26.3 C
Karnataka
Saturday, November 23, 2024

    ದಕ್ಷಿಣ ಭಾರತದ ಸುಂದರ ಪುಷ್ಕರಣಿಗೆ ಆಮೆವೇಗದ ಅಭಿವೃದ್ಧಿ

    Must read

    ಸಂತೇಬೆನ್ನೂರು ದಾವಣಗೆರೆ ಜಿಲ್ಲೆ ಅಡಿಕೆ ನಾಡು ಚನ್ನಗಿರಿ ತಾಲ್ಲೂಕಿನ ಹೋಬಳಿ ಕೇಂದ್ರ. ಇಲ್ಲಿನ ಐತಿಹಾಸಿಕ ಪುಷ್ಕರಣಿಯೊಂದಿಗೆ ಬೆಸೆದುಕೊಂಡಿರುವ ಗ್ರಾಮ ಸದಾ ಚಟುವಟಕೆಯ ತಾಣ.

    ನಾವು ಪ್ರಾಥಮಿಕ ಶಾಲೆಯಲ್ಲಿ ಓದುವಾಗ ಪುಷ್ಕರಣಿ ನಮ್ಮ ನಿತ್ಯದ ನೀರಿನ ಮೂಲ. ಅದರ ಇತಿಹಾಸದ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಆಗ ಇರಲಿಲ್ಲ. ಶಿಲ್ಪಕಲೆಯಲ್ಲಿ ಮನಮೋಹಕ ರಚನೆಯಲ್ಲಿ ಯಾರು ಕಟ್ಟಿರಬಹುದು ಎಂಬ ಪ್ರಶ್ನೆ ಆಗಾಗ ತಲೆ ಕೊರೆಯುತ್ತಿತ್ತು. ಗ್ರಾಮದ ಅರ್ಧಭಾಗದ ಜನ ನೀರಿಗಾಗಿ ದಿನ ಬೆಳಿಗ್ಗೆ ಪುಷ್ಕರಣಿಗೆ ಬರಬೇಕು. ಗಡಿಗೆ, ತಾಮ್ರದ ಕೊಡ, ಸೈಕಲ್ ಗಳಲ್ಲಿ ನೀರು ಹೊರುವ ಕಾಯಕ. ದನಕರುಗಳಿಗೆ ನಿರುಣಿಸುವುದು, ಮೈ ತೊಳೆಯುವುದು ಅಲ್ಲೆ. ಸುಮಾರು 30 ರಿಂದ 40 ಮೆಟ್ಟಿಲು ಕೊಡ ಹೊತ್ತು ಏರಬೇಕು. ಅಂದಿನ ಜನರ ಐತಿಹ್ಯ ದೇವರುಗಳು ಒಂದೇ ರಾತ್ರಿಗೆ ಹೊಂಡ ಕಟ್ಟಿದರು. ಯಾರೋ ಬೆಳಗಾಗುವ ವೇಳೆ ನೋಡುವರೆಂದು ಅಪೂರ್ಣಗೊಳಿಸಿದರು ಎಂದು ತಲೆಯಲ್ಲಿ ತುಂಬಿತ್ತು.

    ಪ್ರೌಢಶಾಲೆ, ಕಾಲೇಜು ಓದುವಾಗ ಮನೆಗಿಂತ ಹೆಚ್ಚು ಪುಷ್ಕರಣಿಯಲ್ಲೇ ಓದಲು ಹೋಗುತ್ತಿದ್ದೆವು. ಕಲ್ಲಿನ ಮಂಟಪಗಳ ತಣ್ಣನೆ ಗಾಳಿ, ನೀರಿನಲ್ಲಿ ಮೀನಿನ ಓಡಾಟ, ಪಕ್ಷಿಗಳ ಹಾರಾಟದೊಂದಿಗೆ ರಮ್ಯ ಪರಿಸರವೇ ಓದಿಗೆ ಪ್ರೇರಣೆ ನೀಡುವಂತೆ ಇತ್ತು. ಆಗ ಪ್ರಾಚ್ಯವಸ್ತು ಇಲಾಖೆ ಅಷ್ಟಾಗಿ ಗಮನ ಹರಿಸಿದ್ದಿಲ್ಲ. ಯಾವ ನಿರ್ಭಂಧವೂ ಇಲ್ಲದೇ ಓಡಾಟ ನಡೆದಿತ್ತು. ಇತಿಹಾಸದ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಗ್ರಾಮದ ಇತಿಹಾಸ ಸಂಶೋಧಕ ಸುಮತೀಂದ್ರ ನಾಡಿಗ್ ಅವರಿಂದ ನಡೆಯಿತು.

    ಶಾಸನಗಳು, ಮೆಕೆಂಜಿ ಪತ್ರ ಹಾಗೂ ವಿವಿಧ ಮೂಲಗಳಿಂದ 15 ಶತಮಾನದಲ್ಲಿ ನಾಯಕ ವಂಶ ಇಲ್ಲಿ ಆಡಳಿತ ನಡೆಸಿತ್ತು. ತನ್ನ ಸಾಮ್ರಾಜ್ಯ ವಿಸ್ತರಣೆಯೊಂದಿಗೆ ಶ್ರೀಮಂತವಾಗಿ ಉತ್ತುಂಗಕ್ಕೇರಿತ್ತು. ಕೆಂಗ ಹನುಮಪ್ಪ ನಾಯಕ ಪುಷ್ಕರಣಿ ನಿರ್ಮಿಸಲು ಮುಂದಾದರು. ಉತ್ತರ ದಿಕ್ಕಿನಲ್ಲಿ ಕೋಟೆ, ಅರಮನೆ ಇದ್ದವು. ದಕ್ಷಿಣ ದಿಕ್ಕಿನಲ್ಲಿ ಶ್ರೀ ರಾಮ ದೇವರ ದೇಗುಲ ನಿರ್ಮಿಸಲಾಗಿತ್ತು. ಹೊಂದಿಕೊಂಡತೆ ರಾಮತೀರ್ಥ ದೇವರ ವಿವಿಧ ಆರಾಧನೆಗಾಗಿ ನಿರ್ಮಿಸಲಾಗಿತ್ತು. ಅದಕ್ಕಾಗಿ ವಿಶೇಷ ಗ್ರಾನೈಟ್ ಹಾಗೂ ಕಲಾಕೃತಿಗಳಿಂದ ಆಕರ್ಷಣೆ ನೀಡಲಾಗಿತ್ತು.

    ಅಂದೇ ಮಳೆಕೊಯ್ಲು ರೀತಿಯಲ್ಲಿ ಭೂಗರ್ಭದಲ್ಲಿ ಕಲ್ಲಿನ ಕೊಳವೆ ಮೂಲಕ ಜಲಹರಿ ಮಂಟಪದಿಂದ ನೀರು ಸಂಗ್ರಹ ಮಾಡಲು ಯೋಜನೆ ಕಾರ್ಯರೂಪಕ್ಕೆ ಬಂದಿತ್ತು. ಇಂದಿಗೂ ಮಳೆಗಾಲದಲ್ಲಿ ಜಲಪಾತದಲ್ಲಿ ನೀರು ಧುಮುಕುವ ನೋಟ ಮನಮೋಹಕ. ಮಧ್ಯದಲ್ಲಿನ ವಸಂತ ಮಂಟಪದ ಕಾಲ ನೈಪುಣ್ಯತೆ ಸಾಕ್ಷಿ ಆಗಿದೆ. ನೀರಿನ ಮೇಲಿನ ರಥದಂತೆ ಆಕರ್ಷಣೀಯವಾಗಿದೆ. ಬಿಜಾಪುರ ಸುಲ್ತಾನರ ದಾಳಿಗೆ ತುತ್ತಾಗಿ ದೇವಾಲಯ ಧ್ವಂಸ ಮಾಡಿ ಮಸೀದಿ ನಿರ್ಮಿಸಲಾಗಿದೆ ಎಂದು ಹೇಳಲಾಗಿದೆ. ಈಗ ಅದು ಮುಸಾಫೀರ್ ಖಾನ ಹೆಸರಿನಲ್ಲಿ ಕಲ್ಲಿನ ಬೃಹತ್ ಕಮಾನುಗಳ ಕಟ್ಟಡ ಪುಷ್ಕರಣಿ ಎದುರಿಗಿದೆ.

    ಖ್ಯಾತ ಸಂಶೋಧಕ ಡಾ.ಚಿದಾನಂದ ಮೂರ್ತಿ ಇಷ್ಟೊಂದು ಸುಂದರ ಪುಷ್ಕರಣಿ ದಕ್ಷಿಣ ಭಾರತದಲ್ಲಿಯೇ ಇಲ್ಲ ಎಂದು ಹೇಳಿದ್ದರು. ಇದು ಧ್ವಜಾಯದಲ್ಲಿದ್ದು, 235 ಅಡಿ ಉದ್ದ, 245 ಅಡಿ ಅಗ ಹಾಗೂ 30 ಅಡಿ ಆಳವಿದೆ. ಸುತ್ತಲೂ 3 ಅಡಿ ಅಗಲ ಹಾಗೂ ಉದ್ದವಿರುವ ಪೌಳಿ ಇದೆ. ನಾಲ್ಕು ದಿಕ್ಕಿನಲ್ಲಿಯೂ ಪ್ರವೇಶ ದ್ವಾರಗಳಿವೆ. ಉತ್ತರ, ದಕ್ಷಿಣ ಹಾಗೂ ಪೂರ್ವ ದಿಕ್ಕಿನ ಪ್ರವೇಶ ದ್ವಾರ ಮಂಟಪಗಳಿವೆ. 12 ಕಲ್ಲಿನ ಕಂಬಗಳ ಆಧಾರದ ಮೇಲೆ 15 ಅಡಿ ಉದ್ದ, 22 ಅಡಿ ಅಗಲದ ವ್ಯಾಸ ಪೀಠದ ಮೇಲೆ ನಿರ್ಮಿಸಿದ್ದಾರೆ. ಕಂಬಗಳಲ್ಲಿ ವಿವಿಧ ದೇವರ ವಿಗ್ರಹ ಕೆತ್ತಲಾಗಿದೆ. ತಳ ಭಾಗ ತಲುಪಲು 52 ಮೆಟ್ಟಿಲುಗಳಿವೆ.

    ನೀರಿನ ಮಧ್ಯದಲ್ಲಿರುವುದು ವಸಂತ ಮಂಟಪ. ಇದಕ್ಕೆ ನಾಲ್ಕು ಅಂತಸ್ತುಗಳಿವೆ. ಹಿಂದೂ ಹಾಗೂ ಇಸ್ಲಾಂ ವಾಸ್ತುಶಿಲ್ಪದಲ್ಲಿ ರಚಿತವಾಗಿದೆ. ಇವುಗಳನ್ನು ಪ್ರವೇಶದ್ವಾರ, ಸುರಂಗ ಮಾರ್ಗ ಮಹಡಿ, ಉಯ್ಯಾಲೆ ಮಹಡಿ, ಗೋಪುರ ಮಹಡಿ ಎಂದು ವಿಂಗಡಿಸಲಾಗಿದೆ. ಗೋಪುರ ಮಹಡಿಯಲ್ಲಿ ಗಾರೆ ಜಾಲರಿ, ಗಂಡಭೇರುಂಡ, ಆನೆ, ಸಿಂಹ, ಶಾರ್ದೂಲ, ನವಿಲು, ಹಂಸ, ನಾಗರ, ಬಳ್ಳಿ ಪ್ರಾಣಿ ಪಕ್ಷಿಗಳ ಸೂಕ್ಷಾತಿಸೂಕ್ಷ್ಮ ಕೆತ್ತನೆಗಳಿವೆ.

    ಕಳೆದ ಎರಡು ದಶಕಗಳಿಂದ ಕೇಂದ್ರ ಸರ್ಕಾರದ ಪ್ರಾಚ್ಯವಸ್ತು ಇಲಾಖೆ ಪುಷ್ಕರಣಿ ರಕ್ಷಣೆಗೆ ಕ್ರಮ ಕೈಗೊಂಡಿದೆ. ಸುತ್ತಲೂ ತಂತಿ ಬೇಲಿ ಹಾಕಿದೆ. ಶಿಥಿಲಾವಸ್ಥೆ ತಲುಪದಂತೆ ರಕ್ಷಣಾ ನಿರ್ಮಾಣ ನಡೆಸಿದೆ. ಉದ್ಯಾನವನ ನಿರ್ಮಿಸಿದೆ. ಸಿಬ್ಬಂದಿ ನೇಮಕ ಮಾಡಿದ ಹಿನ್ನೆಲೆಯಲ್ಲಿ ಅಕ್ರಮ ನಡೆಯದಂತೆ ವೀಕ್ಷಣೆ ನಡೆಸಿದೆ.

    ಈಚೆಗೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಸಿನಿಮಾ ಚಿತ್ರೀಕರಣ ನಡೆದ ನಂತರ ಪ್ರವಾಸಿಗರ ದಂಡೆ ಬರುತ್ತಿದೆ. ಸುಂದರ ಶಿಲ್ಪಾ ಕಲಾಕೃತಿ ಆಸ್ವಾದಿಸುತ್ತಾ ಕಾಲ ಕಳೆಯುವುದು ನಿತ್ಯದ ಪರಿಪಾಠ. ವಿವಾಹ ಪೂರ್ವ ಫೋಟೋಗ್ರಫಿಗೆ ಹೇಳಿ ಮಾಡಿಸಿದ ತಾಣವಾಗಿದೆ. ಸದಾ ಬ್ಯುಸಿ ಆಗಿರುವ ಈ ಪ್ರವಾಸಿ ತಾಣಕ್ಕೆ ಇನ್ನಷ್ಟು ಸೌಲಭ್ಯಗಳು ಭರದಿಂದ ಆಗಬೇಕಾಗಿದೆ.

    ಪ್ರವೇಶ ದ್ವಾರದಲ್ಲಿ ಸೇತುವೆ ನಿರ್ಮಿಸಲು ಕ್ರಮ ಕೈಗೊಳ್ಳಬೇಕು. ಕೊರೊನಾ ಹಿನ್ನೆಲೆಯಲ್ಲಿ ಪ್ರವೇಶ ನಿಷೇಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಿರ್ವಹಣೆಯಲ್ಲಿ ಅಲಕ್ಷ್ಯ ಕಂಡು ಬರುತ್ತಿದೆ. ಸಿಸಿ ಕ್ಯಾಮೆರಾ ಅಳವಡಿಸಬೇಕು. ಯಾತ್ರಿ ನಿವಾಸ ನಿರ್ಮಿಸಬೇಕು. ಉದ್ಯಾನವನ ನಿರ್ವಹಣೆ ಸಮರ್ಪಕವಾಗಬೇಕು ಎಂಬುದು ಪ್ರವಾಸಿಗರ ಬೇಡಿಕೆ ಆಗಿದೆ.

    ನಮ್ಮ ಐತಿಹಾಸಿಕ ತಾಣಗಳು ನಮ್ಮ ಸಮೃದ್ಧ ಪರಂಪರೆಯ ದ್ಯೋತಕ. ಶ್ರೀಮಂತ ಸಂಸ್ಕೃತಿಯ ಪ್ರತೀಕ. ಅವುಗಳ ರಕ್ಷಣೆಯಿಂದ ಪರಂಪರೆ ಉಳಿವು ಸಾಧ್ಯ. ಪ್ರವಾಸದ್ಯೋಮ ಇಲಾಖೆ ಇತ್ತ ಗಮನ ಹರಿಸಬೇಕು.

    ಕೆ ಎಸ್ ವೀರೇಶ ಪ್ರಸಾದ್
    ಕೆ ಎಸ್ ವೀರೇಶ ಪ್ರಸಾದ್https://kannadapress.com/
    ವೃತ್ತಿ ಯಿಂದ ವಿಜ್ಞಾನ ಶಿಕ್ಷಕ . ಪ್ರವೃತ್ತಿಯಿಂದ ಪತ್ರಕರ್ತ.
    spot_img

    More articles

    37 COMMENTS

    1. ಚಿಕ್ಕಂದಿನಲ್ಲಿ ಪುಷ್ಕರಿಣಿಯ ವಸಂತ ಮಂಟಪದೊಳಕ್ಕೇ ಹೋಗಿ ಅಲ್ಲಿನ
      ಒಳಗನ್ನ ನೋಡಿ ಆನಂದಿಸಿದ್ದೆವು…ಲೇಖನ ಓದಿ
      ಬಾಲ್ಯದ ನೆನಪು ಧಾವಿಸಿತು…ಲೇಖಕ
      ಪ್ರಸಾದ್ ಗೆ ಅಭಿನಂದನೆಗಳು.

    2. ಯಾವಾಗ ಬರೋಣಪ್ಪ ಸಂತೆಬೆನ್ನೂರಿಗೆ,ಈ ಘನ ಗಂಭೀರ ಪುಷ್ಕರಣಿ ನೋಡಕ್ಕೆ?? ಪುಷ್ಕರಣಿಯ ಆಳ,ಅಗಲಗಳನ್ನು ಚೆನ್ನಾಗಿ ಅನಾವರಣ ಮಾಡಲಾಗಿದೆ.

      • ನೀ ಬರೀ ಕೇಳೋದೆ ಆಯ್ತು. ನೀ ಯಾವಾಗ ಬಂದ್ರು ಸರಿ. ಬಳ್ಳಾರಿ ಸಾಹುಕಾರ ಬಂದ್ರೆ ಬೇಡ ಅಂತೀವಾ

    3. ಬಾಲ್ಯದಿಂದ ಈ Kalyani ಜೊತೆಗೇ ಲೇಖಕ ವಿ.ಪಿ ಗೆ ಅವಿನಾಭಾವ ಸಂಬಂಧ ಇರೋದರ ಕಾರಣ ಅದರ ಚಂದ ನಮ್ಮ ಮುಂದೆ ಬಂದು ನಿಂತ ಹಾಗಿದೆ. ನಾನು ಎರಡು ಬಾರಿ ನೋಡಿರುವೆ. ಆದರೆ ವಸಂತ ಮಂಟಪದ ಅಂದದ ವಿವರಣೆ ಅಂದು ಇರಬಾರದಿತೇ ಅಂತಾ ಒಂದು ನಿಮಿಷ ಅನಿಸಿತು. Govt ಹಲವಾರು ಅನುಕೂಲ ಒದಗಿಸಿದರೆ ,ಅಂತಹ ಚಂದದ ಪುರಾತನ ತಾಣವನು ಖಾಳಜಿಯಿಂದ ಕಾಪಾಡಿದರೆ.ಮುಂದಿನ ಪೀಳಿಗೆಗೆ ಉತ್ತಮ ಪ್ರವಾಸಿ ತಾಣವಾಗುತೆ. ಲೇಖಕ ವಿ.ಪಿ ಅಭಿನಂದನೆಗಳು

    4. ಕಳೆದವಾರವಲ್ಲ, ಅದರ ಹಿಂದಿನ ವಾರ ಸಂತೇಬೆನ್ನೂರು, ಸೂಳೆಕೆರೆಗೆ ಬಂದಿದ್ವಿ, ನಮ್ಮ ಸಂಬಂಧಿಕರನ್ನು ಕರೆದುಕೊಂಡು ಬಂದಿದ್ವಿ, ಬಹಳಾ ಖುಷಿಪಟ್ರು. ಲೇಖನ ಚೆನ್ನಾಗಿದೆ

      – ರಾಮಚಂದ್ರ ನಾಡಿಗ್, ಕದರನಹಳ್ಳಿ

    5. ಹಲವು ವರ್ಷಗಳ ಹಿಂದೆ ಸಂತೇಬೆನ್ನೂರಿಗೆ ಬಂದಿದ್ದು.ಹಾಗೂ ಪುಷ್ಕರಣಿ ಯನ್ನು ನೋಡಿ ಆನಂದ ಪಟ್ಟ ದಿನಗಳು ಮರುಕಳಿಸಿತು.

    6. ನಿಮ್ಮ ಈ ಲೇಖನ ನೋಡಿದಾಗ. ನನಗೆ ಈ ಪುಷ್ಕರಣಿ ನೋಡಲೇ ಬೇಕು. ಎನ್ನವ ಕುತೂಹಲ . ಎಂಥ ಅದ್ಭುತವಾದ ಪುಷ್ಕರಣಿ. ಸುಮಾರು ಸಾರಿ ನೋಡಬೇಕು ಅನ್ನವ ಅಸೆ. ಈಗ.ಇನ್ನು ಹೆಚ್ಚಾಗಿದೆ. ಧನ್ಯವಾದಗಳು. ವೀರೇಶಪ್ರಸಾದ್. ಇನ್ನು ನಿಮ್ಮ ಊರಿಗೆ ಹತ್ತಿರ ಇರುವ ಪ್ರವಾಸಿ ತಾಣ ಗಳ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ನಿಮ್ಮಿಂದ್ ಇನ್ನು ಹೆಚ್ಚು ಬರಲಿ.

    7. ಅದ್ಭುತ ಪುಷ್ಕರಣಿ… ಉತ್ತಮ ಲೇಖನ ಗೆಳೆಯ ವೀರೂಗೆ ಧನ್ಯವಾದ ಗಳು

    8. ಇತಿಹಾಸ ಪ್ರಸಿದ್ಧ ಪುಷ್ಕರಣಿ ನಮ್ಮ ಊರಿನಲ್ಲಿದೆ ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ. ಹೊಂಡದ ಎದುರಿಗೆ ಇರುವುದೇ ರಾಮದೇವರ ಗುಡಿ. ರಾಮ ದೇವರ ಗುಡಿಗೆ ನಾವು ಹೋದಾಗ ಹಾಗೇ ಹೊಂಡಕ್ಕೂ ಭೇಟಿ ಕೊಟ್ಟು ಬರುತ್ತಿದ್ದೆವು. ಎಷ್ಟೋ ಸಲ ನಮ್ಮ ನೆಂಟರೆಲ್ಲಾ ಸೇರಿದಾಗ ಬೆಳದಿಂಗಳ ಊಟವನ್ನೂ ಅಲ್ಲಿ ಮಾಡಿದ್ದೀವಿ.

      ನಾವು ಸಣ್ಣವರಿದ್ದಾಗ ಕುಡಿಯುವ ನೀರನ್ನು ಹೊಂಡದಿಂದಲೇ ತರಬೇಕಾಗಿತ್ತು .ನಮ್ಮ ಅಜ್ಜಿಯರು, ಅಮ್ಮ, ದೊಡ್ಡಮ್ಮ, ಚಿಕ್ಕಮ್ಮಂದಿರು , ಊರಿನ ಹೆಣ್ಣುಮಕ್ಕಳೆಲ್ಲ ಉರಿಬಿಸಿಲಲ್ಲಿ ಅದೂ ಬರಿಗಾಲಲ್ಲಿ ಹೊಂಡಕ್ಕೆ ಹೋಗಿ ನೀರನ್ನು ತಂದು ಎಷ್ಟು ಕಾಲು ಸವೆಸಿದ್ದಾರೊ. ನಾನೂ ಸಹ ಒಂದು ಸಣ್ಣ ಕೊಡವನ್ನು ಸೊಂಟದಲ್ಲಿ ಇಟ್ಟುಕೊಂಡು ಹೋಗಿ ನೀರನ್ನು ತಂದ ನೆನಪು.

      ಇದೆಲ್ಲದರ ನೆನಪನ್ನು ಮಾಡಿಕೊಟ್ಟಿದ್ದಕ್ಕೆ ಲೇಖಕ ವೀರೇಶ್ ಪ್ರಸಾದ್ ಅವರಿಗೆ ನನ್ನ ಧನ್ಯವಾದಗಳು .

    9. ಪುಷ್ಕರಣಿ
      ನೋಡಬೇಕೆನ್ನುವ ಕುತೂಹಲ ಮೂಡಿಸಿತು ತಮ್ಮ ಲೇಖನಿಯ ಲೇಖನ

    10. ನಮ್ಮೂರಿನ ನನ್ನ ನೆಚ್ಚಿನ ಈ ಸುಂದರ ಪುಷ್ಕರಣಿಯನ್ನು ನೋಡಿ ಮನಸ್ಸು ತಣಿಸಿಕೊಂಡವರಿಗೆ ನನ್ನ ವೈಯಕ್ತಿಕ ಧನ್ಯವಾದಗಳು .
      ಆದರೆ ಇತ್ತೀಚಿನ ದಿನಗಳಲ್ಲಿ ಆರಕ್ಷಕ ನಿರೀಕ್ಷಕರನ್ನು ಹೊರತು ಪಡಿಸಿ ಠಾಣೆಯ ಕೆಲ ಸಿಬ್ಬಂದಿ ( ಕೊರೋನಾ ನೆಪ ಹೇಳಿಕೊಂಡು )ನನ್ನ ಕಣ್ಣಾರೆ ನಾರ್ವಜನಿಕರ ಎದುರಲ್ಲೇ ಪ್ರವಾಸಿಗರನ್ನು ಸುಲಿಗೆ ಮಾಡುತ್ತಿದ್ದಾರೆ .
      ಇದಕ್ಕೆ ಪುರಾತತ್ವ ಇಲಾಖೆಯ ಯಾವುದೇ ದೂರುಗಳು ಆರಕ್ಷಕ ಇಲಾಖೆಗೆ ಅನುಮತಿ ಕೊಟ್ಟಿಲ್ಲ ಎಂದು ತಿಳಿದುಕೊಂಡಿರುತ್ತೇನೆ .ನೀವು ನಮ್ಮೂರಿನ ಘನತೆವೆತ್ತ ಪತ್ರಕರ್ತರಾಗಿ ಆರಕ್ಷಕ ಇಲಾಖೆಯವರಿಗೆ ನನ್ನ ಮನವಿಯನ್ನು ಉಣಬಡಿಸುತ್ತೀರೆಂದು ನಂಬಿರುತ್ತೇನೆ.

    11. ಲೇಖಕರಿಗೂ, ಕನ್ನಡ ಪ್ರೆಸ್ ನ ಸಂಪಾದಕರಿಗೂ, ಲಿಂಕ್ ಕಳುಹಿಸುತ್ತಿರುವ ಹಿರಿಯರಾದ ಸ. ನಾ. ನಾಡಿಗರಿಗೂ ವಂದನೆಗಳು.

      ಉತ್ತಮ ಬರಹಗಳಿಂದ ಕೂಡಿದ ವೆಬ್ಸೈಟ್ ಆಕರ್ಷಕ, ಸುಲಭವಾಗಿ ಓದಿಸಿಕೊಂಡು ಹೋಗುವ ಲಕ್ಷಣ ಹೊಂದಿವೆ. ಪುಷ್ಕರಣಿ ಲೇಖನ ಸಾವಿರ ನೆನಪುಗಳನ್ನು, ಹೆಮ್ಮೆಯನ್ನು ಮೂಡಿಸಿತು.

    12. ಪ್ರಸಾದ್ ಸ್ಥಳೀಯ ಐತಿಹಾಸಿಕ ಪುಷ್ಕರಣಿಯ ಬಗ್ಗೆ ಮಾಹಿತಿ ಚೆಲ್ಲುವ ವಿಷಯ ನಿರೂಪಣೆ ಅದ್ಭುತವಾಗಿ ಮೂಡಿಬಂದಿದೆ.
      ಅಭಿನಂದನೆಗಳು

    13. ಈಗ ತಾನೆ ಓದಿದೆ . ಬಹಳ ಚೆನ್ನಾಗಿದೆ. ನಾನು ಸಂತೇಬೆನ್ನೂರಿನ SV. ಕೃಷ್ಣಮೂರ್ತಿ ಅವರ ತಂಗಿಯ ಸೊಸೆ. ಆದರೆ ಅಲ್ಲಿಗೆ ಒಮ್ಮೆಯೂ ಬಂದಿಲ್ಲ. ಈಗ 86ವಯಸ್ಸಿನಲ್ಲಿ ಓದಿ ಖುಷಿಪಡುವುದೊಂದೇ ಸಾಧ್ಯ.

    14. Tq madam
      ನಾನು ಎಸ್.ವಿ.ಕೃಷ್ಣ ಮೂರ್ತಿರಾಯರು ಲೋಕಸಭಾ ಉಪಾಧ್ಯಕ್ಷರಾಗಿದ್ದರು ಎಂದು ನಮ್ಮ ಹಿರಿಯರಿಂದ ತಿಳಿದಿದ್ದೆ.

    15. Lekhanakke abhinandanegalu. Hechu prachaar kottare uttama prekshaneeya sthala aaguvudaralli samshayavilla. Ustuvaari ennu uttamagollabeku.

    LEAVE A REPLY

    Please enter your comment!
    Please enter your name here

    Latest article

    error: Content is protected !!