ್ಮ ಕಾಣಿಕೆ ಅವರಿಗೆ ಉಪಯೋಗಕರವಾಗಲೆಂದು ಹತ್ತಾರು ಕಡೆ ಹುಡುಕಿ, ನೂರಾರು ಬಾರಿ ಯೋಚಿಸಿ ಸೂಕ್ತ ಉಡುಗೊರೆಯನ್ನು ಹುಡುಕಲು ಯತ್ನಿಸುತ್ತೇವೆ . ಆದರೆ ಇಲ್ಲೊಬ್ಬ ಧೀಮಂತ ಕವಿ ಇದ್ದಾರೆ. ಉಳಿದವರು ಕೊಡಬಹುದಾದ ಕಾಣಿಕೆಯನ್ನು ನಿರೀಕ್ಷಿಸದೆ ತಾವು ತಮ್ಮ ಓದುಗರಿಗೆ ಏನು ಕೊಡಬಹುದೆಂದು ಯೋಚಿಸುತ್ತಾರೆ ಅದಕ್ಕಾಗಿ ಶ್ರಮ ಪಡುತ್ತಾರೆ ಓದುತ್ತಾರೆ ಅಧ್ಯಯನ ಮಾಡುತ್ತಾರೆ ಓದಿದ್ದೆಲ್ಲವನ್ನು ಅರಗಿಸಿಕೊಂಡು ಬರಹರೂಪಕ್ಕಿಳಿಸಿ ಪ್ರತಿವರ್ಷ ತಮ್ಮ ಜನ್ಮದಿನದಂದು ಓದುಗರಿಗೆ ಅತ್ಯಮೂಲ್ಯ ಕಾಣಿಕೆಯನ್ನು ನೀಡುತ್ತಾರೆ. ಇದು ಒಂದೋ ಎರಡೋ ವರ್ಷದ ಮಾತಲ್ಲ.. ಪ್ರತಿವರ್ಷದ ವಾಡಿಕೆ. ತಮ್ಮ ಮುಂದಿನ ತಲೆಮಾರಿಗೆ ಹಿಂದಿನವರ ಅಮೂಲ್ಯ ಸಾಹಿತ್ಯವನ್ನು ತಲುಪಿಸಬೇಕೆಂಬುದು ಇಂದು ಹುಟ್ಟು ಹಬ್ಬದ ಸಡಗರದಲ್ಲಿರುವ ಕವಿ ಡಾ. ಎಚ್. ಎಸ್ . ವೆಂಕಟೇಶ ಮೂರ್ತಿ ಅವರ ಹಂಬಲ.

    70ನೆಯ ಜನ್ಮದಿನಕ್ಕೆ ಪಂಪನ ವಿಕ್ರಮಾರ್ಜುನ ವಿಜಯವನ್ನು ಸರಳ ರೂಪದಲ್ಲಿ ಓದುಗನ ಮುಂದಿಟ್ಟಿದ್ದರು. ಜನ್ನನ ಯಶೋಧರ ಚರಿತೆ ಕೂಡ ಇವರ ಕೈಯಲ್ಲಿ ಸರಳವಾಗಿ ಅರಳಿ ಹೊಸ ತಲೆಮಾರಿನ ಓದುಗನನ್ನು ಬೆರಗುಗೊಳಿಸಿದೆ. ಈ ಬಾರಿ ಕರೋನಾ ಲಾಕ್ಡೌನ್ ಆತಂಕ, ಕೊರೊನಾ ಸೃಷ್ಟಿಸಿದ ನೂರು ತಲ್ಲಣಗಳು ಇದ್ದಾಗ್ಯೂ ಅವರು ಎರಡು ಪುಸ್ತಕಗಳನ್ನು ಓದುಗರಿಗೆ ಕಾಣಿಕೆಯಾಗಿ ಕೊಟ್ಟಿದ್ದಾರೆ. ಮೊದಲನೆಯದು ಅವರು ಹಲವು ದಶಕಗಳ ಅಧ್ಯಯನದಿಂದ ಬರೆಯುತ್ತಿರುವ ಕುಮಾರವ್ಯಾಸ ಕಥಾಂತರ. ಒಟ್ಟು 280 ಪುಟಗಳ ಈ ಹೊತ್ತಿಗೆ ಓದುಗನಲ್ಲಿ ರೋಮಾಂಚನ ಹುಟ್ಟಿಸುವುದು ಸುಳ್ಳಲ್ಲ. ಕನ್ನಡ ಸಾಹಿತ್ಯಲೋಕದ ಇತಿಹಾಸದಲ್ಲಿ ಇದೊಂದು ದಾಖಲಿಸಬೇಕಾದ ಕೊಡುಗೆ

    ಸಿದ್ಧಾರ್ಥ ಸೌಮ್ಯ ರಘು ಅಪಾರ ಈ ಮೂವರ ಪರಿಶ್ರಮದಿಂದ ಮತ್ತು ಸಾಹಿತ್ಯ ಪ್ರೀತಿಯಿಂದ ಹೊರಬಂದ ಚುಕ್ಕುಬುಕ್ಕು ಎಂಬ ಅಂತರ್ಜಾಲ ಪತ್ರಿಕೆಯಲ್ಲಿ ಮೊಟ್ಟಮೊದಲು ಕುಮಾರವ್ಯಾಸ ಕಥಾಂತರ ಹುಟ್ಟಿದ್ದು. ಆಗ ಅದಕ್ಕೆ ಬಂದ ಪ್ರತಿಕ್ರಿಯೆಗಳ ಮಹಾಪೂರವೇ ಕೃತಿಯನ್ನು ರಚಿಸಲು ಉತ್ಸಾಹ ನೀಡಿತು. ಏಳು ವರ್ಷಗಳ ಅವಧಿಯಲ್ಲಿ 4 ಸಂಪುಟ ಹೊರತಂದ ಎಚ್ಚೆಸ್ವಿ ಮತ್ತು ಅಭಿನವ ಪ್ರಕಾಶನದ ರವಿಯವರಿಗೆ ಕನ್ನಡ ಸಾಹಿತ್ಯಲೋಕ ಚಿರ ಋಣಿ.

    ನಾಲ್ಕು ಸಂಪುಟ ಸಾವಿರದ ನೂರು ಪುಟ

    ನಾಲ್ಕು ಸಂಪುಟಗಳು ಸಾವಿರದ ನೂರು ಪುಟಗಳು ಕುಮಾರವ್ಯಾಸನ ಬಗ್ಗೆ ಇಷ್ಟು ಸುದೀರ್ಘವಾದ ಬರವಣಿಗೆ ಕನ್ನಡದಲ್ಲಿ ಇದೇ ಮೊದಲು. ಇದಕ್ಕಿಂತ ಮೊದಲು ಕೀರ್ತಿನಾಥ ಕುರ್ತಕೋಟಿಯವರು ಸುಮಾರು ಆರುನೂರರಿಂದ ಏಳುನೂರು ಪುಟಗಳಷ್ಟು ಅದ್ಭುತವಾದ ವಿಮರ್ಶಾತ್ಮಕ ಒಳನೋಟವನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆಯಾಗಿ ಕೊಟ್ಟಿದ್ದಾರೆ. ಅವರು ಹುಟ್ಟು ವಿಮರ್ಶಕರು ಸಿದ್ಧ ಕೃತಿಯ ಬಗ್ಗೆ ಅವರದು ಸೊಗಸಾದ ವಿಶ್ಲೇಷಣೆ . ಆದರೆ ಎಚ್ಚೆಸ್ವಿಯವರ ಹಾದಿಯೇ ಬೇರೆ . ಇದು ಕ್ರಿಯೇಟಿವ್ ಲೇಖಕನ ವಿಮರ್ಶೆ ಬೆರೆತ ಸ್ಪಂದನೆ.

    ಶ್ರೀವನಿತೆಯರಸನೆ ಎಂಬ ಆರಂಭದ ಪದ್ಯದಿಂದ ಹಿಡಿದು ಅಂತ್ಯದವರೆಗೆ ಅಂತ್ಯದವರೆಗಿನ ಓದಿನಲ್ಲಿ ಆ ಪದ್ಯಗಳು ಹೇಗೆ ಮಹಾಕಾವ್ಯವನ್ನು ಸೃಷ್ಟಿಸುತ್ತಿವೆ ಅಥವಾ ಹೇಗೆ ಮಹಾಕಾವ್ಯ ವಾಗುತ್ತಿದೆ ಎಂಬ ಪ್ರಕ್ರಿಯೆಯನ್ನು ಗಮನಿಸುವ, ಆಸ್ವಾದಿಸುವ ದಾರಿಯುಂಟಲ್ಲ ಅದು ಬಹಳ ಮುಖ್ಯವಾದದ್ದು . ಊರು ಸೇರುವವರೆಗೆ ದಾರಿ ಸ್ಪಷ್ಟವಾಗುವುದಿಲ್ಲ . ಗಮ್ಯ ತಲುಪುವುದಕ್ಕಿಂತ ಆ ದಾರಿಯಲ್ಲಿನ ರೋಚಕತೆಯೇ ಪ್ರಮುಖವಾದದು . ಒಮ್ಮೆ ಗುರಿ ತಲುಪದಿದ್ದರೂ ಮಾರ್ಗ ಪ್ರಯಾಣವೇ ರೋಚಕವಾಗಿ ಬಿಡಬಹುದಾದ ಸಂಭ್ರಮ. ಇಲ್ಲಿ ಕೊನೆಯನೆಂದು ಮುಟ್ಟದಿರು ಎಂಬ ಕುವೆಂಪುರವರ ಸಾಲು ನೆನಪಾಗುತ್ತದೆ. ಅದರ ಅರ್ಥ ಇದೇ ಇರಬಹುದೇ ಎಂದು ಯೋಚಿಸುವಂತಾಗುತ್ತದೆ. ಕುಮಾರವ್ಯಾಸನ ವಿಷಯದಲ್ಲಿಯೂ ಈ ಮಾತು ಸತ್ಯ. ಎಷ್ಟು ಆಸ್ವಾದಿಸಿದರೂ ಮತ್ತೆ ಮತ್ತೆ ಆಸ್ವಾದಿಸಬಹುದಾದ ಭಾಷೆಯ ಕವಿ ಕುಮಾರವ್ಯಾಸ. ಇದನ್ನು ಓದುಗನಿಗೆ ತಲುಪಿಸಲಿಕ್ಕಾಗಿ ಎಚ್ಚೆಸ್ವಿ ಪಟ್ಟ ಶ್ರಮ ಅಷ್ಟಿಷ್ಟಲ್ಲ.

    ಕನ್ನಡ ಇಂಗ್ಲಿಷ್ ಸಂಸ್ಕೃತದಲ್ಲಿ ಬಂದ ಬಹುತೇಕ ಮಹಾಭಾರತಗಳನ್ನು ಅಧ್ಯಯನ ಮಾಡಿ ಬರೆದ ಕೃತಿ ಕುಮಾರವ್ಯಾಸ ಕಥಾಂತರ . ಅಳಸಿಂಗಾಚಾರ್ಯರ ಅನುವಾದದಿಂದ ಹಿಡಿದು ವ್ಯಾಸಭಾರತದವರೆಗೂ ಅವಲೋಕಿಸಿ ಮಾಡಿದ ತೌಲನಿಕ ಅಧ್ಯಯನ ಇದು. ಅದಕ್ಕಾಗಿ ಅವರು ಬಳಸಿಕೊಂಡಿದ್ದು ಮೂರು ಪ್ರಮುಖ ಪುಸ್ತಕಗಳು ಮೊದಲನೆಯ ಮೂಲ ವ್ಯಾಸಭಾರತ . ಎರಡನೆಯದು ಅಳಸಿಂಗಾಚಾರ್ಯರ ಅದ್ಭುತ ಅನುವಾದ. ಲಯದ ವಿಷಯದಲ್ಲಿ ಯಾವುದೇ ಅನುಮಾನ ಬಂದರೂ ಅವರು ಕೈಗೆತ್ತಿಕೊಳ್ಳುತ್ತಿದ್ದುದು ಅರಾಸೇ ಅವರ ಪುಸ್ತಕ . ಅರಾಸೇ ಅವರಿಗಿದ್ದ ಲಯ ಪ್ರಜ್ಞೆ ಸರಿಸಾಟಿ ಇಲ್ಲದ್ದು. ಈ ಮೂರು ಅಥೆಂಟಿಕ್ ಆಧಾರಗಳನ್ನು ಇಟ್ಟುಕೊಂಡು ಅವರು ಬರೆದ ಕುಮಾರವ್ಯಾಸ ಕಥಾಂತರ ಹೇಳುವ ಹೊಳಹುಗಳು ಅರ್ಥಗಳು ಸ್ವಾರಸ್ಯಗಳನ್ನು ಓದಿಯೇ ಅನುಭವಿಸಬೇಕು. ಖ್ಯಾತ ವಿಮರ್ಶಕ ಎಸ್ ಆರ್ ವಿಜಯ ಶಂಕರ್ ರವರ ಬ್ಲರ್ಬ್, ಪುಸ್ತಕದೊಳಗೆ ಕನ್ನಡದ ಅನೇಕ ಮಹನೀಯರ ಸ್ಪಂದನೆಗಳು ಈ ಪುಸ್ತಕದ ಮಹತ್ವವನ್ನು ಕುರಿತು ಹೇಳುತ್ತವೆ.

    ಲಾಕ್ಡೌನ್ ಸಮಯದಲ್ಲಿ ಮನೆಯಲ್ಲಿ ಕೂತು ಯಾವ ಚಟುವಟಿಕೆಗಳು ಹೊರಗೆ ನಡೆಯುತ್ತಿಲ್ಲವೆಂದು ಬೇಸರಿಸಿ ಸಮಯ ಹೇಗೆ ಕಳೆಯುವುದೆಂದು ಬಹುತೇಕರು ನಿಷ್ಕ್ರಿಯರಾಗಿ ನಿರ್ವಿಣ್ಣರಾಗಿ ಕೂತ ಹೊತ್ತಿನಲ್ಲಿ ಎಚ್ಚೆಸ್ವಿಯವರು ಕುಮಾರವ್ಯಾಸ ಕಥಾಂತರ ವನ್ನು ಬರೆದು ಮುಗಿಸಿದ್ದರು.

    ಎರಡು ಸೊಗಸಾದ ನಾಟಕ

    ಇಷ್ಟೇ ಅಲ್ಲದೆ ಎರಡು ಸೊಗಸಾದ ನಾಟಕಗಳನ್ನು ಈ ಹೊತ್ತಿನಲ್ಲಿ ಸಿದ್ಧಪಡಿಸಿ ನಕ್ಕರು. ಅವರ ಜೀವನದ ಪ್ರಮುಖ ಕಾವ್ಯಗಳೆಲ್ಲ ಒಂದಾದ ಉತ್ತರಾಯಣ ಕಾವ್ಯವನ್ನು ನಾಟಕದ ರೂಪದಲ್ಲಿ ತಂದಿದ್ದಾರೆ . ಪೌರುಷ ಎಂಬ ಪುರಾಣದ ಕಥೆಯೊಂದನ್ನು ಆಧರಿಸಿ ಬರೆದ ನಾಟಕವಂತೂ ಬಹಳ ವಿಶಿಷ್ಟವಾಗಿದೆ. “ಹೆಣ್ಣೆಂದರೆ ಉರಿಯುವ ಆತ್ಮ. “.. ತನ್ನಲ್ಲಿ ತಾಯಿಯನ್ನು ಕಂಡ ಅರ್ಜುನನ ರೀತಿಗೆ ಕೆಂಡವಾಗುವ ಊರ್ವಶಿಯ ಉರಿಗೂ ಹೆಣ್ಣೆಂದರೆ ಕೇವಲ ಆಕಾರ ವಿಶೇಷವಲ್ಲ ಎಂದು ಪುರುಷ ಸಿಂಹ ಅರ್ಜುನನಿಗೆ ಮನದಟ್ಟು ಮಾಡಿಸುವ ಅಗ್ನಿಕನ್ಯೆ ನಿಜವಾದ ಪೌರುಷವತಿ ದ್ರೌಪದಿಯ ಉರಿಗೂ ಇರುವ ವ್ಯತ್ಯಾಸವೇ ಪೌರುಷ.. ನಪುಂಸಕತನವನ್ನು ಆವಾಹಿಸಿಕೊಂಡಾದರೂ ಉಳಿಸಿಕೊಳ್ಳುವ ಪೌರುಷವೇ ನೈಜ ಪೌರುಷ ಎಂಬುದು ಪ್ರಶ್ನಾರ್ಥಕ ಚಿಹ್ನೆಯ ರೂಪದಲ್ಲಿದೆ. .. ಗೊತ್ತಿದ್ದ ಕಾವ್ಯ ಕಥೆಯೊಂದು ನಾಟಕವಾಗಿ ಹೊಸ ರೀತಿಯಲ್ಲಿ ಅರಳಿರುವ ರೀತಿ ಅನನ್ಯ . ಸಂಭಾಷಣೆಗಳು ಕಾವ್ಯದ ಸೊಗಡನ್ನೂ ಬಿಗಿಯನ್ನೂ ಸೊಗಸಾಗಿ ಬಿಂಬಿಸುವಲ್ಲಿ ಯಶಸ್ವಿಯಾಗಿದೆ. ರಂಗದ ಮೇಲಿನ ಪ್ರಯೋಗಕ್ಕಾಗಿ ಕಾಯುತ್ತಿರುವೆ.

    ಕವಿಯೊಂದಿಗೆ ಲೇಖಕಿ

    ಇದರ ಹಿಂದಿರುವುದು ಅಮಿತ ಶ್ರದ್ಧೆ. ಅವರಿಗೆ ಪಿಹೆಚ್. ಡಿ ಪದವಿ ಬಂದಾಗ ರಾಘವೇಂದ್ರ ಪಾಟೀಲರು ನನ್ನ ತಂದೆ ಎನ್ ಎಸ್ ಚಿದಂಬರ ರಾವ್ ಅವರಿಗೆ ಹೇಳಿದ ಮಾತು ನನಗಿನ್ನೂ ನೆನಪಿದೆ “ಎಚ್ಚೆಸ್ವಿಯವರದ್ದು ಅನುಕರಿಸಲಾಗದ ಆದರ್ಶ”.ಅವರ ತಾಳ್ಮೆ ಅಧ್ಯಯನ ಶಿಸ್ತು ಶ್ರದ್ಧೆ ಅವರನ್ನು ಇಷ್ಟು ಎತ್ತರಕ್ಕೆ ಬೆಳೆಯುವಂತೆ ಮಾಡಿದೆ.ಇಷ್ಟು ಸೊಗಸಾದ ಕಾಣಿಕೆಗಳನ್ನು ತಮ್ಮ ಜನ್ಮದಿನದಂದು ನಮಗೆ ಕಾಣಿಕೆಯಾಗಿ ಕೊಟ್ಟ ಕವಿಗೆ ನಾವೇನು ಕೊಡಬಲ್ಲೆವು… ಕೇವಲ ಶುಭಾಶಯ ಕೋರುವುದಷ್ಟೇ ನಮಗುಳಿದ ಕೆಲಸ.. ಜನ್ಮದಿನದ ಶುಭಾಶಯ ಮತ್ತು ಧನ್ಯವಾದ ಎಚ್ಚೆಸ್ವಿಯವರಿಗೆ.

    ಮಾಲಿನಿ ಗುರುಪ್ರಸನ್ನ
    ಮಾಲಿನಿ ಗುರುಪ್ರಸನ್ನ
    ಪಂಪನಿಂದ ಇತ್ತೀಚಿನವರೆಗೂ ಇರುವ ಕಾವ್ಯಗಳನ್ನು ಸಾಹಿತ್ಯ ಪ್ರಕಾರಗಳನ್ನೂ ಓದುವ ಹುಚ್ಚಿರುವ, ಬೇಂದ್ರೆಯವರ ನಾದವೈಭವಕ್ಕೆ ಮನಸೋಲುವ , ಅಡಿಗರೆಂಬ ಕೈದೀಪದ ಬೆಳಕಲ್ಲಿ ಹಾದಿ ಸವೆಸುತ್ತಿರುವ, ನರಸಿಂಹಸ್ವಾಮಿಯವರನ್ನು ಮನೆದೇವರನ್ನಾಗಿಸಿಕೊಂಡ ಕುಮಾರವ್ಯಾಸನ ಮಗಳು ಎಂದು ತಮ್ಮನ್ನು ಕರೆದುಕೊಳ್ಳುವ ಮಾಲಿನಿ ಗುರುಪ್ರಸನ್ನ ಕನ್ನಡದ ಸಾಹಿತ್ಯದ ವಸ್ತು ನಿಷ್ಠ ವಿಮರ್ಶಕಿ.
    spot_img

    More articles

    11 COMMENTS

    1. ಅದ್ಭುತವಾದ ಲೇಖನ. ಮಾಲಿನಿ.Dr. H. S. V
      ಅವರ ಬಗ್ಗೆ ಎಷ್ಟು ಬರೆದರೂ ಕಡಿಮೆ. ನಮ್ಮ ನಾಡು ಕಂಡ. ಸರಳ ಸಜ್ಜನಿಕೆಯ. ವೆಕ್ತಿತ್ವಹೊಂದಿದ. ಮೃದು ಮನಸಿನ ವ್ಯಕ್ತಿ. ಅವರ ಬರವಣಿಗೆ ಯಲ್ಲಿ. ಸರಳತೆ ಇದೆ. ಅಂತ ವರ ಬಗ್ಗೆ ನೀನು ಎಲ್ಲರಿಗೂ ಅರ್ಥ ವಾಗುವ ರೀತಿ ಇದೆ ನಿನ್ನ ಬರವಣಿಗೆಯ ಶೈಲಿ. ಅಭಿನಂದನೆಗಳು. ಇನ್ನಷ್ಟು ಲೇಖನ ಬರಲಿ. ನಿನ್ನ ಕಡೆಯಿಂದ.

    2. ಹುಟ್ಟುಹಬ್ಬದ ಶುಭಾಶಯಗಳು. ಸರ್. ಆ ಭಗವಂತ ಇನ್ನು ಆಯಸ್ಸು. ಅರೋಗ್ಯ ಕೊಡಲಿ.
      ಸಾಹಿತ್ಯ ದೇವಿಗೆ. ನಿಮ್ಮ ಸೇವೆಯ. ಅವಶ್ಯಕತೆ ತುಂಬಾ ಇದೆ.

    3. ಹುಟ್ಟು ಹಬ್ಬದ ಶುಭಾಶಯಗಳು ಮಾನ್ಯ H SV ಯವರಿಗೆ.ಲೇಖನ ಬಹಳ ಅದ್ಭುತ
      ವಾಗಿದೆ. ಅವರ ಸಾಹಿತ್ಯ ಸೇವೆ ಇನ್ನೂ ಧೀರ್ಘಕಾಲ ಮುಂದುವರಿಯಲಿ ಎಂದು ಆಶಿಸುತ್ತೇನೆ.

    4. ನಿಜ ಮಾಲಿನಿಯವರೆ, ತಮ್ಮ ಹುಟ್ಟು ಹಬ್ಬಕ್ಕೆ ಓದುಗರಿಗೆ ತಾವೇ ಕಾಣಿಕೆ ಕೊಡುವ ಕವಿಗೆ ನಾವೇನು ಕೊಡಲು ಸಾಧ್ಯ ಕೇವಲ ನಮ್ಮ ಹೃದಯಪೂರ್ವಕ ಶುಭಾಶಯಗಳಷ್ಟೆ.
      ಬೆಳಿಗ್ಗೆ ನಮ್ಮ ತಂದೆಯವರು ಹೇಳಿದರು ಈದಿನ HSV ಅವರ ಜನುಮ ದಿನಕ್ಕೆ ಶುಭ ಹಾರೈಸಿದೆ ಎಂದು, ಆಗ ನಾನು ಮನದಲ್ಲೇ ಅವರಿಗೆ ನಮಿಸಿದ್ದೆ ಆದರೆ ನಂತರ ಬಂದ ನಿಮ್ಮ ಲೇಖನದ ಮೂಲಕವೂ ಶುಭಕೋರಲು ಸಾಧ್ಯವಾದದ್ದಕ್ಕೆ ನಿಮಗೆ ನನ್ನ ಧನ್ಯವಾದಗಳು. ಅವರ, ಅಮ್ಮ ನಾನು ದೇವರಾಣೆ, ತೂಗುಮಂಚದಲ್ಲಿ ಕೂತು, ಆಮೇಲೆ…ಲೋಕದ ಕಣ್ಣಿಗೆ ರಾಧೆಯು ಕೂಡ.. ಹೀಗೆ ಒಂದೇ ಎರಡೇ ಎಲ್ಲವನ್ನೂ ಮೆಲಕು ಹಾಕುವಂತೆ ಮಾಡಿದ್ದಕ್ಕೆ ಮತ್ತೊಮ್ಮೆ ಧನ್ಯವಾದಗಳು. ಮಗಳು ಜಾನಕಿ ಹಾಡಿನ ಸಾಹಿತ್ಯದ ಮೂಲಕವಂತೂ ದಿನವೂ ಎಲ್ಲರ ಮನೆಗೆ ದಿನವೂ ಬರುತ್ತಾರೆ.

    5. ಮಾವ ಅವರ ಜನುಮ ದಿನದಂದು ಓದುಗರಿಗೆ ನೀಡಿದ ಕಾಣಿಕೆಯನು ನೀನು ಎಲ್ಲರಿಗೂನಿನ್ನ ಬರವಣಿಗೆ ಮೂಲಕ ಎಲ್ಲರ ಮುಂದೆ ಹಿಡಿದೆ. ಇದಕೆ ಏನು ಕಾಮೆಂಟ್ ಮಾಡಲಿ. ಬರೆದವಳು ತಂಗಿ, ಬರೆದದು ನಾವು ತುಂಬಾ ಇಷ್ಟ ಪಡುವ, ಗೌರವಿಸುವ ನಗು ಮುಖದ ಮಾವನ ಕೃತಿಯ ಕುರಿತು.ಅವರ ಬರವಣಿಗೆ ಬಗೆ ನಾನು ಯಾವತೂ ಮಾತಾಡಿಲ್ಲ. ನನ್ನ ಮಾತು ಏನಿದ್ದರೂ ಅವರ ನಗು, ಸರಳತೆ ಕುರಿತು. ಸೂಪರ್ ಲೇಖನ.ಜನುಮ ದಿನದ ಶುಭಾಶಯಗಳು ಮಾವ……..ನಿಮ್ಮ ಮಂಜು

      • ಧನ್ಯವಾದಗಳು ಮಂಜುಳಾ. ನಿನ್ನ ತಂಗಿಯ ಬರಹ ನಿನಗಿಷ್ಟವಾಗಿದ್ದು ಖುಷಿ. 🙏

    LEAVE A REPLY

    Please enter your comment!
    Please enter your name here

    Latest article

    error: Content is protected !!