“ಪ್ರತಿ ಬಿಕ್ಕಟ್ಟೂ ಒಂದು ಅವಕಾಶವನ್ನು ಸೃಷ್ಟಿಸುತ್ತದೆ” ಎಂಬ ಪ್ರಖ್ಯಾತ ಹೇಳಿಕೆ ಇದೆ. ಈ ರೀತಿಯಲ್ಲಿ ಕೋವಿಡ್-19 ಅಸಂಖ್ಯ ಅವಕಾಶಗಳನ್ನು ಸೃಷ್ಟಿಸುತ್ತಿದೆ. ದೇಶಾದ್ಯಂತ ಮೊಬೈಲ್, ಬ್ರಾಡ್ ಬ್ಯಾಂಡ್ ಬಳಕೆದಾರರು ಹೆಚ್ಚಾಗುತ್ತಿದ್ದರೂ ಒಟಿಟಿ ವೇದಿಕೆಗಳಿಗೆ ಇಷ್ಟೊಂದು ಪ್ರಾಮುಖ್ಯತೆ ಬಂದೇ ಇರಲಿಲ್ಲ. ದೇಶಾದ್ಯಂತ ಲಾಕ್ ಡೌನ್ ಪ್ರಕಟಣೆಯಾಯಿತು ನೋಡಿ, ಚಿತ್ರರಂಗದ ವರಸೆಯೇ ಬದಲಾಯಿತು. ಹಲವು ಹೊಸ ಅವಕಾಶಗಳ ಹೆದ್ದಾರಿ ತೆರೆಯಿತು.
ಟೀವಿ ಬಂದಾಗ ಇದ್ದಂತೆಯೇ ಒಂದು ಅನುಮಾನಾಸ್ಪದ ನೋಟ ಒಟಿಟಿಗಳ ಬಗ್ಗೆ ಚಿತ್ರ ನಿರ್ಮಾಪಕರಲ್ಲಿ ಇದ್ದೇ ಇದೆ. ಕೇವಲ ಒಂದೇ ವರ್ಷದ ಹಿಂದೆ ಕನ್ನಡದ ಉದಯೋನ್ಮುಖ ನಟನೊಬ್ಬ ಹೀಗೆ ಒಟಿಟಿ ಪ್ಲಾಟ್ ಫಾರಂಗಳು ಅವಕಾಶಗಳನ್ನು ಸೃಷ್ಟಿಸುತ್ತಿದೆ ಎಂದು ಹೇಳಿದರೆ ಅನುಮಾನದಿಂದ ಬಿಟ್ಟಕಣ್ಣಾಗಿ ನೋಡುತ್ತಿದ್ದ. ಇದು ಗೊತ್ತಿಲ್ಲದ ಜಗತ್ತು ಎಂದು ಕಡೆಗಣಿಸಿದ್ದ. ಈಗ ಒಟಿಟಿ ಭವಿಷ್ಯದ ಚಿತ್ರಗಳ ನಿರ್ಮಾಣ ನಿರ್ಧರಿಸುತ್ತದೆ ಎಂದು ಒಪ್ಪಿಕೊಳ್ಳುತ್ತಿದ್ದಾನೆ.
ಮಿಲಿಯನೇರ್ ಗಳನ್ನು ಸೃಷ್ಟಿಸಿದ ಯೂ ಟ್ಯೂಬ್
ಎಲ್ಲ ವಯೋಮಾನದವರಿಗೆ, ಎಲ್ಲ ಬಗೆಯ ವೀಕ್ಷಕರಿಗೆ ಬೇಕಾದ, ಬೇಡವಾದ ವಿಡಿಯೋಗಳನ್ನು ಯೂಟ್ಯೂಬ್ ತುಂಬಿಕೊಂಡು ವಿಡಿಯೋ ಹಾಕಿದ ನಿರ್ಮಾಪಕರಿಗೂ ಆದಾಯ ಹಂಚಿಕೆ ಮಾಡಿಕೊಳ್ಳುತ್ತಿದ್ದರೂ ಯೂಟ್ಯೂಬ್ ಅನ್ನು ಹೆಚ್ಚು ಜನರು ಒಂದು ಲಾಭದಾಯಕ ಉದ್ಯಮ ಎಂದೇನೂ ಪರಿಗಣಿಸುತ್ತಿಲ್ಲ.
ಮುಖ್ಯವಾಗಿ ಚಿತ್ರ ನಿರ್ಮಾಪಕರು ಯೂಟ್ಯೂಬ್ ನಲ್ಲಿ ಒಂದು ಸಣ್ಣ ಪ್ರಮಾಣದ ಹಣ ಪಡೆಯಬಹುದಷ್ಟೇ ಎಂಬ ನಂಬಿಕೆ ಹೊಂದಿದ್ದಾರೆ. ಯೂಟ್ಯೂಬ್ ಮಿಲಿಯನೇರ್ ಗಳನ್ನು ಸೃಷ್ಟಿಸಿದೆ, ಹಳೆಯ ಸಿನಿಮಾಗಳ ಹಕ್ಕು ಹೊಂದಿದ್ದವರಿಗೆ ಖಜಾನೆ ತುಂಬುತ್ತಿದೆ.
ಆದರೆ ಉತ್ತಮ ಗುಣಮಟ್ಟದ ಆಯ್ದ ಚಲನಚಿತ್ರಗಳ, ಧಾರಾವಾಹಿಗಳ ಮೂಲಕ ಇಂಟರ್ ನೆಟ್ ಬಳಸುವ ವೀಕ್ಷಕರ ಹೊಸ ಸಮೂಹವನ್ನು ಸೃಷ್ಟಿಸಿದ ಖ್ಯಾತಿ ನೆಟ್ ಫ್ಲಿಕ್ಸ್, ಅಮೆಜಾ಼ನ್ ಮುಂತಾದ ಒಟಿಟಿ ವೇದಿಕೆಗಳಿಗೆ ಸೇರುತ್ತದೆ. ಜನಪ್ರಿಯ ನಾಯಕರ ಚಲನಚಿತ್ರಗಳನ್ನು ಕೋಟಿ ಕೋಟಿ ಕೊಟ್ಟು ಒಟಿಟಿ ಹಕ್ಕುಗಳನ್ನು ಅಮೆಜಾ಼ನ್, ನೆಟ್ ಫ್ಲಿಕ್ಸ್, ಕೊಳ್ಳಲು ಪ್ರಾರಂಭಿಸಿದ ನಂತರ ಅದರ ಖದರೇ ಬದಲಾಗಿ ಹೋಯಿತು.
ವಿತರಕರನ್ನು ಗೋಗರೆಯಬೇಕಿಲ್ಲ
ಡಿಜಿಟಲ್ ತಂತ್ರಜ್ಞಾನ, 5ಡಿ ಕ್ಯಾಮರಾಗಳು ಬಂದಾಗ ಐದು ಲಕ್ಷ ರೂ.ಗಳಲ್ಲಿ ಚಲನಚಿತ್ರ ಚಿತ್ರೀಕರಿಸಬಹುದು ಎಂದು ತೋರಿಸಿದ, ಹೊಸ ತಂತ್ರಜ್ಞಾನ ಬಳಕೆಯಲ್ಲಿ ಮುಂಚೂಣಿಯಲ್ಲಿರುವ ರಾಮ್ ಗೋಪಾಲ್ ವರ್ಮಾ ಕ್ಲೈಮ್ಯಾಕ್ಸ್ ಎಂಬ ಚಿತ್ರವನ್ನು ಯಾವ ಒಟಿಟಿ ಪ್ಲಾಟ್ ಫಾರಂಗೂ ಮಾರಾಟ ಮಾಡದೆ ತನ್ನದೇ http://rgvworld.in/shreyaset ಎಂಬ ಒಟಿಟಿಯಲ್ಲಿ ನೇರ ಬಿಡುಗಡೆ ಮಾಡಿದರು. ಇಲ್ಲಿ ವಿತರಕರ, ಥಿಯೇಟರ್ ಲಾಬಿಯ ಆತಂಕವೇ ಇಲ್ಲ. 100ರೂ. ಪಾವತಿಸಿ ಈ ಚಿತ್ರ ವೀಕ್ಷಿಸಬಹುದಾಗಿತ್ತು. ಭಾರತದಲ್ಲಿಯೇ ಪ್ರಪ್ರಥಮ ಪ್ರಯೋಗದಿಂದ ಮೊದಲ ದಿನವೇ ಮೂರು ಕೋಟಿ ರೂ. ಸಂಗ್ರಹವಾಗಿದೆ ಎಂದು ತಂಡ ಹೇಳಿಕೊಂಡಿದೆ. ಈ ಚಿತ್ರವನ್ನು 12 ಗಂಟೆಗಳಲ್ಲಿ 1,68,000ಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ ಎಂದು ಸ್ವತಃ ರಾಮ್ ಗೋಪಾಲ್ ವರ್ಮಾ ಟ್ವೀಟ್ ಮಾಡಿದ್ದಾರೆ.
In less than a day 1,68,596 people saw #Climax by paying Rs 100 per view making it a GAME CHANGER ..Many find a novelty in the strange film which is a good Corona break,
— Ram Gopal Varma (@RGVzoomin) June 7, 2020
For Bookings: https://t.co/FD65qcsZgc
ಅವರ ಮುಂದಿನ ಚಿತ್ರ “ನೇಕೆಡ್” ಇದೇ ಮಾದರಿಯಲ್ಲಿ ಜೂನ್ 27ರಂದು ಬಿಡುಗಡೆಯಾಗುತ್ತಿದೆ. ಈ ಬಾರಿ ಟಿಕೆಟ್ ದರ 200ರೂ. ತಮ್ಮ ಕಂಟೆಂಟ್ ಜನರಿಗೆ ಇಷ್ಟವಾಗುತ್ತದೆ ಎಂಬ ಭರವಸೆ ಇದ್ದವರು ಮಾತ್ರ ಇಂತಹ ಪ್ರಯೋಗ ನಡೆಸಬಹುದು. ಸದ್ಯಕ್ಕಂತೂ ಅಮೆಜಾ಼ನ್, ನೆಟ್ ಫ್ಲಿಕ್ಸ್, ಜೀ಼5, ಹಾಟ್ ಸ್ಟಾರ್, ಸನ್ ನೆಕ್ಸ್ಟ್, ಹುಲು, ಮುಬಿ, ಆಹಾ ಇತ್ಯಾದಿ ಅಸಂಖ್ಯ ಒಟಿಟಿ ಪ್ಲಾಟ್ಫಾರಂಗಳು ಬಂದಿವೆ.
ಒಟಿಟಿ ಪ್ಲಾಟ್ ಫಾರಂಗೆ ಭಾಷೆಯ ಮಿತಿಯಿಲ್ಲ. ಯಾವುದೇ ಭಾಷೆಯ ಚಿತ್ರವನ್ನು ಯಾರು ಬೇಕೆಂದರೂ ವೀಕ್ಷಿಸಬಹುದು. ಅದಕ್ಕೆ ಮನಿ ಹೀಸ್ಟ್ ಎಂಬ ಸ್ಪ್ಯಾನಿಷ್ ಭಾಷೆಯ ಸರಣಿ ವಿಶ್ವವಿಖ್ಯಾತಿ ಪಡೆದದ್ದೇ ಸಾಕ್ಷಿ. ಭಾರತದಲ್ಲೂ ಈ ಸರಣಿ ಯುವಜನರಲ್ಲಿ ಅಪಾರ ಜನಪ್ರಿಯತೆ ಪಡೆದಿದೆ. ವಾಸ್ತವವಾಗಿ ಈ ಸರಣಿ ಸ್ಪ್ಯಾನಿಷ್ ಚಾನೆಲ್ ಆಂಟೆನ್ನಾ 3ಯಲ್ಲಿ ಪ್ರಸಾರವಾಗಿದ್ದರೂ ಸೋಲನ್ನಪ್ಪಿತ್ತು. ನೆಟ್ ಫ್ಲಿಕ್ಸ್ ಈ ಸರಣಿ ಕೊಂಡು ಪ್ರಸಾರ ಮಾಡಿದ ನಂತರ ವಿಶ್ವದ ಅತ್ಯಂತ ಜನಪ್ರಿಯ ಸರಣಿಯಲ್ಲಿ ಒಂದೆನಿಸಿದೆ.
ಭಾರತೀಯ ಚಿತ್ರರಂಗದಲ್ಲಿ ಕನ್ನಡ ಚಿತ್ರರಂಗ, ತೆಲುಗು ಅಥವಾ ತಮಿಳಿನಷ್ಟು ಬೃಹತ್ತಾಗಿ ಬೆಳೆಯಲಿಲ್ಲ. ಆದರೆ ನಮ್ಮ ಸಾಧನೆ ಕಡೆಗಣಿಸುವಂಥದ್ದಲ್ಲ. ಆದರೆ ತೆಲುಗಿನಲ್ಲಿ ಗೀತಾ ಆರ್ಟ್ಸ್ ಈಗಾಗಲೇ “ಆಹಾ” ಎಂಬ ಒಟಿಟಿ ಪ್ರಾರಂಭಿಸಿದೆ. ರವಿಚಂದ್ರನ್ ತಮ್ಮದೇ ಒಟಿಟಿ ಪ್ಲಾಟ್ ಫಾರಂ ಪ್ರಾರಂಭಿಸುತ್ತೇನೆ ಎನ್ನುವುದು ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ. ಆದರೆ ಅದು ಪ್ರಾರಂಭಗೊಂಡು ಕನ್ನಡ ಚಿತ್ರ ನಿರ್ಮಾಪಕರಿಗೂ ಉತ್ತಮ ಕಂಟೆಂಟ್ ಸೃಷ್ಟಿಸಲು ನೆರವಾದರೆ ಉತ್ತಮ.
ಜ್ಯೋತಿಕಾ ನಟನೆಯ ತಮಿಳಿನ ಪೊನ್ ಮಗಳ್ ವಂದಳ್’, ಕೀರ್ತಿ ಸುರೇಶ್ ಅಭಿನಯದ ಮೂರು ಭಾಷೆಗಳ
ಪೆಂಗ್ವಿನ್’, ಅಮಿತಾಭ್ ಬಚ್ಚನ್, ಆಯುಷ್ಮಾನ್ ಖುರಾನಾ ನಟನೆಯ `ಗುಲಾಬೊ ಸಿತಾಬೊ’ ನೇರ ಅಮೆಜಾ಼ನ್ ಪ್ರೈಮ್ ನಲ್ಲಿ ಬಿಡುಗಡೆಯಾಗಿವೆ. ಕನ್ನಡದಲ್ಲಿ ಪುನೀತ್ ರಾಜ್ ಕುಮಾರ್ ನಿರ್ಮಾಣದ ಫ್ರೆಂಚ್ ಬಿರಿಯಾನಿ ಮತ್ತು ಲಾ ಚಿತ್ರಗಳು ಒಟಿಟಿಯಲ್ಲಿ ಬಿಡುಗಡೆಯಾಗಲಿವೆ. ಈ ಹಿನ್ನೆಲೆಯಲ್ಲಿ ಮಲ್ಟಿಪ್ಲೆಕ್ಸ್ ಸಂಸ್ಥೆಗಳೂ ತಮ್ಮ ಕಠಿಣ ನಿಯಮಗಳನ್ನು ಸಡಿಲಿಸುತ್ತಿವೆ. ಇದು ಚಿತ್ರರಂಗಕ್ಕೆ ಉತ್ತಮ ಬೆಳವಣಿಗೆಯೇ.
ಒಟಿಟಿ ಸಿನಿಮಾ ಪ್ರವೇಶ ಹೇಗೆ?
ಅಮೆಜಾ಼ನ್ ಪ್ರೈಮ್ ವಿಡಿಯೊ ಕನ್ನಡ ಸಿನಿಮಾಗಳನ್ನು ಹೊಂದಿದ್ದರೂ ಅವುಗಳ ಪ್ರಮಾಣ ಕಡಿಮೆ ಇದೆ. ಪ್ರೈಮ್ ವಿಡಿಯೊ ತನ್ನಲ್ಲಿ ಸಿನಿಮಾಗಳನ್ನು ಅಪ್ ಲೋಡ್ ಮಾಡಲು ಅವಕಾಶ ನೀಡುತ್ತದೆ. ವೀಕ್ಷಣೆಯ ಆಧಾರದಲ್ಲಿ ಪಾವತಿಸುತ್ತದೆ.ನೆಟ್ ಫ್ಲಿಕ್ಸ್ ತನ್ನಲ್ಲಿ ಸಿನಿಮಾಗಳನ್ನು ನೇರ ಸಲ್ಲಿಸಲಾಗದು. ಅದಕ್ಕಾಗಿ ಲಿಟರರಿ ಏಜೆಂಟರಂತೆಯೇ ಏಜೆಂಟರ ಮೂಲಕ ಸಿನಿಮಾಗಳನ್ನು ಸಲ್ಲಿಸಬೇಕಾಗುತ್ತದೆ.
ಹಾಟ್ ಸ್ಟಾರ್ ಕಥೆಗಳನ್ನು ಆಹ್ವಾನಿಸುತ್ತಿದೆ. ಹಲವು ಒಟಿಟಿ ಪ್ಲಾಟ್ ಫಾರಂಗಳು ಚಿತ್ರ ನಿರ್ಮಾಪಕರಿಗೆ ಸ್ವತಃ ಚಲನಚಿತ್ರವನ್ನು ಅಪ್ ಲೋಡ್ ಮಾಡಿ ಅವುಗಳ ವೀಕ್ಷಣೆಯಿಂದ ಹಣ ಮಾಡಿಕೊಳ್ಳುವ ಅವಕಾಶ ನೀಡಿವೆ. ಒಟಿಟಿಯಲ್ಲಿ ಬಿಡುಗಡೆಯಾದ ಸಿನಿಮಾಗಳು, ಧಾರಾವಾಹಿಗಳು ಇಂಟರ್ನೆಟ್ ಬಳಸದ ವೀಕ್ಷಕರಿಗೆ ದೊರೆಯದೇ ಇರುವುದರಿಂದ ಬಹಳಷ್ಟು ನಿರ್ಮಾಪಕರು ಇನ್ನೂ ಈ ಕುರಿತು ನಿರ್ಲಕ್ಷ್ಯದಿಂದ ಇದ್ದಾರೆ ಎನ್ನುವುದು ಸದ್ಯದ ವಾಸ್ತವ.
OTT ಯ full form *over-the-top* ಅನ್ನುವುದನ್ನು ಸ್ವಲ್ಪ ವಿವರಿಸಿದ್ದರೆ, ವೀಕ್ಷಕರಿಂದ ಹೇಗೆ ಸಂಬಂಧ ಪಟ್ಟವರಿಗೆ ಹಣ ತಲುಪುತ್ತದೆ ಇತ್ಯಾದಿ ವಿವರ ಇದ್ದಿದ್ದರೆ, ವಿಷಯದ ಮೇಲೆ ಇನ್ನೂ ಹೆಚ್ಚಿನ ಸ್ಪಷ್ಟತೆ ಬರ್ತಿತ್ತು ಅಂತ ನನ್ನ ಅಭಿಪ್ರಾಯ.
ಮುಂದಿನ ಲೇಖನದಲ್ಲಿ ಈ ಬಗ್ಗೆ ಪೂರ್ಣ ಮಾಹಿತಿ ಕೊಡುವ ಪ್ರಯತ್ನ ಮಾಡುತ್ತೇವೆ.