21.4 C
Karnataka
Thursday, November 21, 2024

    ಇದು ಆಕಾಶವಾಣಿ ..ನಿಮ್ಮ ಮೆಚ್ಚಿನ ಚಿತ್ರಗೀತೆಗಳು…..

    Must read

    ಹಿಂದೆಲ್ಲಾ ಕಾರ್ಖಾನೆಗಳ ,ವಾಹನಗಳ, ಜನರ ಶಬ್ಧ ಮಾಲಿನ್ಯವಾಗಲೀ ವಾಯು ಮಾಲಿನ್ಯವಾಗಲಿ ಹೆಚ್ಚಾಗಿ ಇರುತ್ತಿರಲಿಲ್ಲ…. ಹಸಿರು ಭೂಮಿ ಶುಭ್ರ ಆಕಾಶ ಶುದ್ಧ ಗಾಳಿಯ ಮಧ್ಯೆ ನಮ್ಮ ಕಿವಿಗೆ ಕೇಳಿಸುತ್ತಿದ್ದಿದ್ದು ಒಂದೇ ಅದು ರೇಡಿಯೋದ ಸುಶ್ರಾವ್ಯ ತರಂಗಗಳು .

    ಆಕಾಶವಾಣಿ ಅಂದ್ರೆ ಅದೊಂದು ಪ್ರತಿಷ್ಠಿತ ಸಂಸ್ಥೆ , ಅವರನ್ನು ಅವರು ಪರಿಚಯಿಸುತ್ತಿದ್ದಿದ್ದೇ ‘ಬಾನುಲಿ ಕೇಂದ್ರ’ ‘ಆಕಾಶವಾಣಿ ನಿಲಯ’ ಅಂತ ……ಅವರುಗಳ ಮಾತು ಎಷ್ಟು ಆಪ್ತವಾಗಿ ಇರ್ತಿತ್ತು ಅಂದ್ರೆ ಕೇಳುಗರನ್ನ ಅಯಸ್ಕಾಂತದ ಥರ ಸೆಳೆಯೋದು , ಗಮನಾರ್ಹ ಸಂಗತಿ ಏನು ಅಂದ್ರೆ ರೇಡಿಯೋದ ಒಳಗಿನ ತಂತ್ರಜ್ಞಾನದಲ್ಲಿ ‘ಅಯಸ್ಕಾಂತ’ ಪ್ರಮುಖವಾದ ಬಿಡಿಭಾಗ. ಅವರ ಕಾರ್ಯಕ್ರಮಗಳ ರೂಪುರೇಷೆ ಮತ್ತು ಅವರು ಇಡುತ್ತಿದ್ದ ಶೀರ್ಷಿಕೆಗಳೇ ಅದ್ಭುತ , ಸಂಗೀತ ಹಾಡುಗಳಿಗೆ ನಂದನ , ಚಂದನ , ಇಂಚರ , ಬೃಂದಾವನ . ಚರ್ಚೆಗಳಿಗೆ ಚಿಂತನ , ಮಂಥನ .
    ವಾರ್ತೆಗಳಿಗೆ ಪ್ರದೇಶ ಸಮಾಚಾರ , ಪ್ರಸಾರ ಭಾರತಿ , ವಾರ್ತಾ ಭಾರತಿ , ಹವಾಗುಣಕ್ಕೆ ಸಂಬಂಧಿಸಿದಂತೆ ಹವಾಮಾನ ವರದಿ. ದೆಹಲಿಯಿಂದ ಪಾರ್ತೆ ಓದುತ್ತಿದ್ದ ಉಪೇಂದ್ರರಾವ್,ರಂಗರಾವ್ ಪ್ರದೇಶ ಸಮಾಚಾರ ಓದುತ್ತಿದ್ದ ನಾಗಮಣಿ ಎಸ್ ರಾವ್, ಕೆ ಎಸ್ ಪುರುಷೋತ್ತಮ್ ತುಂಬಾನೆ ಫೇಮಸ್ಸು‌ .

    ಶನಿವಾರ ಭಾನುವಾರ ಸೇರಿ ಒಂದೂವರೆ ದಿನ ಚೆನ್ನಾಗಿ ಆಡಿ ಕುಣಿದು ನೆಂದು ಬೆಂದು ಸುಸ್ತಾಗಿ ಮನೆಯವರ ಹತ್ತಿರ ಈ ಮಕ್ಕಳಿಗೆ ರಜ ಯಾಕಾದ್ರೂ ಬರುತ್ತೋ ಅಂತ ಬೈಸಿಕೊಂಡು ಹೊಡೆಸಿಕೊಂಡು…..ಸೋಮವಾರ ಹ್ಯಾಪ್ಮೋರೆಯಲ್ಲಿ ಸ್ಕೂಲ್ ಬ್ಯಾಗ್ ನೇತಾಕ್ಕೊಂಡು , ಧುತ್ತನೆ ನೆನಪಾಗುವ ಹೋಮ್ ವರ್ಕು , ಗಣಿತದ ಮೇಷ್ಟ್ರುನ ನೆನೆಸಿಕೊಂಡು ಶಾಲೆಯ ಕಡೆ ಭಾರದ ಹೆಜ್ಜೆಯಿಡುತ್ತಿದ್ದರೆ , ನಮ್ಮ ಕಿವಿಗೆ ಬೀಳುತ್ತಿದ್ದುದ್ದೇ ‘ ಈಗ ಸಮಯ ಹತ್ತುಗಂಟೆ ಹದಿನೈದು ನಿಮಿಷ ….. ನಿಮ್ಮ ಮೆಚ್ಚಿನ ಚಿತ್ರಗೀತೆಗಳು ಕಾರ್ಯಕ್ರಮ. ಚನ್ನಪಟ್ಟಣ ತಾಲ್ಲೂಕಿನ ನುಗ್ಗೇಹಳ್ಳಿ ಗ್ರಾಮಸ್ಥರಾದ ಕೃಷ್ಣಪ್ಪ , ದೊಡ್ಡಯ್ಯ, ಮುನಿರಾಜು, ರಮೇಶ, ಸುರೇಶ , ನರಸಿಂಹರಾಜು , ಪಾರ್ಥಸಾರಥಿ , ಸರೋಜಮ್ಮ , ಪುಟ್ಟಮ್ಮ , ಲಕ್ಷ್ಮಮ್ಮ , ಶಾರದಮ್ಮ , ಕಾಂತಮ್ಮ ಮತ್ತು ಪುಟಾಣಿಗಳಾದ ಚಂದ್ರ , ವಿಷ್ಣು , ಆಂಜಿ, ಬಾಬು , ನರೇಶ , ಪ್ರಹ್ಲಾದ , ಗೋಪಾಲ , ಶಬ್ಬೀರ , ಮಣಿಕಾಂತ , ಗೌರಿ , ಲಕ್ಷ್ಮಿ ….ಹೀಗೇ ಅವರ ಹೆಸರುಗಳನ್ನೆಲ್ಲಾ ಹೇಳಿ ಅವರ ಕೋರಿಕೆಯ ಮೇರೆಗೆ ಅಂತ ನೆಚ್ಚಿನ ಚಿತ್ರಗೀತೆಯನ್ನು ಪ್ರಸಾರ ಮಾಡುತ್ತಿದ್ದರು, ಅಣ್ಣಾವ್ರ , ಪಿಬಿ ಶ್ರೀನಿವಾಸ್ , ಎಸ್ಪಿ ಬಾಲಸುಬ್ರಹ್ಮಣ್ಯಂ , ಜಾನಕಿ , ಪಿ ಸುಶೀಲ ಇವರುಗಳ ಗಾನಸುಧೆ ಹಾಡಾಭಿಮಾನಿಗಳನ್ನು ರಂಜಿಸುತ್ತಿದ್ದರು .

    ಹೀಗೆ ರೇಡಿಯೋದಲ್ಲಿ ತಮ್ಮ ಹೆಸರು ಬಂದಿದ್ದನ್ನ ಆ ಊರವ್ರು ಏಳು ಹಳ್ಳೀಗೆ ತಿಳಿಸಿ ಸಂಭ್ರಮ ಪಡುತ್ತಿದ್ದರು . ಇಲ್ಲಿ ನಾವು ಶಾಲೆಗೆ ಹೋಗೋವಾಗ ನಮ್ಮ ಅಮ್ಮದೀರು ಅಕ್ಕಪಕ್ಕದ ಮನೆ ಹೆಂಗಸರ ಜೊತೆ ಜಗಲಿಮೇಲೆ ಕೂತ್ಕೊಂಡು ರೇಡಿಯೋ ಕೇಳ್ಕೊಂಡು ಮಾತಾಡ್ಕೊಂಡು….ಅವರೆಕಾಯಿ ತೊಗರೀಕಾಯಿ ಸೊಪ್ಪು ಬಿಡಸ್ಕೊಂಡು ಕೂತಿರ್ತಿದ್ರು , ಅವರನ್ನ ನೋಡಿ ನಾವು….ಇವರಿಗೆ ದಿನಾ ರಜಾನೇ ಅಂತ ಮನಸ್ಸಲ್ಲಿ ಅನ್ಕೊಂಡು ಹೋಗ್ತಿದ್ವಿ .

    ಮಧ್ಯಾಹ್ನ ಊಟಕ್ಕೆ ಬಂದ್ರೂನೂ ಮನೆಗಳಲ್ಲಿ ರೇಡಿಯೋ ಕೇಳಿಸ್ತಾನೇ ಇರೋದು ….ಟೈಲರ್ ಅಂಗಡಿಯಲ್ಲಂತೂ ಮಿಷಿನ್ ಸೌಂಡ್ ನಿಂತ್ರೂ ರೇಡಿಯೋ ಸೌಂಡ್ ನಿಲ್ತಿರ್ಲಿಲ್ಲ . ಏನಕ್ಕೆ ರೇಡಿಯೋನ ಹಿಂಗ್ ಹಚ್ಕೊಂಡಿರೋವ್ರು ಅಂದ್ರೆ ಅದನ್ನ ಕೇಳಿಸ್ಕೊಂಡ್ ಇವರ ಪಾಡಿಗೆ ಇವರು ಕೆಲಸ ಮಾಡ್ತಿರೋವ್ರು ….ಒಂದು ಕಡೆ ಕಿವಿಗೆ ಇಂಪಾಗಿರೋದು ಇನ್ನೊಂದ್ಕಡೆ ಕೆಲಸಾನೂ ಆಗೋದು .

    ಬಾಲ್ಯದಲ್ಲಿ ನಮಗೆ ರೇಡಿಯೋದಲ್ಲಿ ತುಂಬಾ ಕುತೂಹಲ ಮೂಡಿಸಿದ್ದು ಯಾವುದು ಅಂದ್ರೆ ಬ್ಯಾಂಡ್ ಬದಲಿಸಲು ಒಂದು ನಾಬನ್ನು ತಿರುಗಿಸುತ್ತಿದ್ದೆವು ಆಗ ಒಳಗಡೆ ಒಂದು ಕೆಂಪು ಬಣ್ಣದ ಕಡ್ಡಿ ಅತ್ತ ಇತ್ತ ಚಲಿಸುತ್ತಿತ್ತು ಅದು ನೋಡಕ್ ಹೆಂಗಿರೋದು ಅಂದ್ರೆ ನಾವು ಬೇಳೇಸಾರು ಅನ್ನ ಊಟ ಮಾಡಿ ತಟ್ಟೆ ತೊಳಿಯಕ್ಕೆ ಹಾಕ್ದಾಗ ತಟ್ಟೆಯಲ್ಲುಳಿದ ಸುರುಳಿಸುತ್ತಿದ ಟೊಮೋಟೋ ಹೊಟ್ಟಿನಂತಿರೋದು . ರೇಡಿಯೋದಲ್ಲಿ ಬರುತ್ತಿದ್ದ ಕೆಲವೇ ಜಾಹೀರಾತುಗಳು ಮಕ್ಕಳ ಬಾಯಿಪಾಠವಾಗಿತ್ತು .


    ನಿಜಕ್ಕೂ ಆಕಾಶವಾಣಿಯವರು ಉಪಯೋಗಿಸುತ್ತಿದ್ದ ವೇಳೆಯನ್ನು, ಸಿದ್ಧಪಡಿಸುತ್ತಿದ್ದ ವೇಳಾಪಟ್ಟಿಯನ್ನು , ಮನರಂಜನೆಯ ಜೊತೆ ಜೊತೆಗೆ ಪ್ರತಿಯೊಂದನ್ನೂ ಪ್ರತಿ ವರ್ಗಕ್ಕೂ ವಿನಿಯೋಗಿಸುತ್ತಿದ್ದ ರೀತಿಯನ್ನೂ ಕೇಳಿ ಖುಷಿಯಾಗೋದು . ಬೆಳಿಗ್ಗೆ ಆವತ್ತಿನ ಆಗುಹೋಗುಗಳ ‘ಚಿಂತನ’ , ವಾರ್ತೆಗಳು ,ನಿಮ್ಮ ನೆಚ್ಚಿನ ಚಿತ್ರಗೀತೆಗಳು , ಸುಗಮ ಶಾಸ್ತ್ರೀಯ ಕರ್ನಾಟಕ ಹೀಗೆ ಒಂದಿಲ್ಲೊಂದು ಸಂಗೀತ , ಪ್ರಸಿದ್ಧ ನಟ ನಟಿ ನಿರ್ದೇಶಕರುಗಳ ಮುದ್ರಿತ ಸಂದರ್ಶನಗಳು , ನಾಟಕ , ಯಕ್ಷಗಾನ , ಮಧ್ಯಾಹ್ನ ನಮ್ಮ ನಾಡಿನ ‘ಪ್ರದೇಶ ಸಮಾಚಾರ ‘ , ಮೀನುಗಾರರಿಗೆ ಸಹಾಯವಾಗಲಿ ಎಂದು ಹವಾಮಾನ ಮುನ್ಸೂಚನೆ , ಸಂಜೆ ಅನ್ನದಾತರಿಗೇ ಅಂತಲೇ ಕೃಷಿರಂಗ , ವಾಗ್ಮಿಗಳಿಂದ ಅರಳೀಕಟ್ಟೆ , ಪೆಂಪು ಇಂಪು ಎಂಬ ಹಾಸ್ಯ ಅವಧಿ , ರಾತ್ರಿ ಹತ್ತರ ನಂತರ ಭೋಲೇ ಬಿಸರೇ ಗೀತ್ ಎಂಬ ಹಿಂದಿ ಹಾಡುಗಳ ರಸದೌತಣ .

    ಇದಲ್ಲದೇ ಬೋನಸ್ ಎಂಬಂತೆ ಭಾನುವಾರ ಒಂದಿಡೀ ಸಿನಿಮಾದ ಚಿತ್ರಕತೆ , ಅಂತರ್ರಾಷ್ಟ್ರೀಯ ಕ್ರಿಕೆಟ್ ನ ಕಾಮೆಂಟರಿ , ಬಿನಾಕಾ ಗೀತ್ ಮಾಲಾ , ಬಿರು ಬಿಸಿಲಿನ ಮಧ್ಯಾಹ್ನ ಬರುತ್ತಿದ್ದ ‘ಸಿಲೋನ್’ ನಲ್ಲಿ ಅನ್ಯಭಾಷಿಕರ ಕನ್ನಡ ಉಚ್ಚಾರಣೆಯೇ ಕೇಳಕ್ಕೆ ಮಜಾ ಇರೋದು, ಅವರು ಉಪಾಸನೆ ಸಿನಿಮಾವನ್ನು ಉಪ್ಪು ಸಾನೆ ಅಂತ ಹೇಳುತ್ತಿದ್ದರು . ಇದಂ ಸಂಸ್ಕೃತ ವಾರ್ತಾಹ ಎಂದು ಹೇಳಿ ಮುಗಿಯುತ್ತಿದ್ದ ಸಂಸ್ಕೃತ ವಾರ್ತೆಗಳು ……ಒಂದಕ್ಕಿಂತ ಒಂದು ಅದ್ಭುತ ಕಾರ್ಯಕ್ರಮಗಳೇ.

    ಬಿನಾಕ ಗೀತ್ ಮಾಲ್ ನ ಅಮೀನ್ ಸಯಾನಿ

    ಹೀಗೆ ದಶಕಗಳ ಕಾಲ ಮನರಂಜನೆಯೆಂಬ ಮಹಲ್ಲಿಗೆ ಅಡಿಪಾಯ ಹಾಕಿದ್ದು ರೇಡಿಯೋ ಮತ್ತು ಆಕಾಶವಾಣಿ . ಟೀವಿ ಎಂಬ ಮೂರ್ಖರ ಪೆಟ್ಟಿಗೆ ಬಂದು ರೇಡಿಯೋ ಎಂಬ ಮಾಯಾಪೆಟ್ಟಿಗೆಯನ್ನು ಬದಿಗೆ ಸರಿಸಿದ್ದು ನಿಜಕ್ಕೂ ವಿಪರ್ಯಾಸವೇ ಸರಿ. ಎಫ್ ಎಂ ಮೂಲಕ ರೇಡಿಯೋ ಮತ್ತೆ ಚಾಲ್ತಿಗೆ ಬಂದರೂ ರೇಡಿಯೋ ಕೇಳುವ ಆಗಿನ ಮಜಾ ಈಗಿಲ್ಲ.

    ಬದಲಾವಣೆ ಜಗದ ನಿಯಮವೇ ಆದರೂ ಚಲಾವಣೆಯಲ್ಲಿದ್ದಷ್ಟೂ ದಿನ ತನ್ನ ಕೇಳುಗರನ್ನು ತಲೆದೂಗುವಂತೆ ಮಾಡಿದ್ದು ರೇಡಿಯೋ ಎಂಬ ಸಾರ್ಥಕಸಾಧನ,

    ಕಿರಣ ಆರ್

    ಈ ಅಂಕಣದೊಂದಿಗೆ ಪ್ರಕಟವಾಗಿರುವ ಕಲಾಕೃತಿ ಕಿರಣ ಆರ್ ಅವರದ್ದು. ಲೇಖನದ ಆಶಯವನ್ನು ಅಷ್ಟೇ ಸಮರ್ಥವಾಗಿ ಚಿತ್ರದಲ್ಲಿ ಮೂಡಿಸುವ ಕಲೆ ಅವರಿಗೆ ಸಿದ್ಧಿಸಿದೆ. ಕರ್ನಾಟಕ ಚಿತ್ರ ಕಲಾ ಪರಿಷತ್ತಿನ ಕಾಲೇಜ್ ಆಫ಼್ ಫ಼ೈನ್ ಆರ್ಟ್ಸ್ ನಲ್ಲಿ ಮಾಸ್ಟರ್ ಆಫ಼್ ಫ಼ೈನ್ ಆರ್ಟ್ಸ್ ಪದವೀಧರೆ. ವಾಟರ್,ಆಕ್ರಲಿಕ್,ಆಯಿಲ್ ಪೈಟಿಂಗ್ ನಲ್ಲಿ ಹಲವಾರು ಗುಂಪು ಚಿತ್ರ ಪ್ರದರ್ಶನಗಳಲ್ಲಿ ಇವರ ಚಿತ್ರಗಳು ಪ್ರದರ್ಶನ ಗೊಂಡಿವೆ.ಹಲವಾರು ಕವಿತೆಗಳಿಗೆ ಇಲಸ್ಟ್ರೇಷನ್ ಮಾಡಿದ್ದಾರೆ. ಇಂಟಿರೀಯರ್ ಡಿಸೈನ್ ಮತ್ತು ಇದರ ಬಗ್ಗೆ ಕೆಲವು ಲೇಖನಗಳನ್ನು ಪತ್ರಿಕೆಗೆ ಬರೆದಿದ್ದಾರೆ. ಅಅಜೊತೆಗೆ ಕವಿತೆಗಳನ್ನು ಕೂಡ ಬರೆಯುತ್ತಾರೆ. ಕಿರಣ ಅವರ ಸಂಗ್ರಹದಲ್ಲಿರುವ ವಿಶಿಷ್ಟ ಕಲಾಕೃತಿಗಳಿಗಾಗಿ [email protected] ಮೂಲಕ ಸಂಪರ್ಕಿಸಬಹುದು.

    ಮಾಸ್ತಿ
    ಮಾಸ್ತಿhttps://kannadapress.com
    ಕನ್ನಡ ಚಿತ್ರರಂಗದಲ್ಲಿ ಪ್ರಸ್ತುತ ಬೇಡಿಕೆ ಇರುವ ಸಂಭಾಷಣೆಕಾರ ಮಾಸ್ತಿ ಮೂಲತಃ ಕೋಲಾರ ಜಿಲ್ಲೆಯವರು. ಸುಂಟರಗಾಳಿ ಚಿತ್ರದಿಂದ ಆರಂಭವಾದ ಇವರ ಸಿನಿಮಾ ಜರ್ನಿ ನಟ, ಸಹ ನಿರ್ದೇಶಕ, ಈಗ ಕಥೆಗಾರ, ಸಂಭಾಷಣೆಕಾರ ಮತ್ತು ಚಿತ್ರಕಥೆಗಾರರಾಗಿ ಮುಂದುವರೆದಿದೆ. ಟಗರು ಇವರ ವೃತ್ತಿ ಜೀವನದ ಮೈಲಿಗಲ್ಲು.
    spot_img

    More articles

    11 COMMENTS

    1. ಒಳ್ಳೆಯ ಲೇಖನ, ಅದಕ್ಕೋಪುವ ಕಲಾಕೃತಿ. ನಮ್ಮನ್ನೆಲ್ಲ ಬಾಲ್ಯಕ್ಕೆ ಕರೆದೊಯ್ಯಿತು.
      ಹಾಡಿನ ರಚನೆಕಾರರು ಸಂಗೀತ ನಿರ್ದೇಶಕರು ಹಾಡಿದವರು ಎಲ್ಲಾ ತಿಳಿಯುತ್ತಿತ್ತು..
      ಕ್ರಿಕೆಟ್ ಕಮಿಟ್ರಿ ಇಂದ ಹಿಂದಿ ಸಂಖ್ಯೆ ಕಲಿತೆವು. ನಿನ್ಯಬೇ ಗೆ ಗವಾಸ್ಕರ್ ಆಡಬೇಕಾದರೆ ಕಿವಿಗೊಟ್ಟು ಶತಕದ ಸಂಭ್ರಮ ಪಟ್ಟೆವು..
      ಧನ್ಯವಾದ ಕನ್ನಡ ಪ್ರೆಸ್..

    2. ಚಂದದ ಬರಹ ಹಳೇ ದಿನಕೆ ಜಾರಿತು ಮನಸು. ಆಕಾಶವಾಣಿಯಲಿ ಕೋರಿಕೆ ಹಾಡು ಬರುವಾಗ ಕೋರಿದವರ ಹೆಸರೂ ಬರುತಿತು. ನಮ್ಮ ಹೆಸರು ಹೇಳಿದಾಗ ಏನೋ ಖುಷಿ. .ಆ ರೇಡಿಯೋದಲಿ ಯಾರಾದರೂ ಕಾಣುವರೋ ಏನೋ ಎಂದು ಇಣುಕಿ ನೋಡುತಿದ್ದ ಬಾಲ್ಯ.ಎಲ್ಲ ಎಲ್ಲವೂ ನೆನಪಾಯಿತು . ಲೇಖಕರಿಗೆ ವಂದನೆಗಳು

    3. ಲೇಖನ ತುಂಬಾ ಚೆನ್ನಾಗಿ ಮೂಡಿ ಬಂದಿದೆ..ಚುನಾವಣೆ ವಾರ್ತೆಗಳು ಮತ ಎಣಿಕೆಯ ಮಾಹಿತಿ ಫಲಿತಾಂಶ ಎಲ್ಲವೂ ವಿಶೇಷವಾಗಿ ಮೂಡಿ ಬರುತ್ತಿತ್ತು. Transistor ಹಿಡಿದುಕೊಂಡು ಗುಂಪುಗೂಡಿ ಕೇಳುತ್ತಿದ್ದ ಜನರ ಗುಂಪು ನೋಡುವುದೇ ಮಕ್ಕಳಾದ ನಮಗೆ ಒಂದು ಬೆರಗು. ಮಕ್ಕಳ ನಂದನವನ , ಬಾಲ ಗೋಪಾಲ ಕಾರ್ಯಕ್ರಮವನ್ನು ಶಾಲೆಯಲ್ಲಿ ಒಟ್ಟಾಗಿ ಕುಳಿತು ಕೇಳಿದ ನೆನಪು…ಸುಂದರ ಸವಿ ನೆನಪನ್ನು ಮರುಕಳಿಸುವಂತೆ ಮಾಡಿದ್ದೀರಿ ವಂದನೆಗಳು.

    4. ಮಾಸ್ತಿ ಸರ್ ನಿಮ್ಮಈ ಅಂಕಣ ಸರಳ ಮತ್ತು ಚೆಂದದ ಬರಹ….ನನ್ನ ಬಾಲ್ಯದ ನೆನಪು ತಂದಿದೆ….
      ರೆೇಡಿಯೊದಲ್ಲಿ ರಾತ್ರಿಯ ವೇಳೆ Background soundದೊಂದಿಗೆ ಬರುತ್ತಿದ್ದ ಕಥಾವಾಚನ ಕಲ್ಪನಾ
      ಶಕ್ತಿಯನ್ನು ಹೆಚ್ಚಿಸುತಿತ್ತು ಮತ್ತು ಇದು ಸೃಜನಾತ್ಮಕತೆಯ ಬೆಳವಣಿಗೆಗೆ ಬುನಾದಿಯಾಗಿ ಕೆಲಸ ಮಾಡುತ್ತದೆ. ಈಗೇಲ್ಲಾvisual development coursesಗಳು ಶುರುಯಾಗಿ ಬಿಟ್ಟಿವೆ.ದನಿದ ಜೀವಗಳಿಗೆ ನಿದ್ದೆ ಬಾರದವರಿಗೆ ಇವುಗಳು ಜೊತೆಗಾರನಾಗಿರುತಿತ್ತು. ಸಾಹಿತ್ಯದ ಬಗ್ಗೆಯು ಒಲುವು ಮೂಡುವಂತೆ ಮಾಡುತ್ತಿದ್ದವು.ಶುದ್ದ ಕನ್ನಡ ಕೇಳುವುದೆೇ ಆನಂದವಾಗುತಿತ್ತು ಎನ್ನುತಾರೆ ನಮ್ಮ ಅಮ್ಮ….

      • ಬಾಲ್ಯಕ್ಕೆ ಮನಸ್ಸು ಜಾರಿಹೋಗುವ ಒಳ್ಳೆಯ ಸರಳ ಬರವಣಿಗೆ ,
        ರೇಡಿಯೋ ಅಂದ್ರೆ ಬರೀ ರೇಡಿಯೋ ಆಗಿರಲಿಲ್ಲ ಅದೆಷ್ಟೇ ಜನರ ಜೀವ ನಾಡಿಯಾಗಿತ್ತು , ನಮ್ಮ್ ತಾತ ರೇಡಿಯೋ ಬಿಟ್ಟು ಒಂದು ಘಳಿಗೇನು ಇರ್ಥಾ ಇರಲಿಲ್ಲ ಎಲ್ಲೇ ಹೋದರು ಜೊತೆಯಲಿ ಇಡಿದುಕೊಂಡು ಹೋಗತಿದ್ರು, ಅವ್ರ ನೆಚ್ಚಿನ ಗೀತೆಗಳು ಹಾಗೂ ವಾರ್ತೆಗಳು ಬರುವ ಹೊತ್ತಿಗೆ ನಮ್ಮ್ ಗಲಾಟೆ ಗದ್ದಲ ಕೇಳಿ ಗದರುವ ಸನ್ನಿವೇಶ ಕಣ್ಣ ಮುಂದೆ ಬಂತು, ಇನ್ನೂ ರೇಡಿಯೋ ಕೆಟ್ಟಾಗ ಅವರ ತಳ ಮಳ ಏನೋ ಕಳ್ಕೊಂಡಂಗೆ ಇರ್ತಿತಿತ್ತು, ಹಾಡು ಬರುವ ಮುಂಚೆ ಹಾಡಿದವರು,ಸಂಗೀತ,ನಿರ್ದೇಶನ, ಈಗೆ ಎಲ್ಲಾ ತಿಳಿಯುತ್ತಿತ್ತು…..
        ಕ್ರಿಕೆಟ್ ಕಾಮೆಂಟ್ರೀ ಕೇಳಿ ನೋಡಿದಷ್ಟು ಖುಷಿ ಆಗ್ತಾ ಇತ್ತು, ಇನ್ನೂ ಹತ್ತಾರು ಹಲವು ನೀತಿ ಕಥೆಗಳು,ಚಿತ್ರ ಕಥೆಗಳು ಹಾಗೂ ಜಾಹಿರಾತು, ಕೃಷಿ, ಕ್ರೀಡೆ,ಹವಾಮಾನ, ವಾಣಿಜ್ಯ ವ್ಯವಹಾರಗಳು ಬಗ್ಗೆ , ಬರೀ ಧ್ವನಿ ಆದ್ರೂ, ಸಿನಿಮಾ ದಂತೆ ಮನಸ್ಸಲ್ಲಿ ಹಳಿಸದಂತೆ ನೆನಪಲ್ಲಿ ಉಳಿತಿತ್ತು, ಇದಲ್ಲದೆ, ಹಲವು ಕಾರ್ಯಕ್ರಮಗಳನ್ನು ಕೇಳಲು ಕಾತುರದಿಂದ ಕಾಯುತಿದ್ದರು ಇದರಿಂದ ಜನರಿಗೆ ತಾಳ್ಮೆ, ಸಹನೆ, ಲೌಕಿಕ ಜ್ಞಾನವನ್ನು ಹೆಚ್ಚಿಸುತಿತ್ತು.

        “ಇಷ್ಟು ಚೆಂದದ ಬರವಣಿಗೆ ಧನ್ಯವಾದಗಳು ಮಾಸ್ತಿ ಸರ್”
        Reply

    5. ಮಾಸ್ತಿ ಕನ್ನಡದ ಆಸ್ತಿ…
      ಈ ಮಾಸ್ತಿ ಕನ್ನಡಪ್ರೇಸ್.ಕಾಂ ನ ಆಸ್ತಿ.
      ನೀವು ಈ ಅಂಕಣದಲ್ಲಿ ಬಿಚ್ಚಿಟ್ಟಿರಿ ನಮ್ಮೆಲ್ಲರ ನೆನಪಿನ ಆಸ್ತಿ…
      ಅದ್ಬುತವಾಗಿ ಮೂಡಿ ಬಂದಿದೆ… ಶುಭಾಶಯಗಳು… ನಮ್ಮ ನೆನಪುಗಳನ್ನು ಕೆದಕುವ ಕೆಲಸದಲ್ಲಿ ನೀವು ಜಯಭೇರಿ ಭಾರಿಸಿದ್ದೀರಿ..
      ನನ್ನ ನೆನಪು…
      ಮರ್ಫಿ radio…AM HM
      ಆಕಾಶವಾಣಿ….
      1) ಬೆಳ್ಳಿಗೆ 7:00 ರಿಂದ 7:05 ಒಂದು ಮಾತು ಏ ಸ್ ಮೂರ್ತಿ ಅವರಿಂದ (ಆಗಲೇ ನನಗೆ ಅರಿವಾಗಿದ್ದು ರಾಜಕೀಯ ಅಂದ್ರೆ ಏನು ಅಂತ)
      2) 8:30 – 9:30 ನಿಮ್ಮ ಮೆಚ್ಚಿನ ಚಿತ್ರಗೀತೆಗಳು
      3) 2:30ಕ್ಕೆ ಸಿಲೋನ್… ನಾಬಿಯನ್ನು ಸರಿಯಾದ ಚುಕ್ಕೆಯಲ್ಲಿ ಕೊಡಿಸುವ ದಿಸೆಯಲ್ಲಿ ನಾನೆ ಯಾವಾಗಲು ಯಶಸ್ಸು..
      4) ರಾತ್ರಿ ಬರುವ ಇನ್ಶೂರೆನ್ಸ್ ಕಾರ್ಯಕ್ರಮ
      ಇವುಗಳು ಬಹಳ ನೆನಪು

      ಮತ್ತೇ ಈ ಸಂಗೀತ… hu hu hum…starting
      Dididn dididn didin.. news

      (ಕಾಮೆಂಟ್ ಬಾಕ್ಸ್ ಅಟ್ಯಾಚ್ಮೆಂಟ್ facility ಇಲ್ಲಾ )

    6. ಮಾಸ್ತಿ ಸರ್ ನಿಮ್ಮಈ ಅಂಕಣ ಸರಳ ಮತ್ತು ಚೆಂದದ ಬರಹ….ನನ್ನ ಬಾಲ್ಯದ ನೆನಪು ತಂದಿದೆ….
      ರೆೇಡಿಯೊದಲ್ಲಿ ರಾತ್ರಿಯ ವೇಳೆ Background soundದೊಂದಿಗೆ ಬರುತ್ತಿದ್ದ ಕಥಾವಾಚನ ಕಲ್ಪನಾ
      ಶಕ್ತಿಯನ್ನು ಹೆಚ್ಚಿಸುತಿತ್ತು ಮತ್ತು ಇದು ಸೃಜನಾತ್ಮಕತೆಯ ಬೆಳವಣಿಗೆಗೆ ಬುನಾದಿಯಾಗಿ ಕೆಲಸ ಮಾಡುತ್ತದೆ. ಈಗೇಲ್ಲಾvisual development coursesಗಳು ಶುರುಯಾಗಿ ಬಿಟ್ಟಿವೆ.ದನಿದ ಜೀವಗಳಿಗೆ ನಿದ್ದೆ ಬಾರದವರಿಗೆ ಇವುಗಳು ಜೊತೆಗಾರನಾಗಿರುತಿತ್ತು. ಸಾಹಿತ್ಯದ ಬಗ್ಗೆಯು ಒಲುವು ಮೂಡುವಂತೆ ಮಾಡುತ್ತಿದ್ದವು.ಶುದ್ದ ಕನ್ನಡ ಕೇಳುವುದೆೇ ಆನಂದವಾಗುತಿತ್ತು ಎನ್ನುತಾರೆ ನಮ್ಮ ಅಮ್ಮ…..

    7. Mr.Masti has taken us to era of sixties and seventies like cinema flash back. Excellent flow of facts which from our childhood days written very well. It was prize possession to have Murphy Radio and Panasonic record player. Ms.Kirana.R art work matches the writers article which is nothing short of ours sweet memories . Outstanding article and ably depicted in art work.

    8. ಮಾಸ್ತಿಯವರ ಲೇಖನ ಅಧ್ಬುತವಾಗಿದೆ ಹಾಗೂ ಕಿರಣರವರ ಕಲಾಕೃತಿ ಬಹಳ ಸುಂದರವಾಗಿದೆ. ಆಗಿನ ಆಕಾಶ ವಾಣಿಯಲ್ಲಿ ಬರುತ್ತಿದ್ದ ಎ ಎಸ್ ಮೂರ್ತಿಯವರ ಈರಣ್ಣ ಮತ್ತು ಮನೆಯ ಯಜಮಾನನ ಆಗಿನ ಪ್ರಚಲಿತ ಸಮಸ್ಯೆ ಗಳ ನಿರೂಪಣೆಯ ವಿಷಯ ಲೇಖನ ದಲ್ಲಿ ಮೂಡಿಬರಬಹುದಾಗಿತ್ತು.

    9. ಚೆಂದದ ಬರಹ
      ನೆನಪುಗಳನು ತಾಜಾಗೊಳಿಸಿತು

    LEAVE A REPLY

    Please enter your comment!
    Please enter your name here

    Latest article

    error: Content is protected !!